Wednesday, 18th September 2024

Dr. Vijay Darda Column: ಇಷ್ಟಕ್ಕೂ ರಾಷ್ಟ್ರಪತಿಗಳ ಆಘಾತಕ್ಕೆ ಬಲವಾದ ಕಾರಣವಿದೆ !

ಸಂಗತ

ಡಾ.ವಿಜಯ್‌ ದರಡಾ

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಸರಕಾರಿ ಮೆಡಿಕಲ್ ಕಾಲೇಜೊಂದರಲ್ಲಿ ಸಂಭವಿಸಿದ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ರಾಷ್ಟ್ರಪತಿಗಳು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ದೇಶದ ರಾಷ್ಟ್ರಪತಿಗಳೇ ಒಂದು ಘಟನೆಯ ಬಗ್ಗೆ ಇಷ್ಟೊಂದು ಆತಂಕ ವ್ಯಕ್ತಪಡಿಸುತ್ತಾರೆಂದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದನ್ನು ಊಹಿಸಬೇಕು. ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ದಂಥ ಅಪರಾಧಗಳನ್ನು ನೋಡಿ ತೀವ್ರ ದುಃಖಗೊಂಡು ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

‘ನನಗೆ ತೀವ್ರ ದಿಗ್ಭ್ರಮೆ ಮತ್ತು ಆಘಾತ ಉಂಟಾಗಿದೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ನಿಜಕ್ಕೂ ಇದು ರಾಷ್ಟ್ರೀಯ ಮಟ್ಟದಲ್ಲಿ ಕಳವಳಪಡಬೇಕಾದ ವಿಚಾರ. ದೇಶದ ಪ್ರತಿಯೊಬ್ಬ ಪ್ರಜೆಯೂ ಇದರ ಬಗ್ಗೆ ಆತಂಕ ಗೊಳ್ಳಬೇಕು. ದೇಶ ಏಕೆ ಇಂಥ ಭಯಾನಕ ಪರಿಸ್ಥಿತಿಯನ್ನು ಎದುರಿಸುತ್ತಿದೆ ಮತ್ತು ಇದಕ್ಕೆ ಪರಿಹಾರವೇನು ಎಂಬ ಬಗ್ಗೆ ಭಾರತದ ಪ್ರತಿಯೊಬ್ಬ ನಾಗರಿಕನೂ ಯೋಚಿಸಬೇಕಾದ ಅಗತ್ಯವಿದೆ.

ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋ (ಎನ್ ಸಿಆರ್‌ಬಿ) ಪ್ರಕಾರ ಭಾರತದಲ್ಲಿ ಪ್ರತಿನಿತ್ಯ ಸರಾಸರಿ ೮೭ ಅತ್ಯಾಚಾರಗಳು ವರದಿಯಾಗುತ್ತಿವೆ. ನಾನಿಲ್ಲಿ ಬೇರೆ ರೀತಿಯ ಲೈಂಗಿಕ ಕಿರುಕುಳ ಅಥವಾ ದೌರ್ಜನ್ಯಗಳನ್ನು ಪ್ರಸ್ತಾಪ ಕೂಡ ಮಾಡುತ್ತಿಲ್ಲ. ಎನ್‌ಸಿಆರ್‌ಬಿ ದಾಖಲೆಯಲ್ಲಿರುವುದು ದೇಶದಲ್ಲಿ ದಾಖಲಾದ, ಅಂದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ, ಅತ್ಯಾಚಾರಗಳ ಅಂಕಿಅಂಶಗಳು ಮಾತ್ರ. ದೇಶದಲ್ಲಿ ಸಾವಿರಾರು ಅತ್ಯಾಚಾರಗಳು ಸಮಾಜದಲ್ಲಿ ಉಂಟಾಗುವ ಅವಮಾನಕ್ಕೆ ಹೆದರಿ ವರದಿಯೇ ಆಗುವುದಿಲ್ಲ. ಅವು ಅಲ್ಲಲ್ಲೇ ಮುಚ್ಚಿಹೋಗುತ್ತವೆ. ಇದಕ್ಕೆ ಇನ್ನೊಂದು ಬಲವಾದ ಕಾರಣವೆಂದರೆ, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗುವವರಲ್ಲಿ ಹೆಚ್ಚಿನವರು ಅಪರಿಚಿತರಾಗಿರುವುದಿಲ್ಲ, ಬದಲಿಗೆ ಅವರು ಸಂತ್ರಸ್ತೆಗೆ ಮೊದಲಿನಿಂದಲೂ ಪರಿಚಯವಿರುವವರು ಅಥವಾ ಸಂಬಂಧಿಕರೇ ಆಗಿರುತ್ತಾರೆ. ಹಾಗಿದ್ದರೆ ಇಲ್ಲಿ ಕೆಲ ಪ್ರಶ್ನೆಗಳು ಖಂಡಿತ ಎಲ್ಲರ ಮನದಲ್ಲೂ ಮೂಡುತ್ತವೆ: ಏಕೆ ಈ ರೀತಿಯ ದೌರ್ಜನ್ಯ ನಡೆಯುತ್ತದೆ? ಏಕೆ ಪರಿಚಯಸ್ಥರೇ ಹೆಣ್ಣುಮಕ್ಕಳ ಪಾಲಿಗೆ ಬೇಟೆಗಾರರಾಗಿ
ಮಾರ್ಪಡುತ್ತಾರೆ? ಕಳೆದ ವರ್ಷಗಳಿಗೆ ಹೋಲಿಸಿದರೆ ದೇಶದಲ್ಲಿ ಏಕೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಶೇ.೧೩ರಷ್ಟು
ಜಾಸ್ತಿಯಾಗಿದೆ? ಇತ್ತೀಚೆಗೆ ಮಲಯಾಳಂ ಚಿತ್ರರಂಗದಲ್ಲೂ ಮಹಿಳೆಯರ ಶೋಷಣೆಯ ಕರಾಳಮುಖ ಬೆಳಕಿಗೆ ಬಂದಿದೆ.

ಅದರ ಬೆನ್ನಲ್ಲೇ ಚಿತ್ರನಟ ಹಾಗೂ ಶಾಸಕ ಎಂ.ಮುಕೇಶ್ ವಿರುದ್ಧ ದೂರು ದಾಖಲಾಗಿದೆ. ನಟ ಜಯಸೂರ್ಯ ಹಾಗೂ ಮಣಿಯನ್‌ಪಿಲ್ಲಾ ರಾಜು ವಿರುದ್ಧವೂ ಲೈಂಗಿಕ ದೌರ್ಜನ್ಯದ ದೂರು ದಾಖಲಾಗಿದೆ. ಪ್ರಸಿದ್ಧ ಚಿತ್ರನಟಿ ರಾಧಿಕಾ ಶರತ್ ಕುಮಾರ್ ಅವರು ಸಿನಿಮಾ ಶೂಟಿಂಗ್‌ಗಳ ವೇಳೆ ಚಿತ್ರನಟಿ ಯರು ಬಳಸುವ ಕ್ಯಾರವಾನ್ ವಾಹನ ಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇರಿಸಿ ಅಶ್ಲೀಲ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇವೆಲ್ಲವೂ ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಸಂಗತಿಗಳು. ದೆಹಲಿಯಲ್ಲಿ ಕೆಲ ವರ್ಷಗಳ ಹಿಂದೆ ಚಲಿಸುವ ಬಸ್‌ನಲ್ಲಿ ಒಂದಷ್ಟು ಕಾಮುಕರು ಸೇರಿ ನರ್ಸಿಂಗ್ ವಿದ್ಯಾರ್ಥಿನಿ ‘ನಿರ್ಭಯಾ’ ಮೇಲೆ ಆಕೆಯ ಗೆಳೆಯನ ಎದುರೇ ಭೀಕರ ಅತ್ಯಾಚಾರ ಎಸಗಿ ಹತ್ಯೆಗೈದ ಘಟನೆ ನಡೆದಾಗ ಇಡೀ ದೇಶ ಅದರ ಅಮಾನವೀಯತೆಗೆ ಆಘಾತ ವ್ಯಕ್ತಪಡಿಸಿತ್ತು.

ನಂತರ ದೇಶದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆಗಳು ನಡೆದು ಅತ್ಯಾಚಾರದ ವಿರುದ್ಧದ ಕಾನೂನುಗಳನ್ನು ಕಠಿಣಗೊಳಿಸಬೇಕು, ಆ ಶಿಕ್ಷೆ ಎಷ್ಟು ಕಠೋರವಾಗಿರಬೇಕು ಅಂದರೆ ಯಾರೂ ಅಂಥ ಅಪರಾಧ ಎಸಗುವ ಬಗ್ಗೆ ಯೋಚನೆ ಕೂಡ ಮಾಡಲು ಹೋಗಬಾರದು ಎಂದು ಕೂಗೆದ್ದಿತ್ತು. ದೇಶದ ಸಂಸತ್ತು ಕೂಡ ಎಚ್ಚೆತ್ತುಕೊಂಡು ರಾತ್ರೋರಾತ್ರಿ ಈ ಬಗ್ಗೆ ಕಠಿಣ ಕಾನೂನು ಜಾರಿಗೊಳಿಸಿತು. ಆದರೆ ಪರಿಣಾಮ ಏನಾಯಿತು? ನಿರ್ಭಯಾ ಪ್ರಕರಣ ದಂಥ ಅಮಾನುಷ ಕೃತ್ಯಗಳು ಇವತ್ತಿಗೂ ದೇಶದಲ್ಲಿ ನಡೆಯುತ್ತಲೇ ಇವೆ. ಹಾಗಿದ್ದರೆ ನಾವು ಜಾರಿಗೊಳಿಸಿದ ಕಾನೂನುಗಳು ಎಷ್ಟು ಪರಿಣಾಮಕಾರಿಯಾಗಿವೆ? ನಿರ್ಭಯಾ ಪ್ರಕರಣದ ನಂತರ ದೇಶದಲ್ಲಿ ಎದ್ದಿದ್ದ ಆಕ್ರೋಶ ಹಾಗೂ ಜನಮಾನಸದಲ್ಲಿ ಮೂಡಿದ್ದ ಸಿಟ್ಟು ಈಗ ತಣ್ಣಗಾಗಿವೆ. ಅತ್ಯಾಚಾರ ಪ್ರಕರಣಗಳ ವಿಚಾರಣೆ ನಡೆಸಲೆಂದೇ ದೇಶದಲ್ಲಿ ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸ ಲಾಗಿದ್ದು, ಅವು ಸಾಕಷ್ಟು ಪ್ರಕರಣಗಳ ವಿಚಾರಣೆ ನಡೆಸಿ
ತ್ವರಿತವಾಗಿ ತೀರ್ಪುಗಳನ್ನೂ ನೀಡಿವೆ. ಅನೇಕ ಅತ್ಯಾಚಾರಿಗಳಿಗೆ ಶಿಕ್ಷೆಯಾಗಿದೆ. ಆದರೆ ಎಲ್ಲಾ ಪ್ರಕರಣಗಳಲ್ಲೂ ಹೀಗೆ ಆಗುತ್ತಿದೆಯೇ? ಕಾನೂನುಗಳನ್ನು ಜಾರಿಗೊಳಿಸುವುದು ಒಂದು ವಿಷಯವಾದರೆ, ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಸಮಸ್ಯೆಯೊಂದನ್ನು ಪರಿಹರಿಸುವುದು ಇನ್ನೊಂದು ವಿಚಾರ.

ಕಾಯ್ದೆಯಿಂದ ಎಲ್ಲಾ ಸಮಸ್ಯೆಗಳೂ ಬಗೆಹರಿಯುತ್ತವೆಯೇ? ನನ್ನ ಪ್ರಕಾರ, ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ
ಹಾಗೂ ಲೈಂಗಿಕ ದೌರ್ಜನ್ಯದಂಥ ಕೃತ್ಯಗಳಿಗೆ ಇಂದು ಬಹಳ ಸುಲಭವಾಗಿ ಮೊಬೈಲ್ -ನ್‌ಗಳ ಮೂಲಕ ಪೋರ್ನೋಗ್ರಫಿ ಎಲ್ಲರಿಗೂ ಲಭ್ಯವಾಗುತ್ತಿರುವುದು ಕೂಡ ಒಂದು ಪ್ರಮುಖ ಕಾರಣ. ಅಶ್ಲೀಲ ಚಿತ್ರಗಳ ಪ್ರಸಾರಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ನಮ್ಮೆಲ್ಲರ ಮೊಬೈಲ್ ಫೋನ್‌ಗಳಿಗೂ ಪೋರ್ನೋಗ್ರಫಿ ಬಹಳ ಸುಲಭವಾಗಿ ಪ್ರವೇಶಿಸುತ್ತಿದೆ.

ಅಕ್ಷರಶಃ ಎಲ್ಲಾ ವಯೋಮಾನದವರೂ ಅವುಗಳನ್ನು ನೋಡುತ್ತಿದ್ದಾರೆ. ನೋಡುವುದಷ್ಟೇ ಅಲ್ಲ, ಅವುಗಳಿಗೆ ಅಡಿಕ್ಟ್ ಆಗುತ್ತಿದ್ದಾರೆ. ಬರೀ ಯುವಕರು ಅಥವಾ ವಯಸ್ಕರು ಮಾತ್ರವಲ್ಲ, ಎಲ್ಲಾ ವಯಸ್ಸಿನವರೂ ಈ ರೀತಿಯ ಅಶ್ಲೀಲ ಚಿತ್ರಗಳನ್ನು ನೋಡಿ ವಿಕೃತ ಆನಂದ ಪಡೆಯುತ್ತಿದ್ದಾರೆ. ನಿಮಗೆ ಕೆಲ ಘಟನೆಗಳು ನೆನಪಿರಬಹುದು. ತ್ರಿಪುರಾ ವಿಧಾನಸಭೆಯಲ್ಲಿ ಅಧಿವೇಶನ ನಡೆಯುತ್ತಿದ್ದಾಗಲೇ ಶಾಸಕ ಜದಬ್‌ಲಾಲ್ ನಾಥ್ ಅವರು ಪೋರ್ನೋ ಗ್ರಫಿ ದೃಶ್ಯಗಳನ್ನು ನೋಡಿ ಸಿಕ್ಕಿ ಬಿದ್ದ ಘಟನೆ ಕಳೆದ ವರ್ಷವಷ್ಟೇ ನಡೆದಿತ್ತು. ಅವರು ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯಾವಳಿ ನೋಡುತ್ತಿದ್ದುದನ್ನು ಹಿಂದಿನಿಂದ ಯಾರೋ ಮೊಬೈಲ್‌ನಲ್ಲೇ ಸೆರೆಹಿಡಿದು ಬಹಿರಂಗಪಡಿಸಿದ್ದರು. ಅದಕ್ಕೂ ಮುನ್ನ, ಸಾಕಷ್ಟು ವರ್ಷಗಳ ಹಿಂದೆ ಕರ್ನಾಟಕದ ವಿಧಾನಸಭೆಯಲ್ಲಿಯೂ ಇಂಥದೇ ಒಂದು
ಘಟನೆ ನಡೆದಿದ್ದು ನಿಮಗೆ ನೆನಪಿರಬಹುದು.

ಪೋರ್ನೋಗ್ರಫಿ ಹೇಗೆ ನಮ್ಮ ಸಮಾಜವನ್ನು ತನ್ನ ಕಬಂಧ ಬಾಹುಗಳ ಒಳಗೆ ಸೆಳೆದುಕೊಳ್ಳುತ್ತಿದೆ ಎಂಬುದನ್ನು ಹೇಳಲು ಈ ಘಟನೆಗಳನ್ನು ಉಲ್ಲೇಖಿಸಿದೆ. ಒಬ್ಬ ವ್ಯಕ್ತಿ ಇಂಥ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದಾಗ ಉನ್ಮತ್ತಗೊಳ್ಳು ತ್ತಾನೆ. ಅವನೊಳಗೆ ಕಾಮದ ಆಸಕ್ತಿ ಜಾಗೃತಗೊಳ್ಳುತ್ತದೆ. ಅದು ಅವನನ್ನು ಪಶುವನ್ನಾಗಿ ಮಾಡುತ್ತದೆ. ಆ ಸಂದರ್ಭದಲ್ಲಿ ಅವನು ಸಣ್ಣ ಮಗುವಿನಿಂದ ಹಿಡಿದು ೭೦ ವರ್ಷದ ವೃದ್ಧೆಯವರೆಗೆ ಯಾರು ಸಿಕ್ಕರೂ ಲೈಂಗಿಕ ದೌರ್ಜನ್ಯ ಎಸಗಲು ಹಿಂದೆಮುಂದೆ ನೋಡದೆ ಮೈಮೇಲೆ ಎರಗುವ ಸಾಧ್ಯತೆಯಿರುತ್ತದೆ. ಅಂಥ ದುರುಳರಿಗೆ ವಯಸ್ಸು ಲೆಕ್ಕಕ್ಕಿಲ್ಲ. ಅನೇಕ ಪ್ರಕರಣಗಳಲ್ಲಿ ಪೋರ್ನೋಗ್ರಫಿಯು ಮದುವೆಗಳನ್ನೇ ಮುರಿದು ಹಾಕಿದೆ. ಇತ್ತೀಚೆಗೆ ಛತ್ತೀಸ್‌ಗಢದಲ್ಲಿ ಒಬ್ಬಳು ಮಹಿಳೆ ಕೋರ್ಟ್‌ಗೆ ಹೋಗಿದ್ದಳು.

‘ನನ್ನ ಗಂಡ ಪೋರ್ನ್ ಸಿನಿಮಾಗಳನ್ನು ನೋಡಿ, ಅಲ್ಲಿರುವಂತೆಯೇ ಮಾಡಬೇಕೆಂದು ಒತ್ತಾಯಿಸುತ್ತಾನೆ’ ಎಂದು
ದೂರಿದ್ದಳು. ಆ ಮಹಿಳೆ ಎಷ್ಟು ಬೇಸತ್ತಿದ್ದಳು ಅಂದರೆ, ಅವಳಿಗೆ ಮದುವೆಯೇ ಸಾಕಾಗಿಹೋಗಿತ್ತು. ಹೀಗಾಗಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಳು. ಆ ಪ್ರಕರಣದಲ್ಲಿ ಗಂಡನಿಗೆ ಕೋರ್ಟ್ ಶಿಕ್ಷೆ ಕೂಡ ನೀಡಿತು. ಆದರೆ, ಇಂಥ ಎಷ್ಟು ಪ್ರಕರಣಗಳು ಕೋರ್ಟ್ ವರೆಗೂ ಬರುತ್ತವೆ? ಪಾಪ, ಎಷ್ಟೊಂದು ಮಹಿಳೆಯರು ಅವಮಾನದ ಭಯದಿಂದ ಇದನ್ನೆಲ್ಲ ನುಂಗಿಕೊಂಡು ಮನೆಯಲ್ಲೇ ಇದ್ದಿರಬಹುದಲ್ಲವೇ?‌ ಇಂಥ ಘಟನೆಗಳ ಬಗ್ಗೆ ಓದಿದಾಗಲೆಲ್ಲ ನನ್ನ ಮೈ
ಮರಗಟ್ಟಿದಂತಾಗುತ್ತದೆ. ನಮ್ಮ ದೇಶದಲ್ಲಿ ಏನಾಗುತ್ತಿದೆ? ನಾನು ಹೆಚ್ಚುಕಮ್ಮಿ ಇಡೀ ಜಗತ್ತು ಸುತ್ತಿದ್ದೇನೆ. ಸಾಕಷ್ಟು ದೇಶಗಳಿಗೆ ಹೋಗಿ, ಅಲ್ಲೇ ಇದ್ದು, ದೇಶದ ಉದ್ದಗಲಕ್ಕೂ ಪ್ರವಾಸ ಮಾಡಿದ್ದೇನೆ. ಆಫ್ರಿಕಾದ ಕೆಲ ಕಡು ಬಡ ದೇಶಗಳನ್ನು ಹೊರತುಪಡಿಸಿದರೆ ಜಗತ್ತಿನ ಇನ್ನಾವುದೇ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಇಂಥ ದುಸ್ಥಿತಿ ಇರುವುದನ್ನು ಕಂಡಿಲ್ಲ.

ಯುರೋಪ್, ಅಮೆರಿಕ, ಆಸ್ಟ್ರೇಲಿಯಾ ಹೀಗೆ ಯಾವ ಖಂಡದಲ್ಲೂ ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುವಂಥ ದೌರ್ಜನ್ಯಗಳು ನಡೆಯುವುದಿಲ್ಲ. ಪೋರ್ನೋಗ್ರಫಿ ಹುಟ್ಟಿಕೊಂಡಿರುವುದೇ ಪಾಶ್ಚಾತ್ಯ ದೇಶಗಳಲ್ಲಾದರೂ, ಅಲ್ಲಿ ಅದೊಂದು ಉದ್ದಿಮೆಯೇ ಆಗಿದ್ದರೂ, ಅದರ ಬಗ್ಗೆ ಅಲ್ಲಿನವರ ಮನಸ್ಥಿತಿ ಬೇರೆಯೇ ಇದೆ. ಆದರೆ, ನಮ್ಮ ಸಂಸ್ಕೃತಿಯಲ್ಲಿ ಅದರ ಕುರಿತಾದ ದೃಷ್ಟಿಕೋನ ವಿಭಿನ್ನವಾಗಿದೆ. ಪೋರ್ನೋಗ್ರಫಿ ನಮ್ಮ ದೇಶದ ಮೇಲೆ ಅಗಾಧ ದುಷ್ಪರಿಣಾಮ ಉಂಟುಮಾಡಿದೆ. ಇಲ್ಲಿ ೧೪-೧೫ ವರ್ಷದ ಮಕ್ಕಳು ಕೂಡ ಪೋರ್ನ್ ಮತ್ತು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಅವರು ಅಪರಾಧಗಳನ್ನು ಎಸಗಿದರೆ, ಬಾಲಾಪರಾಧ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಪಾರಾಗಿ ಬಿಡುತ್ತಾರೆ. ಈ ಸಂಗತಿಯನ್ನು ಕೂಡ ನಾವು ಸೂಕ್ಷ್ಮವಾಗಿ ಗಮನಿಸಬೇಕಾದ ಅಗತ್ಯವಿದೆ. ದುರದೃಷ್ಟವಶಾತ್, ನಮ್ಮ ದೇಶದಲ್ಲಿ ಪೋರ್ನ್ ನಟಿಯರೇ ಮುಖ್ಯವಾಹಿನಿಯ ಚಿತ್ರ ರಂಗದಲ್ಲಿ ನಾಯಕಿಯರಾಗಿರುವ ಉದಾಹರಣೆಗಳೂ ಇವೆ.

ಚಿತ್ರೋದ್ಯಮದ ಕೆಲ ಖ್ಯಾತನಾಮ ವ್ಯಕ್ತಿಗಳೇ ಪೋರ್ನ್ ಸಿನಿಮಾಗಳಿಗೆ ಬಂಡವಾಳ ಹೂಡಿಕೆ ಮಾಡಿ ಅವುಗಳನ್ನು
ತಯಾರಿಸುತ್ತಿದ್ದಾರೆ. ಅವರಲ್ಲಿ ಕೆಲವರು ಸಿಕ್ಕಿಬಿದ್ದಿದ್ದಾರೆ ಕೂಡ. ಒಂದು ಸಂಗತಿಯನ್ನು ನಾವು ನೆನಪಿಡಬೇಕು. ನಮ್ಮ ಹೆಣ್ಣುಮಕ್ಕಳು ಇಂದು ಪ್ರತಿಯೊಂದು ರಂಗದಲ್ಲೂ ದೊಡ್ಡ ದೊಡ್ಡ ಸಾಧನೆ ಮಾಡುತ್ತಿದ್ದಾರೆ. ಆಡಳಿತಾತ್ಮಕ ಸೇವೆಗಳಿಂದ ಹಿಡಿದು ಮಿಲಿಟರಿಯವರೆಗೆ, ಕೊನೆಗೆ ಬಾಹ್ಯಾಕಾಶ ಸಂಶೋಧನೆಯಲ್ಲಿ ಕೂಡ ಅವರು ತಮ್ಮ ಸಾಮರ್ಥ್ಯವೇನು ಎಂಬುದನ್ನು ತೋರಿಸುತ್ತಿದ್ದಾರೆ. ಆದರೂ ಸಮಾಜ ಮಾತ್ರ ಅವರ ವಿಷಯದಲ್ಲಿ ಹಿಮ್ಮುಖವಾಗಿ ಚಲಿಸುತ್ತಿದೆ. ಯಾವ ಸಮಾಜದಲ್ಲಿ ಮಹಿಳೆಯರಿಗೆ ನಿಜವಾಗಿಯೂ ಗೌರವ ನೀಡಲಾಗುತ್ತದೆಯೋ ಅಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂಥ ಘಟನೆಗಳು ತುಂಬಾ ಅಪರೂಪವಾ ಗಿರುತ್ತವೆ. ಇದಕ್ಕೆ ಭಾರತದೊಳಗೇ ಉದಾಹರಣೆಗಳಿವೆ.

ನಾಗಾಲ್ಯಾಂಡ್, ಪುದುಚೇರಿ ಮತ್ತು ಲಕ್ಷದ್ವೀಪದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಬಹಳ ಕಡಿಮೆ. ಏಕೆಂದರೆ, ಅಲ್ಲಿ ಯಾರಾದರೂ ಈ ರೀತಿಯ ಕೃತ್ಯಗಳನ್ನು ಎಸಗಿದರೆ, ಕಾನೂನಿಗೆ ಕಾಯದೆ ಸಮಾಜವೇ ಮೊದಲು
ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ! ನಿಜವಾಗಿಯೂ ಸಾಮಾಜಿಕ ಜಾಗೃತಿ ಮತ್ತು ಕಠಿಣ ಕ್ರಮಗಳೇ ಈ ಘೋರ ದುಸ್ಥಿತಿಯಿಂದ ಹೊರಗೆ ಬರಲು ಇರುವ ಏಕೈಕ ಮಾರ್ಗ. ರಾಷ್ಟ್ರಪತಿಗಳು ವ್ಯಕ್ತಪಡಿಸಿರುವ ಆತಂಕದ ಹಿಂದೆ ಈ ಕಳವಳ ಮತ್ತು ಕಳಕಳಿ ಎದ್ದು ಕಾಣುತ್ತಿವೆ….

(ಲೇಖಕರು ಹಿರಿಯ ಪತ್ರಿಕೋದ್ಯಮಿ)

Leave a Reply

Your email address will not be published. Required fields are marked *