Sunday, 8th September 2024

ಸಂವಿಧಾನ ರಕ್ಷಣೆ ಹೆಸರಿನಲ್ಲಿ ನಾಟಕ

ವೀಕೆಂಡ್ ವಿತ್ ಮೋಹನ್

camohanbn@gmail.com

೨೦೨೪ ರ ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮೋದಿ ವಿರೋಧಿಗಳು ಸಂವಿಧಾನವನ್ನು ಕಂಡ ಕಂಡಲ್ಲಿ ಮುನ್ನೆಲೆಗೆ ತಂದು ತಮ್ಮ
ಭಾಷಣದಲ್ಲಿ ಬಳಸಿಕೊಂಡರು. ಪತ್ರಿಕಾಗೋಷ್ಠಿ ನಡೆಸುವ ಸಂದರ್ಭದಲ್ಲಿ ರಾಹುಲ್ ಗಾಂಽ ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದು ಸಂವಿಧಾನ ವನ್ನು ರಕ್ಷಿಸುತ್ತೇವೆಂದು ಹೇಳಿ ತನ್ನ ಮಾತುಗಳನ್ನು ಪ್ರಾರಂಭಿಸುತ್ತಿದ್ದರು, ಮಾತು ಮುಗಿದ ನಂತರ ಮತ್ತೊಮ್ಮೆ ಸಂವಿಧಾನವನ್ನು ಪತ್ರಕರ್ತರಿಗೆ ತೋರಿಸುತ್ತಿದ್ದರು.

ಅಸಾವುದ್ದೀನ್ ಒವೈಸಿ ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ‘ಜೈ ಭೀಮ’ ಜೈ ಮೀಮ್ ಎಂದಿದ್ದರು,ಆದರೆ ಅದೇ ಅಸಾವುದ್ದೀನ್ ಒವೈಸಿಯನ್ನು ಕುರಾನ್ ಮತ್ತು ಬಾಬಾಸಾಹೇಬರ ಸಂವಿಧಾನದ ನಡುವೆ ಪ್ರಥಮ ಆದ್ಯತೆ ಯಾವುದೆಂದು ಕೇಳಿದರೆ, ಕುರಾನ್ ಮೊದಲೆನ್ನುತ್ತಾನೆ. ಬಾಬಾಸಾಹೇಬರ ಸಂವಿಧಾನಕ್ಕಿಂತಲೂ ತನ್ನ ಧರ್ಮಗ್ರಂಥ ಮೊದಲೆನ್ನುವ ಅಸಾವುದ್ದೀನ್ ಒವೈಸಿ ಸಂಸತ್ತಿನಲ್ಲಿ ಬಾಬಾಸಾಹೇಬರ ಹೆಸರನ್ನು ಹೇಳುತ್ತಾನೆ.

ಬಾಬಾಸಾಹೇಬರು ಇಸ್ಲಾಂ ಧರ್ಮದಲ್ಲಿನ ಬುರ್ಖಾ ಧರಿಸುವಿಕೆಯನ್ನು ಕಟುವಾಗಿ ಟೀಕಿಸಿದ್ದರು, ಆದರೆ ಕರ್ನಾಟಕದಲ್ಲಿ ನಡೆದ ಹಿಜಾಬ್ ಸಂಘರ್ಷದ ವೇಳೆ ವಿದ್ಯಾರ್ಥಿನಿಯರು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಾಗ ಬಾಬಾಸಾಹೇಬರ ಸಂವಿಧಾನವನ್ನು ಪಠಿಸುತ್ತಿದ್ದರು. ತಮ್ಮ ಸ್ವಾರ್ಥಕ್ಕಾಗಿ ಸಂವಿಧಾನ ವಿರೋಧಿ ಕೆಲಸಗಳನ್ನು ಮಾಡುವವರು, ತಮ್ಮ ಕೆಲಸಗಳನ್ನು ಸಮರ್ಥಿಸಿಕೊಳ್ಳಲು ಸಂವಿಧಾನವನ್ನೇ ಮತ್ತೆ ಮುನ್ನೆಲೆಗೆ ತರುತ್ತಾರೆ.

ದೆಹಲಿಯ ಲೆಫ್ಟಿನಂಟ್ ಗವರ್ನರ್ ಅವರು, ಎಡಚರ ಪತ್ರಕರ್ತೆ ಅರುಂಧತಿ ರಾಯ್ ವಿರುದ್ಧ UAPA ಕಾಯ್ದೆಯಡಿ ಕೇಸು ದಾಖಲಿಸಿ ದೇಶವಿರೋಧಿ ಚಟುವಟಿಕೆಯ ಆರೋಪದಡಿಯಲ್ಲಿ ಬಂಧಿಸಲು ಹೇಳಿದ್ದಾರೆ. ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವವ ಪ್ರತ್ಯೇಕತಾವಾದಿಗಳ ಪರವಾಗಿ ನಿಲ್ಲುವ ಅರುಂಧತಿ ರಾಯ, ತಾನು ಮಾಡುವ ದೇಶವಿರೋಧಿ ಕೆಲಸವನ್ನು ಸಮರ್ಥಿಸಿಕೊಳ್ಳಲು ಬಾಬಾಸಾಹೇಬರ ಸಂವಿಧಾನವನ್ನು ಬಳಸಿಕೊಂಡು ಮಾತನಾಡುತ್ತಾಳೆ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಭಾರತವನ್ನು ತುಂಡರಿಸುವ ಹೇಳಿಕೆ ನೀಡುವವರ ಪರವಾಗಿ ನಿಂತಿದ್ದ
ಕಾಂಗ್ರೆಸ್ಸಿನ ಕನ್ನಯ್ಯ ಕುಮಾರ್, ತನ್ನ ಭಾಷಣಗಳಲ್ಲಿ ಬಾಬಾಸಾಹೇಬರ ಸಂವಿಧಾನವನ್ನು ಮುನ್ನೆಲೆಗೆ ತರುತ್ತಾನೆ.

ಬಾಬಾಸಾಹೇಬರು ಅಖಂಡ ಭಾರತದ ವಿಭಜನೆಯ ಸಂದರ್ಭದಲ್ಲಿ ಮುಸಲ್ಮಾನರ ಧರ್ಮನಿಷ್ಠೆಯ ಬಗ್ಗೆ ಸ್ಪಷ್ಟವಾಗಿ ಹೇಳಿದ್ದರು, ಅವರ ಸಂವಿಧಾನದ ಮೇಲಿನ ನಿಷ್ಠೆಯ ಬಗ್ಗೆಯೂ ಹೇಳಿದ್ದರು. ಮುಸಲ್ಮಾನರ ಅವೈಜ್ಞಾನಿಕ ಪದ್ಧತಿಗಳನ್ನು ವಿರೋಧಿಸಿದ್ದ ಬಾಬಾಸಾಹೇಬರ ಹೆಸರನ್ನು ಬಳಸಿಕೊಂಡು ತಮ್ಮ ಅವೈಜ್ಞಾನಿಕ ಆಚರಣೆಗಳನ್ನು ಇಂದಿಗೂ ಸಮರ್ಥಿಸಿಕೊಳ್ಳುತ್ತಾರೆ. ಭಾರತದಲ್ಲಿರುವ ಸಂಪತ್ತಿನ ಮೇಲಿನ ಮೊದಲ ಹಕ್ಕು ಮುಸಲ್ಮಾನರಿಗಿದೆ ಎಂದು ಹೇಳಿದ್ದ ಕಾಂಗ್ರೆಸ್ಸಿನ ಮನಮೋಹನ್ ಸಿಂಗ್ ಮಾತನ್ನು ಸಮರ್ಥಿಸಿಕೊಳ್ಳುವಾಗ ರಾಹುಲ್ ಗಾಂಧಿಗೆ ಸಂವಿಧಾನಕ್ಕೆ ಕಾಂಗ್ರೆಸ್ ಮಾಡಿದ ಅವಮಾನ ನೆನಪಾಗಿರಲಿಲ್ಲ, ಭಾರತವನ್ನು ಉತ್ತರ ಮತ್ತು ದಕ್ಷಿಣವಾಗಿ ವಿಭಜಿಸುವ ಮಾತುಗಳನ್ನಾಡಿದ್ದ ಕಾಂಗ್ರೆಸ್ಸಿನ ಚಿದಂಬರಂ ಮತ್ತು ಡಿ.ಕೆ.ಸುರೇಶ್ ಸಂವಿಧಾನಕ್ಕೆ ಮಾಡಿದ್ದ ಅವಮಾನವಲ್ಲದೆ ಮತ್ತೇನು? ಸಂವಿಧಾನದ ಮುನ್ನುಡಿಯನ್ನು ತನ್ನ ಸ್ವಾರ್ಥಕ್ಕಾಗಿ ಬದಲಾಯಿಸಿದ ಇಂದಿರಾಗಾಂಧಿಯ ಪರವಾಗಿ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು.

ತನಗೆ ಮತಹಾಕಿದವರನ್ನು ಓಲೈಸಲು ಬಾಂಗ್ಲಾದೇಶದ ನುಸುಳುಕೋರರಿಗೆ ಪಶ್ಚಿಮ ಬಂಗಾಳಕ್ಕೆ ಬರಲು ಅನುಕೂಲ ಮಾಡಿಕೊಡುವ ಮಮತಾ ಬ್ಯಾನರ್ಜಿ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ.ಬಾಬಾಸಾಹೇಬರು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದನ್ನು ಕಠಿಣವಾಗಿ ವಿರೋಧಿಸಿದ್ದರು, ಅದರಿಂದಾಗುವ ಪರಿಣಾಮಗಳ ಬಗ್ಗೆ ನೆಹರೂವಿಗೆ ತಿಳಿಸಿದ್ದರು. ನೆಹರೂ ತನ್ನ ಸ್ನೇಹಿತ ಅಬ್ದುನನ್ನು ಖುಷಿಪಡಿಸಲು ಕಾಶ್ಮೀರಕ್ಕೆ ಬೇರೆಯದ್ದೇ ಸಂವಿಧಾನವನ್ನು ನೀಡಿದ್ದರು.

ಸಂವಿಧಾನಕ್ಕೆ ಅಪಚಾರವೆಸಗಿದ ಈ ಕೃತ್ಯವನ್ನು ಬೆಂಬಲಿಸುವ ರಾಹುಲ್ ಗಾಂಧಿ, ಇಂದು ಸಂವಿಧಾನದ ಪುಸಕವನ್ನು ಕೈಯಲ್ಲಿ ಹಿಡಿದು ಜೈ ಸಂವಿಧಾನ್ ಎಂದು ಹೇಳುತ್ತಾರೆ. ತಾವು ಅಧಿಕಾರಕ್ಕೆ ಬಂದರೆ ಕಾಶ್ಮೀರಕ್ಕೆ ಪುನಃ ವಿಶೇಷ ಸ್ಥಾನಮಾನ ನೀಡುತ್ತೇವೆಂದು ಹೇಳಿ ಸಂವಿಧಾನಕ್ಕೆ ಅಪಮಾನ ಮಾಡಿದ್ದ ಚಿದಂಬರಂ ಸಂವಿಧಾನದ ಪುಸ್ತಕ ಹಿಡಿದು ಮಾತನಾಡುತ್ತಾರೆ. ಬಾಬಾಸಾಹೇಬರು ಸಂವಿಧಾನವನ್ನು ರಚನೆ ಮಾಡುವಾಗ ನೀಡಿದ್ದ ಹಲವು ಸಲಹೆಗಳನ್ನು ಕಾಂಗ್ರೆಸ್ ಪಕ್ಷ ಸ್ವೀಕರಿಸಿರಲಿಲ್ಲ. ಬಾಬಾಸಾಹೇಬರ ಆಶಯಗಳ ವಿರುದ್ಧ ಹಲವು ಪರಿಚ್ಛೇದಗಳನ್ನು ಸಂವಿಧಾನದಲ್ಲಿ ನೆಹರು ಸೇರಿಸಿದ್ದರು.

ಬಾಬಾಸಾಹೇಬರ ಏಳಿಗೆಯನ್ನು ಸಹಿಸದೆ ಅವರ ವಿರುದ್ಧ ಅವರ ಜೊತೆಗಿದ್ದವರನ್ನೇ ಚುನಾವಣೆಗೆ ನಿಲ್ಲಿಸಿ ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಬಾಬಾ ಸಾಹೇಬರಿಗೆ ನೀಡಬೇಕಿದ್ದಂತಹ ಗೌರವ ನೀಡದೆ, ಅವರ ಆಶಯಗಳ ವಿರುದ್ಧ ನಡೆದುಕೊಂಡಂತಹ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಕೈಯಲ್ಲಿ ಸಂವಿ
ಧಾನ ರಕ್ಷಿಸಿ ಎಂಬ ಬೃಹನ್ನಾಟಕ. ಅಂಟೋನಿಯೋ ಮೈನೋ ರಾಜೀವ್ ಗಾಂಧಿಯವರನ್ನು ಮದುವೆಯಾದ ೧೫ ವರ್ಷಗಳ ನಂತರ ಭಾರತೀಯ ಪೌರತ್ವವನ್ನು ಪಡೆದಿದ್ದರು, ಅಲ್ಲಿಯವರೆಗೂ ಅವರಿಗೆ ಭಾರತೀಯ ಪೌರತ್ವ ಪಡೆಕೊಳ್ಳುವ ಆಸೆಯಿರಲಿಲ್ಲ.

ಭಾರತೀಯ ಪೌರತ್ವ ಪಡೆಯಲು ೧೫ ವರ್ಷಗಳ ಕಾಲ ಹಿಂದೇಟು ಹಾಕಿದ್ದ ಅಂಟೋನಿಯೋ ಮೈನೋ ಕೈಯಲ್ಲಿ, ಇಂದು ಸಂವಿಧಾನವನ್ನು ರಕ್ಷಿಸುವ
ಮಾತುಗಳು. ತನ್ನ ಇಟಲಿಯ ಮೇಲಿನ ಪ್ರೇಮವನ್ನು ಬಿಟ್ಟುಕೊಡದ ಅಂಟೋನಿಯೋ ಮೈನೋ ೧೦ ವರ್ಷಗಳ ಕಾಲ ರಿಮೋಟ್ ಕಂಟ್ರೋಲ್ ಮೂಲಕ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ನಿಯಂತ್ರಿಸುತ್ತಿದ್ದರು. ಸ್ವತಂತ್ರ ಪೂರ್ವದಲ್ಲಿ ಭಾರತದಲ್ಲಿ ಕಮ್ಯುನಿ ಸಿದ್ಧಾಂತವನ್ನು
ಹೇರುವ ಸಲುವಾಗಿ ಎರಡನೇ ಮಹಾಯುದ್ಧದ ಸಮಯ ದಲ್ಲಿ ರಷ್ಯಾ ದೇಶದ ಜೊತೆ ಕೈಜೋಡಿಸಿ ಬ್ರಿಟಿಷರ ನಂತರ ಭಾರತವನ್ನು ರಷ್ಯಾ ದೇಶಕ್ಕೆ ಒಪ್ಪಿಸುವ ಕನಸು ಕಂಡಿದ್ದ ಕಮ್ಯುನಿ ಪಕ್ಷದವರು, ಇಂದು ಸಂವಿಧಾನ ರಕ್ಷಿಸಿ ಎನ್ನುತ್ತಿದ್ದಾರೆ.

೧೯೬೨ರ ಚೀನಾ ಯುದ್ಧದ ವೇಳೆ ಭಾರತೀಯ ಸೈನಿಕರಿಗೆ ಯುದ್ಧ ಸಾಮಗ್ರಿಗಳು ಸಿಗಬಾರದೆಂದು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸ್ಥಳೀಯರಿಂದ ಪ್ರತಿಭಟನೆ ನಡೆಸಿ ಚೀನಾ ದೇಶಕ್ಕೆ ಸಹಾಯ ಮಾಡಿದ್ದ ಕಮ್ಯುನಿಸ್ಟರು, ಇಂದು ಸಂವಿಧಾನವನ್ನು ರಕ್ಷಿಸಿ ಎಂಬ ಮಾತುಗಳನ್ನಾಡುತ್ತಿದ್ದಾರೆ. ಭಾರತೀಯ ಸೈನಿಕರನ್ನು ಅತ್ಯಾಚಾರಿಗಳೆಂದು ಹೇಳುವ ಮೂಲಕ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತಂದವರು ಸಿಕ್ಕ ಸಿಕ್ಕಲ್ಲಿ ಸಂವಿಧಾನವನ್ನು ಮುನ್ನೆಲೆಗೆ ತರುತ್ತಿದ್ದಾರೆ.

ಭಾರತದ ಸಂವಿಧಾನದ ಹೃದಯ ಭಾಗವಾದ ಸಂಸತ್ ಮೇಲೆ ೨೦೦೧ ರಲ್ಲಿ ನಡೆದಿದ್ದ ಉಗ್ರ ದಾಳಿಯ ರೂವಾರಿ ಆಫ್ಜಲ್ ಗುರುವಿನ ಗಲ್ಲು ಶಿಕ್ಷೆಯನ್ನು ತಪ್ಪಿಸಲು ರಾತ್ರೋ ರಾತ್ರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದವರು. ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದು ರಕ್ಷಕರಂತೆ ತಮ್ಮನ್ನು ತಾವು
ಬಿಂಬಿಸಿಕೊಳ್ಳುತ್ತಿದ್ದಾರೆ. ಕೆ.ಜಿ.ಹಳ್ಳಿ ಗಲಭೆಯಲ್ಲಿ ಕಾಂಗ್ರೆಸ್ಸಿನ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದ್ದ ದುರುಳರ ಪರವಾಗಿ ವಕಾಲತ್ ಹಾಕಿದ್ದ
ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ಮಾಧ್ಯಮಗಳಿಗೆ ತೋರಿಸುತ್ತಿರುವ ದೃಶ್ಯ ನೋಡಿದರೆ ನಗು ಬರುತ್ತದೆ. ಕಲರ್ಸ್ ಕನ್ನಡದಲ್ಲಿ ಡ್ರಾಮಾ ಜೂನಿಯರ್ಸ್ ಎಂಬ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು, ಆ ಕಾರ್ಯಕ್ರಮದ ಮೂಲ ಸ್ವರೂಪ ಮಕ್ಕಳ ನಾಟಕ
ಪ್ರದರ್ಶನ.

ಅದೇ ಮಾದರಿಯಲ್ಲಿ ಮೋದಿ ವಿರೋಧಿಗಳ ಸಂವಿಧಾನ ಪುಸ್ತಕದ ನಾಟಕವನ್ನು ಗಮನಿಸಿದರೆ ಬಹುಷ್ಯ ಮುಂದಿನ ದಿನಗಳಲ್ಲಿ ಕಲರ್ಸ್ ವಾಹಿನಿ ಯವರು ‘ಡ್ರಾಮಾ ಸೀನಿಯರ್ಸ್’ ಎಂಬ ಕಾರ್ಯಕ್ರಮ ಮಾಡಬಹುದು. ವಿರೋಧಿಗಳ ಹೊಸ ನಾಟಕವನ್ನು ಬೆಂಬಲಿಸುವ ಪತ್ರಕರ್ತರು ಮತ್ತದೇ ಎಡಚರ ಸಿದ್ಧಾಂತದವರು, ೨೦೧೦ರಲ್ಲಿ ಛತ್ತೀಸ್‌ಗಡದ ದಾಂತೇವಾಡದಲ್ಲಿ ಭಾರತೀಯ ಸೈನಿಕರನ್ನು ಗುರಿಯನ್ನಾಗಿಸಿಕೊಂಡು ನಕ್ಸಲರು ನಡೆಸಿದ್ದ ದಾಳಿಯನ್ನು ಸಮರ್ಥಿಸಿಕೊಂಡಿದ್ದ ಬರ್ಖಾ ದತ್ ಮತ್ತು ತಂಡ ಮೋದಿ ವಿರೋಧಿಗಳ ಸಂವಿಧಾನ ಉಳಿಸಿ ಎಂಬ ನಾಟಕವನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸುತ್ತಿದೆ.

ದಲಿತ ವಿರೋಧಿ ನೀತಿಗಳನ್ನು ಖಂಡಿಸುವ ಚರ್ಚೆಗಳನ್ನು ಈ ತಂಡ ಮಾಡುವುದಿಲ್ಲ, ದಲಿತರು ಹಾಗು ಮುಸಲ್ಮಾನರ ನಡುವೆ ತಿಕ್ಕಾಟ ಸಂಭವಿಸಿದಾಗ ಮುಸಲ್ಮಾನರ ಪರವಾಗಿ ನಿಲ್ಲುವ ಈ ತಂಡ ಬಾಬಾಸಾಹೇಬರ ಸಂವಿಧಾನದ ರಕ್ಷಣೆಯ ಬಗ್ಗೆ ಚರ್ಚಿಸುತ್ತದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾಧ್ಯಮಗಳ ಪತ್ರಿಕಾ ಪ್ರಕಟಣೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಕತ್ತರಿ ಹಾಕಿದ್ದ ಕಾಂಗ್ರೆಸ್ಸಿನ
ಇಂದಿರಾಗಾಂಧಿ ಮೊಮ್ಮೊಗನಿಂದ ಸಂಸತ್ತಿನಲ್ಲಿ ಜೈ ಸಂವಿಧಾನ್ ಘೋಷಣೆ, ಇಂಡಿಯಾ ಇಸ್ ಇಂದಿರಾ ಮತ್ತು ಇಂದಿರಾ ಇಸ್ ಇಂಡಿಯಾ ಎಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನವನ್ನು ಕೈಯಿಂದ ಮುಟ್ಟುವ ನೈತಿಕತೆಯೂ ಇಲ್ಲ.

ವಿರೋಧ ಪಕ್ಷಗಳ ಸಾಲಿನಲ್ಲಿರುವ ಇಂಡಿ ಒಕ್ಕೂಟದ ಬಹುತೇಕ ಸದಸ್ಯ ಪಕ್ಷಗಳು, ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವವರ ಪರವಾಗಿ ನಿಲ್ಲುವವರೇ ಆಗಿದ್ದಾರೆ. ಸಂವಿಧಾನದ ವಿರುದ್ಧವಾಗಿ ಧರ್ಮಾಧಾರಿತವಾಗಿ ಮುಸ್ಲಿಮರಿಗೆ ಮೀಸಲಾತಿ ನೀಡಿದ ಕಾಂಗ್ರೆಸ್ ಪಕ್ಷ, ಕಾಶ್ಮೀರಿ ಪ್ರತ್ಯೇಕತಾ ವಾದಿಗಳ ಪರವಾಗಿ ನಿಲ್ಲುವ ಮೆಹಬೂಬ ಮುಫ್ತಿ ಮತ್ತು ಒಮರ್ ಅಬ್ದು, ಬಲವಂತದ ಮತಾಂತರವನ್ನು ಪೋಷಿಸುವ ಕಮ್ಯುನಿಸ್ಟರು, ಭಾರತೀಯ ಸೈನಿಕರು ಪಾಕಿಸ್ತಾನದ ಮೇಲೆ ನಡೆಸಿದ್ದ ದಾಳಿಗೆ ಸಾಕ್ಷಿ ಕೇಳುವ ಸಮಾಜವಾದಿ ಪಕ್ಷ, ಪ್ಯಾಲಿಸ್ತೇನಿ ಉಗ್ರರಿಗೆ ಬೆಂಬಲ ಘೋಷಿಸುವ ಓವೈಸಿ, ಸನಾತನ ಧರ್ಮವನ್ನು ರೋಗಕ್ಕೆ ಹೋಲಿಸಿ ಬಹುಸಂಖ್ಯಾತ ಹಿಂದುಗಳಿಗೆ ಅವಮಾನ ಮಾಡಿದ ಡಿಎಂಕೆ ಪಕ್ಷ, ಉತ್ತರ ಮತ್ತು ದಕ್ಷಿಣವೆಂದು ಭಾರತವನ್ನು ವಿಭಜಿಸುವ ಹೇಳಿಕೆ ನೀಡುವ ಕಾಂಗ್ರೆಸ್ ಪಕ್ಷ, ಸಂವಿಧಾನವನ್ನು ೭೬ ಬಾರಿ ತಿದ್ದುಪಡಿ ಮಾಡಿರುವ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ
ಲೋಕಸಭೆಯ ವಿರೋಧ ಪಕ್ಷದ ನಾಯಕ. ಮೋದಿಯವರಿಗೆ ೪೦೦ ಸೀಟುಗಳು ಬಂದರೆ ಸಂವಿಧಾನವನ್ನು ಬದಲಾಯಿಸುತ್ತಾರೆಂಬ ಸುಳ್ಳನ್ನು ತಮ್ಮ ಚುನಾವಣಾ ಪ್ರಚಾರದಲ್ಲಿ ಹೇಳಿ ಜನರ ದಾರಿ ತಪ್ಪಿಸಿದ ರಾಹುಲ್ ಗಾಂಧಿ ತನ್ನ ಅಜ್ಜಿ ಸ್ವಾರ್ಥಕ್ಕಾಗಿ ಸಂವಿಧಾನವನ್ನು ಬದಲಾಯಿಸಿದ ವಿಷಯವನ್ನೂ ಹೇಳಬೇಕು.

ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ಹಿಂಪಡೆಯುತ್ತಾರೆಂಬ ‘ಡೀಪ್ ಫೇಕ್’ ವಿಡಿಯೋವನ್ನು ಜನರಿಗೆ ತಲುಪಿಸಿ ದಾರಿ ತಪ್ಪಿಸಿದ್ದ ಕಾಂಗ್ರೆಸ್
ಪಕ್ಷ, ತಾನು ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗಗಳಿಗೆ ನೀಡಬೇಕಿದ್ದ ಮೀಸಲಾತಿಯನ್ನು ವಿರೋಧಿಸಿಕೊಂಡು ಬಂದ ವಿಷಯವನ್ನೂ ಹೇಳಬೇಕು. ನೆಹರುವಿನಿಂದ ಸೋನಿಯಾ ಗಾಂಧಿಯವರೆಗೂ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡುವುದನ್ನು ಕಾಂಗ್ರೆಸ್ ವಿರೋಧಿಸಿಕೊಂಡು ಬಂದಿದೆ.

ಬ್ರಿಟೀಷರಿಂದ ಜನನವಾದ ಕಾಂಗ್ರೆಸ್ ಪಕ್ಷದ ಮನಸ್ಥಿತಿ ಸ್ವಾತಂತ್ರ ಬಂದ ೭೬ ವರ್ಷಗಳ ನಂತರವೂ ಬದಲಾಗಿಲ್ಲ, ಬ್ರಿಟಿಷರ ಮಾದರಿಯಲ್ಲಿ ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸಿ ಸಮಾಜವನ್ನು ಒಡೆದು ಅಳುವ ಕೆಲಸವನ್ನು ಇಂದಿಗೂ ಮಾಡುತ್ತಿದೆ. ಬ್ರಿಟಿಷರ ಕಾಲದ ಮೆಖಾಲೆ ಶಿಕ್ಷಣ
ಪದ್ಧತಿಯನ್ನು ಬೆಂಬಲಿಸುತ್ತದೆ, ಬ್ರಿಟಿಷರ ಕಾಲದ ಕಾನೂನುಗಳನ್ನು ಬೆಂಬಲಿಸುತ್ತದೆ, ಬ್ರಿಟಿಷರ ಗುಲಾಮಗಿರಿಯ ಸಂಕೇತವಿರುವ ಊರುಗಳ ಹೆಸರುಗಳನ್ನು ಬದಲಾಯಿಸಿದರೆ ಕಾಂಗ್ರೆಸ್ಸಿಗೆ ಕೋಪ ಬರುತ್ತದೆ, ಬ್ರಿಟಿಷರ ಆಚರಣೆ ಗಳನ್ನು ೭೦ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಸತತವಾಗಿ ಪೋಷಿ ಸುತ್ತಾ ಬಂದಿತ್ತು.

ಬ್ರಿಟಿಷರ ಗುಲಾಮಗಿರಿಯ ಸಂಕೇತಗಳನ್ನು ಬೆಂಬಲಿಸುವ ವಿರೋಧಪಕ್ಷಗಳು ಬಾಬಾಸಾಹೇಬರ ಸಂವಿಧಾನವನ್ನು ರಕ್ಷಿಸುತ್ತೇವೆಂದು ಹೇಳುವು
ದನ್ನು ಕೇಳಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತದೆ. ಕೊನೆಯದಾಗಿ ಭಾರತೀಯರಿಗೆ ಬೇಕಿರುವುದು ಬಾಬಾಸಾಹೇಬರ ಸಂವಿಧಾನವೇ ಹೊರತು, ಇಂದಿರಾಗಾಂಧಿಯ ಸಂವಿಧಾನವಲ್ಲ.

Leave a Reply

Your email address will not be published. Required fields are marked *

error: Content is protected !!