Sunday, 15th December 2024

ಬೀಜಗ್ರಾಮ ರೂವಾರಿ ಡಾ.ಎಸ್.ಎ.ಪಾಟೀಲ

ಪ್ರಸ್ತುತ

ಬಸವರಾಜ ಶಿವಪ್ಪ ಗಿರಗಾಂವಿ

ಡಾ.ಎಸ್.ಎ.ಪಾಟೀಲರ ಹೆಸರು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಹುತೇಕವಾಗಿ ದೇಶಾದ್ಯಂತ ಚಿರಪರಿಚಿತವಾಗಿದೆ. ಡಾ.ಎಸ್.ಎ.ಪಾಟೀಲರು ಉತ್ತರ ಕರ್ನಾಟಕ ಮೂಲದ ವರಾದ್ದರಿಂದ ತಮ್ಮ ಮಾತುಗಾರಿಕೆ ಮತ್ತು ಉಪನ್ಯಾಸಗಳನ್ನು ಉತ್ತರ ಕರ್ನಾಟಕ ಭಾಷೆಯ ಸೊಗಡಿನಲ್ಲಿಯೇ ವ್ಯಕ್ತಪಡಿಸು ತ್ತಿದ್ದದ್ದು ಇವರ ವಿಶೇಷತೆ.

ಇಂತಹ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಸನ್ಮಾನ್ಯರು ಕಲಬುರ್ಗಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿರುವುದು ಕೃಷಿಕ್ಷೇತ್ರಕ್ಕಾದ ನಷ್ಟವಾಗಿದೆ. ಹೊಸ ಹತ್ತಿ ಬೀಜಗಳ ಸಂಶೋಧನೆ ಮತ್ತು ದೇಶದಲ್ಲಿಯೇ ಪ್ರಖ್ಯಾತಿಯನ್ನು ಹೊಂದಿರುವ ಬೀಜಗ್ರಾಮ ಯೋಜನೆಯನ್ನು ದೇಶಕ್ಕೆ ಪರಿಚಯಿಸಿದ ರೂವಾರಿಗಳು ಡಾ.ಎಸ್ .ಎ.ಪಾಟೀಲರಾಗಿದ್ದಾರೆ. ಕೃಷಿಯನ್ನು ಕೈಗೊಳ್ಳುವ ಪೂರ್ವದಲ್ಲಿ ಕೃಷಿಗೆ ಅವಶ್ಯವಿರುವ ಮೂಲಭೂತ ವ್ಯವಸ್ಥೆ ಗಳನ್ನು ಕೈಗೊಳ್ಳಲು ಸಲಹೆ ಕೊಡುತ್ತಿದ್ದರು.

ಕಾಟಾಚಾರಕ್ಕಾಗಿ ಮತ್ತು ಎಲ್ಲೋ ಕುಳಿತು ಕೃಷಿ ಕೈಗೊಳ್ಳುವವರನ್ನು ಕಟುವಾದ ಶಬ್ದಗಳಲ್ಲಿ ದೂಷಿಸುತ್ತಿದ್ದರು. ಕೃಷಿಯು ಭಾರತದ ಮೂಲ ಕಸುಬಾ ಗಿದೆ. ಮುಂದುವರೆದ ದೇಶಗಳಲ್ಲಿ ಲಭ್ಯವಾಗುವಂತೆ ಕೃಷಿಗೆ ಸಂಬಂಧಿಸಿದ ಯಾವುದೆ ಪರಿಹಾರ ಗಳು ಒಂದೇ ಸೂರಿನಡಿ ಕೃಷಿಕರಿಗೆ ಸಕಾಲದಲ್ಲಿ ಲಭ್ಯ ವಾಗಬೇಕೆಂಬುದು ಡಾ.ಎಸ್.ಎ.ಪಾಟೀಲರ ಜೀವನದುದ್ದಕ್ಕೂ ಪ್ರಯತ್ನಿಸಿದ ಪ್ರಮುಖ ನಿಲುವಾಗಿತ್ತು. ಭೂಮಿ ತಯಾರಿಯಿಂದ ಹಿಡಿದು ನಾಟಿ, ಕೊಯ್ಲು, ಇಳುವರಿ ಮತ್ತು ಮಾರುಕಟ್ಟೆಯವರೆಗಿನ ಸಂಪೂರ್ಣ ಜ್ಞಾನವು ರೈತರಿಗೆ ಸಮರ್ಪಕವಾಗಿ ದೊರೆಯಬೇಕು.

ಪ್ರತಿಯೊಬ್ಬ ರೈತರು ವಿಜ್ಞಾನಿಗಳಂತೆ ಕೃಷಿಯಲ್ಲಿ ಕಾರ್ಯ ನಿರ್ವಹಿಸಬೇಕು. ಕೃಷಿಗೆ ಭಾರತದಲ್ಲಿ ಐದು ಸಾವಿರ ವರ್ಷಗಳ ಇತಿಹಾಸವಿರುವುದರಿಂದ ಕೃಷಿ ಜ್ಞಾನವು ರೈತರಿಗೆ ಕಠಿಣವಾಗಿರದೆ ಸರಳವಾಗಿ ದೊರೆಯುವಂತಿರಬೇಕು. ರೈತರು ಸಮಸ್ಯೆಗಳನ್ನು ತೆಗೆದುಕೊಂಡು ಕೃಷಿ ವಿಜ್ಞಾನಿಗಳ ಹತ್ತಿರ ಬರಬಾರದು, ಕೃಷಿ ವಿಜ್ಞಾನಿಗಳೆ ರೈತರಿಗೆ ಸಮಸ್ಯೆ ಬರದಂತೆ ರೈತರಿರುವಲ್ಲಿಗೆ ಹೋಗಿ ಮೇಲಿಂದ ಮೇಲೆ ಮಾರ್ಗದರ್ಶನ ಮಾಡಬೇಕು. ಪ್ರತಿಯೊಬ್ಬ
ರೈತರು ತಮ್ಮ ದಿನನಿತ್ಯದ ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿ ಯಾಗಬೇಕು. ಹೀಗೆ ಕೃಷಿ ಮತ್ತು ಕೃಷಿಕರ ಅಭಿವೃದ್ಧಿಗೆ ಸದಾ ಚಿಂತನೆ ಮಾಡುತ್ತಿದ್ದರು. ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಎರಡು ಅವಧಿಗೆ ಉಪಕುಲಪತಿಯಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿನ ಡಾ.ಎಸ್.ಎ. ಪಾಟೀಲರ ಸೇವಾ ಮನೋಭಾವವು ರಾಜ್ಯದ ಜನಮಾನಸದಲ್ಲಿ ಇಂದಿಗೂ ಹಸಿರಾಗಿ ಉಳಿದಿದೆ.

ಕೃಷಿ ಸಾಧಕ ರೈತರನ್ನು ಕಂಡರೆ ಡಾ.ಪಾಟೀಲರಿಗೆ ಎಲ್ಲಿಲ್ಲದ ಪ್ರೀತಿ. ಬೇಸರಿಕೆಯಿಲ್ಲದೆ ರೈತರ ಹೊಲಗಳಿಗೆ ಭೆಟ್ಟಿಕೊಡುತ್ತಿದ್ದ ಇವರ ಕಾರ್ಯವೈಖರಿ
ಮೆಚ್ಚುವಂತದ್ದಾಗಿತ್ತು. ಕೃಷಿ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿಗಳು ಕೇವಲ ವಿದ್ಯಾವಂತ ಸಾಧಕರಿಗೆ ಸೀಮಿತವಾಗಿದ್ದವು. ಡಾ.ಪಾಟೀಲರ ಅವಽಯಲ್ಲಿ ಸಾಧಕ ರೈತರು ಅನಕ್ಷರಸ್ಥರಾಗಿದ್ದರೂ ಮಲ್ಲಣ್ಣ ನಾಗರಾಳರಂತಹ ರೈತರನ್ನು ಗುರುತಿಸಿ ಅವರಿಗೂ ಡಾಕ್ಟರೇಟ್ ಪದವಿಯನ್ನು ಕೊಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು.

ಡಾ.ಪಾಟೀಲರ ಅವಧಿಯಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಕ್ರೂಢಿಕರಿಸುವ ಮೂಲಕ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಸಧೃಢತೆ ಯನ್ನು ಕಲ್ಪಿಸಿದರು. ಇವರ ನಿವೃತ್ತಿಯ ನಂತರವು ಇವರ ಸೇವೆಯನ್ನು ಗುರುತಿಸಿದ ಸರಕಾರವು ದೇಹಲಿ ಮಟ್ಟದಲ್ಲಿರುವ ಸರಕಾರದ ಪ್ರತಿಷ್ಠಿತ ಸಂಸ್ಥೆ ಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನೀಡಿತು. ಈ ಮೂಲಕ ದೇಶವ್ಯಾಪಿ ಚಿರಪರಿಚಿತರಾಗಿ ಹಲವಾರಿ ಕೃಷಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರಕಾರಕ್ಕೆ ಸಲಹೆ ಸೂಚನೆ ಕೊಟ್ಟರು. ಒಟ್ಟಾರೆಯಾಗಿ ಕೃಷಿಯನ್ನು ಸರಳೀಕರಣ ಗೊಳಿಸಿದ ಕೀರ್ತಿ ಕೃಷಿಯ ಭಾಗವಾಗಿ ಹೊರಹೊಮ್ಮಿದ್ದ ಡಾ.ಎಸ್ .ಎ.ಪಾಟೀಲರಿಗೆ ಸಲ್ಲುತ್ತದೆ.

(ಲೇಖಕರು: ಕೃಷಿ ತಜ್ಞರು ಮತ್ತು ಸಹಾಯಕ ಮಹಾ ಪ್ರಬಂಧಕರು)