Saturday, 5th October 2024

ಮಿದುಳಿನ ಸಮತೋಲನದ ಸರ್ಕಸ್ಸು ಮತ್ತು ಡೋಪಮೈನ್

ಶಿಶಿರ ಕಾಲ

shishirh@gmail.com

ಒಂದು ವೇಳೆ ನೀವು ಹಿಂದಿನ ವಾರದ ಅಂಕಣ ಓದದಿದ್ದಲ್ಲಿ, ಅದನ್ನು ಮೊದಲು ಓದಿ ಮುಂದುವರಿಯುವುದು ಛೊಲೊ. ಹಿಂದಿನ ವಾರದ ಅಂಕಣದಲ್ಲಿ ಕೆಲ ವೊಂದಿಷ್ಟು ಸೂಕ್ಷ್ಮಗಳನ್ನು ವಿವರಿಸಲಿಕ್ಕಾಗಿರಲಿಲ್ಲ. ಹಾಗಾಗಿ ಭಾಗ ಎರಡು. ಬುದ್ಧ ಹೇಳಿದ ‘ಆಸೆಯೇ ದುಃಖಕ್ಕೆ ಮೂಲ’ ಎಂಬುದು ವೈಜ್ಞಾನಿಕವಾಗಿ ಕೂಡ ಹೇಗೆ ಸತ್ಯ ಎನ್ನುವುದನ್ನು ಡೋಪಮೈನ್ ಮತ್ತು ಅವುಗಳ ಗ್ರಾಹಕಗಳ ಮೂಲಕ ಹೇಳಿದ್ದೆ.

ಆಸೆ ಹುಟ್ಟುವುದು, ಬಯಸಿದ್ದನ್ನು ಪಡೆಯುವುದು, ಡೋಪಮೈನ್ ಮತ್ತು ಮಿದುಳಿನ ವ್ಯವಸ್ಥೆ, ಇವೆಲ್ಲ ಆಸೆ ಮತ್ತು ದುಃಖವನ್ನು ನಿರ್ದೇಶಿಸುವುದು ಇವನ್ನೆಲ್ಲ ಕೆಲವು ಉದಾಹರಣೆಗಳ ಜತೆ ವಿವರಿ ಸಿದ್ದೆ. ಅದರ ಜತೆ ಆನಾ ಲೆಮಿನ್ಸ್ಕಿ, ಸ್ಟಾನರ್ಡ್‌ನ ಮನಃ ಶಾಸ್ತ್ರಜ್ಞೆಯ ಆವಿಷ್ಕಾರಗಳ ಬಗ್ಗೆ ಕೂಡ ಹೇಳಿದ್ದೆ. ಅಮೆರಿಕದಲ್ಲಿ ಎರಡು ದೊಡ್ಡ ಲಾಟರಿಗಳಿವೆ: ಪವರ್ ಬಾಲ್ ಮತ್ತು ಮೆಗಾ ಮಿಲಿಯನ್. ಈ ಲಾಟರಿಯ ಆರಂಭಿಕ ಬಹುಮಾನದ ಮೊತ್ತ ಕನಿಷ್ಠ ಇಂತಿಷ್ಟು ಎಂದು ನಿಗದಿಯಿರುತ್ತದೆ. ಜನರು ಲಾಟರಿಯನ್ನು ಖರೀದಿಸುತ್ತ ಹೋದ ಹಾಗೆ ಅದರಲ್ಲಿನ ಅರ್ಧದಷ್ಟು ಹಣ ಬಹುಮಾನದ ಪಾಲಿಗೆ ಸೇರುತ್ತದೆ. ಹೀಗೆ ಹೆಚ್ಚುಹೆಚ್ಚು ಜನ ಖರೀದಿಸಿದಂತೆ ಬಹುಮಾನದ ಮೊತ್ತ ಕೂಡ ಅದಕ್ಕನುಗುಣವಾಗಿ ಮೇಲಕ್ಕೇರುತ್ತ ಹೋಗುತ್ತದೆ.

ಇಲ್ಲಿ ಜನರೇ ತಮ್ಮ ಲಾಟರಿ ಸಂಖ್ಯೆಯನ್ನು ಆಯ್ಕೆಮಾಡಿ ಕೊಳ್ಳುವುದು. ನಂತರ ಒಂದು ಡ್ರಮ್ ಆಕೃತಿ ಯೊಳಗೆ ಸಂಖ್ಯೆ ಯನ್ನು ಅಂಟಿಸಿಕೊಂಡ ಬಾಲ್‌ಗಳಿಂದ ಡ್ರಾ. ಈ ರೀತಿಯ ಡ್ರಾ ವನ್ನು ನೀವು ಲೊಟ್ಟೊ ಮೊದಲಾದ ಲಾಟರಿಗಳಲ್ಲಿ ನೋಡಿರಬಹುದು. ಈ ವ್ಯವಸ್ಥೆ ಹೀಗಿರುವುದರಿಂದ, ಅನೇಕ ಬಾರಿ ಡ್ರಾ ಆದಾಗ ಯಾರೊಬ್ಬರೂ ಜಾಕ್‌ಪಾಟ್ ಗೆದ್ದಿರು ವುದಿಲ್ಲ. ಅಂಥ ಸಮಯದಲ್ಲಿ ಆ ಗೆಲುವಿನ ಅಷ್ಟೂ ಮೊತ್ತವನ್ನು ಲಾಟರಿ ಸಂಸ್ಥೆ ಮುಂದಿನ ಸುತ್ತಿಗೆ ಬಹುಮಾನವಾಗಿ ಇಡುತ್ತದೆ. ಕೆಲವೊಮ್ಮೆ ನಾಲ್ಕಾರು ಬಾರಿ ಡ್ರಾ ಮಾಡಿ ದಾಗಲೂ ಯಾರಿಗೂ ಜಾಕ್‌ಪಾಟ್ ಸಿಗದೇ, ಬಹುಮಾನದ ಮೊತ್ತ ಬಿಲಿಯನ್ ಗಟ್ಟಲೆ ಡಾಲರ್ (ಒಂದೂ ಕಾಲು-ಒಂದೂವರೆ ಲಕ್ಷ ಕೋಟಿ ರುಪಾಯಿ) ಮುಟ್ಟಿಬಿಡುತ್ತದೆ.

ಹೀಗಾಗುತ್ತಿದ್ದಂತೆ ಟಿವಿ, ಪತ್ರಿಕೆಗಳಲ್ಲಿ ಬಹುಮಾನದ ಮೊತ್ತದ್ದೇ ಸುದ್ದಿಯಾಗುತ್ತದೆ. ಇದನ್ನು ಕೇಳಿದ ಇನ್ನಷ್ಟು ಮಂದಿ ಮುಗಿಬಿದ್ದು ಲಾಟರಿ ಕೊಳ್ಳುತ್ತಾರೆ. ಇದೆಲ್ಲದರಿಂದ ಈ ಬಹುಮಾನದ ಮೊತ್ತ ಎಷ್ಟಾಗಿಬಿಡುತ್ತದೆ ಎಂದರೆ, ಗೆದ್ದವನ ಹತ್ತು ತಲೆಮಾರು ದುಡಿಯಬೇಕಾಗಿಲ್ಲ. ಈ ಲಾಟರಿ ಸಂಸ್ಕೃತಿ ಮಧ್ಯ ಮತ್ತು ಅಮೆರಿಕದ ದಕ್ಷಿಣದಲ್ಲಿ ಜಾಸ್ತಿ. ಅಲ್ಲಿನ ಪೆಟ್ರೋಲ್ ಪಂಪ್ ಗಳಲ್ಲಿ ಸಾಮಾನ್ಯರು, ಟ್ರಕ್ ಡ್ರೈವರ್‌ಗಳು ಮುಗಿಬಿದ್ದು ಲಾಟರಿ ಖರೀದಿಸುತ್ತಾರೆ. ಅದರಲ್ಲಿ ಸ್ಕ್ರ್ಯಾಚ್ ಮಾಡುವ ಲಾಟರಿಗಳಿರುತ್ತವೆ. ಅವುಗಳನ್ನು ಖರೀದಿಸಿ, ಸ್ಕ್ರ್ಯಾಚ್ ಮಾಡಿ ತಕ್ಷಣ ಬಹುಮಾನ ಬಂದಿದೆಯೇ ಎಂದು ನೋಡಬಹುದು.

ಇಂಥ ಕೆಲವು ಪೆಟ್ರೋಲ್ ಪಂಪ್‌ಗಳಲ್ಲಿ ಕುಳಿತು ಲಾಟರಿ ಟಿಕೆಟ್ ಅನ್ನು ಸ್ಕ್ರ್ಯಾಚ್ ಮಾಡಲೆಂದೇ ಐದಾರು ಬೆಂಚುಗಳನ್ನು ಹಾಕಿಡುವುದು ಅಲ್ಲೆಲ್ಲ ಸಾಮಾನ್ಯ.
ಹಿಂದಿನ ವಾರ ೧.೫೮ ಬಿಲಿಯನ್ ಡಾಲರ್ ಬಹುಮಾನದ ಮೆಗಾ ಮಿಲಿಯನ್ ಲಾಟರಿ ಡ್ರಾ ಇತ್ತು. ಇದು ಇತಿಹಾಸ ದಲ್ಲಿಯೇ ಗರಿಷ್ಠ ಮೊತ್ತದ ಬಹುಮಾನದ ಹಣ. ನಾವು ಸ್ನೇಹಿತರೆಲ್ಲ ಸೇರಿ ಉಮೇದಿಗೆ, ಅನುಭವಕ್ಕೆ ಇರಲಿ ಎಂದು ನಾಲ್ಕೈದು ಲಾಟರಿ ಟಿಕೆಟ್ ತೆಗೆದುಕೊಂಡು ಕೂತಿದ್ದೆವು. ಡ್ರಾ ಆಗಲು ಎರಡು ದಿನ ಬಾಕಿ ಇತ್ತು. ನನ್ನ ಮಟ್ಟಿಗೆ ಲಾಟರಿ ಅನುಭವ ಇದೇ ಮೊದಲು. ಅಷ್ಟೊಂದು ಮೊತ್ತದ ಹಣದ ಬಹುಮಾನವಿದೆ ಎಂದರೆ ಅದು ಹುಟ್ಟಿಸುವ ಅನುಭವವೇ
ಅನನ್ಯವಾದದ್ದು. ಇಂಥ ಲಾಟರಿ ಗೆದ್ದು ಬಿಟ್ಟರೆ ಜಗತ್ತಿನ ಎರಡೂವರೆ ಸಾವಿರ ಬಿಲಿಯನೇರ್‌ಗಳಲ್ಲಿ ನಾವೂ ಒಬ್ಬರಾಗ ಬಹುದು ಎನ್ನುವ ಕಲ್ಪನೆ.

ಲಾಟರಿ ತೆಗೆದುಕೊಂಡಾಗಿನಿಂದ ಡ್ರಾ ಆಗುವ ವರೆಗೆ ಖರೀದಿಸಿದ ಅದೆಷ್ಟೋ ಲಕ್ಷಮಂದಿಗೆ ಇಂಥ ಅವಾಸ್ತವಿಕ ಆದರೆ ಸಾಧ್ಯವಿರುವ ಕಲ್ಪನೆಗಳು ಅವರ
ದೈನಂದಿನ ಜಂಜಾಟದ ಬದುಕಿನಿಂದ ಚಿಕ್ಕ ವಿಮೋಚನೆಯನ್ನು ಕೊಡುತ್ತವೆ. ಹಣದ ಸುತ್ತ ಹೆಣೆಯಲ್ಪಟ್ಟ ಆಧುನಿಕ ಬದುಕಿನಲ್ಲಿ ಸಾರ್ವತ್ರಿಕವಾಗಿ ಅತ್ಯಂತ ಕಾಡುವ ಹಣದ ಅವಶ್ಯಕತೆಯೇ ಇಲ್ಲದಂತಾಗುವುದು ಯಾರಿಗೆ ಬೇಡ. ಆ ಕಾಲ್ಪನಿಕ ಮಾಯಾ ಲೋಕದಲ್ಲಿರಿಸುವುದು ಈ ಲಾಟರಿಯ ಕೆಲಸ. ಲಾಟರಿ ಖರೀದಿ ಸಿದಾಗ, ಈ ಕಾಯುವಿಕೆಯ ಕನಸಿನ ಸಮಯದಲ್ಲಿ, ಉತ್ತಮ ಜೀವನವನ್ನು, ಹಣದ ಸಮಸ್ಯೆಯೇ ಇಲ್ಲದ ಬದುಕನ್ನು ಕಲ್ಪಿಸಿಕೊಂಡಾಗಲೆಲ್ಲ ಮಿದುಳಿನಲ್ಲಿ
ಯಥೇಚ್ಛ ಡೋಪಮೈನ್ ಬಿಡುಗಡೆಯಾಗುತ್ತದೆ. ಅದುವೇ ಆಸೆ.

ಇದು ಕಲ್ಪನೆಯ ಖುಷಿಯ ಅನುಭವ. ಇದು ಡ್ರಾಗೆ ಕಾಯುವಲ್ಲಿಯವರೆಗೆ, ಯಾವಾಗ ಬೇಕೋ ಆಗ ಕಲ್ಪಿಸಿಕೊಳ್ಳಬಹುದು. ನಂತರದಲ್ಲಿ ಲಾಟರಿ ಗೆಲ್ಲುವುದಿಲ್ಲ ವಲ್ಲ, ಈಗ ನಿಜವಾದ ಮಾನಸಿಕ ದೊಂಬರಾಟ ಇರುವುದು. ಲಾಟರಿ ಗೆಲ್ಲಲಿಲ್ಲವೆಂಬ ಬೇಸರ ಕ್ಷಣಿಕ. ಇದೇ ಸಮಯದಲ್ಲಿ ಅತಿರಂಜಿತ ಕಲ್ಪನೆಯಿಂದಾಗಿ ಕಳೆದ ಕೆಲವು ದಿನದಿಂದ ಮಿದುಳು ಡೋಪಮೈನ್ ಹರಿಸುತ್ತಿರುವುದರಿಂದ ಈಗ ಏಕಾಏಕಿ ನಿಂತಿದೆ. ಡೋಪಮೈನ್ ನಿಂತರೆ ಅಲ್ಲಿ ಬಯಕೆ ಹುಟ್ಟಿಸುವುದು ಹೇಗೆ ಎಂದು ಮಿದುಳಿಗೆ ಗೊತ್ತು. ಕ್ರಮೇಣ ಈ ಡೋಪಮೈನ್ ಹಸಿವು ವ್ಯಕ್ತಿಯಲ್ಲಿ ಕಾಡಲು ಶುರು ವಾಗುತ್ತದೆ. ಆತನ ಮನಸ್ಸು ಮತ್ತೆ ಆ ಕಲ್ಪನೆಯ ಬದುಕನ್ನು, ಡೋಪಮೈನ್ ಅನ್ನು ಬಯಸುತ್ತದೆ. ಈ ಸಮಯದಲ್ಲಿಯೇ ವ್ಯಕ್ತಿ ಹೋಗಿ ಇನ್ನೊಂದು ಲಾಟರಿ ಖರೀದಿಸುವುದು.

ಸ್ಟಾನರ್ಡ್ ಮನಃಶಾಸ್ತ್ರಜ್ಞೆ ಆನಾ ಲೆಮಿನ್ಸ್ಕಿಯ ಇನ್ನೊಂದು ಮುಖ್ಯವಾದ ಅವಲೋಕನ, ಅವಿಷ್ಕಾರ ಕೂಡ ಬುದ್ಧನ ‘ಆಸೆಯೇ ದುಃಖಕ್ಕೆ ಮೂಲ’ ಎಂಬ ಮಾತನ್ನು ದೃಢೀಕರಿಸುತ್ತವೆ. ಅದೇನೆಂದರೆ ರಾಸಾಯನಿಕವಾಗಿ ನಮ್ಮ ಮಿದುಳಿನಲ್ಲಿ ಸುಖ ಮತ್ತು ದುಃಖ ಇವೆರಡೂ ಅನುಭವಕ್ಕೆ ಬರುವ ಭಾಗ ಒಂದೇ ಆಗಿರುವುದು. ಇದರರ್ಥ ವೈಜ್ಞಾನಿಕವಾಗಿ ಖುಷಿ, ಆಸೆ, ದುಃಖದ ಮೂಲ ಒಂದೇ ಎನ್ನುವುದು ಇನ್ನೊಂದು ರೀತಿಯಲ್ಲಿ ಸಾಬೀತಾದಂತಾಯಿತು. ಆದರೆ ಆ ಭಾಗದ ಮಿದುಳಿನ ವ್ಯವಹಾರ ಸ್ವಲ್ಪ ವಿಚಿತ್ರವಾಗಿದೆ. ಖುಷಿ ಅನುಭವಕ್ಕೆ ಬಂದಾಕ್ಷಣ ಮಿದುಳು ಅನುಭವಕ್ಕೆ ತರಲು ಡೋಪಮೈನ್ ಅನ್ನು ಸ್ರವಿಸುತ್ತದೆ. ಅದೇ ಸಮಯದಲ್ಲಿ ಮಾನಸಿಕ ಸಮತೋಲನಕ್ಕೆ ಬೇಕಾಗಿ, ಅಲ್ಲಿಯೇ ಇರುವ ದುಃಖ, ಕಷ್ಟದ ಅನುಭವಕ್ಕೆ ಬರುವ ಭಾಗವನ್ನು ಕೂಡ ಹದ ಪ್ರಮಾಣದಲ್ಲಿ ಉದ್ರೇಕಿಸುತ್ತದೆ. ಈ ಮೂಲಕ ಎರಡೂ ಕಡೆ ಸಮತೂಕವನ್ನು ನೋಡಿಕೊಳ್ಳುತ್ತದೆ.

ಮಿದುಳಿನ ಮುಖ್ಯ ಕೆಲಸಗಳಲ್ಲಿ ಒಂದೆಂದರೆ ಮನಸ್ಸನ್ನು ಆದಷ್ಟು ನಿರ್ಲಿಪ್ತವಾಗಿರುವಂತೆ ನೋಡಿಕೊಳ್ಳುವುದು. ಆ ಕಾರಣಕ್ಕೆ ಖುಷಿಯಾದರೆ ದುಃಖವನ್ನು ಗ್ರಹಿಸುವ ಭಾಗಗಳನ್ನು ಕೂಡ ಉದ್ರೇಕಿಸುವುದು. ಅಂತೆಯೇ ಅತಿಯಾದ ದುಃಖವಾದರೆ ಖುಷಿಯ ಭಾಗವನ್ನು ಹದವಾಗಿ ಉದ್ರೇಕಿಸುವುದು. ಇದು ಮಾನಸಿಕ ಸಮತೋಲನ ಬಿಗಡಾಯಿಸದೇ ಇರಲು ಅವಶ್ಯಕ. ನಮ್ಮದೇ ಮದುವೆ, ಮನೆಯಲ್ಲಿ ಒಂದು ದೊಡ್ಡ ಸಮಾರಂಭವಿದ್ದರೆ ಆ ಸಂಭ್ರಮದಲ್ಲಿ, ಅಂತೆಯೇ ಸಾವಿನ ಮನೆಯಲ್ಲಿ ನಿರ್ಲಿಪ್ತತೆಯ ಅನುಭವಾಗುವುದು. ಕೆಲವೊಮ್ಮೆ ಸುಖ ದುಃಖಗಳು ಏಕಕಾಲದಲ್ಲಿ ಸಮನಾಗಿ ಅನುಭವಕ್ಕೆ ಬರುವ ಘಟನೆಗಳಾಗುತ್ತವೆ. ಆಗ ಈ ಮಿದುಳಿನ ಭಾಗ ಸ್ವಲ್ಪ ಗೊಂದಲಕ್ಕೆ ಒಳಗಾಗುತ್ತದೆ. ಆ ಅನುಭವವೂ ಗಮನಿಸಿದರೆ ಗ್ರಹಿಕೆಗೆ ಸಿಗುತ್ತದೆ.

ಮನಸ್ಸು ಭಾವನಾತ್ಮಕ ವಾದಾಗ ಸಾಕಷ್ಟು ಗೊಂದಲಕ್ಕೊಳಗಾಗುತ್ತದೆ. ಆನಂದ ಬಾಷ್ಪ, ಖುಷಿಯಿಂದ ಅಳುವುದು ಇವೆಲ್ಲದರ ಕಾರಣವನ್ನು ಇಲ್ಲಿ ವಿವರಿಸುವುದಿಲ್ಲ, ನಿಮ್ಮ ಅಂದಾಜಿಗೆ ಬಿಡುತ್ತೇನೆ. ಈ ಮನಸ್ಸಿನ ಸಮತೋಲನದ ದೊಂಬರಾಟದ ಕೆಲಸ ಒಂದು ಅವ್ಯವಸ್ಥೆಗೆ ಕೂಡ ಕಾರಣವಾಗಿದೆ. ಈ ಡ್ರಗ್ಸ್,
ಆಲ್ಕೋಹಾಲ್ ಇವೆಲ್ಲದರಿಂದ ಡೋಪಮೈನ್ ಗ್ರಾಹಕಗಳು ವ್ಯವಹರಿಸುವ ರೀತಿ ಮತ್ತು ಚಟವಾಗುವುದನ್ನು ಹಿಂದಿನ ವಾರ ವಿವರಿಸಿದ್ದೆ. ಚಟವೊಂದನ್ನು ಮುಂದುವರಿಸಿಕೊಂಡು ಹೋದಂತೆ ಈ ಖುಷಿ, ಸುಖದ ಅನುಭವದ ಭಾಗ ಅತಿಹೆಚ್ಚು ಉದ್ರೇಕವಾಗುತ್ತದೆ. ಈಗ ಸಮತೋಲನಕ್ಕೆ ಮಿದುಳು ಅರಿವಿಗೆ ಬರದಂತೆ ದುಃಖ, ಕಷ್ಟದ ಅನುಭವವಾಗುವ ಭಾಗ ವನ್ನು ಕೂಡ ಅಷ್ಟೇ ಉದ್ರೇಕಿಸುತ್ತಿರುತ್ತದೆ. ಹೀಗೆ ಸುಖ ದುಃ ಖಗಳ ಎರಡೂ ಮತ್ತಿನಲ್ಲಿದ್ದಾಗ ಅತ್ಯಂತ ಜಾಗ್ರತಾವಸ್ಥೆ
ಯಲ್ಲಿರುತ್ತದೆ. ಇದನ್ನು ಸ್ಪಷ್ಟವಾಗಿ ಅಗೀಗಿನ ಅನುಭವದಲ್ಲಿ ಕಾಣಬಹುದು.

ಕುಡಿಯುವ ಪಾರ್ಟಿಗಳಲ್ಲಿ ಯಾವುದೋ ಒಂದು ಬೇಸರವಾಗುವ ವಿಚಾರ ಹೇಳಿಬಿಟ್ಟರೆ ಇಡೀ ಗುಂಪೇ ತಕ್ಷಣ ಅತಿಯಾದ ಬೇಸರ ಪ್ರದರ್ಶಿಸುತ್ತದೆ. ಕೆಲವರು ಇಂಥ ಸಮಯದಲ್ಲಿ ಅತಿಯಾಗಿ ಸಂತೈಸುವುದು ಇವೆಲ್ಲ ನಡೆಯುತ್ತದೆ. ಒಬ್ಬ ವ್ಯಕ್ತಿ ನಶೆಯಲ್ಲಿ ಅತ್ಯಂತ ಖುಷಿಯಲ್ಲಿರುವಾಗ ಒಂದು ಚಿಕ್ಕ ದುಃಖದ ವಿಚಾರ ನೆನಪಿಸಿದರೆ ಗೋಳೋ ಎಂದು ಮಕ್ಕಳಂತೆ ಅಳಲು ಶುರುಮಾಡುತ್ತಾನೆ. ಅದಕ್ಕೆ ಕಾರಣ ಮನಸ್ಸಿನ ಸಮತೋಲನದ ಸರ್ಕಸ್ ಅಲ್ಲಿ ನಡೆಯುತ್ತಿರುತ್ತದೆ. ನಶೆಯ ಮಿದುಳಿನ ನರಗಳ ವರ್ತನೆಯಿಂದ ನಿರುಮ್ಮಳತೆಯ ಅನುಭವವಾದರೆ ಸಮತೋಲನಕ್ಕೆ ಭಾವೋದ್ವೇಗದ ಭಾಗ ಕ್ರಿಯಾಶೀಲವಾಗಿರುವುದರಿಂದ ಚಿಕ್ಕ ವಿಚಾರ ಖುಷಿಯದ್ದಾದರೆ ಇನ್ನಷ್ಟು ಖುಷಿ ಕೊಡಬಹುದು, ಅದುವೇ ದುಃಖದ ವಿಷಯವಾದರೆ ಅದು ಕೂಡ ಲೆಕ್ಕಮೀರಿ ಅಳುವ ಹಂತಕ್ಕೆ ಕೊಂಡೊಯ್ಯಬಹುದು.

ಯಾವುದೇ ಚಟವಿರಬಹುದು, ಅದನ್ನು ಮಾಡುವವರು ಬಿಡುವಾಗಲೆಲ್ಲ ಇದೊಂದು ಸಮತೋಲನದ ದೊಂಬರಾಟ ವನ್ನು ಎದುರಿಸುವಾಗ ನಲುಗಿ ಹೋಗುತ್ತಾರೆ. ಒಬ್ಬ ವ್ಯಕ್ತಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾನೆ ಎಂದರೆ ಆತನಲ್ಲಿ ನಿರಂತರ ಕೃತಕ ಡೋಪಮೈನ್ ಬಿಡುಗಡೆಯಾಗುತ್ತಿರುತ್ತದೆಯಲ್ಲ, ಇದರಿಂದ ಸುಖ ಸಿಗುತ್ತದೆಯಲ್ಲ. ಆ ಸಮಯದಲ್ಲಿ ಮಿದುಳು ಕೂಡ ಅಷ್ಟೇ ನಿರಂತರವಾಗಿ ದುಃಖ, ಬೇಸರಗಳ ಭಾಗವನ್ನು ಉದ್ರೇಕಿಸುತ್ತಿರುತ್ತದೆ. ಈಗ ಒಂದು ವೇಳೆ ಡ್ರಗ್ಸ್
ಅಥವಾ ಆಲ್ಕೋಹಾಲ್ ಅಥವಾ ಇನ್ಯಾವುದೇ ಚಟವನ್ನು ತಕ್ಷಣ ನಿಲ್ಲಿಸಿಬಿಟ್ಟರೆ ಮಿದುಳು ಬೇಸರದ ಭಾಗವನ್ನು ಉದ್ರೇಕಿಸುವುದನ್ನು ನಿಲ್ಲಿಸಿರುವುದಿಲ್ಲ. ಇದು ಮುಂದು ವರಿಯುವುದರಿಂದ ತಕ್ಷಣ ದುಃಖದ ಕಡೆಗಿನ ಮನಸ್ಸಿನ ವಾಲಿಕೆ ಹೆಚ್ಚಾಗುತ್ತದೆ. ಆ ಕ್ಷಣದಲ್ಲಿ ಅದನ್ನು ಸಮತೂಕ ಮಾಡಲು ಡೋಪಮೈನ್ ಅವಶ್ಯಕ, ಆದರೆ ಅಲ್ಲಿ ಸ್ರವಿಕೆ ನಿಂತಿರುತ್ತದೆ. ಹಾಗಾಗಿ ಖಿನ್ನತೆ, ಡಿಪ್ರೆಶನ್ ಮನಸ್ಸನ್ನು ಸಂಪೂರ್ಣ ಅವರಿಸಿಕೊಂಡುಬಿಡುತ್ತದೆ.

ಕೃತಕ ಡೋಪ ಮೈನ್‌ನಿಂದಾಗಿ ಬಿಗಡಾಯಿಸಿದ ಅಸಮತೋಲನ ಒಮ್ಮೆಗೇ ನಿಂತುಬಿಟ್ಟರೆ ಅದು ಇನ್ನೊಂದು ಬದಿಯಲ್ಲಿ ಅಸಮತೋಲನಕ್ಕೆ ಕಾರಣವಾ ಗುತ್ತದೆ. Withdrawal symptoms  ಚಟವನ್ನು ಬಿಡುವಾಗ ಆಗುವ ಅನುಭವಗಳು ಅದೆಷ್ಟು ಕಾಡುತ್ತವೆಯೆಂದರೆ ಮತ್ತೆ ಚಟ ಮುಂದುವರಿಸುವಂತೆ ಮಾಡು ತ್ತವೆ. ಸಾಮಾನ್ಯವಾಗಿ ಅಷ್ಟೇ ಪ್ರಮಾಣದ ಡೋಪಮೈನ್ ಮಾತ್ರ ಅವರ ಮನಸ್ಸನ್ನು ಸಮತೂಕದಲ್ಲಿಡು ವುದರಿಂದ, ಅದೇ ಚಟವನ್ನು ಅಥವಾ ಅದಕ್ಕೆ ಪರ್ಯಾಯ ವಾಗಿ ಇನ್ನೊಂದು ದೊಡ್ಡ ಚಟವನ್ನು ಶುರುಮಾಡಿಕೊಳ್ಳಬೇಕಾದ ಅನಿವಾರ್ಯತೆ ಅಲ್ಲಿ ಸೃಷ್ಟಿಯಾಗಿರುತ್ತದೆ.

ಚಿತ್ತದ ಈ ವೃತ್ತಿಯ ಇನ್ನೊಂದು ವಿಚಿತ್ರ ಆವೃತ್ತಿಯಿದೆ.ಅದು ಚಟ ಬಿಟ್ಟ ನಂತರ, ಡಿಪ್ರೆಶನ್, ಖಿನ್ನತೆಯ ನಂತರದ ಹಂತ. ಇಲ್ಲಿ ವ್ಯಕ್ತಿಯ ದೇಹ ಕೃತಕವಾಗಿ ನೋವನ್ನು ಸೃಷ್ಟಿಸಲು ಶುರುಮಾಡುತ್ತದೆ. ಚಟ ನಿಲ್ಲಿಸಿದಾಕ್ಷಣ ಹೊಟ್ಟೆನೋವು, ತಲೆನೋವು, ಬೆನ್ನುನೋವು, ವಾಂತಿ ಇತ್ಯಾದಿ. ಆ ಮೂಲಕ ನೋವಿನ ಭಾಗವನ್ನು ಇನ್ನಷ್ಟು ಉದ್ರೇಕಿಸುವುದು, ಆ ಮೂಲಕ ಅನಿವಾರ್ಯವಾಗಿ ಕೃತಕ ಡೋಪಮೈನ್ ಪಡೆಯುವಂತೆ ಮಾಡುವುದು ಈಗ ಮಿದುಳು, ದೇಹದ ಪ್ಲಾನ್. ಏಕೆಂದರೆ ಮೊದಲೇ ಹೇಳಿದಂತೆ ಮಿದುಳಿನ ಉದ್ದೇಶವೇ ನಿರ್ಲಿಪ್ತತೆ, ರಾಸಾಯನಿಕ, ಆ ಮೂಲಕ ಮಾನಸಿಕ ಸಮತೋಲನ. Withdrawal
time (ಚಟವನ್ನು ಬಿಡುವ ಸಂದರ್ಭದ ದೈಹಿಕ ಮತ್ತು ಮಾನಸಿಕ ಸ್ಥಿತಿ) ಕೆಲವರು ಈ ಹಂತದಲ್ಲಿ ತಮ್ಮ ದೇಹ ವನ್ನು ಗಾಯಗೊಳಿಸಲು ಶುರುಮಾಡುವುದೂ ಇದೇ ಕಾರಣಕ್ಕೆ. ಇದು ಕೃತಕ ಡೋಪಮೈನ್‌ನಿಂದಾದ ವಿಷವರ್ತುಲದ ಮುಂದಿನ ಭಾಗ. ಹೊರಕ್ಕೆ ಬರುವುದೆಂದರೆ ಅನುಭವಿಸಿದ ಸುಖದಷ್ಟೇ ಕಷ್ಟವನ್ನು ಅನುಭವಿಸಬೇಕು.

ಮಾನಸಿಕವಾಗಿ ಮತ್ತು ಈಗ ದೈಹಿಕವಾಗಿ. ಚಟವನ್ನು ಒಮ್ಮೆಲೇ ನಿಲ್ಲಿಸಿ ಬಿಡುವುದಕ್ಕೆ ಇಂಗ್ಲಿಷಿನಲ್ಲಿ cold turkey ಎನ್ನುವುದು. ಎಲ್ಲ ಚಟವನ್ನು ಕೋಲ್ಡ್ ಟರ್ಕಿ, ಒಮ್ಮೆಲೇ ನಿಲ್ಲಿಸಿಬಿಡುವುದು ಸಾಧ್ಯವೇ ಇಲ್ಲ. ಏಕೆಂದರೆ ಮನಸ್ಸು ಒಪ್ಪಿದರೂ ದೇಹವೇ ಅದಕ್ಕೆ ಸಾಥ್ ನೀಡುವುದಿಲ್ಲ. ಸಂಪೂರ್ಣ ದೈಹಿಕ ಸಿಸ್ಟಮ್ ಮತ್ತು ಮಿದುಳು ಮನಸ್ಸಿನ ವಿರುದ್ಧ ಕೆಲಸ ಮಾಡುತ್ತಿರುತ್ತದೆ. ಆ ಕಾರಣಕ್ಕೆ ಕೆಲವೊಂದು ಚಟವನ್ನು ರಿಹ್ಯಾಬ್‌ನಲ್ಲಿ ಸಹಾಯಪಡೆದೇ ಬಿಡಲು ಸಾಧ್ಯವಾಗುತ್ತದೆ.
ಸಾಮಾನ್ಯವಾಗಿ ಬಹುತೇಕ ಮಾನಸಿಕ ಸಮಸ್ಯೆಗಳು, ನಿರುತ್ಸಾಹ, ಖಿನ್ನತೆ ಇವೆಲ್ಲ ಡೋಪಮೈನ್‌ನ ಕೊರತೆಯಿಂದ ಉಂಟಾಗುವವು. ಖಿನ್ನತೆ ಎಂದರೆ ಅದು ಡೋಪಮೈನ್ ಕೊರತೆ. ಇಂಥ ಸಮಯದಲ್ಲಿ ಕೆಲವರು ತಮ್ಮ ದೇಹಕ್ಕೆ ಘಾಸಿ, ಹಾನಿ ಮಾಡಿಕೊಳ್ಳುತ್ತಾರೆ ಎಂದೆನಲ್ಲ, ದೈಹಿಕ ನೋವಿಗೆ ವ್ಯಸನಿಯಾಗುವವರೂ ಇದ್ದಾರೆ. ಅಲ್ಲಿ ಅವರು ನೋವಿನ ಭಾಗವನ್ನು ಇನ್ನಷ್ಟು ಉದ್ರೇಕಿಸಿ ಅಲ್ಲಿಯೇ ಇರುವ ಸುಖದ ಗ್ರಾಹಕಗಳನ್ನು ಕೃತಕವಾಗಿ ಉದ್ರೇಕಿಸಲು ಪ್ರಯತ್ನಿಸುವುದು.
ನೋವು ದೈಹಿಕವಿರಬಹುದು ಅಥವಾ ಮನಸಿಕವಿರಬಹುದು, ಅದು ಕೂಡ ಸಂತೋಷವನ್ನು ಅನುಭವಕ್ಕೆ ತಂದಂತೆ ಗ್ರಹಿಕೆ ಯಾಗುವುದಕ್ಕೆ ಕಾರಣ ಕೂಡ ಮಿದುಳು ಸಮತೋಲನದ ದೊಂಬರಾಟ.

ಇವೆಲ್ಲ ಮೂಲದಲ್ಲಿ ಮನುಷ್ಯನ ಸಹಜ ಮೂಲಪೃವೃತ್ತಿಯ ಮುಂದುವರಿದ ಭಾಗಗಳು. ಈ ಬೇಸಿಕ್ ಇನ್ಸ್ಟಿಂಕ್ಟ್ ಇರುವುದರಿಂದಲೇ ನಾವು ಇನ್ನೂ ಈ ನೆಲದಲ್ಲಿ ಬದುಕಿರುವುದು ಮತ್ತು ಚಟಕ್ಕೆ ಸುಲಭದಲ್ಲಿ ಬಲಿಯಾಗುವುದು. ಇದಿಲ್ಲದಿದ್ದರೆ ಅದಿಲ್ಲ. ಹೀಗಿರುವಾಗ, ಯಥೇಚ್ಛ ಭೋಗಕ್ಕೆ ಸಾಧ್ಯವಿರುವ ಈ ಜಗತ್ತಿನಲ್ಲಿ ಸಮತೋಲನ ಕಷ್ಟ. ಕೋವಿಡ್‌ನ ನಂತರ ಹಲವರಿಗೆ ಒಮ್ಮೆಲೇ ಈ ಸಾಕ್ಷಾತ್ಕಾರ ವಾದಂತಿದೆ. ಇಂದು ಪತ್ರಿಕೆಗಳು, ಟಿವಿಗಳು, ತಜ್ಞರು, ಹಾಗೆ ಕರೆಸಿಕೊಳ್ಳ ಬೇಕೆಂದು ಬಯಸುವವರು ಎಲ್ಲರೂ ಮಾನಸಿಕ ಸಮತೋಲನ ಎಷ್ಟು ಮುಖ್ಯ ಎಂದು ಮಾತನಾಡುತ್ತಿದ್ದಾರೆ.

ಏಕೆಂದರೆ ಅದರ ಪ್ರಾಮುಖ್ಯದ ಅನುಭವ ಮಾಡಿಸಿದ್ದು ಕೋವಿಡ್ ಪರಿಸ್ಥಿತಿ. ಸಾಂಕ್ರಾಮಿಕದ ಆ ಎರಡು ವರ್ಷ ಮಾನಸಿಕವಾಗಿ ಕೂಡ ಪ್ರತಿಯೊಬ್ಬರಿಗೂ ರೋಲರ್ ಕೋಸ್ಟರ್. ಅದನ್ನೆಲ್ಲ ಗ್ರಹಿಸಿದ ಮನಃಶಾಸಜ್ಞರು ಇಂದು ಹೆಚ್ಚೆಚ್ಚು ನಿರ್ಲಿಪ್ತತೆಯ ಅವಶ್ಯಕತೆಯ ಬಗ್ಗೆ ಮಾತನಾಡುತ್ತಿದ್ದಾರೆ. ನಿರ್ಲಿಪ್ತತೆ ಎಂದರೆ ಏನು? ಸುಖ, ಸಾಧನೆಗೆ ಅತಿ ಯಾಗಿ ಹಿಗ್ಗದಿರುವುದು, ದುಃಖ ಅಥವಾ ವೈಫಲ್ಯಕ್ಕೆ ಅತಿ ಯಾಗಿ ಕುಗ್ಗದೆ ಇರುವುದು. ಎಂದರೆ ಮಿದುಳಿನ ಅನುಭವವಾಗುವ ಆ ಭಾಗ ಖುಷಿ ಮತ್ತು ದುಃಖಕ್ಕೆ ಸಮನಾಗಿ, ಲಿಮಿಟ್ಟಿನಲ್ಲಿ ಉದ್ರೇಕಗೊಳ್ಳುವ ಸ್ಥಿತಿ. ಈ ಸ್ಥಿತಿಯನ್ನು ಕೃತಕವಾಗಿ ನಾವು ಮಿದುಳಿಗೆ ಅಭ್ಯಾಸ ಮಾಡಿಸಬಹುದಂತೆ.
ದಿನದ ಒಂದಿಷ್ಟು ಹೊತ್ತು ಸುಮ್ಮನೆ ಕೂರುವುದು, ಮನಸ್ಸಿಗೆ ಬರುವ ಎಲ್ಲ ಭಾವನೆಗಳನ್ನು, ಪ್ರಶ್ನೆಗಳನ್ನು ಉತ್ತರಿಸದೇ ಇರುವುದು. ಮನಸ್ಸನ್ನು ಒಂದೇ ಕಡೆ ಕೇಂದ್ರೀಕರಿಸಿಟ್ಟು ಕೊಳ್ಳುವುದು. ಆ ಮೂಲಕ ಖುಷಿ ಮತ್ತು ದುಃಖದ ವಿಚಾರ ದಲ್ಲಿ ಮಿದುಳು ಪ್ರತಿಕ್ರಿಯಿಸುವ ಪ್ರಮಾಣವನ್ನು ತಗ್ಗಿಸಿ ಕೊಳ್ಳುವುದು. ಈ ಮೂಲಕ ನಿಜವಾದ ಖುಷಿಯ ಅಥವಾ ದುಃಖದ ಘಟನೆ ಎದುರಿಗೆ ನಡೆದಾಗ ಮನಸ್ಸು ತಾಲೀಮು ನಡೆಸಿದಂತೆ ಅತಿಯಾಗಿ ಉದ್ರೇಕಗೊಳ್ಳದಂತೆ ನೋಡಿಕೊಳ್ಳು
ವುದು.

ಆಗ ಮಿದುಳು ಮಾನಸಿಕ ಸಮತೋಲನಕ್ಕೆ ಹೆಣಗಾಡಬೇಕಿಲ್ಲ. ಅಯ್ಯೋ, ಇವರು ಹೇಳುತ್ತಿರುವುದು ಮತ್ತೇನು ಬದನೆಕಾಯಿಯಲ್ಲ- ಧ್ಯಾನ ಮಾಡುವುದು. ಬುದ್ಧ ಕೊನೆಯಲ್ಲಿ ಮಾಡಿದ್ದು ಕೂಡ ಅದನ್ನೇ. ನಿಮ್ಮ ಜಿಜ್ಞಾಸೆಗೊಂದು ಪ್ರಶ್ನೆ. ಸನಾತನ ಜ್ಞಾನದಲ್ಲಿ ‘ಚಿತ್ತ’ ಎಂದರೆ ಏನು?