Thursday, 21st November 2024

Dr N Someshwara Column: ಹೀಗಿದ್ದವು ಗ್ರೀಕರ ದೇವಾಲಯ ಆಸ್ಪತ್ರೆಗಳು

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಗ್ರೀಕ್ ಸಂಸ್ಕೃತಿಯಲ್ಲಿ ಚಿಕಿತ್ಸಾ ಅದಿದೈವ ಆಸ್ಕ್ಲೆಪಿಯಸ್. ತಂದೆ ಅಪೋಲೊ, ತಾಯಿ ಕೊರೋನಿಸ್. ‘ಸತ್ತವರನ್ನು ಬದುಕಿಸಬಲ್ಲ
ಸಾಮರ್ಥ್ಯ’ ಆಸ್ಕ್ಲೆಪಿಯಸ್‌ಗೆ ಇತ್ತು. ಮನುಷ್ಯನಾಗಿದ್ದ ಆಸ್ಕ್ಲೆಪಿಯಸ್ ಕ್ರಿ.ಪೂ.5ನೆಯ ಶತಮಾನದ ಹೊತ್ತಿಗೆ ಪ್ರಧಾನ ದೈವ ವಾದ. ಆತನ ಹೆಸರಿನಲ್ಲಿ ದೇವಾಲಯಗಳು ಆರಂಭವಾದವು. ಅವನ್ನು ‘ಆಸ್ಕ್ಲೆಪಿಯಾನ್’ ಎನ್ನುತ್ತಿದ್ದರು. ‘ಆಸ್ಕ್ಲೆಪಿಯಡೆ’ ಎನ್ನುವವರು ಈ ದೇಗುಲಗಳ ಪುರೋಹಿತರಾಗಿದ್ದರು. ಇವು ಸಾಮಾನ್ಯ ದೇಗುಲಗಳಾಗಿರಲಿಲ್ಲ. ಇಲ್ಲಿ ಧರ್ಮ ಹಾಗೂ ವೈದ್ಯಕೀಯ ಗಳೆರಡೂ ಮಿಳಿತವಾಗಿದ್ದವು.

ಮೂಲತಃ ಧಾರ್ಮಿಕ ಕೇಂದ್ರಗಳಾಗಿದ್ದ ಇವು ಧಾರ್ಮಿಕ ಆಚರಣೆಗಳಿಗೆ ಆದ್ಯತೆ ನೀಡಿದ್ದರೂ, ರೋಗಗಳನ್ನು ಗುಣಪಡಿಸುವ ಆಸ್ಪತ್ರೆಗಳ ಆರಂಭಿಕ ಸ್ವರೂಪದ ಕೇಂದ್ರಗಳೂ ಆಗಿದ್ದವು. ಇಲ್ಲಿ ರೋಗಗಳನ್ನು ಗುರುತಿಸಿ ಚಿಕಿತ್ಸೆ ನೀಡುತ್ತಿದ್ದರು. ರೋಗ ಪ್ರಗತಿಯ ಬಗ್ಗೆ ಮೊದಲೇ ಸೂಚಿಸುತ್ತಿದ್ದರು. ಮಿಗಿಲಾಗಿ ಆಪ್ತಸಲಹೆ-ಸಮಾಧಾನ ನೀಡುತ್ತಿದ್ದರು. ಮುಂದೆ ಇದೇ ಆಸ್ಕ್ಲೆಪಿಯಾನುಗಳು, ವೈದ್ಯಕೀಯ ಶಿಕ್ಷಣ ನೀಡುವ ಮೂಲಕ, ವೈದ್ಯ ವಿದ್ಯಾಲಯಗಳೂ ಆಗಿ ಮೂರೂ ತರಹದ ಸೇವೆ ಸಲ್ಲಿಸಿದವು. ಪಾಶ್ಚಾತ್ಯ ಜಗತ್ತಿನಲ್ಲಿ ಧರ್ಮ, ಶಿಕ್ಷಣ ಹಾಗೂ ಚಿಕಿತ್ಸಾಲಯಗಳ ಸಮ್ಮಿಶ್ರ ರೂಪದ ಆಸ್ಪತ್ರೆಗಳಿಗೆ ಜನ್ಮವಿತ್ತವು.

ಮೊದಲ ಆಸ್ಕ್ಲೆಪಿಯಾನ್, ಪರಮಪವಿತ್ರವೆಂದು ಪರಿಗಣಿತವಾದ ‘ಎಪಿಡಾರಸ್’ ಎಂಬಲ್ಲಿ ಆರಂಭವಾಯಿತು. ಇದು ಅತ್ಯಲ್ಪ ಕಾಲದಲ್ಲೇ ಸರ್ವರೋಗಗಳನ್ನು ಗುಣಪಡಿಸ ಬಲ್ಲ ಕೇಂದ್ರವೆಂದು ಜನಪ್ರಿಯವಾಯಿತು. ಅಲ್ಪಕಾಲದಲ್ಲಿ ಟ್ರಿಕ್ಕಾ, ಕಾಸ್ ದ್ವೀಪ, ಅಥೆನ್ಸ್, ಕಾರಿಂಥ್, ಪೆರ್ಗಮಾನ್ ಮುಂತಾದೆಡೆ ಹೊಸ ಆಸ್ಕ್ಲೆಪಿಯಾನುಗಳು ಶುರುವಾದವು. ಗ್ರೀಸ್ ಮತ್ತು ಮೆಡಿಟರೇನಿಯನ್ ಸಮುದ್ರದ ಆಸುಪಾಸಿನಲ್ಲಿ ೩೦೦ಕ್ಕೂ ಹೆಚ್ಚು ದೇಗುಲ ಆಸ್ಪತ್ರೆಗಳು ಆರಂಭವಾದವು.

ಕಾಸ್ ದ್ವೀಪದಲ್ಲಿದ್ದ ಆಸ್ಕ್ಲೆಪಿಯಾನ್‌ನಲ್ಲಿ ‘ಆಧುನಿಕ ವೈದ್ಯಕೀಯದ ಪಿತಾಮಹ’ ಎಂದು ಹೆಸರಾದ ಹಿಪ್ಪೋಕ್ರೇಟ್ಸ್ ವೈದ್ಯಕೀಯ ಶಿಕ್ಷಣ ಪಡೆದರೆ, ಪೆರ್ಗಮಾನ್‌ನಲ್ಲಿ ಪ್ರಖ್ಯಾತ ರೋಮನ್ ವೈದ್ಯ ಗ್ಯಾಲನ್ ಶಿಕ್ಷಣ ಪಡೆದು ವೈದ್ಯನಾದ.

ಆಸ್ಕ್ಲೆಪಿಯಾನ್ ರಚನೆ: ಇದು ಗಮನೀಯ. ದೇಗುಲ ಸಮುಚ್ಚಯದಲ್ಲಿ ಹಲವು ಕಟ್ಟಡಗಳು ಇರುತ್ತಿದ್ದವು. ಪ್ರಧಾನ ಕಟ್ಟಡವು ‘ಚಿಕಿತ್ಸಾ ಅಽದೈವ’ (ಗಾಡ್ ಆ ಹೀಲಿಂಗ್) ಆಸ್ಕ್ಲೆಪಿಯಸ್‌ನದಾಗಿತ್ತು. ನಾಯಿಗಳು ಮತ್ತು ವಿಷರಹಿತ ಆಸ್ಕ್ಲೆಪಿಯಾನ್ ಹಾವುಗಳಿಗಾಗಿ ಪ್ರತ್ಯೇಕ ಕಟ್ಟಡವಿರುತ್ತಿದ್ದವು. ಪ್ರಾಚೀನ ಗ್ರೀಕ್ ವೈದ್ಯಕೀಯದಲ್ಲಿ ಹಾವು ಗುಣಮುಖದ ಸಂಕೇತವಾಗಿತ್ತು (ಹುಟ್ಟು ಮತ್ತು ಸಾವಿನ ಸಂಕೇತ. ಹಾವು ಪೊರೆ ಬಿಡುವುದೆಂದರೆ ಹೊಸ ಜೀವನವನ್ನು ಆರಂಭಿಸುವುದು ಎಂದರ್ಥ). ಪವಿತ್ರಜಲವನ್ನು ಚಿಮ್ಮಿಸುವ ಒಂದು ಕಾರಂಜಿ ಇರುತ್ತಿತ್ತು. ‘ಥಲಾಮೋಸ್’ ಎಂಬ ವಿಶಾಲ ಕಟ್ಟಡವಿರುತ್ತಿತ್ತು.

ಇದೊಂದು ಸ್ವಪ್ನಗೃಹ. ಮೊಟ್ಟೆಯೊಡೆದು ಮರಿ ಹೊರ ಬರಲು, ಮೊಟ್ಟೆಗೆ ನಿಗದಿತ ಅವಽವರೆಗೆ ಕಾವು ಕೊಡ ಬೇಕಲ್ಲವೆ! ಹಾಗೆಯೇ ವ್ಯಕ್ತಿಯು ಅನಾರೋಗ್ಯದ ನಿವಾರಣೆಯ ಮಾರ್ಗವನ್ನು ಸ್ವತಃ ಕನಸಿನಲ್ಲಿ ಕಾಣಲು ಹಲವು ದಿನಗಳವರೆಗೆ ಕಾಯಾಬೇಕಾದ ಸ್ಥಳ ಸ್ವಪ್ನಗೃಹ. ಇದನ್ನು ‘ಇನ್‌ಕ್ಯುಬೇಟರ್’ ಎನ್ನುತ್ತಿದ್ದರು. ಆಟದ ಅಂಗಳಗಳು, ಮನರಂಜನೆಗಾಗಿ ವಿಶೇಷ ವೇದಿಕೆಗಳು (ಆಂಫಿಥಿಯೇಟರ್) ಇರುತ್ತಿದ್ದವು.

ಚಿಕಿತ್ಸಾ ಸ್ವರೂಪ: ದೇವಾಲಯ ಆಸ್ಪತ್ರೆಗಳು ಪ್ರಶಾಂತ ಪರಿಸರ ದಲ್ಲಿರುತ್ತಿದ್ದವು, ಗದ್ದಲ ಗೌಜುಗಳಿಗೆ ಅವಕಾಶವಿರುತ್ತಿರಲಿಲ್ಲ. ಗಾಗಿ ರೋಗಿಗಳು ಈ ಪರಿಸರದೊಳಗೆ ಹೆಜ್ಜೆಯಿಡುತ್ತಿದ್ದ ಹಾಗೆ ಅವರಿಗೆ ಒಂದು ರೀತಿಯ ಅಲೌಕಿಕ ಶಾಂತಿಯ ಅನುಭವವಾಗುತ್ತಿತ್ತು. ಆಸ್ಕ್ಲೆಪಿಯಾನುಗಳಲ್ಲಿ ರೋಗಿಗಳಿಗೆ ಮಾನಸಿಕ ಹಾಗೂ ದೈಹಿಕ ಚಿಕಿತ್ಸೆ ದೊರೆಯುತ್ತಿದ್ದವು. ಚಿಕಿತ್ಸೆಯು ಪ್ರಧಾನವಾಗಿ ೨ ಘಟ್ಟಗಳಲ್ಲಿ ದೊರೆಯುತ್ತಿತ್ತು. ಮೊದಲನೆಯದು ಕೆಥಾರಸಿಸ್, ಎರಡನೆಯದು ಇನ್ ಕ್ಯುಬೇಶನ್. ಕೆಥಾರಸಿಸ್ ಎಂದರೆ ಮಾನಸಿಕ ಹಾಗೂ ದೈಹಿಕ
ಶುದ್ಧೀಕರಣ. ಮೊದಲು ಹಲವು ಸಲ ನಾನಾ ರೀತಿಯ ಅಭ್ಯಂಜನ, ನಂತರ ವಿರೇಚನ (ಬೇಧಿ) ಮಾಡಿಸುತ್ತಿದ್ದರು. ಕೊನೆಯಲ್ಲಿ ವಿಶೇಷ ಪಥ್ಯಾಹಾರವನ್ನು ವಿಧಿಸುತ್ತಿದ್ದರು. ಈ ಕ್ರಮಬದ್ಧ ಶುದ್ಧೀಕರಣದ ನಂತರವೇ ರೋಗಿಗಳು ಮುಂದಿನ ಹಂತದ ಚಿಕಿತ್ಸೆಗೆ ಅರ್ಹತೆ ಪಡೆಯುತ್ತಿದ್ದರು. ಈ ವಿಧಿಗಳು ಹಲವು ದಿನಗಳವರೆಗೆ ವಿಸ್ತೃತವಾಗಿ ನಡೆದು, ರೋಗಿಗಳ ಮನದ ಒತ್ತಡ ಮತ್ತು ಆತಂಕವನ್ನು ಪರಿಣಾಮಕಾರಿಯಾಗಿ
ಶಮನಗೊಳಿಸುತ್ತಿದ್ದವು. ಮನದಲ್ಲಿ ಶಾಂತಿ ನೆಲೆಸುತ್ತಿತ್ತು.

ಚಿಕಿತ್ಸೆಯ ೨ನೇ ಹಂತವು ಸ್ವಪ್ನಗೃಹದಲ್ಲಿ ನಡೆಯುತ್ತಿತ್ತು. ಇದನ್ನು ‘ಸ್ವಪ್ನಚಿಕಿತ್ಸೆ’ ಎಂದೂ ಕರೆಯುತ್ತಿದ್ದರು. ಸ್ವಪ್ನಗೃಹದಲ್ಲಿರುತ್ತಿದ್ದ ‘ಎಂಕೋಯಿಮೆಟೀರಿಯಾನ್’ ಎಂಬ ಶಯನಗೃಹಗಳಲ್ಲಿ ರೋಗಿಗಳಿಗೆ ‘ಪವಿತ್ರ ನಿದ್ರೆ’ ಬರಲು ಚಿಕಿತ್ಸೆ ನೀಡುತ್ತಿದ್ದರು. ನಿದ್ರಿಸಲು ಅಫೀಮು ಮುಂತಾದ ನಿದ್ರಾಕಾರಕಗಳನ್ನು ಕೊಡುತ್ತಿದ್ದರೆ ಅಥವಾ ವಶೀಕರಣದ (ಹಿಪ್ನೋಸಿಸ್) ಮೂಲಕ ನಿದ್ರೆ ತರಿಸುತ್ತಿದ್ದರೆ? ಎನ್ನುವುದು ತಿಳಿದುಬಂದಿಲ್ಲ. ಈ ನಿದ್ರಾಪ್ರಚೋದಕ ಚಿಕಿತ್ಸೆಯನ್ನು ‘ಎಂಕೋಯಿಮೆಸಿಸ್’ ಎನ್ನುತ್ತಿದ್ದರು. ಹೀಗೆ ರೋಗಿಗಳು ದೇವಾಲಯ ಆಸ್ಪತ್ರೆಯಲ್ಲಿ ಹಲವು ದಿನಗಳವರೆಗೆ ನಿದ್ರಿಸುತ್ತಿದ್ದರು.

ಎಂದಾದರೂ ಒಂದು ರಾತ್ರಿ, ಸ್ವಯಂ ಆಸ್ಕ್ಲೆಪಿಯಸ್ ರೋಗಿಗಳ ಕನಸಲ್ಲಿ ಬಂದು ಅವರ ಅನಾರೋಗ್ಯವನ್ನು ಗುಣಪಡಿಸುತ್ತಿದ್ದ. ಪ್ರತಿಯೊಬ್ಬರಿಗೂ ಸ್ವಯಂ ಆಸ್ಕ್ಲೆಪಿಯಸ್ ಬರುತ್ತಿರಲಿಲ್ಲ. ಆತನ ಹೆಣ್ಣು ಮಕ್ಕಳಾದ ಪನೇಶಿಯ ಅಥವ ಹೈಜಿಯಾ ಬಂದು ಚಿಕಿತ್ಸೆ ನೀಡುತ್ತಿದ್ದರು. ಇಲ್ಲವೇ ಆಸ್ಕ್ಲೆಪಿಯಸ್‌ನ ಮಗ ಹಾಗೂ ಅತ್ಯುತ್ತಮ ಶಸ್ತ್ರ ವೈದ್ಯ ಮೆಚಿಯಾನ್ ಅಥವಾ ಇನ್ನೊಬ್ಬ ಮಗ ಪೊಡಾಲೀರಿಯಸ್ ಬರುತ್ತಿದ್ದರು. ಕೆಲವೊಮ್ಮೆ ಆಸ್ಕ್ಲೆಪಿಯಸ್‌ನ ನಾಯಿ ಅಥವಾ ಹಾವು ಕನಸಿನಲ್ಲಿ ಬಂದು ರೋಗಿಗಳನ್ನು ಗುಣಪಡಿಸುತ್ತಿದ್ದವು ಇಲ್ಲವೇ ಗುಣವಾಗುವ ಮಾರ್ಗವನ್ನು ತೋರುತ್ತಿದ್ದವು.

ಕನಸು ಬಿದ್ದ ಕೂಡಲೇ ರೋಗಿಗಳು ದೇವಾಲಯದಲ್ಲಿದ್ದ ಆಸ್ಕ್ಲೆಪಿಯಡೆ ಎಂಬ ಪುರೋಹಿತರನ್ನು ಭೇಟಿಯಾಗುತ್ತಿದ್ದರು. ಇವರು ರೋಗಿಗಳು ಹೇಳುವ ಕನಸನ್ನು ಅರ್ಥೈಸುತ್ತಿದ್ದರು. ರೋಗ ಸ್ವಯಂ ಗುಣವಾಗುತ್ತದೆ ಎಂದೋ, ಇಲ್ಲವೇ ಇಂತಿಂಥ ಚಿಕಿತ್ಸೆ ಪಡೆದರೆ ನಿವಾರಣೆಯಾಗುತ್ತದೆ ಎಂದೋ ಹೇಳುತ್ತಿದ್ದರು. ಇವರಿಗೆ ಧಾರ್ಮಿಕ ಆಚರಣೆ ನಡೆಸುವುದರ ಜತೆಯಲ್ಲಿ ಅಗತ್ಯ ವೈದ್ಯಕೀಯ ತಿಳಿವು ಹಾಗೂ ತರಬೇತಿ ದೊರೆತಿರುತ್ತಿತ್ತು. ಗಾಯಗಳನ್ನು ಗುಣಪಡಿಸುವಲ್ಲಿ ನುರಿತಿದ್ದ ಇವರು ಮುರಿದ ಮೂಳೆಗಳನ್ನು ಸ್ವಸ್ಥಾನದಲ್ಲಿ ಕೂರಿಸಲು, ಸಣ್ಣಪುಟ್ಟ ಸರಳ ಶಸಚಿಕಿತ್ಸೆ ಮಾಡಲು ಬಲ್ಲವರಾಗಿದ್ದರು. ಮೂಲಿಕೆಗಳಿಂದ ನಾನಾ ಔಷಧಗಳನ್ನು ಸಿದ್ಧಪಡಿಸುತ್ತಿದ್ದರು.

ರೋಗಿಗಳಿಗೆ ನಿಗದಿತ ಸ್ನಾನವಿಽ, ಪಥ್ಯಾಹಾರ, ಜಿಮ್ನಾಶಿಯಂನಲ್ಲಿನ ದೈಹಿಕ ಚಟುವಟಿಕೆಗಳನ್ನು ಸೂಚಿಸುತ್ತಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಇವರು ಆಪ್ತಸಲಹೆ ನೀಡಬಲ್ಲವರಾಗಿದ್ದರು. ದೈವ ಪ್ರತಿನಿಽಗಳಾಗಿದ್ದ ಇವರ ಮಾತನ್ನು ಶ್ರೀಸಾಮಾನ್ಯರು ನಂಬುತ್ತಿದ್ದರು.

ಹಿಪ್ಪೋಕ್ರೇಟನ ಸಂಹಿತೆ (ಹಿಪ್ಪೋಕ್ರಾಟಿಕ್ ಕಾರ್ಪಸ್): ಆಸ್ಕ್ಲೆಪಿಯಾನ್ ಕೇವಲ ಶ್ರದ್ಧಾ ಹಾಗೂ ಚಿಕಿತ್ಸಾ ಕೇಂದ್ರವಾಗಿರಲಿಲ್ಲ,
ಅಧ್ಯಯನ-ಅಧ್ಯಾಪನ ಶಾಲೆಯೂ ಆಗಿತ್ತು. ಆಸ್ಕ್ಲೆ ಪಿಯಾನುಗಳಲ್ಲಿ ಪುರೋಹಿತ ವೈದ್ಯರು ನೂರಾರು ವರ್ಷ ಗಳವರೆಗೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ಅವಽಯಲ್ಲಿ ಅವರಿಗೆ ರೋಗಿಯ ದೇಹ-ಮನಸ್ಸುಗಳ ಅಧ್ಯಯನಕ್ಕೆ ವಿಪುಲ ಅವಕಾಶ ದೊರೆಯುತ್ತಿತ್ತು. ಬಹುಶಃ ತಾವು ನೀಡು
ತ್ತಿದ್ದ ಪ್ರಯೋಗಾತ್ಮಕ ಚಿಕಿತ್ಸೆಗಳ ಗುಣಾವಗುಣಗಳ ಅಧ್ಯಯನ ಮಾಡಿ ಅವನ್ನು ದಾಖಲಿಸುತ್ತಿದ್ದರು. ತಮಗೆ ಕಂಡ ಸತ್ಯಗಳನ್ನೆಲ್ಲ ಸೂತ್ರರೂಪದಲ್ಲಿ ಬರೆದಿಟ್ಟರು. ಈ ಸೂತ್ರಸಾಹಿತ್ಯವನ್ನು ಇಂದು ‘ಹಿಪ್ಪೋಕ್ರೇಟನ ಸಂಹಿತೆ’ ಎನ್ನುತ್ತೇವೆ. ಸ್ವಯಂ ಹಿಪ್ಪೋಕ್ರೇಟ್ ಕೂಡ ಕಾಸ್ ದ್ವೀಪದ ಆಸ್ಕ್ಲೆಪಿಯಾನ್‌ನಲ್ಲಿ ಕಲಿತು, ಅಂದು ಲಭ್ಯವಿದ್ದ ಎಲ್ಲ ಆರೋಗ್ಯ-ಅನಾರೋಗ್ಯ ಮಾಹಿತಿಯನ್ನು ಸೂತ್ರರೂಪದಲ್ಲಿ ಸಂಗ್ರಹಿಸಿದ. ತನ್ನ ಅಧ್ಯಂನ-ಸಂಶೋಧನೆ-ಪ್ರಯೋಗ-ಫಲಿತಾಂಶಗಳನ್ನೂ ಅದಕ್ಕೆ ಸೇರಿಸಿದ. ಸಮಗ್ರ ಹಿಪ್ಪೋಕ್ರೇಟ್ ಸಂಹಿತೆಯನ್ನು ಸ್ವಯಂ ಹಿಪ್ಪೊಕ್ರೇಟ್ ಬರೆಯಲಿಲ್ಲ. ಆತ ಕೆಲವನ್ನಷ್ಟೇ ಬರೆದ.

ಉಳಿದದ್ದು ಪಾರಂಪರಿಕೆ ತಿಳಿವಳಿಕೆ. ಆದರೆ ಇದನ್ನು ಇಂದು ನಾವು ಆತನ ಹೆಸರಿನಲ್ಲಿ ಗುರುತಿಸುತ್ತಿದ್ದೇವೆ. ಜತೆಗೆ ‘ಆಧುನಿಕ
ವೈದ್ಯಕೀಯದ ಪಿತಾಮಹ’ ಎಂಬ ಅಭಿದಾನವನ್ನೂ ನೀಡಿದ್ದೇವೆ. ಹಿಪ್ಪೋಕ್ರೇಟನ ಸಂಹಿತೆಯು ಅನೇಕ ಮಹತ್ವಯುತ ಸತ್ಯಗಳನ್ನು ಬೆಳಕಿಗೆ ತಂದಿತು.

ಪ್ರಾಯೋಗಿಕ ವೀಕ್ಷಣೆ: ಪ್ರಾಚೀನ ಗ್ರೀಕ್ ಸಂಸ್ಕೃತಿಯಲ್ಲಿ ‘ದೇವತಾವಾದ’ಕ್ಕೆ ಆದ್ಯತೆಯಿತ್ತು. ಎಲ್ಲವೂ ದೈವನಿರ್ಣಿತ ಎಂಬ ಅಂಶವನ್ನು ಅವರು ಒಪ್ಪಿದ್ದರು. ಆದರೂ ಆಸ್ಕ್ಲೆಪಿಯಾನ್‌ನಲ್ಲಿ ರೋಗಿಗಳ ವೀಕ್ಷಣೆ, ಅದರಲ್ಲಿ ತಾವು ಕಂಡ ಲಕ್ಷಣಗಳ ಕ್ರಮಬದ್ಧ ದಾಖಲೆ, ಅವುಗಳ ತಾರ್ಕಿಕ ವಿಶೇಷಣೆ ನಂತರ ಒಂದು ತಾತ್ಕಾಲಿಕ ರೋಗನಿದಾನ ಮಾಡುವ ಪದ್ಧತಿ ಜನಪ್ರಿಯವಾಯಿತು. ಹೀಗೆ ಹಲವು ರೋಗಿಗಳ ಅಧ್ಯಯನದ ನಂತರ ಒಂದು ‘ಅನುಭವಜನ್ಯ ಚಿಕಿತ್ಸೆ’ (ಎಂಪೆರಿಕಲ್ ಟ್ರೀಟ್‌ಮೆಂಟ್) ಯನ್ನು ರೂಪಿಸುತ್ತಿದ್ದರು. ಈ ವಿಧಾನವು ಆಧುನಿಕ ವೈದ್ಯಕೀಯ ವಿಜ್ಞಾನ ಬೆಳೆಯಲು ಭದ್ರ ತಳಪಾಯವನ್ನು ಹಾಕಿತು.

ರೋಗಿ ಕೇಂದ್ರಿತ ಚಿಕಿತ್ಸೆ: ಆಸ್ಕ್ಲೆಪಿಯಾನ್‌ನಲ್ಲಿ ಪ್ರತಿ ರೋಗಿಯನ್ನೂ ವೈಯುಕ್ತಿಕವಾಗಿ ಅಧ್ಯಯನ ಮಾಡಿ ಅವನ ದೈಹಿಕ, ಮಾನಸಿಕ ರೋಗಲಕ್ಷಣಗಳು, ಆಹಾರ ಪದ್ಧತಿ ಮತ್ತು ಜೀವನ ಶೈಲಿಗಳನ್ನು ಗಮನಿಸಿ ಅವನ್ನು ದಾಖಲಿಸುತ್ತಿದ್ದರು. ನಂತರ ಅವನ ಕನಸನ್ನು, ಅವನ ಆರೋಗ್ಯ ಸ್ಥಿತಿಗತಿಗಳ ಹಿನ್ನೆಲೆ ಯಲ್ಲಿ ವಿಶ್ಲೇಷಿಸುತ್ತಿದ್ದರು. ನಂತರವಷ್ಟೇ ಅವನಿಗೆ ಸೂಕ್ತ ಚಿಕಿತ್ಸಾ ಸ್ವರೂಪವನ್ನು ನಿರ್ಣಯಿಸುತ್ತಿದ್ದರು. ಹೀಗೆ ರೋಗಿ ಕೇಂದ್ರಿತ ಹಾಗೂ ಅವನಿಗೆಂದೇ ಸಿದ್ಧಪಡಿಸಿದ ವೈಯುಕ್ತಿಕ ಚಿಕಿತ್ಸಾ ಜವಾಬ್ದಾರಿಯನ್ನು ಪುರೋಹಿತ ವೈದ್ಯರು ಹೊರುತ್ತಿದ್ದರು.
ಚಿಕಿತ್ಸೆಯಲ್ಲಿ ನೈತಿಕತೆ: ಹಿಪ್ಪೋಕ್ರೇಟನ ಸಂಹಿತೆಯಲ್ಲಿ ಅತ್ಯಂತ ಪ್ರಮುಖವಾಗಿದ್ದು ಇಂದಿಗೂ ಬಳಕೆಯಲ್ಲಿರುವುದು ‘ಹಿಪ್ಪೋಕ್ರೇಟನ ಶಪಥ’ ಅಥವಾ ‘ಹಿಪ್ಪೋಕ್ರೇಟ್ ಓಥ್’. ಇದು ವೈದ್ಯ ವೃತ್ತಿಗೆ ನೈತಿಕ ಮಾನದಂಡಗಳನ್ನು ರೂಪಿಸಿತು, ಕರುಣೆಯ ಮಹತ್ವವನ್ನು, ರೋಗಿಯ ಚಿಕಿತ್ಸಾ ವಿವರಗಳ ಗೌಪ್ಯತೆ ಕಾಪಾಡಿಕೊಳ್ಳಬೇಕಿರುವುದನ್ನು ವೈದ್ಯರಿಗೆ ಒತ್ತಿ ಹೇಳಿತು. ಗುಣಪಡಿಸಲು ಸಾಧ್ಯವಿಲ್ಲದ ಸಂದರ್ಭಗಳಲ್ಲಿ, ಕನಿಷ್ಠ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ಸಾರಿತು. ಅಸ್ಕ್ಲೆಪಿಯಾನ್‌ಗಳಲ್ಲಿ ಸೇವಾ ಮತ್ತು ಚಿಕಿತ್ಸಾ ಸಮರ್ಪಣೆಯಿಂದ ಪ್ರೇರಿತವಾಗಿರುವ ಈ ನೈತಿಕ ಸಂಹಿತೆ, ವೈದ್ಯಕೀಯ ವೃತ್ತಿಪರತೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದೆ.

ರೋಗರಕ್ಷಣಾ ಜೀವನಶೈಲಿ: ರೋಗ ಬಂದ ಮೇಲೆ ಗುಣ ಪಡಿಸುವುದಕ್ಕಿಂತ, ಅದು ಬಾರದಂತೆ ಜೀವನಶೈಲಿ ರೂಪಿಸಿಕೊಂಡು ಕಾರ್ಯರೂಪಕ್ಕೆ ತರಬೇಕಾದ ಮಹತ್ವವನ್ನು ಆಸ್ಕ್ಲೆ ಪಿಯಾನ್ ಸಾರಿತು. ಪ್ರತಿ ವ್ಯಕ್ತಿಯು ತನ್ನ ದೇಹ-ಮನಸ್ಸಿನ ಹಿನ್ನೆಲೆಯಲ್ಲಿ ಸೇವಿಸಬೇಕಾದ ಆಹಾರ, ನಡೆಸಬೇಕಾದ ದೈಹಿಕ ಚಟುವಟಿಕೆ ಹಾಗೂ ಜೀವನಶೈಲಿಯನ್ನು ವಿಧಿಸಿತು. ಆರೋಗ್ಯವೆಂದರೆ ದೇಹ, ಮನಸ್ಸು ಮತ್ತು ಪರಿಸರದ ನಡುವಿನ ಸಂತುಲನದ ಸ್ಥಿತಿ ಎಂಬುದನ್ನು ಪುರೋಹಿತ ವೈದ್ಯರು ಅರ್ಥಮಾಡಿಕೊಂಡರು.

ಸಂಽಕಾಲ: ವೈದ್ಯಕೀಯ ಇತಿಹಾಸದಲ್ಲಿ ಆಸ್ಕ್ಲೆಪಿಯಾನು ಗಳದ್ದು ಒಂದು ಸಂಧಿಕಾಲವೆನ್ನಬಹುದು. ಇಲ್ಲಿ ೩ ರೀತಿಯ ಚಟುವಟಿಕೆಗಳು ಒಟ್ಟೊಟ್ಟಿಗೆ ನಡೆಯುತ್ತಿದ್ದವು. ಮೊದಲನೆ ಯದ್ದು ಗ್ರೀಕ್ ಧಾರ್ಮಿಕ ಆಚರಣೆಗಳು. ಗ್ರೀಕರು ತಮ್ಮದೇ ಆದ ದೇವತೆಗಳನ್ನು ನಂಬುತ್ತಿದ್ದರು. ಮನುಷ್ಯರಿಗೆ ಒದಗುವ ಅದೃಷ್ಟ-ದುರದೃಷ್ಟಗಳಿಗೆ ದೇವತೆಗಳ ಕೃಪೆ ಇಲ್ಲವೇ ಅವಕೃಪೆಗಳೇ ಕಾರಣ ಎಂಬುದು ಅವರ ನಂಬಿಕೆಯಾಗಿತ್ತು. ಇಂಥವರಿಗೆ ಅಗತ್ಯವಾದ ಧಾರ್ಮಿಕ-ಭಾವನಾತ್ಮಕ-ಮಾನಸಿಕ-ನೈತಿಕ ಮಾರ್ಗದರ್ಶನಗಳನ್ನು ಒದಗಿಸಿದ ಆಸ್ಕ್ಲೆಪಿಯಾನು ಗಳು ಅವರಿಗೆ ಸಾಂತ್ವನ ನೀಡಿ ದುಃಖ-ದುಮ್ಮಾನಗಳನ್ನು ಕಳೆಯುತ್ತಿದ್ದವು. ಬಹುಶಃ ಇವೆಲ್ಲವೂ ಪ್ಲಾಸಿಬೋ ಪರಿಣಾಮಗಳಾಗಿ ಉಪಯುಕ್ತವಾಗುತ್ತಿದ್ದಿರ ಬಹುದು. ಎರಡನೆಯದು ‘ಟ್ರಯಲ್ ಆಂಡ್ ಎರರ್’ ಸೂತ್ರದನ್ವಯದ ಮೂಲಿಕಾ ಚಿಕಿತ್ಸೆ, ಆಹಾರ ಚಿಕಿತ್ಸೆ, ಕಾಯ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಗಳು. ಇವು ಆಧುನಿಕ-ತಾರ್ಕಿಕ-ಅನುಭವಜನ್ಯ ಹಾಗೂ ವೈಜ್ಞಾನಿಕ ವೈದ್ಯಕೀಯ ವಿಜ್ಞಾನಗಳ ಆವಿರ್ಭಾವಕ್ಕೆ ಭದ್ರವಾಗಿ ಬುನಾದಿ
ಹಾಕಿದವು. ಮೂರನೆಯದಾಗಿ ವೈದ್ಯರಿಗೆ ನಿರ್ದಿಷ್ಟ ಕಟ್ಟುಪಾಡುಗಳನ್ನು ವಿಽಸಿ, ಅವರು ನೀತಿಮಾರ್ಗದಲ್ಲೇ ನಡೆಯುವಂತೆ ವಿಽಗಳನ್ನು ರೂಪಿಸಿದವು.

ಅವನತಿ ಮತ್ತು ಪರಂಪರೆ: ಆಸ್ಕ್ಲೆಪಿಯಾನುಗಳು ಸರಿ ಸುಮಾರು ಕ್ರಿ.ಪೂ.೫ನೇ ಶತಮಾನದಲ್ಲಿ ಆರಂಭವಾಗಿ ಕ್ರಿ.ಶ.೪ನೇ ಶತಮಾನದವರೆಗೆ ಮುಂದುವರಿದವು. ಈ ವೇಳೆಗೆ ಕ್ರೈಸ್ತಧರ್ಮ ಶುರುವಾಗಿ ಯುರೋಪಿನಲ್ಲಿ ಬೇರುಬಿಡಲು ಯತ್ನಿಸುತ್ತಿತ್ತು. ಇದರ ಪ್ರಭಾವಕ್ಕೆ ಸಿಲುಕಿ ಆಸ್ಕ್ಲೆಪಿಯಾನು ಗಳು ಕ್ರಮೇಣ ತಮ್ಮ ಜನಪ್ರೀತಿ ಮತ್ತು ಖ್ಯಾತಿಯನ್ನು ಕಳೆದುಕೊಳ್ಳಲಾರಂಭಿಸಿದವು. ಕೆಲವು ಆಸ್ಕ್ಲೆಪಿಯಾನುಗಳು ಪಾಳುಬಿದ್ದರೆ, ಉಳಿದವನ್ನು ಕ್ರೈಸ್ತರು ‘ಕ್ರಿಶ್ಚಿಯನ್ ಬೆಸೆಲಿಕ’ ಗಳಾಗಿ ಪರಿವರ್ತಿಸಿಕೊಂಡರು. ಆದರೆ ಆಸ್ಕ್ಲೆಪಿಯಾನುಗಳ ಪರಂಪರೆಗೆ ಅಂಥ ದೊಡ್ಡ ಚ್ಯುತಿಯೇನೂ ಬರಲಿಲ್ಲ.

ಮಧ್ಯಯುಗದ ವೇಳೆಗೆ ಕ್ರೈಸ್ತ ಚರ್ಚುಗಳ ಆಸ್ಪತ್ರೆಗಳು (ಮೊನಾಸ್ಟಿಕ್ ಆಸ್ಪತ್ರೆಗಳು) ಆರಂಭವಾದಾಗ, ಅವು ಹೆಚ್ಚು ಕಡಿಮೆ ಆಸ್ಕ್ಲೆಪಿಯಾನುಗಳ ತತ್ತ್ವಗಳನ್ನೇ ಅಳವಡಿಸಿಕೊಂಡು ಕಾರ್ಯರೂಪಕ್ಕೆ ತಂದವು. ಅದೇ ಚರ್ಚ್ ಆಸ್ಪತ್ರೆಗಳು ಮುಂದೆ ಆಧುನಿಕ ಆಸ್ಪತ್ರೆಗಳ ಜನನಕ್ಕೆ ಕಾರಣವಾದುದನ್ನು ಇತಿಹಾಸದಲ್ಲಿ ನೋಡಿದ್ದೇವೆ. ಹೀಗೆ ಗ್ರೀಕರ ಆಸ್ಕ್ಲೆಪಿಯಾನು ಗಳು ಧರ್ಮ-ಮನಸ್ಸು-ವೈದ್ಯಕೀಯಗಳನ್ನು ಸಮನ್ವಯ
ಗೊಳಿಸಿದವು. ದೇಹ-ಮನಸ್ಸು-ಆತ್ಮಗಳ ಸಮನ್ವಯ ಮತ್ತು ಸಂತುಲನದಿಂದ ಮಾತ್ರ ನಾವು ಆರೋಗ್ಯವಾಗಿರಬಲ್ಲೆವು ಎಂಬ ಸತ್ಯವನ್ನು ಸಾರಿದವು. ಆಸ್ಕ್ಲೆಪಿಯೇಡುಗಳಿಗೆ ನಮೋನ್ನಮಃ !

ಇದನ್ನೂ ಓದಿ: Dr N Someswara Column: ಇದು ಸಯನೇಡಿಗಿಂತ ತೀವ್ರ ವಿಷ !