Wednesday, 30th October 2024

Dr N Someshwara Column: ಬುದ್ಧಿವಂತಿಕೆಗೆ, ದಡ್ಡತನಕ್ಕೆ ಕಾರಣ ʼಕಬ್ಬಿಣʼ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ನಮ್ಮ ಬ್ರಹ್ಮಾಂಡವು ಇಂದಿಗೆ ಸುಮಾರು 13.7 ಶತಕೋಟಿ (ಬಿಲಿಯನ್) ವರ್ಷಗಳ ಹಿಂದೆ ಹುಟ್ಟಿತು. ನಮ್ಮ ಸೌರ ಮಂಡಲವು 4.6 ಶತಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು. ನಮ್ಮ ಭೂಮಿಯ ಒಡಲನ್ನು ಪ್ರಧಾನ ವಾಗಿ ನಾಲ್ಕು ಧಾತುಗಳು (ಶೇ.32.1ರಷ್ಟು ಕಬ್ಬಿಣ, ಶೇ.30.1ರಷ್ಟು ಆಮ್ಲಜನಕ, ಶೇ.15.1ರಷ್ಟು ಸಿಲಿಕಾನ್ ಹಾಗೂ ಶೇ.13.9ರಷ್ಟು ಮೆಗ್ನೀಷಿಯಂ) ರೂಪಿಸಿದವು.

ಭೂಗರ್ಭದ ಒಳ ಹಾಗೂ ಹೊರ ತಿರುಳು ಕಬ್ಬಿಣದಿಂದಲೇ ಆಗಿದೆ. ಭೂಮಿಯ ತೊಗಟೆ ಅಥವಾ ಕ್ರಸ್ಟ್, ಈ ನಾಲ್ಕು ಪ್ರಧಾನ ಧಾತುಗಳಿಂದ ಆಗಿದೆ- ಆಮ್ಲಜನಕ, ಸಿಲಿಕಾನ್, ಅಲ್ಯುಮಿನಿಯಂ ಮತ್ತು ಕಬ್ಬಿಣ. ಭೂಮಿಯು ನಿರಂತರ ವಾಗಿ ಸುತ್ತುತ್ತಿರುವುದರಿಂದ, ಭೂಮಿಯ ಹೊರವಲಯದಲ್ಲಿ ಅಯಸ್ಕಾಂತೀಯ ವಲಯ (ಮ್ಯಾಗ್ನೆಟೋಸಿಯರ್) ರೂಪುಗೊಂಡಿದೆ. ಈ ಅಯಸ್ಕಾಂತೀಯ ವಲಯವು ನಮ್ಮ ಭೂಮಿಯನ್ನು ಅಪಾಯಕಾರಿ ಸೌರ ವಿಕಿರಣ (ಸೋಲಾರ್ ರೇಡಿಯೇಶನ್) ಹಾಗೂ ಸೌರಗಾಳಿಗಳಿಂದ (ಸೋಲಾರ್ ಸ್ಟಾರ್ಮ್) ರಕ್ಷಿಸುತ್ತಿದೆ. ನಮ್ಮ ಭೂಮಿಯ ಮೇಲೆ ಜೀವರಾಶಿಯ ಮೊದಲ ಉಗಮವು, ಇಂದಿಗೆ ಸುಮಾರು 3.5 ಶತಕೋಟಿ ವರ್ಷಗಳ ಹಿಂದೆ ನಡೆಯಿತು. ಆಗ ನಮ್ಮ ಭೂಮಿಯ ಪರಿಸರದಲ್ಲಿ ಆಮ್ಲಜನಕ ಇರಲಿಲ್ಲ. ಆದರೆ ಉಷ್ಣತೆಯು ಸುಮಾರು 100 ಡಿಗ್ರಿ ಸೆಲ್ಷಿಯಸ್ ಇತ್ತು. ಈ ಸ್ಥಿತಿಯಲ್ಲಿ ಕಬ್ಬಿಣ, ಗಂಧಕ ಹಾಗೂ ಹೈಡ್ರೋಜನ್ ಧಾತುಗಳು ಪರಸ್ಪರ ರಾಸಾಯನಿಕವಾಗಿ ವರ್ತಿಸಿದವು. ಇವುಗಳ ನಡುವೆ ಎಲೆಕ್ಟ್ರಾನುಗಳ ಆದಾನ ಪ್ರದಾನವಾದವು.

ಅದರ ಫಲವಾಗಿ ಕಾರ್ಬನ್ ಮಾನಾಕ್ಸೈಡ್ ಹಾಗೂ ಕಾರ್ಬನ್ ಡೈ ಆಕ್ಸೈಡ್ ಉತ್ಪಾದನೆಯಾದವು. ಆನಂತರ ಆವಿ, ಮೀಥೇನ್, ಅಮೋನಿಯ ಇತ್ಯಾದಿ ಸಂಯುಕ್ತಗಳು ಜನಿಸಿದವು. ಇವುಗಳ ನಡುವೆ ಸಂಕೀರ್ಣ ರಾಸಾಯನಿಕ ಕ್ರಿಯೆಗಳು ನಡೆದು ಗ್ಲೈಸಿನ್, ಆಲಾ ಅಲನೈನ್, ಬೀಟ ಅಲನೈನ್ ಮುಂತಾದ ಅಮೈನೋ ಅಮ್ಲಗಳು ಉತ್ಪಾದನೆ ಯಾದವು. ಇವೆಲ್ಲವೂ ಸೇರಿ ಏಕಕಣ ರೂಪದ ಆದಿಜೀವಿಗೆ ಜನ್ಮವನ್ನಿತ್ತವು. ಭೂಮಿಯ ಮೇಲೆ ಜೀವೋತ್ಪಾದನೆ ಯಾಗಲು ಕಬ್ಬಿಣವೂ ಒಂದು ಮುಖ್ಯವಾದ ಧಾತುವಾಗಿದೆ ಎನ್ನುವ ವಿಚಾರ ಬಹಳಷ್ಟು ಜನರಿಗೆ ತಿಳಿದಿರಲಾರದು.

ನಮ್ಮ ಪೂರ್ವಜನು, ಇಂದಿಗೆ ಸುಮಾರು 200000 ವರ್ಷಗಳ ಹಿಂದೆ ಭೂಮಿಯ ಮೇಲೆ ಹುಟ್ಟಿದ. ಸುಮಾರು
ಕ್ರಿ.ಪೂ.15000 ವರ್ಷಗಳ ಹಿಂದೆ ನಾಗರಿಕತೆಗಳು ಆರಂಭವಾದವು. ಆದಿ ಶಿಲಾಯುಗ, ನಡು ಶಿಲಾಯುಗ ಹಾಗೂ
ನವಶಿಲಾಯುಗಗಳ ನಂತರ ಕಬ್ಬಿಣ ಯುಗವು ಸುಮಾರು ಕ್ರಿ.ಪೂ.1200-ಕ್ರಿ.ಪೂ.600 ವರ್ಷಗಳ ನಡುವೆ ಆರಂಭ ವಾಯಿತು. ಕಬ್ಬಿಣ ಯುಗದಲ್ಲಿ ನಮ್ಮ ಪೂರ್ವಜರು ಕಬ್ಬಿಣವನ್ನು ಬಳಸಿ ನಾನಾ ರೀತಿಯ ಶಕ್ತಿಶಾಲಿ ಆಯುಧ ಗಳನ್ನು ರೂಪಿಸಿಕೊಂಡರು. ಇದರೊಡನೆ ನಮ್ಮ ಪೂರ್ವಜರ ಮಹತ್ವಾಕಾಂಕ್ಷೆಯು ತೀವ್ರವಾಯಿತು. ಯುದ್ಧಗಳು ಹೆಚ್ಚಿದವು. ಹೊಸ ಹೊಸ ಸಾಮ್ರಾಜ್ಯಗಳು ಉದಯಿಸಿದವು.

ಈ ವಿಚಾರವು ಸದ್ಯಕ್ಕೆ ನಮಗೆ ಅನಗತ್ಯ. ಆದರೆ ಕಬ್ಬಿಣ ಯುಗಕ್ಕೆ ಸೇರಿದ ಅಸ್ಸೀರಿಯನ್ನರು, ಕಬ್ಬಿಣವನ್ನು
ಔಷಧವನ್ನಾಗಿ ಉಪಯೋಗಿಸಿದ ಮೊತ್ತ ಮೊದಲಿಗರು ಎನ್ನುವುದು ದಾಖಲೆಗೆ ಅರ್ಹವಾಗುವ ವಿಚಾರವಾಗಿದೆ.
ನಾವು ಬದುಕಲು ತೀರಾ ಅಗತ್ಯವಾದ ಎರಡು ಕಚ್ಚಾವಸ್ತುಗಳೆಂದರೆ ಗ್ಲೂಕೋಸ್ ಮತ್ತು ಆಮ್ಲಜನಕ. ನಾವು
ಸೇವಿಸುವ ಆಹಾರವು ಜೀರ್ಣವಾಗಿ ಅಂತಿಮವಾಗಿ ಗ್ಲೂಕೋಸನ್ನು ಉತ್ಪಾದಿಸುತ್ತದೆ. ನಾವು ಉಸಿರಾಡುವಾಗ
ಗಾಳಿಯೊಡನೆ ಆಮ್ಲಜನಕ ಶ್ವಾಸಕೋಶಗಳ ಒಳಗೆ ಬರುತ್ತದೆ. ಶ್ವಾಸಕೋಶಗಳ ಗಾಳಿಗೂಡುಗಳಲ್ಲಿ ಆಮ್ಲಜನಕ
ರಕ್ತದೊಳಗೆ ನುಸುಳುತ್ತದೆ ಹಾಗೂ ಕಾರ್ಬನ್ ಡೈಯಾಕ್ಸೈಡ್ ಶ್ವಾಸಕೋಶಗಳ ಒಳಗೆ ಪ್ರವೇಶಿಸುತ್ತದೆ. ರಕ್ತದಲ್ಲಿ
ಕೆಂಪು ರಕ್ತಕಣಗಳು ಇರುತ್ತವೆ. ಇವುಗಳ ಮೇಲೆ ಹಿಮೋಗ್ಲೋಬಿನ್ ಇರುತ್ತದೆ. ಇದು ಎರಡು ಘಟಕಗಳ ಸಂಯುಕ್ತ
ರಚನೆ. ‘ಹೀಮ್’ ಎನ್ನುವ ಕಬ್ಬಿಣ ಭಾಗ ಹಾಗೂ ‘ಗ್ಲೋಬಿನ್’ ಎನ್ನುವ ಪ್ರೋಟೀನ್ ಭಾಗ. ಈ ಕಬ್ಬಿಣವು ಆಮ್ಲ ಜನಕವನ್ನು ಹೀರುತ್ತದೆ. ಕೆಂಪು ರಕ್ತಕಣವು ರಕ್ತಪ್ರವಾಹದಲ್ಲಿ ಹರಿಯುತ್ತ ನಮ್ಮ ದೇಹದ ಪ್ರತಿಯೊಂದು
ಜೀವಕೋಶಕ್ಕೆ ಆಮ್ಲಜನಕವನ್ನು ಒದಗಿಸುತ್ತದೆ.

ಜೀವಕೋಶ ಎನ್ನುವುದು ಜೈವಿಕ ಒಲೆ. ಗ್ಲೂಕೋಸ್ ಈ ಒಲೆಯನ್ನು ಪ್ರವೇಶಿಸುತ್ತದೆ. ಅದರೊಡನೆ ಆಮ್ಲಜನಕ ಸಹ
ಒಳನುಗ್ಗುತ್ತದೆ. ಒಲೆಯ ಒಳಗೆ ಆಮ್ಲಜನಕ ಕಿಡಿಯನ್ನು ಹೊತ್ತಿಸಿ ಗ್ಲೂಕೋಸನ್ನು ಭಸ್ಮ (ಆಕ್ಸಿಡೀಕರಣ) ಮಾಡುತ್ತದೆ. ಆಗ ಶಕ್ತಿಯು ಉತ್ಪಾದನೆಯಾಗುತ್ತದೆ. ನಮ್ಮ ದೇಹದ ಪ್ರತಿಯೊಂದು ಜೀವಕೋಶವೂ ಈ ಶಕ್ತಿಯನ್ನು ಬಳಸಿಕೊಂಡು ತನ್ನ ಸಹಜ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತದೆ. ಹಾಗಾಗಿ ನಾವು ಬದುಕಲು ಅಗತ್ಯವಾದ ಆಮ್ಲಜನಕವನ್ನು ನಮಗೆ ಒದಗಿಸುವುದು ಕಬ್ಬಿಣ. ನಮ್ಮ ದೇಹದ ಎಲ್ಲ ಕೆಲಸ ಕಾರ್ಯಗಳು ಕ್ಲುಪ್ತವಾಗಿ ನಡೆಯಲು ಸಾಕಷ್ಟು ಆಮ್ಲಜನಕ ಬೇಕಾಗುತ್ತದೆ. ಅಷ್ಟು ಆಮ್ಲಜನಕವನ್ನು ಸಾಗಿಸಲು ಅಗತ್ಯ ಪ್ರಮಾಣದ ಕಬ್ಬಿಣವು ನಮ್ಮ ದೇಹದಲ್ಲಿ (ಯಾವುದೇ ಕಾರಣವಿರಲಿ) ದೊರೆಯದಿದ್ದರೆ, ಆ ಸ್ಥಿತಿಯನ್ನು ರಕ್ತಹೀನತೆ, ರಕ್ತಕೊರತೆ, ಅನೀಮಿಯ ಎಂದು ಕರೆಯುತ್ತೇವೆ. ಅನೀಮಿಯವು ವ್ಯಕ್ತಿಯ ಸರ್ವತೋಮುಖ ಪ್ರಗತಿಯನ್ನು ಕುಗ್ಗಿಸುತ್ತದೆ.
ನಮ್ಮ ದೇಹದಲ್ಲಿರುವ ಒಟ್ಟು ಆಮ್ಲಜನಕದಲ್ಲಿ ಶೇ.೨೦ರಷ್ಟು ಭಾಗವನ್ನು ನಮ್ಮ ಮಿದುಳೇ ಬಳಸಿಕೊಳ್ಳುತ್ತದೆ.

ಹಾಗಾಗಿ ಸಾಕಷ್ಟು ಆಮ್ಲಜನಕ ಇದ್ದರೆ ಮಾತ್ರ ಮಿದುಳು ಸರಿಯಾಗಿ ಕೆಲಸ ಮಾಡುತ್ತದೆ. ಕಡಿಮೆಯಾದರೆ, ಮಗುವು
ಓದಿನಲ್ಲಿ ಹಿಂದೆ ಬೀಳುತ್ತದೆ. ಏಕಾಗ್ರತೆ, ಕಲಿಕೆ ಮತ್ತು ನೆನಪು ಕುಗ್ಗುತ್ತದೆ. ನಮ್ಮ ನರಮಂಡಲದಲ್ಲಿರುವ ನರಕೋಶ ಗಳು ಸಮಗ್ರವಾಗಿ ಕೆಲಸ ಮಾಡಬೇಕಾದರೆ ನರರಾಸಾಯನಿಕಗಳು ಅಥವಾ ರೋಟ್ರಾನ್ಸ್‌ಮಿಟರುಗಳು ಅಗತ್ಯ. ಡೋಪಮಿನ್, ಸೆರಟೋನಿನ್, ನಾರ್ -ಎಪಿನೆಫ್ರಿನ್ ಮುಂತಾದವು ಉತ್ಪಾದನೆಯಾಗಲು ಕಬ್ಬಿಣ ಬೇಕು. ಈ ನರರಸಾಯನಿಕಗಳು ನಮ್ಮ ಭಾವನೆಗಳನ್ನು (ಮೂಡ್), ಚುರುಕುತನವನ್ನು ಹಾಗೂ ಕೌಶಲಗಳನ್ನು
(ಕಾಗ್ನಿಟಿವ್) ನಿಯಂತ್ರಿಸುತ್ತವೆ.

ಡೋಪಮಿನ್ ನಮಗೆ ಪ್ರೇರಣೆಯನ್ನು ಕೊಡುತ್ತದೆ. ಸೆರಟೋನಿನ್ ನಮ್ಮ ಭಾವನೆಗಳನ್ನು ಹಾಗೂ ನೆನಪಿನ ಶಕ್ತಿಯನ್ನು ನಿಯಂತ್ರಿಸುತ್ತದೆ. ನಮ್ಮ ನರಕೋಶಗಳನ್ನು ‘ಮಯಲಿನ್ ಶೀತ್’ ಎಂಬ ಕೊಬ್ಬು ಪದರವು ಆವರಿಸಿ ರುತ್ತದೆ. ಈ ಪದರವು ಆರೋಗ್ಯವಾಗಿದ್ದರೆ ಮಾತ್ರ, ನರಸಂeಗಳು ಪರಿಣಾಮಕಾರಿಯಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಬಲ್ಲವು. ಕಲಿತದ್ದು ನೆನಪಿನಲ್ಲಿ ಉಳಿಯಲು ಇದು ಅಗತ್ಯ. ಏಕಾಗ್ರತೆ ಬರಲು ಹಾಗೂ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಲು ಕೊಬ್ಬುಪದರವು ಆರೋಗ್ಯವಾಗಿರಬೇಕು. ಅದಕ್ಕೆ ಕಬ್ಬಿಣವು
ಬೇಕು. ನಮ್ಮ ಮಿದುಳಿನಲ್ಲಿ ‘ಹಿಪ್ಪೋಕ್ಯಾಂಪಸ್’ ಎಂಬ ಭಾಗವಿದೆ. ಕಲಿತದ್ದು ನೆನಪಾಗಿ ಉಳಿಯಲು ಈ ಭಾಗವು
ಆರೋಗ್ಯವಾಗಿರಬೇಕು. ಅದಕ್ಕೆ ಸಾಕಷ್ಟು ಕಬ್ಬಿಣವು ದೊರೆಯಬೇಕು.

ಕ್ರೀಡೆ, ನೃತ್ಯಗಳಲ್ಲಿ, ಅವಯವಗಳ ಸೂಕ್ಷ್ಮ ಚಲನೆಯಲ್ಲಿ ಪರಿಣತಿ ಗಳಿಸಲು ಈ ಭಾಗವು ಆರೋಗ್ಯವಾಗಿರಬೇಕು. ನಮ್ಮ ನರಕೋಶಗಳಿಗೆ ಸಾಕಷ್ಟು ಕಬ್ಬಿಣವು ದೊರೆಯದಿದ್ದರೆ, ನರಕೋಶಗಳು ನಶಿಸಲಾರಂಭಿಸುತ್ತವೆ. ನರಕೋಶ ಗಳನ್ನು ನಾಶಪಡಿಸುವ ಉತ್ಕರ್ಣಕಗಳನ್ನು (ಆಕ್ಸಿಡೆಂಟ್ಸ್) ಕಬ್ಬಿಣವು ನಿರ್ಮೂಲನಗೊಳಿಸುತ್ತದೆ.
ಅದರೊಡನೆ ಆಲ್ಜೈಮರ್ಸ್ ಮುಂತಾದ ಕಾಯಿಲೆಗಳು ಬರುವ ಸಾಧ್ಯತೆಯು ಹೆಚ್ಚುತ್ತದೆ.

ನಮ್ಮ ದೇಶದಲ್ಲಿ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯು (ಎನ್‌ಎ-ಎಚ್‌ಎಸ್-5 ನಡೆಯಿತು.
ಅದರ ಅನ್ವಯ 6-59 ತಿಂಗಳ ಮಕ್ಕಳಲ್ಲಿ ಶೇ.67.1ರಷ್ಟು, 15-19 ವರ್ಷದ ಹೆಣ್ಣು ಮಕ್ಕಳಲ್ಲಿ ಶೇ.59.1ರಷ್ಟು,
15-19 ವರ್ಷದ ಗಂಡು ಹುಡುಗರಲ್ಲಿ ಶೇ.31.1ರಷ್ಟು, ಮಕ್ಕಳನ್ನು ಹೆರುವ 15-49 ವರ್ಷ ವಯಸ್ಸಿನ ಮಹಿಳೆ
ಯರಲ್ಲಿ ಶೇ.57.2ರಷ್ಟು ಹಾಗೂ ಗರ್ಭವತಿಯರಲ್ಲಿ ಶೇ.52.2ರಷ್ಟು ಅನೀಮಿಯ ಕಂಡುಬರುತ್ತದೆ. ಭಾರತವನ್ನು ಅನೀಮಿಯ-ಮುಕ್ತ ದೇಶವನ್ನಾಗಿ ಮಾಡಲು ಪ್ರತಿಯೊಬ್ಬ ವ್ಯಕ್ತಿಯು ಪ್ರಜ್ಞಾಪೂರ್ವಕವಾಗಿ ಅಗತ್ಯ
ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ವಿಶ್ವದ ಜನಸಂಖ್ಯೆ 8 ಬಿಲಿಯನ್. ಇವರಲ್ಲಿ 2 ಬಿಲಿಯನ್ ಜನರು
ಅನೀಮಿಯದಿಂದ ನರಳುತ್ತಿದ್ದಾರೆ ಎಂದರೆ, ಅದು ನಿಜಕ್ಕೂ ಕಳವಳಕಾರಿ ವಿಷಯವಾಗಿದೆ.

ಅನೀಮಿಯವು ಬಹುಶಃ ಮನುಷ್ಯನಷ್ಟೇ ಅನಾದಿಕಾಲದ ಸಮಸ್ಯೆಯಾಗಿರಬೇಕು. ಇತಿಹಾಸಪೂರ್ವದ ಅಸ್ಥಿಪಂಜರಗಳನ್ನು ಗಮನಿಸಿದಾಗ, ಕಣ್ಣುಗುಳಿಯೊಳಗೆ (ಐ ಆರ್ಬಿಟ್) ಸೂರನ್ನು ರೂಪಿಸುವ ಮೂಳೆಯಲ್ಲಿ ಜರಡಿಯಂಥ ಸೂಕ್ಷ್ಮ ರಂಧ್ರಗಳು ಕಂಡುಬಂದಿವೆ. ಇದಕ್ಕೆ ಕಬ್ಬಿಣಾಂಶದ ಕೊರತೆ ಎನ್ನಲಾಗಿದೆ. ಇದನ್ನು ‘ಕ್ರಿಬ್ರ
ಆರ್ಬಿಟೇಲಿಯ’ ಎಂದು ಕರೆಯುವುದುಂಟು.

ಪ್ರಾಚೀನ ಈಜಿಪ್ಷಿಯನ್ ಮತ್ತು ಗ್ರೀಕ್ ವೈದ್ಯಕೀಯ ಸಾಹಿತ್ಯದಲ್ಲಿ, ರೋಗಿಗಳು ಬಿಳಿಚಿಕೊಳ್ಳುವುದು, ವಿಪರೀತ ಸುಸ್ತು, ತಲೆಸುತ್ತುವುದು, ಪ್ರಜ್ಞೆ ತಪ್ಪಿಬೀಳುವುದು ಇತ್ಯಾದಿ ಲಕ್ಷಣಗಳ ವರ್ಣನೆಗಳಿವೆ. ಬಹುಶಃ ಇದು ಅನೀಮಿ ಯವೇ ಆಗಿರಬೇಕು. ಕ್ರಿ.ಶ.16-20ನೆಯ ಶತಮಾನದವರೆಗೆ ‘ಕ್ಲೋರೋಸಿಸ್’ ಎನ್ನುವ ರೋಗವು ಬಹಳ ಪ್ರಚಲಿತ ದಲ್ಲಿತ್ತು. ಇದನ್ನು ‘ಗ್ರೀನ್ ಸಿಕ್ನೆಸ್’, ‘ವರ್ಜಿನ್ ಸಿಕ್ನೆಸ್’/‘ಮಾರ್ಬಸ್ ವರ್ಜಿನಸ್’ ಎಂದೂ ಕರೆಯುತ್ತಿದ್ದರು.

ಇದೊಂದು ಗ್ರೀಕ್ ಶಬ್ದ. ‘ಹಸಿರು ಛಾಯೆಯ ಹಳದಿ’ ಎಂದರ್ಥ. ಮಾರ್ಬಸ್ ವರ್ಜಿನಸ್ ಎಂದರೆ ‘ಹದಿಹರೆಯದ ಹೆಣ್ಣುಮಕ್ಕಳಿಗೆ ಪ್ರಕೃತಿ ನೀಡಿದ ಶಾಪ’ ಎಂದರ್ಥ. ಅಂದಿನ ದಿನಗಳಲ್ಲಿ ಹದಿಹರೆಯದ ಹೆಣ್ಣುಮಕ್ಕಳು ಪೇಲವ ವಾಗಿ ಕಾಣುತ್ತಿದ್ದರು. ವಿಪರೀತ ತಲೆನೋವು. ಎದೆ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಹಸಿವೆ ಯಾಗುತ್ತಿರಲಿಲ್ಲ. ತಿಂದದ್ದು ಅರಗುತ್ತಿರಲಿಲ್ಲ. ವಿಪರೀತ ಸುಸ್ತು. ಪ್ರಖ್ಯಾತ ಇಂಗ್ಲಿಷ್ ವೈದ್ಯ ಥಾಮಸ್ ಸಿಡೆನ್‌ಹ್ಯಾಮ್ ಇದನ್ನು ಮನೋರೋಗವೆಂದು ಕರೆದ.

ಆದರೆ ಈ ರೋಗವನ್ನು ನಿಗ್ರಹಿಸಲು ಕಬ್ಬಿಣಾಂಶವನ್ನು ಸೇವಿಸಬೇಕೆಂದ ಫ್ರೆಂಚ್ ವೈದ್ಯ ಪಿಯರಿ ಬ್ಲಾಡ್. ಫೆರಸ್ ಕಾರ್ಬೋನೇಟ್ ಇರುವ ಗುಳಿಗೆಗಳು ‘ಬ್ಲಾಡ್ ಪಿಲ್’ ಎಂಬ ಹೆಸರಿನಲ್ಲಿ ಜನಪ್ರಿಯವಾದವು. 20ನೆಯ ಶತಮಾನ ದಲ್ಲಿ ಫೆರಸ್ ಸಲೇಟ್, ಫೆರಸ್ ಗ್ಲೂಕೋನೆಟ್, ಫೆರಿಕ್ ಕಾರ್ಬಾಕ್ಸಿಮಾಲ್ಟೋಸ್ ಇರುವ ಕಬ್ಬಿಣಯುಕ್ತ ಗುಳಿಗೆ ಗಳು ಜನಪ್ರಿಯವಾದವು. ಕಬ್ಬಿಣಾಂಶದ ಕೊರತೆಯು ತೀವ್ರವಾಗಿದ್ದಾಗ ಡ್ರಿಪ್ ಮೂಲಕ ಅದನ್ನು ಪೂರೈಸುವ ಪದ್ಧತಿಯು ಜಾರಿಗೆ ಬಂದಿತು. ಸಕ್ಕರೆ, ಉಪ್ಪು ಮುಂತಾದ ದೈನಂದಿನ ಆಹಾರ ಪದಾರ್ಥಗಳ ಜತೆಯಲ್ಲಿ ಕಬ್ಬಿಣಾಂಶವನ್ನು ಬೆರೆಸಿ ನೀಡುವ ಪದ್ಧತಿಯು ಆರಂಭವಾಯಿತು.

ಚರಕ ಸಂಹಿತ ಹಾಗೂ ಸುಶ್ರುತ ಸಂಹಿತೆಗಳು ‘ಪಾಂಡುರೋಗ’ವನ್ನು ಪ್ರಸ್ತಾಪಿಸುತ್ತವೆ. ಪಾಂಡು ರೋಗವೇ
ಅನೀಮಿಯ. ಮಹಾಭಾರತದಲ್ಲಿ ಬರುವ ಪಾಂಡು ಮಹಾರಾಜನಿಗೆ ಅನೀಮಿಯ ಇತ್ತು ಎನ್ನುವ ಹೇಳಿಕೆಯುಂಟು.
ವಾತಜ ಪಾಂಡು, ಪಿತ್ತಜ ಪಾಂಡು, ಕಫಜ ಪಾಂಡು, ಸನ್ನಿಪಾತಜ ಪಾಂಡು ಎಂಬ ನಮೂನೆಗಳನ್ನು ಅವು ಪ್ರಸ್ತಾಪಿ
ಸುತ್ತವೆ. ರೋಗಿಯ ದೈನಂದಿನ ಜೀವನಶೈಲಿಯನ್ನು ಅಧ್ಯಯನ ಮಾಡಿ, ಆತನ ನಾಡಿಯನ್ನು ಪರೀಕ್ಷಿಸಿ, ಕಣ್ಣು,
ಚರ್ಮ, ಉಗುರನ್ನು ನೋಡಿ ರೋಗನಿದಾನ ಮಾಡುವ ಪದ್ಧತಿಯಿದೆ.

ಪಂಚಕರ್ಮವನ್ನು ನೀಡಿ ತ್ರಿದೋಷವನ್ನು ಸರಿಪಡಿಸುವುದು ಅಗತ್ಯ. ನಂತರ ಲೋಹಭಸ್ಮ, ಮಂದುರ ಭಸ್ಮ, ಪುನರ್ನವ, ಆಮ್ಲ, ಅಶ್ವಗಂಧ, ಶತಾವರಿ ಮುಂತಾದವನ್ನು ನೀಡಿ ಪಾಂಡುರೋಗವನ್ನು ಗುಣಪಡಿಸುವ ಪದ್ಧತಿ ಯಿದೆ. ನಮ್ಮ ತಾಯಂದಿರು ಮನಸ್ಸು ಮಾಡಿದರೆ, ಅನೀಮಿಯ-ಮುಕ್ತ ಭಾರತದ ಕನಸನ್ನು ನನಸು ಮಾಡ ಬಹುದು. ಆರು ತಿಂಗಳಿಗೆ ಒಮ್ಮೆ ಹೊಟ್ಟೆ ಹುಳುವಿನ ಗುಳಿಗೆ ಯನ್ನು ನೀಡಿ. ಪ್ರತಿದಿನ ಒಂದು ಸೊಪ್ಪನ್ನು (ದಂಟು, ನುಗ್ಗೆ) ತಿನ್ನಲು ನೀಡಿ. ಸಕ್ಕರೆಯ ಬದಲು ಬೆಲ್ಲವನ್ನು ಬಳಸಿ.

ಎಳ್ಳು, ಕುಂಬಳಬೀಜ, ಖರ್ಜೂರವನ್ನು ತಿನ್ನಲು ನೀಡಿ. ಸಪೋಟ, ಅಂಜೂರ, ದಾಳಿಂಬೆಯನ್ನು ನೀಡಿ. ರಾಗಿಯ
ಹುರಿಹಿಟ್ಟನ್ನು ನೀಡಿ. ಹೆಣ್ಣುಮಕ್ಕಳ ಹಿಮೋಗ್ಲೋಬಿನ್ ಪ್ರಮಾಣವನ್ನು 6 ತಿಂಗಳಿಗೊಮ್ಮೆ ಪರೀಕ್ಷಿಸಿ. ಕಡಿಮೆಯಿ
ದ್ದರೆ ಔಷಧವನ್ನು ನೀಡಿ ಸರಿಪಡಿಸಿ. ಆಗ ಮಾತ್ರ ನಿಮ್ಮ ಮಗಳು ಬುದ್ಧಿವಂತೆಯಾಗಲು ಸಾಧ್ಯ.

ಇದನ್ನೂ ಓದಿ:Dr N Someswara Column: ಇದು ಸಯನೇಡಿಗಿಂತ ತೀವ್ರ ವಿಷ !