ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಡಾ.ಸಾಧನಶ್ರೀ
ಆಯುರ್ವೇದ ಎಂದರೆ ‘ಆಯು’ವಿನ ವೇದ, ‘ಆಯು’ವಿನ ಜ್ಞಾನ. ‘ಆಯು’ ಎಂದರೆ ಶರೀರ, ಇಂದ್ರಿಯ, ಸತ್ವ ಮತ್ತು
ಚೈತನ್ಯದ ಸಂಯೋಗ. ಈ ನಾಲ್ಕು ಘಟಕಗಳು ಒಟ್ಟುಗೂಡಿದರೆ ಮಾತ್ರ ಜೀವ-ಜೀವನ. ಹಾಗಾಗಿಯೇ, ಆಯುರ್ವೇ ದವು ತಿಳಿಸುತ್ತದೆ ನಮ್ಮ ಬದುಕು ದೇಹ-ಇಂದ್ರಿಯ-ಮನಸ್ಸು-ಆತ್ಮಗಳೆಂಬ 4 ಕಂಬಗಳ ಮೇಲೆ ನಿಂತಿದೆ. ಈ ನಾಲ್ಕು ಒಂದೆಡೆ ಇದ್ದಾಗ ಮಾತ್ರ ಬದುಕು.
ಇವುಗಳ ಬೇರ್ಪಡುವಿಕೆಯೇ ಮರಣ. ಈ ನಾಲ್ಕು ಸ್ತಂಭಗಳ ಮೇಲೆ ನಿಂತ ಬದುಕಿಗೆ ಮೂರು ಉಪಸ್ತಂಭಗಳಿವೆ. ಅವುಗಳು- ವಿವೇಚಿತ ಆಹಾರ, ಉತ್ತಮ ನಿದ್ದೆ ಮತ್ತು ನಾವು ಮಾಡುವ ಆರೋಗ್ಯಪೂರಕ ಚಟುವಟಿಕೆಗಳು. ನಾವು ಸೇವಿಸುವ ಆಹಾರವು, ಶರೀರ ಮತ್ತು ಇಂದ್ರಿಯಗಳನ್ನು ಪ್ರಧಾನವಾಗಿ ಪೋಷಿಸುತ್ತದೆ.
ನಾವು ಸರಿಯಾಗಿ ಮಾಡುವಂತಹ ನಿದ್ದೆಯು ಇಂದ್ರಿಯ ಮತ್ತು ಮನಸ್ಸುಗಳನ್ನು ಕಾಪಾಡಿದರೆ ನಾವು ಮಾಡು ವಂತಹ ಚಟುವಟಿಕೆಗಳು (ಶಾರೀರಿಕ, ವಾಚಿಕ ಹಾಗು ಮಾನಸಿಕ) ನಮ್ಮ ಮನಸ್ಸು ಮತ್ತು ಚೈತನ್ಯವನ್ನು ಪ್ರಭಾವಿ ಸುತ್ತದೆ. ಹಾಗಾಗಿ, ನಮ್ಮ ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸಿಕೊಳ್ಳಬೇಕಾದರೆ ನಾವು ನಮ್ಮ ನಿದ್ದೆಯನ್ನು ಸುಧಾರಿಸಿಕೊಳ್ಳಲೇಬೇಕು. ನಿದ್ದೆಯನ್ನು ಸರಿಯಾಗಿ ಮಾಡಿದ್ದೇ ಆದರೆ ಮನಸ್ಸಿನ ಆರೋಗ್ಯ, ಶಾಂತಿ, ನೆಮ್ಮದಿ, ವಿವೇಚನಾ ಶಕ್ತಿ ಹಾಗೂ ಚಿಂತನೆಗಳು ತನ್ನಷ್ಟಕ್ಕೆ ತಾನೇ ಉತ್ತಮವಾಗುತ್ತದೆ. ನಿದ್ದೆಯನ್ನು ನಾವು ಗಮನಿಸಿಕೊಳ್ಳದೆ, ನಾವು ಎಷ್ಟೇ ಯೋಗ- ಧ್ಯಾನ-ಕೌನ್ಸಿಲಿಂಗ್ ಇತ್ಯಾದಿಗಳನ್ನ ಮಾಡಿಕೊಂಡರೂ ಸಹ ಪ್ರಯೋಜನವಾಗುವುದಿಲ್ಲ.
ಯಾಕೆಂದರೆ ನಮ್ಮ ಮನಸ್ಸನ್ನು ನೇರವಾಗಿ ಪೋಷಿಸುವುದು ನಮ್ಮ ‘ನಿದ್ದೆ’. ನಮ್ಮ ಆರೋಗ್ಯ ರಕ್ಷಣೆಯಲ್ಲಿ ಆಹಾರ, ನಿದ್ರೆ ಮತ್ತು ಚಟುವಟಿಕೆಗಳು ತ್ರಿಕೋನದ ಮೂರು ಕೋನಗಳಿದ್ದ ಹಾಗೆ. ಒಂದು ಹೆಚ್ಚು ಕಡಿಮೆಯಾದರೂ ಸಹ ಅದರ ಪರಿಣಾಮ ನೇರವಾಗಿ ಇನ್ನೆರಡರ ಮೇಲೆ ಆಗುವುದು ಖಂಡಿತ. ನಮ್ಮ ಆಹಾರವು ಸರಿ ಇಲ್ಲದಿದ್ದಾಗ ನಮ್ಮ ರಾತ್ರಿಯ ನಿದ್ದೆಯೂ ಕೆಡುತ್ತದೆ. ನಮ್ಮ ನಿದ್ದೆ ಏರುಪೇರಾದಾಗ ಅದರಿಂದ ಚಟುವಟಿಕೆಗಳು ಮೇಲೆ ಕೆಳಗೆ ಆಗುವ ಸಂಭವ ಹೆಚ್ಚು. ನಮ್ಮ ಚಟುವಟಿಕೆಗಳು ಕ್ರಮವಾಗಿ ಇಲ್ಲದಿದ್ದಾಗ ಅದು ನಮ್ಮ ಆಹಾರದ ಜೀರ್ಣದ ಮೇಲೆ ನೇರ ಪ್ರಭಾವವನ್ನು ಉಂಟು ಮಾಡುತ್ತದೆ.
ಹಾಗಾಗಿ, ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕಾದರೆ ಈ ಮೂರು ಉಪಸ್ಥಂಭಗಳ ಜ್ಞಾನ, ಅಂದರೆ- ನಮ್ಮ
ಆಹಾರ, ನಿದ್ರೆ ಮತ್ತು ಚಟುವಟಿಕೆಗಳ ಬಗ್ಗೆ ತಿಳುವಳಿಕೆಯು ಅತ್ಯವಶ್ಯಕ. ಹಾಗಾಗಿ, ಇಂದಿನ ಈ ಲೇಖನದಲ್ಲಿ ಆಯುರ್ವೇದವು ನಿದ್ದೆಯ ಬಗ್ಗೆ ಏನು ಹೇಳುತ್ತದೆ ಅನ್ನುವುದನ್ನ ಚರ್ಚೆ ಮಾಡೋಣ.
ನಾನು ಕ್ಲಿನಿಕ್‌ನಲ್ಲಿ ಪೇಷೆಂಟ್‌ಗಳನ್ನು ನೋಡುವಾಗ ಮತ್ತು ಅವರನ್ನು ‘ಪರೀಕ್ಷೆ ಮಾಡುವಾಗ ತಪ್ಪದೇ ಕೇಳುವ ಪ್ರಶ್ನೆ ನಿಮ್ಮ ನಿದ್ದೆ ಹೇಗಿದೆ?’. ಅದಕ್ಕೆ ಸಾಮಾನ್ಯವಾಗಿ ಬರುವ ಉತ್ತರಗಳು- ಈ ನಡುವೆ ಯಾಕೋ ಅಷ್ಟು ಸರಿ ಇಲ್ಲ, ಮಧ್ಯೆ ತುಂಬಾ ಸಲ ಎಚ್ಚರವಾಗುತ್ತದೆ, ಸಿಕ್ಕಾಪಟ್ಟೆ ಕನಸುಗಳು ಬೀಳುತ್ತವೆ, ಬೆಳಗ್ಗೆ ಎದ್ದಾಗ ಲವಲವಿಕೆನೇ
ಇರುವುದಿಲ್ಲ, ಹೀಗೆ.. ಹೌದು! ಇಂದಿನ ಯಾಂತ್ರಿಕ ಬದುಕಿನಲ್ಲಿ ‘ಅನಿದ್ರತೆ’ ಎಂಬುವುದು ಬಹುದೊಡ್ಡ ಸಮಸ್ಯೆ ಯಾಗುದೆ ಎಂಬುದರಲ್ಲಿ ಸಂಶಯವೇ ಇಲ್ಲ.
ನಿದ್ರಾ ನಾಶದಿಂದ ದೇಹ ಮತ್ತು ಮನಸ್ಸು-ಎರಡೂ ಸಹ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಾ ಇದೆ. ಹಾಗಾಗಿ, ಆರೋಗ್ಯ ರಕ್ಷಣೆಯಲ್ಲಿ ಬಹು ಮುಖ್ಯವಾದ ಹೆಜ್ಜೆ ಎಂದರೆ ನಮ್ಮ ನಿದ್ದೆಯನ್ನು ಸರಿ ಮಾಡಿಕೊಳ್ಳುವುದು. ಅದಕ್ಕೆ ಬೇಕಾಗಿರುವುದು ‘ಸರಿಯಾದ ನಿದ್ದೆ’ ಎಂದರೆ ಏನು ಎಂಬ ತಿಳುವಳಿಕೆ.
ಈ ತಿಳುವಳಿಕೆಗೆ ನಾವು ಕೇಳಬೇಕಾದ ಮೊದಲ ಪ್ರಶ್ನೆಯೆಂದರೆ – ನಿದ್ದೆ ಎಂದರೇನು ? ಬಹಳ ಸರಳವಾಗಿ ಹೇಳಬೇಕು ಎಂದರೆ ನಿದ್ದೆ ಎಂದರೆ ನಮ್ಮ ದೇಹಕ್ಕೆ ಬೇಕಾದಂತಹ ದಿನನಿತ್ಯದ ವಿಶ್ರಾಂತಿ. ಮನುಷ್ಯನು ತಾನು ಮಾಡುವ ಕೆಲಸದ ಶ್ರಮದಿಂದಾದ ದಣಿವನ್ನು ನಿವಾರಿಸಿಕೊಳ್ಳಲು, ಎಲ್ಲ ಇಂದ್ರಿಯಗಳು ತಮ್ಮ ಕೆಲಸಕಾರ್ಯದಿಂದ ಮುಕ್ತಿ ಹೊಂದಿ ಪಡೆಯುವ ವಿಶ್ರಾಂತ ಸ್ಥಿತಿಯೇ ನಿದ್ದೆ. ಶರೀರ-ಇಂದ್ರಿಯ-ಮನಸ್ಸುಗಳಲ್ಲಿ ಪೂರ್ತಿ ದಿನ ಆದಂತಹ ಏರುಪೇರುಗಳನ್ನು ವ್ಯತ್ಯಾಸಗಳನ್ನು ಸರಿಪಡಿಸಿ, ಅವುಗಳನ್ನು repair and refresh ಮಾಡಿ, ಮುಂದಿನ ದಿನಕ್ಕೆ ತಯಾರು ಮಾಡುವಂತಹ ಪ್ರಕ್ರಿಯೆಗೆ ನಿದ್ದೆ ಎಂದು ಹೆಸರು. ನಿದ್ದೆ ಎಂದರೇನು ಎಂದು ತಿಳಿದುಕೊಂಡ
ನಂತರ, ನಿದ್ದೆ ಯಾಕೆ ಮಾಡಬೇಕು ಎನ್ನೂವ ಪ್ರಶ್ನೆ ಬರುವುದು ಸಹಜ. ಸ್ನೇಹಿತರೆ, ನಮ್ಮ ಜೀವದ ಎಲ್ಲಾ ಕ್ರಿಯೆಗಳನ್ನು ಮೂರು ಗುಣಗಳು ನಿಯಂತ್ರಿಸುತ್ತವೆ.
ಸತ್ತ್ವ, ರಜಸ್ಸು ಮತ್ತು ತಮಸ್ಸು. ಹಗಲಿನಲ್ಲಿ, ನಾವು ಕಾರ್ಯ ಕೆಲಸಗಳನ್ನು ಮಾಡಬೇಕಾದರೆ, ಹೊರಗಿನ ಜಗತ್ತಿನ ಜೊತೆ ವ್ಯವಹರಿಸಬೇಕಾದರೆ ರಜಸ್ಸು ಮುಂಚೂಣಿಯಲ್ಲಿರಬೇಕು. ಹಾಗೆಯೇ, ಸರಿಯಾದ ನಿರ್ಧಾರಗಳನ್ನು ಮಾಡಲು, ಸತ್ಯ-ಅಸತ್ಯ, ಹಿತ-ಅಹಿತಗಳ ವಿವೇಚನೆಗೆ ಸತ್ತ್ವ ಗುಣ ಬೇಕು. ಹಾಗಾಗಿ, ದಿನದಲ್ಲಿ ರಜಸ್ಸು ಮತ್ತು ಸತ್ತ್ವಗಳು ಸಕ್ರಿಯವಾಗಿದ್ದು, ಅಲ್ಲಿ ತಮಸ್ಸಿಗೆ ಅವಕಾಶವಿಲ್ಲ. ದಿನ ಕಳೆದ ಮೇಲೆ, ರಾತ್ರಿ ಆರಂಭವಾದಾಗ, ತಮಸ್ಸಿನ ಪಾಳಿ ಶುರು. ತಮಸ್ಸು ಮತ್ತು ಕ-ಗಳ ಪ್ರಭಾವದಿಂದ ನಮಗೆ ನಿದ್ದೆ ಆವರಿಸುತ್ತದೆ.
ನಾವು ನಿದ್ದೆ ಮಾಡುವಾಗ ಇಡೀ ಶರೀರದಲ್ಲಿ ಕಫ ಮತ್ತು ತಮಸ್ಸುಗಳು, ಆ ದಿನ ಆಗಿರುವ ಏರುಪೇರುಗಳನ್ನು ಶಮನ ಮಾಡಿ, ಶಾರೀರಿಕ ಕ್ರಿಯೆಗಳನ್ನು ಸರಿ ಮಾಡಿ, ಮನಸ್ಸಿನ ಉದ್ವೇಗಗಳನ್ನು ಶಾಂತ ಮಾಡಿ, ಇಂದ್ರಿಯಗಳನ್ನು ಪುನರುತ್ತೇಜಿಸಿ, ಎಲ್ಲ ಘಟಕಗಳನ್ನು- ಅಂದರೆ ಶರೀರ, ಇಂದ್ರಿಯ ಮತ್ತು ಮನಸ್ಸುಗಳನ್ನು ಸಾಮ್ಯಾವಸ್ಥೆಗೆ
ತರುತ್ತವೆ. ಆದರೆ, ಸ್ನೇಹಿತರೆ ಈ ಎಲ್ಲ ಪ್ರಕ್ರಿಯೆಗಳು ದಿನದ ಪ್ರಭಾವದಿಂದ ಅಥವಾ ಬೆಳಕಿನ ಪ್ರಭಾವದಿಂದ ನಡೆಯುವುದಿಲ್ಲ. ಬೆಳಕಿದ್ದಾಗ ತಮಸ್ಸಿನ ಆವರಣ ಹಾಗೂ ಕಫದ ಸ್ರಾವವು ಅಗದೆ, ಅವುಗಳ ಪ್ರಭಾವವಿಲ್ಲದೆ ದೇಹದಲ್ಲಿ epair and rejuvenation ಸಾಧ್ಯವೇ ಇಲ್ಲ.
ಹಾಗಾಗಿಯೇ ರಾತ್ರಿ ನಿದ್ದೆಯನ್ನು/ ರಾತ್ರಿ ಆವರಿಸಿಕೊಳ್ಳುವ ಸ್ವಾಭಾವಿಕವಾದ ನಿದ್ದೆಯನ್ನು ಆಯುರ್ವೇದವು
‘ಭೂತಧಾತ್ರಿ’ ಎಂದು ಕರೆಯುತ್ತದೆ. ‘ಭೂತ’ ಎಂದರೆ ಜೀವಿಗಳು, ‘ಧಾತ್ರಿ’ ಎಂದರೆ ಪ್ರೀತಿಯಿಂದ ಪೋಷಿಸುವ ತಾಯಿ. ನಮ್ಮ ಇಡೀ ಆಂತರಿಕ ವ್ಯವಸ್ಥೆಯನ್ನು ಪೋಷಿಸುವ ಕಾರಣ ರಾತ್ರಿನಿದ್ದೆಯನ್ನು ‘ಭೂತಧಾತ್ರಿ’ ಎಂದು
ಆಯುರ್ವೇದವು ಹೊಗಳಿದೆ.
ಅಮೆರಿಕಾದ ಖ್ಯಾತ ವೈದ್ಯ ಡಾಕ್ಟರ್ ಮಾರ್ಕ್ ಹೈಮನ್ ಹೇಳುವಂತೆ- ‘ನಮ್ಮ ಮೆದುಳು ನಮ್ಮ ದೇಹದ 20 ಪ್ರತಿಶತ ಶಕ್ತಿಯನ್ನು ಸೇವಿಸುತ್ತದೆ. ದಿನದ 24 ಗಂಟೆಯೂ ಸಹ ಮೆದುಳಿನಲ್ಲಿ ವಿವಿಧ ರೀತಿಯ ಚಟುವಟಿಕೆಗಳು ನಡೆಯು ತ್ತಿದ್ದು, ಈ ಪ್ರಕ್ರಿಯೆಗಳಲ್ಲಿ ಅನೇಕ ರೀತಿಯ ಮಲದ (metabolic waste) ಉತ್ಪತ್ತಿ ಆಗುತ್ತದೆ. ಈ ಮಲಗಳನ್ನು/ಶರೀರಕ್ಕೆ ಬೇಡದ ಹಾನಿಕಾರಕ ಅಂಶಗಳನ್ನು ನಮ್ಮ ಮೆದಳು ನಾವು ಮಾಡುವ ಗಾಢ ನಿದ್ದೆಯ ಅವಸ್ಥೆಯಲ್ಲಿ ಹೊರ ಹಾಕುತ್ತದೆ.
ನಾವು ನಿದ್ದೆಯನ್ನು ನಿಗದಿತ ಸಮಯದಲ್ಲಿ / ಸರಿಯಾದ ರೀತಿಯಲ್ಲಿ ಮಾಡದಿದ್ದಾಗ, ಮೆದುಳು ಈ ಹಾನಿ ಕಾರಕ ಮಲಗಳನ್ನು ಹೊರ ಹಾಕಲು ಸಾಧ್ಯವಾಗದೆ, ಅವುಗಳು ನರಮಂಡಲದಲ್ಲಿಯೇ ಉಳಿದುಕೊಂಡು ನಮ್ಮ ಸ್ಮೃತಿ, ವಿವೇಚನೆ, ಮೇಧಾ ಶಕ್ತಿಯ ಮೇಲೆ ನೇರವಾಗಿ ಪರಿಣಮಿಸುವುದಲ್ಲದೆ ಅನೇಕ ನರ ಮಂಡಲದ ವ್ಯಾಧಿಗಳನ್ನು ಸಹ ಪ್ರಾರಂಭ ಮಾಡುತ್ತದೆ’.
ಹಾಗಾಗಿ, ಸ್ನೇಹಿತರೆ ರಾತ್ರಿ ಮಾಡುವ ನಿದ್ದೆ ಹಾಗೂ ಹಗಲು ಮಾಡುವ ನಿದ್ದೆಗೂ ಬಹಳ ವ್ಯತ್ಯಾಸವಿದೆ. ಈ ಎರಡು
ರೀತಿಯ ನಿದ್ದೆಗಳು ಒಂದೇ ಅಲ್ಲ. ನಾನು ರಾತ್ರಿ ಕೆಲಸ ಮಾಡುತ್ತೇನೆ ಅದನ್ನು ಸರಿದೂಗಿಸಲು ಹಗಲು ಹೊತ್ತಿನಲ್ಲಿ
ಮಲಗುವ ಅಭ್ಯಾಸವನ್ನು ಮಾಡಿಕೊಂಡಿದ್ದೇನೆ ಅಂದರೆ ಹಗಲು ಮಾಡುವ ನಿದ್ದೆಯಿಂದ ರಾತ್ರಿ ನಿದ್ದೆಯ ಲಾಭ ಗಳು, ದೇಹ ಮನಸ್ಸುಗಳಿಗೆ ಸಿಗುವುದಿಲ್ಲ. ಆಯುರ್ವೇದದ ಪ್ರಕಾರ ಹಗಲು ನಿದ್ದೆಯು ಅನಾರೋಗ್ಯಕರ. ಕಾರಣ, ಇದು ಮೂರು ದೋಷಗಳನ್ನು ಅಂದರೆ ವಾತ, ಪಿತ್ತ, ಕಫಗಳನ್ನು ಹಾಳು ಮಾಡಿ ವಿವಿಧ ರೀತಿಯ ಕಾಯಿಲೆ ಗಳನ್ನು ಉಂಟುಮಾಡುತ್ತದೆ. ಉದಾಹರಣೆಗೆ- ಉಬ್ಬಸ, ಕೆಮ್ಮು, ತಲೆ ಭಾರ, ಪದೇಪದೇ ನೆಗಡಿ, ಆಹಾರದಲ್ಲಿ ರುಚಿ ಕಡಿಮೆ ಎನಿಸುವುದು, ಜೀರ್ಣಶಕ್ತಿ ಕುಂದುವುದು, ಅಂಗಗಳ ಮಾಂಸ ದುಷ್ಟಿ, ಮೇದಸ್ಸಿನ ದುಷ್ಟಿ, ಸ್ಥೌಲ್ಯ, ಮಧುಮೇಹ, ಪದೇ ಪದೇ ಜ್ವರ ಬರುವುದು, ಹುಳಿತೇಗು, ಎದೆ ಉರಿ, ಪಿತ್ತ ವಾಂತಿ ಇತ್ಯಾದಿ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಹಗಲು ನಿದ್ದೆಯನ್ನು ವರ್ಜಿಸಿ ರಾತ್ರಿ ನಿದ್ದೆಯನ್ನು ಪಾಲಿಸಿ- ಇದರಿಂದ ಮಾತ್ರ ಆರೋಗ್ಯದ ಲಾಭ ಸಾಧ್ಯ.
ರಾತ್ರಿ ಮಾಡುವ ನಿದ್ದೆ ಮಾತ್ರ ಸರಿಯಾದ ನಿದ್ದೆ ಎಂದು ತಿಳಿದುಕೊಂಡ ನಂತರ, ಮುಂದಿನ ಪ್ರಶ್ನೆ- ಎಷ್ಟು ಹೊತ್ತು ನಿz ಮಾಡಬೇಕು ಎಂಬುದು. ನಮ್ಮ ಶರೀರವು ನಮಗೆ ಕೆಲವು ಕರೆಗಳನ್ನು ನೀಡುತ್ತವೆ. ಅಂದರೆ ಅದಕ್ಕೆ ಆಹಾರ ಬೇಕಾದಾಗ ‘ಹಸಿವೆ’ಯ ಮೂಲಕ ನಮಗೆ ತಿಳಿಸುತ್ತದೆ. ನೀರು ಬೇಕಾದಾಗ ‘ಬಾಯಾರಿಕೆ’ ಎಂಬ ಸಿಗ್ನಲ್ ನೀಡುತ್ತದೆ. ಹಾಗೆಯೇ ಶರೀರ-ಇಂದ್ರಿಯ-ಮನಸ್ಸುಗಳು ದಣಿದಾಗ ‘ನಿದ್ದೆ’ ಎಂಬ ಕರೆಯನ್ನು ಕೊಡುವ ಮೂಲಕ ನಮಗೆ ಈಗ ವಿಶ್ರಾಂತಿ ಮಾಡುವ ಸಮಯ ಎಂದು ತಿಳಿಸುತ್ತದೆ.
ಹಾಗಾಗಿ, ಒಬ್ಬ ವ್ಯಕ್ತಿಗೆ ದಿನಕ್ಕೆ ಎಷ್ಟು ಆಹಾರ ಬೇಕು, ಎಷ್ಟು ನೀರು ಕುಡಿಯಬೇಕು ಅಂತ ಸಾಮಾನ್ಯವಾಗಿ ಹೇಳುವುದು ಕಷ್ಟ. ಅವುಗಳು ಅನೇಕ ವಿಚಾರಗಳ ಮೇಲೆ ನಿರ್ಧಾರಗೊಳ್ಳುತ್ತದೆ. ಹಾಗೆಯೇ ನಿದ್ದೆಯೂ ಕೂಡ.
ಆದರೆ, ನಮಗೆ ಎಷ್ಟು ನಿದ್ದೆ ಬೇಕು ಎಂದು ನಾವೇ ನಿರ್ಧಾರ ಮಾಡಲು ಆಯುರ್ವೇದವು ನಮಗೆ ಕೆಲವು ಸೂಚನೆಗಳನ್ನು ನೀಡುತ್ತದೆ. ಆಯುರ್ವೇದವು ನಾವು ಬೆಳಗ್ಗೆ ಏಳುವ ಸಮಯವನ್ನು ಖಚಿತವಾಗಿ ನಿರ್ಧರಿಸಿದೆ. ಆಯುರ್ವೇದದ ಪ್ರಕಾರ ಸ್ವಸ್ಥರು ಪ್ರತಿನಿತ್ಯ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿಯೇ ಏಳಬೇಕು. ಅಂದರೆ, ಸೂರ್ಯೋದಯದ 90 ನಿಮಿಷಗಳ ಮುನ್ನ ನಾವೆಲ್ಲರೂ ಹಾಸಿಗೆಯಿಂದ ಹೊರಗೆ ಇರಬೇಕು.
ಇನ್ನು ಯಾವುದೇರೀತಿಯ ಬಾಹ್ಯ ಪ್ರಚೋದನೆಗಳಿಲ್ಲದೆ ಎಚ್ಚರವಾಗಿ, ಎದ್ದಾಗ ಶರೀರದಲ್ಲಿ ಲವಲವಿಕೆ, ದ್ರಿಯಗಳಲ್ಲಿ ಉತ್ಸಾಹ, ಮಾನಸಿಕ ತೃಪ್ತಿ ಅನುಭವಕ್ಕೆ ಬರಬೇಕು. ಅಲಸ್ಯ, ಮೈ ಭಾರ, ಮತ್ತೆ ಮಲಗಬೇಕೆಂಬ
ಅನಿಸಿಕೆ ಇರಬಾರದು. ಹಿಂದಿನ ಆಹಾರ ಕಾಲದಲ್ಲಿ ಸೇವಿಸಿದ ಆಹಾರವು ಸಂಪೂರ್ಣ ಜೀರ್ಣವಾಗಿ ಮಲಮೂತ್ರ ಗಳ ಪ್ರವೃತ್ತಿ ಬಂದಿರಬೇಕು. ಇಂತಹ ನಿದ್ದೆಯನ್ನು ನಾವು ಸತತವಾಗಿ ಅಭ್ಯಾಸ ಮಾಡಿಕೊಂಡರೆ ನಮ್ಮ ಆಯುಷ್ಯ ವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ಆಯುರ್ವೇದದ ಭರವಸೆ.
ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಯಾವುದೇ ತೊಂದರೆ ಇಲ್ಲದೆ ಏಳಲು ಮತ್ತು ಎದ್ದ ಮೇಲೆ ಹೇಳಿದ ಎಲ್ಲ ಲಕ್ಷಣಗಳನ್ನು ಅನುಭವಿಸಲು ಎಷ್ಟು ನಿದ್ದೆಯ ಅವಶ್ಯಕತೆ ಇದೆಯೋ ಅದು ಆ ವ್ಯಕ್ತಿಗೆ ಬೇಕಾದ ನಿದ್ದೆಯ ಪ್ರಮಾಣ. ಸಾಮಾನ್ಯವಾಗಿ ಎಳೆಯ ಮಕ್ಕಳಿಗೆ ಮತ್ತು ಕಫ ಪ್ರಕೃತಿಯವರೆಗೆ ಅಂದಾಜು ಎಂಟರಿಂದ ಹತ್ತು ಗಂಟೆ ನಿದ್ರೆ ಬೇಕಾದರೆ, ಯುವಕರಿಗೆ ವಾತಪಿತ್ತ ಪ್ರಕೃತಿಯವರಿಗೆ ಆರರಿಂದ ಏಳು ಗಂಟೆ ನಿದ್ರೆ ಸಾಕು.
ಚರಕಾಚಾರ್ಯರು ಹೇಳುತ್ತಾರೆ, ‘ಒಬ್ಬ ಸ್ವಸ್ಥನಿಗೆ ಈ ಲಕ್ಷಣಗಳಿರಬೇಕು – ನಿದ್ರಾಲಾಭೋ ಯಥಾಕಾಲಮ್ – ಸರಿಯಾದ ಸಮಯಕ್ಕೆ ನಿದ್ದೆ ಬರಬೇಕು, ವೈಕಾರಿಕಾಣಾಂ ಚ ಸ್ವಪ್ನಾನಾಂ ಅದರ್ಶ ನಮ್ – ವಿಕೃತವಾದ ಸ್ವಪ್ನಗಳು ಬೀಳದಿರುವುದು ಮತ್ತು ಸುಖೇನ ಚ ಪ್ರತಿಬೋಧನಮ್ – ಸುಖವಾಗಿ ಪ್ರಚೋದನೆಯಿಲ್ಲದೆ ಎಚ್ಚರವಾಗಬೇಕು’. ಸ್ನೇಹಿತರೆ ಈ ರೀತಿಯ ಲಕ್ಷಣಗಳನ್ನು ನಾವು ಅನುಭವಿಸಬೇಕೆಂದರೆ ನಮ್ಮ ನಿದ್ದೆಯ ಗುಣ ಮತ್ತು ಪ್ರಮಾಣ ಸರಿಯಾಗಿರಬೇಕು.
ಅದನ್ನು ಸಾಧಿಸಲು ನಮ್ಮ ದಿನಚರಿ ಅಂದರೆ ಪೂರ್ತಿ ದಿನದ ಆಹಾರ-ವಿಹಾರ ಮತ್ತು ವಿಚಾರಗಳು ಅತಿ ಮುಖ್ಯ.
ಆಯುರ್ವೇದೋಕ್ತ ಉತ್ತಮವಾದ ದಿನಚರಿಯ ಪಾಲನೆಯಿಂದ ನಾವು ಬಹಳ ಸಹಜವಾಗಿ ಈ ಲಕ್ಷಣಗಳನ್ನು ಸಾಧಿಸಿ ತನ್ಮೂಲಕ ಸ್ವಾಸ್ಥ್ಯವನ್ನು ಸಂಪಾದಿಸಬಹುದು ಎಂಬುದು ಅನುಭವದ ಮಾತು. ಅರೋಗಃ ಸುಮನಾ ಹ್ಯೇವಂ ಬಲವರ್ಣಾನ್ವಿತೋ ವೃಷಃ ಐ ನಾತಿಸ್ಥೂಲಕೃಶಃ ಶ್ರೀಮಾನ್ ನರೋಜೀವೇತ್ ಸಮಾಃ ಶತಮ್ || (ಸು-ಶಾ-೪)
ಆರೋಗ್ಯ, ಉತ್ತಮವಾದ ಮಾನಸಿಕ ಸ್ಥಿತಿ, ಅಧಿಕ ಬಲ ಮತ್ತು ಕಾಂತಿಯುತವಾದ ವರ್ಣ, ವೃಷತೆ, ಅತಿ ದಪ್ಪವಿಲ್ಲದ ಅತಿತೆಳುವಿಲ್ಲದ ಸಮಕಾಯ ಮತ್ತು ಸೌಭಾಗ್ಯದ ಜೊತೆ ಉತ್ತಮ ನಿದ್ದೆಯು ನಮಗೆ ದೀರ್ಘಾಯುಷ್ಯವನ್ನೂ ನೀಡಿ
ಪಾಲಿಸುತ್ತದೆ ಎಂಬುದು ಋಷಿವಾಕ್ಯ!