Thursday, 12th December 2024

ನಾಯಿಯ ಬೇಷರತ್‌ ಪ್ರೀತಿಯನ್ನು ತಾತ್ಸಾರ ಮಾಡುವ ಮೊದಲು

ಶಿಶಿರಕಾಲ

shishih@gmail.com

ಬೆಂಗಳೂರಿನ ಮಳೆಗೆ ಒಂಥರಾ ವಿಚಿತ್ರ ಆಕರ್ಷಣೆಯಿದೆ. ಮನೆಯ ಇದ್ದೀರಿ, ಆಗ ಮಳೆ ಬಂತು ಎಂದರೆ ಅಲ್ಲಿನ ಮಳೆ ಬಹಳ ಇಷ್ಟವಾಗುತ್ತದೆ. ಮನೆಯಲ್ಲಿರುವ ಬೆಂಗಳೂರಿಗರು ಮಳೆಯನ್ನೆಂದೂ ದೂಷಿಸುವುದಿಲ್ಲ. ಸುಡುಗಾಡು ಮಳೆ ಎಂದು ಬಯ್ದುಕೊಳ್ಳುವುದಿಲ್ಲ. ಆ ದಿನ ಕೂಡ ವಿಪರೀತ ಮಳೆಯಿತ್ತು. ಲೇಔಟಿನ ಅಂದು ಪೊದೆಯ ಸಂಧಿಯಲ್ಲಿ ಒಂದು ಚಿಕ್ಕ ನಾಯಿ ಮರಿ ಕುಯ್ ಗುಡುತ್ತಿತ್ತು – ಚಳಿಯಲ್ಲಿ ನಡುಗುತ್ತಿತ್ತು. ಚಿಕ್ಕ ಮರಿ ಬಹಳ ಮುದ್ದಾಗಿತ್ತು.

ಆದರೆ ಮೈ ಎಲ್ಲ ಕೆಸರು ರಾಡಿ. ಬೆಂಗಳೂರಿನ ಮಳೆಯೆಂದರೆ ನೆಲವೆಲ್ಲ ಎಷ್ಟು ಗಬ್ಬೆದ್ದು ಹೋಗುತ್ತವೆ ಎಂದು ನಿಮಗೆ ಹೇಳಬೇಕಿಲ್ಲ. ಇಡೀ ಊರಿನ ಗಬ್ಬೆಲ್ಲ ಈ ನಾಯಿ ಮರಿಯ ಮೈಗೆ ಮೆತ್ತಿಕೊಂಡು ಮುಖವೊಂದು ಬಿಟ್ಟು ಬಾಕಿ ಭಾಗವೆಲ್ಲ ಕೆಸರಿನ ಮುದ್ದೆಯಂತಾಗಿತ್ತು. ತಕ್ಷಣ ಆ ನಾಯಿಯನ್ನು ಮನೆಗೆ ತರುವುದೆಂದು ನಾನು ಮತ್ತು ನನ್ನ ಹೆಂಡತಿ ಮೇಘಾ ನಿರ್ಧರಿಸಿದೆವು. ಆದರೆ ಕೆಸರಿನ ಮರಿಯನ್ನು ಎತ್ತಿಕೊಳ್ಳುವುದು ಹೇಗೆ!!

ಹಾಗೆಯೇ ಕೈ ಮುಂದೆ ಮಾಡಿ ಸನ್ನೆಯ ಕರೆದೆವು. ಆ ಪುಟ್ಟ ಮರಿ ನಮ್ಮನ್ನೇ ಹಿಂಬಾಲಿಸಿತು. ಹೀಗೆ ಕರೆ ತರುವಾಗ ಒಂದು ದ್ವಂದ್ವ – ನಮಗೆ ನಾಯಿಯ ಉಸಾಬರಿ ಬೇಕೋ ಬೇಡವೋ ಎನ್ನುವ ಪ್ರಶ್ನೆ. ಬೇಡ ಬಿಡು, ನಾಯಿ ಸಾಕುವುದೆಲ್ಲ ಬೇಕಾಬಿಟ್ಟಿ ಊರು ತಿರುಗುವ, ನೆನಪಾದಾಗಲೆಲ್ಲ ಊರಿಗೆ ಹೋಗುವ ನಮ್ಮಂಥವರ ಕೈಯಲ್ಲಿ ಆಗುವ ಕೆಲಸವಲ್ಲ ಎಂದು ಮಾರ್ಗ ಮಧ್ಯೆ ಮಾತನಾಡಿಕೊಂಡೆವು ಮತ್ತು ನಾಯಿ ಮರಿಯನ್ನು ಗದರಿಸಿ ವಾಪಾಸ್ ಓಡಿಸಲು ಒಂದೆರಡು ಬಾರಿ ಪ್ರಯತ್ನ ಮಾಡಿದೆವು. ಆದರೆ ಮರಿ ಮಾತ್ರ ನಮ್ಮ ಬೆನ್ನು ಬಿಡಲೇ ಇಲ್ಲ.

ಬಾ ಎಂದು ಕರೆದಷ್ಟು ಸುಲಭದಲ್ಲಿ ಬರಬೇಡ ಎಂದು ತಿಳಿಸುವುದು ತುಂಬಾ ಕಷ್ಟವಾಯಿತು. ಗದರಿಸಿದಾಗಲೆಲ್ಲ ಅ ಗಿಡದ ಹಿಂದೆ ಅಡಗಿಕೊಳ್ಳುತ್ತಿತ್ತು – ಮತ್ತೆ ನಾವು ಒಂದೆರಡು ಹೆಜ್ಜೆ ಹಾಕಿದರೆ ನಮ್ಮ ಹಿಂದೆಯೇ ಪುಟ್ಟ ಪುಟ್ಟ ಹೆಜ್ಜೆಯಲ್ಲಿ ನೆಗೆಯುತ್ತ ಬರುತ್ತಿತ್ತು. ಇದೊಳ್ಳೆ ಪಿಕಲಾಟದ ಸ್ಥಿತಿ. ಅದರ ಮುಗ್ಧ ಮುಖ ಹೆಚ್ಚು ಗದರಿಸಲು ಮನಸ್ಸಾಗಲಿಲ್ಲ. ನನಗಂತೂ ಅಲ್ಲಿಯವರೆಗೆ ನಾಯಿ ಸಾಕಿ ಅಭ್ಯಾಸವಿರಲ್ಲ. ಹೀಗೆ ಮನಸ್ಸಿಲ್ಲದ ಮನಸ್ಸಿನಿಂದಲೇ ನಮ್ಮ ಮನೆ ಸೇರಿ ಕೊಂಡುದ್ದು ಸ್ನೂಪಿ.

ಸ್ನೂಪಿ ಆ ದಿನ ಮನೆ ಸೇರಿಕೊಂಡ ನಂತರ ಆ ಘಟನೆ ನೆನಪಿಸಿಕೊಂಡಾಗಲೆಲ್ಲ ಕೆಲವು ಪ್ರಶ್ನೆಗಳು ನನ್ನೆದುರಿಗೆ ಬರುತ್ತಿದ್ದವು. ಆ ಚಿಕ್ಕ ಮರಿಗೆ ಹೇಗೆ, ಅಷ್ಟು ಸುಲಭವಾಗಿ ನಾವು ಒಮ್ಮೆ ಕರೆದದ್ದು ಅರ್ಥವಾಯಿತು? ಪ್ರಾಪಂಚಿಕ ಜ್ಞಾನವೇ ಇಲ್ಲದ ಆ ಮರಿ ಜೀವಿ ಅದು ಹೇಗೆ ಅಷ್ಟು ಸುಲಭದಲ್ಲಿ ನಮ್ಮನ್ನು ಒಪ್ಪಿಕೊಂಡು, ನಂಬಿಕೊಂಡುಬಿಟ್ಟಿತು? ಅಷ್ಟಕ್ಕೂ ಅದೇನು ಟ್ರೈನ್ ಆದ ನಾಯಿಯೇನಲ್ಲ. ಹಾಗೆ ಕರೆಯುವಾಗ ನಮ್ಮ ಕೈ ಅಲ್ಲಿ ತಿಂಡಿ ಯೇನು ಇರಲಿಲ್ಲ. ಆಹಾರಕ್ಕಾಗಿ ನಮ್ಮ ಹಿಂದೆ ಬಂದದ್ದೇನೂ ಅಲ್ಲ. ತಾನು ಬದುಕಬೇಕೆಂದರೆ ಮನುಷ್ಯನ ಆಸರೆ ಬೇಕು ಎಂದು ಕೊಂಡಿತ್ತೇ? ಗೊತ್ತಿಲ್ಲ.

ನಾಯಿ ಮರಿ ಹೀಗೆ ಕರೆದವರ ಬೆನ್ನು ಬೀಳುವುದು ಹೊಸತೇನಲ್ಲ ಆದರೆ ಅಸಲಿಗೆ ಹೀಗೆ ಬೆನ್ನು ಬೀಳಲು – ಒಂದು ಮನೆ ಸೇರಿಕೊಳ್ಳಲು ಆ ಜೀವಿಗೆ ಹೇಳಿ
ಕೊಟ್ಟವರಾದರೂ ಯಾರು? ಅದೇ ಬೆಂಗಳೂರು ಪೇಟೆಯ ಅದೆಷ್ಟೋ ಹಕ್ಕಿಗಳಿವೆ – ಅವುಗಳನ್ನು ಅದೆಷ್ಟೇ ಕರೆದು ಅಕ್ಕಿ ಕಾಳು ತಿನ್ನಲು ಕೊಟ್ಟರೂ ಅವು ಮಾತ್ರ ಮನುಷ್ಯ ಸ್ನೇಹಕ್ಕೆ ಸೈ ಎನ್ನುವುದಿಲ್ಲ. ಇಣಚಿಗಳೂ ಇವೆ – ಅವೂ ಹಾಗೆಯೇ. ನಮ್ಮ ಊರಿನ ಮನೆಯ ಪಕ್ಕದ ಇರುವ ಕಾಡಿನಲ್ಲಿ ಅದೆಷ್ಟೋ ಪ್ರಾಣಿವರ್ಗಗಳಿವೆ, ಮಂಗಗಳು, ಸಿಂಗಳೀಕ ಹೀಗೆ. ಅವುಗಳ ಜತೆ ಸ್ನೇಹಕ್ಕೆ ಅದೆಷ್ಟೇ ಒzಡಿದರೂ ಸಾಧ್ಯವಾಗುವುದಿಲ್ಲ.

ಆದರೆ ನಾಯಿ ಮಾತ್ರ ಹೀಗೇಕೆ ಮನುಷ್ಯನನ್ನು ಅಷ್ಟು ಸುಲಭದಲ್ಲಿ ಒಪ್ಪಿಕೊಂಡುಬಿಡುತ್ತವೆ? ಮನುಷ್ಯ ಮತ್ತು ನಾಯಿಯ ಸಂಬಂಧ ಅಸಾಮಾನ್ಯ. ಮನುಷ್ಯ ಕೂಡ ಹಾಗೆಯೇ, ನಾಯಿಯನ್ನು ಪ್ರೀತಿಸಿದಷ್ಟು ಬೇರೆ ಯಾವ ಪ್ರಾಣಿಯನ್ನೂ ಪ್ರೀತಿಸುವುದಿಲ್ಲ. ಮನೆಯಲ್ಲಿ ಆಕಳಿರಲಿ – ಎಮ್ಮೆ, ಕೋಳಿ, ಕುದುರೆ, ಒಂಟೆ, ಮೊಲ, ಬೆಕ್ಕು ಇರಲಿ – ಉಳಿದೆಲ್ಲ ಸಾಕು ಪ್ರಾಣಿಗಳಿಗಿಂತ ನಾಯಿಯೆಂದರೆ ಯಾವತ್ತೂ ಅದಕ್ಕೊಂದು ವಿಶೇಷ, ಹತ್ತಿರದ ಸ್ಥಾನ. ಮನುಷ್ಯ ನಾಯಿಯ ಸಂಬಂಧ ಅಷ್ಟು ವಿಶೇಷವಾಗಿರಲು ಕಾರಣವಾದರೂ ಏನು? ಹೇಗೆ ನಾಯಿ ಎಂಬ ಪ್ರಾಣಿಗೆ ಮನುಷ್ಯ ಭಾವಗಳ ಅರಿವಾಗುತ್ತದೆ? ನಮ್ಮ – ಸಾಕುವವರ ಜೀವನ ಶೈಲಿಗೆ ತಕ್ಕಂತೆ ಅವು ಹೇಗೆ ಒಗ್ಗಿಕೊಳ್ಳುತ್ತವೆ? ಏಕೆ ನಾಯಿ ಮನುಷ್ಯನ ಅತ್ಯುತ್ತಮ ಸ್ನೇಹಿತ ಎನ್ನಲಾಗುತ್ತದೆ? ರಷ್ಯಾ,
ಅಮೆರಿಕ, ಭಾರತ, ಐಸ್ಲ್ಯಾಂಡ್, ಕೆರಿಬ್ಬಿಯನ್ ದ್ವೀಪಗಳು ಹೀಗೆ ಮನುಷ್ಯನಿರುವಲ್ಲ ನಾಯಿ ಇದ್ದೇ ಇರುತ್ತದೆ. ಅದೇಕೆ ಹೀಗೆ? ಹೀಗೆ ಇನ್ನೊಂದಿಷ್ಟು.

ಕೆಲವೊಂದು ನಾಯಿಯ ವಿಶೇಷಗಳು ಅದನ್ನು ಸಾಕಿದವರಿಗಷ್ಟೇ ತಿಳಿಯುತ್ತದೆ. ನಾಯಿಯ ಮನಸ್ಸು ಮತ್ತು ಮಗುವಿನ ಮನಸ್ಸಿಗೆ ಹೆಚ್ಚಿಗೆ ಏನೂ ವ್ಯತ್ಯಾಸವಿಲ್ಲ. ಬೈದು – ಹೊಡೆದು ಆಮೇಲೆ ಒಂದೇ ಕ್ಷಣದ ನಂತರ ಪ್ರೀತಿ ತೋರಿಸಿದರೆ ಕ್ಷಣಾರ್ಧದಲ್ಲಿ ಅವೆಲ್ಲವನ್ನು ಮರೆಯುವ ಮನಸ್ಸು ಚಿಕ್ಕ
ಮಕ್ಕಳಿಗಿರುತ್ತದೆ. ಅದೇ ಮನಸ್ಸು ನಾಯಿಯದು ಕೂಡ. ನಾಯಿಯೆಂದರೆ ಮಗುವಿನ ಮನಸ್ಸನ್ನೇ ಕೊನೆಯವರೆಗೂ ಇಟ್ಟುಕೊಂಡು ಬಾಳುವ ಪ್ರಾಣಿ. ನೀವು ನಾಯಿಯನ್ನೇ ಸಾಕಿಲ್ಲವೆಂದರೆ ನಾಯಿ ಎಂದರೆ ಅದೊಂದು ಸಾಕು ಪ್ರಾಣಿ ಅಷ್ಟೆ.

ಅಂಥವರ ನಾಯಿಯೆಡೆಗಿನ ತಿಳಿವಳಿಕೆ ಬದನೇಕಾಯಿ. ನಾಯಿಯ ಸೂಕ್ಷ್ಮತೆ ಗೊತ್ತಾಗಬೇಕೆಂದರೆ ನೀವು ಅದನ್ನು ಸಾಕಿರಬೇಕು – ಅದು ನಿಮ್ಮ ಕುಟುಂಬದ ಭಾಗವಾಗಿರಬೇಕು. ಅದಿಲ್ಲವಾದರೆ ಅದರ ಕೆಲವೊಂದು ತೀರಾ ಆಶ್ಚರ್ಯವಾಗುವ ನಡವಳಿಕೆ ತಿಳಿಯುವುದೇ ಇಲ್ಲ. ನಾಯಿ ಸಾಕಿದವರು  ತಮ್ಮ ನಾಯಿ ಎಷ್ಟು ಸೂಕ್ಷ್ಮ, ನಾವು ಹೇಳಿzಲ್ಲ ತಿಳಿಯುತ್ತದೆ, ನಮಗೆ ಬೇಸರವಾಗಿದ್ದು ಅದಕ್ಕೆ ನಾವು ಹೇಳದೆಯೇ ಗೊತ್ತಾಗುತ್ತದೆ ಎಂದೆಲ್ಲ ಹೇಳಿದರೆ ಉಳಿದವರಿಗೆ ಅತೀ ಎಂದೆನಿಸುತ್ತದೆ.

ನಾಯಿ ಮನುಷ್ಯನ ಮೊದಲ ಸಾಕುಪ್ರಾಣಿ ಎನ್ನುವುದರಲ್ಲಿ ಅನುಮಾನ ಉಳಿದಿಲ್ಲ. ನಾಯಿ ಮನುಷ್ಯನನ್ನು ಒಪ್ಪಿಕೊಂಡಂತೆ ಮನುಷ್ಯ ನಾಯಿಯನ್ನು ಒಪ್ಪಿಕೊಂಡದ್ದು ಅದ್ಯಾವುದೋ ಅನಾದಿ ಕಾಲದಲ್ಲಿ. ವಿಜ್ಞಾನಿಗಳು ಈ ಸಂಬಂಧಕ್ಕೆ ಹದಿನೈದು ಸಾವಿರ ವರ್ಷದ ಇತಿಹಾಸವಿದೆ ಎನ್ನುತ್ತಾರೆ. ಆದರೆ ಅದಕ್ಕಿಂತ ಹಿಂದೆಯೇ ನಾಯಿ ಮನುಷ್ಯ ಜೀವನದ ಭಾಗವಾಗಿತ್ತು ಎನ್ನುವುದು ಇತ್ತೀಚಿಗೆ ತಿಳಿದುಬಂದದ್ದು. ಇಂದು ಒಂದು ಅಂದಾಜು ಲೆಕ್ಕದ ಪ್ರಕಾರ ಭೂಮಿಯಲ್ಲಿ ಸುಮಾರು ತೊಂಬತ್ತು ಕೋಟಿ ನಾಯಿಗಳಿವೆ. ನಾಯಿಗಳ ಸುಮಾರು ನಾಲ್ಕುನೂರಕ್ಕಿಂತ ಜಾಸ್ತಿ ವೈವಿಧ್ಯವಿದೆ. ಅದೆಷ್ಟೋ ಸಾವಿರ ವರ್ಷಗಳ ಇತಿಹಾಸವುಳ್ಳ ಸಂಬಂಧವೊಂದರ ಸೂಕ್ಷ್ಮತೆ ಯನ್ನು ಈಗೀಗ ವೈಜ್ಞಾನಿಕವಾಗಿ ಅಭ್ಯಾಸಮಾಡಲಾಗುತ್ತಿದೆ.

ಅದೆಷ್ಟೋ ದಶಕಗಳ ಕಾಲ ನಾಯಿ ಒಂದು ವೈಜ್ಞಾನಿಕ ಅಭ್ಯಾಸಕ್ಕೆ ಯೋಗ್ಯವಾದ ಪ್ರಾಣಿಯೇ ಅಲ್ಲ ಎಂದು ಬದಿಗಿಡಲಾಗಿತ್ತು. ಆದರೆ ಇತ್ತೀಚೆಗಿನ ಪರೀಕ್ಷೆಗಳು ಒಂದೊಂದಾಗಿ ನಾಯಿಯ ಹೊಸ ಲೋಕವನ್ನೇ ತೆರೆದಿಡುತ್ತಿವೆ. ಅಲ್ಲದೇ ಈ ಸಂಬಂಧ ನಾಗರೀಕತೆಯ ಸಾಧ್ಯತೆಗೆ ಎಷ್ಟು ಪೂರಕ ಮತ್ತು
ಮುಖ್ಯವಾಗಿದ್ದವು ಎನ್ನುವುದನ್ನು ತಿಳಿಯಲು ಸಾಧ್ಯವಾಗುತ್ತಿದೆ. ನಾಯಿಯ ಎಲ್ಲ ವಿಶೇಷಗಳಲ್ಲಿ ನನ್ನನ್ನು ಅತಿಯಾಗಿ ಕಾಡಿದ್ದು ಅವು ಮನುಷ್ಯನ ಭಾವನೆಗಳನ್ನು, ಮೂಡ್ ಅನ್ನು ತಿಳಿಯುವ ವಿಚಾರ. ನಾವು ಸಂತೋಷದಿಂದಿದ್ದಲ್ಲಿ, ತೀರಾ ದುಃಖ ಅಥವಾ ಕೋಪದಲ್ಲಿದ್ದಾಗ ನಾಯಿಗೆ ಮುಖ
ನೋಡಿಯೇ ತಿಳಿಯುತ್ತವೆ ಎಂದು ಅನುಭವಕ್ಕೆ ಬಂದರೂ ಅದು ಸತ್ಯವೇ ಅಥವಾ ನಮ್ಮ ಭ್ರಮೆಯೇ ಎಂದು ಪ್ರಶ್ನೆ ಮೂಡಿದ್ದಿದೆ.

ಮನುಷ್ಯನಿಗೆ ಬೇರೆಯವರ ಮುಖ ನೋಡಿಯೇ ಅವರ ಮೂಡ್ ಸಾಮಾನ್ಯವಾಗಿ ತಿಳಿದುಬಿಡುತ್ತದೆ – ಆ ಸೂಕ್ಷ್ಮ ನಮ್ಮಲ್ಲಿದೆ. ಮನುಷ್ಯನ ಮುಖವೆಂದರೆ
ಅದು ಮನಸ್ಸಿನ ಕನ್ನಡಿ. ನಾವು ಮುಖದ ನರಗಳ, ಸ್ನಾಯು ಹಿಗ್ಗಿಸಿ ಕುಗ್ಗಿಸುವುದರ ಮೂಲಕ ನಮ್ಮ ಮನಸ್ಥಿತಿಯನ್ನು ಬೇರೆಯವರಿಗೆ ತಿಳಿಸುತ್ತೇವೆ – ಅದು ನಮ್ಮ ಅಭ್ಯಾಸ. ಹಾಗಾದರೆ ನಾಯಿ ಕೂಡ ಆ ಸೂಕ್ಷ್ಮವನ್ನು ಗ್ರಹಿಸಬಲ್ಲದೇ? ನಾವು ಮುಖದಲ್ಲಿ ನಮ್ಮ ಭಾವವನ್ನು ಹೊರ ಹಾಕುವಾಗ ನಮ್ಮ ಎಡ ಮತ್ತು ಬಲ ಮುಖಗಳು ಒಂದೇ ರೀತಿ ಇರುವುದಿಲ್ಲ. ಎದುರಿಗಿರುವವರ ಭಾವವನ್ನು ತಿಳಿಯಲು ನಾವು ಸಹಜವಾಗಿ ಅವರ ಎಡಗಡೆಯ ಮುಖಭಾಗವನ್ನು ಗ್ರಹಿಸುತ್ತೇವೆ.

ಎಡ ಮುಖ ಸ್ನಾಯುಗಳ ಹಿಡಿತ ಸಾಧಿಸಿದವ ಮಾತ್ರ ಒಳ್ಳೆಯ ನಟನಾಗುತ್ತಾನೆ. ಬಹುತೇಕರ ಬಲಗಡೆಯ ಮುಖಕ್ಕಿಂತ ಎಡಗಡೆಯ ಮುಖ ಹೆಚ್ಚು ಸ್ಪಷ್ಟವಾಗಿ ಭಾವನೆಗಳನ್ನು ತಿಳಿಸುತ್ತದೆ. ಇದರಿಂದಾಗಿ ಸಾಮಾನ್ಯವಾಗಿ ನಮಗರಿವಿಲ್ಲದಂತೆಯೇ ನಾವು ಎದುರಿಗಿರುವವರ ಎಡಗಡೆಯ ಮುಖ
ವನ್ನೇ (ನಮ್ಮ ಬಲಗಡೆ) ಹೆಚ್ಚು ಗ್ರಹಿಸುತ್ತೇವೆ. ಇದನ್ನು ತಿಳಿದಾಗಿನಿಂದ ನಾನು ಕೂಡ ಹಲವಾರು ಬಾರಿ ನನ್ನ ಗ್ರಹಿಕೆಯನ್ನು ಗ್ರಹಿಸಿದ್ದೇನೆ ಮತ್ತು ಅದು ನಿಜ ಕೂಡ.

ಸುಮಾರು ಇಪ್ಪತ್ತು ನಾಯಿಗಳನ್ನು ವಿಜ್ಞಾನಿಗಳು ಸ್ಕ್ರೀನ್ ಎದುರುಗಡೆ ನಿಲ್ಲಿಸಿ ಅದರ ಕಣ್ಣಿನ ಚಲನವಲನವನ್ನು ಕಂಪ್ಯೂಟರೀಕೃತ ಕೆಮೆರಾದಲ್ಲಿ ಗ್ರಹಿಸುವ ವ್ಯವಸ್ಥೆಯಾಯಿತು. ನಾಯಿಗಳ ಎದುರಿಗಿನ ಸ್ಕ್ರೀನ್ ನಲ್ಲಿ ಬೇರೆ ಬೇರೆ ವಸ್ತುಗಳನ್ನು ಮತ್ತು ಮಧ್ಯೆ ಮಧ್ಯೆ ಮನುಷ್ಯನ ಮುಖವನ್ನು ತೋರಿಸ ಲಾಯಿತು. ಪ್ರತೀ ಬಾರಿ ವಸ್ತುಗಳನ್ನು ನೋಡಿದಾಗ, ನಾಯಿಗಳ ಕಣ್ಣು ಇಡೀ ವಸ್ತುವನ್ನು ಎಡ-ಬಲ-ಮೇಲೆ-ಕೆಳಕ್ಕೆ ನೋಡಿದವು. ಅದಕ್ಕೊಂದು ಪ್ಯಾಟರ್ನ್ ಇರಲಿಲ್ಲ. ಆದರೆ ನಡು ನಡುವೆ ಮನುಷ್ಯನ ಮುಖವನ್ನು ತೋರಿಸಿದಾಗ ಮಾತ್ರ ನಾಯಿಯ ಕಣ್ಣು ಮನುಷ್ಯನ ಎಡಮುಖದತ್ತ, ಎಡಗಣ್ಣಿ ನತ್ತ ಹೊರಳಿತು. ನಂತರ ಇದೇ ಪ್ರಯೋಗವನ್ನು ಸುಮಾರು ನೂರಕ್ಕಿಂತ ಜಾಸ್ತಿ ನಾಯಿಗಳನ್ನಿಟ್ಟು ಮಾಡಲಾಯಿತು.

ಪ್ರತೀಯೊಂದು ನಾಯಿಯೂ – ಪ್ರತೀ ಬಾರಿ ಮನುಷ್ಯನ ಮುಖ ಕಂಡಾಗ ಎಡ ಭಾಗವನ್ನೇ ಗ್ರಹಿಸಿದವು. ನಂತರದಲ್ಲಿ ಬೇರೆ ಬೇರೆ ಸಾಕುಪ್ರಾಣಿಗಳನ್ನಿಟ್ಟು
ಇದೇ ಪ್ರಯೋಗ ಮಾಡಿದಾಗ ಈ ರೀತಿ ಯಾವುದೇ ವಿಶೇಷ ಗೋಚರವಾಗಲಿಲ್ಲ. ಹೆಚ್ಚಿನ ಬೆಕ್ಕುಗಳಂತೂ ಸ್ಕ್ರೀನ್ ಅನ್ನೇ ನೋಡಲಿಲ್ಲ. ಈ ಚಿಕ್ಕ ಅವಲೋಕನವನ್ನು ಪ್ರಕಟಿಸಿದ್ದು ಇಂಗ್ಲೆಂಡಿನ ಲಿಂಕನ್ ಯೂನಿವರ್ಸಿಟಿ. ಇದೊಂದು ಚಿಕ್ಕ ವಿಚಾರವೆನ್ನಿಸಿದರೂ ಇದರ ವಿಶ್ಲೇಷಣೆ ಬಹಳಷ್ಟು ಕಡೆ ಚರ್ಚೆಯಾಯಿತು. ನಂತರದಲ್ಲಿ ನಾಯಿಯ ಮೆದುಳಿನಲ್ಲಿ ಈ ರೀತಿ ಮನುಷ್ಯನ ಬೇರೆ ಬೇರೆ ಭಾವದ ಮುಖದ ಚಿತ್ರಗಳನ್ನು ತೋರಿಸಿದಾಗ ಆದ ಸೂಕ್ಷ್ಮಾತಿ ಸೂಕ್ಷ್ಮ ವ್ಯತ್ಯಾಸಗಳು ಬಹುತೇಕ ನಾಯಿಗಳಲ್ಲಿ ಒಂದೇ ತೆರನಾಗಿದ್ದವು.

ಉಳಿದ ಸಾಕು ಪ್ರಾಣಿಗಳಲ್ಲಿ ಅದು ಕಾಣಿಸಲೇ ಇಲ್ಲ. ಇನ್ನು ನಾಯಿಗಳು ಉಳಿದ ನಾಯಿ ಗಳನ್ನು ನೋಡಿದಾಗ ಈ ಎಡಗಡೆ ಮುಖವನ್ನು ನೋಡು ವುದನ್ನು ಮಾಡಲಿಲ್ಲ. ಹಾಗಾಗಿ ಇದು ಸಹಜ ಕಾಕತಾಳೀಯವಲ್ಲ – ನಾಯಿಗಳು ಅದು ಹೇಗೋ ಮನುಷ್ಯನ ಮುಖದ ಈ ಸೂಕ್ಷ್ಮವನ್ನೂ ಗ್ರಹಿಸುತ್ತವೆ ಮತ್ತು ಮನುಷ್ಯನಂತೆ ಎದಿರಿಗಿರುವವರ ಆಂತರ್ಯ ಭಾವವನ್ನು ತಿಳಿಯುತ್ತವೆ ಎಂದೇ ಒಪ್ಪಿಕೊಳ್ಳಬೇಕಾಯಿತು. ಕೆಲವರನ್ನು ಕಂಡರೆ ಯಾವುದೇ ನಾಯಿ ಹತ್ತಿರಕ್ಕೆ ಹೋಗುವುದಿಲ್ಲ – ಆಕಾಶ ಭೂಮಿ ಒಂದಾಗುವಂತೆ ಕೂಗುತ್ತವೆ. ಅದಕ್ಕೆ ಅವರ ಮುಖ ಭಾವವನ್ನು ಎಡುವುದರಲ್ಲಿ ಆಗುವ ತಪ್ಪೇ ಕಾರಣವಿರ ಬಹುದು ಎನ್ನಲಾಗುತ್ತದೆ.

ಸಾಕಿದವರಿಗೆ ಅವರ ನಾಯಿ ಕೂಗುವುದು ಇದೇ ಕಾರಣಕ್ಕೆ ಎಂದು ತಕ್ಷಣ ತಿಳಿದುಬಿಡುತ್ತದೆ. ಮನೆಯ ಗೇಟಿನ ಹೊರಗೆ ಗೊತ್ತಿರುವವರು ಬಂದರೆ ಕೂಗುವ ರೀತಿಯೇ ಬೇರೆ, ಗೊತ್ತಿರದವರು ಬಂದರೆ ಕೂಗುವ ಸ್ವರವೇ ಇನ್ನೊಂದು. ಚಿಂದಿ ಆಯುವವರನ್ನು ಕಂಡರೆ ಕೂಗುವ ರೀತಿಯೇ ಇನ್ನೊಂದು
ವಿಧ. ಖುಷಿಯಾದಾಗ, ಹೆದರಿದಾಗ, ಉತ್ಸುಕವಾದಾಗ, ಯಜಮಾನನನ್ನು ಕಂಡಾಗ ಹೀಗೆ ಒಂದೊಂದು ತೆರನಾದ ಸ್ವರಗಳು. ಈ ಸ್ವರದ ಏರಿಳಿತ ಸಾಮಾನ್ಯವಾಗಿ ಚಿಕ್ಕ ಮರಿಯಿಂದಾಗಿನಿಂದ ಸಾಕಿದ ನಾಯಿಯಾಗಿದ್ದರೆ ಅದು ಮನೆ ಯವರ ಆಯಾ ಭಾವನೆಯ ಸಮಯದ ಸ್ವರದ ಏರಿಳಿತವನ್ನು
ಹೋಲುತ್ತವೆಯಂತೆ. ಇದೆಲ್ಲ ಸೂಕ್ಷ್ಮತೆ ನಾಯಿಯಲ್ಲಿರುವುದನ್ನು ನಾವು ಗ್ರಹಿಸದೇ ಅದು ಬೊಗಳಿದ್ದು ನಮಗೆ ತಿಳಿಯುತ್ತದೆ ಎಂದು ನಮ್ಮ ಬುದ್ಧಿವಂತಿಕೆಯನ್ನೇ ಹೈಲೈಟ್ ಮಾಡುಕೊಳ್ಳುತ್ತೇವೆ.

ಆದರೆ ಅದರಾಚೆಯ ನಾಯಿಯ ಸೂಕ್ಷ್ಮತೆ ತಿಳಿಯಲು ವೈಜ್ಞಾನಿಕ ಅಧ್ಯಯನವೇ ಬೇಕಾಯಿತು. ಈ ಅಧ್ಯಯನವನ್ನು ಮಾಡಿ ಪ್ರಕಟಿಸಿದ್ದು ಜಗತ್ತಿನ ಮೊದಲ ನಾಯಿ ಮತ್ತು ಮನುಷ್ಯನ ಸಂಬಂಧವನ್ನು ಅರಿಯಲೆಂದೇ ನಿಗದಿಯಾದ ಹಂಗೇರಿಯ ಉಠಿqಟo ಔಟ್ಟZb ಯೂನಿವರ್ಸಿಟಿ ಪ್ರಾಣಿ ಶಾಸ ವಿಭಾಗ. ನಾಯಿ ಮಕ್ಕಳಿದ್ದಂತೆ ಹೀಗೆ ಆಡು ಮಾತಿನಲ್ಲಿ ಆಗೀಗ ಕೇಳುತ್ತಿರುತ್ತೇವೆ. ಆದರೆ ಮನುಷ್ಯನ ತನ್ನ ಮಗುವೆಡೆಗಿನ ಭಾವವನ್ನೇ ನಾಯಿಯೆಡೆಗೆ ಹೊಂದಿರುತ್ತಾನೆ ಎನ್ನುವುದಕ್ಕೆ ಕೂಡ ಈಗ ವೈಜ್ಞಾನಿಕ ಪುರಾವೆಗಳಿವೆ. ತಾಯಿ ಆಗತಾನೆ ಹುಟ್ಟಿದ ಮಗುವೆಡೆಗಿನ ಪ್ರೀತಿಯ ಭಾವವನ್ನು ಶಬ್ದದಲ್ಲಿ
ಕಟ್ಟಿಕೊಡುವುದು ಕಷ್ಟ. ಮಗುವಿಗೆ ಹಾಲುಣಿಸುವಾಗ ಆಕ್ಸಿಟೋಸಿನ್ ಎನ್ನುವ ಹಾರ್ಮೋನ್ ಮೆದುಳಿನ ಹೈಪೋ ಥೆಲಾಮಸ್ ಎನ್ನುವ ಭಾಗದಲ್ಲಿ ಉತ್ಪಾದನೆಯಾಗುತ್ತದೆ.

ತಾಯಿಗೆ ಮಗುವಿನೆಡೆಗೆ ಹುಟ್ಟುವ ಧನಾತ್ಮಕ ಭಾವಗಳಿಗೆಲ್ಲ ಅತಿ ಮುಖ್ಯ ಈ ಹಾರ್ಮೋನ್. ತಾಯಿಗೆ ಮಗು ಎಷ್ಟೇ ರಗಳೆ ರಚ್ಚೆಗಿಳಿದರೂ ಋಣಾತ್ಮಕ ಭಾವ ಹುಟ್ಟದಿರುವುದಕ್ಕೆ ಕಾರಣವೇ ಈ ಹಾರ್ಮೋನ್. ಮನುಷ್ಯ ತನ್ನ ಸಾಕು ನಾಯಿಯ ಮೈದಡವುವಾಗ ಆತನಲ್ಲಿ ಮತ್ತು ನಾಯಿಯಲ್ಲಿ
– ಎರಡರಲ್ಲೂ ಇದೇ ಆಕ್ಸಿಟೋಸಿನ್ ಹಾರ್ಮೋನ್ ಉತ್ಪಾದನೆಯಾಗುವುದನ್ನು ಗ್ರಹಿಸಲಾಗಿದೆ. ಇದು ಈ ತಾಯಿ ಮಗುವಿನ ಭಾವವೇ ನಾಯಿ ಮತ್ತು ಮನುಷ್ಯನಲ್ಲಿ ಹುಟ್ಟುವುದಕ್ಕೆ ವಿಜ್ಞಾನ ಕೊಟ್ಟ ಸಾಕ್ಷಿ. ನಾಯಿಯ ಮೈದಡವುವ ಕ್ರಿಯೆಯಲ್ಲಿ ಮನುಷ್ಯನ ಹೃದಯ ಬಡಿತ ಇಳಿತ ಕಾಣುವುದು, ರಕ್ತದೊತ್ತಡ ಸಹಜಕ್ಕೆ ಮರಳುವುದು, ಒಕ್ಸಿಟೋಸಿನ್‌ನಂಥ ಹಾರ್ಮೋನ್ ಬಿಡುಗಡೆಯಾಗುವುದು, ಈ ಕಾರಣಗಳಿಂದ ಹಲವು ಶುಶ್ರೂಷೆಗಳಲ್ಲಿ ನಾಯಿಯನ್ನು ಬಳಸಲಾಗುತ್ತದೆ.

ಅಮೆರಿಕಾದ ಬಹುತೇಕ ಆಸ್ಪತ್ರೆಗಳಲ್ಲಿ ಇದಕ್ಕೆಂದೇ ಒಂದೋ ಎರಡೋ ನಾಯಿಯನ್ನು ಸಾಕಲಾಗುತ್ತದೆ. ನಾಯಿಯನ್ನು ಪ್ರತಿಯೊಂದು ವಾರ್ಡ್‌ಗೆ, ಅದರಲ್ಲೂ ಜೀವನದ ಕೊನೆಯ ಹಂತದಲ್ಲಿರುವವರ ಬಳಿ ಪ್ರತಿ ದಿನ ಕರೆದುಕೊಂಡು ಬರಲಾಗುತ್ತದೆ. ನಾಯಿಯನ್ನು ಹೊಂದಿರುವವರು ಹೃದಯಾ ಘಾತ ಹೊಂದುವ ಸಾಧ್ಯತೆ ನಾಲ್ಕು ಪಟ್ಟು ಕಡಿಮೆಯಂತೆ. ನಾಯಿಯ ಇನ್ನೊಂದು ವರ್ತನೆ ಸದಾ ನನ್ನನ್ನು ಆಶ್ಚರ್ಯಗೊಳಿಸಿದೆ. ಅದೇನೆಂದರೆ ಅವುಗಳಿಗೆ ಕೈ ಸನ್ನೆ ಮತ್ತು ಕೆಲವಕ್ಕೆ ಕಣ್ಣ ಸನ್ನೆ ತಿಳಿಯುವುದು. ಅಲ್ಲಿಗೆ ಹೋಗು, ಇಲ್ಲಿಗೆ ಬಾ ಈ ಎಲ್ಲ ಸನ್ನೆಗಳು ನಾಯಿಗಳಿಗೆ ತಿಳಿದಷ್ಟು ಸುಲಭದಲ್ಲಿ ಬೇರೆ ಪ್ರಾಣಿಗಳಿಗೆ ತಿಳಿಯುವುದಿಲ್ಲ. ಸರ್ಕಸ್‌ನಲ್ಲಿ ಈ ಎಲ್ಲ ಸನ್ನೆಗಳನ್ನು ಉಳಿದ ಪ್ರಾಣಿಗಳಿಗೆ ಹೆದರಿಸಿ ಬೆದರಿಸಿ ಕಲಿಸಲಾಗುತ್ತದೆ. ಆದರೆ ನಾಯಿಗೆ ಇದನ್ನೆಲ್ಲ ಕಲಿಸಲು ವಿಶೇಷ ಪ್ರಯತ್ನವೇ ಬೇಕಾಗುವುದಿಲ್ಲ.

ಇಲ್ಲಿಗೆ ಬಾ, ಅಲ್ಲಿ ಕುಳಿತುಕೋ ಎಂಬೆಲ್ಲ ಸನ್ನೆಗಳನ್ನು ಇನೋರ್ಮ್ಯಾಟಿವ್ ಗೆಸ್ಚರ್’ ಎನ್ನಲಾಗುತ್ತದೆ. ಅದರರ್ಥ ಸನ್ನೆಯ ಏನೋ ಒಂದು ವಿಚಾರ ವನ್ನು ಹೇಳುವ ಕ್ರಿಯೆ. ಇದು ಮನುಷ್ಯನಲ್ಲದೆ ಇನ್ನೊಂದು ಪ್ರಾಣಿಗೆ ಅರ್ಥವಾಗುತ್ತದೆ ಎಂದರೆ ಅದು ನಾಯಿಗೆ ಮಾತ್ರ. ಎಲ್ಲಾ ಅಂದು ಇಂದು ಬೇರೆ ಪ್ರಾಣಿಯಲ್ಲೂ ಈ ಗ್ರಹಿಸುವ ಶಕ್ತಿ ಅನುಭವಕ್ಕೆ ಬರಬಹುದು. ಆದರೆ ನಾಯಿಗೆ ಮಾತ್ರ ಈ ತಿಳಿವಳಿಕೆಗಳು ಸಾಮಾನ್ಯ.

ನನ್ನ ಸ್ನೇಹಿತರ ಮನೆಯಲ್ಲಿ ಗೋಲ್ಡನ್ ರಿಟ್ರೀವರ್ ಜಾತಿಯ ನಾಯಿಯಿದೆ. ಅದಕ್ಕೆ ಒಂದಿಡೀ ವಾಕ್ಯವೇ ಅರ್ಥವಾಗುವುದನ್ನು ನೋಡಿ ಆಶ್ಚರ್ಯ ಪಟ್ಟಿದ್ದೇನೆ. ‘ನೀನು ಮನೆಗೆ ಹೋಗು – ನಾನು ಆಮೇಲೆ ಬರ್ತೇನೆ’, :ನಿನಗೆ ಸ್ವಲ್ಪ ಹೊತ್ತು ಬಿಟ್ಟು ಊಟ ಕೊಡುತ್ತೇನೆ’, ‘ನನಗೆ ಈಗ ಸುಸ್ತಾಗಿದೆ – ನೀನು ತೊಂದರೆ ಕೊಡಬೇಡ’, ನ್ಯೂಸ್ ಪೇಪರ್ ತಗೊಂಡ್ ಬಾ’, ‘ಹೋಗಿ ರೂಮಿನಲ್ಲಿ ಮಲಗಿಕೊ’ ಎಂಬೆಲ್ಲ ವಾಕ್ಯಗಳನ್ನು ಕೈ ಹಾವಭಾವವಿಲ್ಲದೆ ಹೇಳಿದ್ದು ಅದಕ್ಕೆ ತಿಳಿಯುತ್ತದೆ. ಇಂಥ ಅದೆಷ್ಟೋ ನಾಯಿಗಳನ್ನು ನೋಡಿ ಆಶ್ಚರ್ಯಪಟ್ಟದ್ದಿದೆ. ಆಸ್ಟ್ರಿಯಾದ ಬೆಟ್ಸಿ ಎಂಬ ನಾಯಿ ಈ ವಿಚಾರದಲ್ಲಿ ಫೇಮಸ್.
ಆ ನಾಯಿಗೆ ಸುಮಾರು ಮುನ್ನೂರು ಶಬ್ದಗಳ ಮತ್ತು ವಸ್ತುಗಳ ಪರಿಚಯವಿದೆ. ಇದರ ಬುದ್ಧಿ ಮತ್ತೆ ಮೂರು ವರ್ಷದ ಮಗುವಿಗೆ ಸಮವಂತೆ.

ನಾಯಿ ಮತ್ತು ತೋಳ ಎರಡು ಜೈವಿಕವಾಗಿ ಹೆಚ್ಚು ಕಡಿಮೆ ಒಂದೇ. ಅವೆರಡರಲ್ಲಿ ತಳೀಯವಾಗಿ ಶೇ.೯೯.೮ರಷ್ಟು ಸಾಮ್ಯತೆಯಿದೆ. ಅವು ಸುಲಭವಾಗಿ ಕೂಡಿ ಅಂತರ್ ತಳಿಯನ್ನು ಸೃಷ್ಟಿಸಬಲ್ಲವು. ಹಾಗಿದ್ದರೂ, ನಾಯಿ ಬೆಳೆಸಿದಂತೆ ತೋಳವನ್ನು ಬೆಳೆಸುವ ಪ್ರಯೋಗದಲ್ಲಿ ಹಂಗೇರಿಯ ಅದೇ ಯೂನಿವರ್ಸಿಟಿ ಸಂಪೂರ್ಣ ಸೋತಿತು. ತೋಳ ಮತ್ತು ನಾಯಿಯ ಮರಿಯನ್ನು ಜತೆಜತೆಯ ಸಾಕಿದರೂ ಬೆಳೆಯುತ್ತ ಹೋದಂತೆ ತೋಳ ತೋಳವಾ ಗಿಯೇ ವರ್ತಿಸಿತು – ನಾಯಿ ಮಾತ್ರ ವಿಧೇಯವಾಗಿಯೇ ಇತ್ತು. ಇದರರ್ಥ ಇಷ್ಟೇ – ಮನುಷ್ಯ ಸಾವಿರಾರು ವರ್ಷಗಳಿಂದ ನಾಯಿಯನ್ನು ಸಾಕಿರುವು ದರಿಂದ ಅವುಗಳ ಮೆದುಳು ಮನುಷ್ಯನಿಗೆ ಒಗ್ಗಿಕೊಳ್ಳುವಂತೆ ಬದಲಾವಣೆ ಹೊಂದಿವೆ. ಆ ಕಾರಣಕ್ಕೇ ನಾಯಿ ಅಷ್ಟು ಆಪ್ತವಾಗುತ್ತದೆ.

ಮನುಷ್ಯನಿಗೆ ಪ್ರಾಣಿಗಳನ್ನು ಸಾಕಬಹುದು ಎಂದು ಮೊದಲು ಕಳಿಸಿದ್ದೇ ನಾಯಿ ಎನ್ನುವ ವಾದವಿದೆ. ನಾಯಿ ಇಲ್ಲದಿರುತ್ತಿದ್ದರೆ ನಾಗರೀಕತೆ ಬೆಳೆಯು
ತ್ತಲೇ ಇರಲಿಲ್ಲ ಎನ್ನುವ ವಾದವೂ ಇದೆ. ನಾಯಿಯ ಮೂಲ ಯಾವ ಪ್ರಾಣಿ ಪ್ರಬೇಧ ಎನ್ನುವುದಕ್ಕೆ ನೂರೆಂಟು ವಿತಂಡ ವಾದಗಳಿದ್ದರೂ ತೋಳವೇ ನಾಯಿಯಾಯಿತು ಎನ್ನುವುದು ಒಮ್ಮತ. ಆದರೆ ಡಾರ್ವಿನ್‌ನ ವಿಕಾಸ ವಾದದ ತಕ್ಕಡಿಯಲ್ಲಿ ಉದ್ದ ಮೂತಿಯ ಮುಧೋಳದ ನಾಯಿ ಮತ್ತು ಜಪ್ಪಿಟ್ಟ
ಮುಖದ ಪಗ್ ಸಮ ತೂಗುವುದಿಲ್ಲ. ವೈವಿಧ್ಯದ ನಾಯಿಗಳ ತಲೆಬುರುಡೆ ಒಂದಕ್ಕೊಂದು ಅಜಗಜಾಂತರ. ತೋಳವೇ ಅದೆಲ್ಲ ಪ್ರಬೇಧದ ಮೂಲ ಎನ್ನುವ ವಾದ ಅದೇಕೋ ಏನೋ, ಎಷ್ಟೇ ವೈಜ್ಞಾನಿಕ ಸಮೀಕರಣವನ್ನು ಮುಂದಿಟ್ಟರೂ ಕೆಲವೊಂದು ಪ್ರಶ್ನೆಗಳು ವಿಕಸನವನ್ನು  ಷ್ಟೀಕರಿಸುವುದಿಲ್ಲ.
ಏನೇ ಇರಲಿ – ಇತ್ತೀಚೆ ಮನುಷ್ಯನಿಗೆ ಬೇಷರತ್ ಪ್ರೀತಿ ಸುವ ನಾಯಿಯ ಆಂತರ್ಯ ತಿಳಿಯುವ ಪ್ರಯತ್ನವಾಗುತ್ತಿದೆ.

ಈ ಎಲ್ಲ ಹೊಸ ಅಧ್ಯಯನಗಳಿಂದ ನಾಯಿಯ ಬಗ್ಗೆ, ಅದರ ಆಂತರ್ಯದಂದು (ಸ್ವಲ್ಪ) ಇಣುಕು ಹಾಕಲು ಸಾಧ್ಯವಾಗುತ್ತಿದೆ. ನಮ್ಮ ಜತೆಯ ಸಾವಿರಗಟ್ಟಲೆ ವರ್ಷದಿಂದ ಬದುಕುತ್ತಿರುವ ನಾಯಿ ಎಂಬ ಜೀವಿಯ ಬಗ್ಗೆ ನಾವು ಇಂದಿಗೂ ತಿಳಿದುಕೊಂಡದ್ದು ಕಡಿಮೆಯೇ. ನಮಗೂ, ನಮ್ಮ ವಿಜ್ಞಾನಕ್ಕೂ ಒಂದು ಮಿತಿಯಿದೆ. ಆದರೆ ಸಂಬಂಧದ ಅರಿವಿಗೆ ವಿಜ್ಞಾನವೇ ಬೇಕೆಂದೇನಿಲ್ಲ – ಅನುಭವದಿಂದಲೂ ಸಾಧ್ಯ. ನಾಯಿಯ ಬಗ್ಗೆ ತಿಳಿಯುವ ಇದೆಲ್ಲದರ ಪ್ರಯೋಜನ ವೇನು ಎಂದೆಲ್ಲ ಕೇಳಬೇಡಿ. ಆದರೆ ಇನ್ನು ಮುಂದೆ ನಾಯಿಯನ್ನು ವಿಪರೀತ ಪ್ರೀತಿಸುವವರ ಬಗ್ಗೆ ಉಡಾಫೆ ಮಾತನಾಡುವ ಮೊದಲು, ನಾಯಿಗೆ ಮನುಷ್ಯ ವ್ಯಯಿಸುವ ಹಣ, ಅದರ ಸುತ್ತಲಿನ ವ್ಯವಹಾರ ಇವೆಲ್ಲವನ್ನು ತಾತ್ಸಾರ ಮಾಡುವ ಮೊದಲು ಅಲ್ಲಿ ಎರಡೂ ಕಡೆಯಿಂದಿರುವ ಸೂಕ್ಷ್ಮ ಸಂಬಂಧದ ಅರಿವಿರಲಿ.