Wednesday, 25th September 2024

Dr N Someswara Column: ಚೀನಿ ಆಸ್ಪತ್ರೆಗಳ ಬೌದ್ಧ ಮೂಲ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಸಾಂಪ್ರದಾಯಿಕ ಚೀನಿ ವೈದ್ಯಕೀಯವು ಪ್ರಪಂಚದ ಅತ್ಯಂತ ಪ್ರಾಚೀನ ವೈದ್ಯಕೀಯ ಪದ್ಧತಿಗಳಲ್ಲಿ ಒಂದು. ಇದು ಸುಮಾರು ೪೦೦೦ ವರ್ಷಗಳ ಹಿಂದೆ ಹುಟ್ಟಿತು ಎನ್ನಬಹುದು. ಸಾಂಪ್ರದಾಯಿಕ ಚೀನಿ ವೈದ್ಯಕೀಯದ ವಿಶೇಷ ಗಳಲ್ಲಿ ಸೂಜಿಚಿಕಿತ್ಸೆ (ಆಕ್ಯು ಪಂಕ್ಚರ್), ಚೀನಿ ಮೂಲಿಕಾ ಚಿಕಿತ್ಸೆ, ಸುಡು ಚಿಕಿತ್ಸೆ (ಮಾಕ್ಸಿಬಶನ್) ಮಸಾಜು, ರಕ್ತವಿಮೋಚನ ಮತ್ತು ಕಪ್ಪಿಂಗ್ ಮುಖ್ಯವಾದವು. ಚೀನಾವನ್ನು ಶಾಂಗ್ ವಂಶವು (ಕ್ರಿ.ಪೂ.೧೬೦೦-ಕ್ರಿ.ಪೂ.೧೦೪೬) ಆಳುತ್ತಿದ್ದ ಅವಧಿಯಲ್ಲಿ ಸಾಂಪ್ರದಾಯಿಕ ಚೀನಿ ವೈದ್ಯಕೀಯವು ಆರಂಭವಾಯಿತು ಎನ್ನಲಾಗಿದೆ.

ಆಗ ಚೀನಿಯರ ವೈದ್ಯಕೀಯ ಅಧಿದೇವತೆ ‘ಶಾಂಗ್‌ಡಿ’. ಆ ದೇವತೆಯ ಆಸ್ಥಾನದಲ್ಲಿ ಅದುವರೆಗೂ ಸತ್ತ ಹಿರಿಯರ ಆತ್ಮಗಳು ಇರುತ್ತವೆ ಎಂಬುದು ಅವರ ನಂಬಿಕೆಯಾಗಿತ್ತು. ಚೀನಿಯರ ಅಭಿಪ್ರಾಯದಲ್ಲಿ ರೋಗ- ರುಜಿನಗಳು ಬರಲು ಎರಡು ಕಾರಣಗಳಿದ್ದವು. ಮೊದಲನೆಯದು ದುಷ್ಟ ಶಕ್ತಿಯ ಪ್ರಕೋಪ ಹಾಗೂ ಎರಡನೆಯದು
ಹಿರಿಯರ ಶಾಪ. ಚೀನಿ ವೈದ್ಯಕೀಯವನ್ನು ಕೇವಲ ನಾರು-ಬೇರುಗಳ ಚಿಕಿತ್ಸಾ ಪದ್ಧತಿ ಎಂದು ಲಘುವಾಗಿ ಪರಿಗಣಿಸಬೇಕಾಗಿಲ್ಲ. ಇವರ ಪದ್ಧತಿಯಲ್ಲಿ ಬಳಸುವ, ಸೇವಂತಿಗೆ ಹೂವಿನ ಜಾತಿಗೆ ಸೇರಿದ ‘ಆರ್ಟಿಮೀಸಿಯ ಆನುವ’ ಎಂಬ ಗಿಡದಿಂದ ‘ಆರ್ಟಿಮಿಸಿನಿನ್’ ಎಂಬ ಔಷಧವನ್ನು ಸೃಜಿಸಲಾಗಿದೆ.

ಇದು ಉತ್ತಮ ಮಲೇರಿಯ-ರೋಧಕ ಔಷಧವಾಗಿ ಪ್ರಚಲಿತದಲ್ಲಿದೆ. ಈ ಔಷಧವನ್ನು ರೂಪಿಸಿದ ಪ್ರೊ.ತೊ ಯು
ಯು ಅವರಿಗೆ ೨೦೧೫ರ ನೊಬೆಲ್ ಪಾರಿತೋಷಕ ಲಭಿಸಿದೆ. ಹಾಗಾಗಿ ಚೀನಿ ಮೂಲಿಕೆಗಳಲ್ಲಿ ಅತ್ಯುಪಯುಕ್ತ ಔಷಧಗಳ ಕ್ರಮಬದ್ಧ ಅಧ್ಯಯನ ನಡೆಯಬೇಕಿದೆ ಎನ್ನಬಹುದು. ಸಾಂಪ್ರದಾಯಿಕ ಚೀನಿ ವೈದ್ಯಕೀಯವು ಮನುಷ್ಯನ ಆರೋಗ್ಯವನ್ನು ಯಿನ್-ಯಾಂಗ್ ಎಂಬ ಎರಡು ಪ್ರಾಕೃತಿಕ ಶಕ್ತಿಗಳು (ಯಿನ್=ಪ್ರಕೃತಿ; ಯಾಂಗ್= ಪುರುಷ) ನಿಯಂತ್ರಿಸುತ್ತವೆ ಎಂದು ನಂಬುತ್ತದೆ. ಈ ಪ್ರಾಕೃತಿಕ ಶಕ್ತಿಗಳು ಯಾವ ಯಾವ ಅಂಗಗಳ ಮೇಲೆ ಪರಿಣಾಮವನ್ನು ಬೀರುತ್ತವೆ ಎನ್ನುವ ವಿವರಣೆಯೂ ಲಭ್ಯವಿದೆ.

ಪ್ರಾಚೀನ ಚೀನಾದಲ್ಲಿ ಆಸ್ಪತ್ರೆಗಳು ‘ಇದ್ದವೇ’ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಕ್ರಿ.ಪೂ. ೨ನೆಯ ಶತಮಾನ
ದಲ್ಲಿ ಬೌದ್ಧ ಧರ್ಮವು ಚೀನಾವನ್ನು ಪ್ರವೇಶಿಸಿತು. ಬೌದ್ಧ ಧರ್ಮದೊಡನೆ ಸನಾತನ ಭಾರತೀಯ ಚಿಕಿತ್ಸಾ ಪದ್ಧತಿಗಳೂ ಚೀನಾವನ್ನು ಪ್ರವೇಶಿಸಿದವು. ಬೌದ್ಧ ಧರ್ಮದಲ್ಲಿ ಆಸ್ಪತ್ರೆಗಳೆಂಬ ಪರಿಕಲ್ಪನೆಗಳಿಗೆ ಅವಕಾಶವಿತ್ತು. ಹಾಗಾಗಿ ಚೀನಾದಲ್ಲಿನ ಇಂದಿನ ಆಸ್ಪತ್ರೆಗಳ ಮೂಲರೂಪವು ಬೌದ್ಧ ಭಿಕ್ಷುಗಳಿಂದ ಆರಂಭವಾಯಿತು ಎನ್ನಬ ಹುದು.

ಬೌದ್ಧ ಭಿಕ್ಷುಗಳ ಪೈಕಿ ಕೆಲವರು ‘ಚಿಕಿತ್ಸಾ ಭಿಕ್ಷುಗಳು’ (ಹೀಲರ್ ಮಾಂಕ್ಸ್) ಆಗಿರುತ್ತಿದ್ದರು. ಅವರು ‘ಬರಿಗಾಲಿನ ವೈದ್ಯರು’ ಎನ್ನುವ ಪರಿಕಲ್ಪನೆಯ ಮೂಲವಾಗಿದ್ದರು ಎನ್ನಬಹುದು. ಇವರು ಒಂದು ಸ್ಥಳದಲ್ಲಿ ಇರುತ್ತಿರಲಿಲ್ಲ. ಊರಿನಿಂದ ಊರಿಗೆ, ನಗರದಿಂದ ನಗರಕ್ಕೆ ಪ್ರಯಾಣವನ್ನು ಮಾಡುತ್ತಿದ್ದರು. ಅಗತ್ಯವಿದ್ದ ಸ್ಥಳಗಳಲ್ಲಿ ಅಲ್ಪಕಾಲ ತಂಗುತ್ತಿದ್ದರು. ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದರು. ಈ ಪಯಣದಲ್ಲಿಯೂ ಅವರು ವಿದ್ಯಾರ್ಥಿಗಳಾಗಿದ್ದರು. ಸ್ಥಳೀಯರಿಂದ ಏನೆಲ್ಲ ಕಲಿಯಬಹುದಿತ್ತೋ ಅದನ್ನು ಕಲಿಯುತ್ತಿದ್ದರು. ಮುಖ್ಯವಾಗಿ ಅವರು ಬಳಸುತ್ತಿದ್ದ ಮೂಲಿಕೆಗಳು, ಖನಿಜ, ಮುತ್ತುರತ್ನ, ಅಸ್ಥಿಯುಳಿಕೆ, ಪ್ರಾಣಿ ಜನ್ಯ ಪದಾರ್ಥ ಹೀಗೆ ಔಷಧ ವೆಂದು ಉಪಯೋಗಿಸಬಹುದಾಗಿದ್ದ ಎಲ್ಲ ವಸ್ತುಗಳ ಬಗ್ಗೆ ಕಲಿಯಲಾರಂಭಿಸಿದರು

ಹಾಗೂ ಸಂಗ್ರಹಿಸಲಾರಂಭಿಸಿದರು. ಹಾಗಾಗಿ ಚೀನಾ ದೇಶಾದ್ಯಂತ ಈ ಚಿಕಿತ್ಸಾ ಭಿಕ್ಷುಗಳು ತಮ್ಮ ಪ್ರಭಾವವನ್ನು
ಬೀರಿದರು. ಕ್ರಿ.ಶ. ೩ನೆಯ ಶತಮಾನದಿಂದ ೮ನೆಯ ಶತಮಾನದ ವೇಳೆಗೆ ಬೌದ್ಧರ ವೈದ್ಯಕೀಯವು ಚೀನಾದಲ್ಲಿ
ಅತ್ಯಂತ ಜನಪ್ರಿಯವಾಯಿತು. ಈ ಜನಪ್ರಿಯತೆಯು ಶ್ರೀಸಾಮಾನ್ಯರಲ್ಲಿ ಇದ್ದಂತೆ ಆಳುವ ವರ್ಗ, ಸಿರಿವಂತರ
ವರ್ಗದಲ್ಲೂ ಏಕರೂಪವಾಗಿ ಇದ್ದದ್ದು ಗಮನೀಯ.

ಆರಂಭದ ದಿನಗಳಲ್ಲಿ ಅಲೆಮಾರಿಗಳಾಗಿ, ಮನೆಯಿಂದ ಮನೆಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದ ಚಿಕಿತ್ಸಾ ಭಿಕ್ಷುಗಳು,
ಕ್ರಮೇಣ ಒಂದೆಡೆ ನಿಂತರು. ಆಗ ಜನರು ಇವರಿದ್ದ ಸ್ಥಳಕ್ಕೆ ಹುಡುಕಿಕೊಂಡು ಬರಲಾರಂಭಿಸಿದರು. ಹೀಗೆ ಪ್ರಾಥಮಿಕ ಸ್ವರೂಪದ ಆಸ್ಪತ್ರೆಗಳು ಇಡೀ ಚೀನಾದಲ್ಲಿ ವ್ಯಾಪಿಸಿದವು. ಈ ಆಸ್ಪತ್ರೆಗಳಲ್ಲಿ ‘ಭೈಷಜ್ಯ ಬುದ್ಧ’ನು ಸ್ಥಾಪಿತನಾದ. ಈತನ ಪೂರ್ಣ ಹೆಸರು ‘ಭೈಷಜ್ಯ-ಗುರು-ವೈಡೂರ್ಯ-ಪ್ರಭಾ -ರಾಜ’. ಎಲ್ಲ ರೀತಿಯ ರೋಗಗಳನ್ನು ವೈದ್ಯನಾದ ಬುದ್ಧನು ಗುಣಪಡಿಸಬಲ್ಲ (ಲೌಕಿಕ ಮತ್ತು ಪಾರಮಾರ್ಥಿಕ ದುಃಖನಿವಾರಕ) ಎನ್ನುವ ನಂಬಿಕೆ ಚೀನಿಯರಲ್ಲಿ ಹರಡಿತು.

‘ಭೈಷಜ್ಯ-ಗುರು-ವೈಡೂರ್ಯ-ಪ್ರಭಾ-ರಾಜಾ-ಸೂತ್ರ’ ಎಂಬ ಗ್ರಂಥವು ಪ್ರಸಿದ್ಧವಾಯಿತು. ಹ್ಯೂಯನ್ ತ್ಸಾಂಗ್,
ಆಫ್ಘಾನಿಸ್ತಾನದ ಬಾಮಿಯಾನ್ ಬೌದ್ಧರ ವೈದ್ಯ ವಿದ್ಯಾಲಯಕ್ಕೆ ಬಂದಿದ್ದ (ಕ್ರಿ.ಶ.೭ನೆಯ ಶತಮಾನ). ಅವನು ಅಲ್ಲಿದ್ದ ವೈದ್ಯಕೀಯ ಗ್ರಂಥಗಳನ್ನು ಸಂಗ್ರಹಿಸಿದ. ಇದು ಅಂದಿನ ದಿನಗಳಲ್ಲಿ ‘ಗಾಂಧಾರ ದೇಶ’ವೆಂದು ಪ್ರಸಿದ್ಧವಾಗಿತ್ತು. ಗುಪ್ತರ ಕಾಲದ ಸಂಸ್ಕೃತದಲ್ಲಿ ಈ ಬೌದ್ಧ ಆರೋಗ್ಯ ಗ್ರಂಥವು ರಚನೆಯಾಗಿದೆ. ಪಾಲಿ ಭಾಷೆಯ
ಮೂಲ ಗ್ರಂಥವನ್ನು ಚೀನಿ ಭಾಷೆಗೆ, ಶ್ರೀಮಿತ್ರ (ಕ್ರಿ.ಶ. ೪ನೆಯ ಶತಮಾನ), ಧರ್ಮಗುಪ್ತ (ಕ್ರಿ.ಶ. ೬೧೫),
ಹ್ಯೂಯನ್ ತ್ಸಾಂಗ್ (ಕ್ರಿ.ಶ. ೬೫೦) ಮತ್ತು ಇತ್ಸಿಂಗ್ (ಕ್ರಿ. ಶ. ೭೦೭) ಹೀಗೆ ನಾಲ್ವರು ಅನುವಾದಿಸಿರುವರು.

‘ಭೈಷಜ್ಯ-ಗುರು-ವೈಡೂರ್ಯ-ಪ್ರಭಾ-ರಾಜಾ-ಸೂತ್ರ’ ಗ್ರಂಥದಲ್ಲಿ ಒಂದು ಮಂತ್ರವಿದೆ. ಇದನ್ನು ಜಪಿಸುತ್ತಾ
ಜಪಿಸುತ್ತಾ ‘ಧ್ಯಾನ’ ಸ್ಥಿತಿಗೆ ಹೋಗಬಹುದು. ಹಾಗೆ ಹೋದಾಗ ‘ಎಲ್ಲ ರೀತಿಯ ಕಾಯಿಲೆಗಳು ನಿವಾರಣೆಯಾಗುತ್ತವೆ’
ಎನ್ನುವ ಉಲ್ಲೇಖವಿದೆ. ಆ ಮಂತ್ರವು ‘ನಮೋ ಭಗವತೇ ಭೈಷಜ್ಯ ಗುರು | ವೈಡೂರ್ಯ ಪ್ರಭಾ ರಾಜರಾಜಾಯ
ತಥಾಗತಾಯ | ಅರ್ಹತೆ ಸಮ್ಯಕ್ಸಂಬುದ್ಧಾಯ ತದ್ಯಥಾ | ಓಂ ಭೈಷಜ್ಯೇ ಭೈಷಜ್ಯೇ ಭೈಷಜ್ಯಾ ಸಮುದ್ಗತೆ ಸ್ವಾಹಾ ||’
ಎಂದಿದೆ. ಕೊನೆಯ ಸಾಲನ್ನು ಮಾತ್ರ ಸಂಕ್ಷಿಪ್ತ ರೂಪದ ಮಂತ್ರವಾಗಿ ಬಳಸುವ ಪದ್ಧತಿಯು ಜನಪ್ರಿಯವಾಯಿತು.

ಚೀನಿಯರು, ಪಾಲಿ ಮೂಲದ ಈ ಬುದ್ಧನ ಚಿಕಿತ್ಸಾ ಮಂತ್ರದ ಕೊನೆಯ ಸಾಲನ್ನು ಮಾತ್ರ ಜಪಿಸುತ್ತಿದ್ದರು. ಆ
ಸಂಕ್ಷಿಪ್ತ ಸಾಲು ಹೀಗಿದೆ: ‘ತಯಾತ ಓಂ, ಬೆಕಾಂಡ್ಜೆ ಬೆಕಾಂಡ್ಜೆ, ಮಹಾ ಬೆಕಾಂಡ್ಜೆ, ರಾದ್ಜಾ ಸಮುದ್ಗತೆ ಸೋಹ’
ಇದು ‘ತಯಾತ ಓಂ’ ಎಂದು ಪ್ರಸಿದ್ಧವಾಗಿದೆ. ‘ನೋವು ನಿವಾರಕ ಮಹಾವೈದ್ಯನೇ ನಮ್ಮನ್ನು ರಕ್ಷಿಸು’ ಎಂಬರ್ಥದ
ಈ ಮಂತ್ರವು ಮನುಷ್ಯನ ನೇತ್ಯಾತ್ಮಕ ಶಕ್ತಿಗಳನ್ನು ನಿರ್ವೀರ್ಯಗೊಳಿಸಿ ಆರೋಗ್ಯವನ್ನು ತರುತ್ತದೆ ಎನ್ನುವುದು
ಚೀನಿಯರ ನಂಬಿಕೆ. ಹಾಗಾಗಿ ಈ ಮಂತ್ರವು ಇಹ-ಪರಗಳಿಗೆ ಉಪಯುಕ್ತವಾದದ್ದು. ಇಂದಿಗೂ ಈ ಮಂತ್ರವು ಜನಪ್ರಿಯವಾಗಿದೆ.

ಬೌದ್ಧ ಧರ್ಮವನ್ನು ಆಧರಿಸಿದ ವೈದ್ಯಕೀಯ ಚಿಕಿತ್ಸೆಗಳು ಚೀನಾದಿಂದ ಜಪಾನ್, ಕೊರಿಯಾ, ವಿಯೆಟ್ನಾಂ, ರಷ್ಯಾ
ಮತ್ತು ಟಿಬೆಟ್‌ನಂಥ ದೇಶಗಳಿಗೆ ಹರಡಿದವು. ಕಾಲಕ್ರಮೇಣ ಪ್ರಾದೇಶಿಕವಾಗಿ ಅಲ್ಪ-ಸ್ವಲ್ಪ ಬದಲಾವಣೆಗಳು
ಕಂಡುಬಂದರೂ, ಮೂಲ ಲಕ್ಷಣಗಳು ಏಕರೂಪವಾಗಿವೆ. ಈ ಎಲ್ಲ ದೇಶಗಳಲ್ಲಿ ಆಧುನಿಕ ವೈದ್ಯಕೀಯವು ಮನೆ
ಮಾಡಿದ್ದರೂ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳು ಇಂದಿಗೂ ಅಸ್ತಿತ್ವದಲ್ಲಿ ಹಾಗೂ ಬಳಕೆಯಲ್ಲಿವೆ. ಟಿಬೆಟ್ಟಿನಲ್ಲಿ ಕ್ರಿ.ಪೂ.೨೦೦ರ ಅವಧಿಯ ‘ಜಮ್-ಮತ್ಸ ಡ್ರೆಲ್’ ಎಂಬ ಗ್ರಂಥವಿದೆ. ಆ ಗ್ರಂಥದ ಅನ್ವಯ, ಟಿಬೆಟ್ಟಿನಲ್ಲಿ ೧೨ ಮಹಾನ್ ಪಂಡಿತರು ಇದ್ದರು. ಇವರಲ್ಲಿ ಒಬ್ಬನು ವೈದ್ಯನಾಗಿದ್ದ. ಇವನು ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸುತ್ತಿದ್ದ. ಅಂದರೆ ಬೌದ್ಧ ಧರ್ಮವು ಟಿಬೆಟ್ಟನ್ನು ಪ್ರವೇಶಿಸುವ ಮೊದಲೇ, ಅಲ್ಲಿ ಅವರದ್ದೇ ಚಿಕಿತ್ಸಾ ಪದ್ಧತಿಯು ಇತ್ತು ಎನ್ನಬಹುದು.

ಬೌದ್ಧಧರ್ಮವು ಟಿಬೆಟ್ ದೇಶವನ್ನು ಕ್ರಿ.ಶ.೨೪೫-ಕ್ರಿ.ಶ.೩೬೪ರ ನಡುವೆ ಪ್ರವೇಶಿಸಿತು. ಇಬ್ಬರು ಬೌದ್ಧ ಭಿಕ್ಷುಗಳು- ‘ಬಿಜಿ ಗಾಜೆ’ ಮತ್ತು ‘ಬಿಲಾ ಗಾಜೆ’- ಟಿಬೆಟ್ಟಿನಿಂದ ತಕ್ಷಶಿಲಾ ವಿಶ್ವವಿದ್ಯಾಲಯಕ್ಕೆ ಆಗಮಿಸಿದರು. ‘ಆಚಾರ್ಯ ಆತ್ರೇಯ’ರಲ್ಲಿ ವೈದ್ಯಕೀಯವನ್ನು ಕಲಿತರು. ನಂತರ ಅವರು ಮಗಧ ದೇಶಕ್ಕೆ ಬಂದು ‘ಕುಮಾರ ಜೀವಕ’ನಲ್ಲಿ ಉನ್ನತ ವೈದ್ಯಕೀಯ ಶಿಕ್ಷಣವನ್ನು ಪಡೆದರು. ನಂತರ ಟಿಬೆಟ್ಟಿಗೆ ಹಿಂದಿರುಗಿದರು. ಟಿಬೆಟ್ಟಿನ ಅರಸ ‘ಲಾ ತೋತೊ-ರಿ-ನ್ಯಾನ್ತ್ಸೆನ್’ ಇಬ್ಬರನ್ನು ತನ್ನ ಅರಮನೆಗೆ ಆಹ್ವಾನಿಸಿದ. ಅರಮನೆಯಲ್ಲಿ ಉಳಿದು, ಅರಮನೆಯನ್ನೇ ತಮ್ಮ ಚಿಕಿತ್ಸೆಗೆ ಬಳಸಿಕೊಳ್ಳಲು ಅನುಮತಿ ನೀಡಿದ. ಜತೆಗೆ ಹಿರಿಯ ಬಿಲಾ ಗಾಜೆಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ. ಇವರು ಅರಮನೆ ಯಲ್ಲಿಯೇ ಆಸ್ಪತ್ರೆಯನ್ನು ನಡೆಸಿ, ಅಮರರಾದರು. ಆವರ ಆತ್ಮಗಳು ಟಿಬೆಟಿಯನ್ ಆಸ್ಪತ್ರೆಗಳನ್ನು ‘ಅರಮನೆ’ಗಳೆಂದು ಕರೆಯುವ ವಾಡಿಕೆ ಇಂದೂ ಇದೆ.

ಕ್ರಿ.ಶ. ೮ನೆಯ ಶತಮಾನದಲ್ಲಿ ‘ಸಾಮ್ಯೆ ಮಠ’ವನ್ನು ಸ್ಥಾಪಿಸಲಾಯಿತು. ಇದು ಸಹ ಒಂದು ಆಸ್ಪತ್ರೆಯೇ! ಟಿಬೆಟಿ ಯನ್ ವೈದ್ಯಕೀಯವು ಆತ್ಮ -ಮನಸ್ಸು-ದೇಹಗಳನ್ನು ಒಂದೇ ಘಟಕ ಎಂದು ಭಾವಿಸುತ್ತದೆ. ದೇಹಕ್ಕೆ ಮಾತ್ರ ಚಿಕಿತ್ಸೆಯನ್ನು ನೀಡುವ ಪರಿಕಲ್ಪನೆಯಿಲ್ಲ. ಹಾಗಾಗಿ ಈ ಆಸ್ಪತ್ರೆಗಳಲ್ಲಿ ಲಾಮಾಗಳು ಆತ್ಮೋದ್ಧಾರಕ್ಕಾಗಿ ಮಾರ್ಗ ದರ್ಶನವನ್ನು ಕೊಡುವು ದುಂಟು. ಅವರ ಜತೆಯಲ್ಲಿ, ದೈಹಿಕ ಮತ್ತು ಮಾನಸಿಕ ವ್ಯಾಧಿಗಳಿಗೆ ಸಸ್ಯೌಷಧಿ ಮತ್ತು ಇತರ ಸ್ವರೂಪದ ಚಿಕಿತ್ಸೆಗಳನ್ನು ನೀಡುವವರೂ ಇರುತ್ತಾರೆ. ಪರಂಪರಾನುಗತವಾಗಿ ಬಂದ ‘ನಾಲ್ಕು ತಂತ್ರಗಳು’ (ಗ್ಯೂಡ್-ಜಿ) ಎನ್ನುವ ಗ್ರಂಥವು ಓರ್ವ ರೋಗಿಯ ರೋಗನಿದಾನ ಹಾಗೂ ಸೂಕ್ತ ಚಿಕಿತ್ಸೆಯನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ.

ಸಾಂಪ್ರದಾಯಿಕ ಚೀನಿ ವೈದ್ಯಕೀಯ ಚಿಕಿತ್ಸಾ ಪದ್ಧತಿಯು ಅನೇಕ ಉತ್ತಮ ಔಷಧಿಗಳನ್ನು ಒಳಗೊಂಡಿದೆ ಎನ್ನುವುದು ಅತಿಶಯದ ಮಾತಲ್ಲ. ದೇಹ-ಮನಸ್ಸು-ಆತ್ಮಗಳಿಗೆ ಒಟ್ಟಿಗೆ ಚಿಕಿತ್ಸೆ ನೀಡಬೇಕು ಎನ್ನುವುದು ಶ್ಲಾಘನೀಯ ವಿಚಾರ. ಚೀನಿ ಪದ್ಧತಿಯಲ್ಲಿ ಬಳಸುವ ಮೂಲಿಕೆಗಳಲ್ಲಿ ಉತ್ತಮ ಔಷಧಿಯ ಘಟಕಗಳು ಇವೆ ಎನ್ನುವುದು ಈಗಾಗಲೇ ನಮಗೆ ತಿಳಿದಿದೆ.