Thursday, 24th October 2024

Dr Vijay Darda Column: ವಿದೇಶಿ ಸಂಬಂಧದ ಹೊಸ ಸಮೀಕರಣಗಳು

ಸಂಗತ

ಡಾ.ವಿಜಯ್‌ ದರಡಾ

ಭಾರತದ ವಿದೇಶಾಂಗ ನೀತಿ ಇನ್ನೊಂದು ಮಗ್ಗುಲು ಬದಲಿಸಿದೆ. ಕೆನಡಾ ಜತೆ ಚೆನ್ನಾಗಿದ್ದ ಸಂಬಂಧ ಹಳಸಿದೆ. ಪಾಕಿಸ್ತಾನದ ಜತೆಗೆ ಕೆಟ್ಟಿದ್ದ ಸಂಬಂಧದಲ್ಲಿ ಹೊಸ ಬೆಳಕು ಕಾಣಿಸುತ್ತಿದೆ. ನೆರೆರಾಷ್ಟ್ರಕ್ಕೆ ವಿದೇಶಾಂಗ ಮಂತ್ರಿ ಜೈಶಂಕರ್ ನೀಡಿದ ಭೇಟಿಯಲ್ಲಿನ ಅಚ್ಚರಿಗಳನ್ನು ಗಮನಿಸಿದ್ದೀರಾ?

ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಶಾಂಘೈ ಕೋ-ಆಪರೇಷನ್ ಆರ್ಗನೈಸೇಷನ್ (ಎಸ್‌ಸಿಒ) ಸಭೆಗೆ ಭಾರತದಿಂದ ಯಾರಾದರೊಬ್ಬ ಪ್ರತಿನಿಧಿ ಆಗಮಿಸಬಹುದು ಎಂಬ ನಿರೀಕ್ಷೆಯಲ್ಲಿ ಪಾಕಿಸ್ತಾನ ಇತ್ತು. ಆದರೆ ಕೊನೆಗೆ ಸ್ವತಃ ಭಾರತದ ವಿದೇಶಾಂಗ ವ್ಯವಹಾರಗಳ ಮಂತ್ರಿ ಎಸ್.ಜೈಶಂಕರ್ ಅವರೇ ಆಗಮಿಸಿದಾಗ ಆ ದೇಶಕ್ಕೆ ಅಚ್ಚರಿ. ಜೈಶಂಕರ್ ಪಾಕಿಸ್ತಾನಕ್ಕೆ ಹೋಗುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಈ ಅನಿರೀಕ್ಷಿತ ಬೆಳವಣಿಗೆಯನ್ನು
ನೋಡಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್ ‘ಸ್ಮಾರ್ಟ್ ಮೂವ್!’ ಎಂದು ಉದ್ಗರಿಸಿದ್ದು
ಸಹಜವೇ ಆಗಿತ್ತು. ಪಾಕಿಸ್ತಾನದ ಸರಕಾರ ಕೂಡ ಭಾರತದ ವಿದೇಶಾಂಗ ಸಚಿವರನ್ನು ಸ್ವಾಗತಿಸುವಲ್ಲಿ ಯಾವುದೇ
ಎಡವಟ್ಟಾಗದಂತೆ ನೋಡಿಕೊಂಡಿತು.

ಕಳೆದ ವರ್ಷ ಗೋವಾದಲ್ಲಿ ನಡೆದ ಎಸ್‌ಸಿಒ ಸಭೆ ನನಗೆ ನೆನಪಾಗುತ್ತದೆ. ಅದಕ್ಕೆ ಪಾಕಿಸ್ತಾನದ ವಿದೇಶಾಂಗ ಸಚಿವ
ಬಿಲಾವಲ್ ಭುಟ್ಟೋ ಆಗಮಿಸಿದ್ದರು. ಆ ಸಮಯದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಇನ್ನೂ ತ್ವೇಷಮಯ
ವಾತಾವರಣವಿತ್ತು. ಬಿಲಾವಲ್ ಕೂಡ ಭಾರತಕ್ಕೆ ಆಗಮಿಸಿ ಕಟುವಾದ ಮಾತುಗಳನ್ನೇ ಆಡಿದ್ದರು. ಆದರೆ, ಜೈಶಂಕರ್ ತಮ್ಮ ಇಸ್ಲಾಮಾಬಾದ್ ಭೇಟಿಯನ್ನು ಕೊಂಚ ಬೇರೆಯದೇ ರೀತಿಯಲ್ಲಿ ನಿಭಾಯಿಸಿದ್ದಾರೆ. ಹೇಳಿಕೇಳಿ ಅವರು ನುರಿತ ರಾಜತಂತ್ರಜ್ಞರಾಗಿದ್ದವರು. ಈಗಂತೂ ಜಗತ್ತಿನ ಅತ್ಯಂತ ಪ್ರಭಾವಿ ವಿದೇಶಾಂಗ ಮಂತ್ರಿಗಳಲ್ಲಿ ಒಬ್ಬರು.

ಅವರು ಪಾಕಿಸ್ತಾನದ ಭೇಟಿಯ ವೇಳೆ ತಾವು ಹೇಳಬೇಕಾದ್ದನ್ನು ಕಠೋರವಾಗಿಯೇ ಹೇಳಿದರು, ಆದರೆ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸುವ ಗೋಜಿಗೆ ಹೋಗಲಿಲ್ಲ. ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಕೂಡ ಮೃದು ವಾದ ಧ್ವನಿಗೇ ಅಂಟಿಕೊಂಡಿದ್ದರು. ಅವರೂ ಭಾರತಕ್ಕೆ ನೋವಾಗುವಂಥ ಯಾವುದೇ ಮಾತುಗಳನ್ನು ಆಡಲಿಲ್ಲ.

ಅಚ್ಚರಿಯ ಸಂಗತಿಯೆಂದರೆ, ಭಾರತಕ್ಕೆ ವಿದೇಶಿ ವೇದಿಕೆಯಲ್ಲಿ ಮುಖಾಮುಖಿ ಆದಾಗಲೆಲ್ಲ ಕಾಶ್ಮೀರದ ವಿಷಯ ವನ್ನು ಪ್ರಸ್ತಾಪಿಸುವ ಚಟ ಪಾಕಿಸ್ತಾನಕ್ಕೆ ಇದ್ದರೂ, ಈ ಬಾರಿಯ ಜೈಶಂಕರ್ ಭೇಟಿಯ ವೇಳೆ ಪಾಕಿಸ್ತಾನದ ಪ್ರಧಾನಿಯೂ ಸೇರಿದಂತೆ ಯಾರೂ ಕಾಶ್ಮೀರ ವಿವಾದದ ಬಗ್ಗೆ ತುಟಿ ಬಿಚ್ಚಲಿಲ್ಲ. ಜೈಶಂಕರ್ ಮತ್ತು ಪಾಕಿಸ್ತಾನದ ಪ್ರಧಾನಿಯ ಈ ಸೌಹಾರ್ದಯುತ ನಡವಳಿಕೆಯಿಂದಾಗಿ ಎಸ್‌ಸಿಒ ಶೃಂಗದಲ್ಲಿ ಒಟ್ಟಾರೆ ವಾತಾವರಣ ತಿಳಿಯಾ ಗಿಯೂ, ಪರಸ್ಪರರಿಗೆ ಪೂರಕವಾಗಿಯೂ ಇತ್ತು. ಸಾಮಾನ್ಯವಾಗಿ ಒಂದು ದೇಶದ ಪ್ರಧಾನಿಯು ಇನ್ನೊಂದು ದೇಶದ ಪ್ರಧಾನಿ ಅಥವಾ ಅಧ್ಯಕ್ಷರನ್ನು ಮಾತ್ರ ಭೇಟಿಯಾಗುತ್ತಾರೆ.

ಆದರೆ, ಭಾರತದ ವಿದೇಶಾಂಗ ಮಂತ್ರಿ ಜೈಶಂಕರ್ ಅವರನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀ- ಭೇಟಿಯಾಗಿ ಮಾತುಕತೆ ನಡೆಸಿದರು. ಶಿಷ್ಟಾಚಾರ ಬದಿಗೊತ್ತಿ ಅವರು ಜೈಶಂಕರ್ ಅವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ಭಾರತಕ್ಕೆ ಮರಳಿದ ಮೇಲೆ ಜೈಶಂಕರ್ ಈ ನಡೆಯನ್ನು ಮುಕ್ತವಾಗಿ ಮೆಚ್ಚಿಕೊಂಡರು. ಸೋಷಿಯಲ್ ಮೀಡಿಯಾ ಮೂಲಕ ಅವರು ಶೆಹಬಾಜ್ ಷರೀ-ಗೆ ಪಾಕಿಸ್ತಾನದಲ್ಲಿನ ಆತಿಥ್ಯಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಅದಕ್ಕೆ ಶೆಹಬಾಜ್ ಷರೀಫ್ ಕೂಡ ಧನ್ಯವಾದ ಅರ್ಪಿಸಿ, “ನೀವು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಕ್ಕೆ ಅನಂತ ವಂದನೆಗಳು” ಎಂದು ಹೇಳಿದರು. ಎಸ್‌ಸಿಒ‌ ಶೃಂಗದ ಫೋಟೋಗಳನ್ನು ನಾನು ಗಮನಿಸಿದ್ದೇನೆ.

ಅಲ್ಲಿನ ಒಟ್ಟಾರೆ ವಾತಾವರಣ ಸೌಹಾರ್ದಯುತವಾಗಿತ್ತು. ಅದನ್ನು ನೋಡಿದರೆ ಉಭಯ ದೇಶಗಳ ಸಂಬಂಧದಲ್ಲಿ ಏನಾದರೂ ಸುಧಾರಣೆಯಾಗಬಹುದು ಎಂಬ ಆಶಾಭಾವನೆ ಮೂಡುವಂತಿತ್ತು. ಭೋಜನದ ವೇಳೆ ಪಾಕಿಸ್ತಾನದ
ವಿದೇಶಾಂಗ ಸಚಿವರು ಜೈಶಂಕರ್ ಜತೆಗೆ ಕುಳಿತು ಲೋಕಾಭಿರಾಮವಾಗಿ ಮಾತನಾಡಿದರು. ಈ ವೇಳೆಯಲ್ಲೂ
ಜೈಶಂಕರ್ ಅವರು ಪ್ರಧಾನಿ ಶೆಹಬಾಜ್ ಜತೆಗೆ ಮಾತನಾಡಿದರು. ಭಾರತ ಹಾಗೂ ಪಾಕಿಸ್ತಾನದ ನಡುವೆ ಹೀಗೆ ಒಳ್ಳೆಯ ಬೆಳವಣಿಗೆಗಳನ್ನು ನೋಡಲು ಖುಷಿಯಾಗುತ್ತದೆ. ಇತ್ತೀಚೆಗಷ್ಟೇ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ವಾರ್ಷಿಕ ಅಧಿವೇಶನದಲ್ಲಿ ಭಾರತ ಹಾಗೂ ಪಾಕಿಸ್ತಾನ ಯದ್ವಾತದ್ವಾ ಕಿತ್ತಾಡಿಕೊಂಡಿದ್ದವು!

ಬೇರೆ ಯಾರೂ ಅಲ್ಲ, ಸ್ವತಃ ಜೈಶಂಕರ್ ಮತ್ತು ಶೆಹಬಾಜ್ ಷರೀಫ್ ಅವರೇ ಪರಸ್ಪರರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರ‌ ಜಗಳ ಇಬ್ಬರು ಜಟ್ಟಿಗಳು ಕುತ್ತಿಗೆ ಪಟ್ಟಿ ಹಿಡಿದು ಸೆಣಸಿದಂತಿತ್ತು. ಅದಾಗಿ ಕೆಲವೇ ದಿನಗಳಲ್ಲಿ
ಅವರಿಬ್ಬರ ನಡವಳಿಕೆಯಲ್ಲಿ ಈ ರೀತಿಯ ಅಗಾಧ ರೂಪಾಂತರ ಕಾಣಿಸಿದರೆ ಅಚ್ಚರಿಯಾಗುವುದಿಲ್ಲವೇ?
ಈ ಬದಲಾವಣೆಯನ್ನು ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಆಗುತ್ತಿರುವ ಬದಲಾವಣೆಯ ಚಿಹ್ನೆ ಎಂದು ಹೇಳಬಹುದೇ? ಇದೊಂದು ಧನಾತ್ಮಕ ಬದಲಾವಣೆಯಂತೂ ಹೌದು. ನನ್ನ ಪ್ರಕಾರ ಶತ್ರುತ್ವ ಎಷ್ಟೇ ದೀರ್ಘ ವಾದದ್ದಾಗಿರಲಿ, ಅದು ಶಾಶ್ವತವಲ್ಲ.

ಯಾರೂ ಶಾಶ್ವತ ಶತ್ರುಗಳಲ್ಲ ಅಥವಾ ಶಾಶ್ವತ ಮಿತ್ರರೂ ಅಲ್ಲ. ಅದರಲ್ಲೂ ಬೇರೆ ಬೇರೆ ದೇಶಗಳ ನಡುವಿನ ಸಂಬಂಧದ ವಿಚಾರಕ್ಕೆ ಬಂದರೆ, ಇಂಥ ಸ್ನೇಹ ಅಥವಾ ವೈರತ್ವದಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ನೆರೆರಾಷ್ಟ್ರಗಳ ನಡುವೆ ಸ್ನೇಹವಿದ್ದರೆ ಇಬ್ಬರಿಗೂ ಲಾಭ. ಗಡಿ ಹಂಚಿಕೊಳ್ಳುವ ರಾಷ್ಟ್ರಗಳ ನಡುವೆ ಶತ್ರುತ್ವಕ್ಕಿಂತ
ಸೇಹದಿಂದಲೇ ಲಾಭ ಹೆಚ್ಚು. ಎರಡೂ ದೇಶಗಳು ಪರಸ್ಪರ ಸಹಕಾರ ಮನೋಭಾವದಿಂದ ನಡೆದುಕೊಳ್ಳುವುದು
ಉಭಯ ದೇಶಗಳ ಹಿತಾಸಕ್ತಿಗೆ ಒಳ್ಳೆಯದು. ಪಾಕಿಸ್ತಾನ ಸದ್ಯ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದೆ. ಅದಕ್ಕೆ ತನ್ನ ಪರಿಸ್ಥಿತಿ ಏನು ಎಂಬುದು ಚೆನ್ನಾಗಿ ಗೊತ್ತಿದೆ. ತನ್ನ ದೇಶದ ಪ್ರಜೆಗಳ ಒಳಿತಿಗಾಗಿ ವಾಸ್ತವವನ್ನು ಒಪ್ಪಿಕೊಂಡು ಪರಿಸ್ಥಿತಿಯ ಸುಧಾರಣೆಗೆ ಪ್ರಯತ್ನಿಸುವುದು ಆ ದೇಶದ ಸರಕಾರಕ್ಕೆ ಅನಿವಾರ್ಯವಾಗಿದೆ. ಅದೇ ಸರಿಯಾದ ಕ್ರಮ ಕೂಡ.

ಭಾರತ ಹಾಗೂ ಪಾಕಿಸ್ತಾನದ ಜನಸಾಮಾನ್ಯರು ಯಾವಾಗಲೂ ಉಭಯ ದೇಶಗಳ ನಡುವೆ ಒಳ್ಳೆಯ ಸಂಬಂಧ ವಿರಬೇಕು ಎಂದೇ ಬಯಸುತ್ತಾರೆ. ಆದರೆ ನಿಜವಾದ ಅಡ್ಡಿಯಿರುವುದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಅಲ್ಲಿನ ಮಿಲಿಟರಿ ಬಾಸ್‌ಗಳಿಂದ. ಐಎಸ್‌ಐ ಮತ್ತು ಪಾಕಿಸ್ತಾನದ ಮಿಲಿಟರಿಯ ತಳಪಾಯವೇ ಭಾರತದ ಮೇಲಿನ ದ್ವೇಷದಿಂದ ನಿರ್ಮಾಣವಾಗಿದೆ. ಅವು ಯಾವಾಗಲೂ ಭಾರತ-ವಿರೋಧಿ ನೀತಿಯನ್ನೇ ಅನುಸರಿಸುತ್ತವೆ. ಚುನಾಯಿತ ಸರಕಾರಗಳು ಭಾರತದ ಜತೆಗೆ ಒಳ್ಳೆಯ ಸಂಬಂಧ ಇರಿಸಿಕೊಳ್ಳಲು ಹೊರಟಾಗಲೆಲ್ಲ ಐಎಸ್‌ಐ ಮತ್ತು ಮಿಲಿಟರಿ ಬಾಸ್‌ಗಳು ಏನಾದರೂ ಉಪದ್ವ್ಯಾಪ ಮಾಡಿ ಸಂಬಂಧ ಕೆಡಿಸುತ್ತಾರೆ. ಭಾರತದ ಜತೆಗಿನ ವೈರತ್ವ ಕೊನೆಗಾಣಿಸಲು ಇಮ್ರಾನ್ ಖಾನ್ ಯತ್ನಿಸಿದಾಗ ಏನಾಯಿತು ಎಂಬುದು ಗೊತ್ತಲ್ಲವೇ? ಅವರು ಅಧಿಕಾರ ಕಳೆದುಕೊಂಡು ಜೈಲಿಗೆ ಹೋಗಬೇಕಾಯಿತು.

ಐಎಸ್‌ಐ ಮತ್ತು ಪಾಕ್ ಸೇನೆಯ ಕಿಡಿಗೇಡಿತನಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕಿಲ್ಲ. ಹೀಗಾಗಿ ಜೈಶಂಕರ್
ಭೇಟಿಯ ವೇಳೆ ಎಲ್ಲವೂ ಚೆನ್ನಾಗಿ ಕಾಣಿಸಿತು ಎಂದಮಾತ್ರಕ್ಕೆ ಭಾರತ-ಪಾಕ್ ನಡುವೆ ಸಂಬಂಧ ಸುಧಾರಿಸಿ ಬಿಡುತ್ತದೆ ಎಂದು ನಿರೀಕ್ಷಿಸುವಷ್ಟು ಮುಗ್ಧ ನಾನಲ್ಲ. ಇದೊಂದು ಭೇಟಿಯಿಂದ ತಕ್ಷಣಕ್ಕೆ ಏನೋ ಮಹತ್ವದ ಸುಧಾರಣೆ ಆಗಿಬಿಡುವುದಿಲ್ಲ. ಉಭಯ ದೇಶಗಳ ನಡುವೆ ಇರುವ ಮರಗಟ್ಟಿದ ವಾತಾವರಣವನ್ನು ತಿಳಿಯಾಗಿಸಲು ಎರಡೂ ದೇಶಗಳು ಇನ್ನೂ ಸಾಕಷ್ಟು ಕೆಲಸ ಮಾಡುವ ಅಗತ್ಯವಿದೆ.

ಈಗ ಕೆನಡಾದ ವಿಷಯಕ್ಕೆ ಬರೋಣ. ಇತ್ತೀಚೆಗೆ ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧ ಪಾತಾಳಕ್ಕೆ ಕುಸಿದಿದೆ. ಕೆನಡಾ ನಮ್ಮ ನೆರೆರಾಷ್ಟ್ರವೇನೂ ಅಲ್ಲ. ಆದರೆ, ಭಾರತಕ್ಕೆ ಅದು ಭಾವನಾತ್ಮಕವಾಗಿ ಹತ್ತಿರದಲ್ಲಿದೆ. ಏಕೆಂದರೆ ಕೆನಡಾದಲ್ಲಿ ಭಾರತೀಯ ಮೂಲದ ೧೮ ಲಕ್ಷ ಜನರು ವಾಸಿಸುತ್ತಿದ್ದಾರೆ. ಅಷ್ಟೇ ಅಲ್ಲ, ಅವರ ಜತೆಗೆ 2.25 ಲಕ್ಷ ಭಾರತೀಯ ವಿದ್ಯಾರ್ಥಿಗಳು ಕೆನಡಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಭಾರತ-ಕೆನಡಾ ನಡುವೆ ಸಂಬಂಧ ಹಾಳಾದರೆ ಅದರಿಂದ ಎರಡೂ ದೇಶಗಳ ಮೇಲೆ ಗಂಭೀರ ದುಷ್ಪರಿಣಾಮಗಳು ಉಂಟಾಗುವುದು ಸಹಜವೇ ಆಗಿದೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊಗೆ ದುರದೃಷ್ಟವಶಾತ್ ಇದು ಅರ್ಥವಾಗುತ್ತಿಲ್ಲ. ಅವರಿಗೆ ರಾಜಕೀಯ ಅಜೆಂಡಾವೇ ದೊಡ್ಡದು. ಟ್ರುಡೊ ಅಧಿಕಾರಕ್ಕೆ ಬಂದ ಲಾಗಾಯ್ತಿನಿಂದಲೂ ಭಾರತವನ್ನು ಕೆಣಕುತ್ತಲೇ ಇದ್ದಾರೆ.

ಭಾರತದ ಜತೆಗಿನ ಸಂಬಂಧದ ವಿಷಯದಲ್ಲಿ ಟ್ರುಡೊ ಹೇಗೆ ಆಗಾಗ ಉಲ್ಟಾ ಹೊಡೆಯುತ್ತಾರೆ ಎಂಬುದರ ಬಗ್ಗೆ ಈ ಅಂಕಣದಲ್ಲೇ ಹಿಂದೊಮ್ಮೆ ಬರೆದಿದ್ದೆ. ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರದೀಪ್ ಸಿಂಗ್ ನಿಜ್ಜರ್‌ನ ಹತ್ಯೆಯಾದಾಗ ಅದರಲ್ಲಿ ಭಾರತ ಸರಕಾರದ ಕೈವಾಡವಿದೆ ಎಂದು ಹಿಂದೆ-ಮುಂದೆ ನೋಡದೆ ಟ್ರುಡೊ ಆಪಾದಿಸಿದರು. ನಿಜ ಹೇಳಬೇಕೆಂದರೆ ಟ್ರುಡೊ ತನ್ನ ತಂದೆ ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿದ್ದಾರೆ. ಟ್ರುಡೊ ತಂದೆ ಪಿಯರೆ ಟ್ರುಡೊ ಕೂಡ ಕೆನಡಾದ ಪ್ರಧಾನಿಯಾಗಿದ್ದರು. 1985ರಲ್ಲಿ ಖಲಿಸ್ತಾನಿ ಉಗ್ರರು ಏರ್ ಇಂಡಿಯಾದ ಕನಿಷ್ಕ ವಿಮಾನಕ್ಕೆ ಬಾಂಬ್ ಇಟ್ಟು ಸ್ಪೋಟಿಸಿ 329 ಜನರನ್ನು ಕೊಂದಾಗ ಆ ದಾಳಿಯ ರೂವಾರಿಯಾದ ಖಲಿಸ್ತಾನಿ ಭಯೋತ್ಪಾದಕ ತಲ್ವಿಂದರ್ ಸಿಂಗ್ ಪಾರ್ಮರ್ ಕೆನಡಾದ ಆಶ್ರಯ ಪಡೆದಿದ್ದ. ಅವನನ್ನು ನಮ್ಮ ದೇಶಕ್ಕೆ ಗಡೀಪಾರು ಮಾಡಿ ಎಂದು ಭಾರತ ಎಷ್ಟೇ ಕೇಳಿಕೊಂಡರೂ ಪಿಯರೆ ಟ್ರುಡೋ ಒಪ್ಪಲಿಲ್ಲ.

ಅಂದಿನಿಂದ ಈವರೆಗೂ ಭಾರತದಲ್ಲಿ ಪ್ರತ್ಯೇಕ ದೇಶ ರಚನೆ ಮಾಡಬೇಕು ಎಂಬ ಸಂಚಿನೊಂದಿಗೆ ಹೋರಾಟ ನಡೆಸುತ್ತಿರುವ ಖಲಿಸ್ತಾನಿ ಉಗ್ರರಿಗೆ ಕೆನಡಾ ಸುರಕ್ಷಿತ ಸ್ವರ್ಗದಂತೆ ಆಗಿದೆ. ಈ ಭಯೋತ್ಪಾದಕರು ಬಹಿರಂಗ ವಾಗಿಯೇ ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುತ್ತಾರೆ. ಅದಕ್ಕೆ ಟ್ರುಡೊ ಬಹಿರಂಗವಾಗಿ ಬೆಂಬಲ ನೀಡುತ್ತಾರೆ. ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಉಗ್ರನೊಬ್ಬ ಕೆನಡಾದಲ್ಲಿ ಹತ್ಯೆಯಾದರೆ ಅದನ್ನು ಅಷ್ಟೊಂದು ದೊಡ್ಡ ವಿಷಯ ಮಾಡುವ ಅಗತ್ಯವಾದರೂ ಏನಿದೆ? ಒಬ್ಬ ಉಗ್ರ ಸತ್ತ ಎಂದು ಸಮಾಧಾನ ಮಾಡಿಕೊಳ್ಳಬೇಕು. ಅದರ ಬದಲು ಟ್ರುಡೊ ಈ ಘಟನೆಯನ್ನು ಭಾರತ-ವಿರೋಧಿ ಭಾವನೆಗಳನ್ನು
ಉದ್ದೀಪಿ ಸಲು ಬಳಸಿಕೊಂಡರು. ನನಗೆ ತಿಳಿದಂತೆ ಭಾರತ ಸರಕಾರ ಯಾವತ್ತೂ ಬೇರೆ ದೇಶದ ಸಾರ್ವಭೌಮತೆಗೆ ಧಕ್ಕೆ ತರುವಂಥ ಹಿಂಸಾತ್ಮಕ ನೀತಿಗಳನ್ನು ಅನುಸರಿಸುವುದಿಲ್ಲ.

ಹೀಗಾಗಿ ಟ್ರುಡೋ ಮಾಡಿದ ಆರೋಪಗಳು ಸಂಪೂರ್ಣ ಆಧಾರರಹಿತ ಹಾಗೂ ಅರ್ಥಹೀನವಾಗಿವೆ. ಭಾರತದ
ರಾಯಭಾರಿಯ ಕಡೆಗೆ ಬೆರಳು ತೋರಿಸಿ ಅವರು ರಾಜತಾಂತ್ರಿಕತೆಯ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ.

ಹೀಗಾಗಿ ಭಾರತ ಸಿಟ್ಟಿಗೆದ್ದು ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನು ಕೆನಡಾದಿಂದ ವಾಪಸ್ ಕರೆಸಿಕೊಂಡಿದೆ. ನಂತರ
ಕೆನಡಾ ಅನುಸರಿಸಿದ ಕ್ರಮಕ್ಕೆ ತಿರುಗೇಟು ನೀಡಲು ಭಾರತದಲ್ಲಿದ್ದ ಕೆನಡಾದ ರಾಜತಾಂತ್ರಿಕ ಅಧಿಕಾರಿಗಳನ್ನು ಉಚ್ಚಾಟಿಸಿದೆ. ಇದು ಸಾಮಾನ್ಯ ಬೆಳವಣಿಗೆ ಅಲ್ಲ. ಇಷ್ಟಕ್ಕೂ ಕೆನಡಾ ಸರಕಾರ ಏಕೆ ಈ ಪರಿದ್ವೇಷದಿಂದ ನಡೆದುಕೊಳ್ಳುತ್ತಿದೆ? ಇದಕ್ಕೆ ಮುಂಬರುವ ಚುನಾವಣೆ ಕಾರಣವೋ ಅಥವಾ ಟ್ರುಡೊ ಬೇರೆ ಯಾರದ್ದೋ ಮಾತನ್ನು ತಾವು ಆಡುತ್ತಿದ್ದಾರೋ? ಸ್ವತಃ ಕೆನಡಾದ ರಾಜಕಾರಣಿಗಳು ಹಾಗೂ ಅಲ್ಲಿನ ರಾಜಕೀಯ ಪಂಡಿತರೇ ಟ್ರುಡೊ ನಡೆದುಕೊಳ್ಳುತ್ತಿರುವ ರೀತಿಯನ್ನು ಟೀಕಿಸುತ್ತಿರು ವುದರಿಂದ ಈ ಪ್ರಶ್ನೆ ಮುಖ್ಯವಾಗುತ್ತದೆ.

ಇಲ್ಲಿ ಇನ್ನೂ ಒಂದು ಪ್ರಶ್ನೆಯೇಳುತ್ತದೆ. ಅಮೆರಿಕ ಏಕೆ ಭಾರತದ ಕಡೆ ಬೆರಳು ತೋರಿಸುತ್ತಿದೆ? ಖಲಿಸ್ತಾನಿ ಉಗ್ರ ಗುರ್‌ಪತ್ವಂತ್ ಸಿಂಗ್ ಪನ್ನು ಹತ್ಯೆ ಸಂಚಿನಲ್ಲಿ ಭಾರತದ ಪಾತ್ರವಿದೆ ಎಂದು ಅಮೆರಿಕ ಆರೋಪ ಮಾಡುತ್ತಿರುವುದು ಏಕೆ? ಭಾರತದ ಮೇಲೆ ಒತ್ತಡ ಹೇರುವ ತಂತ್ರವೇ? ಭಾರತ-ಕೆನಡಾ ನಡುವೆ ಉಂಟಾಗಿರುವ ಈ ಬಿಕ್ಕಟ್ಟಿನಿಂದ
ಉಭಯ ದೇಶಗಳ ನಡುವಿನ ವಾಣಿಜ್ಯ ಸಂಬಂಧದ ಮೇಲೆ ಏನು ಪರಿಣಾಮ ಉಂಟಾಗಲಿದೆ ಎಂಬುದನ್ನು ಈಗಲೇ
ಹೇಳುವುದು ಕಷ್ಟ. ಆದರೆ, ಒಂದು ಸಂಗತಿಯಂತೂ ಸ್ಪಷ್ಟವಾಗಿದೆ: ಸಂಬಂಧ ಹಳಸಿದಷ್ಟೂ ಭಾರತೀಯರು ತಮ್ಮ
ಮಕ್ಕಳನ್ನು ಕೆನಡಾಕ್ಕೆ ಓದಲು ಕಳಿಸುವಾಗ ಹೆಚ್ಚು ಎಚ್ಚರಿಕೆ ವಹಿಸುತ್ತಾರೆ. ಮಕ್ಕಳನ್ನು ಕೆನಡಾಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಸಂಬಂಧ ಕೆಡಿಸಿಕೊಂಡರೆ ಭಾರತಕ್ಕಿಂತ ಕೆನಡಾಕ್ಕೇ ನಷ್ಟ ಹೆಚ್ಚು.

(ಲೇಖಕರು ಹಿರಿಯ ಪತ್ರಿಕೋದ್ಯಮಿ)

ಇದನ್ನೂ ಓದಿ: Dr Vijay Darda Column: ನಂಬಿಕೆಯನ್ನಾದರೂ ರಾಜಕೀಯದಿಂದ ದೂರವಿಡಿ!