ಸೃಷ್ಟೀಕರಣ
ಶತಾವದಾನಿ ಡಾ.ಆರ್.ಗಣೇಶ್
ಒಂದು ವರ್ಷಕ್ಕೂ ಮುನ್ನ ಡಿ.ವಿ.ಜಿ. ಅವರ ಜ್ಞಾಪಕ ಚಿತ್ರಶಾಲೆಯನ್ನು ಕುರಿತು ಮಾತನಾಡುವಾಗ, ಅದರ ಐದ ನೆಯ ಭಾಗದಲ್ಲಿ ಬರುವ ಪ್ರಕರಣವೊಂದನ್ನು ವಿವರಿಸಬೇಕಿತ್ತು. ಅಲ್ಲಿ ಮಣಿಮಂಜರೀ ಮತ್ತು ಅದಕ್ಕೆ ಪ್ರತಿಕ್ರಿಯೆ ಯಾಗಿ ಬಂದ ‘ಮಣಿಮಂಜರೀಭೇದಿನೀ’ ಕೃತಿಗಳ ಪ್ರಸ್ತಾವವಿದೆ.
ಡಿ.ವಿ.ಜಿ. ಅವರು ತಮ್ಮ ತಾರುಣ್ಯದಲ್ಲಿ ಈ ಕೃತಿಗಳನ್ನು ಓದಬಯಸಿದಾಗ ಅವರ ವಿದ್ಯಾಗುರುಗಳಲ್ಲಿ ಒಬ್ಬರಾದ ಛಪ್ಪಲ್ಲಿ ವಿಶ್ವೇಶ್ವರಶಾಸ್ತ್ರಿಗಳು ಇವುಗಳ ವಿಷಯ ಏನೆಂದು ತಿಳಿದು, ‘ನಾವು ಅಂಥ ಕ್ಷುದ್ರಗ್ರಂಥಗಳನ್ನು ಓದಬಹುದೆ? ನಮಗೇಕು ಅದು? ನೀವು ಭಾಷ್ಯ ಒಂದಷ್ಟು ನೋಡಿದ್ದೀರಲ್ಲ!
ನಾವು ಓದಬೇಕಾದದ್ದು ಭಾಷ್ಯಗಳನ್ನ, ಕ್ಷುದ್ರಗ್ರಂಥಗಳನ್ನು ನೋಡಬಹುದೆ?’ (ಡಿ.ವಿ.ಜಿ. ಕೃತಿಶ್ರೇಣಿ, ಸಂ. 7, ಪು. 333) ಎಂದು ಹೇಳುತ್ತಾರೆ. ಇದನ್ನು ವಿವರಿಸುತ್ತ ನಾನು ವಿಚಾರವೊಂದನ್ನು ವಿಚಾರದಿಂದಲೇ ಎದುರಿಸಬೇಕಲ್ಲದೆ ಆಯಾ ವಿಚಾರಪ್ರತಿಪಾದಕರ ವೈಯಕ್ತಿಕ ಸಂಗತಿಗಳ ಊಹಾ ಪೋಹಗಳನ್ನು ಆಧರಿಸಿ ಚಾರಿತ್ರವಧೆಗೆ ತೊಡಗ ಬಾರದು; ಹೀಗೆ ತತ್ತ್ವಪ್ರತಿಪಾದನೆಯ ನೆವದಿಂದ ಅಡ್ಡದಾರಿಯನ್ನು ಹಿಡಿಯುವ ಯಾವ ಬರೆವಣಿಗೆಯೂ ಹೇಯ; ಅಂಥ ವನ್ನು ರಿಲಿಜಿಯಸ್ ಪೋರ್ನೋಗ್ರಫಿ (ಮತೀಯ ಅಶ್ಲೀಲ ಸಾಹಿತ್ಯ) ಎಂದು ಹೆಸರಿಸಬೇಕಾಗುತ್ತದೆ – ಎಂದಿದ್ದೆ.
ಇದು ಕೇವಲ ಮಣಿಮಂಜರಿಯೊಂದಕ್ಕೆ ಅಲ್ಲದೆ ಅನಂತರ ಬಂದ ಈ ಬಗೆಯ ಎಲ್ಲ ಖಂಡನ-ಮಂಡನ ವ್ಮಾಯ ಕ್ಕೂ ಅನ್ವಯಿಸುವುದೆಂದು ವಿಸ್ತರಿಸಿ ಹೇಳಿದ್ದೆ. ಅಲ್ಲದೆ ಜೈನ, ಬೌದ್ಧ, ಶೈವ, ವೈಷ್ಣವ ಮೊದಲಾದ ಯಾವುದೇ ಮತದ ವಿಷಯದಲ್ಲಿಯೂ ತತ್ತ್ವದೃಷ್ಟಿಗೆ ಹೊರತಾದ ಅಗ್ಗದ ಗೇಲಿಯ ಮಾತುಗಳು ವಿಚಾರವಂತರಿಗೂ ವಿಶಾಲ ಸಮಾಜಕ್ಕೂ ಶೋಭಿಸುವುದಿಲ್ಲವೆಂದು ಅನೇಕ ಸಂದರ್ಭಗಳಲ್ಲಿ ಒಕ್ಕಣಿಸಿದ್ದೇನೆ. ಹೀಗಾಗಿಯೇ ನಮ್ಮ ಪುರಾಣ ಗಳಲ್ಲಿ ಕಂಡುಬರುವ ಬೌದ್ಧ, ಜೈನ ಮತಗಳ ನಿಂದೆಯಾಗಲಿ; ವೃತ್ತವಿಲಾಸ, ಬ್ರಹ್ಮಶಿವ, ನಯಸೇನ ಮೊದಲಾದ ವರು ಮಾಡಿರುವ ಸನಾತನಧರ್ಮದ ಗೇಲಿಗಳಾಗಲಿ; ಶಿವಶರಣರ, ಹರಿದಾಸರ ಬರೆಹಗಳಲ್ಲಿ ಆಗೀಗ ಕಾಣುವ ಲೇವಡಿಯ ಕಟೂಕ್ತಿಗಳಾಗಲಿ ಯುಕ್ತವಲ್ಲವೆಂದು ಸ್ಪಷ್ಟಪಡಿಸಿದ್ದೇನೆ.
ಮಾತ್ರವಲ್ಲ, ವಿವಿಧ ಶಂಕರವಿಜಯಗಳಲ್ಲಿ ಕಂಡುಬರುವ ಇಂಥ ನುಡಿಗಳನ್ನೂ ಆಕ್ಷೇಪಿಸಿದ್ದೇನೆ. ಈ ಹಿನ್ನೆಲೆ ಯನ್ನು ಪೂರ್ಣವಾಗಿ ಗ್ರಹಿಸದ, ದ್ವೈತ-ಅದ್ವೈತಗಳ ಹೆಗ್ಗಳಿಕೆಗಳನ್ನು ಹೇಳಿಕೊಳ್ಳುವ ಕೆಲವರು ಅತ್ಯುತ್ಸಾಹಿಗಳು ನನ್ನ ಈ ಭಾಷಣದ ತುಣುಕೊಂದನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನು ಕೇಳಿ ಅನೇಕರು ನನ್ನನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಸ್ಪಷ್ಟೀಕರಣವನ್ನೂ ಕೇಳಿದ್ದರು. ಅವರಿಗೆಲ್ಲ ನನ್ನ ಭಾಷಣವನ್ನು ಪೂರ್ಣವಾಗಿ
ಕೇಳಿರಿ ಎಂದಷ್ಟೇ ಹೇಳಿದ್ದೆ. ಇದಾದ ಮೇಲೆ ಯಾರೊಬ್ಬರೂ ಹೆಚ್ಚಿನ ಸ್ಪಷ್ಟೀಕರಣವನ್ನು ಬಯಸಿ ಸಂಪರ್ಕಿಸಿಲ್ಲ. ಇದೀಗ ಈ ವಿಷಯ ವಾರ್ತಾಪತ್ರಿಕೆಗೆ ಬಂದಿರುವುದು ಅವಾಂಛಿತ.
ಶಂಕರವಿಜಯಗಳ ಸತ್ಯಾಸತ್ಯತೆಗಳನ್ನು ಕುರಿತು ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳು ಬರೆದಿರುವ ‘ಶ್ರೀಶಂಕರಭಗವತ್ಪಾದವೃತ್ತಾಂತಸಾರಸರ್ವಸ್ವ’ ಎಂಬ ಉದ್ಗ್ರಂಥ ಈ ನಿಟ್ಟಿನಲ್ಲಿ ತುಂಬ ಮೌಲಿಕವಾದುದು.
ವಿದ್ವಾನ್ ಎನ್. ರಂಗನಾಥಶರ್ಮರು ತಾವು ಮಾಡಿದ ‘ಮಾಧವೀಯ ಶಂಕರವಿಜಯ’ದ ಕನ್ನಡ ಅನುವಾದದ ಪ್ರಸ್ತಾವನೆಯಲ್ಲಿ ‘ಎಲ್ಲ ಶಂಕರವಿಜಯಗಳಲ್ಲಿಯೂ ಇತಿಹಾಸಕ್ಕೆ ವಿರುದ್ಧವಾದ ವಿಷಯಗಳಿದ್ದೇ ಇವೆ’ ಎಂದಿದ್ದಾರೆ (ಪು.qಜಿಜಿಜಿ). ಇಂಥ ಅಭಿಪ್ರಾಯಗಳನ್ನು ಆಚಾರ್ಯ ಬಲದೇವ ಉಪಾಧ್ಯಾಯ, ಎಸ್. ಕುಪ್ಪುಸ್ವಾಮಿ ಶಾಸ್ತ್ರೀ, ವಿ. ರಾಘವನ್, ಗೋವಿಂದ ಚಂದ್ರ ಪಾಂಡೆ ಮೊದಲಾದ ಅನೇಕ ಮಹಾ ವಿದ್ವಾಂಸರು ವ್ಯಕ್ತಪಡಿಸಿದ್ದಾರೆ. ನಾನು ಇವರ ನಿಲವನ್ನು ಒಪ್ಪಿದವನು. ಕೇವಲ ಹುಟ್ಟಿನಿಂದ ಯಾವುದೇ ವ್ಯಕ್ತಿಗೆ ಉನ್ನತಿಯೋ ಅವನತಿಯೋ ಬರುವುದಿಲ್ಲ; ಆತನ ಶೀಲ-ಸಾಧನೆಗಳಿಂದಲೇ ಅವನಿಗೆ ಮಾನ್ಯತೆ ಸಲ್ಲುತ್ತದೆ ಎಂದು ನಂಬಿರುವವನು.
ಯಾರ ವೈಯಕ್ತಿಕ ನಡತೆಗಳಿಗೂ ಗಟ್ಟಿಯಾದ ಸಾಕ್ಷ್ಯಗಳಿಲ್ಲದಿರುವಾಗ ಊಹಾಪೋಹಗಳನ್ನೇ ವಾಸ್ತವವೆಂದು ಬಿಂಬಿಸಲೆಳಸುವುದು ಸರಿಯಲ್ಲವಷ್ಟೆ. ಶಂಕರ ಭಗವತ್ಪಾದರಂಥ ಪ್ರಾಚೀನರ ವಿಷಯದಲ್ಲಂತೂ ಶಾಸನ, ಸಮ ಕಾಲಿಕ ಸಾಹಿತ್ಯ, ಪುರಾತತ್ತ್ವಸಾಮಗ್ರಿ ಮುಂತಾದ ವೈಜ್ಞಾನಿಕ ಪ್ರಾಮಾಣ್ಯಕ್ಕೆ ಎಟುಕುವ ಸಂಗತಿಗಳು ಇಲ್ಲ ವೆಂಬಷ್ಟು ವಿರಳವಾಗಿವೆ. ಹೀಗಿರುವಾಗ ಅವರ ಅಧಿಕೃತ ಬೋಧೆ ಮತ್ತು ಗ್ರಂಥಗಳೆಂಬ ಗಟ್ಟಿಯಾದ ಆಧಾರ ಗಳನ್ನು ಬಿಟ್ಟು ಮಿಕ್ಕವನ್ನು ಮನಬಂದಂತೆ ಬಳಸಿಕೊಳ್ಳುವುದಾಗಲಿ, ರಾಗ-ದ್ವೇಷಗಳಿಂದ ಪ್ರೇರಿತರಾಗಿ ಕಟ್ಟುಕತೆ ಗಳನ್ನು ಇತಿಹಾಸವೆಂಬಂತೆ ಮುಂದಿಟ್ಟು ವಾದಿಸುವುದಾಗಲಿ ಯುಕ್ತವಲ್ಲ.
ನಾನು ನನ್ನ ಅಧ್ಯಯನ ದಲ್ಲಿ ಹಿಡಿದಿರುವುದು ಆಚಾರ್ಯರ ತತ್ತ್ವ ಮತ್ತು ಸಾಧನೆಗಳ ಹಾದಿಯನ್ನೇ. ಇದಕ್ಕೆ ಅವರ ಅಧಿಕೃತ ಗ್ರಂಥಗಳೇ ಶರಣ್ಯ. ಇಂಥ ವಿವಾದಗಳ ಹೊತ್ತಿನಲ್ಲಿ ನನಗೆ ತುಂಬ ಆತ್ಮೀಯರೂ ಆದರಣೀಯರೂ ಆದ
ಡಾ.ಶ್ರೀನಿವಾಸ ವರಖೇಡಿ ಅವರ ಪ್ರತಿಕ್ರಿಯೆ ತುಂಬ ನೆಮ್ಮದಿಯನ್ನೂ ಭರವಸೆಯನ್ನೂ ಕೊಟ್ಟಿದೆ. ಈ ವಿಷಯದಲ್ಲಿ ಅವರು ಬರೆದಿರುವ ಒಂದೊಂದು ಮಾತೂ ಉಪಾಧೇಯ.
ವಿಚಾರಗಳಲ್ಲಿ ವ್ಯತ್ಯಾಸಗಳೂ ಅಭಿಪ್ರಾಯಗಳಲ್ಲಿ ಭೇದಗಳೂ ರುಚಿಗಳಲ್ಲಿ ಹೆಚ್ಚು ಕಡಮೆಗಳೂ ಇರುವುದು ತಪ್ಪಲ್ಲ. ಜಗತ್ತಿನ ಸ್ವರೂಪವೇ ಹೀಗೆ. ಆದರೆ ಇವನ್ನು ರಾಗ-ದ್ವೇಷಗಳಿಂದ ಕಲುಷಿತಗೊಳಿಸುವುದು ಸರಿಯಾಗದು. ಮುಖ್ಯ ವಾಗಿ ದೊಡ್ಡ ದೊಂದು ಗುರಿಯನ್ನು ಮರೆತು ಸಣ್ಣಪುಟ್ಟ ವಿಷಯಗಳಲ್ಲಿ ಸಲ್ಲದ ತಕರಾರುಗಳನ್ನು ಬೆಳೆಸಿ ಕೊಂಡು ಹೋಗುವುದು ಯಾವ ಸಮಾಜಕ್ಕೂ ತರವಲ್ಲ. ಈ ಸಂಗತಿಯನ್ನು ಸ್ಪಷ್ಟವಾಗಿ, ಹೃದ್ಯವಾಗಿ ಸಾರಿದ ಪ್ರಾಚಾರ್ಯ ವರಖೇಡಿ ಅವರಿಗೆ ನನ್ನ ಮತ್ತು ನನ್ನಂಥ ಅನೇಕರ ಹಾರ್ದಿಕ ಅಭಿನಂದನೆ, ಅಭಿವಂದನೆಗಳು ಸಲ್ಲುತ್ತವೆ. ಅವರ ಮಾತುಗಳ ತಿಳಿಬೆಳಕಿನಲ್ಲಿ ನಮ್ಮ ಜನ ಸಾಗುವಂತಾಗಲಿ. ಈ ಮೂಲಕ ನಮ್ಮೆಲ್ಲರಿಗೂ ಆಸರೆ ಯಾದ ಸನಾತನ ಧರ್ಮಕ್ಕೆ, ಅದು ನೆಲೆ ನಿಂತಿರುವ ನಮ್ಮೀ ದೇಶಕ್ಕೆ ಒಳಿತಾಗಲಿ.
(ಲೇಖಕರು: ಚಿಂತಕರು, ಖ್ಯಾತ ವಿದ್ವಾಂಸರು)
ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ