ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ರೋಮ್ ಸಾಮ್ರಾಟ ಜೂಲಿಯಸ್ ಸೀಸರ್ ಮತ್ತು ಕ್ಯಾಲಿಗುಲ, ಫ್ರಾನ್ಸ್ ದೇಶದ ಚಕ್ರವರ್ತಿ ನೆಪೋಲಿಯನ್-1, ರಷ್ಯನ್ ಕಾದಂಬರಿಕಾರ ಫಾದರ್ ದೋಸ್ತೋ ವ್‌ಸ್ಕಿ, ಅಮೆರಿಕದ ಅಧ್ಯಕ್ಷ ಥಿಯೋಡರ್ ರೂಸ್‌ವೆಲ್ಟ್, ಸೋವಿಯತ್ ರಷ್ಯಾದ ಸಂಸ್ಥಾಪಕ ವ್ಲಾಡಿಮಿರ್ ಲೆನಿನ್,
ಕ್ರಿಕೆಟ್ ಆಟಗಾರರಾದ ಟೋನಿ ಗ್ರೆಗ್ ಮತ್ತು ಜಾಂಟಿ ರೋಡ್ಸ್ ಇವರೆಲ್ಲರ ನಡುವೆ ಇದ್ದ ಸಮಾನ ಅಂಶವೆಂದರೆ, ಅದು ಅಪಸ್ಮಾರ ಅಥವಾ ಎಪಿಲೆಪ್ಸಿ. ಇವರ ಗುಂಪಿಗೆ ಅರಿಸ್ಟಾಟಲ್, ಸಾಕ್ರಟಿಸ್, ಲಾರ್ಡ್ ಬೈರನ್, ವಿನ್ಸೆಂಟ್ ವ್ಯಾನ್ ಗಾಗ್, ಆಲ್ ಫ್ರೆಡ್ ನೊಬೆಲ್ ಮುಂತಾದವರನ್ನೂ ಸೇರಿಸಬಹುದು.
ಇವರೆಲ್ಲರೂ ಅಪಸ್ಮಾರದಿಂದ ನರಳುತ್ತಿದ್ದರೂ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿದವರು. ನಮ್ಮ ನಿಮ್ಮ ಜತೆಯಲ್ಲಿ ಆರಾಮವಾಗಿ ಮಾತನಾಡುತ್ತಿದ್ದಂಥ ವ್ಯಕ್ತಿಯು ಇದ್ದಕ್ಕಿದ್ದ ಹಾಗೆ ನೆಲದ ಮೇಲೆ ಬಿದ್ದು ವಿಲವಿಲನೆ ಒದ್ದಾಡುತ್ತಾ, ಕೈಕಾಲುಗಳನ್ನು ಅನಿಯಂತ್ರಿತವಾಗಿ ಝಾಡಿಸುತ್ತಾ, ಕಣ್ಣುಗುಡ್ಡೆಗಳು ಹೊರಬರುತ್ತವೇನೋ ಎಂಬಂತೆ ಹಿಗ್ಗಲಿಸುತ್ತಾ, ಬಾಯಿತುಂಬ ನೊರೆಯನ್ನು ಸುರಿಸುತ್ತಾ… ಪ್ರಜ್ಞಾಹೀನನಾಗುವುದನ್ನು ನೋಡಿದಾಗ ಎಂಟೆದೆಯ ಗಂಡಿನ ಗುಂಡಿಗೆಯೂ ಒಮ್ಮೆ ‘ಝಗ್’ ಎನ್ನುವುದು ಸುಳ್ಳಲ್ಲ. ಇದುವೇ ಅಪಸ್ಮಾರ ಅಥವಾ ಎಪಿಲೆಪ್ಸಿ. ಕನ್ನಡದಲ್ಲಿ ಇದನ್ನು ‘ಮೂರ್ಛೆರೋಗ’ ಇಲ್ಲವೇ ‘ಮೊಲ್ಲಾ ಗರ’ ಎಂದೂ ಕರೆಯುವುದುಂಟು.
ಅಪಸ್ಮಾರವು ಮನುಷ್ಯನಿಗೆ ತಿಳಿದಿರುವ ಅನಾದಿ ಕಾಲದ ರೋಗಗಳಲ್ಲಿ ಒಂದು. ಇದರ ಮೊದಲ ಉಲ್ಲೇಖವು ಇಂದಿಗೆ ೪೦೦೦ ವರ್ಷಗಳ ಹಿಂದಿದ್ದ ಮೆಸಪೊಟೋಮಿಯನ್ ಸಂಸ್ಕೃತಿಯ ಒಂದು ಉಪ ಸಂಸ್ಕೃತಿಯಾದ ಅಕ್ಕಾಡಿಯನ್ ಸಂಸ್ಕೃತಿಯಲ್ಲಿ ದಾಖಲಾಗಿದೆ. ಅಂದಿನ ದಿನಗಳಲ್ಲಿ ಅವರ ಬದುಕಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಜೇಡಿಮಣ್ಣಿನ ಒಣಹಲಗೆಯಲ್ಲಿ ದಾಖಲಿಸುತ್ತಿದ್ದರು. ಅಂಥ ದಾಖಲೆಗಳಲ್ಲಿ
ಅಪಸ್ಮಾರದ ಉಲ್ಲೇಖವಿದೆ. ಅದರ ವಿವರಣೆಯು ಹೀಗಿದೆ- ‘ಅವನ ಕುತ್ತಿಗೆಯು ಎಡಕ್ಕೆ ತಿರುಗಿತು. ಕೈ ಮತ್ತು ಕಾಲುಗಳ ಬಿಗುಪು ಹೆಚ್ಚಿತು. ಕಣ್ಣುಗಳು ಅಗಲವಾಗಿ ವಿಸ್ತರಿಸಿದ್ದವು. ಬಾಯಿಯಿಂದ ನೊರೆಯು ಹೊರಹೊಮ್ಮುತ್ತಿತ್ತು. ಅವನಿಗೆ ಯಾವುದೇ ಪ್ರeಯಿರಲಿಲ್ಲ’. ಅವರ ಈ ವಿವರಣೆಯಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ಈ ಜೇಡಿಮಣ್ಣಿನ ಹಲಗೆಯನ್ನು ಬರೆದು ಒಂದು ಸಾವಿರ ವರ್ಷಗಳಾದ ಮೇಲೆ ಬ್ಯಾಬಿಲೋನಿ
ಯನ್ನರು ‘ಸಕೀಕ್ಕು’ ಎಂಬ ರೋಗನಿದಾನ ವೈದ್ಯಕೀಯ ಗ್ರಂಥವನ್ನು ಬರೆದರು.
ಅದರಲ್ಲಿ ಒಟ್ಟು ೪೬ ಹಲಗೆಗಳಿವೆ. ಅವುಗಳಲ್ಲಿ ೨೬ನೆಯ ಹಲಗೆಯ ಮೇಲೆ ಅಪಸ್ಮಾರದ ದಾಖಲೆಯಿದೆ. ಬ್ಯಾಬಿಲೋನಿಯನ್ನರು ಅಪಸ್ಮಾರದಲ್ಲಿ
ಕಂಡುಬರುವ ಲಕ್ಷಣಗಳನ್ನಾಧರಿಸಿ, ಹಲವು ನಮೂನೆಗಳನ್ನು ಗುರುತಿಸಿದರು ಹಾಗೂ ಯಾವ ನಮೂನೆಯು ಗುಣವಾಗುತ್ತದೆ, ಯಾವುದು ಗುಣ ವಾಗುವುದಿಲ್ಲ ಎಂದು ರೋಗಪ್ರಗತಿ ಯನ್ನೂ ಸ್ಪಷ್ಟವಾಗಿ ಗುರುತಿಸಿದರು. ಬ್ಯಾಬಿಲೋನಿಯನ್ನರು ಅಪಸ್ಮಾರಕ್ಕೆ ಸಂಬಂಧಿಸಿದ ಹಾಗೆ ಕೆಲವು ಪಾರಿಭಾಷಿಕ ಪದಗಳನ್ನು ಬಳಸಿರುವುದು ನಮಗೆ ಆಶ್ಚರ್ಯವನ್ನು ಉಂಟುಮಾಡಿದೆ. ಮೊದಲನೆಯದು ‘ಮಿಖ್ತು’ (ಕೆಳಕ್ಕೆ ಬೀಳುವುದು) ಎರಡನೆಯದು ‘ಹಯ್ಯಾತು’ (ಫಿಟ್ಸ್ ಅಥವಾ ಕನ್ವಲ್ಷನ್) ಹಾಗೂ ಮೂರನೆಯದು ‘ಸಿಬ್ತು’ (ಸೀಜ಼ರ್ಸ್).
ಇಂದು ನಾವು ‘ಫಿಟ್ಸ್’ ಮತ್ತು ‘ಸೀಜ಼ರ್ಸ್’ ಶಬ್ದಗಳನ್ನು ಪರ್ಯಾಯ ಶಬ್ದಗಳಂತೆ ಬಳಸುವುದುಂಟು. ಆದರೆ ವೈಜ್ಞಾನಿಕವಾಗಿ ಇವು ಭಿನ್ನ ಭಿನ್ನ. ಫಿಟ್ಸ್ ಅಥವಾ ಕನ್ವಲ್ಷನ್ ಎಂದರೆ ವ್ಯಕ್ತಿಯು ಕೆಳಕ್ಕೆ ಬಿದ್ದು ಕೈಕಾಲುಗಳನ್ನು ಅನಿಯಂತ್ರಿತ ವಾಗಿ ಝಾಡಿಸುವುದು. ಇದು ಬದುಕಿನಲ್ಲಿ ಯಾವಾಗಲಾದ ರೊಮ್ಮೆ ಬರಬಹುದು. ಇದಕ್ಕೆ ಕಾರಣ ವಿಭಿನ್ನ. ಉದಾಹರಣೆಗೆ, ರಕ್ತದಲ್ಲಿ ಗ್ಲೂಕೋಸ್ ಅಥವಾ ಸೋಡಿಯಂ ಕಡಿಮೆ
ಯಾಗುವುದು. ಇದನ್ನು ಸುಲಭವಾಗಿ ಗುಣಪಡಿಸಬಹುದು. ಸೀಜ಼ರ್ಸ್ ಎಂದರೆ ಮಿದುಳಿನ ನರಕೋಶಗಳಲ್ಲಿ ಉಂಟಾಗುವ
ವಿದ್ಯುತ್ ಸರಬರಾಜಿನ ವ್ಯತ್ಯಯ. ನಮ್ಮ ಮನೆಗಳಲ್ಲಿ ಹೈ-ವೋಲ್ಟೇಜ್ ಬಂದಾಗ, ವಿದ್ಯುತ್ ದೀಪಗಳೆಲ್ಲ ಸುಟ್ಟು ಹೋಗುತ್ತವೆಯಲ್ಲ, ಹಾಗೆ. ಇದು ನಿಜವಾದ ಅಪಸ್ಮಾರ. ಅಪಸ್ಮಾರಕ್ಕೆ ಸಾಮಾನ್ಯವಾಗಿ ಆನುವಂಶಿಕ ಹಿನ್ನೆಲೆ ಮತ್ತು ವಂಶವಾಹಿ ವೈಪರೀತ್ಯಗಳಿರುವುದನ್ನು ಗುರುತಿಸಬಹುದು.
ಇಂಥ ಸೀಜ಼ರ್ಸ್‌ಗಳು ಮತ್ತೆ ಮತ್ತೆ ಮರುಕಳಿಸಬಹುದು. ಚಿಕಿತ್ಸೆಯು ಸಂಕೀರ್ಣವಾದದ್ದು. ಕನ್ನಡದಲ್ಲಿ ಫಿಟ್ಸ್ ಮತ್ತು ಸೀಜ಼ರ್ಸ್ ಶಬ್ದಗಳನ್ನು ಪ್ರತ್ಯೇಕವಾಗಿ ಸೂಚಿಸುವ ಶಬ್ದಗಳಿಲ್ಲ. ಎರಡಕ್ಕೂ ‘ಸೆಳವು’ ಎನ್ನುವ ಶಬ್ದವನ್ನೇ ಬಳಸುವುದುಂಟು. ಆದರೆ ನಮ್ಮ ಅನುಕೂಲಕ್ಕೆ ಫಿಟ್ಸ್ ಅಥವಾ ಕನ್ವಲ್ಷನ್ ಅನ್ನು ‘ಸರಳ ಸೆಳವು’ ಎಂದೂ, ಸೀಜ಼ರ್ಸ್ ಅನ್ನು ‘ಸಂಕೀರ್ಣ ಸೆಳವು’ ಎಂದೂ ಕರೆಯಬಹುದು. ಬ್ಯಾಬಿಲೋನಿಯನ್ನರು ಈ
ಸೂಕ್ಷ್ಮಗಳನ್ನು ಅರಿತಿದ್ದು ಅವುಗಳನ್ನು ಗುರುತಿಸಲು ಭಿನ್ನ ಶಬ್ದಗಳನ್ನು ಪ್ರಯೋಗಿಸಿದ್ದು ಅವರ ಅಧ್ಯಯನ ಹಾಗೂ ವಿಶ್ಲೇಷಣ ಸಾಮರ್ಥ್ಯಗಳಿಗೆ ಕುರುಹಾಗಿದೆ. ಆದರೆ ಅವರು ಅಪಸ್ಮಾರದ ಎಲ್ಲ ಲಕ್ಷಣಗಳಿಗೆ ದುಷ್ಟ ಶಕ್ತಿಗಳೇ ಕಾರಣ ಎಂದು ಭಾವಿಸಿದ್ದರು.
ಪ್ರಾಚೀನ ಈಜಿಪ್ಷಿಯನ್ನರಿಗೆ ಅಪಸ್ಮಾರದ ಪರಿಚಯವಿತ್ತು ಎನ್ನುವುದಕ್ಕೆ ಒಂದು ಉದಾಹರಣೆಯು ಕ್ರಿ.ಪೂ.1700ಕ್ಕೆ ಸೇರಿದ ಎಡ್ವಿನ್ ಪ್ಯಾಪಿರಸ್ ನಲ್ಲಿ ದೊರೆಯುತ್ತದೆ. ಅದು, ಒಬ್ಬನ ತಲೆಯಲ್ಲಿ ಸೀಳುಗಾಯವಾಗಿ, ಅದರ ಮೂಲಕ ಮಿದುಳು ಕಾಣುತ್ತಿತ್ತು. ಅವರು ಮಿದುಳನ್ನು ಮುಟ್ಟಿದ ಕೂಡಲೇ ವಿಪರೀತ ಸಂಕೀರ್ಣ ಸ್ವರೂಪದ ಸೆಳವು ಕಂಡು ಬಂದಿತು ಎನ್ನುತ್ತದೆ. ಇಂದು ನಾವು ಎಪಿಲೆಪ್ಸಿಗೆ ಸಮಪದವಾಗಿ ಬಳಸುತ್ತಿರುವ ‘ಅಪಸ್ಮಾರ’ ಶಬ್ದವು ಚರಕ ಮಹರ್ಷಿಗಳ ಕೊಡುಗೆ. ಅವರು ತಮ್ಮ ಚರಕಸಂಹಿತೆಯಲ್ಲಿ ಅಪಸ್ಮಾರದ ಲಕ್ಷಣಗಳನ್ನು ‘ಭೀಭರ್ತ್ಸ ಚೇಷ್ಟ’, ‘ಸ್ಮೃತಿ ಬುದ್ಧಿ ಸಂಪ್ಲವ’ ಹಾಗೂ ‘ತಮಃ ಪ್ರವೇಶ’ ಎಂದಿದ್ದಾರೆ. ಅಪಸ್ಮಾರ ರೋಗಿಯು ಕೆಳಕ್ಕೆ ಬಿದ್ದು ಕೈಕಾಲುಗಳನ್ನು ಝಾಡಿಸುವ ಭೀಕರ ದೃಶ್ಯವನ್ನು ‘ಭೀಭರ್ತ್ಸ ಚೇಷ್ಟ’ ಎಂದೂ, ಅಪಸ್ಮಾರದ ನಂತರ ವ್ಯಕ್ತಿಗೆ ಕಾಲ, ದೇಶ, ನೆನಪು ಎಲ್ಲವೂ ಭ್ರಷ್ಟವಾಗುವುದನ್ನು ‘ಸ್ಮೃತಿ ಬುದ್ಧಿ ಸಂಪ್ಲವ’ ಎಂದೂ, ತಾತ್ಕಾಲಿಕವಾಗಿ ಪ್ರಜ್ಞೆ ತಪ್ಪುವುದನ್ನು ‘ತಮಃ ಪ್ರವೇಶ’ ಎಂದೂ ಅವರು ಕರೆದಿರುವರು. ಚರಕ ಮಹರ್ಷಿಗಳ ವಿಶೇಷವೆಂದರೆ ಅಪಸ್ಮಾರವು ಸಂಭವಿಸುವ ಮೊದಲು ರೋಗಿಯು ಅನುಭವಿಸುವ ಪೂರ್ವಲಕ್ಷಣಗಳನ್ನು ಗುರುತಿಸಿರುವುದು.
ಇವನ್ನು ‘ಪೂರ್ವ ರೂಪ’ (ಪ್ರೋ-ಡ್ರೋಮಲ್ ಸಿಂಪ್ಟಮ್ಸ್) ಎಂದಿರುವರು. ಪೂರ್ವ ರೂಪ ದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಬಹುದು. ಕಣ್ಣಿಗೆ ಚಿತ್ರವಿಚಿತ್ರ ಬೆಳಕು ಕಾಣಬಹುದು. ಕಿವಿಯಲ್ಲಿ ಅರ್ಥರಹಿತ ಬ್ದಗಳು ಕೇಳಬಹುದು. ಹಸಿವು ಹಠಾತ್ತನೆ ಇಲ್ಲವಾಗ
ಬಹುದು. ಮೈಕೈ ನೋಯಬಹುದು, ಮೈಬೆವರಬಹುದು, ಕೈಕಾಲುಗಳು ಸೋತುಹೋಗಬಹುದು, ಗೊಂದಲ-ಆತಂಕ-ಕಿರಿಕಿರಿ-ವಿಪರೀತ ತಲೆನೋವು ಕಂಡುಬಂದ ನಂತರ ಅಪಸ್ಮಾರದ ಉಳಿದ ಲಕ್ಷಣಗಳು ಕಂಡುಬರಬಹುದು. ‘ತ್ರಿದೋಷಗಳಲ್ಲಿ ತಲೆದೋರುವ ವೈಪರೀತ್ಯವೇ ಅಪಸ್ಮಾರಕ್ಕೆ ಕಾರಣ’ ಎನ್ನುವುದು ಆಚಾರ್ಯ ಚರಕರ ಅಭಿಮತ.
‘ಅಪಸ್ಮಾರವು ಮಿದುಳಿಗೆ ಸಂಬಂಧಿಸಿದ ರೋಗ’ ಎಂಬ ವೈಜ್ಞಾನಿಕ ವಿವರಣೆಯನ್ನು ಬಹುಶಃ ಗ್ರೀಕರು ಮೊದಲ ಬಾರಿಗೆ ನೀಡಿದರು. ‘ಹಿಪ್ಪೋಕ್ರೇಟ್ರ್ಸ್ ಸಂಹಿತೆ’ಯಲ್ಲಿ (ಹಿಪ್ಪೋಕ್ರೇಟ್ಸ್ ಕಾರ್ಪ್ಸ್) ‘ಆನ್ ದಿ ಸೇಕ್ರೆಡ್ ಡಿಸೀಸಸ್’ ಎಂಬ ಅಧ್ಯಾಯವಿದೆ. ಇದರಲ್ಲಿ ಅಪಸ್ಮಾರವನ್ನು ‘ಪವಿತ್ರ ಬೇನೆ’ ಎಂದು ಗುರುತಿಸಿ, ದೇವಾನುದೇವತೆಗಳ ಅವಕೃಪೆಯೇ ಈ ರೋಗಕ್ಕೆ ಕಾರಣ ಎಂದು ದಾಖಲಿಸಲಾಗಿದೆ. ಆದರೆ ಸ್ವಯಂ ಹಿಪ್ಪೋಕ್ರೇಟ್ಸ್ ಇದನ್ನು ನಂಬದೆ, ‘ಎಲ್ಲ ರೋಗಗಳ ಹಾಗೆ ಇದೂ ಒಂದು ರೋಗ; ಇದರಲ್ಲಿ ಅಂಥ ಪಾವಿತ್ರ್ಯವೇನೂ ಇಲ್ಲ’ ಎಂದು ಹೇಳಿದ. ತಲೆಯ ಎಡಭಾಗಕ್ಕೆ ಪೆಟ್ಟು ಬಿದ್ದರೆ, ಸೆಳವು ದೇಹದ ಬಲಭಾಗದಲ್ಲಿ ಬರುತ್ತದೆ ಎಂದ. ಅಪಸ್ಮಾರವು ಆನುವಂಶಿಕವಾಗಿ ಬರುವ ಕಾರಣ,
ಇದು ಅಂಟುರೋಗವಲ್ಲವೆಂದ. ಅಪಸ್ಮಾರವು ಕಾಣಿಸಿಕೊಳ್ಳುವ ಮೊದಲು ಕಂಡುಬರುವ ಪೂರ್ವರೂಪ ಲಕ್ಷಣಗಳನ್ನು ವಿವರಿಸಿದ. ಅಂಥವು ಕಂಡುಬಂದಾಗ, ವ್ಯಕ್ತಿಯು ಸಾರ್ವಜನಿಕವಾಗಿ ಓಡಾಡದೆ ಮನೆಯಲ್ಲಿಯೇ ಇರಬೇಕೆಂದ. ಆದರೆ ಗ್ರೀಸ್ ಸಮಾಜವು ಅಪಸ್ಮಾರವು ಒಂದು ದೈವಿಕ ಬೇನೆ ಎಂದು ನಂಬುವುದನ್ನು ಬಿಡಲಿಲ್ಲ. ಅಪಸ್ಮಾರ ಮೌಢ್ಯಗಳು ಸಾರ್ವಕಾಲಿಕವಾಗಿವೆ ಎನ್ನುವುದು ಬೇಸರದ ವಿಚಾರ.
ಅಪಸ್ಮಾರ ಮೌಢ್ಯವು ಭಾರತವನ್ನೂ ಒಳಗೊಂಡಂತೆ ಜಗತ್ತಿನ ಹಲವು ದೇಶಗಳ ಜನರನ್ನು ಕಾಡಿದೆ ಹಾಗೂ ಕಾಡುತ್ತಿದೆ. ನಾವು ಸ್ವಾತಂತ್ರ್ಯವನ್ನು ಪಡೆದ ಮೇಲೆ ‘ಹಿಂದೂ ವಿವಾಹ ಕಾಯಿದೆ, 1955’ನ್ನು ಜಾರಿಗೆ ತಂದೆವು. ಈ ಕಾಯಿದೆಯ ಸೆಕ್ಷನ್ 5 (2), ವಿವಾಹವಾಗ ಬಯಸುವ ಗಂಡು ಮತ್ತು ಹೆಣ್ಣು ಇಬ್ಬರಿಗೂ ಯಾವುದೇ ರೀತಿಯ ಮಾನಸಿಕ ಕಾಯಿಲೆ ಗಳು ಅಥವಾ ಹುಚ್ಚು ಇರಬಾರದು ಎನ್ನುತ್ತದೆ. ಅಪಸ್ಮಾರವು ಒಂದು ಮಾನಸಿಕ ಕಾಯಿಲೆ ಅಥವಾ ಹುಚ್ಚಿನ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಆಗಿನವರು ಪರಿಗಣಿಸಿದ್ದರು. ಈ ನಂಬಿಕೆಗೆ ಯಾವುದೇ ವೈಜ್ಞಾನಿಕ ಅಥವಾ ವೈದ್ಯಕೀಯ ಪುರಾವೆಗಳಿರಲಿಲ್ಲ. ಕೇವಲ ಸಾಮಾಜಿಕ ಧೋರಣೆಯನ್ನು ಅನುಸರಿಸಿಅವರು ಈ ತೀರ್ಮಾನಕ್ಕೆ ಬಂದಿದ್ದರು. ಹುಡುಗ ಅಥವಾ ಹುಡುಗಿಗೆ ಅಪಸ್ಮಾರ ಇರುವುದನ್ನು ಹೆತ್ತವರು ಹೇಳುತ್ತಿರಲಿಲ್ಲ, ಮುಚ್ಚಿಡುತ್ತಿದ್ದರು. ಹೀಗೆ ಮುಚ್ಚಿಟ್ಟು ಮದುವೆ ಮಾಡಿದ ಮೇಲೆ, ಅಪಸ್ಮಾರ ಇರುವುದು ಅಕಸ್ಮಾತ್ ಗೊತ್ತಾದರೆ, ಅಂಥವರ ಜತೆಯಲ್ಲಿ ಬದುಕಲು ಇಷ್ಟಪಡುತ್ತಿರಲಿಲ್ಲ. ಹಾಗಾಗಿ ಅವರ ವಿವಾಹ ವಿಚ್ಛೇದನಕ್ಕೆ ನ್ಯಾಯಾಲಯವು ಈ ಕಾಯಿದೆಯ ಸೆಕ್ಷನ್ 12ರ ಅಡಿಯಲ್ಲಿ ಅನುಮತಿಯನ್ನು ನೀಡುತ್ತಿತ್ತು.
ವೈದ್ಯರು ಅಪಸ್ಮಾರದ ಕಾರಣ ವಿವಾಹ ವಿಚ್ಛೇದನವನ್ನು ನೀಡುವುದು ಅಮಾನವೀಯ, ಅವೈಜ್ಞಾನಿಕ, ಅರ್ಥಹನ ವಾದ ಕಾನೂನು ಎಂದರು. ಕೊನೆಗೆ ಭಾರತದ ನರವಿಜ್ಞಾನ ತಜ್ಞರು ಕೇಂದ್ರ ಸರಕಾರದ ಮೇಲೆ ನಿರಂತರವಾಗಿ ಒತ್ತಡವನ್ನು ತಂದರು. ಕೊನೆಗೆ 1999ರಲ್ಲಿ ‘ಹಿಂದು ವಿವಾಹ ಕಾಯಿದೆ, 1955’ಕ್ಕೆ ತಿದ್ದುಪಡಿಯನ್ನು ತಂದರು. ಮಾನಸಿಕ ಹಾಗೂ ಹುಚ್ಚು ರೋಗಗಳ ಪಟ್ಟಿಯಿಂದ ಅಪಸ್ಮಾರವನ್ನು ತೆಗೆದು
ಹಾಕಿದರು. ಅಪಸ್ಮಾರವು ನರ ಹಾಗೂ ಮಿದುಳಿಗೆ ಸಂಬಂಧಿಸಿದ ರೋಗ ಎನ್ನುವುದನ್ನು ನಮ್ಮ ಸರಕಾರವು ಒಪ್ಪಿತು. ಆದರೆ ಗ್ರಾಮೀಣ ಭಾರತವು ಬದಲಾಗಿಲ್ಲ. ಹುಡುಗ-ಹುಡುಗಿಯ ನಡುವೆ ಎಲ್ಲ ಅಂಶಗಳು ಹೊಂದಿಕೆಯಾದರೆ, ಅವರು ಮದುವೆಯಾಗಬಹುದು. ಹುಟ್ಟುವ ಮಕ್ಕಳಿಗೆ ಅಪಸ್ಮಾರ ಸಂಭವ ಸಾಧ್ಯತೆಯ ಬಗ್ಗೆ ತಜ್ಞರಲ್ಲಿ ಚರ್ಚಿಸಿ ಮಾರ್ಗ ದರ್ಶನವನ್ನು ಪಡೆಯಬಹುದು.
ಅಪಸ್ಮಾರಿಗಳಿಗೆ ಉದ್ಯೋಗವು ಸುಲಭವಾಗಿ ದೊರೆಯು ವುದಿಲ್ಲ. ಭಾರತದಲ್ಲಿ ಇವರಿಗೆ ವಾಹನ ಚಾಲನ ಪರವಾನಗಿ ಯನ್ನು ನೀಡುವುದಿಲ್ಲ. ಹಾಗಾಗಿ ಇವರು ಯಾವುದೇ ರೀತಿಯ ವಾಹನವನ್ನಾಗಲಿ (ಬೈಕ್, ಕಾರು, ಟ್ರಕ್, ರೈಲು, ವಿಮಾನ) ನಡೆಸುವಂತಿಲ್ಲ. ಕಾರ್ಖಾನೆಗಳಲ್ಲಿ ಅಪಾಯಕಾರಿ ಯಂತ್ರಗಳೊಡನೆ ಕೆಲಸ ಮಾಡಲು ಇವರನ್ನು ಬಿಡುವುದಿಲ್ಲ. ಎತ್ತರದಲ್ಲಿ, ಬೆಂಕಿಯ ಬಳಿ, ನೀರಿನ ಸಮೀಪ ಮಾಡುವ
ಕೆಲಸಕ್ಕೆ ಅವರನ್ನು ನಿಯೋಜಿಸುವುದಿಲ್ಲ. ಒಂದೆಡೆ ಕುಳಿತು ಮಾಡಬಹುದಾದ ಕೆಲಸಗಳು ಇವರಿಗೆ ಸೂಕ್ತವಾಗಬಲ್ಲವು. ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಇವರಿಗೆ ಕೆಲಸವು ಸುಲಭವಾಗಿ ದೊರೆಯುತ್ತದೆ. ಆದರೆ ಖಾಸಗಿ ಸಂಸ್ಥೆಗಳಲ್ಲಿ ಹಾಗೆ ಹೇಳಲು ಬರುವುದಿಲ್ಲ.
ಜಗತ್ತಿನ ಬಹಳಷ್ಟು ದೇಶಗಳು ಅಪಸ್ಮಾರ ಸಂಬಂಧಿತ ಮೌಢ್ಯಗಳಿಂದ ನಿವಾರಣೆಯಾಗಿವೆ ಎನ್ನಬಹುದು. ನಗರ ಪ್ರದೇಶಗಳಲ್ಲಿ ತಾರತಮ್ಯವು ಹೆಚ್ಚಾಗಿ ಕಂಡುಬರದಿದ್ದರೂ ಗ್ರಾಮಾಂತರ ಪ್ರದೇಶಗಳಲ್ಲಿ ಅಷ್ಟಾಗಿ ಬದಲಾಗಿಲ್ಲ ಎನ್ನುವುದು ಸತ್ಯ. ಈ ಸರ್ವನಿಯಮಕ್ಕೆ ವಿನಾಯಿತಿ ಎಂದರೆ ಮಧ್ಯಪ್ರಾಚ್ಯದೇಶಗಳು. ಅಲ್ಲಿನವರು ಅಪಸ್ಮಾರಕ್ಕೆ ದೈವಪ್ರಕೋಪವೇ ಕಾರಣ ಎಂದು ನಂಬುತ್ತಾರೆ. ಅವರು ಧಾರ್ಮಿಕ ಹಿನ್ನೆಲೆಯಲ್ಲಿ ಅಪಸ್ಮಾರವನ್ನು ಗಂಭೀರವಾಗಿ ಪರಿಗಣಿಸುವ ಕಾರಣ, ಅಪಸ್ಮಾರಿಗಳಿಗೆ ಮುಕ್ತ ಬದುಕನ್ನು ನಡೆಸಲು ಅನುಮತಿ ಯನ್ನು ನೀಡುತ್ತಿಲ್ಲ. ವಿಶೇಷವಾಗಿ ಹೆಣ್ಣುಮಕ್ಕಳ ಬದುಕು ಅಸಹನೀಯವಾಗಿದೆ. ಆಧುನಿಕ ವೈದ್ಯಕೀಯವು ಅಪಸ್ಮಾರ ವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸು ತ್ತಿದ್ದರೂ, ಅವರು ತಮ್ಮ ನಿಲುವನ್ನು ಬದಲಿಸುತ್ತಿಲ್ಲ.
ಗಂಭೀರ ಸ್ವರೂಪದ ಅಪಸ್ಮಾರಿಗಳ ದೈನಂದಿನ ಬದುಕನ್ನು ಸಹನೀಯವಾಗಿಸಲು, ಜಗತ್ತಿನ ಅನೇಕ ದೇಶಗಳಲ್ಲಿ ಅಪಸ್ಮಾರದ ಸೆಳವನ್ನು ಪತ್ತೆಹಚ್ಚಬಲ್ಲ ನಾಯಿಗಳನ್ನು ತರಬೇತುಗೊಳಿಸಿದ್ದಾರೆ. ಇವು ಅಪಸ್ಮಾರ ಸಂಭವ ಸಾಧ್ಯತೆ ಯನ್ನು ತಿಳಿದು, ವ್ಯಕ್ತಿಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊ ಯ್ಯುತ್ತವೆ. ನೆದರ್‌ಲ್ಯಾಂಡಿನಲ್ಲಿ ‘ಹೀಜ಼್’ ಎಂಬ ಹಳ್ಳಿಯಿದ್ದು ಇದು ಕೇವಲ ಅಪಸ್ಮಾರಿಗಳಿಗಾಗಿಯೇ ಮೀಸಲಾಗಿದೆ. ಅಪಸ್ಮಾರಿಗಳು ಈ ಹಳ್ಳಿಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಾ ನೆಮ್ಮದಿಯಿಂದ ಇದ್ದಾರೆ.
ಇದನ್ನೂ ಓದಿ: dr na someshwara