Thursday, 12th December 2024

ರಾಜ್ಯಕ್ಕೆ ಈ ವರ್ಷ ಬರ ಬಂದಿದ್ದು ವರವೇ ಆಯಿತು !?

ಸುಪ್ತ ಸಾಗರ

rkbhadti@gmail.com

ಮನಸ್ಸಿದ್ದವರಿಗೆ ಮಾರ್ಗ ಹಲವು. ಜತೆಗೆ ಅನಿವಾರ್ಯ ವೆಂಬುದು ಅನ್ವೇಷಣೆಗೆ ನಮ್ಮನ್ನು ಪ್ರಚೋದಿಸುತ್ತದೆ. ಅಂಥ ಅನಿವಾರ್ಯ ನೀರಿನ ವಿಚಾರದಲ್ಲಿ ಖಂಡಿತಾ ಈಗ ಸೃಷ್ಟಿಯಾಗಿದೆ. ಅನುಮಾನವೇ ಇಲ್ಲ, ನಿಸರ್ಗ ಹೇರಳ ಸಂಪತ್ತಿನ ಆಗರ. ಈ ಸಂಪನ್ಮೂಲ ವಿಪುಲವಾಗಿದೆಯೆಂದು ಅದನ್ನೆಲ್ಲ ಮನಬಂದಂತೆ ಬಳಸಿ ಮುಗಿಸಿದರೆ? ಯಾವುದನ್ನೂ ದುಂದು ಮಾಡುವ ಕಾಲ ಇದಲ್ಲ.

ರಾಜ್ಯದಲ್ಲಿ ಈ ವರ್ಷ ಮುಂಗಾರು ಕೈಕೊಟ್ಟು, ಹಿಂಗಾರು ಮಳೆಯೂ ಸರಿಯಾಗಿ ಆಗದೇ ಆಗಲೇ ತೀವ್ರ ನೀರಿನ ಬರಗಾಲದ ಸ್ಥಿತಿ ನಿರ್ಮಾಣವಾಗಿದ್ದುದ್ದೇ ಒಳ್ಳೆಯದಾಯಿತು. ಬೇಕಿದ್ದರೆ ಇವನೆಂಥಾ ವಿಘನ ಸಂತೋಷಿ ಎ0ದುಕೊಳ್ಳಿ. ಹಾಗಿಲ್ಲದಿದ್ದರೆ ನಮಗೆ ನೀರಿನ ಮೌಲ್ಯವಾಗಲೀ, ಸರಕಾರಕ್ಕೆ ಅಂತರ್ಜಲದ ಬಗೆಗಿನ ಕಾಳಜಿಯಾಗಲೀ ನೆನಪಾಗುತ್ತಲೇ ಇರಲಿಲ್ಲ. ಇಂಥ ಕಾರಣಕ್ಕಾಗಿಯಾದರೂ ಆಗಾಗಿ ವರವಾಗಿ ಬಂದು ಬರ ಕಾಡಬೇಕೆನಿಸುತ್ತದೆ.

ಸುಮ್ನೆ ಹೇಳುತ್ತಿಲ್ಲ, ಕೆಟ್ಟ ಮೇಲೆ ಬುದ್ಧಿಬಂತು ಅನ್ನೋ ಹಾಗೆ, ಕಂಡಕಂಡಲ್ಲಿ ಬೋರ್‌ವೆಲ್ ತೋಡಿ, ರಾಜ್ಯದ ನೆಲ ವನ್ನು ಮೊಯಿಲಿ ಕಲೆಯ ಮುಖದಂತೆ ಆದ ಮೇಲೆ, ಇದೀಗ ಕೊಳವೆಬಾವಿಗಳ ಗಣತಿಗೆ ರಾಜ್ಯ ಸರಕಾರ ಮನಸು ಮಾಡಿದೆ. ಮುಂದಿನ ವರ್ಷ ಗಣತಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯದ ಅಂತರ್ಜಲ ಮಂಡಳಿಗೆ ಸರಕಾರ ಸೂಚನೆ ನೀಡಿದೆ. ಕೊಟ್ಟಕೊನೆಯ ಬಾರಿಗೆ ನಮ್ಮಲ್ಲಿ ಬೋರ್‌ವೆಲ್‌ಗಳ ಗಣತಿ ನಡೆದದ್ದು ೨೦೧೯ರಲ್ಲಿ. ಆಗಲೇ ೧೪
ಲಕ್ಷ ಕೊಳವೆ ಬಾವಿಗಳಿದ್ದವು. ಅಽಕೃತ ಬೋರ್‌ವೆಲ್‌ಗಳ ಸಂಖ್ಯೆಯೇ ಇಷ್ಟಾದ ಮೇಲೆ ಇನ್ನು ಅನಽಕೃತ ಕೊಳವೆ ಬಾವಿಗಳು ಇನ್ನೆಷ್ಟಿದ್ದೀತು ಯೋಚಿಸಿ.

ದೇಶಾದ್ಯಂತ ವೇಗವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ನಮ್ಮಲ್ಲಿ ಅಂತಲೇ ಅಲ್ಲ, ದೇಶದೆಲ್ಲೆಡೆ ಕಳೆದ ಐದು ವರ್ಷಗಳಲ್ಲಿ ಬೋರ್‌ವೆಲ್‌ಗಳ ಸಂಖ್ಯೆಯಲ್ಲಿ ಶೇ. ೨೦-೨೫ ರಷ್ಟು ಹೆಚ್ಚಳವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಳವೆ ಬಾವಿಗಳ ಸಂಖ್ಯೆಯ ದಾಖಲೆ ಇಟ್ಟುಕೊಂಡಿದ್ದರೂ, ನಾಲ್ಕು ವರ್ಷಗಳ ಹಿಂದಿನ ಗಣತಿಯಲ್ಲಿ ಅನಧಿಕೃತ ಬೋರ್ ವೆಲ್‌ಗಳ ಚಕಾರವೇ ಇರಲಿಲ್ಲ. ಹೀಗಾಗಿ ಇಂದಿನ ಅಂತರ್ಜಲದ ಸ್ಥಿತಿ ಇನ್ನಷ್ಟು ಹದಗೆಟ್ಟಿರುವ ಎಲ್ಲ ಸಾಧ್ಯತೆಗಳಿವೆ.
ದುರಂತವೆಂದರೆ ಇಷ್ಟಾದರೂ ನಮಗೆ ಮಳೆ ನೀರು ಕೊಯ್ಲಿನ ಬಗೆಗೇ ಆಗಲಿ, ಸಾಂಪ್ರದಾಯಿಕ ಜಲ ಸಂರಕ್ಷಣಾ ಪದ್ಧತಿಗಳ ಬಗೆಗೇ ಆಗಲಿ ಒಲವಿಲ್ಲ. ನಮ್ಮದೇನಿದ್ದರೂ ಸುಲಭದಲ್ಲಿ ನೀರಿನ ಖಜಾನೆಗೆ ಕನ್ನ ಹಾಕುವ ಯೋಚನೆಯೇ.

ಹಾಗಾಗಿಯೇ ಬರಗಾಲ ಬೇಕಿತ್ತು ಎಂದಿದ್ದು. ಮನಸ್ಸಿದ್ದವರಿಗೆ ಮಾರ್ಗ ಹಲವು. ಜತೆಗೆ ಅನಿವಾರ್ಯವೆಂಬುದು ಅನ್ವೇಷಣೆಗೆ ನಮ್ಮನ್ನು ಪ್ರಚೋದಿಸುತ್ತದೆ. ಅಂಥ
ಅನಿವಾರ್ಯ ನೀರಿನ ವಿಚಾರದಲ್ಲಿ ಖಂಡಿತಾ ಈಗ ಸೃಷ್ಟಿಯಾಗಿದೆ. ಅನುಮಾನವೇ ಇಲ್ಲ, ನಿಸರ್ಗ ಹೇರಳ ಸಂಪತ್ತಿನ ಆಗರ. ಈ ಸಂಪನ್ಮೂಲ ವಿಪುಲವಾಗಿದೆ ಯೆಂದು ಅದನ್ನೆಲ್ಲ ಮನಬಂದಂತೆ ಬಳಸಿ ಮುಗಿಸಿದರೆ? ಯಾವುದನ್ನೂ ದುಂದು ಮಾಡುವ ಕಾಲ ಇದಲ್ಲ. ಪ್ರಕೃತಿದತ್ತ ಯಾವುದನ್ನೇ ಆದರೂ ವೇಚನೆಲ್ಲದೆ ಖರ್ಚು ಮಾಡುತ್ತಿದ್ದರೆ ಆ ಖಜಾನೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತದೆ. ನೀರಿನ ವಿಚಾರದಲ್ಲೂ ಹಾಗೆಯೇ ಆಗಿದೆ.

ಭೂ-ಜಲ ಇದಕ್ಕೊಂದು ತಾಜಾ ಉದಾಹರಣೆ. ದೈನಂದಿನ ಬದುಕಿಗೆ ಅತ್ಯವಶ್ಯ ನೀಲಿ ಬಂಗಾರ ಇಂದು ಬಹುತೇಕ ಬರಿದಾಗಿ ಆಗಿದೆ. ಇದನ್ನು ಅಂತರ್ಜಲ ಗಣಿಗಾರಿಕೆ ಎನ್ನಬಹುದು. ನೆಲಮಟ್ಟದಲ್ಲೇ ಅಥವಾ ಕೆಲವೇ ಅಡಿಗಳ ಆಳದಲ್ಲೇ ಲಭ್ಯವಿದ್ದ ಭೂಜಲ ಇಂದು ಪಾತಾಳ ತಲುಪಿದೆ. ಬೈರಿಗೆ ಯಂತ್ರಗಳು ಕ್ರಿಯಾಶೀಲವಾಗುತ್ತಲೇ ನಡೆದಿವೆ. ಭೂಮಿಯ ಮೇಲೆಲ್ಲ ಬರಿ ತೂತುಗಳೇ. ಪರಿಣಾಮ ನೆಲದಾಳಕ್ಕೆ ಇಳಿದಷ್ಟೂ ಭೂಜಲ ಮರೀಚಿಕೆ ಯಾಗಿದೆ. ಪರಿಸ್ಥಿತಿ ಹೇಗಿದೆ ಎಂದರೆ, ಹತ್ತರಲ್ಲಿ ಅಂದಾಜು ಆರು ಕೊಳವೆ ಬಾಗಳು ವಿಫಲವಾಗುತ್ತಿವೆ.

ಹಾಗೆಂದು ರಾಜ್ಯದಲ್ಲಿ ಜಲ-ಭೂಜಲಕ್ಕೆ ಕೊರತೆ ಅಂಬುದೇನೂ ಇಲ್ಲ. ತಕ್ಕಮಟ್ಟಿಗೆ ದೊಡ್ಡ ರಾಜ್ಯವೇ ನಮ್ಮದು. ದೇಶದ ಒಟ್ಟು ಭೌಗೋಳಿಕ ಪ್ರದೇಶದ ಶೇ. ೫.೮೧ರಷ್ಟು ಭೂ ಪ್ರದೇಶ ಹೊಂದಿರುವ ಕರ್ನಾಟಕ, ೮ನೇ ದೊಡ್ಡ ರಾಜ್ಯ. ಗೋದಾವರಿ-ಕೃಷ್ಣ-ಕಾವೇರಿಯಂಥ ನದಿಗಳ ದೊಡ್ಡ ಜಲಾನಯನ ಇದೆ. ಜತೆಗೆ ಪಾಲಾರ್, ಪಿನಾಕಿನಿಗಳು. ಪಶ್ಚಿಮದತ್ತ ಸಮುದ್ರಕ್ಕೆ ದೌಡಾಯಿಸುವ ನದಿಗಳ ಜಾಲ ವ್ಯಾಪಕ. ನಮ್ಮ ನೆಲದ ವಿಸ್ತೀರ್ಣ ೧,೯೯,೭೯೧ ಚದರ ಕಿ.ಮೀ. ಎನ್ನುತ್ತದೆ ಸರಕಾರಿ ಅಂಕಿ ಅಂಶ. ರಾಜ್ಯದಲ್ಲಿ ಪ್ರತಿ ವರ್ಷ ಸುರಿಯುವ ಮಳೆ ಸರಾಸರಿ ೧೧೪೦ಮೀಮೀ. ಮಲೆನಾಡು ಮತ್ತು ಬಯಲುಸೀಮೆಗಳಲ್ಲಿ ಈ ಪ್ರಮಾಣದಲ್ಲಿ
ವ್ಯತ್ಯಾಸ ಇರಬಹುದು. ಆದರೆ, ಒಟ್ಟಾರೆ ನಮ್ಮಲ್ಲಿ ಬೀಳುವ ಮಳೆಯಿಂದ ಸಂಗ್ರಹಿಸಬಹುದಾದ ನೀರಿನ ಪ್ರಮಾಣ ಎನಿಲ್ಲವೆಂದರೂ ಸುಮಾರು ೯೭,೮೦೦ ದಶಲಕ್ಷ ಘನ ಮೀಟರುಗಳು.

ದುರಂತ ನೋಡಿ, ಇಷ್ಟು ಪ್ರಮಾಣದ ಮಳೆ ನೀರಿದ್ದರೂ ಇದನ್ನು ಹಿಡಿದಿಟ್ಟು ಕೃಷಿ ಸೇರಿದಂತೆ ಇತರೆ ಬಳಕೆಗೆ ಒದಗಿಸುವ ಚಿಂತನೆ ನಮ್ಮಲ್ಲಿ ಇಲ್ಲವೇ ಇಲ್ಲ. ಇಂಥ ಪದ್ಧತಿಗೆ ನಮ್ಮ ನ್ನಾಳುವ ಸರಕಾರಗಳೂ ಯೋಜನೆ ರೂಪಿಸಿಲ್ಲ. ಬೀಳುವ ಅಷ್ಟೂ ನೀರನ್ನು ಹಿಡಿದಿಡಲು ಸಾಧ್ಯವಿಲ್ಲದೆ ಇರಬಹುದು. ಆದರೆ ಗರಿಷ್ಠ ಬಳಕೆಗಂತೂ ಬೇಕಷ್ಟು ಅವಕಾಶಗಳಿವೆ. ರಾಜ್ಯದಲ್ಲಿ ಇಂದಿಗೂ ಮಳೆನೀರಿನ ಶೇ.೬೫ ಭಾಗ ಹರಿದು ವ್ಯರ್ಥವಾಗುತ್ತಿದೆ. ನೆಲದ ಮೇಲೆ ಬಿದ್ದು, ಆರಿ ಆವಿಯಾಗಿ ಹೋಗುತ್ತಿದೆ. ಕೆಲವೇ ಕೆಲ ಭಾಗ ಮಾತ್ರ ಅಳಿದುಳಿದ ಸಸ್ಯ ಸಂಕುಲದ ಮೂಲಕ ನೆಲ ಸೇರುತ್ತಿದೆ. ಅದರಲ್ಲೂ ಸಸ್ಯಗಳು ನೀರನ್ನು ಮೀರಿ ಎಲೆಗಳ ಮೂಲಕ ಬಾಷ್ಪವಿಸರ್ಜನೆ ಮಾಡುತ್ತಿವೆ.

ಮೊದಲೆಲ್ಲಾ ಬಹುತೇಕ ಮಳೆಯ ನೀರು ಕೆರೆ-ಕಟ್ಟೆ ಗಳಲ್ಲಿ ನಿಂತು, ಬೆಳೆಗೆ ಬಳಸಿ ನಂತರ ಹರಿದುಹೋಗುತ್ತಿತ್ತು. ಈಗ ಕೆರೆಗಳೇ ಇಲ್ಲ. ಇಷ್ಟೆಲ್ಲದರ ಬಳಿಕ ಮಳೆಯ ನೀರಿನಲ್ಲಿ ನೆಲದಾಳಕ್ಕೆ ಪಯಣಿಸುತ್ತಿರುವುದು ಶೇ.೬ರಿಂದ ಶೇ.೮ ಭಾಗ ಮಾತ್ರ. ರಾಜ್ಯಾದ್ಯಂತ ಅಂತರ್ಜಲ ಬಳಕೆಯಾಧರಿಸಿ ತಾಲೂಕು
ಗಳನ್ನು ಕಪ್ಪು, ಬೂದು ಮತ್ತು ಶ್ವೇತ ವಲಯಗಳೆಂದು ಸಂಬಂಧಪಟ್ಟ ಇಲಾಖೆ ಗುರುತಿಸಿದೆ. ಕಪ್ಪು ವಲಯ ಎಂದು ಗುರುತಿಸಿದ ಪ್ರದೇಶದಲ್ಲಿ ಅಂತರ್ಜಲ ಶೇ.೮೫ಕ್ಕಿಂತ ಹೆಚ್ಚು ಭಾಗ ಬಳಕೆಯಾಗಿದೆ. ಬೂದು ವಲಯಗಳಲ್ಲಿ ಶೇ. ೬೫ರಿಂದ ೮೫ ಭಾಗದಷ್ಟು ಬಳಕೆಯಾದರೆ, ಶ್ವೇತ ವಲಯದ ಸ್ಥಳಗಳಲ್ಲಿ ಅಂತರ್ಜಲ ವನ್ನು ಶೇ. ೬೫ಕ್ಕಿಂತ ಕಡಿಮೆ ಉಪಯೋಗಿಸ ಲಾಗಿದೆ. ಅಂದರೆ ಕಡಿಮೆ ಎಂದರೂ ನಾವು ಶೇ. ೬೫ರಷ್ಟು ಭೂಜಲ ಬಳಕೆ ಮಾಡುತ್ತಿದ್ದೇವೆ. ಶ್ವೇತ ವಲಯ ಎಂದ ಮಾತ್ರಕ್ಕೆ ಅಂತರ್ಜಲ ಸಮೃದ್ಧವಾಗಿ ಇದೆ ಎನ್ನಲಾಗದು.

ಅಂತರ್ಜಲದ ವಿಚಾರದಲ್ಲಿ ನಮ್ಮದು ಇತ್ತೀಚಿನ ದಿನ ಗಳಲ್ಲಿ ಕೇವಲ ಓವರ್‌ಡ್ರಾ-. ನೂರು ರು. ಆದಾಯದ ಸನ್ನಿವೇಶದಲ್ಲಿ ನಾವು ಮಾಡುತ್ತಿರುವ ಖರ್ಚು ಎರಡೂವರೆ ಪಟ್ಟು ಹೆಚ್ಚು. ಹಾಗೆಂದು ಅಷ್ಟು ದುಡಿಮೆಯ ಅವಕಾಶ ಇಲ್ಲವೆಂದಲ್ಲ. ಆದರೆ ದುಡಿಯಲಾರದ ಮೈಗಳ್ಳತನ ನಮ್ಮದು. ಇಂಥ ಸನ್ನಿವೇಶದಲ್ಲಿ ಅಂತರ್ಜಲದ ಪರಿಸ್ಥಿತಿ ಏನಾಗಬೇಕೆಂಬುದನ್ನು ಕಲ್ಪಿಸಿಕೊಳ್ಳಿ. ಕೋಲಾರದಂಥ ಜಿಲ್ಲೆಗಳಲ್ಲಿ ಅಂತರ್ಜಲ ಮಿತಿಮಿರಿ ಬಳಕೆಯಾಗುತ್ತಿದೆ. ಇನ್ನೊಂದೆಡೆ ಅಲ್ಲಿ ಮಳೆಯೂ ಕಣ್ಣಾಮುಚ್ಚಾಲೆ ಆಡುತ್ತಿದೆ. ಅರಣ್ಯ ಭೂಮಿ ಕೃಷಿಗೆ ಬಳಕೆ ಯಾಗುತ್ತಿದೆ. ಹೀಗಾಗಿ ಮಳೆ ಹೆಚ್ಚಾಗಿ ಬೀಳುತ್ತಿದ್ದ ಜಿಲ್ಲೆ ಗಳಲ್ಲೂ ಇಂದು ಪ್ರಮಾಣ ಕಡಿಮೆಯಾಗಿ ಅಲ್ಲೂ ಅಂತರ್ಜಲ ಮಟ್ಟ ಕುಸಿಯುತ್ತಿದೆ.

ರಾಜ್ಯದಲ್ಲಿ ಮಳೆಯ ಅಂಕಿ-ಅಂಶ ಗಮನಿಸಿದರೆ ನೆಲ ದಾಳದಲ್ಲಿ ಶೇಖರಗೊಳ್ಳುವ ನೀರಿನ ಮೊತ್ತ ೧೬,೧೮,೩೮೮ ದಶಲಕ್ಷ ಘನ ಮೀಟರ್. ಇದರಲ್ಲಿ ಕೃಷಿ, ಕೈಗಾರಿಕೆ, ಕುಡಿಯಲು ಮತ್ತಿತರ ಬಳಕೆಗೆ ಶೇ.೨೦ರಷ್ಟು ಅಂತರ್ಜಲ ಬಳಕೆ ಯಾಗುತ್ತದೆ. ಅಂದರೆ ಎನಿಲ್ಲವೆಂದರೂ ಸುಮಾರು ೩.೨೫ ದಶಲಕ್ಷ ಘನಮೀಟರ್‌ನಷ್ಟು ನೀರು. ಇದು ಬಿಟ್ಟು ರಾಜ್ಯ ದಲ್ಲಿರುವ ಅಂದಾಜು ೧೪ ಲಕ್ಷ ಬಾವಿ/ ಕೊಳವೆಬಾವಿಗಳಿಂದ ಶೇ. ೭೦ರಷ್ಟು ಅಂತರ್ಜಲ ಬಳಕೆಯಾಗುತ್ತಿದೆ. ಅದರ ಮೊತ್ತ ಸುಮಾರು ೧೦ ದಶಲಕ್ಷ ಘನ ಮೀಟರ್. ಅದೆಲ್ಲದರಿಂದ ಹೊರತಾಗಿ ವೈಜ್ಞಾನಿಕವಾಗಿ ಅಂತರ್ಜಲದಲ್ಲಿ ಶೇ. ೬೫ಕ್ಕಿಂತ ಹೆಚ್ಚು ಭಾಗವನ್ನು ಬಳಸುವಂತಿಲ್ಲ. ಹಾಗೂ ಬಳಸಿದ್ದರ ಪರಿಣಾಮವೇ ಕಪ್ಪು ವಲಯಗಳು ನಿರ್ಮಾಣವಾದದ್ದು. ಇದು ರಾಜ್ಯ ಮರುಭೂಮಿಯಾಗಿ ಮಾರ್ಪಡುತ್ತಿರುವ
ಸೂಚನೆ.

ಇಷ್ಟಾದರೂ ಅಂತತರ್ಜಲ ಖಜಾನೆಯನ್ನು ಕಾಪಿಟ್ಟುಕೊಳ್ಳುವ, ಬೀಳುವ ಮಳೆ ನೀರನ್ನು ಇಂಗಿಸಿಕೊಳ್ಳುವ ಯೋಚನೆಯೇ ನಮಗೆ ಬರುತ್ತಿಲ್ಲ. ನಮ್ಮದೇನಿದ್ದರೂ
ಮೋಡಗಳನ್ನು ಚದುರಿಸಿ ಬೇಕೆಂದಾಗ ಮಳೆ ಸುರಿಸಿಕೊಳ್ಳುವ‘ ಮೋಡ ಬಿತ್ತನೆಯ ಹುಚ್ಚು ಸಾಹಸದ ಭ್ರಮೆಯೇ ಇಂದಿನ ಸೋ ಕಾಲ್ಡ್ ವೈಜ್ಞಾನಿಕ ಯುಗದಲ್ಲಿ ಸಾಗಿದೆ. ಆದರೆ ನೂರಕ್ಕೆ ನೂರು ಸತ್ಯವೆಂದರೆ ತೀರಾ ಒಣಗಿದ ನೆಲವನ್ನು, ಅದರಾಳ ವನ್ನು ಮತ್ತೆ ಒದ್ದೆ ಮಾಡಬಹುದಾದ ಏಕೈಕ ಮಾರ್ಗದ್ದರೆ ಅದು ಮಳೆನೀರು ಸಂಗ್ರಹ.

ರಾಜ್ಯದ ಅಂತರ್ಜಲದ ಪ್ರಮಾಣ ೪೮೫ ಟಿಎಂಸಿ ಎಂದು ಅಂದಾಜಿಸಲಾಗಿದೆ. ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ ಮಲೆನಾಡು ಮತ್ತು ಕರಾವಳಿಯಲ್ಲಿ ಬಳಸುತ್ತಿರುವ ಅಂತರ್ಜಲದ ಪ್ರಮಾಣ ಕಡಿಮೆ. ಉತ್ತರ ಮತ್ತು ಮಧ್ಯ ಕರ್ನಾಟಕ ಭಾಗದ ಜಿಗಳ ೭೨ ತಾಲೂಕುಗಳಲ್ಲಿ ಕೈಗಾರಿಕೆ, ಗೃಹ ಮತ್ತು ಕೃಷಿ ಬಳಕೆಗೆ ನೀರಿನ ಸಾಕಷ್ಟು ಕೊರತೆ ಇದೆ. ೪೩ ತಾಲೂಕುಗಳಲ್ಲಿ ಅಂತರ್ಜಲ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ಬಳಕೆಯಾಗುತ್ತಿದೆ. ಉಳಿದ ೨೩ ತಾಲೂಕುಗಳಲ್ಲಿ ಮಿತಿಮೀರಿ ಬಳಸುತ್ತಿದ್ದು, ಶೇ.೫೦ರಷ್ಟು ಅಂತರ್ಜಲ ಖಾಲಿಯಾಗಿ ಕುಸಿತ ಕಂಡಿದೆ. ಈ ೭೨ ತಾಲೂಕುಗಳಲ್ಲಿ ಅಂತರ್ಜಲ ಅಪಾಯದ ಮಟ್ಟ ಮುಟ್ಟಿದೆ. ಈ ತಾಲೂಕುಗಳಲ್ಲಿ ೪ ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳಿದ್ದು, ೭.೫ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಇವೇ ಆಧಾರ.

ಅವೈಜ್ಞಾನಿಕವಾಗಿ ಎಂದರಲ್ಲಿ ಕೊಳವೆಬಾವಿ ತೋಡಿರುವುದರಿಂದ ೩ ಲಕ್ಷಕ್ಕೂ ಹೆಚ್ಚು ತೆರೆದ ಬಾವಿಗಳು ಒಣಗಿವೆ. ಈ ತಾಲೂಕುಗಳಲ್ಲಿ ನೀರಿನ ಮಟ್ಟ ಕುಸಿಯು
ತ್ತಿದ್ದಂತೆ ಹೆಚ್ಚೆಚ್ಚು ಆಳಕ್ಕೆ ಕೊಳವೆಬಾವಿ ತೋಡಲಾಗುತ್ತಿದೆ. ಪರಿಣಾಮ -ರೈಡ್ ಮತ್ತಿತರ ಖನಿಜಯುಕ್ತ ನೀರು ಅನೇಕ ಕಡೆ ಹೊಸಹೊಸ ಸಮಸ್ಯೆಗಳನ್ನು ತಂದೊಡ್ಡಿದೆ. ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಅದನ್ನು ಅವಲಂಬಿಸಿದ್ದ ಕೃಷಿ ಭೂಮಿ ಪ್ರಮಾಣವೂ ಇಳಿಮುಖ ಗೊಳ್ಳುತ್ತಿದೆ. ಕೊಳವೆ ಬಾವಿ ತೋಡಿಸುವುದು, ಮೋಟಾರ್ ಅಳವಡಿಕೆ, ವಿದ್ಯುತ್ ಸಂಪರ್ಕ ಇತ್ಯಾದಿ ವೆಚ್ಚ ಸೇರಿಸಿದರೆ ರಾಜ್ಯದ ರೈತರು ಲಭ್ಯ ಕೃಷಿ ಭೂಮಿಯಲ್ಲಿ ಅಗತ್ಯಕ್ಕಿಂತ ೨ ಸಾವಿರ ಕೋಟಿ ರು.ಗಳಿಗೂ ಹೆಚ್ಚು ಹಣವನ್ನು ವರ್ಷಕ್ಕೆ ವಿನಿಯೋಗಿಸಿದ್ದಾರೆ.

ಈಗ ಯೋಚಿಸಿ, ನಮಗೆ ಇನ್ನೂ ಬೋರ್‌ವೆಲ್‌ಗಳೆಂಬ ಅವಾಂತರದ ಮುಂದುವರಿಕೆ ಅಗತ್ಯವಿದೆಯೇ? ಇವೆಲ್ಲದರ ಕೊನೆಯಲ್ಲಿ ಒಮದು ಉದಾಹರಣೆ
ನೋಡೋಣ. ಪಕ್ಕದ ತಮಿಳುನಾಡಿನ ಕೊಯಮತ್ತೂರು ನಮಗೆ ತೀರಾ ದೂರ ಏನಲ್ಲ. ಬೆಂಗಳೂರಿನಿಂದ ೩೬೫ ಕಿ.ಮೀ ಅಂತರ ಅಷ್ಟೇ. ಅಬ್ಬಬ್ಬಾ ಎಂದರೆ ಆರು ಗಂಟೆ ಪ್ರಯಾಣ. ಅಲ್ಲಿನ ವಾರ್ಷಿಕ ಸರಾಸರಿ ಮಳೆ ಪ್ರಮಾಣ ಕೇವಲ ೬೧.೨೨ ಸೆಂಟಿಮೀಟರ್. ಪಶ್ಚಿಮ ಘಟ್ಟದ ತಪ್ಪಲಿನ ಇದ್ದರೂ ನೀರಿನ ದಾಹ. ಬೆಳೆಯುತ್ತಿರುವ ನಗರ ಬೇರೆ, ನಮ್ಮ ಬೆಂಗಳೂರಿನಂತೆಯೇ. ನೀರನ್ನು ಎಲ್ಲಿಂದ ಪೂರೈಸುವುದು? ಸಿರುವಾಣಿ ಮತ್ತು ಪಿಲ್ಲೂರು ಯೋಜನೆಗಳೇ ನೀರಿನ
ಮೂಲ. ಆದರೆ ಅದರಿಂದ ಪೂರೈಕೆಯಾಗುತ್ತಿರುವುದು ಸಾಲುತ್ತಿಲ್ಲ. ಅಲ್ಲದೇ ಅಂತರ್ಜಲವೂ ಕುಸಿಯುತ್ತಿದೆ. ನೀರಿನ ಪರಿಹಾರಕ್ಕೆ ಅಲ್ಲಿನ ಮಹಾನಗರ ಪಾಲಿಕೆ ಕಂಡುಕೊಂಡ ದಾರಿ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸುವುದು.

ಹೊಸದಾಗಿ ನೀರಿನ ಸಂಪರ್ಕ ಬೇಕು ಎಂದರೆ ಮಳೆ ನೀರು ಕೊಯ್ಲು ಅಳವಡಿಸಲೇಬೇಕು. ಅಲ್ಲಿಯೂ ಅಧಿಕಾರಿಗಳು ಮೊದಲು ಮಳೆ ನೀರು ಕೊಯ್ಲಿನ ಫೋಟೊ ತೋರಿಸಿದರೆ ಸಾಕು ಎಂದರು. ಇಲ್ಲದ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ದಾಖಲೆಗಳಲ್ಲಿ ತೋರಿಸಿ ನೀರಿನ ಸಂಪರ್ಕ ಪಡೆಯುವವರ ಪ್ರಮಾಣ ಹೆಚ್ಚಿತು. ಇದು ಸರಕಾರದ ಗಮನಕ್ಕೆ ಬರಲು ಹೆಚ್ಚು ದಿನ ಬೇಕಾಗಲಿಲ್ಲ. ಅಧಿಕಾರಿಗಳಿಗೆ ಚೆನ್ನಾಗಿಯೇ ಬಿಸಿ ಮುಟ್ಟಿಸಲಾಯಿತು. ಅಧಿಕಾರಿಗಳು ಖುದ್ದಾಗಿ ಸ್ಥಳ
ಪರಿಶೀಲನೆ ನಡೆಸದ ಹೊರತು ಅನುಮತಿ ಕೊಡಕೂಡದು ಎಂದು ತಾಕೀತು ಮಾಡಲಾಯಿತು.

ಪರಿಣಾಮ ಮೂರ್ನಾಲ್ಕು ತಿಂಗಳಿನಲ್ಲಿಯೇ ಕಾಣಿಸಿದೆ. ಇದು ಸುಮ್ಮನೆ ಕೇಳಿ ನಿರ್ಲಕ್ಷಿಸಿಬಿಡುವ ಸಂಗತಿ ಖಂಡಿತಾ ಅಲ್ಲ. ಬೆಂಗಳೂರಿನಲ್ಲೂ ೨೪೦೦ ಚದರ ಅಡಿಗಿಂತ ಹೆಚ್ಚಿನ ನಿವೇಶನಗಳಿಗೆ ಮಳೆ ನೀರು ಕೊಯ್ಲನ್ನು ಕಡ್ಡಾಯಗೊಳಿಸಿ ದಶಕಗಳೇ ಸಂದಿವೆ. ೧೨೦೦ ಅಡಿ ವಿಸ್ತೀರ್ಣದ ನಿವೇಶನದಲ್ಲಿ ಹೊಸದಾಗಿ ಮನೆ ಕಟ್ಟಿಸುವಾಗ ಮಳೆ ನೀರು ಕೊಯ್ಲು ವ್ಯವಸ್ಥೆ ಇರಲೇಕು ಎನ್ನುವ ನಿಯಮವನ್ನೇನೋ ರೂಪಿಸಲಾಗಿದೆ. ಅದು ಎಷ್ಟರಮಟ್ಟಿಗೆ ಪಾಲನೆಯಾಗುತ್ತಿದೆ ಎನ್ನುವುದು ನಮಗೇ ಗೊತ್ತಿದೆ. ಮಳೆ ನೀರೆಲ್ಲ ಚರಂಡಿ ಸೇರಿ ವ್ಯರ್ಥವಾಗುತ್ತಿದೆ. ನಾಗರಿಕರೂ ಅಷ್ಟೇ, ಭಾರಿ ಮಳೆ ಬಂದು ರಾಜಾಕಾಲುವೆಗಳು ಉಕ್ಕಿ ಹರಿದು, ಅನಾಹುತ ಆದಾಗ ಪಾಲಿಕೆಯನ್ನು ಶಪಿಸಿ ಸುಮ್ಮನಾಗುತ್ತಾರೆಯೇ ವಿನಾ ತಮ್ಮ ಮನೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಂಡಿದ್ದರೆ ರಾಜಾಕಾಲುವೆ ಸೇರಿ ವ್ಯರ್ಥವಾಗುವ ಬಹುಪಾಲು ನೀರನ್ನು ಇಂಗಿಸಬಹುದಿತ್ತು ಎಂದು ಯೋಚಿಸುವುದೇ ಇಲ್ಲ!

೧೯೮೦ರ ದಶಕದಲ್ಲಿ ಕೊಳವೆ ಬಾವಿಗಳು ದಾಂಗುಡಿ ಇಟ್ಟವು. ಶುರುವಿನಲ್ಲಿ ಧಾರಾಳವಾಗಿ ನೀರೂ ಸಿಕ್ಕಿತು. ರಾಷ್ಟ್ರೀಕೃತ ಬ್ಯಾಂಕುಗಳೂ ಪಂಪ್‌ಸೆಟ್ ಖರೀದಿಸಲು ರೈತರನ್ನು ಕರೆದುಕರೆದು ಸಾಲ ಕೊಟ್ಟವು. ಅಽಕ ಇಳುವರಿ ಕನಸಿನ ಬೆನ್ನು ಹತ್ತಿದ ರೈತರು ಭೂಮಿಯ ದಾಹವನ್ನೂ ಇಂಗಿಸೇಕು ಎನ್ನುವ ಪ್ರeಯನ್ನೇ ಕಳೆದುಕೊಂಡುಬಿಟ್ಟರು. ತೆರೆದ ಬಾವಿಗಳು ಬತ್ತತೊಡಗಿದವು. ಅತ್ತ ಅರಣ್ಯ ಪ್ರಮಾಣ ಕಡಿಮೆಯಾದ್ದರಿಂದ ಮಳೆಯೂ ಕಡಿಮೆಯಾಗಿ ಬರದ ಛಾಯೆ ಆವರಿಸತೊಡಗಿತು. ಮಳೆ ನೀರು ಸಂಗ್ರಹಿಸುವ ಪರಿಕಲ್ಪನೆ ಹೆಚ್ಚೂಕಡಿಮೆ ಮರೆಯಾಗಿ ಹೋಯಿತು.

ಮಳೆಯಿಂದ ಬೀಳುವ ಅಲ್ಪಪ್ರಮಾಣದ ಮಳೆ ನೀರನ್ನಾದರೂ ಇಂಗಿಸುವ, ಹಿಡಿದಿಟ್ಟುಕೊಳ್ಳುವ ಪ್ರಯತ್ನಗಳನ್ನೂ ಮಾಡಲಿಲ್ಲ. ಹಾಗಂತ ಏನು ಮಾಡಲೂ ಸಾಧ್ಯವೇ ಇಲ್ಲ ಎನ್ನುವ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿಲ್ಲ. ಪ್ರಕೃತಿಯನ್ನು ಮಾತೆ ಎನ್ನುವುದು ಇದಕ್ಕೇ. ‘ಎಷ್ಟೇ ಶೋಷಿಸಿದರೂ ಇವರೆಲ್ಲರೂ ನನ್ನ ಮಕ್ಕಳೇ’ ಎನ್ನುವ ಮಮಕಾರ ಅವಳಿಗೆ. ಅರಣ್ಯೀಕರಣದತ್ತ ಗಮನ ಕೊಟ್ಟರೆ, ಮಳೆ ನೀರು ಕೊಯ್ಲಿನಂಥ ಸಾಂಪ್ರದಾಯಿಕ ವ್ಯವಸ್ಥೆಗೆ ಜೀವ ತುಂಬಿದರೆ (ಕಡೇಪಕ್ಷ ಒಂದು ಎಕರೆ
ಜಮೀನಿನಲ್ಲಿ ಎರಡು ಗುಂಟೆಯನ್ನಾದರೂ ಇದಕ್ಕಾಗಿ ಮೀಸಲಿಡುವುದು ಸೂಕ್ತ), ಕೊಳವೆ ಬಾವಿ ಮೇಲಿನ ಅವಲಂಬನೆ ಕಡಿಮೆ ಮಾಡಿ ಕೆರೆ, ಕೊಳ, ತೆರೆದ ಬಾವಿಗಳನ್ನು ಆಶ್ರಯಿಸಿದರೆ ಅಂತರ್ಜಲ ಹೆಚ್ಚಿಸುವುದು ಕಷ್ಟವೇನಲ್ಲ.

ಇದರ ಜತೆಯ ರೈತರ ಮನೋಭಾವವೂ ಬದಲಾಗೇಕು. ವೈಯಕ್ತಿಕ ನೀರಾವರಿಗೆ ಬದಲಾಗಿ ಕೆರೆ, ಕೊಳಗಳ ಅಚ್ಚುಕಟ್ಟು ಪ್ರದೇಶದಲ್ಲಿ ಕೇಂದ್ರೀಕೃತ ಸಾಮೂಹಿಕ ನೀರಾವರಿ ವ್ಯವಸ್ಥೆಯತ್ತ ಒಲವು ತೋರಿದರೆ ಪರಿಸ್ಥಿತಿ ನಿಧಾನವಾಗಿಯಾದರೂ ಸುಧಾರಿಸಿಕೊಳ್ಳುತ್ತದೆ.