Saturday, 2nd November 2024

Dr Sadhanasree Column: ಪ್ರಾಣಾಯಾಮವೆಂಬ ಪಯಣದ ಪ್ರಾರಂಭ

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಡಾ.ಸಾಧನಶ್ರೀ

ನಿಮ್ಮ ಉಸಿರನ್ನು ಕೆಲವು ಗಂಟೆಗಳ ಕಾಲ ಹಿಡಿದಿಟ್ಟುಕೊಳ್ಳಲು ಸಾಧ್ಯವೇ? ಹೃದಯಬಡಿತವನ್ನು ಕೆಲವು ನಿಮಿಷಗಳ ಕಾಲ ನಿಲ್ಲಿಸಿ ಪುನರಾರಂಭಿಸಲು ಸಾಧ್ಯವೇ? ಸಾವಿನ ಸ್ಥಿತಿಯನ್ನು ತಲುಪಿ ಪುನಃ ಜೀವಂತ ಸ್ಥಿತಿಗೆ ಮರಳಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಇವುಗಳನ್ನು ಕೇವಲ ಪುರಾಣ ಕತೆಗಳಲ್ಲಿ ಕಾಣಬಹುದು.

ಇವುಗಳನ್ನು ಸಾಧಿಸುತ್ತೇವೆ ಎಂದು ಹೇಳಿಕೊಳ್ಳುವ ಯೋಗಿಗಳದ್ದು ಕೇವಲ ಢೋಂಗಿಯ ಮಾತು ಎಂಬುದು 1970ರ ತನಕ ಜನಸಾಮಾನ್ಯರಲ್ಲಿ ಪ್ರಚಲಿತವಾಗಿದ್ದ ಭಾವನೆ. ಈ ಕ್ರಿಯೆಗಳೆಲ್ಲ ನಮ್ಮ ನಿಯಂತ್ರಣದ ಪರಿಧಿಯ ಆಚೆ ಇರುವಂಥದ್ದು (ಇನ್ವಾಲೆಂಟರಿ ಫಂಕ್ಷನ್) ಎಂಬುದು ವೈಜ್ಞಾನಿಕ ಸಮೂಹದ ತಿಳಿವಳಿಕೆಯಾಗಿತ್ತು.‌

ಆದರೆ 1970ರಲ್ಲಿ ಆಗಿದ್ದೇನು? ಹಿಮಾಲಯದ ಗುಹೆಗಳಲ್ಲಿ ಸಾಧು-ಸಂತರ ಪಾಲನೆಯಲ್ಲಿ ಮಹಾನ್ ಯೋಗಿ ಯಾಗಿ ಬೆಳೆದಿದ್ದ ಶ್ರೀ ಸ್ವಾಮಿರಾಮರು ಅಮೆರಿಕಕ್ಕೆ ಬಂದರು. ಸುಸಜ್ಜಿತ ಪ್ರಯೋಗಾಲಯದಲ್ಲಿ ಖ್ಯಾತ ವೈದ್ಯ-ವಿಜ್ಞಾನಿಗಳ ಸಮ್ಮುಖದಲ್ಲಿ ತಮ್ಮನ್ನು ಅನೇಕ ಕಠಿಣ ಸಂಶೋಧನೆಗಳಿಗೆ ಒಳಪಡಿಸಿಕೊಂಡರು. ವೈಜ್ಞಾನಿಕ ಉಪಕರಣಗಳ ಮಾಪನೆಗೆ ತಮ್ಮನ್ನು ತೆರೆದು ಕೊಳ್ಳುವ ಮೂಲಕ ಶಾರೀರಿಕ ಕ್ರಿಯೆಗಳ ಬಗ್ಗೆ ಆಧುನಿಕ ವಿಜ್ಞಾನಕ್ಕೆ ಇದ್ದ ತಿಳಿವಳಿಕೆ ಎಷ್ಟು ಸಂಕುಚಿತ, ಅಪೂರ್ಣ ಎಂದು ತೋರಿ ಒಂದು ಹೊಸ ಅಲೆಯನ್ನು ಸೃಷ್ಟಿಸಿದರು. ವಿಜ್ಞಾನ ಹಾಗೂ ಯೋಗದ ನಡುವೆ ಸೇತುವೆ ನಿರ್ಮಿಸಿ, ಯೋಗ ಕೇವಲ ಅಂಗಾಂಗಗಳ ಕಸರತ್ತಲ್ಲ, ಒಂದು ಅತ್ಯದ್ಭುತ ವಿಜ್ಞಾನ ಎಂದು ಸಾರಿದರು.

ಇವರು ಮಾಡಿದ್ದು ಏನು? ಕೆಲವು ಉದಾಹರಣೆಗಳು ಇಲ್ಲಿವೆ. ತಮ್ಮ ಒಂದೇ ಹಸ್ತದ ಎರಡು ಬೇರೆ ಬೇರೆ ಭಾಗಗಳ ಚರ್ಮದ ಉಷ್ಣಾಂಶವನ್ನು ವ್ಯತ್ಯಾಸ ಮಾಡಿದರು. ಒಂದು ಭಾಗ ಬಿಸಿಯಾಗಿ ಕೆಂಪಾದರೆ ಇನ್ನೊಂದು ಭಾಗ
ಶೈತ್ಯತೆಯಿಂದ ಬಿಳಿಚಿಕೊಂಡಿತ್ತು. ಎರಡೂ ಭಾಗಗಳಲ್ಲಿ 10 ಡಿಗ್ರಿ -ರನ್‌ಹೀಟ್‌ಗಳಷ್ಟು ವ್ಯತ್ಯಾಸ! ಇನ್ನೊಮ್ಮೆ
ತಮ್ಮ ಹೃದಯಬಡಿತವನ್ನು ಸ್ವ ಇಚ್ಛೆಯಿಂದ ಒಂದು ನಿಮಿಷಕ್ಕೆ 70 ಬಡಿತಗಳಿಂದ 300ಕ್ಕೆ ಏರಿಸಿದರು. 17 ಕ್ಷಣ
ಗಳ ಕಾಲ ಹೃದಯಬಡಿತವನ್ನು ನಿಲ್ಲಿಸಿದರು. ಇಷ್ಟೇ ಅಲ್ಲದೆ ತಮ್ಮ ಬ್ರೇನ್-ವೇವ್‌ಗಳನ್ನು ನಿಲ್ಲಿಸಿಯೂ ತಮ್ಮ
ಸುತ್ತಲಿನ ಆಗುಹೋಗುಗಳ ಸಂಪೂರ್ಣ ಅರಿವಿನ ಎಚ್ಚರದ ಸ್ಥಿತಿಯನ್ನು ನಿರೂಪಿಸಿದರು. ಈ ಎಲ್ಲಾ ಕ್ರಿಯೆ
ಗಳನ್ನು ನಾವು ಸ್ವ-ಇಚ್ಛೆಯಿಂದ ನಿಯಂತ್ರಿಸಲು ಸಾಧ್ಯವಿಲ್ಲವೆಂದು ನಂಬಿದ್ದ ವಿಜ್ಞಾನಿಗಳು ಸ್ವಾಮಿರಾಮರ ಈ
ಸಾಧನೆಯನ್ನು ಕಂಡು ದಂಗಾದರು.

ಇದೆ ಅವರಿಗೆ ಸಾಧ್ಯವಾಗಿದ್ದಾದರೂ ಹೇಗೆ? ಕೇವಲ ಒಂದೇ ಉತ್ತರ- ‘ಪ್ರಾಣವಿದ್ಯೆಯ ಸಾಧನೆ’- ದಿ ಸೈ ಆಫ್ ಬ್ರೆತ್! ಉಸಿರಾಟದ ನಿಯಂತ್ರಣ,‌ ತನ್ಮೂಲಕ ಪ್ರಾಣಶಕ್ತಿಯ ಮೇಲಿನ ಹಿಡಿತ ಸಾಧಿಸುವುದೇ ಇದರ ಹಿಂದಿನ ರಹಸ್ಯ. ಉಸಿರಾಟ, ಹೃದಯಬಡಿತ, ಮಿದುಳಿನ ಕ್ರಿಯೆ, ದೇಹದ ಉಷ್ಣತೆ ಇತ್ಯಾದಿಗಳು ಆಟೊನೊಮಿಕ್ ನರ್ವಸ್ ಸಿಸ್ಟಮ್ (ಸ್ವ-ನಿಯಂತ್ರಿತ ನರಮಂಡಲ)ನ ಕಾರ್ಯಗಳು. ಇದರ ಐಚ್ಛಿಕ ನಿಯಂತ್ರಣ/ಏರಿಳಿತ ನಮ್ಮಿಂದ ಅಸಾಧ್ಯ ಎಂಬುದು ಪಾಶ್ಚಾತ್ಯ ವಿಜ್ಞಾನದ ದೃಢ ನಂಬಿಕೆ. ಆದರೆ, ಸ್ವಾಮಿರಾಮರು ತಮ್ಮ ಉಸಿರಾಟದ (ಪ್ರಾಣ) ರೀತಿ-ಗತಿ
ಗಳನ್ನು ನಿಯಂತ್ರಿಸುವ ಮೂಲಕ ಇಡೀ ನರಮಂಡಲದ ವ್ಯವಸ್ಥೆಯ ಮೇಲೆ ಹಿಡಿತ ಸಾಽಸಿದರು. ಹಾಗಾಗಿ
ದೇಹದ ಎಲ್ಲಾ ಕಾರ್ಯಗಳು ಅವರ ಸ್ವಾಧೀನ! ಹಾಗಾದರೆ ನಮ್ಮ ಉಸಿರಾಟಕ್ಕೆ ಇದೆಯೇ ಇಷ್ಟೊಂದು ಶಕ್ತಿ?
ನಮ್ಮ ಶರೀರ, ಇಂದ್ರಿಯ, ಮನಸ್ಸು, ಆತ್ಮಗಳನ್ನು ಪೋಷಿಸುವ ಶಕ್ತಿಯನ್ನು ‘ಪ್ರಾಣ’ ಎಂದು ಕರೆಯಬಹುದು.

ಈ ಪ್ರಾಣಶಕ್ತಿಯು ನಮ್ಮ ಶರೀರವೆಂಬ ವಾಹನ ನಡೆಯಲು ಬೇಕಾದ ಇಂಧನ. ಸೇವಿಸುವ ಆಹಾರ, ಯೋಚಿಸುವ ವಿಚಾರ, ತೊಡಗಿಕೊಳ್ಳುವ ವಿಹಾರ ಗಳು ಈ ಪ್ರಾಣಶಕ್ತಿಯನ್ನು ಪೋಷಿಸುತ್ತವೆ. ನಮ್ಮ ದೇಹದ ಎಲ್ಲಾ ಕ್ರಿಯೆಗಳ ಹಿಂದಿನ ಪ್ರೇರಕ ಶಕ್ತಿಯೇ ಈ ‘ಪ್ರಾಣ’. ಯೋಗಸಾಧನೆಯ ಬಹುಮುಖ್ಯ ಅಂಶ ಈ ಪ್ರಾಣಶಕ್ತಿಯ ಅರಿವು ಹಾಗೂ ಅದರ ನಿಯಂತ್ರಣ (not controlling, but regulating). ಆದರೆ ಈ ಸೂಕ್ಷ್ಮರೂಪಿ ಶಕ್ತಿಯ ಮೇಲೆ ನೇರವಾಗಿ ನಿಯಂತ್ರಣ ಸಾಧಿಸುವುದು ಅಸಾಧ್ಯ. ಅದರ ಮೇಲೆ ಹಿಡಿತ ಸಾಧಿಸಲು ಒಂದೇ ಮಾರ್ಗ.

ಅದು- ನಮ್ಮ ಉಸಿರಾಟದ ಮೂಲಕ! ಏಕೆಂದರೆ ಉಸಿರಾಟವೇ ಪ್ರಾಣದ ವಾಹನ. ವಾಹನ ಚೆನ್ನಾಗಿದ್ದರೆ ಪ್ರಯಾ ಣವು ಸುಖಕರವಾಗುವಂತೆ, ಉಸಿರಾಟ ಸರಿಯಾದರೆ ಪ್ರಾಣದ ಸಂಚಾರವೂ ಸುಗಮ. ಉಸಿರಾಟವು ದೇಹ-ಮನಸ್ಸು ಗಳ ನಡುವಿನ ಸೇತುವೆ. ಮನಸ್ಸಿನಗುವ ಏರಿಳಿತಗಳ ಪರಿಣಾಮ ಉಸಿರಾಟದ ಮೇಲಾಗುವುದನ್ನು ಕಾಣಬಹುದು. ಉಸಿರಾಟವನ್ನು ವ್ಯತ್ಯಾಸ ಮಾಡುವ ಮೂಲಕ ಮನಸ್ಸಿನ ಸ್ಥಿತಿಯನ್ನು ಬದಲಾಯಿಸಬಹುದು. ಉದಾಹರಣೆಗೆ ಅತ್ಯಂತ ಕ್ರೋಧಿತ ಅವಸ್ಥೆಯಲ್ಲಿ ಉಸಿರಾಟವು ವೇಗವಾಗಿ, ಲಯರಹಿತವಾಗಿ ಹಾಗೂ ಹೃಸ್ವ ವಾಗಿರುತ್ತದೆ. ಅದೇ ನಾವು ಸಂತೋಷವಾಗಿದ್ದಾಗ ದೀರ್ಘ, ಲಯಬದ್ಧ ಹಾಗೂ ನಿಧಾನಗತಿಯ ಉಸಿರಾಟವನ್ನು ಗಮನಿಸಬಹುದು.

ನಾವು ದುಃಖ, ಕೋಪದಲ್ಲಿದ್ದಾಗ ನಮ್ಮ ಉಸಿರಾಟದ ಕಡೆ ಗಮನ ಹರಿಸಿ ಅದನ್ನು ಲಯಬದ್ಧವಾಗಿ, ದೀರ್ಘವಾಗು ವಂತೆ ಮಾಡಿದರೆ ಕ್ಷಣಮಾತ್ರದಲ್ಲಿ ಶಾಂತಚಿತ್ತರಾಗಬಹುದು. ಈ ನಿದರ್ಶನವೇ ಸಾಕು ಉಸಿರಾಟದ ಮೂಲಕ ಮನಸ್ಸನ್ನು ನಿಯಂತ್ರಿಸಬಹುದು ಎಂದು ತಿಳಿಯಲು. ಈ ಸತ್ಯವನ್ನು ಕಂಡುಕೊಂಡ ಯೋಗಿಗಳು
ಮನಸ್ಸನ್ನು ಹತೋಟಿಗೆ ತರಲು, ಅದರಲ್ಲಿ ಓಡುವ ಅಸಂಖ್ಯಾತ ವೃತ್ತಿಗಳನ್ನು(ಮನಸ್ಸಿನಲ್ಲಿ ಏಳುವ
ವಿಚಾರದ ಅಲೆಗಳು) ಶಾಂತವಾಗಿಸಲು, ಮನಸ್ಸಿಗಿರುವ ಅಗಾಧ ಶಕ್ತಿಯನ್ನು ಅನುಭವಿಸಲು ‘ಪ್ರಾಣಾ
ಯಾಮ’ವೆಂಬ ಸಾಧನವನ್ನು ಜಗತ್ತಿಗೆ ನೀಡಿದರು. ಉಸಿರಾಟವನ್ನು ಮಾಧ್ಯಮವಾಗಿಸಿಕೊಂಡು ತನ್ಮೂಲಕ
ಪ್ರಾಣಶಕ್ತಿಯ ಸಂಚಾರವನ್ನು ಸುಗಮಗೊಳಿಸಿ, ಅದರ ಗುಣಮಟ್ಟವನ್ನು ಸುಧಾರಿಸಿ, ವ್ಯಾಪ್ತಿಯನ್ನು ವಿಸ್ತಾರ ಗೊಳಿಸುವ ಸಾಧನೆಯೇ ಪ್ರಾಣಾಯಾಮ ಪ್ರಾಣಾಯಾಮದ ಸರಿಯಾದ ಅಭ್ಯಾಸದಿಂದ ಪ್ರಾಣಶಕ್ತಿಯು ಶರೀರದ ಪ್ರತಿಯೊಂದು ಸೂಕ್ಷ್ಮಸ್ರೋತಸ್ಸಿನಲ್ಲಿಯೂ ಸಂಚರಿಸಿ, ಅಂಗಾಂಗಗಳನ್ನು ಪೋಷಿಸಿ, ಅಲ್ಲಿರುವ ನೋವು ಬೇನೆಗಳನ್ನು ದೂರಮಾಡುತ್ತದೆ.

ಮನಸ್ಸಿನ ವೇಗವನ್ನು ಕಡಿಮೆ ಮಾಡಿ ಸಮಾಧಾನವನ್ನು ನೀಡುವುದರ ಮೂಲಕ ಆಳವಾದ ಧ್ಯಾನಸ್ಥಿತಿಯನ್ನು ತಲುಪಲು ಅದು ಸಹಾಯಕಾರಿ. ಪ್ರಾಣಾಯಮ ಜೀವನಪರ್ಯಂತ ಮಾಡಬೇಕಾದ ಅಭ್ಯಾಸ. ಇದರ ಬಗೆ ನೂರಾರು, ಮಾಡುವ ರೀತಿ ಹಲವಾರು. ಕಠಿಣ ಪ್ರಾಣಾಯಮದ ಅಭ್ಯಾಸಕ್ಕೆ ಶರೀರವನ್ನು ಸಜ್ಜುಗೊಳಿಸಲು ನಿತ್ಯ ಅಭ್ಯಾಸ ಮಾಡ ಬೇಕಾದ ಅತ್ಯಂತ ಸುಲಭ, ಅಷ್ಟೇ ಪರಿಣಾಮಕಾರಿಯಾದ ತ್ರಿಸೂತ್ರವನ್ನು ತಿಳಿಯೋಣ.

1. ಉಸಿರಾಟದ ಅರಿವು (Breath Awareness) ಇದು ಪ್ರಾಣಾಯಾಮದ ಅಡಿಪಾಯ. ನಮ್ಮ ಉಸಿರಾಟವನ್ನು ಸರಿಪಡಿಸಿಕೊಳ್ಳದೆ ಯಾವ ಪ್ರಾಣಾಯಾಮವೂ ಅಸಫಲ. ‘ಬ್ರೆತ್ ಅವೇರ್ನೆಸ್’ ಎಂದರೆ ಪ್ರಜ್ಞಾಪೂರ್ವಕವಾಗಿ ಉಸಿರಾಡುವುದು. ಪ್ರತಿ ಗಂಟೆಗೆ 2 ನಿಮಿಷದಂತೆ, ನಮ್ಮ ಗಮನವನ್ನು ಉಸಿರಾಟದ ಮೇಲೆ ಕೊಂಡೊಯ್ದು, ಗಾಳಿಯು ಮೂಗಿನಿಂದ ಒಳಗೆ ಹೋಗುವ ಮತ್ತು ಹೊರಗೆ ಬರುವ ಕ್ರಿಯೆಯನ್ನು ಏಕಾಗ್ರತೆಯಿಂದ ಪರಿಶೀಲಿಸು ವುದು. ನಂತರ ನಿಧಾನ ವಾಗಿ ಗಮನವನ್ನು ನಾಭಿಯತ್ತ ಹರಿಸಿ, ಪ್ರತಿ ಉಸಿರಾಟಕ್ಕೂ ಉದರಭಾಗದ ಒಳ-ಹೊರಗಿನ ಚಲನೆಯನ್ನು ಗಮನಿಸುವುದು. ಇದನ್ನು ಶವಾಸನ ಅಥವಾ ಮಕರಾಸನದಲ್ಲಿ (ಹೊಟ್ಟೆಯ ಮೇಲೆ ಮಲಗಿ) ಅಥವಾ ಸುಖಾಸನದಲ್ಲಿ ಕುಳಿತು ಮಾಡಬಹುದು. ಇದನ್ನು ನಾವು ಬಸ್ಸಿಗಾಗಿ ಕಾಯುತ್ತಿದ್ದಾಗ, ಬ್ಯಾಂಕಿನ ಸಾಲಿನಲ್ಲಿ ನಿಂತಾಗ, ನಡೆಯುವಾಗ, ಅಡುಗೆ ಮಾಡುವಾಗ, ಟಿ.ವಿ ನೋಡುವಾಗ ಯಾವಾಗ ಬೇಕಾದರೂ ಅಭ್ಯಾಸ ಮಾಡಬಹುದು.

ಇದು ಗಂಟೆಗೊಮ್ಮೆ ನಮ್ಮನ್ನು ರೀಚಾರ್ಜ್ ಮಾಡಿಕೊಳ್ಳುವ ಸುಲಭೋಪಾಯ. ಮಲಗುವ ಮುನ್ನ ಇದನ್ನು ಮಾಡಿದರೆ ಸುಖನಿದ್ದೆಯನ್ನು ಸವಿಯ ಬಹುದು. ಇದರ ನಿರಂತರ ಅಭ್ಯಾಸದಿಂದ ಉಸಿರಾಟವು ದೀರ್ಘ, ಲಯಬದ್ಧ, ಶಬ್ದರಹಿತ, ತಡೆರಹಿತ ಹಾಗೂ ಸುಗಮವಾಗುತ್ತದೆ.

2. ಜಲನೇತಿ
ಮೂಗಿನ ಹೊಳ್ಳೆಗಳನ್ನು ಸ್ವಚ್ಛವಾಗಿಸಿ ಉಸಿರಾಟವನ್ನು ಸುಗಮಗೊಳಿಸುವ ಕ್ರಿಯೆಯಿದು. ಕ-ಸಂಚಯದಿಂದ
ಉಂಟಾಗುವ ನೆಗಡಿ, ಮೂಗು ಕಟ್ಟುವಿಕೆ, ಅಲರ್ಜಿ, ಸೈನುಸೈಟಿಸ್ ಇತ್ಯಾದಿಗಳ ಸುಲಭ ನಿವಾರಣೋಪಾಯ.
ಬೆಚ್ಚಗಿನ, ಲಘುವಾಗಿ ಉಪ್ಪು ಮಿಶ್ರಿತವಾದ ಜಲವನ್ನು ನೇತಿ ಉಪಕರಣದಲ್ಲಿ ತುಂಬಿ, ತಲೆಯನ್ನು ಎಡಗಡೆಗೆ
ಸ್ವಲ್ಪ ಬಾಗಿಸಿ ಮೂಗಿನ ಬಲಹೊಳ್ಳೆಯ ಒಳಗೆ ನಿಧಾನವಾಗಿ ಬಿಡುವುದು, ಮತ್ತೊಂದು ಹೊಳ್ಳೆಯಿಂದ ಹೊರಗೆ
ಹರಿಯುವಂತೆ ಮಾಡುವುದು. ಇದನ್ನು ಮತ್ತೊಂದು ಕಡೆ ಪುನರಾವರ್ತಿಸುವುದು. ಮೊದಲಿಗೆ ವಾರಕ್ಕೊಮ್ಮೆ
ಖಾಲಿಹೊಟ್ಟೆಯಲ್ಲಿ ಮಾಡಿದರೆ ಸಾಕು. ಗಮನಿಸಿ- ಜಲವು ಕಣ್ಣೀರಿನಷ್ಟೇ ಉಪ್ಪು, ದೇಹದಷ್ಟೇ ಉಷ್ಣ
ವಿರಬೇಕು.

3. ನಾಡಿಶೋಧನ
ದೇಹದಲ್ಲಿ ಪ್ರಾಣಶಕ್ತಿಯ ಸಂಚಾರವಾಗುವುದು ‘ನಾಡಿಗಳೆಂಬ’ ಸೂಕ್ಷ್ಮ ಮಾರ್ಗಗಳ ಮೂಲಕ. ಇವುಗಳು ಸ್ವಚ್ಛ
ವಾಗಿರದಿದ್ದರೆ ಪ್ರಾಣದ ಸಂಚಾರ ಅವರೋಧವಾಗುತ್ತದೆ. ಸಮ್ಯಕ್ ಆಹಾರ-ವಿಹಾರ-ವಿಚಾರಗಳಿಂದ ಈ
ನಾಡಿಗಳನ್ನು ಶುದ್ಧವಾಗಿರಿಸಿಕೊಳ್ಳಬಹುದು. ಜತೆಗೆ ನಾಡಿಶೋಧನ ಪ್ರಾಣಾಯಾಮದ ಅಭ್ಯಾಸ ಅತ್ಯವಶ್ಯಕ.
ಈ ಪ್ರಾಣಾಯಾಮದ ಮುಖ್ಯ ಉದ್ದೇಶ ಬಲ ಹಾಗೂ ಎಡ ಹೊಳ್ಳೆಗಳಲ್ಲಿ ಉಸಿರಾಟದ ಸಂತುಲನ. ತನ್ಮೂಲಕ
ಇಡ-ಪಿಂಗಲಗಳೆಂಬ ಮುಖ್ಯ ನಾಡಿಗಳಲ್ಲಿ ಪ್ರಾಣದ ಸಂತುಲನ. ಇದನ್ನು ಮಾಡುವ ವಿಧಾನ ಅನೇಕ.
ಅದರಲ್ಲಿ ಒಂದು ವಿಧಾನ ಹೀಗಿದೆ: ಸುಖಸ್ಥಿತಿಯಲ್ಲಿ ಕುಳಿತು, ಬೆನ್ನು-ಕತ್ತು-ತಲೆಯನ್ನು ನೇರವಾಗಿಸಿ, ಕಣ್ಣು
ಮುಚ್ಚಿ. ಮೊದಲಿಗೆ ಮೂಗಿನ ಬಲಹೊಳ್ಳೆಯನ್ನು ಹೆಬ್ಬೆಟ್ಟಿನಿಂದ ಮುಚ್ಚಿ, ಎಡಹೊಳ್ಳೆಯಿಂದ ಉಸಿರನ್ನು
ಬಿಡುವುದು. ಅದೇ ಹೊಳ್ಳೆಯಿಂದ ಉಸಿರನ್ನು ಒಳಗೆ ತೆಗೆದುಕೊಂಡು, ಮಧ್ಯಬೆರಳಿನಿಂದ ಆ ಹೊಳ್ಳೆಯನ್ನು
ಮುಚ್ಚಿಕೊಂಡು, ಬಲ ಹೊಳ್ಳೆಯಿಂದ ಉಸಿರನ್ನು ಬಿಡುವುದು. ಮತ್ತೆ ಬಲ ಹೊಳ್ಳೆಯಿಂದ ಉಸಿರನ್ನು
ಎಳೆದುಕೊಂಡು, ಹೆಬ್ಬೆಟ್ಟಿನಿಂದ ಮುಚ್ಚಿ, ಎಡಹೊಳ್ಳೆಯಿಂದ ಉಸಿರನ್ನು ಬಿಡುವುದು. ಈ ರೀತಿ 3 ಬಾರಿ
ಮಾಡುವುದು. ನಂತರ ಇನ್ನೊಂದು ಕಡೆ ಪುನರಾವರ್ತಿಸುವುದು. ಎರಡೂ ಕಡೆ ಮಾಡಿದಾಗ ಒಂದು ಆವರ್ತನ.
ಈ ರೀತಿ 9 ಆವರ್ತನಗಳನ್ನು ಮಾಡುವುದು. ದಿನಕ್ಕೆ 3 ಸಂಧ್ಯಾಕಾಲಗಳಲ್ಲಿ ಮಾಡುವುದು ಉತ್ತಮ. ಇದನ್ನು
ಮಾಡುವಾಗ ಉಸಿರಾಟ ನಿಧಾನವಾಗಿ ತಡೆರಹಿತವಾಗಿರಬೇಕು! ಸಾಮಾನ್ಯ ಸೂಚನೆ- ಇದನ್ನು ಯೋಗಾಚಾರ್ಯರ ಬಳಿ ಕಲಿತು ಅಭ್ಯಾಸ ಮಾಡುವುದು ಉತ್ತಮ.

ಈ ತ್ರಿಸೂತ್ರವು ಹೆಚ್ಚಿನ ಪ್ರಾಣಾಯಾಮಕ್ಕೆ ಅತ್ಯವಶ್ಯಕ. ನಮ್ಮ ಉಸಿರಾಟವನ್ನು ಸರಿಪಡಿಸಿಕೊಳ್ಳದೆ ಮಾಡುವ ಪ್ರಾಣಾಯಾಮ/ಆಸನಗಳಿಂದ ಉಪಯೋಗಕ್ಕಿಂತ ಅಪಾಯವೇ ಹೆಚ್ಚು! ಸ್ನೇಹಿತರೇ, ಆಯುರ್ವೇದದ ಪ್ರಕಾರ ನಿತ್ಯ ವ್ಯಾಯಾಮವು ನಮ್ಮ ಸ್ವಾಸ್ಥ ರಕ್ಷಣೆಗೆ ಮಾಡಲೇಬೇಕಾದ ದಿನಚರ್ಯೆ. ಕ್ರಮಬದ್ಧ ವ್ಯಾಯಾಮವು ನಮಗೆ ನೂರು ವರುಷಗಳ ಆಯಸ್ಸನ್ನು ಧಾರೆಯೆರೆಯುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ, ಕ್ರಮತಪ್ಪಿದ ವ್ಯಾಯಾ ಮವು ನಮ್ಮ ಆಯುವನ್ನು ಕ್ಷೀಣಿಸುವುದೂ ಅಷ್ಟೇ ಸತ್ಯ. ವ್ಯಾಯಾಮ ಮಾಡುವಾಗ ಸಂಗೀತವನ್ನು ಕೇಳುವುದೋ, ಪಕ್ಕದವರ ಜತೆ ಹರಟೆ ಹೊಡೆಯುವುದೋ, ಮನಸ್ಸನ್ನು ಯಾವುದೋ ಯೋಚನೆಯಲ್ಲಿ ತೊಡಗಿಸುವುದೋ ಅಥವಾ ಫೋನ್ ಕಾಲ್‌ನಲ್ಲಿ ಬ್ಯುಸಿ ಇರುವುದೋ ಇಂದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ.

ವ್ಯಾಯಾಮವು ಕೇವಲ ದೇಹಕ್ಕೆ, ಮನಸ್ಸನ್ನು ಹೇಗೆ ಬೇಕಾದರೆ ಹಾಗೆ ಹರಿಯಲು ಬಿಡಬಹುದು ಎಂಬ ಭಾವನೆ! ಆದರೆ, ಬೇರೆ ಕಾರ್ಯ ಗಳನ್ನು ನಿರ್ವಹಿಸುತ್ತಾ ವ್ಯಾಯಾಮ ಮಾಡುವಾಗ ನಮ್ಮ ಅರಿವು ಸಂಪೂರ್ಣವಾಗಿ ಹೊರಮುಖವಾಗಿರು ತ್ತದೆ. ನಮ್ಮ ದೇಹದ ಮೇಲಾಗಲಿ ಅಥವಾ ನಮ್ಮ ಉಸಿರಾಟದ ಮೇಲಾಗಲಿ ಅರಿವಿಲ್ಲದೆ ಮಾಡುವ ವ್ಯಾಯಾಮವು ನಿಷ್ಪ್ರಯೋಜಕ. ನಾವು ವ್ಯಾಯಾಮ ಮಾಡುವಾಗ ಮನಸ್ಸನ್ನು ಉಸಿರಾಟದ ಜತೆ ಜೋಡಿಸಲೇ ಬೇಕು. ಸದಾ ಉಸಿರಾಟವನ್ನು ಗಮನಿಸುತ್ತಾ ವ್ಯಾಯಾಮ ಅಭ್ಯಾಸ ಮಾಡಬೇಕು. ಯೋಗಶಾಸ
ಹೇಳುವಂತೆ ಪ್ರಾಣಾಯಾಮ ಸಹಿತ ವ್ಯಾಯಾಮವು ಎಂದಿಗೂ ಪ್ರಶಸ್ತ.

ವ್ಯಾಯಾಮ ಮಾಡುವಾಗ ನಮ್ಮ ಉಸಿರಾಟದ ಹರಿವನ್ನು ಗಮನಿಸುತ್ತಾ, ಪ್ರತಿಯೊಂದು ಚಲನೆಯನ್ನೂ
ಉಸಿರಾಟದ ಜತೆ ಜೋಡಿಸುತ್ತಾ ಮಾಡಬೇಕು. ಉದಾಹರಣೆಗೆ ಆಸನಗಳಲ್ಲಿ ಕೈಯನ್ನು ಎತ್ತುವಾಗ
ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ, ಕೈಯನ್ನು ಕೆಳಗೆ ಇಳಿಸುವಾಗ ಉಸಿರನ್ನು ಹೊರಗೆ ಬಿಡುತ್ತಾ ಮಾಡ
ತಕ್ಕದ್ದು. ಇದೇ ರೀತಿ, ಬಗ್ಗುವಾಗ, ಏಳುವಾಗ, ಕಾಲುಗಳ ಚಲನೆಯಲ್ಲಿ, ಮಲಗುವಾಗ, ಕುಳಿತುಕೊಳ್ಳುವಾಗ-
ಹೀಗೆ ವ್ಯಾಯಾಮದ ಪ್ರತಿಯೊಂದು ಚಲನೆಯನ್ನು ಸಹ ನಮ್ಮ ಉಸಿರಾಟದ ಜತೆಗೆ ಸಂಯೋಜಿಸಿಕೊಂಡು
ಮಾಡಿದರೆ ವ್ಯಾಯಾಮದ ಸಂಪೂರ್ಣ ಲಾಭವನ್ನು ತೆಗೆದುಕೊಳ್ಳಬಹುದು. ಇದೇ ರೀತಿ, ವ್ಯಾಯಾಮದ
ನಡುವೆ ಸ್ವಲ್ಪ ಸಮಯ ಕಣ್ಣು ಮುಚ್ಚಿ ಉಸಿರಾಟವನ್ನು ಗಮನಿಸಿ, ಉಸಿರಾಟವು ಸಹಜ ಸ್ಥಿತಿಗೆ ಮರಳುವ ತನಕ
ವಿಶ್ರಮಿಸಿ ನಂತರ ವ್ಯಾಯಾಮ ಮುಂದುವರಿಸುವುದು ಕ್ಷೇಮ.

ಅಂತೆಯೇ, ಸಂಪೂರ್ಣ ವ್ಯಾಯಾಮದ ಅಭ್ಯಾಸವಾದ ನಂತರ ವಿಶೇಷವಾಗಿ ಮಾಡುವ ಪ್ರಾಣಾಯಾಮದ ಮೂಲಕ ಶರೀರ-ಇಂದ್ರಿಯ- ಮನಸ್ಸುಗಳನ್ನು ಶಾಂತ ಸ್ಥಿತಿಗೆ ಮರಳುವಂತೆ ಮಾಡಿದ ನಂತರ, ದಿನನಿತ್ಯದ ಚಟುವಟಿಕೆಗಳನ್ನು ಪ್ರಾರಂಭಿಸುವುದು ಒಳ್ಳೆಯದು. ಈ ರೀತಿ ನಮ್ಮ ವ್ಯಾಯಾಮದ ದಿನಚರ್ಯೆಯನ್ನು ಪ್ರಾಣಾಯಾಮದ ಜತೆಗೆ ಅಭ್ಯಾಸ ಮಾಡಿದಾಗ ನಮ್ಮ ಆಯುವಿನ ನಾಲ್ಕು ಘಟಕಗಳಾದ ಶರೀರ-ಇಂದ್ರಿಯ-ಮನಸ್ಸು ಮತ್ತು ಆತ್ಮಗಳಿಗೆ ಸ್ವಾಸ್ಥ್ಯದ ಸಂಪತ್ತನ್ನು ತುಂಬಬಹುದು. ಆದ್ದರಿಂದ, ವ್ಯಾಯಾಮ ಮಾಡುವುದು ಮುಖ್ಯ. ಸರಿಯಾದ ರೀತಿಯಲ್ಲಿ ವ್ಯಾಯಾಮ ಮಾಡುವುದು ಅದಕ್ಕಿಂತ ಮುಖ್ಯ. ಆದರೆ, ಉಸಿರಾಟವನ್ನು ಗಮನಿಸುತ್ತಾ ಪ್ರಾಣಾಯಾಮ ಸಹಿತವಾದ ವ್ಯಾಯಾಮವನ್ನು ಮಾಡುವುದು ಅತಿಮುಖ್ಯ.

ಮೊದಲಿಗೆ, ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಮತ್ತು ನಮ್ಮ ವ್ಯಾಯಾಮದ ಅಭ್ಯಾಸದಲ್ಲಿ ಉಸಿರಾಟದ
ಅರಿವನ್ನು ಬೆಳೆಸಿಕೊಳ್ಳೋಣ. ನಂತರ ಉಸಿರಾಟದ ಜತೆಗೆ ಸಂಯೋಜಿಸಿದ ಆಸನಗಳ ಅಭ್ಯಾಸವನ್ನು ಮಾಡಿ
ಶರೀರವನ್ನು ಸಜ್ಜುಗೊಳಿಸೋಣ. ನಂತರ, ವಿಶಿಷ್ಟ ರೀತಿಯ ಪ್ರಾಣಾಯಾಮಗಳ ಅಭ್ಯಾಸವನ್ನು ಮಾಡಿ
ತನ್ಮೂಲಕ ಸ್ವಾಸ್ಥ್ಯದ ಅತ್ಯುನ್ನತ ಅನುಭವವನ್ನು ಪಡೆದುಕೊಳ್ಳೋಣ. ಈ ನಿರ್ದಿಷ್ಟ ಗುರಿಸಾಧನೆಯ ಮೊದಲ ಹೆಜ್ಜೆಯೇ ನಾನು ಮೇಲೆ ಹೇಳಿದ ತ್ರಿಸೂತ್ರದ ಅಭ್ಯಾಸ. ಇದರೊಂದಿಗೆ ಇಂದೇ ಪ್ರಾರಂಭಿಸೋಣ ಪ್ರಾಣಾಯಾಮದ ಪ್ರಯಾಣ!

ಇದನ್ನೂ ಓದಿ: Dr Sadhanasree Column: ರಾತ್ರಿ ನಿದ್ದೆಯ ವರವೂ, ಹಗಲು ನಿದ್ದೆಯ ಶಾಪವೂ