ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ಆಗಸ್ಟ್ 1905. ಸ್ವಿಜರ್ಲೆಂಡ್ ದೇಶದ ವಾಡ್ ಪ್ರಾಂತ. ನ್ಯೊನ್ ಜಿಲ್ಲೆಯ ಒಂದು ಪುಟ್ಟ ಹಳ್ಳಿ ಕಮ್ಯೂಗ್ನಿ. ಅಲ್ಲಿ ಮೂರು ಶವಪೆಟ್ಟಿಗೆಗಳು ಆಕಾಶಕ್ಕೆ ಬಾಯ್ತೆರೆದುಕೊಂಡಿದ್ದವು. ಮೊದಲನೆಯದು ದೊಡ್ಡ ಪೆಟ್ಟಿಗೆ. ಅದರಲ್ಲಿ ತಾಯಿಯ ಶವವಿತ್ತು. ಅದರ ಪಕ್ಕದಲ್ಲಿ ಒಂದು ಮಧ್ಯಮ ಗಾತ್ರದ ಶವಪೆಟ್ಟಿಗೆ. ಅದರಲ್ಲಿ 4 ವರ್ಷ ವಯಸ್ಸಿನ ರೋಸ್ ಎಂಬ ಹೆಣ್ಣು ಮಗುವಿನ ಶವವಿತ್ತು.
ಕೊನೆಯದು ಚಿಕ್ಕ ಪೆಟ್ಟಿಗೆ, ಎರಡು ವರ್ಷ ವಯಸ್ಸಿನ ಹೆಣ್ಣು ಮಗು ಬ್ಲಾಂಚಳದ್ದು. ಈ ಶವಪೆಟ್ಟಿಗೆಗಳ ಮುಂದೆ ನಿಂತಿದ್ದ ಜೀನ್ ಲ್ಯಾನ್ ಫ್ರೆ, ಓರ್ವ ದಢೂತಿ ಫ್ರೆಂಚ್ ಕಾರ್ಮಿಕ. ಅವನ ಮುಂದೆ ಅವನ ಮೃತ ಕುಟುಂಬವಿತ್ತು. ‘ನಾನು ಅವರನ್ನು ಕೊಲ್ಲಲಿಲ್ಲ…’ ಎಂದು ಅಂಗಲಾಚಿ ಬೇಡುತ್ತಿದ್ದ, ಗೋಗರೆಯುತ್ತಿದ್ದ. ‘ನಾನು ಅವರನ್ನು ಗುಂಡು ಹಾರಿಸಿ ಕೊಲ್ಲುವಷ್ಟು ಕಟುಕನಲ್ಲ’ ಎಂದು ಒಂದೇ ಸಮನೆ ಕಣ್ಣೀರುಗರೆಯುತ್ತಿದ್ದ. ‘ನಾನು ನನ್ನ ಕುಟುಂಬವನ್ನು ನನ್ನ ಜೀವಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದೆ. ಹಾಗಿರುವಾಗ ನಾನು ಅವರನ್ನು ಹೇಗೆ ತಾನೆ ಕೊಲ್ಲಲು ಸಾಧ್ಯ? ಈ ಕೊಲೆ ಗಳನ್ನು ನಾನು ಮಾಡಲಿಲ್ಲವೆಂದು ದಯವಿಟ್ಟು ಹೇಳಿ. ಈ ಕೊಲೆಗಳ ಆರೋಪವನ್ನು ನನ್ನ ಮೇಲೆ ಹೊರಿಸ ಬೇಡಿ…’ ಎಂದು ಅಂಗಲಾಚುತ್ತಿದ್ದ.
ಲ್ಯಾನ್ ಫ್ರೆ ಹಿಂದಿನ ದಿವಸ ಕುಡಿದಿದ್ದ. ಬೆಳ್ಳಂಬೆಳಗ್ಗೆ ಕುಡಿಯಲು ಆರಂಭಿಸಿದ್ದ. ಮೊದಲು ನೀರು ಬೆರೆಸಿದ ಅಬ್ಸಿಂಥ್ ಪಾನೀಯ. ಅದಾದ ನಂತರ ಸ್ವಲ್ಪ ಹೊತ್ತಿನಲ್ಲಿಯೇ ಮತ್ತೊಂದು ಅಬ್ಸಿಂಥ್ ಪಾನೀಯ. ಕೆಲಸಕ್ಕೆಂದು ದ್ರಾಕ್ಷಾರಸ ವನ್ನು ತಯಾರಿಸುವ ಕಾರ್ಖಾನೆಯ ಕಡೆಗೆ ನಡೆದ. ಮಧ್ಯಾಹ್ನದ ಊಟದ ಹೊತ್ತಿಗೆ ಆರು ಗ್ಲಾಸ್ ವೈನ್ ಕುಡಿದ. ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಮತ್ತೊಂದು ಗ್ಲಾಸ್ ವೈನ್ ಕುಡಿದ. ದಾರಿಯಲ್ಲಿ ಬರುತ್ತಾ ಬ್ಲಾಕ್ ಕಾಫಿಗೆ ಬ್ರಾಂದಿ ಬೆರೆಸಿ ಕುಡಿದ. ಮನೆಗೆ ಬಂದ ಲ್ಯಾನ್-, ಮತ್ತೊಂದು ಲೀಟರ್ ವೈನನ್ನು ಕೈಯಲ್ಲಿ ಹಿಡಿದುಕೊಂಡು ಕುಡಿಯಲು ಕುಳಿತ. ಅದನ್ನು ನೋಡಿ ಅವನ ಹೆಂಡತಿ ‘ದಿನವೆಲ್ಲ ಕುಡಿದದ್ದು ಸಾಲದು ಅಂತ ಮನೆಯಲ್ಲೂ ಕುಡಿಯಲಿಕ್ಕೆ ಆರಂಭಿಸಿದೆಯಲ್ಲ’ ಎಂದು ಆಕ್ಷೇಪಿಸಿದಳು.
‘ಬಾಯ್ಮುಚ್ಚು ನೀನು’ ಎಂದು ಕೂಗಿದ. ‘ನೀನು ಕುಡಿಯೋದನ್ನು ಮೊದಲು ನಿಲ್ಲಿಸು’ ಎಂದಳು ಹೆಂಡತಿ. ಕೂಡಲೇ,
ಗೋಡೆಯ ಮೇಲೆ ತೂಗು ಹಾಕಿದ್ದ ಗುಂಡು ತುಂಬಿದ್ದ ರೈಫಲನ್ನು ಕೈಗೆತ್ತಿಕೊಂಡ. ಹೆಂಡತಿಯ ಹಣೆಗೆ ಸರಿಯಾಗಿ
ಗುರಿಯಿಟ್ಟು ‘ಢಂ’ ಎಂದು ಗುಂಡು ಹಾರಿಸಿದ. ಶಬ್ದವನ್ನು ಕೇಳಿದ ಕೂಡಲೇ ಹಿರಿಯ ಮಗಳು ‘ರೋಸ್’ ಬಂದಳು.
ತಾಯಿಯನ್ನು ಆಕೆ ನೋಡುತ್ತಿರುವಂತೆ ಅವಳಿಗೂ ಗುರಿಯಿಟ್ಟು ಗುಂಡು ಹೊಡೆದ. ಆಕೆ ಅಲ್ಲಿಯೇ ಕುಸಿದು ಬಿದ್ದಳು.
ಒಳಗೆ ತೊಟ್ಟಿಲಲ್ಲಿ ಮಲಗಿದ್ದ ಚಿಕ್ಕಮಗಳು ಬ್ಲಾಂಚ್, ಬೆಚ್ಚಿಬಿದ್ದು ಅಳಲಾರಂಭಿಸಿದಳು. ಕೂಡಲೇ ಲ್ಯಾನ್ ಫ್ರೆ
ಒಳಕ್ಕೆ ಹೋಗಿ ಅಳುತ್ತಿದ್ದ ಮಗುವಿಗೆ ಗುಂಡಿಟ್ಟು ಹೊಡೆದ. ಮಗು ತನ್ನ ಅಳುವನ್ನು ಸದಾಕಾಲಕ್ಕೆ ನಿಲ್ಲಿಸಿತು.
ಈ ಕೌಟುಂಬಿಕ ದಾರುಣ ಕೊಲೆಯನ್ನು ಕಂಡು ಕಮ್ಯೂಗ್ನಿ ನಡುಗಿಹೋಯಿತು. ಊರಿನವರೆಲ್ಲ, ‘ಈ ಹತ್ಯಾ ಕಾಂಡಕ್ಕೆ ಲ್ಯಾನ್- ಕಾರಣನಲ್ಲ, ಅವನ ಹೊಟ್ಟೆಯಲ್ಲಿದ್ದ ಅಬ್ಸಿಂಥ್ ಪಾನೀಯವೇ ಕಾರಣ’ ಎಂದು ಘೋಷಿಸಿದರು. ಕಮ್ಯೂಗ್ನಿಯ ಮೇಯರ್ ‘ನಮ್ಮ ದೇಶದಲ್ಲಿ ನಡೆಯುತ್ತಿರುವ ಸರಣಿ ಹತ್ಯಾಕಾಂಡಗಳಿಗೆ ಈ ಅಬ್ಸಿಂಥ್ ಪಾನೀ ಯವೇ ಕಾರಣ’ ಎಂದು ಬಹಿರಂಗ ಹೇಳಿಕೆಯನ್ನು ನೀಡಿದ. ಮನುಷ್ಯನನ್ನು ರಾಕ್ಷಸನನ್ನಾಗಿ ಮಾಡುವ ಈ ಅಬ್ಸಿಂಥ್ ಪಾನೀಯವನ್ನು ನಿಷೇಧಿಸಬೇಕೆಂದು ಒಂದು ಅಹವಾಲನ್ನು ಸಿದ್ಧಪಡಿಸಿದ.
ಕೆಲವೇ ದಿನಗಳಲ್ಲಿ 82000 ಜನರು ಆ ಅಹವಾಲಿಗೆ ತಮ್ಮ ಸಹಿಯನ್ನು ಹಾಕಿದರು. ಅಬ್ಸಿಂಥ್ ಎನ್ನುವುದು ಒಂದು ಮಾದಕ ಪಾನೀಯ. ಇದರಲ್ಲಿ ಶೇ.೫೦-೭೫ರಷ್ಟು ಮದ್ಯಸಾರ ಅಥವಾ ಆಲ್ಕೋಹಾಲ್ ಇರುತ್ತದೆ. ಇದಕ್ಕೆ ಸೋಂಪು ಸಾರವನ್ನು ಬೆರೆಸುತ್ತಾರೆ. ಇದು ಪಾನೀಯಕ್ಕೆ ಒಂದು ಹಿತಕರವಾದ ಸುವಾಸನೆಯನ್ನು ನೀಡುತ್ತದೆ. ನಂತರ ಇದಕ್ಕೆ ಮಾಚಿಪತ್ರೆಯ ಸಾರವನ್ನು ಸೇರಿಸುತ್ತಾರೆ. ಇಂಗ್ಲಿಷಿನಲ್ಲಿ ಮಾಚಿಪತ್ರೆಯ ಹೆಸರು ವರ್ಮ್‌ವುಡ್. ವೈಜ್ಞಾನಿಕ ನಾಮಧೇಯ ‘ಆರ್ಟಿಮೀಸಿಯ ಆಬ್ಸೆಂಥಿಯಮ್’. ನಮ್ಮ ದವನದ ಜಾತಿಗೆ ಸೇರಿದ ಸಸ್ಯ. ಇದರ ಎಲೆಗಳಲ್ಲಿ ‘ಥುಜೋನ್’ ಎಂಬ ರಾಸಾಯನಿಕವಿರುತ್ತದೆ.
ಮಾಚಿಪತ್ರೆಯ ಸಾರವನ್ನು ಬೆರೆಸುತ್ತಿದ್ದಂತೆಯೇ ಪಾನೀಯವು ಅತ್ಯಾಕರ್ಷಕ ಹಸಿರು ಬಣ್ಣವನ್ನು ತಳೆಯುತ್ತದೆ. ಹಾಗಾಗಿ ಈ ಪಾನೀಯವನ್ನು ‘ಹಸಿರು ಕಿನ್ನರಿ’ ಅಥವಾ ‘ಗ್ರೀನ್ ಫೇರಿ’ ಎಂದು ಕರೆಯುತ್ತಿದ್ದರು. ಈ ಹಸಿರು ಕಿನ್ನರಿ ಯನ್ನು ಮೊದಲ ಬಾರಿಗೆ ರೂಪಿಸಿದವನು 18ನೆಯ ಶತಮಾನದ ವೈದ್ಯ ಪಿಯರಿ ಆರ್ಡಿನೇರ್. ಈ ಪಾನೀಯವು 19 ಮತ್ತು 20ನೆಯ ಶತಮಾನದ ಫ್ರಾನ್ಸ್ ದೇಶದಲ್ಲಿ ಅಪಾರ ಜನಪ್ರಿಯತೆ ಯನ್ನು ಪಡೆಯಿತು. ಫ್ರಾನ್ಸ್ ದೇಶದ, ಅದರಲ್ಲೂ ಪ್ಯಾರಿಸ್ ನಗರದಲ್ಲಿದ್ದ ಸಾಹಿತಿಗಳು ಮತ್ತು ಕಲಾವಿದರು ಹಸಿರು ಕಿನ್ನರಿಯನ್ನು ಇನ್ನಿಲ್ಲದಂತೆ ಮೆಚ್ಚಿಕೊಂಡರು ಹಾಗೂ ಆ ಪಾನೀಯದ ಪರಮ ಭಕ್ತರಾದರು. ಹಸಿರು ಕಿನ್ನರಿಯನ್ನು ಸೇವಿಸುತ್ತಿರುವಂತೆ ತಮ್ಮ ತಿಳಿವು ನಿಚ್ಚಳವಾಗುತ್ತದೆ, ಸ್ಪಷ್ಟವಾಗುತ್ತದೆ, ಹೊಸ ಹೊಸ ವಿಚಾರಗಳು ಬರುತ್ತವೆ, ಇನ್ನಿಲ್ಲದ ಸ್ಪೂರ್ತಿಯು ಉಕ್ಕಿ ಬರುತ್ತದೆ, ತಮ್ಮ ಸೃಜನಶೀಲತೆಗೆ ಇನ್ನಿಲ್ಲದ ಹಾಗೆ ಇಂಬು ಕೊಡುತ್ತದೆ ಎಂದೆಲ್ಲ ವರ್ಣಿಸಿದರು.
ಅರ್ನೆಸ್ಟ್ ಹೆಮ್ಮಿಂಗ್ವೇ, ಜೇಮ್ಸ್ ಜಾಯ್ಸ್, ಲೆವಿಸ್ ಕ್ಯಾರಲ್, ಚಾರ್ಲ್ಸ್ ಬೊದಿಲೇರ್, ಪಾಲ್ ವೆರ್ಲೈನ್, ಆರ್ಥರ್
ರಿಂಬಾಡ್, ಹೆನ್ರಿ ದ ತೌಲೋಸ್-ಲಾಟ್ರೀಸ್, ಪಿಕಾಸೊ, ವಿನ್ಸೆಂಟ್ ವ್ಯಾನ್ ಗಾಗ್, ಆಸ್ಕರ್ ವೈಲ್ಡ್, ಎಮಿಲಿ ಜ಼ೋಲ,
ಗಯ್ ದ ಮುಪ್ಪಾಸ ಮುಂತಾದ ಬೌದ್ಧಿಕ ವಲಯವೇ ಹಸಿರು ಕಿನ್ನರಿಯ ದಾಸರಾದರು. ಒಂದು ಸಮಾಜದ
ಮೇಲೆ ಅಪಾರ ಪರಿಣಾಮವನ್ನು ಬೀರಬಲ್ಲ ಗಣ್ಯವ್ಯಕ್ತಿಗಳು ಹಸಿರು ಕಿನ್ನರಿಯನ್ನು ಹಾಡಿ ಹೊಗಳುವಾಗ, ಅವರು
ಹೇಳುವುದನ್ನು ಜನಸಾಮಾನ್ಯರು ನಂಬಿ, ಅವರನ್ನು ಅನುಸರಿಸುವುದು ಸಹಜವೇ ಆಗಿತ್ತು.
ಹಾಗಾಗಿ ಅತ್ಯಲ್ಪ ಕಾಲದಲ್ಲಿ ಹಸಿರು ಕಿನ್ನರಿಯು ಫ್ರಾನ್ಸ್ ದೇಶದಲ್ಲಿ ಜನಪ್ರಿಯವಾಯಿತು. ನಂತರ ಬ್ರಿಟನ್ನಿಗೆ ಹರಡಿತು. ಇತರ ಯುರೋಪಿಯನ್ ದೇಶಗಳಿಗೆ ವ್ಯಾಪಿಸಿತು. ಅಮೆರಿಕದಲ್ಲೂ ಜನಪ್ರಿಯತೆಯನ್ನು ಪಡೆಯಿತು.
ಮಾಚಿಪತ್ರೆಯು ಇತಿಹಾಸಪೂರ್ವ ಕಾಲದಿಂದಲೂ ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಕೆಯಲ್ಲಿತ್ತು. ಕ್ರಿ.ಪೂ.1550ರ
ಕಾಲದ ಈಜಿಪ್ಷಿಯನ್ ‘ಈಬರ್ಸ್ ಪ್ಯಾಪಿರಸ್’ನಲ್ಲಿ ಮಾಚಿ ಪತ್ರದ ವೈದ್ಯಕೀಯ ಉಪಯೋಗದ ಬಗ್ಗೆ ಉಲ್ಲೇಖವಿದೆ.
ಮಾಚಿಪತ್ರೆಯ ಸಾರವನ್ನು ಅಥವಾ ಮದ್ಯಸಾರದಲ್ಲಿ ನೆನೆಯಿಸಿದ ಮಾಚಿಪತ್ರೆಯ ಎಲೆಗಳನ್ನು ಚಿಕಿತ್ಸೆಯಲ್ಲಿ ಗ್ರೀಕರು ಬಳಸುತ್ತಿದ್ದರು. ಮಾಚಿಪತ್ರೆ ಬೆರೆತ ವೈನ್ ಅನ್ನು ‘ಅಬ್ಸಿಂ ಥೈಟಿಸ್ ಓಯಿನೊಸ್’ ಎಂದು ಕರೆಯುತ್ತಿದ್ದರು. ಹಿಪ್ಪೋಕ್ರೇಟ್ಸ್, ಮಾಚಿಪತ್ರೆಯಿಂದ ತಯಾರಿಸಿದ ಔಷಧವನ್ನು ಋತುಸಂಬಂಧಿತ ಕಾಲದ ನೋವನ್ನು ಕಡಿಮೆ ಮಾಡಲು, ಕಾಮಾಲೆ, ರಕ್ತಹೀನತೆ ಹಾಗೂ ಕೀಲುನೋವನ್ನು ಕಡಿಮೆಮಾಡಲು ಬಳಸುತ್ತಿದ್ದ. ರೋಮನ್ ವಿದ್ವಾಂಸ ನಾದ ಪ್ಲೀನಿ ದಿ ಎಲ್ಡರ್, ರೋಮನ್ ರಥಸ್ಪರ್ಧೆಯಲ್ಲಿ ಪಾಲುಗೊಳ್ಳುವ ಸ್ಪರ್ಧಿಗಳು, ಮೊದಲು ಮಾಚಿಪತ್ರೆ ಯಿರುವ ಅಬ್ಸಿಂಥಿಯಮ್ ಮಾದಕ ಪಾನೀಯವನ್ನು ಸೇವಿಸುತ್ತಿದ್ದರು ಎಂದು ದಾಖಲಿಸಿದ್ದಾನೆ.
ಕ್ರಿ.ಶ. 2ನೆಯ ಶತಮಾನದಲ್ಲಿ ಗ್ಯಾಲನ್, ಹೊಟ್ಟೆನೋವನ್ನು ಕಡಿಮೆ ಮಾಡಲು, ಕರುಳು ಹುಳುಗಳನ್ನು ನಿವಾರಿಸಲು ಹಾಗೂ ತಲೆತಿರುಗಿ ಬೀಳುವುದನ್ನು ನಿಗ್ರಹಿಸಲು ಮಾಚಿಪತ್ರೆಯನ್ನು ಬಳಸಬಹುದು ಎಂದಿದ್ದಾನೆ. 17-18ನೆಯ ಶತಮಾನದಲ್ಲಿ ಪ್ಲೇಗ್ ಯುರೋಪನ್ನು ಕಾಡುವಾಗ, ಜನರು ಮಾಚಿಪತ್ರೆಯ ಧೂಪವನ್ನು ಮನೆಯಲ್ಲಿ ಹಾಕು ತ್ತಿದ್ದರು. ಇದು ಪ್ಲೇಗ್ ಸೋಂಕನ್ನು ತಡೆಗಟ್ಟುತ್ತದೆ ಎಂದು ಅವರು ನಂಬಿದ್ದರು.
ಸ್ವಿಜರ್ಲೆಂಡ್‌ನ ಕುವೆಟ್ ಪ್ರದೇಶದಲ್ಲಿ ವಾಸವಾಗಿದ್ದ ಡಾ.ಪಿಯರಿ ಆರ್ಡಿನೇರ್ (1797-1915) ಎಂಬ ಫ್ರೆಂಚ್
ವೈದ್ಯನು ‘ಅಧಿಕ ಮದ್ಯಸಾರಯುಕ್ತ ಅಬ್ಸಿಂಥ್ ಅಮೃತ’ (ಹೈಲಿ ಆಲ್ಕೋಹಾಲಿಕ್ ಎಲಿಕ್ಸರ್ ಅಬ್ಸಿಂಥ್) ವನ್ನು
1792ರ ಆಸುಪಾಸಿನಲ್ಲಿ ರೂಪಿಸಿದ. ಕುವೆಟ್‌ನಲ್ಲಿ ಹೆನ್ರಿಯಾಡ್ ಸೋದರಿಯರು ಹಸಿರು ಕಿನ್ನರಿಯನ್ನು
ತಯಾರಿಸುವ ಸೂತ್ರವನ್ನು ಪಿಯರಿಯಿಂದ ರಹಸ್ಯವಾಗಿ ಪಡೆದುಕೊಂಡರು. ನಂತರ ಈ ರಹಸ್ಯವು ಮೇಜರ್
ಡುಬೀದ್ ಎಂಬುವವನಿಗೆ ಹಸ್ತಾಂತರವಾಯಿತು. ಅವನು ಕುವೆಟ್‌ನಲ್ಲಿ ‘ಡುಬೀದ್ ಪಿಯರಿ ಎಟ್ ಫಿಲ್ಸ್’ ಎಂಬ
ಹೆಸರಿನಲ್ಲಿ ಹಸಿರು ಕಿನ್ನರಿಯನ್ನು ವ್ಯಾಪಾರಿ ಮಟ್ಟದಲ್ಲಿ ಭಟ್ಟಿಯಿಳಿಸಬಲ್ಲ ಕಾರ್ಖಾನೆಯನ್ನು (ಡಿಸ್ಟಿಲರಿ)
ಆರಂಭಿಸಿದ. ಅತ್ಯಲ್ಪ ಕಾಲದಲ್ಲಿಯೇ ಫ್ರಾನ್ಸಿನ ‘ಪಾಂಟೇಲಿಯರ್’ ಎಂಬ ಸ್ಥಳದಲ್ಲಿ ಎರಡನೆಯ ಡಿಸ್ಟಿಲರಿ
ಆರಂಭಿಸಿದ.
1914ರಲ್ಲಿ ಫ್ರಾನ್ಸ್ ಸರಕಾರವು ಹಸಿರು ಕಿನ್ನರಿಯನ್ನು ನಿರ್ಬಂಧಿವವರೆಗೆ ಈ ಎರಡೂ ಕಾರ್ಖಾನೆಗಳಲ್ಲಿ ಹಸಿರು ಕಿನ್ನರಿಯ ಉತ್ಪಾದನೆಯು ನಿರಂತರವಾಗಿ ಸಾಗಿತು. ಯುರೋಪಿನ ಬೌದ್ಧಿಕ ಜಗತ್ತು ಹಸಿರು ಕಿನ್ನರಿಯ ಸೇವನೆ ಯಿಂದ ದೊರೆಯುವ ಸೃಜನಶೀಲ ಹೊಳಹುಗಳ ಬಗ್ಗೆ ಹಾಡಿ ಹೊಗಳುತ್ತಿರುವ ಅವಧಿಯಲ್ಲಿ, ಹಸಿರು ಕಿನ್ನರಿ
ಯಲ್ಲಿರುವ ‘ಥುಜೋನ್’ ಒಂದು ಭ್ರಮಾಜನಕ, ಅಪಾಯಕಾರಿ ವಸ್ತು, ಮನಸ್ಸು ಮತ್ತು ಮಿದುಳನ್ನು ಕೊಳೆಯಿಸಿ,
ಮಾನವೀಯತೆಯನ್ನು ಮರೆಯಿಸುವ ಉಗ್ರವಿಷವೆಂದು ಜನಜನಿತವಾಯಿತು.
ಫ್ರೆಂಚ್ ಮನೋವೈದ್ಯ ವ್ಯಾಲೆಂಟಿನ್ ಮ್ಯಾಗ್ನನ್ (1835-1916) ಹಸಿರು ಕಿನ್ನರಿಯ ಮೇಲಿದ್ದ ಆರೋಪಕ್ಕೆ ಋಜುವಾತನ್ನು ಒದಗಿಸಲು ಹತ್ತು ಹಲವು ಪ್ರಯೋಗಗಳನ್ನು ಕೈಗೊಂಡ, ೧೮೬೭ರಲ್ಲಿ ಫ್ರಾನ್ಸಿನ ‘ಸೈಂಟ್
ಆನ್’ನಲ್ಲಿರುವ ಹುಚ್ಚರ ಆಸ್ಪತ್ರೆಯ (ಅಸೈಲಮ್) ವೈದ್ಯಾಧಿಕಾರಿಯಾಗಿ ಆಯ್ಕೆಯಾದ. ಅವನು ಆಲ್ಕೋಹಾಲ್ ಸೇವನೆಯ ದುಷ್ಪರಿಣಾಮಗಳಿಗಿಂತ, ಹಸಿರು ಕಿನ್ನರಿಯ ಸೇವನೆಯು ಹೆಚ್ಚು ದುಷ್ಪರಿಣಾಮಗಳನ್ನು ಬೀರುತ್ತದೆ
ಎನ್ನುವುದಕ್ಕೆ ಪುರಾವೆಯನ್ನು ಒದಗಿಸಲು ಮುಂದಾದ.
ಇವನು ಒಂದು ಗಾಜಿನ ಗೋಳದ ಒಳಗೆ ಒಂದು ಗಿನಿಪಿಗ್ ಇಟ್ಟ. ಅದರ ಪಕ್ಕದಲ್ಲಿ ಶುದ್ಧ ಆಲ್ಕೋಹಾಲನ್ನು ಒಂದು
ಬಟ್ಟಲಲ್ಲಿ ಇರಿಸಿದ. ಮತ್ತೊಂದು ಗಾಜಿನ ಗೋಳದಲ್ಲಿ ಮತ್ತೊಂದು ಗಿನಿಪಿಗ್ ಇಟ್ಟ. ಅದರ ಪಕ್ಕದಲ್ಲಿ ಒಂದು ಬಟ್ಟ
ಲಲ್ಲಿ ಮಾಚಿಪತ್ರೆಯ ಶುದ್ಧ ತೈಲವನ್ನು ಇರಿಸಿದ. ಹೀಗೆಯೇ ಎರಡನೆಯ ಪ್ರಯೋಗದಲ್ಲಿ ಬೆಕ್ಕನ್ನು, ಮೂರನೆಯ
ಪ್ರಯೋಗದಲ್ಲಿ ಮೊಲವನ್ನು ಬಳಸಿದ. ಎಲ್ಲ ಪ್ರಯೋಗಗಳಲ್ಲಿ, ಮಾಚಿಪತ್ರೆ ತೈಲವನ್ನು ಸೇವಿಸಿದ ಪ್ರಾಣಿಗಳು
ತಕ್ಷಣವೇ ಕೆಳಕ್ಕೆ ಬಿದ್ದವು. ಸೆಳವು ಬಂದು ಒದ್ದಾಡಲಾರಂಭಿಸಿದವು.
ಸಾಯುವ ಸ್ಥಿತಿಗೆ ಬಂದವು. ಆಲ್ಕೋಹಾಲ್ ಆವಿಯನ್ನು ಸೇವಿಸಿದ ಪ್ರಾಣಿಗಳಿಗೆ ಯಾವುದೇ ರೀತಿಯ ಸೆಳವು ಬರಲಿಲ್ಲ, ಅವು ಸ್ವಸ್ಥವಾಗಿದ್ದವು. ಇದನ್ನು ಕಂಡ ಮ್ಯಾಗ್ನನ್, ‘ಮಾಚಿಪತ್ರ ತೈಲವು ಅತ್ಯಂತ ಅಪಾಯಕಾರಿ’ ಎಂದು ಸಾರಿದ ಫ್ರಾನ್ಸ್ ದೇಶದ ಪತ್ರಿಕೆಗಳು ಲ್ಯಾನ್- ಪ್ರಕರಣಕ್ಕೆ ಆದ್ಯತೆಯನ್ನು ನೀಡಿದವು. ಅವನು ನಡೆಸಿದ ಕೌಟುಂಬಿಕ ಹತ್ಯೆಯನ್ನು ‘ದಿ ಅಬ್ಸಿಂಥ್ ಮರ್ಡರ್’ ಎಂದು ಕರೆದವು.
ಪತ್ರಿಕೆಯ ಸಂಪಾದಕರು ಹಾಗೂ ಓದುಗರು, ಹಸಿರು ಕಿನ್ನರಿಯನ್ನು ಸೇವಿಸುವ ಜನರು ತಮ್ಮ ಬುದ್ಧಿಯನ್ನೇ
ಕಳೆದುಕೊಂಡು, ಯೋಚಿಸುವ ಸಾಮರ್ಥ್ಯವನ್ನೇ ಕಳೆದುಕೊಂಡು, ತನ್ನವರು ಎನ್ನುವ ಪರಿಜ್ಞಾನವನ್ನೇ ಲೆಕ್ಕಕ್ಕಿ ಡದೆ, ಅವರನ್ನು ಕೊಲೆಗೆ ಪ್ರೇರೇಪಿಸುವ ಈ ಹಸಿರು ಕಿನ್ನರಿಯನ್ನು ಸದಾ ಕಾಲಕ್ಕೆ ನಿರ್ಬಂಧಿಸಬೇಕೆಂದು ಒತ್ತಡ ವನ್ನು ಹಾಕಿ ದರು. ಲ್ಯಾನ್ ಫ್ರೆ ವಿಚಾರಣೆಯು ನಡೆಯಿತು. ‘ಅಬ್ಸಿಂಥ್ ಮ್ಯಾಡ್ನೆಸ್’ ಈ ಬರ್ಬರ ಕೊಲೆಗೆ ಕಾರಣ ಎಂದರು ವಕೀಲರು. ಆಲ್ಬರ್ಟ್ ಮಾಹೈಮ್ ಎಂಬ ಸ್ವಿಸ್ ಮನೋವೈದ್ಯನನ್ನು ಸಾಕ್ಷಿಗೆ ಕರೆದರು. ಅವನು ‘ಎಳೇ ದಮ್ಮಗಳ ಹತ್ಯೆಗೆ ಹಸಿರು ಕಿನ್ನರಿಯೇ ಕಾರಣ’ ಎಂದು ತನ್ನ ಅಭಿಪ್ರಾಯವನ್ನು ನೀಡಿದ.
ವಿಚಾರಣೆಯು ಒಂದೇ ದಿನದಲ್ಲಿ ಮುಗಿಯಿತು. ಲ್ಯಾನ್ ಫ್ರೆ ಮೇಲಿದ್ದ ಆರೋಪವು ಅಪರಾಧವೆಂದು ಸಿದ್ಧ ವಾಯಿತು. ಅವನನ್ನು ಜೈಲಿಗಟ್ಟಿದರು. ಮೂರು ದಿನ ಬಂಧನದಲ್ಲಿದ್ದ ಲ್ಯಾನ್ ಫ್ರೆ, ಜೈಲಿನಲ್ಲಿಯೇ ಆತ್ಮಹತ್ಯೆ ಯನ್ನು ಮಾಡಿಕೊಂಡ. ಕೂಡಲೇ ಸ್ವಿಜರ್ಲೆಂಡ್‌ನ ವಾಡ್ ಪ್ರಾಂತದವರು ಹಸಿರು ಕಿನ್ನರಿಯನ್ನು ನಿಷೇಧಿಸಿದರು. ಸ್ವಿಜರ್ಲೆಂಡ್ ಹಿಂದೆಯೇ ಅನೇಕ ದೇಶಗಳು ಹಸಿರು ಕಿನ್ನರಿಯನ್ನು ನಿಷೇಧಿಸಿದವು. ನಂತರದ ದಿನಗಳಲ್ಲಿ ಹಸಿರು
ಕಿನ್ನರಿಯ ಬಗ್ಗೆ ಹಲವು ಅಧ್ಯಯನಗಳು ನಡೆದು, ಒಂದೊಂದೇ ದೇಶಗಳು ತಮ್ಮ ನಿಷೇಧವನ್ನು ಹಿಂತೆಗೆದು ಕೊಂಡವು. ಸ್ವಿಜರ್ಲೆಂಡ್ ಮಾತ್ರ ಇಂದಿಗೂ ಹಸಿರು ಕಿನ್ನರಿಯನ್ನು ನಿಷೇಧಿಸಿದೆ.
ಇದನ್ನೂ ಓದಿ: Dr N Someswara Column: ಚೀನಿ ಆಸ್ಪತ್ರೆಗಳ ಬೌದ್ಧ ಮೂಲ