Thursday, 25th July 2024

ಆಸೆಗಳು ನೂರಾರು, ಜೀವನಕೆ ಅದುವೇ ಉಸಿರು !

ಯಶೋ ಬೆಳಗು

yashomathy@gmail.com

ನಾವೇನು ಬಯಸಿದರೂ ಬದುಕಿನ ಜೋಳಿಗೆಯಲ್ಲಿ ಅದೇನಿರತ್ತೋ ಅದೇ ನಮಗೆ ದೊರೆಯುವುದು ಅನ್ನುವ ವೇದಾಂತದ ಮಾತು ಸಮಾ ಧಾನ ನೀಡುತ್ತದೆ. ಒಂದಷ್ಟು ಜನರನ್ನು ಭೇಟಿಯಾಗಬೇಕು, ಓದಬೇಕು, ಬರೆಯಬೇಕು, ಒಂದಷ್ಟು ಸ್ಥಳಗಳನ್ನು ನೋಡಿ ಬರಬೇಕು ಅನ್ನುವ ದೊಡ್ಡ ಪಟ್ಟಿಯೇ ಸಿದ್ಧವಾಗಿದೆ. ಹೀಗಾಗಿ ನನ್ನ ಆಸಕ್ತಿಗಳನ್ನರಸಿ ಹೊರಟಿದ್ದೇನೆ.

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ… ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ…. ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ…. ಕೆ.ಎಸ್. ನರಸಿಂಹಸ್ವಾಮಿಯವರ ಈ ಭಾವಗೀತೆ ಕೇಳುತ್ತಿದ್ದೆ. ಅದೆಷ್ಟು ಸೊಗಸಾಗಿ ಬರೆಯು ತ್ತಾರೆ ಈ ಕವಿಗಳು. ಭಾವಕ್ಕೆ ತಕ್ಕಂತೆ ಲಯಬದ್ಧವಾಗಿ ಅಷ್ಟು ಚೆಂದದ ಪದಗಳನ್ನು ಅದೆಲ್ಲಿಂದ ಹೆಕ್ಕಿ ತರು ತ್ತಾರೋ? ಅಂದುಕೊಳ್ಳುವಾಗ, ‘ಅದು ನಮ್ಮ ನಿರಂತರ ಆಲೋಚನೆಗಳಲ್ಲಿರುತ್ತದೆ. ದೈನಂದಿನ ಬದುಕಿನಲ್ಲಿ ನಡೆಯುವ ಹಲವಾರು ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಮನಸಿದ್ದರೆ ಅದು ತಾನಾಗೇ ಮೂಡುತ್ತದೆ’ ಎಂದು ಹೇಳಿದ ಎಚ್.ಎಸ್. ವೆಂಕಟೇಶಮೂರ್ತಿಯವರ ಮಾತು ನೆನಪಾಯಿತು.

ನಿಜ, ಈ ಕವಿಮನಸಿನವರೆಲ್ಲ ಬಹಳ ಸೂಕ್ಷ್ಮ ಸಂವೇದನೆಯುಳ್ಳ ಭಾವಜೀವಿಗಳು. ಸಣ್ಣದಕ್ಕೂ ಖುಷಿ ಪಡುವ, ನೊಂದುಕೊಳ್ಳುವ, ಮಿಡಿಯುವ ಹೃದಯದವರು. ಅವರು ಈ ವ್ಯಾವಹಾರಿಕ ಲೋಕದಿಂದ ಬಹುದೂರ. ಬಹುಶಃ ಅದಕ್ಕೇ ನನಗೆ ಕವಿತೆ ಒಲಿಯಲಿಲ್ಲವೆನಿಸುತ್ತದೆ. ಆದರೆ ಸದಾ ಕವಿತೆಯನ್ನು ಆಸ್ವಾದಿಸುತ್ತೇನೆ. ಕಥೆ-ಕಾದಂಬರಿ ಗಳಂತೆ ಪುಟಗಟ್ಟಲೆ ಬರೆಯುವ ಗೋಜಿಲ್ಲದೆ ನಾಲ್ಕೇ ಸಾಲುಗಳಲ್ಲಿ ತನ್ನ ಮನದ ಭಾವನೆಗಳನ್ನು ಬಿಂಬಿಸುವ ಮಾಯಾ ಕನ್ನಡಿಯಂಥ ಕವಿತೆಗಳು ಮನಸಿಗೆ ಮುದ ನೀಡುತ್ತವೆ.

‘ಈ ಬಾರಿ ಪುಸ್ತಕದಂಗಡಿಗೆ ಹೋದಾಗ ಒಂದಷ್ಟು ಚೆಂದದ ಕವಿತೆಗಳಿರುವ ಪುಸ್ತಕಗಳನ್ನು ತಂದಿಟ್ಟುಕೊಳ್ಳಬೇಕು, ಆಗಾಗ ಮೆಲುಕು ಹಾಕುವುದಕ್ಕೆ’ ಅಂದುಕೊಳ್ಳುತ್ತ ಮಗನ ಪರೀಕ್ಷೆಯ ತಯಾರಿ ಹೇಗೆ ನಡೆದಿದೆ ಎನ್ನುವುದರ ಕಡೆಗೆ ಕೊಂಚ ಗಮನ ಹರಿಸಿದೆ. ಆಗತಾನೇ ಕಾಲಲ್ಲಿ ನಿಲ್ಲುವ ಶಕ್ತಿ ಮೂಡು ತ್ತಿದ್ದಂತೆಯೇ ಅದೆಷ್ಟು ತುಂಟತನ ಮಾಡುತ್ತಾರೆ ಈ ಮಕ್ಕಳು ಗಮನಿಸಿದ್ದೀರಾ? ಸಿಕ್ಕಿದ್ದನ್ನೆಲ್ಲ ಬಾಯಿಗೆ ಹಾಕಿಕೊಂಡು ರುಚಿ ನೋಡುವುದು, ಮನೆಯ ಇಲೆಕ್ಟ್ರಿಕಲ್ ಪ್ಲಗ್ ಪಾಯಿಂಟುಗಳಿಗೆ ಪೆನ್ಸಿಲ್ಲು ಪೆನ್ನುಗಳನ್ನಿಟ್ಟು ಶಾಕ್ ಹೊಡೆಸಿಕೊಳ್ಳುವುದು, ಗಾಜಿನ ಗೋಲಿಗಳನ್ನು ಗುಳುಂ ಮಾಡಿಬಿಡುವುದು, ನಾಣ್ಯವನ್ನು ನುಂಗಿಬಿಡುವುದು, ಮಣ್ಣು ತಿನ್ನು ವುದು… ಒಂದಾ-ಎರಡಾ? ಅವರನ್ನು ಕಾಯುವುದೇ ದೊಡ್ಡ ಕೆಲಸ.

ಒಮ್ಮೆ ನಾನು ಅಡುಗೆ ಕೆಲಸದಲ್ಲಿ ತೊಡಗಿದ್ದಾಗ ಅ ಕಾಲ ಬಳಿ ಆಡುತ್ತ ಕುಳಿತಿದ್ದ ಹಿಮ, ಅಕ್ಕಿಡಬ್ಬದಲ್ಲಿ ಹುಳು ಬರದಿರಲಿ ಎಂದು ಹಾಕಿಟ್ಟಿದ್ದ
ಗುಳಿಗೆಯನ್ನು ‘ಹಾಜ್ಮೋಲಾ’ ಎಂದುಕೊಂಡು ತೆಗೆದುಕೊಂಡು ತಿನ್ನಲಾರಂಭಿಸಿಬಿಟ್ಟಿದ್ದ. ಕೂಡಲೇ ನೋಡಿ ಬಾಯಿ ಶುದ್ಧ ಮಾಡಿದ್ದಾಯಿತು. ಮತ್ತೊಮ್ಮೆ ಪೆನ್ಸಿಲನ್ನು ಪ್ಲಗ್ ಪಾಯಿಂಟಿನೊಳಗಿಟ್ಟು ಸರಿಯಾಗೇ ಶಾಕ್ ಹೊಡೆಸಿಕೊಂಡಿದ್ದ. ಇದನ್ನೆಲ್ಲ ಕಂಡು ಮತ್ತೇನು ಯಡವಟ್ಟು ಮಾಡಿ ಕೊಳ್ಳುತ್ತಾನೋ ಎಂದು ಹೆದರಿ ನಾನು ಸದಾ ಅವನ ಹಿಂದೆ ಹಿಂದೆಯೇ ಸುತ್ತುವುದು ನಿತ್ಯಕಾಯಕವಾಗಿಹೋಯ್ತು.

ಅವನೇನು ಮಾಡಲು ಹೋದರೂ ‘ನೋ…. ಹಿಮಾ ನೋ…..’ ಅಂತ ಗದರಿಸುವುದು ಅಭ್ಯಾಸವಾಗಿಹೋಯ್ತು. ಆಫೀಸು ಮುಗಿಸಿ ಸಂಜೆ ಮನೆಗೆ ಬರುತ್ತಿದ್ದ ರವಿ ದಿನಾ ಇದನ್ನು ಗಮನಿಸುತ್ತಿದ್ದವರು, ‘ಅ, ನೀನು ಪ್ರತಿ ಮಾತಿಗೂ ಹೀಗೆ ಅವನಿಗೆ ನೋ ನೋ… ಅನ್ನುತ್ತಿದ್ದರೆ ಅವನು ಅದೇ ತನ್ನ
ಹೆಸರೇನೋ ಅಂದುಕೊಂಡುಬಿಡುತ್ತಾನೆ’ ಎಂದು ಎಂದಿನಂತೆ ತಮ್ಮ ಹಾಸ್ಯದ ಶೈಲಿಯಲ್ಲಿ ನಗೆಚಟಾಕಿ ಹಾರಿಸಿದ್ದರು. ಈಗ ಹರೆಯಕ್ಕೆ ಕಾಲಿಡುತ್ತಿರುವ ಹುಡುಗ, ದಿನಾ ಕನ್ನಡಿ ಮುಂದೆ ನಿಂತು ತನ್ನ ಬೈಸೆಪ್ಸ್ ಚೆಕ್ ಮಾಡಿಕೊಳ್ಳುತ್ತಿರುತ್ತಾನೆ.

‘ಅಮ್ಮಾ ಜಿಮ್ಮಿಗೆ ಹೋಗ್ತೀನಿ. ನೋಡು ಇವರೆ ನನ್ನ ವಯಸ್ಸಿನವರೇ ಹೇಗೆ ಬಾಡಿ ಬಿಲ್ಡ ಮಾಡಿದ್ದಾರೆ’ ಅನ್ನುತ್ತಾ ಒಂದಷ್ಟು ಫೋಟೋ ತೋರಿಸುತ್ತಾನೆ. ‘ಅದಕ್ಕೂ ಸಮಯ ಬರುತ್ತದೆ, ಸ್ವಲ್ಪ ತಾಳ್ಮೆ ಇಟ್ಟುಕೋ ಮಗನೇ. ಈಗಿನ್ನೂ ನಿನ್ನ ದೇಹದ ಮೂಳೆಗಳು ಮೃದುವಾಗಿರುತ್ತವೆ. ಅದಕ್ಕೆ ಹೆಚ್ಚಿನ ಒತ್ತಡ ಹಾಕಿದರೆ ಅದರಿಂದ ತೊಂದರೆ ಸಂಭವಿಸುವ ಸಾಧ್ಯತೆ ಇರುತ್ತದೆ. ಅದರ ಬದಲು ಸ್ವಿಮ್ಮಿಂಗ್ ಮಾಡು, ಸೈಕ್ಲಿಂಗ್ ಮಾಡು, ವಾಕಿಂಗ್ ಮಾಡು, ಪಾರ್ಕಿ ನಲ್ಲಿರುವ ಸಲಕರಣೆಗಳನ್ನು ಉಪಯೋಗಿಸಿಕೊಂಡು ಕೊಂಚ ವ್ಯಾಯಾಮ ರೂಢಿಸಿಕೋ.  ಸದಾ ಮನೆಯ ಇರುವುದು ಅಭ್ಯಾಸ ಮಾಡಿ ಕೊಳ್ಳಬೇಡ. ಮಕ್ಕಳು ಲವಲವಿಕೆಯಿಂದ ಓಡಾಡಿಕೊಂಡಿದ್ದರೇನೇ ನೋಡಲು ಚೆಂದ’ ಎಂದೆ.

‘ಆಯ್ತಮ್ಮಾ’ ಎಂದು ಭಾನುವಾರದ ಮುಂಜಾನೆ ಒಂದಷ್ಟು ಗೆಳೆಯರನ್ನು ಜತೆ ಮಾಡಿಕೊಂಡು ಮನೆಯ ಸುತ್ತಮುತ್ತಲಿನ ರಸ್ತೆಗಳನ್ನೆಲ್ಲ ಸುತ್ತಾಡಿ ಬಂದ. ಯಾವ ರಸ್ತೆಯಲ್ಲಿ ಹೋದರೆ ಯಾವ ರಸ್ತೆಗೆ ಕನೆಕ್ಟ್ ಆಗುತ್ತೆ ಅಂತ ಈಗ ನನಗಿಂತ ಹೆಚ್ಚಾಗಿ ಅವನಿಗೇ ಗೊತ್ತು. ಒಮ್ಮೆ ಹೀಗೇ ಹೇರ್‌ಕಟ್‌ಗೆಂದು
ಹೋದವನು ಅಲ್ಲಿ ಸಲೂನ್ ಬಂದಾಗಿತ್ತೆಂದು ಸ್ವಲ್ಪ ದೂರದಲ್ಲಿರುವ ಮತ್ತೊಂದು ಸಲೂನಿಗೆ ಹೋಗಲು ಗಾಡಿ ತೆಗೆದುಕೊಂಡು ಹೋಗಿಬಿಟ್ಟಿzನೆ. ಸರಿಯಾಗಿ ಅದೇ ಕಾರ್ನರಿನಲ್ಲಿ ನಿಂತಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮೊದಲನೆಯದಾಗಿ ಹೆಲ್ಮೆಟ್ ಹಾಕಿಲ್ಲ. ಎರಡನೆಯದಾಗಿ ಲೈಸನ್ಸ್ ಇಲ್ಲ. ಮೂರನೆಯದಾಗಿ ಮೈನರ್. ‘ಯಾರಪ್ಪಾ ನಿಂಗೆ ಗಾಡಿ ಕೊಟ್ಟಿದ್ದು? ನಡೀ ಸ್ಟೇಷನ್ನಿಗೆ…’ ಎಂದು ಹೇಳಿ, ‘ಗಾಡಿ ಸೀಝ್ ಮಾಡ್ರೀ… ಕೋರ್ಟಲ್ಲಿ ಬಂದು ಗಾಡಿ ತಗೋಳ್ಳೋಕೆ ಹೇಳು….’ ಎಂದ ಕೂಡಲೇ ಹೆದರಿದ್ದಾನೆ. ಪುಣ್ಯಕ್ಕೆ ಅವನ ಬಳಿ ಮೊಬೈಲಿತ್ತು. ಕೂಡಲೇ -ನ್ ಮಾಡಿ ‘ಅಮ್ಮಾ, ಹೀಗೆಲ್ಲ ಆಯ್ತು’ ಎಂದ.

‘ಅ ಕಣೋ, ಗಾಡಿ ಯಾಕೆ ತೆಗೆದುಕೊಂಡು ಹೋಗೋಕೆ ಹೋದೆ? ಅದೂ ಮೇನ್ ರೋಡಿನಲ್ಲಿ? ಹೆಲ್ಮೆಟ್ ಹಾಕದಿರೋದು ತಪ್ಪಲ್ವಾ? ಏನಾದರೂ ಹೆಚ್ಚೂಕಡಿಮೆಯಾಗಿದ್ದರೆ ಯಾರು ಹೊಣೆ? ಸೈಕಲ್‌ನಲ್ಲಿ ತಾನೇ ಹೋಗಬೇಕು ನೀನು?’ ಎಂದಾಗ, ‘ಹೌದಮ್ಮಾ, ಸೈಕ ತಗೊಂಡು ಹೊರಟಿದ್ದೆ. ಬರುವಾಗ ಪಂಕ್ಚರ್ ಆಯ್ತು. ಇನ್ನು ಹೇರ್ ಕಟ್ ಮಾಡಿಸದೆ ಹಾಗೇ ಬಂದರೆ ನೀನು ಬೈತೀಯಾ ಅಂತ ನಿನಗೆ ಹೇಳದೇ ಗಾಡಿ ತೆಗೆದುಕೊಂಡು ಹೋದೆ. ಸಾರಿ ಇನ್ನೊಂದ್ಸಲ ಹಾಗೆ ಮಾಡೊಲ್ಲ. ಈಗ ಏನ್ಮಾಡೋದು?’ ಎಂದ.

‘ಹೆದರಬೇಡ. ಅ ಇರು. ನಾನು ಬರ್ತೀನಿ. ಅದೇನಿದ್ಯೋ ನೋಡೋಣ’ ಅಂತ ಹೇಳಿ ನನ್ನ ಪರಿಚಯದೊಂದಿಬ್ಬರಿಗೆ ಫೋನ್ ಮಾಡಿ ಹೀಗ್ಹೀಗೆ ಆಗಿದೆ ಅಂತ ತಿಳಿಸಿದೆ. ‘ಹೆದರಬೇಡಿ. ನಾವೂ ಅಲ್ಲಿಗೆ ಬರುತ್ತೇವೆ. ಮಾತಾಡೋಣಂತೆ’ ಎಂದು ಧೈರ್ಯ ತುಂಬಿದರು. ಅಷ್ಟರಲ್ಲಿ ಸ್ವಾಮಿಗೌಡರಿಗೂ ಒಂದು
-ನ್ ಮಾಡಿ ‘ಏನಾದರೂ ಪರಿಹಾರ ಸಾಧ್ಯವಾ? ನೋಡಿ’ ಎಂದು ಕೇಳಿದೆ. ಕೂಡಲೇ ಅವರು ಆ ಇನ್ ಸ್ಪೆಕ್ಟರ್ ಬಳಿ ಮಾತನಾಡಿ, ‘ಅದೇನಿದ್ಯೋ ಪೆನಾಲ್ಟಿ ಹಾಕಿ ಇದೊಂದು ಬಾರಿ ಕ್ಷಮಿಸಿ’ ಎಂದು ಹೇಳಿದರು. ಅಷ್ಟರಲ್ಲಿ ನನ್ನ ತಂಗಿಯ ಗಂಡನೂ ಅಲ್ಲಿಗೆ ಬಂದು ಒಂದಷ್ಟು ಪೆನಾಲ್ಟಿ ಕಟ್ಟಿ ಮತ್ತೊಮ್ಮೆ ಸಾರಿ ಕೇಳಿಸಿ ಮನೆಗೆ ಕರೆದುಕೊಂಡು ಬಂದ.

ಇದು ಅವನಿಗೆ ಆದ ಮೊದಲ ಆಘಾತವಾದ್ದರಿಂದ ಸ್ವಲ್ಪ ಕಂಗಾಲಾಗಿದ್ದ. ಬಂದವನೇ ಆ ಅಪರಾಧಕ್ಕೆ ಏನೇನು ಶಿಕ್ಷೆಗಳಿವೆ ಎಂಬುದನ್ನು ಗೂಗಲ್‌ನಲ್ಲಿ ಹುಡುಕಾಡಿದ್ದಾನೆ. ಎಲ್ಲ ಪರಿಶೀಲಿಸಿದ ನಂತರ, ‘ಅಮ್ಮ, ಅದಕ್ಕೆ ಈ ರೀತಿಯ ಕಾನೂನುಗಳಿವೆ ನೋಡು’ ಎಂದು ನನಗೆ ತಿಳಿಸಿಕೊಟ್ಟ. ನಂತರ
ದೃಢ ವಾದ ದನಿಯಲ್ಲಿ- ‘ಅಮ್ಮಾ, I will study Law after my high school’’ ಅಂದ. ‘ಲಾ ಅಂದರೆ ಸುಮ್ಮನೇನಾ ಪುಟ್ಟಾ, ಪ್ರತಿಯೊಂದು ಸೆಕ್ಷನ್‌ ಗಳನ್ನೂ ನೆನಪಿಟ್ಟುಕೊಳ್ಳಬೇಕು. ವಾದ ಮಾಡುವಾಗ ಸರಿಯಾದ ಪಾಯಿಂಟು ಹಾಕುವ ಚಾಕಚಕ್ಯತೆ ಇರಬೇಕು’ ಎಂದು ಹೇಳಿದೆ. ‘ಕಲಿಯುತ್ತೇನೆ’ ಅಂದ. ‘ನೋಡು ಇನ್ನೊಮ್ಮೆ ವಿಚಾರ ಮಾಡು. ಈಗಂತೂ ಸಾ-ವೇರ್ ಜತೆಗೆ ಕಾಮರ್ಸ್ ಕೋರ್ಸ್ ಕೂಡ ಬೂಮ್‌ನಲ್ಲಿದೆ. ಎಂಬಿಎ ಮಾಡು.

ಫೈನಾನ್ಸ್ ಓದು, ಒಳ್ಳೆ ಬ್ಯುಸಿನೆಸ್ಮನ್ ಆಗು. ಇಲ್ಲ, ಸಾಫ್ಟ್ ವೇರ್ ಓದಿ ವಿದೇಶದಲ್ಲಿ ಹೋಗಿ ಆರಾಮಾಗಿ ಸೆಟಲ್ ಆಗುವೆಯಂತೆ. ಅದೂ ಬೇಡವೆಂದರೆ ಒಳ್ಳೆಯ ಆರ್ಕಿಟೆಕ್ಟ್ ಆಗು, ಚೆಂದ ಚೆಂದದ ಕಟ್ಟಡಗಳನ್ನು ರೂಪಿಸಬಹುದು. ಯಾಕೀ ಕಾಯಿದೆ-ಕಾನೂನಿನ ಸಹವಾಸ?’ ಅಂದೆ. ಎಲ್ಲ ಕೇಳಿಸಿಕೊಂಡು ಸುಮ್ಮನಿದ್ದ. ಒಂದಷ್ಟು ದಿನ ಅವನ ಮನಸು ಬದಲಾಯಿಸುವ ಎಲ್ಲ ಪ್ರಚೋದನೆಗಳನ್ನೂ ಒಡ್ಡಿದೆ. ಆದರೂ ಯಾಕೋ ಅವನ ಒಲವು ಅದರ ಕಡೆಗೇ ಇದೆ. ‘ಈಗಿನ್ನೂ ಹೈಸ್ಕೂಲು. ಅವನು ಎಸ್ಸೆಸ್ಸೆಲ್ಸಿ ಮುಗಿಸುವಷ್ಟರಲ್ಲಿ ಬೇರೇನೋ ಹೇಳ್ತಾನೆ. ಸುಮ್ಮನಿರು ನೀನು, ಅದಕ್ಕೆಲ್ಲ ಈಗಲೇ ತಲೆ ಕೆಡಿಸಿಕೊಳ್ಳ ಬೇಡ’ ಅನ್ನುವುದು ಹಿತೈಷಿಗಳ ಕಿವಿಮಾತು.

ಅದೂ ಸರಿಯೇ. ನಾವೇನು ಬಯಸಿದರೂ ಬದುಕಿನ ಜೋಳಿಗೆಯಲ್ಲಿ ಅದೇನಿರತ್ತೋ ಅದೇ ನಮಗೆ ದೊರೆಯುವುದು ಅನ್ನುವ ವೇದಾಂತದ ಮಾತು ಹೇಳಿಕೊಳ್ಳುತ್ತ ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಇದೆಲ್ಲದರ ನಡುವೆಯೇ ಒಂದಷ್ಟು ಜನರನ್ನು ಭೇಟಿಯಾಗಬೇಕು. ಓದಬೇಕು, ಬರೆಯಬೇಕು. ಒಂದಷ್ಟು ಸ್ಥಳಗಳನ್ನು ನೋಡಿ ಬರಬೇಕು ಅನ್ನುವ ದೊಡ್ಡ ಪಟ್ಟಿಯೇ ಸಿದ್ಧವಾಗಿದೆ. ಜತೆಗೆ ಕಟ್ಟಿರುವ ಎಕ್ಸಾಮಿಗೆ ಅಸೈನ್‌ಮೆಂಟ್ ಪ್ರಶ್ನೆಗಳು ಬಂದು ಬಿದ್ದಿವೆ. ಕಳಿಸಲು ಮಾರ್ಚ್ ೧೫ ಕೊನೆಯ ದಿನಾಂಕ. ಪಟ್ಟಾಗಿ ಕೂತು ಬರೆದರೆ ಅದು ಅರ್ಧ ದಿನದ ಕೆಲಸ. ಆದರೆ ಯಾಕೋ ಬೇಡವೆನ್ನಿಸಿತು. ನಾನು ಬರೆಯುವ ಉತ್ತರಕ್ಕೆ ಅವರು ಒಂದಷ್ಟು ಮಾರ್ಕ್ಸ್ ಕೊಟ್ಟು ಪಾಸಾದೆನೆಂದು ಕೊಡುವ ಸರ್ಟಿಫಿಕೆಟ್ ತೆಗೆದುಕೊಂಡು ಅರ್ಜೆಂಟಾಗಿ ಎಲ್ಲಿಯೂ ಕೆಲಸಕ್ಕೆ
ಅರ್ಜಿ ಹಾಕುವ ಅನಿವಾರ್ಯತೆಯಿಲ್ಲ.

ಕಸ್ತೂರಿ ಪತ್ರಿಕೆಯ ಸಂಪಾದಕರಾಗಿದ್ದ ಪಾ.ವೆಂ. ಆಚಾರ್ಯರು ಓದಿದ್ದು ಎಂಟನೇ ತರಗತಿ. ಆದರೆ ಎಂಥ ಪಂಡಿತರೂ ತಲೆದೂಗುವಂತಿರಲಿಲ್ಲವೇ ಅವರ ಬರಹಗಳು? Let me experience the life than writing exam ಅಂದು ಅಲ್ಲಿಗೊಂದು ಪೂರ್ಣವಿರಾಮ ಸೂಚಿಸಿ ನನ್ನ ಆಸಕ್ತಿಗಳನ್ನರಸಿ ಹೊರಟಿ ಆದ್ದೇನೆ. ಇರುವುದೊಂದೇ ಬದುಕು. ಅದನ್ನು ಸಂಪೂರ್ಣವಾಗಿ ಜೀವಿಸಿಬಿಡೋಣ. ಯಾವುದೇ ಕಂಪ್ಲೇಂಟುಗಳಿರದಂತೆ.

Read E-Paper click here

error: Content is protected !!