ಅಭಿವ್ಯಕ್ತಿ
ಉಮಾ ಮಹೇಶ್ ವೈದ್ಯ
ಔಷಧಿಗಳ ಅಡ್ಡ ಪರಿಣಾಮ ಬರೆದುಕೊಡಿ ಎಂಬ ಲೇಖನ ವಿಶ್ವವಾಣಿಯಲ್ಲಿ ಪ್ರಕಟವಾದ ನಂತರ, ನನಗೆ ಹಲವಾರು
ದೂರವಾಣಿ ಕರೆಗಳು ಬಂದವು.
ಅವುಗಳಲ್ಲಿ ಹೆಚ್ಚಾಗಿ, ಈ ಅಲೋಪಥಿ ಔಷಧಗಳ ಅಡ್ಡ ಪರಿಣಾಮಗಳು ಹೇಗೆ ತಮ್ಮ ಜೀವವನ್ನು ಹಿಂಡುತ್ತಿವೆ ಎನ್ನುವ ಸ್ವಯಂ
ವೇದನೆಗಳೇ ಇದ್ದವು. ಅವುಗಳಲ್ಲಿ ಒಂದಂತೂ ನಿಜಕ್ಕೂ ಅಚ್ಚರಿ ಹಾಗೂ ಕುತೂಹಲಕಾರಿಯಾಗಿತ್ತು. ಅದೆಂದರೆ, ನನ್ನ ಪರಿಚಯದ ಪೊಲೀಸ್ ಅಧಿಕಾರಿಯೊಬ್ಬರು ಗಸ್ತು ಕರ್ತವ್ಯದಲ್ಲಿರುವಾಗ, ಅಕಸ್ಮಾತ್ತಾಗಿ ಅವರಿದ್ದ ವಾಹನ ಪಲ್ಟಿಯಾಗಿ ಅಪಘಾತಕ್ಕೀಡಾಯಿತು.
ಅಪಘಾತದಲ್ಲಿ, ಆ ಪೊಲೀಸ್ ಅಧಿಕಾರಿ ತೀವ್ರವಾಗಿ ಗಾಯಗೊಂಡು, ಅವರ ಪಕ್ಕೆಲುಬುಗಳು ಮುರಿದು ಹೋಗಿದ್ದವು. ಚಿಕಿತ್ಸೆಗೆ
ಬೆಂಗಳೂರಿನ ಹೆಸರಾಂತ ಆಸ್ಪತ್ರೆಗೆ ದಾಖಲಾಗಿ ಸುಮಾರು ಎರಡು ತಿಂಗಳವರೆಗೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆೆ ಪಡೆದು ಮನೆಗೆ ಬಂದ ನಂತರ, ತಲೆ ಸುತ್ತು ಬರುವುದು, ಮೈಯಲ್ಲಿನ ಶಕ್ತಿಯೆಲ್ಲಾ ಉಡುಗಿ ಹೋಗಿ, ಮೂರ್ಛೆ ಹೋಗುವಂತಾಗ
ತೊಡಗಿತು. ಹೀಗೇಕೆ ಆಗುತ್ತಿದೆ? ಎಂದು ತಿಳಿದುಕೊಳ್ಳಲು ಪುನಃ ಆಸ್ಪತ್ರೆಗೆ ಹೋಗಿ ಪರೀಕ್ಷೆಗಳಿಗೆ ಒಳಪಟ್ಟಾಗ ಕಂಡು ಬಂದಿದ್ದೇ ನೆಂದರೆ, ಆ ಪೊಲೀಸ್ ಅಧಿಕಾರಿಯ ಮೇದೋಜೀರಕ ಗ್ರಂಥಿ ಅಗತ್ಯಕ್ಕಿಂತ ಹೆಚ್ಚಾಗಿ ಇನ್ಸುಲಿನ್ ಸ್ರವಿಸುತ್ತಿತ್ತು.
ಇದರ ಪರಿಣಾಮವಾಗಿ ದೇಹದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾಗಿ, ನಿಶ್ಯಕ್ತಿ ಕಾಡುತ್ತಿತ್ತು. ಇದಕ್ಕೆ ಪರಿಹಾರವಾಗಿ ಡಾಕ್ಟರ್ ಹೇಳಿದ್ದೇನೆಂದರೆ, ನೀವು ಬದುಕಬೇಕೆಂದರೆ, ದಿನಕ್ಕೆ ಒಂದು ಕೆ.ಜಿ. ಸಕ್ಕರೆಯನ್ನು ತಿನ್ನಬೇಕು, ಹಾಗಾದಾಗಲೇ ಇನ್ಸುಲಿನ್
ಪ್ರಮಾಣವನ್ನು ನಿಯಂತ್ರಿಸಲು ಸಾಧ್ಯ, ಇಲ್ಲದಿದ್ದರೆ, ಮೂತ್ರ ಕೋಶ, ಪಿತ್ತಜನಕಾಂಗಕ್ಕೆ ಅಲ್ಲದೇ ಜೀರ್ಣಾಂಗಗಳಿಗೆ ತೀವ್ರವಾದ ಹಾನಿಯುಂಟಾಗಿ ಮರಣವೂ ಉಂಟಾಗಬಹುದು ಎಂದು. ಈ ಪರಿಹಾರದ ಮಾತುಗಳನ್ನು ಕೇಳಿದ ಆ ಪೊಲೀಸ್ ಅಧಿಕಾರಿಗೆ ಅನಿಸಿದ್ದು, ದಿನವೂ ಒಂದು ಕೆ.ಜಿ. ಸಕ್ಕರೆ ತಿನ್ನುವುದು ಹೇಗೆ? ಎಂಬುದು.
ಡಾಕ್ಟರರ ಸಲಹೆಯಂತೆ ಸಿಹಿ ತಿನ್ನುವುದನ್ನು ಹೆಚ್ಚು ಮಾಡಿದ್ದರ ಫಲವಾಗಿ ಇತರೇ ಆರೋಗ್ಯ ಸಮಸ್ಯೆೆಗಳು ಕಾಣಬರ ತೊಡಗಿ ದವು, ಕೊನೆಗೆ ಆ ಲೇಖನ ಓದಿದ ಅವರು ಇತರ ವೈದ್ಯರೊಂದಿಗೆ ಚರ್ಚಿಸಿದ ನಂತರ ಕಂಡು ಬಂದಿದ್ದೇನೆಂದರೆ, ಅಪಘಾತ ಉಂಟಾದಾಗ ಗಾಯಗಳ ಚಿಕಿತ್ಸೆಗೆ ಸೇವಿಸಿದ ಔಷಧಿಗಳ ಅಡ್ಡಪರಿಣಾಮವೇ ಈ ಮೇದೋಜೀರಕ ಗ್ರಂಥಿಯ ಅಸಮತೋಲನದ ಚಟುವಟಿಕೆ ಎಂದು. ಕೊನೆಯದಾಗಿ ಆ ಅಧಿಕಾರಿ ಹೇಳಿದ್ದೇ ಸೊಗಸಾಗಿತ್ತು, ಈ ಅಲೋಪಥಿ ಡಾಕ್ಟರುಗಳು ಹಾಗೂ ಔಷಧ ತಯಾರಿಸುವ ಕಂಪನಿಗಳ ಮಾಫಿಯಾಗಳು ನಮ್ಮ ಆರೋಗ್ಯದೊಂದಿಗೆ ಆಟವಾಡುತ್ತಿವೆ, ಈ ಎಲ್ಲಾ ಪರಿಸ್ಥಿತಿ ನೋಡಿದರೆ, ಡಾಕ್ಟರರಿಗೆ ಚೆಲ್ಲಾಟ, ರೋಗಿಗಳಿಗೆ ಪ್ರಾಣ ಸಂಕಟ ಎಂಬುದು ಸುಳ್ಳಲ್ಲ.
ರೋಗಿಯ ನರಳಾಟ, ಸಂಕಟ ಹಾಗೂ ಡಾಕ್ಟರರ ಬಳಿಗೆ ಬರುವ ಅನಿವಾರ್ಯತೆಯನ್ನು ಬಂಡವಾಳವನ್ನಾಗಿಸಿಕೊಂಡ ಈ ಡಾಕ್ಟರುಗಳು, ಮೊದಲ ಹಂತದಲ್ಲಿ ರೋಗಿಗೆ ಅವಶ್ಯಕವಾದ ಸಮಾಧಾನ, ಆತನ ಆತ್ಮವಿಶ್ವಾಸ ಹೆಚ್ಚಿಸುವ ಯಾವುದೇ ಸೌಜನ್ಯದ ಮಾತುಗಳು ಕಂಡು ಬರುವುದೇ ಇಲ್ಲ. ಆಸ್ಪತ್ರೆಯಲ್ಲಿ, ರೋಗಿಗೆ ಇದಿರುಗೊಳ್ಳುವವರು, ಉಪಚಾರ ಮಾಡುವ ಡಾಕ್ಟರರಲ್ಲ, ಆ ಆಸ್ಪತ್ರೆೆಯ ವ್ಯವಸ್ಥಾಪಕ ಜವಾಬ್ದಾರಿ ನಿರ್ವಹಿಸುವ ಡಾಕ್ಟರ. ರೋಗಿಗಿರುವ ರೋಗದ ಪತ್ತೆಯ ಕುರಿತಂತೆ ಹಲವಾರು ಪರೀಕ್ಷೆಗೆಳ ಒಳಪಡಿಸಿ ವರದಿ ಪಡೆದು, ಒಳ ರೋಗಿಯನ್ನಾಗಿಸಿ ಉಪಚಾರ ನೀಡುವ ಸಮಯದಲ್ಲಿ, ಈ ಡಾಕ್ಟರುಗಳು
ಆ ರೋಗಿಗೆ ಇರುವ ರೋಗವಾದರೂ ಏನು? ಎಂದು ಹೇಳುವುದೇ ಇಲ್ಲ. ಯಾವ ಔಷಧಗಳನ್ನು ಯಾವ ರೋಗಕ್ಕೆ ಕೊಡುತ್ತಿದ್ದೇವೆ ಎಂಬುದನ್ನು ರೋಗಿಗೂ ಹೇಳುವುದಿಲ್ಲ, ಸಂಬಂಧಿಕರ ಗಮನಕ್ಕೂ ತರುವುದಿಲ್ಲ.
ಹೇಗೋ ರೋಗಿಯ ದೈವ ಬಲದಿಂದ ಬದುಕಿ, ರೋಗದಿಂದ ಗುಣವಾದರೆ, ತಾವು ನೀಡಿದ ಔಷಧ ಹಾಗೂ ಚಿಕಿತ್ಸೆಯ ಪರಿಣಾಮವಾಗಿ ಗುಣವಾಗಿದ್ದು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರೆ, ಒಂದು ವೇಳೆ, ರೋಗಿಯು ಮೃತಪಟ್ಟರೆ, ತಮ್ಮಿಂದ ಪ್ರಾಮಾಣಿಕ ಪ್ರಯತ್ನಗಳೆಲ್ಲಾಾ ಆದರೂ ವಿಧಿಯ ಬಲದೆದುರು ತಮ್ಮ ಪ್ರಯತ್ನಗಳು ವಿಫಲವಾದವು ಎಂದು ವಿಷಾದ ವ್ಯಕ್ತಪಡಿಸುತ್ತಾರೆ.
ಪ್ರತಿಯೊಬ್ಬ ಒಳ ರೋಗಿಯು ಆಸ್ಪತ್ರೆಯಲ್ಲಿ ಉಪಚಾರ ಪಡೆಯುವಾಗ, ಆತನ ಮಂಚದ ಬಳಿ ಆ ರೋಗಿಗೆ ಇರುವ ರೋಗವೇನು, ಯಾವ ಔಷಧಿಗಳನ್ನು ನೀಡಲಾಗುತ್ತಿದೆ, ಯಾವ ಡಾಕ್ಟರ್ ಯಾವಾಗ ಬಂದು ಪರೀಕ್ಷಿಸಿದರು, ಎಂಬ ಎಲ್ಲ ವಿವರಗಳನ್ನು ಹೊಂದಿರುವ ಒಂದು ಕೇಸ್ ಶೀಟ್ ಇರುತ್ತಿತ್ತು. ಈ ಕೇಸ್ ಶೀಟನ್ನು ಸ್ವತಃ ರೋಗಿ, ಆತನ ಸಂಬಧಿಕರು ನೋಡಬಹುದಾಗಿತ್ತು ಹಾಗೂ ಅಗತ್ಯಬಿದ್ದರೆ, ಆ ಕೇಸ್ ಶೀಟಿನ ನಕಲು ಪ್ರತಿಯನ್ನು ತಾವೇ ಪಡೆದುಕೊಳ್ಳಬಹುದಾಗಿತ್ತು. ಆದರೆ, ಯಾವಾಗ ರೋಗಿ ಗಳಿಗೆ ಇರುವ ರೋಗವೇ ಬೇರೆ, ತಾವು ಕೊಟ್ಟ ಔಷಧಿಗಳೇ ಬೇರೆ ಎಂದು ಗ್ರಾಹಕ ವ್ಯಾಜ್ಯ ವೇದಿಕೆಗಳಲ್ಲಿ, ನ್ಯಾಯಾಲಯ ಗಳಲ್ಲಿ ವೈದ್ಯಕೀಯ ನಿರ್ಲಕ್ಷ್ಯತೆ ಸಾಬೀತಾಗತೊಡಗಿದವೋ, ಅಲ್ಲಿಂದ ಎಲ್ಲ ಆಸ್ಪತ್ರೆಗಳಲ್ಲಿ ಈ ಕೇಸ್‌ಶೀಟ್ ವಿವರಗಳು ರೋಗಿ ಗಳಿಗೆ ಹಾಗೂ ಸಂಬಂಧಿಕರಿಗೆ ಮರೀಚಿಕೆಯಾಗತೊಡಗಿದವು.
ಯಾವನೋ ಒಬ್ಬ ಜಾಗೃತ ರೋಗಿ, ಧೈರ್ಯದಿಂದ ತನ್ನ ಕೇಸ್‌ಶೀಟ್ ಕೊಡಿ ಎಂದು ಕೇಳಿದಾಗ, ಮೊದಲು ಆತನನ್ನು ಸಾಗ ಹಾಕಲು ನೋಡಿ ಕೊನೆಗೆ ಆತನ ಮೊಂಡತನವೇ ಗೆದ್ದಾಗ, ಕೊನೆಗೆ ಹೇಳುವುದು ಒಂದು ವಾರ ಬಿಟ್ಟು ಬನ್ನಿ ಕೇಸ್‌ಶೀಟಿನ ನಿಜ ಪ್ರತಿಯನ್ನು ನೀಡಲಾಗುವುದು ಎಂದು. ಈ ಮಾತುಗಳ ಹಿಂದಿನ ಮರ್ಮವನ್ನು ಕಂಡುಕೊಂಡರೆ, ನಿಜಕ್ಕೂ ಆಘಾತವಾಗುವುದ ರಲ್ಲಿ ಸಂಶಯವಿಲ್ಲ, ಏಕೆಂದರೆ, ರೋಗಿಯ ನೈಜವಾದ ಕೇಸ್‌ಶೀಟನ್ನು ಅವರು ನಿರ್ವಹಿಸಿಯೇ ಇರುವುದಿಲ್ಲ, ನಂತರ ಅವು ಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಯಾರಿಸಿ ತಮ್ಮ ಗುಟ್ಟುಗಳು ರಟ್ಟಾಗದಂತೆ ರಕ್ಷಿಸಿಕೊಂಡು ಕೇಸ್‌ಶೀಟ್ನ ಪ್ರತಿಯನ್ನು ನೀಡುತ್ತಾರೆ.
ಆಸ್ಪತ್ರೆೆಳು ಹಾಗೂ ಡಾಕ್ಟರುಗಳು ಯಾಕೆ ರೋಗಿಯ ಕೇಸ್‌ಶೀಟನ್ನು ಮೊದಲಿನಂತೆ ಮುಕ್ತವಾಗಿರಿಸಿಲ್ಲವೆಂದು ನನ್ನ ಪರಿಚಯದ
ಡಾಕ್ಟರೊಬ್ಬರಿಗೆ ಕೇಳಿ ವಿಚಾರಿಸಿದಾಗ ಅವರು ಹೇಳಿದ ಸಂಗತಿಗಳಂತೂ ನಿಜಕ್ಕೂ ಕರಾಳ ಸತ್ಯದ ದರ್ಶನ ಮಾಡಿಸುವಂತಿದ್ದವು. ಈ ಆಸ್ಪತ್ರೆಗಳನ್ನು ಯಾರು ನಡೆಸುತ್ತಾರೆ? ಎಂಬುದನ್ನು ಮೊದಲು ನೋಡಿ, ಕೆಲವು ಡಾಕ್ಟರುಗಳು ಸೇರಿ, ತಮ್ಮದೇ ಒಂದು
ಪ್ರೈವೇಟ್ ಕಂಪನಿ ಹುಟ್ಟು ಹಾಕಿ, ಅದರಡಿ ಆಸ್ಪತ್ರೆಯನ್ನು ಪ್ರಾರಂಭಿಸುತ್ತಾರೆ. ಅಥವಾ ದೊಡ್ಡ ದೊಡ್ಡ ಕಾರ್ಪೋರೇಟ್‌ನವರು ಈ ಆಸ್ಪತ್ರೆಗಳನ್ನು ಪ್ರಾರಂಭಿಸಿದ ನಂತರ, ವೆಚ್ಚ ಕಡಿಮೆಯಾಗಿ ಲಾಭವೇ ಹೆಚ್ಚಾಗಿ ಇರುವಂತೆ ನೋಡಿಕೊಳ್ಳಲು ಹಲವು
ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ.
ಉದಾಹರಣೆಗೆ ತಜ್ಞ ಡಾಕ್ಟರುಗಳಿಗೆ ಲಕ್ಷ, ಲಕ್ಷ ಸಂಬಳ ನೀಡಿ ನೇಮಿಸಿಕೊಳ್ಳುವ ಬದಲು, ಕೇವಲ ವೈದ್ಯಕೀಯ ಪದವಿ ಪಡೆದ ಅಥವಾ ಬಿಎಎಂಎಸ್ ಡಾಕ್ಟರುಗಳನ್ನು ಕಡಿಮೆ ಸಂಬಳದ ಆಧಾರದ ಮೇಲೆ ನೇಮಿಸಿಕೊಳ್ಳುತ್ತಾರೆ. ಇದೇ ರೀತಿಯಾಗಿ ತಜ್ಞ
ಡಾಕ್ಟರುಗಳೂ ಸಹ ತಾವು ಸಿಟಿಂಗ್ ಡಾಕ್ಟರುಗಳಾಗಿ ಹತ್ತು ಹಲವು ಆಸ್ಪತ್ರೆಗಳಿಗೆ ಹೋಗುವುದರಿಂದ ತಮ್ಮ ಆಸ್ಪತ್ರೆಗಳಲ್ಲಿ ಪೂರ್ಣ ಸಮಯವನ್ನು ಮೀಸಲಾಗಿರಿಸಲು ಆಗದೇ ಇರುವುದರಿಂದ ತಮ್ಮ ಆಸ್ಪತ್ರೆಗಳಲ್ಲಿ ಡಾಕ್ಟರುಗಳನ್ನಾಗಿ ಬಿಎಎಂಎಸ್ ಪದವಿ ಪಡೆದ ವೈದ್ಯರುಗಳನ್ನು ಸಂಬಳದ ಆಧಾರದ ಮೇಲೆ ನೇಮಿಸಿಕೊಳ್ಳುತ್ತಾರೆ. ಈ ವೈದ್ಯರುಗಳೇ ಆ ಅಲೋಪಥಿ ಆಸ್ಪತ್ರೆ ಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಈ ವೈದ್ಯರುಗಳು ಕಲಿತಿದ್ದು ಆಯುರ್ವೇದ. ಆದರೆ, ಈ ಆಸ್ಪತ್ರೆಗಳಲ್ಲಿ ನೀಡುವುದು ಅಲೋಪಥಿ ಔಷಧ. ರೋಗಿಗೆ ಆಯುರ್ವೇದ ಪದ್ಧತಿಯಲ್ಲಿ ಯಾವ ರೋಗವಿದೆ ಎಂದು ತಿಳಿದರೂ ಸಹ, ಅದನ್ನು ಹೇಳದಂಥ ಹಾಗೂ ಚಿಕಿತ್ಸೆೆ ನೀಡದಂಥ ಅನಿವಾರ್ಯತೆಯ ಜೀತದ ಬದುಕು.
ಒಂದು ವೇಳೆ, ಕೇಸ್‌ಶೀಟನ್ನು ರೋಗಿಯ ಬಳಿ ಇಟ್ಟರೆ, ಆ ಬಿಎಎಂಎಸ್ ವೈದ್ಯರುಗಳು ರೋಗಿಯನ್ನು ನೋಡಿದ್ದರ ಬಗ್ಗೆ, ಅಲೋಪಥಿ ಔಷಧಿಗಳನ್ನು ನೀಡಿದ ಬಗ್ಗೆೆ ದಾಖಲಿಸಬೇಕು. ಈ ರೀತಿಯ ದಾಖಲಾತಿಗಳು, ಆ ಆಸ್ಪತ್ರೆಯ ಬಂಡವಾಳಗಳನ್ನು ಬಯಲು ಮಾಡುತ್ತವೆ. ಈ ಕಾರಣಕ್ಕೆ ರೋಗಿಗಳಿಗೆ ಯಾವ ರೋಗವಿದೆ ಎಂದು ತಿಳಿಯಗೊಡದೇ, ಅವರು ಕೊಟ್ಟ ಔಷಧಿಗಳನ್ನು
ಪ್ರಶ್ನಿಸದೇ ಸೇವಿಸುವಂತೆ ರೋಗಿಯ ಅನಿವಾರ್ಯತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಮನೋಭಾವದ ಡಾಕ್ಟರುಗಳು, ಆಸ್ಪತ್ರೆಗಳು ಈ ನಾಗರಿಕ ಸಮಾಜದಲ್ಲಿ ನಾಯಿಕೊಡೆ ಗಳಂತೆ ಬೆಳೆದು ನಿಂತಿವೆ ಎಂದರೆ ತಪ್ಪಾಗಲಿಕ್ಕಿಲ್ಲ.
ಪ್ರತಿಯೊಬ್ಬ ರೋಗಿಗೆ, ತನಗೆ ಯಾವ ರೋಗವಿದೆ? ಈ ರೋಗಕ್ಕೆ ಕಾರಣವೇನು? ತನಗೆ ಕೊಡುತ್ತಿರುವ ಔಷಧಗಳು ರೋಗದ ಮೂಲವನ್ನು ವಾಸಿಮಾಡುತ್ತದೋ ಇಲ್ಲವೋ ಎಂಬುದನ್ನು ತಿಳಿಯುವ ಸಂವಿಧಾನಾತ್ಮಕ ಹಕ್ಕಿದೆ. ನಮ್ಮ ಸಂವಿಧಾನದ ಪರಿಚ್ಛೇದ 21ರಲ್ಲಿ ಖಚಿತ ಪಡಿಸಿದಂತೆ, ಪ್ರತಿಯೊಬ್ಬ ನಾಗರಿಕನಿಗೆ ಜೀವಿಸುವ ಹಕ್ಕನ್ನು ನೀಡಿದ್ದು, ತನ್ನ ಜೀವನವನ್ನು ಅನಿಚ್ಚೆ ಯಿಲ್ಲದೇ ಇನ್ನೊಬ್ಬ ವ್ಯಕ್ತಿ ಮೇಲೆ ಪ್ರತ್ಯಕ್ಷ ಅಥವಾ ಅಪ್ರತ್ಯಕ್ಷವಾಗಿ ಅವಲಂಬಿತಗೊಳಿಸುವ ಹಾಗೂ ಪ್ರಶ್ನಿಸದೇ ಪಾಲಿಸುವಂಥ ಸನ್ನಿವೇಶಗಳಿಗೆ ಬಲಿಯಾಗದಂತೆ ಜೀವಿಸುವ ಹಕ್ಕನ್ನು ನೀಡಿದೆ. ಆದರೆ ಈ ಡಾಕ್ಟರುಗಳು ಹಾಗೂ ಆಸ್ಪತ್ರೆಗಳು ಮಾಡುತ್ತಿರುವು ದೇನು? ರೋಗಿಗೇ ತಿಳಿಯದಂತೆ ಆತನ ದೇಹ, ಮನಸ್ಸು ಹಾಗೂ ಜೇಬಿನ ಮೇಲೆ ಅಪ್ರತ್ಯಕ್ಷವಾಗಿ ನಿಯಂತ್ರಣ ಸಾಧಿಸಿ, ತಾವು ಹೇಳಿದಂತೆ ಕೇಳಿ ಎಂಬ ಅನಿವಾರ್ಯತೆಯ ಸಂದರ್ಭಗಳನ್ನು ಸೃಷ್ಟಿಸಿ ರೋಗಿಗಳೊಂದಿಗೆ ಚೆಲ್ಲಾಟವಾಡುತ್ತಿವೆ ಎಂದರೆ ಅತಿ ಶಯೋಕ್ತಿಯೇನಲ್ಲ.
ಇತ್ತೀಚೆಗೆ ನಡೆದ ಒಂದು ಘಟನೆಯನ್ನು ಅವಲೋಕಿಸಿದಾಗ, ಈ ಚಿತ್ರಣ ಮತ್ತಷ್ಟು ಸ್ಪಷ್ಟವಾಗುತ್ತದೆ. ನನ್ನ ಪರಿಚಯದವ ರೊಬ್ಬರು ಮೊದಲು ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದವರು, ಉದ್ಯೋಗ ತೊರೆದು ಭಾರತಕ್ಕೆ ಮರಳಿ ಧಾರವಾಡದಲ್ಲಿ ವಾಸಿಸುತ್ತಿದ್ದರು. ಇತ್ತಿತ್ತಲಾಗಿ ಅವರಿಗೆ ನರ ನಿಶ್ಯಕ್ತಿಯ ಅನಾರೋಗ್ಯ ಕಾಣತೊಡಗಿತ್ತು, ಈ ವಿಷಯಕ್ಕೆ ಹುಬ್ಬಳ್ಳಿಯ ಹೆಸರಾಂತ ನರರೋಗ ತಜ್ಞರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ದಿನ ಮೂರ್ಛೆ ಬಂದು ಬಿದ್ದಿದ್ದರಿಂದ ಅವರನ್ನು ಆ ನರ ರೋಗ ತಜ್ಞರ
ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದಾಗ ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡತೊಡಗಿದ್ದು, ಅವರಿಗೆ ಏನಾಗಿದೆ ಎಂದು ಕೇಳಿದ ಸಂಬಂಧಿಕರಿಗೆ ಡಾಕ್ಟರ್ ಹೇಳಿದ್ದು, ಅಂಥದ್ದೇನಾಗಿಲ್ಲ, ಹುಷಾರಾಗುತ್ತಾರೆ ಎಂದು ಹೇಳುತ್ತಾ ಬಂದರೇ ವಿನಾಃ ಏನಾಗಿದೆ ಎಂದು ಹೇಳಲೇ ಇಲ್ಲಾ. ಅಷ್ಟರಲ್ಲಿ ಆ ರೋಗಿಗೆ ತೀವ್ರ ಜ್ವರ ಕಾಡತೊಡಗಿದ್ದು, ಯಾವ ಕಾರಣಕ್ಕೆ ಜ್ವರ ಬಂದಿವೆ ಎಂದು ಕೇಳಿದರೂ ಸಹ, ಡಾಕ್ಟರಗಳು ಔಷಧಗಳು ಹೈಡೋಸ್ ಇರುವುದರಿಂದ ಜ್ವರ ಬಂದಂತೆ ಇರುತ್ತವೆ ಹೆದರಬೇಡಿ , ನೀರು ಕುಡಿಸಿ ಸರಿ ಹೋಗುತ್ತದೆ ಎಂದು ಹೇಳುತ್ತಿದ್ದರು. ಆದರೆ ಇಪ್ಪತ್ತು ದಿನಗಳಾದರೂ ಗುಣ ಕಾಣದೇ ಇದ್ದಾಗ,
ರೋಗಿಯನ್ನು ಆ ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲು ಸಂಬಂಧಿಕರು ಬಯಸಿದಾಗ, ಮೊದಲು ಅದನ್ನು ವಿರೋಧಿಸಿದ ಡಾಕ್ಟರ್‌ಗಳು, ಕೊನೆಗೆ ತಮ್ಮ ಚಿಕಿತ್ಸಾ ವೆಚ್ಚಗಳನ್ನು ಪಾವತಿಸಿ ರೋಗಿಯನ್ನು ಕರೆದುಕೊಂಡು ಹೋಗಿ ಎಂದು ಹೇಳಿದ್ದರಿಂದ, ಸುಮಾರು ಆರು ಲಕ್ಷ ರುಪಾಯಿ ಹಣವನ್ನು ಪಾವತಿಸಿ ರೋಗಿಯನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಿದರು.
ಆದರೆ ಅಲ್ಲಿನ ಡಾಕ್ಟರುಗಳು ರೋಗಿಯ ಸ್ಥಿತಿಯನ್ನು ಪರೀಕ್ಷಿಸಿ ಹೇಳಿದ್ದೇನೆಂದರೆ, ರೋಗಿಗೆ ಡೆಂಗ್ಯೂ ಜ್ವರವಾಗಿ ಪ್ಲೇಟಲೆಟ್‌ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದಲ್ಲದೇ, ಅನಗತ್ಯವಾಗಿ ವೆಂಟಿಲೇಟರ್ ಅಳವಡಿಸಿದ್ದರಿಂದ ರೋಗಿಯ ಗಂಟಲು ಹಾಗೂ
ಅನ್ನನಾಳಗಳು ಸೋಂಕಿತವಾಗಿ ಸೋಂಕಿನ ಪ್ರಮಾಣ ಹೃದಯವನ್ನು ಮುಟ್ಟಿವೆ ಎಂದು. ಮುಂದಿನೆರಡು ದಿನಗಳಲ್ಲಿ ಆ ರೋಗಿ ತನ್ನ ಪ್ರಾಣ ಕಳೆದುಕೊಂಡಿದ್ದು, ನರ ನಿಶ್ಯಕ್ತಿಯ ಕಾರಣದಿಂದಲ್ಲ, ಆದರೆ ಮೊದಲನೇ ಆಸ್ಪತ್ರೆಯ ಡಾಕ್ಟರುಗಳ ನಿರ್ಲಕ್ಷ್ಯತನ ದಿಂದ ಎಂದು ಅರಿತ ಸಂಬಂಧಿಕರು ಆ ನರ ರೋಗ ತಜ್ಞನನ್ನು ವಿಚಾರಿಸಲು ಹೋದಾಗ ಕಂಡು ಬಂದ ಸಂಗತಿಯೆಂದರೆ, ಆ ರೋಗಿಯನ್ನು ಪ್ರತಿ ದಿನವೂ ನೋಡಿ ಔಷಧಗಳನ್ನು ನೀಡುತ್ತಿದ್ದ ಡಾಕ್ಟರುಗಳು ಬಿಎಎಂಎಸ್ ವೈದ್ಯರುಗಳೇ ಹೊರತು ನರ ರೋಗ ತಜ್ಞರುಗಳಲ್ಲ. ಆದರೆ ಕೇಸ್‌ಶೀಟಿನ ಪ್ರತಿಯನ್ನು ಪಡೆದು ಪರಿಶೀಲಿಸದಾಗ, ಪ್ರತಿ ದಿನವೂ ನರ ರೋಗ ತಜ್ಞರೇ ಬಂದು ರೋಗಿಯನ್ನು ನೋಡಿ ಔಷಧಿಕೊಟ್ಟಂತೆ ದಾಖಲೆಗಳಿದ್ದವು.
ತಮ್ಮ ನಿರ್ಲಕ್ಷ್ಯತೆಯನ್ನು ಸಂಪೂರ್ಣವಾಗಿ ಮರೆಮಾಚಿ ರೋಗಿಯ ಮರಣದಲ್ಲಿ ತಮ್ಮದೇನು ಪಾತ್ರವಿಲ್ಲವೆಂದು ಅಮಾಯಕ ರಂತೆ ವರ್ತಿಸುವ ಆಸ್ಪತ್ರೆಗಳು ತಮ್ಮ ಮೌನ ದಲ್ಲಿಯೇ ಬಿಗಿ ಹಿಡಿದ ತುಟಿಗಳ ಹಿಂದಿನ ತಮ್ಮ ವ್ಯಂಗ್ಯದ ನಗು ಹೊರಗೆ ಬಾರ ದಂತೆ ಜಾಗರೂಕರಾಗಿರುತ್ತಾರೆ.
ಇಂದಿನ ಔಷಧಿ ಲೋಕ, ಯಾವುದೇ ಭೂಗತ ಲೋಕಕ್ಕಿಂತ ಭಿನ್ನವಾಗಿಲ್ಲ. ಪಾತಕ ಲೋಕದ ಪಾತಕಿಗಳು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಹೆದರಿಸಿ ಸುಲಿಗೆ ಮಾಡಿದರೆ, ಈ ಡಾಕ್ಟರುಗಳು, ಆಸ್ಪತ್ರೆಗಳು ಕೈಯಲ್ಲಿ ಲ್ಯಾಬೋರೋಟರಿ ಪರೀಕ್ಷಾ ವರದಿಗಳನ್ನು ಹಿಡಿದು ಹೆದರಿಸಿ ರೋಗಿಗಳನ್ನು ಸುಲಿಗೆ ಮಾಡುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಪ್ರತಿ ಕ್ಷಣ ರೋಗಿ ಹಾಗೂ ಆತನ
ಸಂಬಂಧಿಕರು ಜೀವ ಭಿಕ್ಷೆಯನ್ನು ಬೇಡುವ ಅನಿವಾರ್ಯತೆಯನ್ನು ಸೃಷ್ಟಿಸಿ ಅದನ್ನೇ ಬಂಡವಾಳವನ್ನಾಗಿಸಿಕೊಂಡು ಹಣ ದೋಚುವ ಕಾಯಕವನ್ನು ಕಂಡ ರೋಗಿಗೆ ಒಂದೆಡೆ, ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆ, ಇನ್ನೊಂದೆಡೆ, ತನ್ನ ಉಳಿ ತಾಯದ ಹಣವೆಲ್ಲ ಇನ್ನೊಬ್ಬರ ಪಾಲಾಗುತ್ತಿರುವುದನ್ನು ಕಂಡು ಬದುಕುವುದಕ್ಕಿಂತ ಪರಮಾತ್ಮನ ಪಾದ ಸೇರುವುದೇ
ವಾಸಿಯೆಂದು ಅನ್ನಿಸುವುರಲ್ಲಿ ಯಾವುದೇ ಅಚ್ಚರಿಯಿಲ್ಲ. ಆದರೆ ಅವರಿಗೇನು ಗೊತ್ತು, ಇದೆಲ್ಲ ಡಾಕ್ಟರುಗಳ ಚೆಲ್ಲಾಟ, ರೋಗಿಗಳಿಗೆ ಪ್ರಾಣ ಸಂಕಟವೆಂದು?