Saturday, 27th July 2024

ಮತ್ತಿನ ಸುದ್ದಿ ಗಮ್ಮತ್ತಿಗಷ್ಟೇ ಸೀಮಿತವಾಗದಿರಲಿ

ಶಿಶಿರಕಾಲ

shishirh@gmail.com

ಡ್ರಗ್ಸ್ ..ಡ್ರಗ್ ಪೆಡ್ಲರ್.. ಕೆಲ ದಿನಗಳಿಂದ ಈ ಎರಡು ಶಬ್ದವನ್ನು ದಿನಕ್ಕೆ ಹತ್ತಾರು ಬಾರಿ ಕೇಳಿರುತ್ತೀರಿ. ಮೊದಲೆಲ್ಲ ಡ್ರಗ್ಸ್ ಹಾವಳಿ ಪಂಜಾಬಿನಲ್ಲಿದೆಯಂತೆ, ದೆಹಲಿಯಲ್ಲಿದೆಯಂತೆ – ಮುಂಬೈ ಗೋವಾ ದಲ್ಲಿ ಎಲ್ಲ ಖು ಖು ಅಂತೆ ಎಂಬಿತ್ಯಾದಿ ಅಂತೆ ಕಂತೆಗಳ ಸುದ್ದಿ ಕೇಳುತ್ತಿದ್ದೆವು. ಈ ರೀತಿ ಹರಿದು ಬರುವ ಸುದ್ದಿಗೆ ಅಪ್ಪ ಅಮ್ಮ ಇರುತ್ತಿರಲಿಲ್ಲ. ಯಾವ ರಾಜ್ಯದಲ್ಲಿ, ಎಷ್ಟರ ಮಟ್ಟಿಗೆ ಡ್ರಗ್ಸ್ ಸಮಸ್ಯೆ ಇದೆ ಎಂದು ಯಾರಿಗೂ ಅಂದಾಜು ಹತ್ತುತ್ತಿರಲಿಲ್ಲ.

ಮುಂಬೈ ನ ಅಂಡರ್‌ವರ್ಲ್ಡ್‌ನ ಸುದ್ದಿ ಯ ಜೊತೆ ಜೊತೆಯೇ ಡ್ರಗ್ಸ್ ಸುದ್ದಿ ಕೇಳಿ ಬರುತ್ತಿದ್ದರಿಂದ ಮುಂಬೈನಲ್ಲಿ ಅತಿ ಹೆಚ್ಚು ಡ್ರಗ್ಸ್ ಸಮಸ್ಯೆ ಉಂಟೇನೋ ಎಂದೆನಿ ಸುತ್ತಿತ್ತು. ನಂತರ ‘ಉಡ್ತಾ ಪಂಜಾಬ್’ಎನ್ನುವ ಚಲನ ಚಿತ್ರ ಬಂತು. ಈ ಚಿತ್ರ ನೋಡಿದವರೆಲ್ಲ ಸಮಸ್ಯೆ ಮುಂಬೈ ನಲ್ಲಿ ಅಷ್ಟಿಲ್ಲ -ಬದಲಿಗೆ ಪಾಕಿಸ್ತಾನಕ್ಕೆ ಅಂಟಿ ಕೊಂಡಿರುವ ಪಂಜಾಬಿನಲ್ಲಿ ಅತಿ ಹೆಚ್ಚು – ಪಂಜಾಬಿನ ಸರದಾರ್ ಯುವಕರೆಲ್ಲ ನಶೇಡಿ ಎಂದೇ ಭಾವಿಸುವಂತಾಯಿತು.

ಅದಕ್ಕೆ ಪೂರಕವಾಗಿ ಕೆಲವು ಪಂಜಾಬಿಗೆ ಡ್ರಗ್ಸ್ ಗೆ ಸಂಬಂಧಿಸಿದ ಡಾಕ್ಯುಮೆಂಟರಿಗಳು ಕೂಡ ಬಂದವು. ನಮ್ಮಲ್ಲಿ ಕೆಲವೊಮ್ಮೆ ಸುದ್ದಿಗಿಂತ ಕಾಲ್ಪನಿಕ ಚಲನಚಿತ್ರ ವನ್ನೇ ನಾವು ಹೆಚ್ಚು ನಂಬಿಬಿಡುತ್ತೇವೆ. ಅದರಲ್ಲಿಯೂ ಒಂದು ಅನುಮಾನವಿದ್ದು ಅದೇ ವಿಷಯದ ಮೇಲೆ ಒಂದು ಚಲನ ಚಿತ್ರ ಮೂಡಿ ಬಂದರೆ ಮುಗಿದೇ ಹೊಯಿತು, ಅದೇ ಸತ್ಯ ಎಂದು ವ್ಯತಿರಿಕ್ತವನ್ನೇ ನಂಬುವವರು ನಾವು. ಕಾಲ್ಪನಿಕ ಎಂದು ಪರದೆಯಲ್ಲಿ ಮೊದಲೇ ಬರೆದು ತೋರಿಸಿದರೂ ಅದೇ ಸತ್ಯ – ಸುಮ್ಮನೆ ಕಾಟಾಚಾರಕ್ಕೆ ಹಾಗೆ ಹಾಕುತ್ತಾರೆ ಎಂದೆಲ್ಲ ತಿಳಿದುಕೊಳ್ಳುವಷ್ಟು ಬುದ್ಧಿವಂತರು ನಾವು.

ಅಮೆರಿಕದಲ್ಲಿ ಅರವತ್ತರ ದಶಕದಲ್ಲಿ ಎಲ್ಲಿಲ್ಲದ ಸಮಸ್ಯೆ ಈ ಡ್ರಗ್ಸ್‌ನಿಂದಾಗಿ ಉಂಟಾಗಿತ್ತು. ಯುವಜನತೆ ಬೇಕಾ ಬಿಟ್ಟಿ ಡ್ರಗ್ಸ್ ಸೇವಿಸಲು ಶುರುಮಾಡಿಕೊಂಡರು. ಅಮೆರಿಕದ ಅರವತ್ತರ ದಶಕದ ಹಿಪ್ಪಿ ಸಂಸ್ಕೃತಿಯ ಬಗ್ಗೆ ಕೇಳಿರುತ್ತೀರಿ. ಡ್ರಗ್ಸ್, ಸಂಗೀತ, ಮೋಜು, ಮುಕ್ತ ಸೆಕ್ಸ್ ಅನ್ನು ಅಂದಿನ ಅಮೆರಿಕನ್ ಯುವಜನತೆ ನೆಚ್ಚಿಕೊಂಡರು. ಅಲ್ಲಿಯವರೆಗೆ ದುಡಿದು ತಿನ್ನುತ್ತಿದ್ದ ಯುವಜನತೆ ಒಂದು ಸಂಸ್ಕಾರಹೀನವನ್ನು ತನ್ನದಾಗಿಸಿಕೊಂಡಿತ್ತು. ಇದೊಂದು ಸಮಸ್ಯೆ ಎಂದು ಅಂದಾಜಾಗುವ ಮೊದಲೇ ಅಮೆರಿಕ ಯುವಜನತೆ ಸ್ವೇಚ್ಚಾಚಾರಕ್ಕೆ ಇಳಿದು ಬಿಟ್ಟಿತ್ತು. ಇದೇ ಕಾರಣಕ್ಕೆ ಅಂದಿನ ಅಮೆರಿಕ ಅಧ್ಯಕ್ಷ ಡ್ರಗ್ಸ್‌ನ ವಿರುದ್ಧ ಯುದ್ಧ ಎಂದು ಹೊರಟರು. ಜಗತ್ತಿನ ಎಲ್ಲ ರಾಷ್ಟ್ರಗಳ ಮುಖ್ಯಸ್ಥರನ್ನು ಒಟ್ಟುಗೂಡಿಸಿ ಇಪ್ಪತ್ತೈದು ವರ್ಷದೊಳಗೆ ಡ್ರಗ್ಸ್‌ಗಳನ್ನು ನಿಷೇಧಿಸುವಂತೆ ಮನವಿ ಮಾಡಿ, ಒಂದೊಮ್ಮೆ
ಹಾಗೆ ನಿಯಂತ್ರಿಸದಿದ್ದಲ್ಲಿ ನಿಮ್ಮ ಕಥೆಯೂ ನಮ್ಮ ದೇಶದಂತೇ ಆಗುತ್ತದೆ ಎಂದು ಕಿವಿಮಾತು ಹೇಳಿ ಬೀಳ್ಕೊಟ್ಟರು.

ಅಮೆರಿಕದಲ್ಲುಂಟಾದ ಸಮಸ್ಯೆಯನ್ನು ಮನಗೊಂಡ ಎಲ್ಲ ರಾಷ್ಟ್ರಗಳು ಬಹುತೇಕ ಡ್ರಗ್ಸ್‌ಗಳನ್ನು ನಿಷೇಽಸಿದವು. ಅಂದು ತಲೆ ಅಳಡಿಸಿಕೊಂಡು ಬಂದ ಭಾರತ ಇಪ್ಪತ್ತ ನಾಲ್ಕು ವರ್ಷದವರೆಗೆ ಏನೂ ಮಾಡದೇ ಸುಮ್ಮನಿದ್ದು ಕೊನೆಯಲ್ಲಿ ಇಪ್ಪತ್ತೈದನೇ ವರ್ಷ ಎನ್.ಡಿ.ಪಿ.ಎಸ್ ಆಕ್ಟ್ ಅನ್ನು ಗಡಿಬಿಡಿಯಲ್ಲಿ ಜಾರಿಗೊಳಿಸಿತು. ಡ್ರಗ್ಸ್‌ನೊಂದಿಗೆ ಸಿಕ್ಕಿಬಿದ್ದರೆ ಮರಣದಂಡನೆಯ ಹೊರತು ಬೇರೆ ಯಾವುದೇ ಶಿಕ್ಷೆಯನ್ನು ನ್ಯಾಯಾಧೀಶರು ವಿಧಿಸುವಂತಿಲ್ಲ ಎಂಬ ಕಠಿಣ ಕಾನೂನು ಜಾರಿಗೆ ಬಂದಿತು. ಹೀಗೊಂದು ಕಾನೂನು ಬಂದದ್ದೇನೋ ನಿಜ ಆದರೆ ಯಾರೊಬ್ಬರನ್ನೂ ಈ ಡ್ರಗ್ಸ್ ಕಾರಣದಿಂದ -ಸಿಗೆ ಗುರಿಯಾಗಿಸಲಿಲ್ಲ ಎನ್ನುವುದು ಬೇರೆ ವಿಚಾರ. ನಂತರ ಬಹುಷಃ ೨೦೧೪ರಲ್ಲಿ ಈ ಕಡ್ಡಾಯ ಗಲ್ಲು ಎನ್ನುವ ಕಾನೂನು ಬದಲಾಯಿತು. ಈ ಆಕ್ಟ್ ಇಂದಿಗೂ ಕಾನೂನು ಪುಸ್ತಕದಲ್ಲಿ – ಸಂವಿಧಾನದಲ್ಲಿ ತೀರಾ
ಕಠಿಣವಾದದ್ದು. ಈ ಕಾನೂನಿನನ್ವಯ ಯಾರನ್ನು ಬೇಕಾದರೂ ವಿಚಾರಣೆಗೆ ಕರೆಯಬಹುದಾದ ತಾಕತ್ತನ್ನು ವಿಚಾರಣಾ ಅಧಿಕಾರಿಗೆ ಕಾನೂನು ನೀಡುತ್ತದೆ.

ಆರೋಪಿ ನಿರಪರಾಧಿ ಎಂದು ಪಕ್ಕಾ ಸಾಬೀತಾದರೆ ಮಾತ್ರ ಬೇಲ್ ಸಿಗುವ ಕೆಲವೇ ಕಾನೂನುಗಳಲ್ಲಿ ಇದು ಕೂಡ ಒಂದು. ಉಳಿದ ಎಲ್ಲ ಕಾನೂನು ಆರೋಪಿ ಅಪರಾಽಯೆಂದು ಸಾಬೀತಾಗುವವರೆಗೆ ಕೇವಲ ಆರೋಪಿ. ಆದರೆ ಈ ಕಾನೂನಿನಲ್ಲಿ ಮಾತ್ರ ನಿರಪರಾಧಿ ಎಂದು ಸಾಬೀತಾದ ಮೇಲೆಯೇ ಬಿಡುಗಡೆ.
ಕಾನೂನೇನೋ ಇದೆ ಆದರೆ ಎಷ್ಟರ ಮಟ್ಟಿಗೆ ಆನ್ಟಿ- ಡ್ರಗ್ಸ್ ಸಂಸ್ಥೆಗಳು ಡ್ರಗ್ಸ್ ನ ನಿಯಂತ್ರಣದತ್ತ ಕೆಲಸಮಾಡುತ್ತಿವೆ ಎನ್ನುವ ಪ್ರಶ್ನೆಗೆ ಸಮಂಜಸ ಉತ್ತರ ಸಿಗುವುದಿಲ್ಲ. ಇಂದು ಈ ಡ್ರಗ್ಸ್ ಸಿನಿಮಾ ತಾರೆಯರು ಭಾಗಿಯಾಗಿರಬಹುದು ಎಂಬ ಏಕೈಕ ಕಾರಣಕ್ಕೆ ಇಷ್ಟು ಸುದ್ದಿಯಲ್ಲಿದೆ.

ಅದೇ ಒಂದು ವೇಳೆ ಯಾರೋ ಮಂಜು, ಅಬ್ದುಲ್ ಅಥವಾ ಫೆರ್ನಾಂಡಿಸ್ ಬಂಧನವಾಗಿದ್ದರೆ ಅಥವಾ ಸಮನ್ಸ್ ಮಾಡಿ ಪೊಲೀಸರು ಕರೆದಿದ್ದರೆ ಇದೆಲ್ಲ ಪತ್ರಿಕೆಯ ಯಾವುದೋ ಒಂದು ಚಿಕ್ಕ ಬಾಕ್ಸ್ ನಲ್ಲಿ ಸುದ್ದಿಯಾಗಿ ನಮಗೆಲ್ಲ ಗೊತ್ತೇ ಆಗುತ್ತಿರಲಿಲ್ಲ – ಟಿವಿ ಮಾಧ್ಯಮಗಳು ಇದನ್ನು ಫಿಲ್ಲರ್ ಸುದ್ದಿಯಂತೆ ಬಳಸಿಕೊಳ್ಳುತ್ತಿ
ದ್ದವೇನೋ. ೨೦೦೪ರಲ್ಲಿಯೇ ಅಮೆರಿಕದ ರಾಷ್ಟ್ರೀಯ ಸಂಸ್ಥೆಯು. ಎಸ್.ಎನ್.ಐ.ಎಚ್ ಭಾರತದಲ್ಲಿ ಡ್ರಗ್ಸ್ ಅವ್ಯವಹಾರ ಮತ್ತು ಹಾವಳಿ ಎಲ್ಲಿಲ್ಲದಂತೆ ಹೆಚ್ಚುತ್ತಿದೆ ಎಂದು ವರದಿ ಮಾಡಿತ್ತು. ಆ ವರದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದರೂ ಹೆಚ್ಚಿನ ಭಾರತೀಯರಿಗೆ ಆ ಸುದ್ದಿ ತಲುಪಲೇ ಇಲ್ಲ. ಅಂದಿನ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳುವುದರ ಬದಲು ಭಾರತದ ಮತ್ತು ಸರಕಾರದ ಮಾನ ಮರ್ಯಾದಿ ಕಾಪಾಡಿಕೊಳ್ಳುವ ಸಲುವಾಗಿಯೋ ಏನೋ, ಈ ವರದಿ
ಬಹಿರಂಗ ಪಡಿಸದಂತೆ ಅಮೆರಿಕವನ್ನು ಕೇಳಿಕೊಂಡಿತ್ತು.

ಸಿನಿಮಾ ತಾರೆಯರಿರಬಹುದು ಅಥವಾ ಯಾವುದೇ ಪಬ್ಲಿಕ್ ಫಿಗರ್‌ಗಳಿರಬಹುದು – ಅವರನ್ನು ಜನಸಾಮಾನ್ಯ ತಲುಪುವುದೇ ಕಷ್ಟ. ಅಂಥದ್ದರಲ್ಲಿ ಡ್ರಗ್ಸ್ ದಂಧೆಯವರು ಅವರನ್ನು ತಲುಪಿದ್ದಾರೆ ಮತ್ತು ಅವರೊಂದಿಗೆ ಡೀಲ್‌ಗೆ ಇಳಿದಿzರೆ ಎಂದರೆ ಇದೆಲ್ಲ ಒಂದು ವ್ಯವಸ್ಥಿತ ಮತ್ತು ಬೆಳೆದು ನಿಂತ ಜಾಲವಾಗಿದೆ ಎಂದೇ ನಾವು ಪರಿಗಣಿಸಬೇಕು. ಇಷ್ಟೆ ನಡೆಯುತ್ತಿದ್ದಾಗ – ಈ ರೀತಿಯ ಕಠಿಣಾತಿ ಕಠಿಣ ಕಾನೂನು ಭಾರತದಲ್ಲಿರುವಾಗ ಅದು ಹೇಗೆ ಈ ಜಾಲ – ದುರ್ವ್ಯವಸ್ಥೆ
ಈ ರೀತಿ ಹೆಮ್ಮರವಾಗಿ ಬೆಳೆದು ನಿಂತಿತು ಎನ್ನುವುದನ್ನು ಯಾರು ಯಾರಿಗೆ ಪ್ರಶ್ನಿಸಬೇಕು? ಡ್ರಗ್ಸ್ ಸೇವಿಸುವುದು ಅಪರಾಧ. ಆದರೆ ಸೇವಿಸಿದವರು ಯಾರೂ ಮನೆಯಲ್ಲಿ ತಯಾರಿಸಿಕೊಂಡು ಸೇವಿಸಿಲ್ಲವಲ್ಲ. ಇಂದು ಬಂಧಿತರಾದವರು ಒಂದೋ ಡ್ರಗ್ಸ್ ತೆಗೆದುಕೊಂಡರೆಂಬ ಆರೋಪಿತರು ಅಥವಾ ತೆಗೆದುಕೊಂಡವರಿಗೆ ತಲುಪಿಸಿದವರು.

ಮೂಲದಲ್ಲಿ ಭಾರತದಲ್ಲಿ ಈ ಡ್ರಗ್ಸ್ ಎಲ್ಲಿ ತಯಾರಾಗುತ್ತಿದೆ – ಅಥವಾ ಭಾರತದೊಳಗೆ ಈ ಡ್ರಗ್ಸ್ ಹೇಗೆ ಒಳ ನುಸುಳುತ್ತಿದೆ ಎಂಬ ಅಸಲೀ ಬೇಸಿಕ್ ಪ್ರಶ್ನೆಯತ್ತ ಯಾರೂ ತಲೆಯೇ ಕೆಡಿಸಿಕೊಂಡಂತಿಲ್ಲ. ಒಂದೊಂದು ಡ್ರಗ್ಸ್ ಒಂದೊಂದು ರೀತಿ ಕೆಲಸ ಮಾಡುತ್ತದೆ – ಬೇರೆ ಬೇರೆ ರೀತಿಯ ನಶೆಯನ್ನೇ ನೀಡುತ್ತದೆ – ಚಟ
ದಾಸ್ಯಕ್ಕೆ ದೂಡುತ್ತದೆ. ಒಂದೊಂದರ ವ್ಯತಿರಿಕ್ತ ಪರಿಣಾಮ ಒಂದೊಂದು ರೀತಿ. ಡ್ರಗ್ಸ್ ಮದ್ಯಪಾನದಂತಲ್ಲ. ಮದ್ಯಪಾನ ದಲ್ಲಿ ನೂರಾರು ರೀತಿಗಳಿದ್ದರೂ ಹೆಚ್ಚು ಕಡಿಮೆ ಅದನ್ನು ಕುಡಿದಾಗ ಆಗುವ ಪರಿಣಾಮ ಒಂದೇ. ತಂಬಾಕು ವ್ಯಸನ ಕೂಡ ಹಾಗೆಯೇ. ಆದರೆ ಡ್ರಗ್ಸ್ ಎನ್ನುವುದು ವೈವಿಧ್ಯವಾದದ್ದು.

ಕೆಲವು ಹೆಚ್ಚು ಅಡಿಕ್ಟಿವ್. ಅವು ಮನುಷ್ಯನ ಮೆದುಳಿನ ಮೇಲೆ ಬೀರುವ ಪರಿಣಾಮ ಕೂಡ ಬೇರೆಯೇ. ಉದಾಹರಣೆಗೆ ಗಾಂಜಾ ಮನುಷ್ಯನ ವೈಚಾರಿಕತೆಯನ್ನು, ನಗುವನ್ನು, ಖುಷಿಯನ್ನು ಉದ್ರೇಕಿಸುತ್ತದೆ. ಗಾಂಜಾ ಸೇವಿಸುವುದರಿಂದ ಬೇರೆ ಅಡ್ಡ ಪರಿಣಾಮಗಳು ಉಳಿದ ಡ್ರಗ್ಸ್‌ಗೆ ಹೋಲಿಸಿದರೆ ಕಡಿಮೆಯೇ. ಆ ಕಾರಣಕ್ಕೇ ಗಾಂಜಾ ಸಾ- ಡ್ರಗ್ಸ್ ಎಂದು ಕರೆಯಲ್ಪಡುತ್ತದೆ. ಗಾಂಜಾ ಸೇವಿಸಿದ ಯಾರೊಬ್ಬರೂ ಮಾರನೆಯ ದಿನವೇ ಅದರ ಚಟಕ್ಕೆ ಬಿದ್ದು ಬಿಡುವುದಿಲ್ಲ. ಗಾಂಜಾ ಕೆನಡಾ ಮತ್ತು ಅಮೆರಿಕದ ಹನ್ನೊಂದು ರಾಜ್ಯಗಳಲ್ಲಿ ಇಂದು ಲೀಗಲ್. ಗಾಂಜಾ ಹಾಗೆ ನೋಡಿದರೆ ಕಾಟು ಗಿಡದ ಹೂವು ಮತ್ತು ಎಲೆ. ಸ್ವಲ್ಪವೇ ಶುದ್ಧೀಕರಿಸಿ ಬಳಸುವಂಥ ಮತ್ತು ಕೃತಕ ಮತ್ತು ಬರಿಸಲು ಆದಿಕಾಲದಿಂದ ವೈದ್ಯಕೀಯ ಕಾರಣಕ್ಕೆ ಬಳಕೆಯಲ್ಲಿದೆ. ಶಿವ ಉಪಾಸಕರು, ಅಘೋರಿಗಳು ಇಂದಿಗೂ ಗಾಂಜಾ ಬಳಸುವುದು ಬಹಳ ಸಾಮಾನ್ಯ. ಕುಂಭಮೇಳವೆಂದರೆ ಎದುರಿಗೆ ಬರುವ ಚಿತ್ರಣವೇ ಭಂಗಿ ಸೇವಿಸುವ ಅಘೋರಿಗಳು ಅಲ್ಲವೇ? ಸಾಮಾನ್ಯವಾಗಿ ಡ್ರಗ್ಸ್ ಎನ್ನುವ ಶಬ್ದ ಕೇಳಿದಾಕ್ಷಣ ನಮ್ಮ ಕಣ್ಣೆದುರಿಗೆ ಬರುವುದು ಇಂಜೆಕ್ಷನ್ ಚುಚ್ಚಿಕೊಳ್ಳುವ ದೃಶ್ಯ.

ಇದಕ್ಕೆ ಕಾರಣ ಪಾಶ್ಚಿಮಾತ್ಯ ಮತ್ತು ನಮ್ಮ ದೇಶೀ ಸಿನಿಮಾಗಳು. ಈ ರೀತಿ ಚುಚ್ಚಿಕೊಳ್ಳುವ ಡ್ರಗ್ಸ್ ಗಳಿವೆಯಲ್ಲ ಅವು ಬಹುತೇಕ ಹಾರ್ಡ್ ಡ್ರಗ್ಸ್‌ಗಳು. ಅವು ಸಾಮಾನ್ಯವಾಗಿ ಒಂದೆರಡು ಬಾರಿ ಸೇವಿಸಿಬಿಟ್ಟರೆ ಅದರ ಚಟ ಹತ್ತಿಬಿಡುವುದು ಸಾಮಾನ್ಯ. ಹೆರಾಯಿನ್, ಓಪಿಯಂ, ಎಲ.ಎಸ್.ಡಿ, ಡಿ. ಎಂ.ಟಿ, ಫೆಂಟಾನಿಲ್ ಈ ಡ್ರಗ್ಸ್‌ಗಳೆಲ್ಲ ಹಾರ್ಡ್ ಡ್ರಗ್ಸ್ ಗಳು. ಇವನ್ನು ನಾನಾರೀತಿಯ ಕೆಮಿಕಲ್ ಪ್ರೋಸೆಸ್‌ನಿಂದ ತಯಾರಿಸಲಾಗುತ್ತದೆ. ಆ ಕಾರಣಕ್ಕೆ ಮತ್ತು ಅವು ಕಾನೂನು ಬಾಹಿರವಾಗಿ ಕದ್ದು ಮುಚ್ಚಿ ತಯಾರಾಗುವುದರಿಂದ ಕೆಮಿಕಲ್ ಪ್ರೋಸೆಸ್ ಅಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅದು ಜೀವವೇ ತೆಗೆದುಬಿಡುವಷ್ಟು ಅಪಾಯ ಕಾರಿಯಾಗಿರುವುದರಿಂದ ಅದನ್ನು ಗಾಂಜಾದಂತೆ ನೋಡುವಂತಿಲ್ಲ. ಇಂದು ಜಗತ್ತಿನಲ್ಲಿ ಅತಿ ಹೆಚ್ಚು ಬಳಸಲ್ಪಡುವ ಹಾರ್ಡ್ ಡ್ರಗ್ಸ್ ಗಳಲ್ಲಿ ಕೊಕೈನ್ ಮತ್ತು ಹೆರಾಯಿನ್‌ನದ್ದೇ ಸಿಂಹಪಾಲು. ಈ ಎರಡೂ ಡ್ರಗ್ಸ್ ಗಳು ಜೀವವನ್ನೇ ತೆಗೆಯುವ – ಜೀವನವನ್ನೇ ಬುಡಮೇಲು ಮಾಡುವಷ್ಟು ಭಯಾನಕ. ಹೆರಾಯಿನ್ ಸೇವಿಸಿದಾಗ ದೇಹದಲ್ಲಿ ಡೋಪಮೈನ್ ಎನ್ನುವ ರಾಸಾಯನಿಕ ಉತ್ಪತ್ತಿಯಾಗುತ್ತದೆ.

ಅತಿ ಹೆಚ್ಚು ದೈಹಿಕ ಶ್ರಮ – ಜಿಮ್ ಮಾಡಿದಾಗ ಕೂಡ ಇದೇ ಡೋಪಮೈನ್ ಎನ್ನುವ ರಾಸಾಯನಿಕ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಹೇಗೆ ಜಿಮ್ ಮಾಡಿದಾಗ ಒಂದು ರೀತಿಯ ಉಸ ದೇಹದಲ್ಲುಂಟಾಗುತ್ತದೆಯೋ ಅದೇ ಉಸದ ಹತ್ತು ಪಟ್ಟು ಈ ಹೆರಾಯಿನ್ ಕೃತಕವಾಗಿ ನಿರ್ಮಿಸುತ್ತದೆ. ಡೋಪಮೈನ್ ದೇಹದಲ್ಲಿ ಸಹಜವಾಗಿ ಉತ್ಪತ್ತಿಯಾ ದಾಗ ನಮ್ಮನ್ನು ಹೆಚ್ಚು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಜಿಮ್‌ಗೆ ಹೋಗಿ ಬಂದ ದಿನ ನಾವು ಅತಿ ಹೆಚ್ಚು ಲವಲವಿಕೆಯಿಂದರಲು ಕಾರಣ ಬಿಡುಗಡೆಯಾಗುವ ಇದೇ ಡೋಪಮೈನ್. ಆದರೆ ಕೃತಕವಾಗಿ ಪ್ರಮಾಣ ಮೀರಿ ಹೆರಾಯಿನ್ ಸೇವಿಸುವುದರ ಮೂಲಕ ಡೋಪಮೈನ್ ಉತ್ಪತ್ತಿಯಾಗುವಂತಾದರೆ ಅದು ನಶೆಯಂತೆ ಕೆಲಸ ಮಾಡುತ್ತದೆ.

ಪ್ರತೀ ದಿನ ಜಿಮ್‌ಗೆ ಹೋದಲ್ಲಿ ಸುಮಾರು ಕಾಲದ ನಂತರ ಯಾವ ಕಾರಣಕ್ಕೆ ಜಿಮ್ ಗೆ ಹೋಗದಿದ್ದಲ್ಲಿ ದೇಹದನೋ ಕಳೆದುಕೊಂಡ ಭಾವ ಹುಟ್ಟುತ್ತದೆಯೋ
ಅದೇ ಭಾವ ನೂರು ಪಟ್ಟು ಹೆರಾಯಿನ್‌ನಿಂದ ಹುಟ್ಟಿಕೊಳ್ಳುತ್ತದೆ. ಆ ಕಾರಣಕ್ಕೆ ಹೆರಾಯಿನ್ ಕೆಲವೇ ಬಳಕೆಯಲ್ಲಿ ಚಟವಾಗಿಬಿಡುತ್ತದೆ. ಎರಡನೆಯ ವ್ಯಾಪಕವಾಗಿ ಬಳಸಲ್ಪಡುವ ಹಾರ್ಡ್ ಡ್ರಗ್ಸ್ ಎಂದರೆ ಕೊಕೈನ್. ಕೊಕೈನ್ ಬೇರೆಯದೇ ರೀತಿಯಲ್ಲಿ ಕೆಲಸ ಮಾಡುತ್ತದೆ. ಕೊಕೈನ್ ಸೇವಿಸಿದಾಗ ಮೆದುಳಿನ ನರಗಳು
ಉದ್ರೇಕಗೊಳ್ಳುತ್ತವೆ. ಈ ಉದ್ರೇಕ ಗೆಲುವಿನ ಉದ್ರೇಕಕ್ಕೆ ಹೋಲಿಕೆಯಾಗುವಂಥದ್ದು. ಹೇಗೆ ನಾವು ಪ್ರಶಸ್ತಿಯನ್ನು ಪಡೆದಾಗ ಅಥವಾ ಏನೋ ಒಂದು ಗೆಧಿಗ ಖುಷಿ ಪಡುತ್ತೇವೆಯೋ ಅದೇ ಸ್ಥಿತಿ ಮೆದುಳಿನಲ್ಲಿ ಉಂಟಾಗುತ್ತದೆ.

ಈ ಸ್ಥಿತಿ ಮಾನಸಿಕವಾಗಿ ತೀರಾ ದುರ್ಬಲವಾದವನಿಗೆ ಅಸಾಮಾನ್ಯ ಗೆಲುವಿನ ಅನುಭವ ಕೊಡುತ್ತದೆ. ತಾಕತ್ತು ಇಮ್ಮಡಿಸಿದ ಭಾವ ಹುಟ್ಟುತ್ತದೆ. ಗೆಲ್ಲುವ ಖುಷಿಯೇ ಇನ್ನಷ್ಟು ಸಾಧಿಸಲು ಪ್ರೇರೇಪಿಸುತ್ತದೆಯೋ ಥೇಟ್ ಅಂಥದ್ದೇ ಸ್ಥಿತಿ ಮೆದುಳಿನಲ್ಲಿ ಉಂಟಾಗಿರುತ್ತದೆ. ಪ್ರತೀ ಬಾರಿ ಇನ್ನೊಮ್ಮೆ ಕೊಕೈನ್ ಸೇವಿಸುವಾಗ ಹಿಂದಿನ ಸಲಕ್ಕಿಂತ ಜಾಸ್ತಿ ಸೇವಿಸಿದರೆ ಮಾತ್ರ ಹಿಂದಿನ ಸಲದಷ್ಟು ಮತ್ತು ಬರಲು ಸಾಧ್ಯ. ಈ ಕಾರಣದಿಂದ ಪ್ರತೀ ಬಾರಿ ವ್ಯಕ್ತಿ ಹೆಚ್ಚು ಹೆಚ್ಚು ಕೊಕೈನ್
ಸೇವಿಸುತ್ತಾ ಹೋಗುತ್ತಾನೆ. ಒಂದು ಹಂತದ ನಂತರ ಸೇವಿಸುವ ಕೊಕೈನ್ ಪ್ರಮಾಣ ರಕ್ತದೊತ್ತಡವನ್ನು ಅದ್ಯಾವ ಪ್ರಮಾಣಕ್ಕೆ ಒಯ್ದು ನಿಲ್ಲಿಸುತ್ತದೆಯೆಂದರೆ ಆತನ ರಕ್ತನಾಳಗಳು ಮತ್ತು ಹೃದಯ ಅಷ್ಟು ಒತ್ತಡವನ್ನು ಸಾಹಸಲಾಗದೆ ಸಾವು ಸಂಭವಿಸುತ್ತದೆ. ಒಂದು ವೇಳೆ ಒಂದೆರಡು ಬಾರಿ ಕೊಕೈನ್ ಸೇವಿಸಿದ ವ್ಯಕ್ತಿ ಸೇವಿಸುವುದನ್ನು ನಿಲ್ಲಿಸಿದರೆ ಮಹಾನ್ ಸೋಲಿನ, ಮಾನಸಿಕ ಅಧಃಪತನದ ಅನುಭವವಾಗುತ್ತದೆ.

ಹಾಗಾಗಿ ಇನ್ನೊಮ್ಮೆ ಸೇವಿಸುವಂತೆ ಪ್ರೇರೇಪಿಸುತ್ತದೆ. ಈ ಎರಡೂ ಹಾರ್ಡ್ ಡ್ರಗ್ಸ್‌ನ ಸೇವನೆ ಮತ್ತು ಅದು ಉಂಟುಮಾಡುವ ದೈಹಿಕ ಮತ್ತು ಮಾನಸಿಕ ಸ್ಥಿತಿ ಮನುಷ್ಯನ ತೀರಾ ಅಗತ್ಯವಿರುವ ಭಾವನೆಯನ್ನು ಹಲವು ಪಟ್ಟು ಹೆಚ್ಚು ಮಾಡುವ ಮೂಲಕ ನಶೆ ಕೊಡುವುದರಿಂದ ಇದು ಅತಿ ಬೇಗ – ಕೆಲವೇ ಬಾರಿ ತೆಗೆದುಕೊಂಡ ಕೂಡಲೇ ಚಟವಾಗಿಬಿಡುವಂಥದ್ದು. ದಕ್ಷಿಣ ಅಮೆರಿಕದ ಕೊಲಂಬಿಯಾ, ಪೆರು ಮತ್ತು ಬೊಲಿವಿಯಾ ಜಗತ್ತಿಗೆ ಕೊಕೈನ್ ಅನ್ನು ಸರಬರಾಜು
ಮಾಡುವ ದೇಶಗಳು. ಈ ದೇಶಗಳಲ್ಲ ಈ ಕಾರ್ಟೆಲ್ – ಮಾಫಿಯಾ ಎಷ್ಟು ಗಟ್ಟಿ ಎಂದರೆ ಅಲ್ಲಿನ ಸರಕಾರಗಳು, ಸರಕಾರೀ ಪೊಲೀಸ್ ವ್ಯವಸ್ಥೆ ಕೂಡ ಈ ಡ್ರಗ್ಸ್ ತಯಾರಾಗುವ ನಮ್ಮ ರಾಜ್ಯಗಳಷ್ಟು ದೊಡ್ಡ ಜಾಗದಲ್ಲಿ ಕೈ ಕಟ್ಟಿ ನಿಲ್ಲುತ್ತವೆ.

ಮೆಕ್ಸಿಕೋ, ಬೊಲಿವಿಯಾ, ಅಫ್ಘಾನಿಸ್ತಾನ್, ಪೆರು, ಕೊಲಂಬಿಯಾ ಈ ದೇಶಗಳು ಮತ್ತು ಅಲ್ಲಿನ ಸಿಸ್ಟಮ್ ಅದೆಷ್ಟು ವ್ಯವಸ್ಥಿತವಾಗಿ ಇದರ ಸುತ್ತ ಇಂದು ಬೆಳೆದು ನಿಂತಿದೆಯೆಂದರೆ ಆ ದೇಶಗಳು ಈ ಹಾರ್ಡ್ ಡ್ರಗ್ಸ್ ಅನ್ನು ವ್ಯವಸ್ಥಿತವಾಗಿ ಹೊರ ದೇಶಗಳಿಗೆ ವಿಮಾನ, ಸಬ್ಮೆರಿನ್, ಹಡಗಿನಲ್ಲಿ ಸರಬರಾಜು ಮಾಡುತ್ತವೆ.
ಎಲ್ಲ ಡ್ರಗ್ಸ್ ಒಂದೇ ರೀತಿ ಪರಿಗಣಿಸಿ ವ್ಯವಸ್ಥೆಯಿಂದ ಕಿತ್ತೊಗೆಯಬೇಕು ಎನ್ನುವುದು ಮೂರ್ಖತನವಾಗುತ್ತದೆ. ಸಾಫ್ಟ್ ಡ್ರಗ್ಸ್‌ಗಳಾದ ಗಾಂಜಾವನ್ನು ದೇಶದ ಬೆಳೆಯುವುದರಿಂದ ಅದನ್ನು ರಾಜ್ಯ ಸರಕಾರಗಳು ಕೂಡ ನಿಯಂತ್ರಿಸಬಹುದು. ಇಂದು ಭಾರತದಲ್ಲಿ ಬಳಕೆಯಾಗುವ ಶೇ.೯೨ರಷ್ಟು ಡ್ರಗ್ಸ್ ಈ ಸಾಫ್ಟ್ ಡ್ರಗ್ಸ್ ಎನ್ನಲಾಗುವ ಗಾಂಜಾ. ಉಳಿದ ಶೇ.೮ರಷ್ಟು ಮಾತ್ರ ಅತಿ ಮಾರಕ ಹಾರ್ಡ್ ಡ್ರಗ್ಸ್ ಗಳು.

ಶೇ.೮ ಸಣ್ಣ ಸಂಖ್ಯೆಯಂತೆ ಕಂಡರೂ ಅದು ಭಾರತದಂತಹ ದೇಶದಲ್ಲಿ ಸಣ್ಣ ಪ್ರಮಾಣವಲ್ಲ. ಇದು ವಿದೇಶಗಳಿಂದ ಹೆಚ್ಚಾಗಿ ತಯಾರಾಗಿ ಬರುವ ಕಾರಣದಿಂದ ಇದರ ನಿಯಂತ್ರಿಸುವ ಕೆಲಸದಲ್ಲಿ ಕೇಂದ್ರ ಸರಕಾರ ಮುತುವರ್ಜಿ ವಹಿಸಬೇಕಾಗುತ್ತದೆ. ಜಲ ಮತ್ತು ವಾಯುಸಾರಿಗೆಯ ಮೂಲಕವೇ ಒಳ ಹೊಕ್ಕುವ ಈ ಡ್ರಗ್ಸ್ ಗಳನ್ನು ಬಂದರು ಮತ್ತು ವಿಮಾನ ನಿಲ್ದಾಣ ನಿಯಂತ್ರಿಸುವ ಕೇಂದ್ರವೇ ಕಂಟ್ರೋಲ್ ಮಾಡಬೇಕು. ಅಲ್ಲದೆ ಅಷ್ಟೇ ಪ್ರಮಾಣದಲ್ಲಿ ಪಕ್ಕದ ದೇಶಗಳ ಗಡಿಯಿಂದ ಕೂಡ ಈ ಹಾರ್ಡ್ ಡ್ರಗ್ಸ್ ದೇಶದೊಳಕ್ಕೆ ಬರುವುದರಿಂದ, ಗಡಿ ನಿಯಂತ್ರಿಸುವ ಕೇಂದ್ರ ಸರಕಾರವೇ ಈ ನಿಯಂತ್ರಣದ ಹೊಣೆ ಹೊರಬೇಕಾಗುತ್ತದೆ. ಈ ಜಾಗತಿಕ ಹಾರ್ಡ್ ಡ್ರಗ್ಸ್ ದಂಧೆ ಇಂದು ಸುಮಾರು ಐದುನೂರು ಬಿಲಿಯನ್ ಡಾಲರ್‌ನಷ್ಟು ದೊಡ್ಡ ವ್ಯವಹಾರ.

ಇದು ಭಯೋತ್ಪಾದಕರಿಗೆ, ಅಂಡರವಲ್ಡಗೆ ಹಣ ಸರಬರಾಜಾಗುವ ಜಾಲವಾದದ್ದರಿಂದ ಮತ್ತು ಕೆಲವು ದೇಶಗಳೇ ಇದರಲ್ಲಿ ಭಾಗಿ ಯಾಗಿರುವುದರಿಂದ ಇದನ್ನು ತಡೆಹಿಡಿಯಲು ಬೇರೆಯದೇ ಆದ ರೀತಿ ಕಾವಲಿನ, ಕಾನೂನಿನ, ವ್ಯವಸ್ಥೆಯ ಅವಶ್ಯಕತೆಯಿದೆ. ಒಮ್ಮೆ ಹಾರ್ಡ್ ಡ್ರಗ್ಸ್ ದುರವಸ್ಥೆ ದೇಶದಲ್ಲಿ ಬೆಳೆಯಿತೆಂದರೆ ಅದನ್ನು ಅಷ್ಟು ಸುಲಭದಲ್ಲಿ ನಿಯಂತ್ರಿಸಲು ಸಾಧ್ಯವಿಲ್ಲ. ಇದಕ್ಕೆ ಅಮೆರಿಕವೇ ಅಗ್ರ ಉದಾಹರಣೆ. ಇಂದು ಅಮೆರಿಕ ಸುಮಾರು ಐದು ಬಿಲಿಯನ್ ಡಾಲರ್ ಅನ್ನು ಈ ಹಾರ್ಡ್ ಡ್ರಗ್ಸ್ ನಿಯಂತ್ರಣಕ್ಕೆ ಪ್ರತೀ ವರ್ಷ ಮೀಸಲಿಡುತ್ತದೆ. ಇನ್ನು ಹಾರ್ಡ್ ಡ್ರಗ್ಸ್ ಚಟಕ್ಕೆ ಬಲಿಯಾದವರ ರಿಹ್ಯಾಬಿಲಿಟೇಷನ್‌ಗೆ, ಶುಶ್ರೂಷೆಗೆ ಹಲವು ಬಿಲಿಯನ್ ಹಣವನ್ನು ವಾರ್ಷಿಕವಾಗಿ ತೆಗೆದಿಡುವ ಸ್ಥಿತಿ ಅಮೆರಿಕದಲ್ಲಿ ನಿರ್ಮಾಣವಾಗಿದೆ.

ಇದರಿಂದ ನಾವು ಕಲಿಯಬೇಕಾದ ಪಾಠ ಸಾಕಷ್ಟಿದೆ. ಸಮಾಜಕ್ಕೆ ಡ್ರಗ್ಸ್ ಎನ್ನುವುದು ಒಂಥರಾ ಕ್ಯಾನ್ಸರ್ ಇದ್ದಂತೆ. ಆರಂಭದಲ್ಲಿಯೇ ಗುರುತಿಸಿ ಕತ್ತರಿಸಿ ಹಾಕಿದರೆ ಸಮಾಜ ಸುರಕ್ಷಿತ. ಅದನ್ನ ಬಿಟ್ಟು ಸಮಸ್ಯೆ ದೊಡ್ಡದಾದಾಗಲೇ ಅದನ್ನು ಮುಗಿಸುತ್ತೇವೆ ಎಂದರೆ ಅದು ಸಾಧ್ಯವಿಲ್ಲ. ಇಂದು ಭಾರತ ದಲ್ಲಿ ಡ್ರಗ್ಸ್ ಈ ಪ್ರಮಾಣದಲ್ಲಿ ಸುದ್ದಿ ಮಾಡುತ್ತಿರುವುದು ಒಂದು ರೀತಿ ಒಳ್ಳೆಯದೇ. ಆದರೆ ಇದು ನಮ್ಮ ಕಾನೂನು ವ್ಯವಸ್ಥೆಯ ಷೋ ಆ-ಗಷ್ಟೇ ಸೀಮಿತವಾದರೆ ಪ್ರಯೋಜನ ವಿಲ್ಲ. ಈ ಡ್ರಗ್ಸ್ ಮಾಫಿಯಾದ ಕೊನೆಯ ಕೊಂಡಿ ಎಂದರೆ ಗ್ರಾಹಕ. ಹಾಗಾಗಿ ಗ್ರಾಹಕರಾದ ಸಿನಿಮಾ ತಾರೆಯರನ್ನು ಶಿಕ್ಷಿಸುವುದು ಪರಿಹಾರವಲ್ಲ.

ಸಿನಿಮಾ ತಾರೆಯರು ಜೈಲಿಗೆ ಹೋದರೆ ಡ್ರಗ್ಸ್ ಬಳಸದಂತೆ ಸಮಾಜದಲ್ಲಿ ಸ್ವಲ್ಪ ಜಾಗ್ರತೆ ಮೂಡಬಹುದೇ ವಿನಃ ಅಸಲಿ ಸಮಸ್ಯೆ ಹಾಗೆಯೇ ಉಳಿದುಬಿಡುತ್ತದೆ. ಸಮಸ್ಯೆಯ ಮೂಲವಾದ ಸರಬರಾಜು ವ್ಯವಸ್ಥೆ ನಾಶವಾಗಬೇಕು ಮತ್ತು ದೇಶ ದೊಳಗೆ ಕಾನೂನು ಬಾಹಿರವಾಗಿ ಬರುವ ಮಾರ್ಗಗಳು ಬಂದ್ ಆಗಬೇಕು. ಇಲ್ಲದಿದ್ದರೆ ಇನ್ನೊಂದು ರೂಪದಲ್ಲಿ ಈ ಸಮಸ್ಯೆ ಮುಂದೊಂದು ದಿನ ನಮ್ಮೆದುರು ಬಂದು ನಿಲ್ಲುತ್ತದೆ. ಕೇವಲ ಸ್ಯಾಂಡಲ್‌ವುಡ್, ಬಾಲಿವುಡ್ ಅಷ್ಟೇ ಕ್ಲೀನ್ ಆದರೆ
ಸಾಕೇ? ಈ ವುಡ್‌ಗಳು ಸಮಾಜವನ್ನು ಮನರಂಜಿಸುವ ಒಂದು ಅಂಗವೇ ಹೊರತು ಇದೇ ಪೂರ್ಣ ಸಮಾಜವಲ್ಲವಲ್ಲ.

ಈ ಡ್ರಗ್ಸ್‌ನ ಮೂಲೋಚ್ಚಾಟನೆಯ ಕೆಲಸವಾಗದಿದ್ದಲ್ಲಿ ನಾವು ಕೂಡ ಅಮೆರಿಕದಂತೆ ಮುಂದೊಂದು ದಿನ ತಲೆ ಮೇಲೆ ಕೈ ಹೊತ್ತು ಲಕ್ಷ ಕೋಟಿ ಗಟ್ಟಲೆ ಖರ್ಚು ಮಾಡಿದರೂ ಒಮ್ಮೆ ಸಮಾಜದಲ್ಲಿ ಬಲಿಷ್ಠವಾಗಿ ಬೆಳೆದು ನಿಂತ ವ್ಯವಸ್ಥೆಯಾದ ಮೇಲೆ ಇದನ್ನು ಹೊಡಿದೊಡಿಸಲು ಸಾಧ್ಯವಿಲ್ಲ. ಹಲವರಿಗೆ ಮಾದರಿಯಾಗುವ ಸಿನಿಮಾ ತಾರೆಯರನ್ನು ಪ್ರಶ್ನಿಸುವುದು, ಶಿಕ್ಷೆಗೊಳಪಡಿಸುವುದು ಸರಿಯೇ. ಆದರೆ ಮೂಲ ಸಮಸ್ಯೆಯನ್ನು ಮರೆಮಾಚುವ ಕೆಲಸವಾಗಬಾರದೆನ್ನುವುದೇ ಇಲ್ಲಿನ ಕಳಕಳಿ. ಸಿನಿಮಾ ತಾರೆಯರ ಮತ್ತಿನ ಸುದ್ದಿ ಕೇವಲ ಗಮ್ಮತ್ತಿಗಷ್ಟೇ ಸೀಮಿತವಾಗದಿರಲಿ. ಅದರಾಚೆ ಈ ದುರ್ವ್ಯವಸ್ಥೆಯ ಬೇರನ್ನು ಕೀಳುವ ಕೆಲಸವಾಗಲಿ. ಮುಂದೆ ಬಂದೊದಗಬಹುದಾದ ಸಾಮಾಜಿಕ ಸಮಸ್ಯೆಯೊಂದರ ಹೊಸ್ತಿಲನ್ನು ಈಗಾಗಲೇ ದಾಟಿಯಾದ ಸತ್ಯದ ಅನುಭವ ಈ ಘಟನೆಯಿಂದ ನಮ್ಮನ್ನಾಳು ವವವರಧಿಗಲಿ.

Leave a Reply

Your email address will not be published. Required fields are marked *

error: Content is protected !!