Sunday, 15th December 2024

ಹನಿಹನಿ ನೀರಿಗೂ ಹಾಹಾಕಾರ

ಕಳಕಳಿ

ಸಂದೀಪ್ ಶರ್ಮಾ ಮೂಟೇರಿ

ಬರದ ಕಾವಿನ ಜೊತೆಗೆ ಬೇಸಿಗೆಯ ಧಗೆಗೆ ಬೆಂಗಳೂರು ಈಗ ಕೆಂಡದಂತೆ ಬೇಯುತ್ತಿದೆ. ಹಲವು ಕೆರೆಗಳಿಂದ ಆವೃತವಾಗಿದ್ದ ಸಮೃದ್ಧ ಬೆಂಗಳೂರು ಇಂಥ ದಯನೀಯ ಸ್ಥಿತಿಗೆ ತಲುಪಿದ ಬಗೆಯನ್ನು ಅವಲೋಕಿಸಬೇಕಿದೆ. ಹಿಂದಿನ ನಾಲ್ಕು ದಶಕಗಳಲ್ಲಿ ಈ ನಗರವು ಸುಮಾರು ಹತ್ತು ಪಟ್ಟು ವಿಸ್ತಾರವಾಗಿ ಇದೀಗ ಎಂಟುನೂರು ಚದರ ಕಿ.ಮೀಗೂ ಹೆಚ್ಚು ಮಿಕ್ಕಿ ಬೆಳೆಯುತ್ತಿದೆ. ಈ ಕಿರು ಅವಧಿಯಲ್ಲಿ ಜನಸಂಖ್ಯೆಯು ಸುಮಾರು ಆರು ಪಟ್ಟು ಹೆಚ್ಚಾಗಿ ಒಂದೂವರೆ ಕೋಟಿಗೆ ತಲುಪುತ್ತಿದೆ.

ಆರ್ಥಿಕ ಉದಾರೀಕರಣದ ನಂತರವಂತೂ ಶಿಕ್ಷಣ, ಉದ್ಯಮ, ಮಾಹಿತಿ ತಂತ್ರಜ್ಞಾನದದ ಕ್ರಾಂತಿಯಿಂದಾಗಿ ಆರ್ಥಿಕತೆ ತೀವ್ರವಾಗಿ ಹಿಗ್ಗಿ, ಜನರ ತಲಾದಾಯ ಆರೆಂಟು ಪಟ್ಟು ಹೆಚ್ಚಾಗಿ, ಅತಿವೇಗವಾಗಿ ಬೆಳೆಯುತ್ತಿರುವ ಒಂದು ಜಾಗತಿಕ ನಗರವಾಗಿ ರೂಪಾಂತರ ವಾಗಿದೆ. ಹಿಂದಿನ ನಾಲ್ಕು ದಶಕಗಳಲ್ಲಿ ಬೆಂಗಳೂರಿನ ಅಂಗಳದದ ಈ ಆರ್ಥಿಕ ಅಭಿವೃದ್ಧಿ ಸೋಟದಲ್ಲಿ, ಈವರೆಗೂ ನಗರವನ್ನು ಪೊರೆಯುತ್ತಿದ್ದ ಹಿತ್ತಲಿನ ನಿಸರ್ಗವೇನಾಯಿತು? ಜಲಮೂಲವಾಗಿದ್ದ ಬಹುತೇಕ ಕೆರೆ, ತೊರೆಗಳು ಕಣ್ಮರೆಯಾದವು.

ಅರ್ಕಾವತಿ, ವೃಷಭಾವತಿ, ಕುಮುದ್ವತಿ ನದಿಪಾತ್ರಗಳು ಒಣಗಿ ಕೊಳಚೆ ಮೋರಿಗಳಾದವು. ಆರೆಂಟು ದಶಕಗಳಿಂದ ನೀರು ನೀಡಿ ಸಲಹಿದ್ದ ತಿಪ್ಪಗೊಂಡನಹಳ್ಳಿ ಜಲಾಶಯವಂತೂ ಹೂಳು ತುಂಬಿ, ಜಲಾನಯನ ಪ್ರದೇಶ ಮಾಯವಾಗಿ ಅವಸಾನದಂಚಿಗೆ ತಲುಪಿದೆ. ಮುಕ್ಕಾಲುಭಾಗ ಹಸಿರು ಕವಚದಿಂದ ಕೂಡಿ ತಂಪಾಗಿದ್ದ ನಗರದಲ್ಲಿ ಈಗ ಶೇ ೧೫-೨೦ರಷ್ಟು ಪ್ರದೇಶದಲ್ಲೂ ಹಸಿರು ಉಳಿದಿಲ್ಲ. ಬೇಸಿಗೆಯಲ್ಲಿ ಅಬ್ಬಬ್ಬಾ ಎಂದರೆ ೩೦-೩೨ ಡಿಗ್ರಿ ಸೆಲ್ಸಿಯಸ್ ಇರುತ್ತಿದ್ದ ತಾಪಮಾನ, ನಲವತ್ತು ಡಿಗ್ರಿ ದಾಟುವುದು ಈಗ ಸಾಮಾನ್ಯವಾಗುತ್ತಿದೆ!

ಏಕಮುಖ ಆರ್ಥಿಕ ಅಭಿವೃದ್ಧಿಯ ಗರಬಡಿದು ನಿಸರ್ಗದ ಹಸಿರು ರಕ್ಷಾಕವಚ ಕರಗಿ, ಕುಡಿಯುವ ನೀರಿಗೂ ಬರ ಬಂದ ಬೆಂದಕಾಳೂರಿನ ಕಥೆಯಿದು. ಜೀವಜಲದ ಕೊರತೆ ನಿಭಾಯಿಸಲು ಜಲಮಂಡಳಿ ಸೆಣಸಾಡುತ್ತಿದೆ. ನೀರಿನ ವಿತರಣೆಯಲ್ಲಿ ಕ್ಷಮತೆ, ಟ್ಯಾಂಕರ್ ಉದ್ಯಮದ ನಿಯಂತ್ರಣ, ಮಿತಬಳಕೆಯಂತಹ ಕ್ರಮಗಳಿಗೆ ಅದು ಮುಂದಾಗಿದೆ. ಖಾಲಿ ಕೆರೆಯಂಗಳದಲ್ಲಿ ಕೊಳವೆಬಾವಿ ತೋಡಿ ನೀರನ್ನು ಮೇಲೆತ್ತಿ ಫಿಲ್ಟರ್ ಮಾಡುವುದು, ಕೊಳಚೆ ನೀರಿನ ಸಂಸ್ಕರಣೆ, ವಾತಾವರಣದ ತೇವಾಂಶವನ್ನು ಬಾಷ್ಪೀಕರಿಸಿ ನೀರು ಸಂಗ್ರಹಿಸುವಂತಹ ಹೊಸ ಪ್ರಯೋಗಗಳ ಬಗೆಗೂ ಸರಕಾರ ಈಗ ಚಿಂತಿಸುತ್ತಿರುವುದು ಮಾಧ್ಯಮಗಳಲ್ಲಿ
ವರದಿಯಾಗಿದೆ.

ಹನಿ ನೀರಿಗಾಗಿ ಹಾಹಾಕಾರ ಎದ್ದಿರುವಾಗ, ಸಾಧ್ಯವಿರುವ ಜಲಮೂಲಗಳನ್ನೆಲ್ಲ ಈಗ ಹುಡುಕ ಹೊರಟಿರುವ ಸರಕಾರದ ನಡೆ ವಿಪರ್ಯಾಸದ ಸಂಗತಿ. ಅಂತಿಮಕ್ಷಣದ ಈ ಶಸಾಭ್ಯಾಸದಿಂದಾದರೂ ನೀರಿನ ಅಭಾವದ ಈ ಯುದ್ಧವನ್ನು ಎದುರಿಸಲು ಜನ ಶಕ್ತರಾದರೆ ಸಾಕು! ಆದರೆ, ಈ ತಾತ್ಕಾಲಿಕ ಸಮಾಧಾನಕ್ಕೂ ಮೀರಿದ ದೀರ್ಘಕಾಲೀನ ಪರಿಹಾರಗಳತ್ತಲೂ ಚಿಂತಿಸಬೇಕಲ್ಲವೇ? ಅದರ ಬಗ್ಗೆ ಸರಕಾರದ ನಡೆ ಏನು? ನಗರಗಳು ಬೆಳೆದಂತೆಲ್ಲ ಸುತ್ತಲಿನ ಊರು-ಕೇರಿ, ಕೆರೆ-ಹೊಳೆ, ಗದ್ದೆ-ತೋಟಗಳನ್ನು ಕಬಳಿಸುತ್ತಿವೆ.

ಕೆರೆ, ಹಳ್ಳ, ಗೋಮಾಳಗಳನ್ನು ಸಾಮೂಹಿಕವಾಗಿ ನಿರ್ವಹಿಸುತ್ತಿದ್ದ ಹಳ್ಳಿಗರು ಪಟ್ಟಣಿಗರಾಗುತ್ತಿದ್ದಂತೆ, ನೆಲ, ಜಲ ರಕ್ಷಣೆಯಲ್ಲಿ ತಮ್ಮ ಜವಾಬ್ದಾರಿ ಮರೆಯುತ್ತಿದ್ದಾರೆ. ಹೀಗಾಗಿ, ಕರಾವಳಿ, ಮಲೆನಾಡು, ಒಳನಾಡು ಎಡೆಯೂ, ಪುಟ್ಟ ಪಟ್ಟಣಗಳಲ್ಲೂ ಜಲಮೂಲಗಳೆಲ್ಲ ಕೊಳಚೆಯಾಗುತ್ತಿವೆ. ಕುಡಿಯುವ ನೀರಿನ ಬರ ಕಾಡುತ್ತಿದೆ. ಅಂತರ್ಜಲ ಮರುಪೂರಣ, ಹೊಳೆ, ಕೆರೆ, ಬಾವಿಗಳಲ್ಲಿ ಶುದ್ಧ ನೀರಿನ ಲಭ್ಯತೆ, ಕಲುಷಿತ ನೀರಿನ ಶುದ್ಧೀಕರಣದಂತಹವೆಲ್ಲವನ್ನೂ ನಿರಂತರವಾಗಿ ಉಚಿತವಾಗಿ ನಿರ್ವಹಿಸಿ
ಜನಜೀವನವನ್ನು ಪೊರೆಯುತ್ತಿದ್ದ ನಿಸರ್ಗದತ್ತ ವ್ಯವಸ್ಥೆಯೇ ಧ್ವಂಸವಾಗುತ್ತಿದೆ. ನಾಡಿನ ಬಹುತೇಕ ಬೆಳೆಯುತ್ತಿರುವ ನಗರ, ಪಟ್ಟಣಗಳ ಕಥೆಯೂ ಇದೇ!

ಅವುಗಳ ಸವಾಲುಗಳ ತೀವ್ರತೆಯಲ್ಲಿ ವ್ಯತ್ಯಾಸ ಇದ್ದರೂ, ಸಮಸ್ಯೆಗಳು ಬೆಳೆಯುತ್ತಿರುವ ಪರಿ ಮಾತ್ರ ಒಂದೇ. ಆ ಒಂದೊಂದು ಅಗತ್ಯವನ್ನೂ ಕೃತಕವಾಗಿ ಕೈಗೊಳ್ಳಲು ನೂರಾರು ಕೋಟಿ ಹಣ ವ್ಯಯಿಸಬೇಕಾದ ದೈನೇಸಿ ಹಂತಕ್ಕೆ ಈಗ ತಲುಪಿದ್ದೇವೆ. ಜನರ ಕೊಳ್ಳುವ ಶಕ್ತಿ ಹೆಚ್ಚಾಗುವುದಕ್ಕೂ ನೀರನ್ನು ಬಳಸಿ ತ್ಯಾಜ್ಯ ಹೊರಚೆಲ್ಲುವ ಪ್ರಮಾಣದ ಹೆಚ್ಚಳಕ್ಕೂ ನೇರ ಸಂಬಂಧವಿದೆ ಈ ವಿಷಮ ಪರಿಸ್ಥಿತಿಯಿಂದ ಪಾರಾಗಬೇಕೆಂದರೆ, ತೋರಿಕೆಯ ಸ್ಲೋಗನ್ ಹಾಗೂ ಹಣ ಹೂಡುವುದೇ ಮಾನದಂಡವಾಗಿರುವ
ದಿಕ್ಕುದೆಸೆಯಿಲ್ಲದ ಈಗಿನ ಯೋಜನೆಗಳು ನಿಲ್ಲಬೇಕು. ನೆಲ, ಜಲ ರಕ್ಷಣೆಯ ಕಾನೂನುಗಳ ಕಟ್ಟುನಿಟ್ಟಿನ ಪಾಲನೆ, ಸೂಕ್ತ ತಂತ್ರeನ ಹಾಗೂ ಯಶೋಗಾಥೆಗಳ ಅಳವಡಿಕೆ, ಜನರ ಸಹಭಾಗಿತ್ವ ಕಾಲಬದ್ಧ ಯೋಜನೆಗಳು- ಇವು ಮೂರನ್ನೂ ಒಟ್ಟಾಗಿ ಸಾಧಿಸಲೇಬೇಕು.

ನಗರ, ಪಟ್ಟಣಗಳ ನೀರು ಹಾಗೂ ತ್ಯಾಜ್ಯ ನಿರ್ವಹಣೆಯನ್ನು ಪಾರದರ್ಶಕತೆ ಮತ್ತು ಕ್ಷಮತೆಯಿಂದ ನಿರ್ವಹಿಸಬಲ್ಲ ಒಂದು
ಸ್ವಾಯತ್ತ ವ್ಯವಸ್ಥೆ ರೂಪುಗೊಂಡರೆ ಮಾತ್ರ ಇದು ಸಾಧ್ಯ. ಈ ದಿಸೆಯ ಸವಾಲುಗಳಲ್ಲಿ, ಸ್ಥೂಲವಾಗಿ ಮೂರು ಆಯಾಮಗಳನ್ನು
ಗುರುತಿಸಬಹುದು. ಮೊದಲನೆಯದಾಗಿ, ಜಲಮೂಲಗಳ ರಕ್ಷಣೆ. ನಗರಗಳಿಗೆ ನೀರು ಪೂರೈಸುವ ನದಿ, ಕೆರೆಗಳು ಹಾಗೂ ಮಳೆನೀರನ್ನು ಸಾಗಿಸುವ ರಾಜಕಾಲುವೆಗಳ ಜಲಾನಯನ ಪ್ರದೇಶದ ಗಡಿ ಗುರುತಿಸಿ, ಅವುಗಳ ಅಂಚಿನಲ್ಲಿ ಇರಬೇಕಾದ ‘ಕನಿಷ್ಠ ಬ-ರ್ ವಲಯ’ವನ್ನು ಕಾಪಿಡಬೇಕು. ಅಲ್ಲಿ ಸೂಕ್ತ ಗಿಡಮರಗಳ ಹಸಿರುಕವಚ ಬೆಳೆಸಿದರೆ ನೆರೆ ನಿಯಂತ್ರಣ, ಮಳೆನೀರು ಸಂಗ್ರಹ,
ಸಿಹಿನೀರಿನ ಸಂಗ್ರಹ ಎಲ್ಲವೂ ಸಾಧ್ಯವಾಗಬಲ್ಲದು.

ರಿಯಲ್ ಎಸ್ಟೇಟ್ ಉದ್ಯಮ, ಭೂ ಒತ್ತುವರಿ, ಸೂಕ್ತ ನೆಲಬಳಕೆ ನೀತಿಯೇ ಇರದೆ ಸಾಗಿರುವ ನಗರೀಕರಣದಂತಹವನ್ನೆಲ್ಲ ನಿಯಂತ್ರಿಸಿದರೆ ಮಾತ್ರ ಈ ಜಲಪಾತ್ರಗಳು ಉಳಿದಾವು. ಕೊಳವೆಬಾವಿ ಬಳಕೆಗಂತೂ ನಿಯಂತ್ರಣ ಬೇಕೇಬೇಕು. ನೆರೆ, ಬರ ಎಲ್ಲಕ್ಕೂ ‘ಹವಾಮಾನ ಬದಲಾವಣೆ’ಯತ್ತ ಬೊಟ್ಟು ಮಾಡುವ ಉಡಾ- ಕೈಬಿಟ್ಟು, ಈ ಬಗೆಯ ಶಿಸ್ತುಬದ್ಧ ಜಲನಿರ್ವಹಣೆಗೆ ಮುಂದಾಗಬೇಕಿದೆ.

ಎರಡನೆಯದಾಗಿ, ಮನೆ, ಉದ್ಯಮ, ವಸತಿ ಸಮುಚ್ಚಯ, ಸಾರ್ವಜನಿಕ ಹಾಗೂ ಕೈಗಾರಿಕಾ ಪ್ರದೇಶದಂತಹ ಎಡೆ ಮಳೆನೀರು ಸಂಗ್ರಹ ಯೋಜನೆಯ ಅನುಷ್ಠಾನವಾಗಬೇಕು. ಇದಕ್ಕೆ ಬೇಕಾದ ಸೂಕ್ತ ತಂತ್ರeನ ಹಾಗೂ ಯಶೋಗಾಥೆಗಳು ನಮ್ಮ ನಾಡಿನ ಲಭ್ಯವಿದ್ದರು ಉದಾಸೀನತೆ ತೋರುವುದು ದುರದೃಷ್ಟಕರ. ಈಗ ಬೇಕಾದದ್ದು ಅಳವಡಿಕೆಯ ಬದ್ಧತೆ ಮಾತ್ರ. ನಗರಾಡಳಿತಗಳು
ಒದಗಿಸುವ ಕುಡಿಯುವ ನೀರನ್ನು ಮನೆ ಹಾಗೂ ಉದ್ಯಮಗಳಲ್ಲಿ ಮಿತವಾಗಿ ಬಳಸಬೇಕು. ಉಳಿದಂತೆ ಗೃಹಬಳಕೆ, ತೋಟ ಗಾರಿಕೆ, ಉದ್ಯಮ, ಕೈಗಾರಿಕೆ ವಾಣಿಜ್ಯ ಬಳಕೆಗೆ ಸಂಸ್ಕರಿಸಿದ ನೀರನ್ನು ಮರುಬಳಸುವ ನೀತಿ ಜಾರಿಯಾಗಬೇಕಿದೆ.

ಸಮಾಜವು ನೀರಿನ ಬಳಕೆಯ ತನ್ನ ನಡವಳಿಕೆಯಲ್ಲಿ ಈ ಬದಲಾವಣೆ ಮಾಡಿಕೊಳ್ಳಬೇಕಾದದ್ದು ಅತ್ಯಗತ್ಯ. ಅಂತಿಮವಾಗಿ, ಕೊಳಚೆನೀರಿನ ಸಂಸ್ಕರಣೆ ಕುರಿತು ಹೇಳುವುದಾದರೆ, ಮನೆ ಹಾಗೂ ಕೈಗಾರಿಕೆಗಳ ತ್ಯಾಜ್ಯ ನೀರನ್ನು ಪ್ರತ್ಯೇಕವಾಗಿ ಸಾಗಿಸಿ ಸಂಸ್ಕರಿಸಬೇಕು. ಕೊಳಚೆಯ ಸ್ವರೂಪವನ್ನು ಆಧರಿಸಿ, ವಿವಿಧ ಬಗೆಯ ಸುಲಭ ಶುದ್ಧೀಕರಣ ತಂತ್ರeನಗಳನ್ನು ಅಳವಡಿಸಿ ಕೊಳ್ಳಲು ಸಾಧ್ಯವಿದೆ.

ಸರಕಾರ ಹಾಗೂ ಖಾಸಗಿ ಕ್ಷೇತ್ರಗಳು ಜವಾಬ್ದಾರಿಯುತವಾಗಿ ವರ್ತಿಸಿದರೆ ಇದು ಸಾಧ್ಯ. ಸಂಸ್ಕರಿಸಿದ ನೀರಿನ ಸುರಕ್ಷತೆಯನ್ನು ಜನರು ತಕ್ಷಣ ಒಪ್ಪಲಿಕ್ಕಿಲ್ಲ. ನದಿ, ಕೆರೆಗಳ ಮೂಲದ ಸ್ವಚ್ಛ ನೀರನ್ನು ಗ್ರಾಹಕರಿಗೆ ಒದಗಿಸುವಾಗಲೂ ಈಗಿನ ನಗರಾಡಳಿತಗಳು ಹಲವೊಮ್ಮೆ ಸೋಲುತ್ತಿರುವಾಗ, ನಾಗರಿಕರು ತೋರಬಹುದಾದ ಅಂಥ ಸಂಶಯ ಸಹಜವೇ. ನ್ಯೂನತೆಗಳನ್ನೆಲ್ಲ ಮೀರಿದ ಕಾರ್ಯಕ್ಷಮತೆ ಹಾಗೂ ಪಾರದರ್ಶಕತೆಯಿರುವ ವಿಶ್ವಾಸಾರ್ಹ ‘ಜಲಮೂಲ ರಕ್ಷಣೆ ಹಾಗೂ ವಿತರಣೆ ವ್ಯವಸ್ಥೆ’ಯೊಂದಕ್ಕಾಗಿ ನಗರ ಪ್ರದೇಶಗಳೀಗ ಕಾಯುತ್ತಿವೆ. ನಾಗರೀಕರು ಸಹಕರಿಸಬೇಕಿದೆ.

(ಲೇಖಕರು: ಹವ್ಯಾಸಿ ಬರಹಗಾರರು)