Saturday, 14th December 2024

Dr Jagadeesh Maane Column: ಭಾರತ ಹಾಗೂ ಪಾಶ್ಚಾತ್ಯ ಶಿಕ್ಷಣದ ತೌಲನಿಕ ವಿಶ್ಲೇಷಣೆ !

ವಿಚಾರ-ವಿಮರ್ಶೆ

ಡಾ.ಜಗದೀಶ್‌ ಮಾನೆ

ವಿಶ್ವದಲ್ಲಿಂದು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಂದು ಜಾಗತಿಕವಾಗಿ ನಾಮುಂದು, ತಾಮುಂದು ಅಂತ ಪೈಪೋಟಿ ಮಾಡುತ್ತಿವೆ. ಅದರೊಟ್ಟಿಗೆ ತಮ್ಮ ಶಿಕ್ಷಣ ವ್ಯವಸ್ಥೆಗಳಲ್ಲೂ ಹೊಸ ಬದಲಾವಣೆಗಳನ್ನು ತರುವತ್ತ ಒಂದು ಹೆಜ್ಜೆ ಮುಂದೆ ಇಟ್ಟಿವೆ. ಅತ್ಯುನ್ನತ ಶಿಕ್ಷಣದ ಜಗತ್ತಿನ ಪಟ್ಟಿಯಲ್ಲಿ ಫಿನ್‌ಲೆಂಡ್ ದೇಶ ಮೊದಲ ಸ್ಥಾನದಲ್ಲಿದೆ. ಅದು ಶೈಕ್ಷಣಿಕವಾಗಿ ಎಲ್ಲ ದೇಶಗಳಿಗಿಂತ ಸಾಕಷ್ಟು ಮುಂದುವರೆದಿದೆ.

ಫಿನ್‌ಲೆಂಡ್‌ನಲ್ಲಿ ಮಗುವನ್ನು ಏಳು ವರ್ಷದ ನಂತರ ಶಾಲೆಗೆ ಸೇರಿಸುತ್ತಾರೆ. ಕಾರಣ, ಅಲ್ಲಿ ಮಗುವಿನ ಬಾಲ್ಯವನ್ನು ಪಠ್ಯ ಹಾಗೂ ಶಿಕ್ಷಣದ ಹೆಸರಲ್ಲಿ ಕಟ್ಟಿ ಹಾಕುವುದಿಲ್ಲ. ಅಲ್ಲಿ ಏಳರಿಂದ ಹದಿನಾರು ವರ್ಷದವರೆಗಿನ ಈ ಒಂಬತ್ತು ವರ್ಷಗಳ ಅವಧಿಯಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಮಕ್ಕಳಿಗೆ ಕೊಡುತ್ತಾರೆ. ಭಾರತದಲ್ಲಿರುವಂತೆ ಹೊರಲಾರದಷ್ಟು ಪುಸ್ತಕಗಳ ಭಾರ, ಹೋಂವರ್ಕ್ ಮತ್ತು ಬೇಸರವಾಗುವಷ್ಟು ಪಠ್ಯಕ್ರಮ ಇದ್ಯಾವುದೂ ಅಲ್ಲಿಲ್ಲ.

ಅಲ್ಲಿ ಪ್ರತಿ ವರ್ಷ ಪರೀಕ್ಷೆಗಳು ನಡೆಯುವುದಿಲ್ಲ, ಮತ್ತು ಮಕ್ಕಳನ್ನು ಕೇವಲ ಅಂಕಗಳಿಗೋಸ್ಕರ ಓದಿಸುವುದಿಲ್ಲ. ಹಾಗೂ ಪರೀಕ್ಷೆಗಳಲ್ಲಿ ರ‍್ಯಾಂಕ್ ತೆಗೆದುಕೊಳ್ಳಲು ಒತ್ತಡವನ್ನೂ ಹೇರುವುದಿಲ್ಲ. ಹೀಗಿರುವಾಗ ಅಲ್ಲಿನ ಶಿಕ್ಷಣ ವ್ಯವಸ್ಥೆ ಆ ಮಕ್ಕಳಿಗೆ ಅಥವಾ ಅದರ ಪೋಷಕರಿಗೆ ಅದು ಶಿಕ್ಷೆ ಅಂತ ಯಾವತ್ತೂ ಅನಿಸುವುದಿಲ್ಲ. ಇದೆಲ್ಲದಕ್ಕಿಂತ ಹೆಚ್ಚಾಗಿ ಅಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಬಹಳಷ್ಟು ಉತ್ತಮವಾಗಿದೆ. ಕಾರಣ ಅಲ್ಲಿ ಶಿಕ್ಷಕರು ಕೇವಲ ಸಂಬಳಕ್ಕೋಸ್ಕರ ಕೆಲಸ ಮಾಡುವುದಿಲ್ಲ ಬದಲಿಗೆ ಮಗುವಿನ ಸರ್ವಾಂಗೀಣ ಉನ್ನತಿಗಾಗಿ ಪ್ರಯತ್ನಿಸುತ್ತಾರೆ.

ಅಲ್ಲಿ ಅಂಕಗಳಿಗೆ ಮಹತ್ವವೇ ಇಲ್ಲದರಿಂದ ಯಾರನ್ನೂ ಹೆದರಿಸಿ ಬೆದರಿಸಿ ಟಾರ್ಗೆಟ್ ಮಾಡುವ ಪ್ರಶ್ನೆಯೇ ಇಲ್ಲ. ಪ್ರತಿದಿನ ವಿದ್ಯಾರ್ಥಿ ಶಿಕ್ಷಕರ ಮಧ್ಯೆ ಪ್ರೀತಿಪೂರ್ವಕವಾದ ಸಂವಹನ ನಡೆಯುತ್ತದೆ. ಪಠ್ಯದ ಜೊತೆಗೆ ದೈಹಿಕ ಶಿಕ್ಷಣ,
ಸ್ಕಿಲ್ ಡೆವಲಪ್ಮೆಂಟ, ಅಲ್ಲಿನ ಸಾಂಸಕೃತಿಕ ಪರಂಪರೆ, ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಮುಂತಾದ ವಿಷಯಗಳ
ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮತ್ತು ಅಲ್ಲಿನ ಮಕ್ಕಳು ಶಾಲಾ ಕೋಠಡಿಗಳಲ್ಲಿ ಕಲಿಯುವುದಕ್ಕಿಂತ ಹೆಚ್ಚಾಗಿ ಹೊರಗಡೆ ಹಾಗೂ ಪ್ರಾತ್ಯಕ್ಷಿಕೆಯ ಮೂಲಕ ಕಲಿಯುತ್ತಾರೆ.

16ನೇ ವಯಸ್ಸಿನ ನಂತರ ಆ ಮಕ್ಕಳಿಗೆ ವೃತ್ತಿ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶವಿದೆ. ಅದು ವೃತ್ತಿಪರ ಅವರ ಭವಿಷ್ಯವನ್ನು ರೂಪಿಸಿಕೊಳ್ಳಲು ಬೇಕಾದಂತಹ ತರಬೇತಿಯ ವಿಷಯವಾಗಿದೆ. ಪ್ರಮುಖವಾಗಿ ಅಲ್ಲಿ ಯಾವ ಶಾಲೆಗಳಲ್ಲೂ ಡೊನೇಷನ್ ಹಾವಳಿಗಳಿಲ್ಲ ಮತ್ತು ರ‍್ಯಾಂಕುಗಳ ಅವಶ್ಯಕತೆಯಿಲ್ಲ. ಹಾಗಾಗಿ ಅಲ್ಲಿನ ಮಕ್ಕಳು ಪಠ್ಯದ ಜತೆಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಾರೆ. ಅಲ್ಲಿ ಕಲಿಕೆ ಕೇವಲ ಸ್ಪರ್ಧೆ ಯಲ್ಲ, ನಂಬರಗಳಿಗಾಗಿ ಮಾಡೋ ಸರ್ಕಸ್ಸೂ ಅಲ್ಲ. ಬದಲಿಗೆ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳುವು ದರೊಂದಿಗೆ ಬದುಕನ್ನು ರೂಪಿಸಿಕೊಳ್ಳುವ ಕಲಿಕೆಯಾಗಿದೆ. ಆ ಮೂಲಕ ಫಿನ್‌ಲೆಂಡ್ ಜಗತ್ತಿನ ಶಿಕ್ಷಣ ಪಟ್ಟಿಯಲ್ಲಿ ಅತ್ಯುನ್ನತ ವಾದ ಸ್ಥಾನ ಪಡೆದಿದೆ. ಚೀನಾ ಸರಕಾರ 1990ರಲ್ಲಿ ಅದು ಕ್ಯಾಪಿಟಲಿನತ್ತ ವಾಲಿದ ನಂತರ ತಮ್ಮ ಶಿಕ್ಷಣ ವ್ಯವಸ್ಥೆ ಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ.

ಚೀನಾದಲ್ಲಿ ಒಟ್ಟು 1.5 ಕೋಟಿ ಯಷ್ಟು ಶಿಕ್ಷಕರಿದ್ದಾರೆ. ಆದರೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ದಲ್ಲಿ 1.13 ಕೋಟಿಯಷ್ಟು ಮಾತ್ರ ಶಿಕ್ಷಕರಿದ್ದಾರೆ. ಚೀನಾ 2023ರಲ್ಲಿ ತನ್ನ ಜಿಡಿಪಿಯ 4.5 ರಷ್ಟು ಅಂದರೆ 906 ಬಿಲಿ ಯನ್ ಡಾಲರ್‌ನಷ್ಟು ಹಣವನ್ನು ಶಿಕ್ಷಣಕ್ಕೆ ಖರ್ಚು ಮಾಡಿದೆ. ಭಾರತ ತನ್ನ ಜಿಡಿಪಿಯ ಶೇ.3ರಷ್ಟು ಹಣವನ್ನು ಮಾತ್ರ ಶಿಕ್ಷಣಕ್ಕೆ ಬಳಸಿದೆ. ಚೀನಾದಲ್ಲಿ ಶೇ.85ರಿಂದ 90ರಷ್ಟು ಅಲ್ಲಿನ ಶಾಲೆಗಳು ಸರಕಾರಿ ಒಡೆತನ ದಲ್ಲಿವೆ. ಹಾಗಾಗಿ ಅಲ್ಲಿನ ಶೇ.90ರಷ್ಟು ವಿದ್ಯಾರ್ಥಿಗಳು ಸರಕಾರಿ ಶಾಲೆಗಳ ವ್ಯಾಸಂಗ ಮಾಡುತ್ತಾರೆ.

ಭಾರತದಲ್ಲಿ ಶೇ. 55 ರಿಂದ 60ರಷ್ಟು ವಿದ್ಯಾರ್ಥಿಗಳು ಮಾತ್ರ ಸರಕಾರಿ ಶಾಲೆಗಳ ಪ್ರವೇಶ ಪಡೆಯುತ್ತಾರೆ. ಇನ್ನು ಚೀನಾದಲ್ಲೂ 9 ವರ್ಷಗಳ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುತ್ತದೆ. 18 ವರ್ಷದ ನಂತರ ವೃತ್ತಿಪರ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಚೀನಾ ಸರಕಾರವು ಮುಖ್ಯವಾಗಿ ಅಲ್ಲಿನ ಇಂಡಸ್ಟ್ರಿ ಗಳಿಗೆ ಅಗತ್ಯವಿರುವ ಶಿಕ್ಷಣಕ್ಕೇ ಹೆಚ್ಚಿನ ಒತ್ತು ನೀಡುತ್ತದೆ.

ಹಾಗಾಗಿ ಚೀನಾ ಇಂದು ಆರ್ಥಿಕವಾಗಿ ಬಹಳಷ್ಟು ಪ್ರಬಲವಾಗಿದೆ. ಅಲ್ಲಿನ ಸರಕಾರಿ ಶಾಲೆಗಳ ಜತೆಗೆ ಖಾಸಗಿ ಶಾಲಾ- ಕಾಲೇಜುಗಳು ಮತ್ತು ವಿಶ್ವದರ್ಜೆಯ ಹತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಚೀನಾದಲ್ಲಿವೆ. ಚೀನಾದಲ್ಲಿನ ಪ್ರಾಥ ಮಿಕ ಶಿಕ್ಷಣ ಅಮೆರಿಕ ಶಿಕ್ಷಣಕ್ಕಿಂತಲೂ ಬಹಳ ಕಠಿಣವಾಗಿದೆ. ಅಲ್ಲಿನ ಮಕ್ಕಳು 9ನೇ ತರಗತಿಯವರೆಗೂ ಕ್ಯಾಲ್ಕು ಲೇಟರ್‌ಗಳನ್ನು ಬಳಕೆ ಮಾಡುವುದಿಲ್ಲ. ಹೀಗಾಗಿ ಗಣಿತ ವಿಷಯದಲ್ಲಿ ಅಮೆರಿಕ ವಿದ್ಯಾರ್ಥಿಗಳಿಗಿಂತ ಚೀನಿ
ವಿದ್ಯಾರ್ಥಿಗಳೇ ಬಹಳ ಶಾರ್ಪ್ ಆಗಿದ್ದಾರೆ. ಅಮೆರಿಕದ ಶಿಕ್ಷಣವು ಉತ್ತಮ ಗುಣಮಟ್ಟದ ಅಡಿಪಾಯ ಹಾಕಿದರೆ,
ಚೀನಾದ ಶಿಕ್ಷಣವು ಬಹಳಷ್ಟು ಕ್ರಿಯೇಟಿವಿಟಿಯನ್ನು ಕಲಿಸುತ್ತದೆ.

ಚೀನಾ-ಅಮೆರಿಕದಲ್ಲಿ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಸಮಯವನ್ನು ವ್ಯರ್ಥ
ಮಾಡುವ ಅಥವಾ ನಿರೂಪಯೋಗಿ ಅಂತ ಅನಿಸುವ ಶೈಕ್ಷಣಿಕ ವಿಭಾಗಗಳು ಅಲ್ಲಿಲ್ಲ. ಚೀನಾದ ಮಕ್ಕಳಿಗೆ ಎರಡನೇ ವಯಸ್ಸಿನಲ್ಲಿ ವಿದ್ಯಾಭ್ಯಾಸ ಆರಂಭವಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಚೈನೀಸ್ ಭಾಷೆ, ದೈಹಿಕ ಶಿಕ್ಷಣ, ಗಣಿತ, ಸಂಗೀತ, ಚಿತ್ರಕಲೆ, ರಾಜಕೀಯ ಸಾಮಾನ್ಯ eನದ ಜೊತೆಗೆ ನೈತಿಕ ಶಿಕ್ಷಣವನ್ನು ಕೊಡುತ್ತಾರೆ. ಒಂದನೇ ತರಗತಿಯಲ್ಲಿ ಚೈನೀಸ್ ಮಕ್ಕಳು 400 ಅಕ್ಷರಗಳನ್ನು ಗುರುತಿಸಿ 100 ಅಕ್ಷರಗಳನ್ನು ಬರೆಯುತ್ತಾರೆ.

ಅಲ್ಲಿನ ಸಾಕ್ಷರತೆ ಹೆಚ್ಚಿಸಲು ಸಾಂಪ್ರದಾಯಿಕ ಅಕ್ಷರಗಳ ಬದಲಿಗೆ ಸರಳಿಕೃತ ಚೈನೀಸ್ ಲಿಪಿಗಳನ್ನೇ ಕಲಿಸ ಲಾಗುತ್ತದೆ. ದಿನದಲ್ಲಿ ಎರಡು ಗಂಟೆ ಸೆಲ ಸ್ಟಡಿ ಕ್ಲಾಸ್ ಗಳಿರುತ್ತವೆ. ಬಹಳ ವಿಶೇಷ ಅಂದ್ರೆ ಮಧ್ಯಾಹ್ನದ ಕ್ಲಾಸುಗಳು ಶುರುವಾಗುವುದಕ್ಕಿಂತ ಮುಂಚೆ ಕನಿಷ್ಠ 20 ನಿಮಿಷದವೆರೆಗೆ ಆ ಮಕ್ಕಳು ಅಲ್ಲಿನ ಡೆ ಮೇಲೆ ಮೇಲೆ ನಿದ್ರಿಸುತ್ತಾರೆ. ಹೀಗೆ ಮಾಡುವು ದರಿಂದ ಮಧ್ಯಾಹ್ನದ ತರಗತಿಯಲ್ಲಿ ಮಕ್ಕಳಿಗೆ ಹೆಚ್ಚಿನ ಟೈಯರ್ಡ್‌ನೆಸ್ ಫೀಲ್ ಆಗುವುದಿಲ್ಲ. ಶಾಲೆಗಳ ಮೆಂಟೇನೆ ಕೆಲಸವನ್ನೂ ಕೂಡಾ ಅಲ್ಲಿನ ಮಕ್ಕಳೇ ಮಾಡುತ್ತಾರೆ.

ಅಲ್ಲಿ ಯಾವುದೇ ಸಹಾಯಕರಿರುವುದಿಲ್ಲ ಶಾಲೆಗಳ ನೆಲ, ಕಿಟಕಿ, ಬಾಗಿಲು, ಕಾರಿಡಾರ್‌ನಿಂದ ಶೌಚಾಲಯಗಳವರಿಗೆ
ಎಲ್ಲವನ್ನೂ ಆ ಮಕ್ಕಳೇ ಸ್ವಚ್ಛಗೊಳಿಸುತ್ತಾರೆ. ಇದರಿಂದ ಮಕ್ಕಳಲ್ಲಿ ಮುಜುಗುರ ಭಾವನೆ ದೂರಾಗಿ ಅವರಲ್ಲಿ
ಕ್ರಿಯಾಶೀಲತೆ, ಆತ್ಮವಿಶ್ವಾಸ ಹೆಚ್ಚುತ್ತದೆ. ತೈವಾನ್ ದೇಶದಲ್ಲೂ ಇದೇ ರೀತಿಯ ಶಿಕ್ಷಣ ಪದ್ಧತಿ ಜಾರಿಯಲ್ಲಿದೆ.
ಇನ್ನೂ ಭಾರತೀಯ ಶಿಕ್ಷಣ ವ್ಯವಸ್ಥೆಯಂತೂ ಅಪ್ಪಟ ಬ್ರಿಟಿಷ್ ಪ್ರಣಿತ ಶಿಕ್ಷಣ ಮಾದರಿ ವ್ಯವಸ್ಥೆ. ಬ್ರಿಟಿಷರು ಈ
ದೇಶವನ್ನು ತೊಲಗಿದ ನಂತರವೂ ಅಜ್ಜ ನೆಟ್ಟ ಆಲದ ಮರಕ್ಕೆ ನೇತು ಹಾಕಿಕೊಂಡಂತೆ ನಮ್ಮ ಪೂರ್ವಜರು ಅದನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. ಅದರಲ್ಲೂ ಜಾತಿ, ಪಂಥ, ಇಸಂ, ಆ ಪಕ್ಷ ಈ ಪಕ್ಷ ಅಂತೆಲ್ಲ ಬೇಡದ ವಿಷಯಗಳೆಲ್ಲವನ್ನೂ ನಮ್ಮ ಶಿಕ್ಷಣದಲ್ಲಿ ತಂದು ತುರುಕಿ ಮಕ್ಕಳ ತಲೆಯಲ್ಲೂ ಅದನ್ನೇ ತುಂಬಲಾಗುತ್ತಿದೆ. ನಮ್ಮ ಶಾಲೆಗಳನ್ನು ಅಮೆರಿಕದೊಂದಿಗೆ ಹೋಲಿಕೆ ಮಾಡಿದರೆ, ನಮ್ಮ ಶಾಲೆಗಳ ಮೂಲಭೂತ ಸೌಕರ್ಯದಲ್ಲಿ ನಾವು ಬಹಳ ಹಿಂದೆ ಇದ್ದೇವೆ.

ಅಮೆರಿಕದಲ್ಲಿ ಸರಕಾರಿ ಶಾಲೆಗಳ ಜತೆಗೆ ಖಾಸಗಿ ಶಾಲೆಗಳು ಸ್ಪರ್ಧೆ ಮಾಡಲು ಹರಸಾಹಸವನ್ನೇ ಮಾಡುತ್ತವೆ. ಅಲ್ಲಿ ಜನ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಪ್ರಾಶಸ್ತ್ಯ ಸರಕಾರಿ ಶಾಲೆಗಳಿಗೇ ಕೊಡುತ್ತಾರೆ. ಆದರೆ ಭಾರತದಲ್ಲಿ ಇದೆಲ್ಲವೂ ಉಲ್ಟಾ! ಅಲ್ಲಿ ಕಿಂಡರ್ ಗಾರ್ಡನ್‌ನಿಂದ ಐದನೇ ತರಗತಿವರೆಗೆ ಓದುವಂತಹ, 6 ರಿಂದ 8ನೇ ತರಗತಿಯವರೆಗೆ ಮಿಡಲ್ ಸ್ಕೂಲ್, ‌9ರಿಂದ 12ನೇ ತರಗತಿಯವರೆಗಿನ ಶಿಕ್ಷಣವನ್ನು ಹೈಸ್ಕೂಲ್ ಎಂದು ಕರೆಯಲಾಗುತ್ತದೆ.

ಅದರಂತೆ ಇದೀಗ ಹೊಸ ಶಿಕ್ಷಣ ನೀತಿಯಲ್ಲಿ ಭಾರತ ಕೂಡಾ ಇದನ್ನೇ ಅಳವಡಿಸಿಕೊಂಡಿದೆ. ಭಾರತದಲ್ಲಿರುವಂತೆ ಅಮೆರಿಕದ ಮಕ್ಕಳು ಹೆಚ್ಚಿನ ಪುಸ್ತಕಗಳನ್ನು ಹೊತ್ತುಕೊಂಡು ಶಾಲೆಗೆ ಹೋಗುವುದಿಲ್ಲ. ಅಲ್ಲಿ ಸಮವಸಗಳೂ ಕಡ್ಡಾಯವಿಲ್ಲ. ಯಾಕಂದ್ರೆ ಅಲ್ಲಿನ ಶಿಕ್ಷಣ ಸಂಸ್ಥೆಗಳು ಪುಸ್ತಕ ಹಾಗೂ ಸಮವಸ್ತ್ರಗಳನ್ನು ಮಾರಾಟ ಮಾಡುವುದೇ ಇಲ್ಲ. ಅಮೆರಿಕದಲ್ಲೂ ಒಂದಿಷ್ಟು ಖಾಸಗಿ ಶಾಲೆಗಳಿವೆ. ಅಲ್ಲಿ ಪ್ರವೇಶಕ್ಕೆ ಪೈಪೋಟಿಯೂ ನಡೆಯುತ್ತದೆ. ಅದು ಎಂಥವರ ಮಧ್ಯೆ! ಅಲ್ಲಿ ತಮ್ಮ ಮಕ್ಕಳನ್ನು ಸೇರ ಬಯಸುವ ಪೋಷಕರು ತಮ್ಮ ಒಣ ಪ್ರತಿಷ್ಠೆಗಾಗಿ, ಧಾರ್ಮಿಕ ಕಾರಣಗಳು ಹಾಗೂ ಪೈಪೋಟಿಯ ಹುಚ್ಚಿಗೆ ಬಿದ್ದಂತವರು ಮಾತ್ರ ಅಲ್ಲಿನ ಖಾಸಗಿ ಶಾಲೆಗಳನ್ನು ಸ್ಥಾಪಿಸಿದ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಅಲ್ಲಿನ ಸರಕಾರಿ ಹಾಗೂ ಖಾಸಗಿ ಶಾಲೆಗಳ ನಡುವೆ ಶಿಕ್ಷಣದಲ್ಲಿ ಅಂತಹ ಯಾವುದೇ ವ್ಯತ್ಯಾಸಗಳಿಲ್ಲ.

ಅ+,ಅ, ಆ+,ಆ ತರಹದ ಗ್ರೇಡ್‌ಗಳನ್ನ ನೀಡುತ್ತಾರೆ. ಹೊರತು ಆತ ಅಂತಿಮ ಪರೀಕ್ಷೆಯಲ್ಲಿ ಏನೆಲ್ಲ ಬರೆದ ಎಂಬು ದನ್ನ ಆಧಾರವಾಗಿಟ್ಟುಕೊಂಡು ಅಲ್ಲಿ ಅಂಕಗಳು ನಿರ್ಧಾರವಾಗುವುದಿಲ್ಲ. ಅಮೆರಿಕದಲ್ಲಿ ‘ಹೋಂ ಸ್ಕೂಲಿಂಗ್’ ಎಂಬ ವ್ಯವಸ್ಥೆಯೂ ಇದೆ. ಅಂದರೆ ಮಕ್ಕಳನ್ನು ಶಾಲೆಗೆ ಕಳಿಸದೆ ಮನೆಯಲ್ಲಿಯೇ ವಿದ್ಯಾಭ್ಯಾಸ ಕೊಡಿಸುವ ಪದ್ಧತಿ.

ಅದಕ್ಕೆ ಬೇಕಾದ ಪುಸ್ತಕ ಹಾಗೂ ಆನ್ಲೈನ್‌ನಲ್ಲಿ ಶಿಕ್ಷಣವನ್ನು ನೀಡುತ್ತಾರೆ. ಈ ರೀತಿಯ ವ್ಯವಸ್ಥೆ ಭಾರತದಲ್ಲಿಯೂ ಇದೆ, ಆದರೆ ಅಲ್ಲಿರುವಷ್ಟು ಪಾಪುಲರ್ ಇಲ್ಲಿಲ್ಲ. ಮಕ್ಕಳು ಶಾಲೆಯಲ್ಲಿ ಕಲಿಯುವುದಕ್ಕಿಂತ ಹೆಚ್ಚಿನ ವಿಷಯಗಳು
ಹಾಗೂ ಕ್ರಿಯೇಟಿವಿಟಿಗಳನ್ನು ಹೋಂಸ್ಕೂಲಿನಲ್ಲಿ ಕಲಿಯುತ್ತಾರೆ. ಆದರೆ ಅವರಿಗಿರುವ ಒಂದೇ ಒಂದು ಸಮಸ್ಯೆ
ಅಂದ್ರೆ, ಹೋಂ ಸ್ಕೂಲಿಂಗ್ ಮಕ್ಕಳು ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವ ಗುಣವನ್ನು ಬೆಳೆಸಿಕೊಳ್ಳಲು ಕಷ್ಟ
ಸಾಧ್ಯವಾಗುತ್ತದೆ. ಹೀಗಾಗಿ ಆ ಮಕ್ಕಳ ಪೋಷಕರು ವಾರಕ್ಕೊಮ್ಮೆ ಅವರನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಕರೆ ದೊಯ್ಯುವ ಮೂಲಕ ಮಕ್ಕಳಿಗೆ ಸಾಮಾಜಿಕ ವರ್ತನೆಯನ್ನು ಕಲಿಸುವ ಪ್ರಯತ್ನ ಮಾಡುತ್ತಾರೆ.

ಅಮೆರಿಕ ಹಾಗೂ ಭಾರತದ ಶಾಲೆಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ನಮ್ಮ ಬಹುತೇಕ ಶಾಲಾ ಕಟ್ಟಡಗಳಲ್ಲಿ
ಮೂಲಭೂತ ಸೌಕರ್ಯದ ಕೊರತೆ ಹೆಚ್ಚಿದೆ. ಸರಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವಂತೂ ದಿನದಿಂದ ದಿನಕ್ಕೆ
ಕುಸಿಯುತ್ತಲೇ ಇದೆ. ಕಾರಣ, ನಮ್ಮಲ್ಲಿ ತಂತ್ರeನ ಆಧಾರಿತ ಶಿಕ್ಷಣವಿಲ್ಲ. ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮ ಫಲಿತಾಂಶಕ್ಕಾಗಿ ಪರೀಕ್ಷಾ ಅವ್ಯವಹಾರಗಳನ್ನು ನಡೆಸಿ ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಮಾಡಿಸಿ ರ‍್ಯಾಂಕ್ ಪಡೆದುಕೊಳ್ಳುತ್ತಾರೆ.

ಈ ತರಹದ ಅನೇಕ ಸಂಗತಿಗಳು ಗೌಪ್ಯವಾಗಿ ಉಳಿದಿಲ್ಲ. ಮುಖ್ಯವಾಗಿ ನಮ್ಮ ಪೋಷಕರಿಗಂತೂ ಅವರ ಮಕ್ಕಳು
ಉತ್ತಮ ರ‍್ಯಾಂಕ್ ಹಾಗೂ ಚಿನ್ನದ ಪದಕ ಪಡೆದುಕೊಂಡರೆ ಮಾತ್ರ ಅವರು ಬುದ್ಧಿವಂತರೆಂಬ ಮನಸ್ಥಿತಿ ಇದೆ. ಕಾರಣ ಅವರ ಉನ್ನತ ವ್ಯಾಸಂಗ ಮತ್ತು ಅವರಿಗೆ ಸಿಗುವ ಸೀಟುಗಳು ಕೂಡಾ ಅವರು ಆ ಪರೀಕ್ಷೆಗಳಲ್ಲಿ ಎಷ್ಟು ರ‍್ಯಾಂಕ್ ಬಂದಿzರೆ ಎನ್ನುವ ಆಧಾರದ ಮೇಲೆಯೇ ದೃಡಪಟ್ಟಿರುತ್ತದೆ. ಮತ್ತು ಆ ರ‍್ಯಾಂಕ್‌ಗಳ ಆಧಾರದ ಮೇಲೆಯೇ ನಮ್ಮಲ್ಲಿ ಡೊನೇಷನ್, ಕಾಂಪಿಟೇಶನಗಳು ನಿರ್ಧಾರವಾಗುತ್ತದೆ. ಹೀಗಾಗಿ ಭಾರತ ದಲ್ಲಿ ಖಾಸಗಿ ಶಾಲಾ ಕಾಲೇಜುಗಳ ಆಳಿತ ಮಂಡಳಿಯವರ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿಮೀರುತ್ತಲೇ ಇದೆ. ಅವರು ನಮ್ಮ ಪೋಷಕರನ್ನಂತೂ ಗಾಣದಲ್ಲಿ ಕಬ್ಬು ಹಿಂಡಿದಂತೆ ಹಿಂಡುತ್ತಿದ್ದಾರೆ.

ಇದೆಲ್ಲವೂ ತೊಲಗಬೇಕು ಅಂದ್ರೆ ನಮ್ಮ ಸರಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ವ್ಯವಸ್ಥೆ, ಸೌಲಭ್ಯಗಳು ನಿರ್ಮಾಣ ವಾಗಬೇಕು. ಆದರೆ ನಮ್ಮ ರಾಜಕಾರಣಿಗಳಿಗಾಗಲಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗಾಗಲಿ ನಮ್ಮ ಸರಕಾರಿ ಶಾಲೆಗಳ ಅಭಿವೃದ್ಧಿ ಪಡಿಸುವ ಇಚ್ಛಾಸಕ್ತಿ ಅವರಲ್ಲಿಲ್ಲ. ಜನ ಹೆಚ್ಚು ಬುದ್ಧಿವಂತರಾದರೆ ನಾಳಿನ ದಿಗಳಲ್ಲಿ ತಮಗೆ ಉಳಿಗಾಲವಿಲ್ಲವೆಂಬುದೇ ಅವರಿಗೆ ಚಿಂತೆಯಾಗಿದೆ. ಇನ್ನು ಪಠ್ಯದಲ್ಲಿ ಏನೆಲ್ಲ ಸೇರಿಸಬೇಕು, ಏನನ್ನ ಕೈ ಬಿಡಬೇಕು ಎನ್ನುವುದರ ಬಗ್ಗೆ ಇರುವ ಅವರ ಆಸಕ್ತಿ ಹಾಗೂ ಕಾಳಜಿ ಶಿಕ್ಷಣ ಸುಧಾರಣೆಯಲ್ಲಿರಲಿ ಅಂತ ನಾನು
ಭಾವಿಸುತ್ತೇನೆ. ನಮ್ಮ ಶಿಕ್ಷಕರನ್ನು ತಯಾರು ಮಾಡುವ ಕಾಲೇಜುಗಳ ಸರಿಯಾದ ಶಿಸ್ತು ವ್ಯವಸ್ಥೆಗಳಿಲ್ಲ. ಹೆಚ್ಚಿನ
ಹಣ ನೀಡಿ ಕಾಲೇಜಿಗೆ ಬಾರದೆ ಕೇವಲ ಪರೀಕ್ಷೆ ಬರೆದು ಪ್ರಮಾಣ ಪತ್ರ ನೀಡೊದಕ್ಕೆ ನಮ್ಮ ಅನೇಕ ಬಿ.ಎಡ್
ಕಾಲೇಜುಗಳಲ್ಲಿ ಅವಕಾಶಗಳಿವೆ. ನಮ್ಮ ವಿದ್ಯಾಲಯಗಳ ಪರಿಸ್ಥಿತಿಯ ಬಗ್ಗೆ ಹೇಳುವುದಕ್ಕಂತೂ ಬಹಳ ನಾಚಿಕೆ ಯಾಗುತ್ತದೆ.

ಭಾಷೆಯೇ ಭಾರದ ಸಾಕಷ್ಟು ಜನ ಭಾಷಾ ಶಾಸ್ತ್ರಗಳಲ್ಲಿ ಪೋಸ್ಟ್ ಗ್ರ್ಯಾಜುವೇಷನ್ ಪದವಿ ಪಡೆಯುತ್ತಾರೆ. ತಮ್ಮ
ಡಿಸಿಗ್ನೇಷನ್ ಬರೆಯೋಕೆ ಬಾರದ ಅದೆಷ್ಟೋ ಜನರು ಪಿಎಚ್ .ಡಿ ಪದವಿಗಳನ್ನು ಪಡೆದುಕೊಳ್ಳುತ್ತಾರೆ. ಅದರಲ್ಲೂ
ಜಾತೀಯತೆ ಹಾಗೂ ಸಾಕಷ್ಟು ಭ್ರಷ್ಟಾಚಾರಗಳಿಂದ ರಾಜ್ಯದ ಅನೇಕ ವಿಶ್ವವಿದ್ಯಾಲಯಗಳು ಕುಲಗೆಟ್ಟಿವೆ. ಹಾಗಾಗಿ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕಂದ್ರೆ, ದೇಶದ ಪರಿಸ್ಥಿತಿ ಹಾಗೂ ಮನಸ್ಥಿತಿಗಳು ಬದಲಾಗ ಬೇಕಿದೆ.

(ಲೇಖಕರು: ರಾಜ್ಯಶಾಸ್ತ್ರ ಅಧ್ಯಾಪಕರು ಹಾಗೂ ವಿಶ್ಲೇಷಕರು)

‌ಇದನ್ನೂ ಓದಿ: Dr Jagadeesh Maane Column: ಭಾರತಕ್ಕೂ ಸಿಗಲಿ ವಿಶ್ವಸಂಸ್ಥೆಯ ಕಾಯಂಸ್ಥಾನ