ವಿದೇಶವಾಸಿ
dhyapaa@gmail.com
‘ಪ್ಲೇಸ್ ದು ತೆರ್ತ್’ ಒಂದು ಬಣ್ಣದ ಮಾಯಾಲೋಕ. ಚಿತ್ರ ಬಿಡಿಸುವವರಿಗಷ್ಟೇ ಅಲ್ಲ, ನೋಡುವವರಿಗೂ, ಕೊಳ್ಳುವವರಿಗೂ ಸ್ವರ್ಗ. ಅಲ್ಲಿಯ ದಾರಿ ಬದಿಗಿನ ಒಂದೊಂದು ಕಲ್ಲೂ ಒಂದೊಂದು ಚಿತ್ರ. ಬೇಸಿಗೆಯಾಗಲಿ, ಚಳಿಯಾಗಲಿ, ಮಳೆಗಾಲವೇ ಆಗಲಿ, ಅಲ್ಲಿ ಮಾತ್ರ ಪ್ರತಿನಿತ್ಯವೂ ಚಿತ್ರಕಾಲ. ವರ್ಷದ ೧೨ ಮಾಸವೂ ‘ಚಿತ್ರಮಾಸ’.
ಇತ್ತೀಚೆಗೆ ಪ್ಯಾರಿಸ್‌ಗೆ ಹೋದಾಗ ಏನೇನು ನೋಡಬೇಕು ಎಂದು ಪಟ್ಟಿಮಾಡಿಕೊಳ್ಳುತ್ತಿದ್ದೆವು. ಕೇವಲ ೩ ದಿನಕ್ಕಾಗಿ ಹೋಗಿದ್ದರಿಂದ ಅದರ ಅವಶ್ಯಕತೆ ಅಗತ್ಯವಾಗಿ ಇತ್ತು. ನೋಡಬಾರದ್ದನ್ನೆಲ್ಲ ನೋಡುತ್ತ ಸಮಯ ಕಳೆದು, ನೋಡಬೇಕಾದದ್ದನ್ನೇ ಬಿಟ್ಟರೆ ಹೇಗೆ? ಡಿಸ್ನಿಲ್ಯಾಂಡ್ ದೂರವಾದದ್ದರಿಂದ ಅದನ್ನು ಮೊದಲೇ ಪಟ್ಟಿಯಿಂದ ಕೈಬಿಟ್ಟಿದ್ದೆವು. ಐಫೆಲ್ ಟವರ್, ಜಾರ್ಜ್ ಸ್ಟ್ರೀಟ್, ಲಿಡೋ ಶೋ, ಲೂವ್ರ್ ವಸ್ತುಸಂಗ್ರಹಾಲಯ, ಅರಮನೆ ಇವು
ನೋಡಬೇಕಾದ ಸ್ಥಳಗಳ ಪಟ್ಟಿಯಲ್ಲಿದ್ದವು. ಇದರಲ್ಲಿ ಪ್ರತಿಯೊಂದು ಸ್ಥಳ ನೋಡುವುದಕ್ಕೂ ಒಂದು ಇಡೀ ದಿನವೇ ಬೇಕು. ತಲುಪಿದ ದಿನವೇ ಐಫೆಲ್ ಟವರ್ ನೋಡಿ ಮುಗಿಸಿದ್ದರಿಂದ ಪಟ್ಟಿ ಸ್ವಲ್ಪ ಮಟ್ಟಿಗೆ ಸಣ್ಣದಾಗಿತ್ತು.
ಮಾರನೆಯ ದಿನ, ಇಂದು ಎಲ್ಲಿಗೆ ಹೋಗಬೇಕು ಎಂದು ಆಲೋಚಿಸುತ್ತಿರುವಾಗ, ‘ವಿಶ್ವವಾಣಿ’ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರು
‘ಪ್ಲೇಸ್ ದು ತೆರ್ತ್’ಗೆ ಹೋಗೋಣ ಎಂದರು. ಅದರ ಬಗ್ಗೆ ಒಂದೆರಡು ಬಾರಿ ಅವರ ಬಾಯಲ್ಲೇ ಕೇಳಿದ್ದೆ. ಅದೊಂದು ಚಿತ್ರನಗರಿ, ಅಲ್ಲಿ ನೂರಾರು
ಕಲಾವಿದರು ಬಂದು ಚಿತ್ರ ಬಿಡಿಸುತ್ತಿರುತ್ತಾರೆ, ಬೇರೆ ಬೇರೆ ವಿಧದ ಚಿತ್ರಗಳನ್ನು ನೋಡಬಹುದು, ಕೊಳ್ಳಬಹುದು ಇತ್ಯಾದಿ. ಆಗಲೂ ನನಗೆ ಅದು
‘ಓಕೆ’ ಅನಿಸಿತ್ತೇ ವಿನಾ ನಾನು ಅಷ್ಟೊಂದು ಆಕರ್ಷಿತನಾಗಿರಲಿಲ್ಲ. ಏಕೆಂದರೆ ‘ಮಾಡರ್ನ್ ಆರ್ಟ್’ ನನಗೆ ಮೊದಲೂ ಅರ್ಥವಾಗುತ್ತಿರಲಿಲ್ಲ,
ಈಗಲೂ ಅರ್ಥವಾಗುವುದಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ.
ಒಂದು ಚುಕ್ಕಿ, ಒಂದು ಗೆರೆ, ಒಂದು ಬಣ್ಣ ಅಥವಾ ಒಂದು ಛಾಯೆಯಲ್ಲಿ ಏನನ್ನೋ ಹೇಳುವ ಚಿತ್ರ ನನ್ನ ಪಾಲಿಗೆ ಕಬ್ಬಿಣದ ಕಡಲೆ. ಅಂಥದ್ದರಲ್ಲಿ
ಪಟ್ಟಿಯಲ್ಲಿರಬೇಕಾದ ಸ್ಥಳ ಬಿಟ್ಟು ಇನ್ನೆಲ್ಲಿಗೋ ಹೋಗುವುದು ಎಂದಾಗ ಅರ್ಧಮನಸ್ಕನಾಗಿಯೇ ತಯಾರಾಗಿದ್ದೆ. ಅಲ್ಲಿ ಹೋದ ನಂತರ ಮಾತ್ರ
‘ಈ ಸ್ಥಳಕ್ಕೆ ಬಾರದೇ ಹೋಗಿದ್ದರೆ ಮೋಸ ಆಗುತ್ತಿತ್ತು’ ಎಂದು ಹತ್ತಾರು ಸಲ ಅಂದುಕೊಂಡಿದ್ದೆ. ಪ್ಲೇಸ್ ದು ತೆರ್ತ್ ಒಂದು ಬಣ್ಣದ ಮಾಯಾಲೋಕ. ಚಿತ್ರ ಬಿಡಿಸುವವರಿಗಷ್ಟೇ ಅಲ್ಲ, ನೋಡುವವರಿಗೂ, ಕೊಳ್ಳುವವರಿಗೂ ಸ್ವರ್ಗ.
ಅಲ್ಲಿಯ ದಾರಿ ಬದಿಗಿನ ಒಂದೊಂದು ಕಲ್ಲೂ ಒಂದೊಂದು ಚಿತ್ರ. ಬೇಸಿಗೆಯಾಗಲಿ, ಚಳಿಯಾಗಲಿ, ಮಳೆಗಾಲವೇ ಆಗಲಿ, ಅಲ್ಲಿ ಮಾತ್ರ ಪ್ರತಿನಿತ್ಯವೂ ಚಿತ್ರಕಾಲ. ವರ್ಷದ ೧೨ ಮಾಸವೂ ‘ಚಿತ್ರಮಾಸ’. ಫ್ರಾನ್ಸ್‌ನ ಎತ್ತರದ ಶಿಖರ ‘ಮೌಂಟ್ ಮಾರ್ತ್ರ್ ಕ್ವಾರ್ಟರ್’ನ ಸಮೀಪದಲ್ಲಿರುವ ಈ ಸ್ಥಳವನ್ನು ಆರನೇ ಕಿಂಗ್ ಲೂಯಿಸ್, ೧೧೩೩ರಲ್ಲಿ ನಿರ್ಮಿಸಿದನಂತೆ. ೨೦ನೇ ಶತಮಾನದಲ್ಲಿ ಮಹಾನ್ ಚಿತ್ರಕಾರ ಪ್ಯಾಬ್ಲೋ ಪಿಕಾಸೋ ಸೇರಿದಂತೆ ಅನೇಕ ಗಣ್ಯ-ಮಾನ್ಯ ವರ್ಣಚಿತ್ರಕಾರರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದರಂತೆ. ಈಗಲೂ ನೂರಾರು ಚಿತ್ರಕಾರರು ಅಲ್ಲಿ ಬಂದು ಬೆಳಗ್ಗೆಯಿಂದ ಸಾಯಂಕಾಲದವರೆಗೂ ವರ್ಣ ಭೇದವಿಲ್ಲದೆ, ವರ್ಣದ ಭೇದವೂ ಇಲ್ಲದೆ ಚಿತ್ರ ಬಿಡಿಸುತ್ತಿರುತ್ತಾರೆ.
ಒಂದೆರಡು ಗಂಟೆಯಲ್ಲಿ ನೋಡಿ ಬರೋಣ ಎಂದುಕೊಂಡು ಹೊರಟಿದ್ದ ಸ್ಥಳದಲ್ಲಿ ಅರ್ಧಕ್ಕೂ ಹೆಚ್ಚು ದಿನ ಕಳೆದದ್ದು ಗೊತ್ತೇ ಆಗಲಿಲ್ಲ. ಒಂದೆರಡು ದಿನ ತಲೆಯಲ್ಲಿ ಅದರದ್ದೇ ಗುಂಗಿಹುಳ ಜೀಗುಡುತ್ತಿತ್ತು. ಚಿತ್ರಕಲೆಯ ಕುರಿತು ಅಷ್ಟೇನೂ ಆಸಕ್ತಿ ಹೊಂದಿರದ ಮನಸ್ಸು ಅದರ ಕುರಿತು ಯೋಚಿಸುವಂತೆ ಮಾಡಿತು. ಆ ಪುಟ್ಟ ಪ್ರದೇಶ ನಿರ್ಮಿಸಿ ಇಂದಿಗೆ ಬರೊಬ್ಬರಿ ೮೯೦ ವರ್ಷವಾಯಿತು. ಅಂದಿನಿಂದ ಇಂದಿನವರೆಗೂ ಈ ಪುಟ್ಟ ಪಟ್ಟಣಕ್ಕೆ ಕಲೆಯೇ ಆಹಾರ, ಕುಂಚವೇ ಆಹಾರ. ಒಂದು ಪ್ರದೇಶ ತನ್ನ ಮೈ ತುಂಬ ಬಣ್ಣ ಸವರಿಕೊಂಡೇ ಬದುಕುತ್ತಿದೆ, ಬಣ್ಣವನ್ನೇ ಉಸಿರಾಡುತ್ತಿದೆ ಎಂದರೆ ಅದರಲ್ಲಿ ಎಂಥ ಸತ್ವವಿರಬೇಕು? ಇದನ್ನು ಯೋಚಿಸುತ್ತಿದ್ದಂತೆ, ನನ್ನ ಮನಸ್ಸು ಫ್ರಾನ್ಸ್‌ನ ಚಿತ್ರಕಲೆಯ ಇತಿಹಾಸ ಹುಡುಕಲು ಆರಂಭಿಸಿತ್ತು. ಅಂತರ್ಜಾಲದ
ಕಾಲದಲ್ಲಿ ಅದು ಕಷ್ಟದ ಕೆಲಸವೇನೂ ಅಲ್ಲವಲ್ಲ.
ಹುಡುಕಾಟದಲ್ಲಿ ನನ್ನ ಗಮನ ಸೆಳೆದದ್ದು ಒಂದು ವಿಚಿತ್ರ ಚಿತ್ರ. ಆ ವರ್ಣಚಿತ್ರದ ಹೆಸರು ‘ಲಾ ಚಾರಿಟೆ ರೋಮೈನ್’ ಅಥವಾ ‘ರೋಮನ್ ಚಾರಿಟಿ’. ಅದನ್ನು ಬಿಡಿಸಿದ್ದು ಫ್ರೆಂಚ್ ವರ್ಣಚಿತ್ರಕಾರ ಜೂಲ್ಸ್ ಜೋಸೆಫ್ ಲೆ-ಬ್ವ್ರೆ. ಸುಮಾರು ೧೫೦ ವರ್ಷದ ಹಿಂದೆ ಆತ ಬಿಡಿಸಿದ ಈ ಚಿತ್ರ ಮೊದಲ ನೋಟಕ್ಕೆ ವಿಕೃತ, ವಿಚಿತ್ರ, ಅಶ್ಲೀಲ ಅಥವಾ ಅಸಭ್ಯ ಅನ್ನಿಸಿದರೂ, ಆ ಚಿತ್ರ ೩೦ ಮಿಲಿಯನ್ ಯೂರೋಗೆ (ಸುಮಾರು ೨೬೦ ಕೋಟಿ ರೂಪಾಯಿ) ಮಾರಾಟ ವಾಯಿತಂತೆ. ಅಷ್ಟೊಂದು ಹಣ ಕೊಟ್ಟು ಒಂದು ಚಿತ್ರವನ್ನು ಕೊಳ್ಳುವವರಿದ್ದಾರೆಯೇ? ಇರಲಿ-ಬಿಡಲಿ, ವಿಷಯ ಅದಲ್ಲ; ಆ ಚಿತ್ರದಲ್ಲಿ ಅಂಥದ್ದೇನಿದೆ? ಮಹಿಳೆಯೋರ್ವಳು ಒಂದು ಕಂಕುಳಲ್ಲಿ ಮಗು ಎತ್ತಿಕೊಂಡು, ಸೆರೆಮನೆಯಲ್ಲಿ, ಕೈಗಳನ್ನು ಕಟ್ಟಿಹಾಕಿದ, ಗಡ್ಡ ಮೀಸೆ ಹಣ್ಣಾದ ಒಬ್ಬ ಮುದುಕನಿಗೆ ತನ್ನ ಸ್ತನಪಾನ ಮಾಡಿಸುತ್ತಿರುವ ಚಿತ್ರ ಅದು. ಇದೇನು ವಿಚಿತ್ರ ಎಂದು ಚಿತ್ರದ ಕುರಿತು ಹುಡುಕಾಡಿದಾಗ ಸಿಕ್ಕ ಮಾಹಿತಿ ಇಷ್ಟು.
ನಿಮಗೆ ೧೪ನೇ ಕಿಂಗ್ ಲೂಯಿಸ್ ಗೊತ್ತಿರಬಹುದು. ಆತನನ್ನು ‘ಲೂಯಿಸ್ ದಿ ಗ್ರೇಟ್’, ‘ಸನ್ ಕಿಂಗ್’ ಎಂದೂ ಕರೆಯುವುದುಂಟು. ಸಾರ್ವಭೌಮತ್ವ ಹೊಂದಿದ ಅಥವಾ ಸ್ವತಂತ್ರ ಭೂಭಾಗ ಹೊಂದಿದ ದೇಶವನ್ನು ಅತಿಹೆಚ್ಚು ಕಾಲ ಆಳಿದವರ ಪಟ್ಟಿಯಲ್ಲಿ ಈತನ ಹೆಸರು ಮೊದಲ ಸ್ಥಾನದಲ್ಲಿದೆ.
೭೨ಕ್ಕೂ ಹೆಚ್ಚು ವರ್ಷ ಆತ ಫ್ರಾನ್ಸ್ ದೇಶವನ್ನು ಆಳಿದ್ದ. ಇಂಗ್ಲೆಂಡಿನ ರಾಣಿ ಎಲಿಜಬೆತ್ ಮತ್ತು ಥೈಲೆಂಡಿನ ಕಿಂಗ್ ರಾಮ ನಂತರದ ಸ್ಥಾನದಲ್ಲಿ (೭೦
ವರ್ಷ) ಇದ್ದಾರೆ. ಇರಲಿ, ಇದು ಕಿಂಗ್ ಲೂಯಿಸ್ ರಾಜ್ಯವಾಳುತ್ತಿದ್ದ ಸಮಯದಲ್ಲಿ ನಡೆದ ನೈಜ ಘಟನೆಯಂತೆ. ಸಿಮೋನ್ ಹೆಸರಿನ ವ್ಯಕ್ತಿಯೊಬ್ಬ
ಚೂರು ಬ್ರೆಡ್ ಕದಿಯುವಾಗ ಸಿಕ್ಕಿಹಾಕಿಕೊಳ್ಳುತ್ತಾನೆ.
ಕಳ್ಳತನದ ಆರೋಪದಡಿ ಅಲ್ಲಿಯ ನ್ಯಾಯಾಲಯ ಆತನಿಗೆ ಹಸಿವಿನಿಂದ ಬಳಲಿ ಸಾಯುವ ಮರಣದಂಡನೆಯ ಶಿಕ್ಷೆ ವಿಧಿಸುತ್ತದೆ. ಆತನಿಗೆ ಒಬ್ಬಳೇ ಮಗಳು ಪೆರೋ. ಆ ಮಗಳಿಗೆ ೬ ತಿಂಗಳ ಒಂದು ಮಗು. ಇದರ ಹೊರತಾಗಿ ಸಿಮೋನ್‌ಗೆ ಯಾವುದೇ ಸಂಬಂಧಿಗಳಾಗಲಿ, ಪರಿವಾರದವರಾಗಲಿ ಇರಲಿಲ್ಲ.
ಸೆರೆಮನೆಯಲ್ಲಿದ್ದ ಆತನನ್ನು ನೋಡಲು ಪ್ರತಿನಿತ್ಯ ಮಗಳು ಬರುತ್ತಿದ್ದಳು. ಮಾಮೂಲಿನಂತೆ ಜೈಲಿನ ಅಧಿಕಾರಿಗಳು ಎಲ್ಲ ತಪಾಸಣೆ ನಡೆಸಿ ಪೆರೋಳನ್ನು ಒಳಗೆ ಬಿಡುತ್ತಿದ್ದರು. ಅದು ಯಾವುದೇ ಜೈಲಿನ ಒಳಗೆ ಹೋಗ ಬೇಕಾದರೂ ಇರುವಂಥದ್ದೇ.
ವಿಚಿತ್ರವೆಂದರೆ ೪ ತಿಂಗಳು ಕಳೆದರೂ ಸಿಮೋನ್ ಸಾಯಲೂ ಇಲ್ಲ, ಬಡವಾಗಲೂ ಇಲ್ಲ. ಸಿಮೋನ್ ಇನ್ನೂ ಬದುಕಿರುವುದನ್ನು ಕಂಡ ಜೈಲಿನ
ಅಧಿಕಾರಿಗಳಿಗೆ ಆಶ್ಚರ್ಯವೂ ಆಯಿತು, ಅನುಮಾನವೂ ಮೂಡಿತು. ಏನನ್ನೂ ತಿನ್ನದೇ, ಕುಡಿಯದೇ ಮನುಷ್ಯ ಬದುಕುವುದಾದರೂ ಹೇಗೆ? ಎಷ್ಟೇ ಹುಡುಕಾಡಿದರೂ, ಎಲ್ಲೂ ಏನೂ ಸಿಗಲಿಲ್ಲ. ಅಧಿಕಾರಿಗಳು ಇದರ ಗುಟ್ಟು ತಿಳಿಯಲು ಮುಂದಾದರು. ಆಗ ದೊರೆತ ಮಾಹಿತಿ ಅವರನ್ನು ದಂಗು ಬಡಿಸಿತ್ತು. ತಂದೆಯನ್ನು ನೋಡಲು ಖಾಲಿ ಕೈಯಲ್ಲೇ ಬರುತ್ತಿದ್ದ ಪೆರೋ, ನಿತ್ಯವೂ ಆತನಿಗೆ ತನ್ನ ಮೊಲೆಹಾಲು ಉಣಿಸುತ್ತಿದ್ದಳು. ಅದನ್ನು ಕುಡಿದೇ ಸಿಮೋನ್ ೪ ತಿಂಗಳು ಬದುಕಿದ್ದ!
ಈ ವಿಷಯ ತಿಳಿಯುತ್ತಿದ್ದಂತೆ ಪುನಃ ತಂದೆ ಮತ್ತು ಮಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ನಡೆದ ಘಟನೆಯನ್ನು ಆಲಿಸಿದ ನ್ಯಾಯಾಧೀಶರಿಗೆ ದಿಕ್ಕು ತೋಚದಂತಾಗಿತ್ತು. ಅವರ ಕಣ್ಣಾಲಿಯಲ್ಲಿ ನೀರು ತುಂಬಿತ್ತು. ತಂದೆ-ಮಗಳ ಪ್ರೀತಿಯ ಮುಂದೆ ಸೋತ ನ್ಯಾಯಾಧೀಶರು ಅವರಿಬ್ಬರನ್ನೂ ಖುಲಾಸೆಗೊಳಿಸಿದರು ಎನ್ನುವುದು ಈ ಚಿತ್ರದ ಹಿಂದಿರುವ ಕತೆ. ಈ ಕತೆಗೆ ಸಾಕಷ್ಟು ಹೌದು-ಅಲ್ಲಗಳು ಇವೆ. ಕೆಲವರು ಈ ಕತೆಯೇ ಸುಳ್ಳು ಎನ್ನುತ್ತಾರೆ. ಕೆಲವರು ಪೆರೋ ಸಿಮೋನ್‌ನ ಮಗಳಲ್ಲ, ಹೆಂಡತಿ ಎಂದರೆ, ಇನ್ನು ಕೆಲವರು ಪೆರೋಗೂ ನ್ಯಾಯಾಲಯ ಮರಣದಂಡನೆಯ ಶಿಕ್ಷೆ ವಿಽಸಿತು ಎನ್ನುತ್ತಾರೆ. ಪೆರೋ ಸಿಮೋನ್‌ನನ್ನು ನೋಡಲು ಸೆರೆಮನೆಗೆ ಹೋಗುವಾಗ ಮಗುವನ್ನು ಕರೆದುಕೊಂಡು ಹೋಗುತ್ತಿರಲಿಲ್ಲ ಎಂಬುದು ಕೆಲವರ ವಾದವಾದರೆ, ಮಹಿಳೆಯ ಸಹಾನುಭೂತಿ ಎಷ್ಟು ಆಳವಾಗಿರುತ್ತದೆ, ಗಾಢವಾಗಿರುತ್ತದೆ ಎನ್ನುವುದಕ್ಕೆ ಇದು ಉದಾಹರಣೆ ಎಂದು ಕೆಲವರು ಹೇಳುತ್ತಾರೆ.
ಅಂದು ಪೆರೋ ಮತ್ತು ಸಿಮೋನ್ ಬದುಕಿದರೋ, ಮರಣದಂಡನೆ ಶಿಕ್ಷೆಗೆ ಒಳಗಾಗಿ ಸತ್ತರೋ ಗೊತ್ತಿಲ್ಲ. ಇಬ್ಬರೂ ಇರುವ ಆ ಚಿತ್ರ ಮಾತ್ರ ಇಂದಿಗೂ
ಬದುಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಕತೆ ಕಿಂಗ್ ಲೂಯಿಸ್ ಕಾಲದಲ್ಲಿ ಅಲ್ಲ, ಅದಕ್ಕೂ ಕೆಲವು ವರ್ಷ ಹಿಂದಿನದ್ದು ಎನ್ನುವವರೂ ಇದ್ದಾರೆ. ಅದಕ್ಕೆ ತಕ್ಕಂತೆ ಕೆಲವು ಚಿತ್ರಗಳು ದೊರಕಿದ್ದು, ಅವು ಕಿಂಗ್ ಲೂಯಿಸ್ ರಾಜ್ಯಭಾರ ಮಾಡುವುದಕ್ಕಿಂತ ಮೊದಲಿನವು ಎಂಬ ಮಾತೂ ಇದೆ. ಬಿಡಿ, ಇತಿಹಾಸ ದಲ್ಲಿ ಗೊಂದಲ ಇದೇ ಮೊದಲೂ ಅಲ್ಲ, ಕೊನೆಯೂ ಅಲ್ಲ.
ಇತಿಹಾಸದಲ್ಲಿರುವ ಗೊಂದಲವನ್ನು ಸರಿಪಡಿಸುವವರು ಯಾರು? ಇತಿಹಾಸದಲ್ಲೇ ಗೊಂದಲವಿದ್ದರೆ ಯಾವುದನ್ನು ನಂಬಬೇಕು? ಯಾವುದನ್ನು ಬಿಡಬೇಕು? ಒಂದಂತೂ ನಿಜ, ಈ ಐತಿಹಾಸಿಕ ಘಟನೆ ಯುರೋಪಿನ ನೆಲದಲ್ಲಿ ಘಟಿಸಿದ್ದಂತೂ ಹೌದು. ಇಲ್ಲವಾದರೆ ಯುರೋಪಿನಾದ್ಯಂತ ಈ
ಒಂದು ಚಿತ್ರವನ್ನು ನೂರಾರು ಜನ ಬಿಡಿಸುತ್ತಿರಲಿಲ್ಲ. ಇದನ್ನು ಶಿಲ್ಪದಲ್ಲಿ ಕಡೆಯುತ್ತಿರಲಿಲ್ಲ. ಈಗ, ಜೂಲ್ಸ್ ಜೋಸೆಫ್ ಬಿಡಿಸಿದ ಚಿತ್ರದಲ್ಲಿರುವ ವಿಶೇಷತೆ ಏನು? ಅದುವರೆಗಿನ ಚಿತ್ರಗಳೆಲ್ಲ ಪೆರೋ ಮತ್ತು ಸಿಮೋನ್ ಮಾತ್ರ ಇರುತ್ತಿದ್ದರು. ಜೂಲ್ಸ್ ಬಿಡಿಸಿದ ಚಿತ್ರ ಪ್ರಸಿದ್ಧಿಯಾಗಲು ಕಾರಣ ಅದು ಪೆರೋ ಮಗುವಿನೊಂದಿಗೆ ಇರುವ ಮೊದಲ ಚಿತ್ರವಾಗಿತ್ತು.
ಹಾಗಾದರೆ ಆ ಚಿತ್ರ ೩೦ ಮಿಲಿಯನ್ ಯೂರೋಗೆ ಮಾರಾಟ ವಾದದ್ದು ಹೌದೇ? ಕೆಲವು ವರದಿಗಳ ಪ್ರಕಾರ ಅದು ಸುಳ್ಳು. ಒಂದು ವರದಿಯ ಪ್ರಕಾರ ೧೮೬೪ರಲ್ಲಿ ೧,೫೦೦ ಫ್ರೆಂಚ್ ಫ್ರಾಂಕ್ ಕೊಟ್ಟು ಫ್ರೆಂಚ್ ಸರಕಾರ ಅದನ್ನು ಖರೀದಿಸಿ ಮೆಲುನ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಟ್ಟಿತ್ತಂತೆ. ನಂತರ ಅದನ್ನು ಸಿಟಿ ಹಾಲ್‌ಗೆ ದಾನ ಮಾಡಲಾಯಿತಂತೆ. ಈ ಚಿತ್ರವನ್ನಾಗಲಿ, ಅದನ್ನು ಕಡೆದ ಶಿಲ್ಪವನ್ನಾಗಲಿ ನೋಡಲೇಬೇಕು ಎಂಬ ಇಚ್ಛೆ ಇದ್ದರೂ,
ಬೆಲ್ಜಿಯಮ್ ಕಡೆ ಹೋಗಬೇಕಾದ್ದರಿಂದ ಆ ಆಸೆಯನ್ನು ಬಿಟ್ಟು ಹೊರಟೆವು. ಮೊದಲು ಬೆಲ್ಜಿಯಂನ ಬ್ರೂಶ್, ನಂತರ ಘೆಂಟ್ ನಗರಕ್ಕೆ ಭೇಟಿ ಕೊಟ್ಟು ರಾಜಧಾನಿ ಬ್ರುಸ್ಸೆಲ್ಸ್ ಕಡೆ ಹೊರಟೆವು. ಬೆಲ್ಜಿಯಂನಿಂದ ತಿರುಗಿಬಂದ ನಂತರ ಬ್ರೂಶ್, ಘೆಂಟ್ ಮತ್ತು ಬ್ರುಸ್ಸೆಲ್ಸ್‌ನಲ್ಲಿನಲ್ಲಿ ನೋಡಬೇಕಾದ ಸ್ಥಳ ಯಾವುದಾದರೂ ಬಿಟ್ಟುಹೋಯಿತೇ ಎಂದು ಸುಮ್ಮನೇ ಗೂಗಲ್‌ನಲ್ಲಿ ಹುಡುಕಾಡುತ್ತಿದ್ದೆ. ಘೆಂಟ್‌ನಲ್ಲಿ ೯೦ ಮೀಟರ್ ಎತ್ತರದ ಒಂದು ಗೋಪುರದ ಕಟ್ಟಡವಿದೆ.
ಬೆಲ್‌ಫ್ರೀ ಆಫ್ ಘೆಂಟ್ ಹೆಸರಿನ ಆ ಕಟ್ಟಡದ ಸಭಾಂಗಣಕ್ಕೆ ಹೋಗುವ ದ್ವಾರದ ಮೇಲೆ ‘ಮಮ್ಮಲೋಕ್ಕರ್’ ಹೆಸರಿನ ಒಂದು ಶಿಲ್ಪಕಲೆಯಿದೆ. ಮಮ್ಮಲೊ ಕ್ಕರ್ ಎಂದರೆ ‘ಸ್ತನ ಹೀರುವವನು’ ಎಂಬ ಅರ್ಥವಂತೆ. ಅದು ಸಿಮೋನ್ ಮತ್ತು ಪೆರೋ ಕತೆ! ಆ ಕಟ್ಟಡದವರೆಗೆ ಹೋಗಿ, ಕಟ್ಟಡ-ಗೋಪುರವನ್ನೆಲ್ಲ ನೋಡಿ, ಆ ಶಿಲ್ಪಕಲೆಯನ್ನು ನೋಡದೇ ನಾನು ಹಿಂದಿರುಗಿ ಬಂದೆ ಎಂದರೆ ನನಗೆ ಹೇಗಾಗಿರಬೇಡ!?