ವಿಶ್ಲೇಷಣೆ
ಕಪಿಲ್ ಸಿಬಲ್, ರಾಜ್ಯಸಭೆ ಸದಸ್ಯ
ಇತ್ತೀಚೆಗೆ ಮುಗಿದ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ (ಸ್ವಾವಲಂಬನೆ) ಕಲ್ಪನೆ ಕೇವಲ ದೇಶದ ಆರ್ಥಿಕತೆಗೆ ಸಂಬಂಧಿಸಿದ್ದಲ್ಲ ಎಂಬುದು ಢಾಳವಾಗಿ ಎಲ್ಲರಿಗೂ ಮನದಟ್ಟಾಯಿತು.
ಸದನ ನಡೆಸುವಲ್ಲಿಯೂ ಸರಕಾರ ಸಂಪೂರ್ಣ ಸ್ವಾವಲಂಬಿಯಾಗಿದೆ. ಅದಕ್ಕೆ ಪ್ರತಿಪಕ್ಷಗಳ ಅಗತ್ಯವಿಲ್ಲ ಎಂಬುದು ನಮಗೆಲ್ಲ ತಿಳಿಯಿತು. ಇತರ ರಾಜಕೀಯ ಪಕ್ಷಗಳ ದೃಷ್ಟಿಕೋನವನ್ನು ಸರಕಾರ ನಿಂದನೆಯ ರೀತಿಯಲ್ಲೇ ನೋಡುತ್ತದೆ, ತನಗೆ ಬೇಕಾದಂತೆ ಅದು ನಿಯಮಾವಳಿಗಳನ್ನು ನಿರ್ಷ್ಕಸುತ್ತದೆ ಮತ್ತು ಸದನದ ಸಂಪ್ರದಾಯಗಳ ಬಗ್ಗೆ ಸರಕಾರಕ್ಕೆ ಯಾವ ಗೌರವವೂ ಇಲ್ಲ ಎಂಬುದು ಈ ಬಾರಿ ಸಾಬೀತಾಯಿತು. ಈ ಮಟ್ಟಿಗಿನ ಆತ್ಮನಿರ್ಭರತೆ ಅಥವಾ ಸ್ವಾವಲಂಬನೆಯು ಸಂಸತ್ ಕಲಾಪವನ್ನು ಒಂದು
ಪ್ರಹಸನದ ಮಟ್ಟಕ್ಕೆ ಇಳಿಸಿಬಿಟ್ಟಿತು.
ಪ್ರಜಾಸತಾತ್ಮಕ ವ್ಯವಸ್ಥೆಯಲ್ಲಿ ನಡೆಯುವ ಸಂಸತ್ ಕಲಾಪದ ಸೌಂದರ್ಯವೆಂದರೆ ಅಲ್ಲಿ ಸದನದ ಸದಸ್ಯರೆಲ್ಲ ಒಂದು ಚೇಂಬರ್‌ನಲ್ಲಿ ಕುಳಿತುಕೊಳ್ಳುತ್ತಾರೆ. ಅದರಿಂದಾಗಿ, ಅದ್ಭುತವಾದ ಸಂವಾದ, ವಿದ್ವತ್‌ಪೂರ್ಣ ಮಧ್ಯಪ್ರವೇಶ ಹಾಗೂ ತಮ್ಮ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಅದನ್ನು ಲಕ್ಷಾಂತರ ಜನರು ನೋಡು ತ್ತಾರೆ. ಆದರೆ, ಈ ಬಾರಿಯ ಮಳೆಗಾಲದ ಸಂಸತ್ ಅಧಿವೇಶನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಕಾರಣದಿಂದ ಎರಡೂ ಸದನಗಳ ಸದಸ್ಯರನ್ನು ರಾಜ್ಯಸಭೆ ಮತ್ತು ಲೋಕಸಭೆಯ ಚೇಂಬರ್‌ಗಳಲ್ಲಿ ವಿಭಾಗಿಸಿ ಕೂರಿಸಲಾಗಿತ್ತು.
ಈ ಹೊಸ ವ್ಯವಸ್ಥೆಯಿಂದಾಗಿ ರಾಜ್ಯಸಭೆಯ ಸದಸ್ಯರಾದ ನಮ್ಮಲ್ಲಿ ಕೆಲವರು ಲೋಕಸಭೆಯಲ್ಲಿ ಕುಳಿತು ದೊಡ್ಡದೊಂದು ಟೀವಿ ಪರದೆಯಲ್ಲಿ ರಾಜ್ಯಸಭೆಯಲ್ಲಿ ನಡೆಯುತ್ತಿದ್ದ ಕಲಾಪದಲ್ಲಿ ಪಾಲ್ಗೊಂಡಿದ್ದೆವು. ಅಲ್ಲಿ ಕುಳಿತೇ ರಾಜ್ಯಸಭೆಯಲ್ಲಿ ಸಭಾಪತಿಗಳು ಕಲಾಪ ನಡೆಸುವುದನ್ನು ನೋಡಬೇಕಿತ್ತು. ರಾಜ್ಯಸಭೆಯ ಕಾಂಗ್ರೆಸ್ ಸದಸ್ಯರ ಪೈಕಿ 15 ಮಂದಿ ರಾಜ್ಯಸಭೆಯಲ್ಲೇ ಕುಳಿತಿದ್ದರೆ, 10 ಮಂದಿ ಚೇಂಬರ್‌ನಲ್ಲಿ, 5 ಮಂದಿ ಗ್ಯಾಲರಿಯಲ್ಲಿ ಹಾಗೂ 26 ಮಂದಿ ಲೋಕಸಭೆಯಲ್ಲಿ ಕುಳಿತಿದ್ದೆವು.
ಬೇರೆ ಕಡೆ ಕುಳಿತಿದ್ದವರು ಎಷ್ಟೇ ಪ್ರಯತ್ನಿಸಿದರೂ ಸಭಾಪತಿಗಳ ಗಮನ ಸೆಳೆಯುವುದು, ಅವರ ಜೊತೆಗೆ ದೃಷ್ಟಿ ಸಂಪರ್ಕ ಸಾಧಿಸಿ ಪ್ರಶ್ನೆ ಎತ್ತುವುದು ಅಥವಾ ಚರ್ಚೆಯಲ್ಲಿ ಪಾಲ್ಗೊಳ್ಳುವುದು ಕಷ್ಟವಾಗುತ್ತಿತ್ತು. ಕಾಂಗ್ರೆಸ್ ಪಕ್ಷದ ಬಹುತೇಕ ಸದಸ್ಯರಿಗೆ ಸಭಾಪತಿಗಳ ಗಮನ ಸೆಳೆಯುವುದು ಸಾಧ್ಯವಾಗಲಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಪ್ರತಿಪಕ್ಷಗಳ ಸದಸ್ಯರ ಪೈಕಿ ರಾಜ್ಯಸಭೆ ಯ ಚೇಂಬರ್‌ನಲ್ಲಿ ಕುಳಿತ 10 ಮಂದಿ ಕಾಂಗ್ರೆಸ್ ಸದಸ್ಯರು ಮಾತ್ರ ಸಕ್ರಿಯವಾಗಿ ಕಲಾಪದಲ್ಲಿ ಪಾಲ್ಗೊಂಡಿದ್ದರು.
ಇನ್ನುಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದರು. ಬಿಜೆಪಿಯೂ ಸೇರಿದಂತೆ ಇತರ ರಾಜಕೀಯ ಪಕ್ಷಗಳಿಗೂ ಇದೇ
ಗತಿಯಾಗಿತ್ತು. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನೋತ್ತರ ಕಲಾಪ ಬಹಳ ಮುಖ್ಯವಾದುದು. ಸಚಿವರು ಇತರ ಸದಸ್ಯರಿಗೆ ಉತ್ತರದಾಯಿತ್ವ ತೋರುವ ಅನಿವಾರ್ಯತೆ ಸೃಷ್ಟಿಯಾಗುವುದೇ ಪ್ರಶ್ನೋತ್ತರ ಅವಧಿಯಲ್ಲಿ. ಆದರೆ, ಈ ಬಾರಿಯ ಕಲಾಪದಲ್ಲಿ ಪ್ರಶ್ನೋತ್ತರ ಕಲಾಪವೇ ಇರಲಿಲ್ಲ.
ಪ್ರತಿದಿನ ಸದನದ ಕಲಾಪ ಕೇವಲ ನಾಲ್ಕು ತಾಸು ಮಾತ್ರ ನಡೆಯುತ್ತಿದ್ದುದರಿಂದ ಪ್ರಶ್ನೋತ್ತರ ಅವಧಿಗೆ ಸಮಯ ಸಾಲುವುದಿಲ್ಲ ಎಂದು ಅದನ್ನು ರದ್ದುಪಡಿಸಿರುವುದಾಗಿ ಸರಕಾರ ಹೇಳಿತ್ತು. ಇದರರ್ಥ ಏನು? ಪ್ರಮುಖ ಕಾಯ್ದೆಗಳನ್ನು ಪಾಸು ಮಾಡಿ ಕೊಳ್ಳುವುದಕ್ಕಿಂತ ಸದನಕ್ಕೆ ಸರಕಾರ ಉತ್ತರದಾಯಿತ್ವ ತೋರುವುದು ಕಡಿಮೆ ಮುಖ್ಯ ಎಂದೇ? ಪ್ರಶ್ನೋತ್ತರ ಕಲಾಪ ರದ್ದು ಪಡಿಸಿದ್ದರಿಂದ ಪ್ರಮುಖ ಸಚಿವಾಲಯಗಳು ಮತ್ತು ಮಂತ್ರಿಗಳ ಅಸಮರ್ಥತೆಯನ್ನು ಎತ್ತಿ ತೋರಿಸಲು ಇದ್ದ ಏಕೈಕ ಅವಕಾಶವೂ ಪ್ರತಿಪಕ್ಷಗಳಿಗೆ ದೊರಕಲಿಲ್ಲ.
ಪ್ರಶ್ನೋತ್ತರ ಕಲಾಪವಿಲ್ಲದ ಸದನವನ್ನು ನೋಡುತ್ತಿದ್ದ ಸಾರ್ವಜನಿಕರಿಗೆ ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ಸರಕಾರದ ಪ್ರತಿಕ್ರಿಯೆಯೇನು ಎಂಬುದನ್ನು ತಿಳಿದುಕೊಳ್ಳುವ ಅವಕಾಶವೇ ಲಭಿಸಲಿಲ್ಲ. ಸರಕಾರಕ್ಕೆ ತನ್ನ ಆದೇಶಗಳನ್ನು ಸಮರ್ಥಿಸಿಕೊಳ್ಳಲು ಒಳ್ಳೆಯ ಅವಕಾಶ ಸಿಕ್ಕಿದ್ದರ ಹೊರತಾಗಿ ಈ ಅಧಿವೇಶನ ಸಂಪೂರ್ಣ ವ್ಯರ್ಥಗೊಂಡಿದ್ದಕ್ಕೆ ಇನ್ನೊಂದು
ಕಾರಣವೆಂದರೆ ಸೀಮಿತ ಕಾಲಾವಕಾಶ. ಅದರಲ್ಲೂ ರಾಜ್ಯಸಭೆಗೆ ಈ ವಿಷಯದಲ್ಲಿ ಹೆಚ್ಚು ನಷ್ಟವಾಯಿತು. ರಾಜ್ಯಸಭೆಯ
ಕಲಾಪಕ್ಕೆ ನೀಡಿದ್ದ ಸಮಯ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ. ಲೋಕಸಭೆಯ ಕಲಾಪಕ್ಕೆ ನಿಗದಿಪಡಿಸಿದ್ದ ಸಮಯ
ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆ. ಹೀಗಾಗಿ ಲೋಕಸಭೆಯಲ್ಲಿ ಅಗತ್ಯಬಿದ್ದರೆ ಕಲಾಪವನ್ನು ಮುಂದುವರಿಸಲು ಅವಕಾಶ ಸಿಗುತ್ತಿತ್ತು. ರಾಜ್ಯಸಭೆಗೆ ಈ ಸೌಕರ್ಯವಿರಲಿಲ್ಲ. ಏಕೆಂದರೆ ರಾಜ್ಯಸಭೆಯ ಕಲಾಪ ಏನಕೇನ 3 ಗಂಟೆಯೊಳಗೆ ಮುಗಿಯಲೇ ಬೇಕಿತ್ತು.
ಇದು ಇನ್ನೊಂದು ರೀತಿಯ ತಾರತಮ್ಯವನ್ನು ಪ್ರದರ್ಶಿಸಿತು. ಇಷ್ಟಕ್ಕೂ ಈ ಅಧಿವೇಶನ ಏಕೆ ಬೇಕಿತ್ತು? ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವ್ಯವಹಾರಗಳ (ಉತ್ತೇಜನ ಮತ್ತು ಸೌಕರ್ಯ) ಸುಗ್ರೀವಾಜ್ಞೆ 2020, ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳಿಗೆ ಸಂಬಂಧಿಸಿದ ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಸುಗ್ರೀವಾಜ್ಞೆ 2020 ಮತ್ತು ಅಗತ್ಯ ವಸ್ತುಗಳ (ತಿದ್ದುಪಡಿ) ಸುಗ್ರೀ ವಾಜ್ಞೆ 2020ನ್ನು ಸಂಸತ್ತಿನ ಅಧಿವೇಶನ ನಡೆಸದೆಯೇ ಮುಂದುವರಿಸಲು ಸರಕಾರಕ್ಕೆ ಅವಕಾಶವಿತ್ತು. ಈ ಸುಗ್ರೀವಾಜ್ಞೆ ಗಳ ಬಗ್ಗೆ ಚರ್ಚೆ ನಡೆಸುವುದಕ್ಕೆ ಸರಕಾರಕ್ಕೆ ಮನಸ್ಸೇ ಇರಲಿಲ್ಲ ಎಂದಮೇಲೆ ಕಲಾಪ ನಡೆಸಿದ್ದಾದರೂ ಏಕೆ? ಕಲಾಪದಲ್ಲಿ ಪ್ರತಿಪಕ್ಷ ಗಳು ಇವುಗಳ ಬಗ್ಗೆೆ ಏನು ಹೇಳಿದರೂ ಸರಕಾರ ಕಿವಿಗೆ ಹಾಕಿಕೊಳ್ಳಲಿಲ್ಲ. ಅಷ್ಟೇಕೆ, ಕೊನೆಯ ಪಕ್ಷ ಈ ಮಸೂದೆಗಳನ್ನು ಇನ್ನಷ್ಟು ಹೆಚ್ಚಿನ ನಿಷ್ಕರ್ಷೆಗಾಗಿ ಸಂಸತ್ತಿನ ಸ್ಥಾತಿ ಸಮಿತಿಗಾಗಲೀ ಅಥವಾ ಆಯ್ಕೆ ಸಮಿತಿಗಾಗಲೀ ಒಪ್ಪಿಸಲಿಲ್ಲ.
ಇನ್ನು, ತುರ್ತಾಗಿ ತಿದ್ದುಪಡಿಯಾಗಬೇಕಾದ ಅಗತ್ಯವಿದ್ದ ಇತರ ಕಾಯ್ದೆಗಳಿಗೂ ಸರಕಾರ ಸುಗ್ರೀವಾಜ್ಞೆಯನ್ನೇ ಹೊರಡಿಸ ಬಹುದಿತ್ತು. ಹೇಗಿದ್ದರೂ ಬಿಜೆಪಿಗೆ ಶಾಸನಗಳನ್ನು ರೂಪಿಸುವಲ್ಲಿ ಚರ್ಚೆ ಅಥವಾ ಸಂವಾದದ ಅಗತ್ಯವಿಲ್ಲ ಎಂಬುದು ಸಾಕಷ್ಟು ಸಲ ಸಾಬೀತಾಗಿದೆ.
ನಿರೀಕ್ಷೆಯಂತೆ ಪ್ರತಿಪಕ್ಷಗಳ ಯಾವುದೇ ಆಕ್ಷೇಪವನ್ನೂ ಪರಿಹರಿಸುವ ಅಥವಾ ಪರಿಗಣಿಸುವ ಕಳಕಳಿ ಸರಕಾರಕ್ಕೆ ಇರಲಿಲ್ಲ. ತಿದ್ದುಪಡಿ ಮಸೂದೆಗಳನ್ನು ಮಂಡಿಸಿದಾಗ ವಿರೋಧ ಪಕ್ಷಗಳ ಸದಸ್ಯರು ಮತದಾನಕ್ಕೆ ಕೋರಿದರು. ಏಕೆಂದರೆ, ಎನ್‌ಡಿಎಯ ಅಂಗಪಕ್ಷವಾಗಿರುವ ಜೆಡಿಯು ಸೇರಿದಂತೆ ರಾಜ್ಯಸಭೆಯಲ್ಲಿರುವ 18 ರಾಜಕೀಯ ಪಕ್ಷಗಳು ಈಗಿರುವ ರೂಪದಲ್ಲಿ ಈ ಮಸೂದೆ ಗಳನ್ನು ವಿರೋಧಿಸುತ್ತಿದ್ದವು. ಮತದಾನ ನಡೆಸಿದ್ದೇ ಹೌದಾದರೆ ಈ ಸುಗ್ರೀವಾಜ್ಞೆಗಳ ಬಗ್ಗೆ ಎಷ್ಟು ದೊಡ್ಡ ಪ್ರಮಾಣದಲ್ಲಿ ವಿರೋಧವಿದೆ ಎಂಬುದು ದೇಶಕ್ಕೆ ತಿಳಿಯುತ್ತಿತ್ತು.
ಆದರೆ, ರಾಜ್ಯಸಭೆಯ ಉಪಸಭಾಪತಿಗಳು ಮತದಾನ ನಡೆಸುವುದಕ್ಕೆೆ ನಿರಾಕರಿಸಿದರು. ತನ್ಮೂಲಕ ರಾಜಕೀಯ ಪಕ್ಷಗಳಿಗೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ದಾಖಲಿಸುವ ಮೂಲಕ ಸುಗ್ರೀವಾಜ್ಞೆಗಳನ್ನು ವಿರೋಧಿಸಲು ಅವಕಾಶವನ್ನೇ ನೀಡಲಿಲ್ಲ. ಇದು ಸರಕಾರಕ್ಕೆ ಶೋಭೆ ತರುವ ವಿಚಾರವಾಗಿರಲಿಲ್ಲ. ಹೀಗಾಗಿ ರಾಜ್ಯಸಭೆಯಲ್ಲಿ ಕೋಲಾಹಲವೇ ನಡೆಯಿತು. ಸದನವನ್ನು ನಿಯಂತ್ರಿ ಸಲು ಮಾರ್ಷಲ್ಗಳನ್ನು ಕರೆಸಲಾಯಿತು. ನಂತರ ಸಭಾಪತಿಗಳು ಎಂಟು ಮಂದಿ ಸದಸ್ಯರನ್ನು ಅಮಾನತುಗೊಳಿಸಿ ದರು. ಈ ಎಲ್ಲ ಘಟನೆಗಳು ವಿರೋಧವನ್ನು ಸಹಿಸಲಾಗದ ಮನಸ್ಥಿತಿಯ ದ್ಯೋತಕಗಳು. ಅಮಾನತುಗೊಂಡ ಸದಸ್ಯರು ಸಂಸತ್ ಭವನದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಕೆಳಗೆ ಇಡೀ ರಾತ್ರಿ ಧರಣಿ ಕುಳಿತಿದ್ದರು.
ಬೆಳಿಗ್ಗೆ ಅವರಿಗೆ ಟೀ ಕೊಡುವ ಮೂಲಕ ವಾತಾವರಣ ತಿಳಿಗೊಳಿಸಲು ರಾಜ್ಯಸಭೆಯ ಉಪಸಭಾಪತಿಗಳು ಪ್ರಯತ್ನಿಸಿದ್ದು ಯಾವ ಫಲವನ್ನೂ ನೀಡಲಿಲ್ಲ. ಅದರಿಂದ ಯಾವುದೇ ರೀತಿಯ ಧನಾತ್ಮಕ ಭಾವನೆ ಉಕ್ಕಲಿಲ್ಲ. ವಿರೋಧ ಪಕ್ಷಗಳು ಕಲಾಪದ ಇನ್ನುಳಿದ ಅವಧಿಯನ್ನು ಬಷ್ಕರಿಸುವ ಮೂಲಕ ಕಲಾಪ ಅಂತ್ಯಗೊಂಡಿತು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹೇಗೆ ಸಭಾಪತಿ ಗಳು ತಮ್ಮ ಮಧ್ಯಪ್ರವೇಶವನ್ನು ಮೊಟಕುಗೊಳಿಸಿದರು ಎಂದು ಬೇಸರ ಹೊರಹಾಕಿದರು. ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವುದೆಂದರೆ ಈ ಸರಕಾರಕ್ಕೆ ಅದೇನೋ ಖುಷಿ. ವಿರೋಧ ಪಕ್ಷಗಳು ಯಾವುದೇ ರೀತಿಯಲ್ಲಿ ಪ್ರತಿಭಟಿಸಿದರೂ ಅದನ್ನು ಸದನದ ಮುಖ್ಯಸ್ಥರಿಗೆ ತೋರಿದ ಅಗೌರವ ಎಂದೇ ಸರಕಾರ ಬಿಂಬಿಸುತ್ತದೆ.
ಮತ್ತು ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದಾಗಲೆಲ್ಲ ಅವರ ಮೈಕ್‌ಗಳನ್ನು ಆಫ್ ಮಾಡಿಸಿ ಧ್ವನಿ ಕೇಳಿಸದಂತೆ ಮಾಡು ತ್ತದೆ. ಇವೆಲ್ಲಕ್ಕೂ ಕಲಶಪ್ರಾಯದಂತೆ ನಮ್ಮ ಸ್ವಾವಲಂಬಿ ಪ್ರಧಾನಿಗಳು 2014ರ ನಂತರ ಇಲ್ಲಿಯವರೆಗೆ ಉಭಯ ಸದನಗಳಲ್ಲಿ ಯಾವುದೇ ಪ್ರಶ್ನೆಗೆ ಉತ್ತರ ನೀಡಿಲ್ಲ. ಅವರಿಗಿಷ್ಟವಾದ ಸಂವಾದದ ವಿಧಾನವೆಂದರೆ ಏಕಮುಖ ಭಾಷಣ. ಆರೋಗ್ಯಕರ ಚರ್ಚೆ ಯೆಂಬುದು ಅವರ ವ್ಯಕ್ತಿತ್ವಕ್ಕೆ ಆಗಿಬರುವುದಿಲ್ಲ. ನೈತಿಕ ಸ್ಥೆರ್ಯಕ್ಕಿಂತ ಹೆಚ್ಚಾಗಿ ಅಂಕಿಅಂಶ ಗಳನ್ನೇ ಅವರು ಆತುಕೊಳ್ಳುತ್ತಾರೆ.
ಹೀಗಾಗಿ ಸಂಸತ್ತನ್ನು ಅದ್ಭುತ ಪ್ರಜಾಸತ್ತಾತ್ಮಕ ವ್ಯವಸ್ಥೆಯಾಗಿ ರೂಪಿಸಿದ ನಿಯಮಾವಳಿಗಳಿಗೆ ವಿದಾಯ ಹೇಳಲು ಇದು ಸೂಕ್ತ ಕಾಲ. ಈಗ ಉಳಿದಿರುವುದು ಸಂಸತ್ತಿನ ಭವ್ಯ ಇತಿಹಾಸದ ಕುರಿತಾದ ಹಳಹಳಿಕೆಗಳಷ್ಟೆ.