ಪ್ರಸ್ತುತ
ಶಿವಪ್ರಸಾದ್ ಎ.
aadarsha1283@gmail.com
ನಮ್ಮ ಸಂವಿಧಾನವನ್ನು ರೂಪಿಸಿದವರು ಅನೇಕತೆಯಲ್ಲಿ ಏಕತೆಯೆಂಬ ಉದಾತ್ತ ಧ್ಯೇಯವಾಕ್ಯ ಮತ್ತು ಮನೋಭಾವವನ್ನು ನಮ್ಮೆಲ್ಲರಲ್ಲಿ
ಚಿಗುರಿಸುವ ಪ್ರಯತ್ನ ಮಾಡಿದರು. ಅದನ್ನು ನಿರೀಕ್ಷಿಸದೆ ನಾವು, ಇಂದು ಬೇರೆ ಭಾಗದ ಜನರನ್ನು ನಮ್ಮ ಊರಿಗೆ/ರಾಜ್ಯಕ್ಕೆ ವಲಸೆ ಬಂದರೆಂಬ
ಕಾರಣದಿಂದ ಪೀಡಿಸಿದರೆ, ನಮ್ಮ ಮುಂದಿನ ಪೀಳಿಗೆಯವರು ನಮ್ಮನ್ನು ಎಂದಿಗೂ ದೂಷಿಸುವ ಸಂದರ್ಭ ಒದಗಬಹುದು.
ಗಣತಂತ್ರ ದಿನ ಮತ್ತೆ ಬಂದಿದೆ. ಭಾರತ ದೇಶವು ಗಣತಂತ್ರವಾಗಿ ಸರಿಯಾಗಿ ಎಪ್ಪತ್ತೆರಡು ವಸಂತಗಳು ಕಳೆದಿವೆ. ಇದನ್ನು ಕಲ್ಪಿಸಿ ರೂಪಿಸಿದ ವರು ಇದರ ಅನೇಕತೆಯಲ್ಲಿ ಏಕತೆಯ ಅಂಶದ ಬಗ್ಗೆ ನಮ್ಮ ಸಂವಿಧಾನದಲ್ಲಿ ಬರೆದಿದ್ದರು. ಈಗ ಇದೇ ಅಂಶವು ತನ್ನ ಪ್ರಸ್ತುತತೆಯನ್ನು ಉಳಿಸಿ ಕೊಂಡಿದೆ ಹಾಗೆಯೇ ಇದು ಮತ್ತಷ್ಟು ಸ್ಪಷ್ಟವಾಗಿ ನಮ್ಮ ಅನುಭವಕ್ಕೆ ಬರುತ್ತಿದೆ.
ಭಾರತ ದೇಶದ ಬೇರೆ ಬೇರೆ ಭಾಷೆಗಳ, ಧರ್ಮಗಳ, ಪ್ರಾಂತ್ಯಗಳ, ಜಾತಿಗಳ ಮತ್ತು ರಾಜ್ಯಗಳ ಜನರು ಹಲವಾರು ಕಡೆ ತಮ್ಮ ತಮ್ಮ ಜೀವನೋ ಪಾಯಗಳನ್ನು ಹುಡುಕಿಕೊಂಡು ವಲಸೆ ಹೋಗಿ ಹೊಸ ಸ್ಥಳಗಳಲ್ಲಿ ಬಾಳಿ ಬದುಕುತ್ತಿದ್ದಾರೆ. ಮೊದಲನೆಯ ಗಣತಂತ್ರದ ದಿನದಂದು ನಾವು ಬಂಗಾಲ, ಒಡಿಯಾ ಮೂಲದ ಜನರನ್ನು ಬೆಂಗಳೂರು ನಗರದಲ್ಲಿ ನೋಡುವಂಥ ಸಾಧ್ಯತೆ ಅತ್ಯಂತ ವಿರಳವಾಗಿತ್ತು. ಅದೇ ರೀತಿ, ಕರ್ನಾಟಕ ಮೂಲದ ಜನ ಹೈದರಾಬಾದ್, ಚೆನ್ನೈ ಅಥವಾ ದೆಹಲಿ ಮುಂತಾದ ನಗರಗಳಲ್ಲಿ ಎಲ್ಲೋ ಅಲ್ಲೊಬ್ಬರು, ಇಲ್ಲೊಬ್ಬರು ಕಾಣಸಿಗುತ್ತಿದ್ದರು.
ಈಗ ಉದ್ಯೋಗಾವಕಾಶಗಳ ದೆಸೆಯಿಂದ ನಾವು ಬೇರೆ ಬೇರೆ ರಾಜ್ಯಗಳ ಜನರನ್ನು ದೇಶದ ಪ್ರತಿಯೊಂದು ಭಾಗದಲ್ಲೂ ನೋಡುತ್ತಿದ್ದೇವೆ. ಅವರು ತಮ್ಮ ರಾಜ್ಯದ ಮತ್ತು ಸಂಸ್ಕೃತಿಯ ಒಂದು ಸಣ್ಣ ಭಾಗವನ್ನು ತಮ್ಮೊಂದಿಗೆ ಹೊತ್ತು ತಂದು ತಮ್ಮ ಹೊಸ ನೆಲೆಗಳಲ್ಲಿ ಸ್ಥಾಪಿಸಿಕೊಳ್ಳುತ್ತಾರೆ. ಹೀಗಾಗಿ, ದೋಸೆಗಳು ಉತ್ತರಭಾರತದಲ್ಲೂ ಮತ್ತು ಪರಾಠಾಗಳು ದಕ್ಷಿಣಭಾರತದಲ್ಲೂ ಈಗ ಎಲ್ಲೆಡೆ ಸಿಗುತ್ತವೆ. ಅಷ್ಟೇ ಏಕೆ, ಉತ್ತರಪೂರ್ವ ರಾಜ್ಯಗಳ ಜನರು ಹೆಚ್ಚಾಗಿ ತಿನ್ನುವ ಮೊಮೊಗಳ ಕಂಪು ಈಗ ದೇಶದ ಎಲ್ಲ ದೊಡ್ಡ ನಗರಗಳಲ್ಲೂ ಪಸರಿಸಿದೆ.
ದೇಶದ ಒಂದು ರಾಜ್ಯಕ್ಕೆ/ ಪ್ರಾಂತ್ಯಕ್ಕೆ ಸೀಮಿತವಾಗಿದ್ದ ಆಹಾರ, ಕಲೆ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳು ಈಗ ಬೇರೆ ಬೇರೆ ರಾಜ್ಯಗಳ ಜನರಿಗೆ
ಪರಿಚಯಕ್ಕೆ ಬರುತ್ತಿವೆ. ಸಾಂಸ್ಕೃತಿಕವಾಗಿ, ಬೌದ್ಧಿಕವಾಗಿ ದೇಶದ ಪ್ರತಿಯೊಬ್ಬ ನಾಗರಿಕನನ್ನು ಶ್ರೀಮಂತನನ್ನಾಗಿ ಸುತ್ತಿವೆ. ಆದರೆ ಈ ಶ್ರೀಮಂತಿಕೆ ಯನ್ನು ಸ್ವೀಕರಿಸದೆ, ಈ ಹಿಂದೆ ಇದ್ದ ಹೃದಯ ವೈಶಾಲ್ಯದ ಕೊರತೆಯ ಬಡತನವನ್ನೇ ಬಯಸುವ ಕೆಲವು ದುಷ್ಟ ಶಕ್ತಿಗಳು ಅನೇಕತೆಯಲ್ಲಿ ಏಕತೆ ಯೆಂಬ ಭಾರತದ ಶಕ್ತಿಯನ್ನು ಈ ದೇಶದ ದೌರ್ಬಲ್ಯವನ್ನಾಗಿಸಹೊರಟಿವೆ.
ಇದಕ್ಕೆ ಕೆಲವು ಉದಾಹರಣೆಗಳೆಂದರೆ ಬಿಹಾರ/ಉತ್ತರಪ್ರದೇಶ ಮೂಲದ ಕೂಲಿಕಾರ್ಮಿಕರನ್ನು ಅಸ್ಸಾಂ, ಮಹಾರಾಷ್ಟ್ರ ರಾಜ್ಯಗಳಲ್ಲಿ ಗುರಿಯಾಗಿಸಿ ಕೆಲವೊಮ್ಮೆ ನಡೆಸಲಾದ ದಾಳಿಗಳು. ಉಲಾ, ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್, ಮಹಾರಾಷ್ಟ್ರ ನವನಿರ್ಮಾಣ ವೇದಿಕೆ, ಶಿವಸೇನೆ ಇವೇ ಮುಂತಾದ ಪಕ್ಷಗಳು/ಸಂಘಸಂಸ್ಥೆಗಳು ಇಂತಹ ಕೃತ್ಯಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಮಾಡುವುದು ವಾಡಿಕೆಯಾಗಿದೆ. ಹೀಗೆಯೇ ನಮ್ಮ ನೆರೆಯ ತಮಿಳುನಾಡಿನ ರಾಜಕೀಯ ಪಕ್ಷಗಳು ಕಾವೇರಿ ನದಿನೀರಿನ ನೆಪವೊಡ್ಡಿ ಆಗೊಮ್ಮೆ ಈಗೊಮ್ಮೆ ಕನ್ನಡ ಜನರ ಮತ್ತು ಕನ್ನಡ ಸಂಸ್ಕೃತಿಯ ವಿರುದ್ಧ ದಾಳಿ ಮಾಡುತ್ತ ತಮ್ಮ ರಾಜಕೀಯ ಅನುಕೂಲದ ಬೇಳೆ ಬೇಯಿಸಿಕೊಳ್ಳುತ್ತವೆ.
ಇಂಥ ಕೃತ್ಯಗಳಿಂದ ಅನೇಕತೆಯಲ್ಲಿ ಏಕತೆಯೆಂಬ ಒಂದು ಉದಾತ್ತ ಕಲ್ಪನೆಗೆ ಮಸಿ ಬಳಿಯಲಾಗುತ್ತಿದೆ. ನಮ್ಮ ರಾಷ್ಟ್ರದಲ್ಲಿ ಇತ್ತೀಚೆಗೆ ಹಲವು ಪಕ್ಷಗಳ/ಸಂಸ್ಥೆಗಳ ಈ ಪರಿಪಾಠ ಏರ್ಪಟ್ಟಿರುವುದು ಶೋಚನೀಯ. ಅಮೆರಿಕದ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಸಂದರ್ಭದಲ್ಲಿ ಬರಾಕ್
ಒಬಾಮಾ ಹೇಳಿರುವ ಮಾತುಗಳಿಂದ ಇವರೆಲ್ಲರೂ ಪಾಠ ಕಲಿಯಬೇಕು. ಅವರು ತಮ್ಮ ರಾಷ್ಟ್ರವು ಜ್ಯೂಗಳ, ಕ್ರೈಸ್ತರ, ಹಿಂದೂಗಳ, ಮುಸಲ್ಮಾನರ ಮತ್ತು ನಾಸ್ತಿಕರ ದೇಶವೆಂದು ಘೊಷಿಸಿದ್ದರು. ಇದರರ್ಥ ಪ್ರತಿಯೊಂದು ಧರ್ಮದ, ಭಾಷೆಯ, ಪ್ರಾಂತ್ಯದ ನಾಗರಿಕನಿಗೆ ರಾಷ್ಟ್ರದಲ್ಲಿ ವಾಸಿಸಲು/
ಬದುಕಲು ಸಮಾನ ಹಕ್ಕಿದೆಯೆಂದು.
ಆದರೆ ಭಾರತದ ರಾಜ್ಯಗಳ ಮತ್ತು ಭಾಷೆಗಳ ಜನರ ನಡುವೆ ಕೆಲವೊಮ್ಮೆ ಏರ್ಪಟ್ಟ ಇಂಥ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಹಲವು ರಾಷ್ಟ್ರಗಳಲ್ಲಿ ಬೇರೆಯೇ ರೀತಿಯಲ್ಲಿ ಪ್ರತಿಧ್ವನಿಸುತ್ತಿರುವುದು ವಿಷಾದನೀಯ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಬೇರೆ ದೇಶಗಳಿಂದ ವಲಸೆ ಬಂದು ಆ ದೇಶಗಳಲ್ಲಿ ಪ್ರಾಮಾಣಿಕ ದುಡಿಮೆ ಮಾಡುತ್ತ ಜೀವನ ಸಾಗಿಸುತ್ತಿರುವ ವಲಸಿಗರೆಡೆಗೆ ಇಂತಹುದೇ ಭಾವನೆ ವ್ಯಕ್ತವಾಗುತ್ತಿರುವುದು ದುಃಖದ ವಿಷಯ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಕೆಲವು ವರ್ಷಗಳಿಂದ ವಲಸಿಗರೆಡೆಗಿನ ಇಂಥ ಪರಕೀಯ ಭಾವನೆ ಮುನ್ನೆಲೆಗೆ ಬಂದಿದೆ. ಆ ದೇಶಗಳಲ್ಲಿ ವಾಸಿಸಲು ಮತ್ತು ಸುರಕ್ಷಿತವಾಗಿರಲು ಸಾಧ್ಯವಾಗುವುದಿಲ್ಲವೆಂಬ ಅಳುಕನ್ನು ವಲಸಿಗರ ಮನಗಳಲ್ಲಿ ಮೂಡಿಸುತ್ತಿದೆ.
ಇದು ಈಗ ಬಹುಪಾಲು ವಿಶ್ವವ್ಯಾಪಿಯಾದ ಸಂಗತಿ. ಜನವರಿ ೨೧ರ ರಾತ್ರಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಮಾಂಟೆರ್ರೆ ಪಾರ್ಕ್ ಎಂಬ ಸ್ಥಳದಲ್ಲಿ ಚೀನೀ ಹೊಸವರ್ಷಾಚರಣೆಯ ಸಂದರ್ಭದಲ್ಲಿ ಬಂದೂಕುಧಾರಿಯೊಬ್ಬನು ಮನಬಂದಂತೆ ಗುಂಡು ಹಾರಿಸಿ, ಹಲವು ಜೀವಗಳನ್ನು ಬಲಿಪಡೆದು, ಹಲವಾರು ಜನರಿಗೆ ಗಾಯಗಳಾಗುವಂತೆ ದಾಳಿಮಾಡಿರುವುದು ಇಂಥ ಸಂಕುಚಿತ ಮನೋಭಾವದ ಲಕ್ಷಣವೇ ಸರಿ. ಇಂಥ ದಾಳಿಗಳು ಪ್ರತಿ ವರ್ಷ ಅಮೆರಿಕದ ಹಲವು ಕಡೆ ನಡೆಯುತ್ತಿರುತ್ತವೆ. ಐರೋಪ್ಯ ರಾಷ್ಟ್ರಗಳಲ್ಲಿ ಮತ್ತು ಆಸ್ಟ್ರೇಲಿಯಾ, ನ್ಯೂಜಿಲೆಂಡ್ಗಳಲ್ಲೂ ಇಂಥ ದಾಳಿಗಳು ಈ
ಹಿಂದೆ ನಡೆದದ್ದನ್ನು ನಾವು ನೆನೆಯಬಹುದು.
ಇಂಥ ಪರಿಸ್ಥಿತಿ ಏರ್ಪಟ್ಟ ಪ್ರತಿಯೊಂದು ರಾಷ್ಟ್ರದಲ್ಲೂ ಅಲ್ಲಿನ ರಾಜಕೀಯ ನಾಯಕರು ಮತ್ತು ಸಮಾಜದ ಗಣ್ಯರು ಈ ಸಂಕುಚಿತ ಭಾವನೆಯನ್ನು ಮೆಟ್ಟಿನಿಲ್ಲಲು ಅನುವಾಗುವಂತೆ ಆ ದೇಶದ ಪ್ರಜೆಗಳ ಮನಃಪರಿವರ್ತನೆಯ ಕಡೆಗೆ ಮುತುವರ್ಜಿಯಿಂದ ಪ್ರಯತ್ನಮಾಡಬೇಕು. ರಾಷ್ಟ್ರಕವಿ ಕುವೆಂಪುರವರ ವಿಶ್ವಮಾನವನ ಕಲ್ಪನೆಯನ್ನು ಮೂರ್ತಿರೂಪಗೊಳಿಸುವುದು ಪ್ರತಿಯೊಬ್ಬ ರಾಷ್ಟ್ರನಾಯಕನ ಆದ್ಯತೆಯಾಗಬೇಕು. ಮಾನವನ ಸೃಷ್ಟಿಯಾಗಿ ಈ ಭೂಮಿಯ ಮೇಲೆ ಅವನು ನಡೆದಾಡಲು ಪ್ರಾರಂಭಿಸಿದಾಗ, ಯಾವುದೇ ಧರ್ಮ, ಜಾತಿ, ದೇಶಗಳೆಂಬ ಸೀಮಿತ ಗುಂಪುಗಳಿಗೆ ಅವನು ಸೇರಿರಲಿಲ್ಲ. ಹೀಗೆ ಹಲವು ಲಕ್ಷ ವರ್ಷಗಳೇ ಕಳೆದುಹೋಗಿರುವಾಗ, ನಾಗರಿಕತೆಯ ಕಲ್ಪನೆ ಮತ್ತು ಅನುಷ್ಠಾನವಾದಾಗಿನಿಂದ, ಎಂದರೆ ಸುಮಾರು ಎಂಟರಿಂದ ಹತ್ತು ಸಾವಿರ ವರ್ಷಗಳಿಂದೀಚೆಗೆ ಮಾತ್ರ ಧರ್ಮ, ಭಾಷೆ, ರಾಷ್ಟ್ರಗಳ ಗಡಿಗಳನ್ನು ತನ್ನ ಅನುಕೂಲಕ್ಕಾಗಿ ಏರ್ಪಡಿಸಿ ಕೊಂಡಿದ್ದಾನೆ.
ಆದರೆ, ಈ ಗಡಿಗಳು ಮಾನವನ ಬದುಕಿಗೆ ಪೂರಕವಾಗಿರದೆ, ಮಾರಕವಾಗುತ್ತವೆಯೆಂಬ ಕಲ್ಪನೆಯಿದ್ದಿದ್ದರೆ, ಇಂಥ ಗಡಿಗಳನ್ನು ರೂಪಿಸಿದವರು ಇದನ್ನು ಅನುಷ್ಠಾನ ಗೊಳಿಸುತ್ತಿರಲಿಲ್ಲವೇನೋ ಎಂಬ ಒಂದು ಆಲೋಚನೆ ಮನಸ್ಸಿನಲ್ಲಿ ಬರದಿರಲಾರದು. ಇಂಥ ಸಂಕುಚಿತ ಮನೋಭಾವನೆ ಯನ್ನು ರೂಢಿಸಿಕೊಂಡಿರುವ ಮಾನವನು, ಪ್ರಾಣಿಪಕ್ಷಿಗಳಿಗಿಂತ ತನ್ನನ್ನು ತಾನು ಉತ್ಕೃಷ್ಟನೆಂದು ಹೇಗೆ ತಾನೆ ಪರಿಗಣಿಸಕೊಳ್ಳಬಲ್ಲನೆಂಬುದನ್ನು ನಾವೆಲ್ಲರೂ ಆಲೋಚಿಸಬೇಕು.
ಇದನ್ನು ಮನಗಂಡು, ನಮ್ಮ ಸಂವಿಧಾನವನ್ನು ರೂಪಿಸಿದವರು ಅನೇಕತೆಯಲ್ಲಿ ಏಕತೆಯೆಂಬ ಒಂದು ಉದಾತ್ತ ಧ್ಯೇಯವಾಕ್ಯ ಮತ್ತು ಮನೋಭಾವವನ್ನು ನಮ್ಮೆಲ್ಲರಲ್ಲಿ ಚಿಗುರಿಸುವ ಪ್ರಯತ್ನ ಮಾಡಿದರು. ಇದನ್ನು ನಾವೆಲ್ಲರೂ ಯಾವಾಗಲೂ ಮನಸ್ಸಿನಲ್ಲಿಟ್ಟುಕೊಂಡು ಸಹಬಾಳ್ವೆ ನಡೆಸಬೇಕು, ಏಕೆಂದರೆ ಇಂದು ನಮಗೇ ಅರಿವಿಲ್ಲದೆ ನಮ್ಮ ಮುಂದಿನ ಪೀಳಿಗೆಗೆ ದೇಶದ ಯಾವುದೋ ಒಂದು ಹೊಸ ಭಾಗದಲ್ಲಿ ಜೀವನೋಪಾ
ಯಕ್ಕೆ/ಉದ್ಯೋಗಕ್ಕೆ ಅವಕಾಶ ದೊರೆಯಬಹುದು.
ಅದನ್ನು ನಿರೀಕ್ಷಿಸದೆ ನಾವು, ಇಂದು ಬೇರೆ ಭಾಗದ ಜನರನ್ನು ನಮ್ಮ ಊರಿಗೆ/ರಾಜ್ಯಕ್ಕೆ ವಲಸೆ ಬಂದರೆಂಬ ಕಾರಣದಿಂದ ಪೀಡಿಸಿದರೆ, ನಮ್ಮ ಮುಂದಿನ ಪೀಳಿಗೆಯವರು ನಮ್ಮನ್ನು ಎಂದಿಗೂ ದೂಷಿಸುವ ಸಂದರ್ಭ ಒದಗಬಹುದು. ಅವರು ನಮ್ಮನ್ನು ಎಂದಿಗೂ ಕ್ಷಮಿಸದಿರಬಹುದೆಂಬುದನ್ನು ನಾವು ಅರಿತುಕೊಂಡರೆ ನಮಗೇ ಕ್ಷೇಮ. ‘ವಸುಧೈವ ಕುಟುಂಬಕಂ’, ನಮ್ಮ ಭಾರತೀಯ ಸಂಸ್ಕೃತಿಯ ಮೂಲಮಂತ್ರ. ಈ ಗಣರಾಜ್ಯೋತ್ಸವದ
ಸಂದರ್ಭದಲ್ಲಿ ಇದನ್ನು ನಮ್ಮೆಲ್ಲರ ಧ್ಯೇಯವಾಕ್ಯವನ್ನಾಗಿಸಿ ಕೊಳ್ಳೋಣವೇ?