Saturday, 23rd November 2024

ಡಾ.ವಿಷ್ಣು ಸ್ಮಾರಕಕ್ಕೆ ಪುಟಗೋಸಿಯಷ್ಟು ಜಾಗ ಬೆಂಗಳೂರಿನಲ್ಲಿಲ್ಲವಾ ?

ಇದೇ ಅಂತರಂಗ ಸುದ್ದಿ

vbhat@me.com

ನಾನು ಏಳೆಂಟು ವರ್ಷಗಳ ಹಿಂದೆ, ಅಮೆರಿಕದಲ್ಲಿ ಗ್ರ್ಯಾಂಡ್ ಕ್ಯಾನ್ಯನ್‌ಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಹೂವರ್ ಡ್ಯಾಮ್ ಪ್ರದೇಶದಲ್ಲಿ ಕೆಲ ಕಾಲ ತಂಗಿದ್ದೆ. ಅಲ್ಲಿ ನಾಯಿಗೊಂದು ಸ್ಮಾರಕ ಮಾಡಿರುವುದು ಕಾಣಿಸಿತು. ಹತ್ತಿರ ಹೋಗಿ ನೋಡಿದರೆ, ‘ನಿಗ್’ ಎಂಬ ನಾಯಿಯ ಜನ್ಮ ಚರಿತ್ರೆಯನ್ನೇ ಫಲಕದಲ್ಲಿ ಬರೆದಿಟ್ಟಿದ್ದರು. ಆ ಅಣೆಕಟ್ಟನ್ನು ನಿರ್ಮಿಸುವಾಗ, ಅಲ್ಲಿನ ಕಾರ್ಮಿಕರ ಜತೆಗಿದ್ದ ಲ್ಯಾಬ್ರಡರ್ ಜಾತಿಯ ನಾಯಿ ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು. ಒಂದು ದಿನ ಅದು ಸತ್ತು ಹೋಯಿತು.

ಆ ದಿನ ಅಣೆಕಟ್ಟು ನಿರ್ಮಾಣ ತಾಣದಲ್ಲಿರುವ ಸಾವಿರಾರು ಕಾರ್ಮಿಕರು ಕೆಲಸವನ್ನು ಮಾಡದೇ ಆ ನಾಯಿಯ ಸಾವಿಗೆ ಮರುಗಿದರು. ನಂತರ ಆ ಅಣೆಕಟ್ಟು ಪ್ರದೇಶದಲ್ಲಿ ‘ನಿಗ್’ಗೆ ಒಂದು ಸ್ಮಾರಕ ನಿರ್ಮಿಸಲು ನಿರ್ಧರಿಸಿದರು. ಇಂದಿಗೂ ಹೂವರ್ ಡ್ಯಾಮ್‌ಗೆ ಹೋದವರು ‘ನಿಗ್’ ಸ್ಮಾರಕಕ್ಕೆ ಹೋ ದೇ ಬರುವು
ದಿಲ್ಲ. ಆ ಅಣೆಕಟ್ಟಿನ ಮೇಲೆ ಹಾಲಿವುಡ್‌ನ ಅವೆಷ್ಟೋ ಸಿನಿಮಾಗಳ ಶೂಟಿಂಗ್ ನಡೆದಿವೆ. ಕೆಲವು ಸಿನಿಮಾಗಳಲ್ಲಿ ‘ನಿಗ್’ ಸ್ಮಾರಕವನ್ನೂ ಸೆರೆ ಹಿಡಿಯಲಾಗಿದೆ.
ಕಳೆದ ವರ್ಷ ನಾನು ಸ್ಕಾಟ್ಲ್ಯಾಂಡಿಗೆ ಹೋಗಿದ್ದೆ.

ಅಲ್ಲಿನ ರಾಜಧಾನಿ ಎಡಿನ್ಬರ್ಗ್‌ನಲ್ಲಿ ಓಡಾಡುವಾಗ, ನಾಲ್ಕನೇ ಜಾರ್ಜ್ ಸೇತುವೆ ಹತ್ತಿರ ಓಡಾಡುವಾಗ ಸ್ಕೈ ಟೆರಿಯರ್ ಜಾತಿಗೆ ಸೇರಿದ ನಾಯಿಯ ಕಂಚಿನ ಪುತ್ಥಳಿ ಕಾಣಿಸಿತು. ಇದನ್ನು ಗ್ರೇಯ್ ಫ್ರಿಯರ್ಸ್ ಬಾಬಿ ಎಂದೇ ಜನಪ್ರಿಯ. ಈ ನಾಯಿಯ ಪುತ್ಥಳಿಯ ಹಿಂದೆ ಒಂದು ಸಣ್ಣ ಪ್ರಸಂಗವಿದೆ. ಆ ನಾಯಿ ತನ್ನ
ಮಾಲೀಕ ಸತ್ತ (೧೮೭೨ರಲ್ಲಿ) ಹದಿನಾಲ್ಕು ವರ್ಷಗಳವರೆಗೆ ಆತನ ಸಮಾಧಿಯ ಬಳಿ ಕಣ್ಣೀರಿಡುತ್ತ, ಅದರ ಕಾವಲು ಕಾಯುತ್ತ ಕುಳಿತಿತ್ತಂತೆ. ಮಾಲೀಕ (ಜಾನ್ ಗ್ರೇ) ಸತ್ತ ಬಳಿಕ ಅವನ ಹೆಂಡತಿ ಮತ್ತು ಮಕ್ಕಳು ಅವನನ್ನು ನೆನಪಿಸಿಕೊಳ್ಳದಿದ್ದರೂ, ಆ ನಾಯಿ ಮಾತ್ರ ತನ್ನ ಮಾಲೀಕನನ್ನು ನೆನೆದು ಕಣ್ಣೀರುಡುತ್ತ ಕುಳಿತಿರುತ್ತಿತ್ತಂತೆ.

ಆ ನಾಯಿಯ ಸ್ವಾಮಿನಿಷ್ಠೆ ನೋಡಿ ಪ್ರಭಾವಿತನಾದ ವಿಲಿಯಂ ಬ್ರೂಡಿ ಎಂಬಾತ ಆ ಶ್ವಾನದ ಕಂಚಿನ ಪುತ್ಥಳಿ ನಿರ್ಮಿಸಿದ. ಅದಾದ ನಂತರ ಈ ನಾಯಿ ಅವೆಷ್ಟು ಪುಸ್ತಕಗಳಲ್ಲಿ, ಸಿನಿಮಾ ಗಳಲ್ಲಿ ಕಾಣಿಸಿಕೊಂಡಿದೆಯೋ, ಲೆಕ್ಕವಿಟ್ಟವರಾರು? ಇಂದಿಗೂ ಆ ನಗರಕ್ಕೆ ಹೋದವರು ಆ ನಾಯಿಯ ಪುತ್ಥಳಿ ಮುಂದೆ ನಿಂತು ಫೋಟೋ, ಸೆಲ್ಫಿ ತೆಗೆಸಿಕೊಳ್ಳದೇ ಬರುವುದಿಲ್ಲ. ‘ಆ ನಗರದ ನೋಡಲೇಬೇಕಾದ ಹತ್ತು ತಾಣ’ಗಳಲ್ಲಿ ‘ಗ್ರೇಯ್ ಫ್ರಿಯರ್ಸ್ ಬಾಬಿ’ ಕೂಡ ಒಂದಾಗಿರುವುದು ಗಮನಾರ್ಹ. ನಾಯಿಯ ಸ್ವಾಮಿನಿಷ್ಠೆ ಒಂದೆಡೆಯಾದರೆ, ಆ ನಗರವನ್ನು ರೂಪಿಸಿದ, ಅಲ್ಲಿ ವಾಸಿಸುವ ಜನರ ಮನಸ್ಥಿತಿಗೆ ಆ ಪುತ್ಥಳಿ ಕನ್ನಡಿ ಹಿಡಿದಂತಿದೆ.
ಒಂದು ನಾಯಿಯ ಉದಾತ್ತ ಗುಣವನ್ನು ಗಮನಿಸುವ, ಕೊಂಡಾಡುವ, ಗೌರವಿಸುವ, ಅದೊಂದು ಆದರ್ಶವೆಂದು ಪರಿಗಣಿಸಿ, ಮುಂದಿನ ಪೀಳಿಗೆಗೆ ಮೇಲ್ಪಂಕ್ತಿ ಹಾಕುವ ಪರಮೋದ್ದೇಶವನ್ನು ಆ ಪುತ್ಥಳಿಯ ಸ್ಥಾಪನೆಗೆ ಮುಂದಾದವರಲ್ಲಿ ಕಾಣಬಹುದು. ಆ ಆದರ್ಶ ಪರಂಪರೆಯನ್ನು ಇಂದಿಗೂ ಆ ನಗರ ಮತ್ತು ನಗರವಾಸಿ
ಗಳು ಮುಂದುವರಿಸಿಕೊಂಡು ಬರುತ್ತಿರುವುದು ಸಹ ಗಮನಾರ್ಹವೇ.

ನಾನು ಈ ಪ್ರಸಂಗಗಳನ್ನು ಪ್ರಸ್ತಾಪಿಸಲು ಕಾರಣವಿದೆ. ಸತ್ತವರಿಗೆ ಸ್ಮಾರಕ ಅಥವಾ ಸಮಾಧಿ ನಿರ್ಮಿಸುವುದು ಪರಮ ಪವಿತ್ರ ಕಾರ್ಯಗಳಂದು. ಒಂದು ನಗರ ಹೇಗಿದೆ ಎಂಬುದನ್ನು ಅಲ್ಲಿನ ಸ್ಮಾರಕ, ಸಮಾಧಿಗಳಿಂದಲೇ ಹೇಳಬಹುದು. ಅದು ಆ ನಗರದ ಸಂಸ್ಕೃತಿ, ಮನಸ್ಸಿನ ಪ್ರತಿಬಿಂಬ. ರಷ್ಯಾದ ಯಾವ ನಗರಕ್ಕೆ
ಹೋದರೂ, ರಷ್ಯನ್ ಸಾಹಿತ್ಯದ ಪಿತಾಮಹ, ಕವಿ, ನಾಟಕಕಾರ, ಕಾದಂಬರಿಕಾರ ಅಲೆಗ್ಸಾಂಡರ್ ಪುಷ್ಕಿನ್ ಪುತ್ಥಳಿಯನ್ನು ಕಾಣ ಬಹುದು. ಯಾವುದಾದರೂ ನಗರದಲ್ಲಿ ಆತನ ಪುತ್ಥಳಿ ಇಲ್ಲದಿದ್ದರೆ, ಅಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಇಷ್ಟಪಡುವವರು ಇಲ್ಲ ಎಂಬ ಭಾವನೆ ಅಲ್ಲಿನ ಜನರಲ್ಲಿ ನೆಲೆಸಿದೆ. ಸೇಂಟ್ ಪೀಟರ್ಸ್ ಬರ್ಗ್ ನಗರವೊಂದರ ಪುಷ್ಕಿನ್‌ನ ಎಂಟು ಪುತ್ಥಳಿಗಳಿವೆ. ಎಲ್ಲ ನಗರಗಳಲ್ಲಿ ಪುತ್ಥಳಿ ಸ್ಥಾಪಿಸಿದ್ದರಿಂದ ಸತ್ತ ಪುಷ್ಕಿನ್‌ಗೆ ಏನೂ ಆಗಿಲ್ಲ. ಆದರೆ ಅಲ್ಲಿನ ಜನರ ಮನಸಿನಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆ, ಓದು ಪ್ರಸಾರಕ್ಕೆ ಈ ಪುತ್ಥಳಿ ಪ್ರೇರಣೆಯಾಗಿರುವುದು ಸುಳ್ಳಲ್ಲ.

ಅಷ್ಟಕ್ಕೂ ಒಂದು ಪುತ್ಥಳಿ ಸ್ಥಾಪಿಸುವ ಉದ್ದೇಶವೇ ಅದು. ಸತ್ತವರನ್ನು ದೊಡ್ಡವರನ್ನಾಗಿ ಮಾಡುವುದು ಅದರ ಉದ್ದೇಶ ಅಲ್ಲ. ಬದುಕಿದ್ದವರಿಗೆ ಅವರ ಆದರ್ಶಗಳನ್ನು ಹೇಳುವುದು, ಪುತ್ಥಳಿ ಅಥವಾ ಸ್ಮಾರಕವನ್ನು ನೋಡಿದಾಗಲೆಲ್ಲ ನಮ್ಮ ಜನಜೀವನವನ್ನು ರೂಪಿಸಿದವರ ಸ್ಮರಣೆ ಮಾಡಿಕೊಳ್ಳುವುದು, ತನ್ಮೂಲಕ ಒಂದಷ್ಟು ಉದಾತ್ತ ಸ್ಪೂರ್ತಿಯನ್ನು ಪಡೆಯುವುದು ಆಶಯ. ಈ ಕಾರಣದಿಂದ ಸುಸಂಸ್ಕೃತವಾದ ನಗರ, ತನ್ನ ಊರಿನಲ್ಲಿ ಸಾಮಾನ್ಯರ,
ಅಸಾಮಾನ್ಯರ ಸ್ಮಾರಕ, ಸಮಾಽ, ಪುತ್ಥಳಿ ನಿರ್ಮಿಸಿ ತನ್ನ ಘನಪರಂಪರೆಯನ್ನು ಮೆರೆಯುತ್ತದೆ.

ಈಗ ನಾನು ಇನ್ನಷ್ಟು ಸನಿಹ ಬಂದು ಒಂದು ವಿಷಯ ಪ್ರಸ್ತಾಪಿಸುತ್ತೇನೆ. ಅದೇನೆಂದರೆ, ಕನ್ನಡದ ಮೇರುನಟ, ಡಾ.ರಾಜಕುಮಾರ ನಂತರದ ಸ್ಥಾನವನ್ನು ಕನ್ನಡಿಗರ ಹೃದಯದಲ್ಲಿ ಗಿಟ್ಟಿಸಿದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕದ ವಿಷಯ. ಅವರು ನಿಧನರಾಗಿ ಹದಿಮೂರು ವರ್ಷಗಳಾದರೂ ರಾಜಧಾನಿ
ಬೆಂಗಳೂರು ನಗರದಲ್ಲಿ ಅವರಿಗೊಂದು ಸ್ಮಾರಕವನ್ನು ನಿರ್ಮಿಸದಿರುವುದು ಇಲ್ಲಿನ ನಗರವಾಸಿಗಳ, ಸರಕಾರಗಳ ಮನಃಸ್ಥಿತಿಯನ್ನು ತೋರಿಸುತ್ತದೆ. ಸ್ಮಾರಕ ಕಟ್ಟುವುದರಿಂದ ಡಾ.ವಿಷ್ಣುವರ್ಧನ್ ಎದ್ದು ಕುಳಿತುಕೊಳ್ಳುವುದಿಲ್ಲ. ಆದರೆ ಕಟ್ಟದಿದ್ದರೆ, ನಾವು ಬದುಕಿದ್ದರೂ ಸತ್ತಂತೆ.

ಗಮನಿಸಬೇಕಾಗದ ಸಂಗತಿಯೆಂದರೆ, ಸ್ಮಾರಕ ಬೇಕಿರುವುದು ಡಾ.ವಿಷ್ಣು ಅವರಿಗಲ್ಲ. ಅದು ಬೇಕಿರುವುದು ನಮಗೆ ಮತ್ತು ಮುಂದಿನ ಪೀಳಿಗೆಗೆ. ಇಂಥ ಒಬ್ಬ ಮೇರುನಟನಿದ್ದ ಎಂದು ಹೇಳಿಕೊಳ್ಳಲು, ಅವನ ಸ್ಮರಣೆ ಮಾಡಲು ಸ್ಮಾರಕ ಬೇಡವೇ? ಅಂಥ ಒಬ್ಬ ನಟನಿಗೆ ಗೌರವ ತರುವಂಥ ಸ್ಮಾರಕ ಕಟ್ಟುವಷ್ಟು ಪುಟಗೋಸಿ ತುಂಡಿನಷ್ಟು ಜಾಗ ಬೆಂಗಳೂರಿನಲ್ಲಿ ಇಲ್ಲವಾ? ಸ್ಮಾರಕ ಮಾಡುವುದರಿಂದ ಡಾ.ವಿಷ್ಣು ಇನ್ನೂ ದೊಡ್ಡವರಾಗುವುದಿಲ್ಲ. ಕಟ್ಟದಿದ್ದರೆ ನಾವು ಖಂಡಿತ ವಾಗಿಯೂ ಸಣ್ಣವರಾಗುತ್ತೇವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಿ. ಇಲ್ಲಿ ತನಕ ಆದ ತಪ್ಪನ್ನು ಸರಿಪಡಿಸಲಿ.

ಪ್ರಣಬ್ ಕುರಿತು ಮಗಳು

ನಿಮ್ಮ ತಂದೆಗೆ ‘ಭಾರತ ರತ್ನ’ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮಕ್ಕೆ ಆಮಂತ್ರಣವನ್ನು ನೀಡಿದರೂ ಸೋನಿಯಾ ಗಾಂಧಿ ಯವರಾಗಲಿ, ರಾಹುಲ್ ಗಾಂಧಿಯವರಾಗಲಿ, ಭಾಗವಹಿಸಲಿಲ್ಲ. ಈ ಕುರಿತು ನಿಮ್ಮ ತಂದೆಯವರಿಗೆ ಏನು ಅನಿಸಿತ್ತು? ದಿವಂಗತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮಗಳು ಶರ್ಮಿಷ್ಟ ಮುಖರ್ಜಿಯವರಿಗೆ ಇತ್ತೀಚೆಗೆ ‘ದಿ ವೀಕ್’ ವಾರಪತ್ರಿಕೆಯ ಪತ್ರಕರ್ತೆ ಸೋನಿ ಮಿಶ್ರಾ ಕೇಳಿದಳು. ಕಳೆದ ವಾರ ಶರ್ಮಿಷ್ಟ ಅವರು ಬರೆದ ‘ಪ್ರಣಬ, ಮೈ ಫಾದರ್’ ಎಂಬ ಪುಸ್ತಕ ಬಿಡುಗಡೆಯಾದ ಹಿನ್ನೆಲೆಯಲ್ಲಿ, ಸೋನಿ ಮಿಶ್ರಾ ಮಾಡಿದ ಸಂದರ್ಶನದಲ್ಲಿ ಆ ಪ್ರಶ್ನೆ ಕೇಳಿದ್ದರು.

ಅದಕ್ಕೆ ಶರ್ಮಿಷ್ಟ ನೀಡಿದ ಉತ್ತರ ಹೀಗಿತ್ತು – “ಈ ವಿಷಯದ ಕುರಿತು ನಾನು ನನ್ನ ತಂದೆಯವರನ್ನು ಕೇಳಿದ್ದೆ. ಅದಕ್ಕೆ ಅವರು, ‘ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ನಿಧನರಾದಾಗ, ಅವರ ಪಾರ್ಥಿವ ಶರೀರವನ್ನು ಎಐಸಿಸಿ ಪ್ರಧಾನ ಕಚೇರಿಯೊಳಗೆ ತರುವುದಕ್ಕೂ ಅವಕಾಶ ನೀಡಲಿಲ್ಲ. ಅವರು ಪ್ರಧಾನಿಯಷ್ಟೇ ಅಲ್ಲ, ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದರು. ಎಐಸಿಸಿ ಪ್ರಧಾನ ಕಚೇರಿಯೊಳಗೆ ರಾವ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡುವಂತೆ ಸೋನಿಯಾ ಗಾಂಧಿಯವರಿಗೆ ವಿನಂತಿ ಮಾಡಿಕೊಂಡೆ. ಆದರೆ ಅವರು ಯಾವ ಪ್ರತಿಕ್ರಿಯೆಯನ್ನೇ ನೀಡಲಿಲ್ಲ. ಕೊನೆಗೂ ನನ್ನ ಮನವಿಗೆ ಪುರಸ್ಕಾರ ಸಿಗಲಿಲ್ಲ.

ನರಸಿಂಹರಾವ್ ವಿಷಯದಲ್ಲಿ ಸೋನಿಯಾ ಮತ್ತು ಅವರ ಮಕ್ಕಳು ಉದಾರವಾಗಿ ನಡೆದುಕೊಳ್ಳಬೇಕಿತ್ತು’ ಎಂದು ಹೇಳಿದ್ದರು. ನರಸಿಂಹರಾಯರ ವಿಷಯದಲ್ಲಿ ಹಾಗೆ ನಡೆದುಕೊಂಡವರು, ನನ್ನ ತಂದೆಯವರ ವಿಷಯದಲ್ಲಿ ಭಿನ್ನವಾಗಿ ವರ್ತಿಸುತ್ತಾರೆ ಎಂದು ನಾನು ನಿರೀಕ್ಷೆ ಮಾಡಲಾರೆ.” ಇನ್ನೊಂದು ಪ್ರಶ್ನೆ – ‘ನೆಹರು ಆಳ್ವಿಕೆ ಬಗ್ಗೆ ಮೋದಿ ಸರಕಾರ ತಾಳಿರುವ ಅಭಿಪ್ರಾಯದ ಕುರಿತು ಪ್ರಣಬ್ ಮುಖರ್ಜಿ ಅವರಿಗೆ ಒಲವಿರಲಿಲ್ಲವಂತೆ, ನಿಜವಾ?’ ಅದಕ್ಕೆ ಶರ್ಮಿಷ್ಟ ಹೇಳಿದ್ದು – ನಿಜ, ಆ ಕುರಿತು ನನ್ನ ತಂದೆಯ ವರಿಗೆ ಬೇಸರವಿತ್ತು. ಅವರ ಡೈರಿಯಿಂದ ತಿಳಿದು ಬಂದಿದ್ದೇನೆಂದರೆ, ಪಂಡಿತ್ ನೆಹರು ಅವರು ಈ ದೇಶಕ್ಕೆ ನೀಡಿದ ಕೊಡುಗೆ
ಯನ್ನು ಅಲಕ್ಷಿಸಬಾರದು ಎಂದು ನನ್ನ ತಂದೆಯವರು ಮೋದಿ ಯವರಿಗೆ ಹೇಳಿದ್ದುಂಟು. ಕಾಂಗ್ರೆಸಿನ ಪ್ರಧಾನಿಗಳು ಸೇರಿದಂತೆ, ದೇಶದ ಇತರ ಮಾಜಿ ಪ್ರಧಾನಿಗಳ ಬಗ್ಗೆ ಸೋನಿಯಾ-ರಾಹುಲ್ ತಾಳಿದ ನಿಲುವಿನ ಬಗ್ಗೆಯೂ ಅವರಿಗೆ ಸಮಾಧಾನ ಇರಲಿಲ್ಲ.

ವೀರ ಸಾವರ್ಕರರನ್ನು ನಿರಂತರ ಹಳಿಯುವುದನ್ನು ಅವರು ವಿರೋಧಿಸಿದರು. ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ್ದು ಕಾಂಗ್ರೆಸ್ ಪಕ್ಷ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಿರುವಾಗ ಪ್ರಜಾಪ್ರಭುತ್ವದ ಗುಣಲಕ್ಷಣ, ಮೌಲ್ಯಗಳನ್ನು ಎತ್ತಿ ಹಿಡಿಯ ಬೇಕಾದುದು ಸಹ ಕಾಂಗ್ರೆಸಿನ ಕರ್ತವ್ಯವಲ್ಲವೇ ಎಂದು ಅವರು
ಅನೇಕ ಸಲ ಹೇಳಿದ್ದುಂಟು. ಇನ್ನೊಂದು ಪ್ರಶ್ನೆ – ‘ಇಂದಿರಾ ಗಾಂಽ ಬಗ್ಗೆ ಹೊಂದಿದ ಕುರುಡು ನಿಷ್ಠೆ ಸರಿ ಅಲ್ಲ ಎಂದು ನಿಮ್ಮ ತಂದೆಯವರಿಗೆ ಕೊನೆಯಲ್ಲಿ ಅನಿಸಿತ್ತಂತೆ, ನಿಜವಾ?’ ಅದಕ್ಕೆ ಶರ್ಮಿಷ್ಟ ನೀಡಿದ ಉತ್ತರ – ಇಂದಿರಾ ಗಾಂಧಿ ಜತೆ ಕಳೆದ ಅವಧಿ ತಮ್ಮ ಜೀವನದ ಸುವರ್ಣ ದಿನಗಳು ಎಂದು ನನ್ನ
ತಂದೆ ಅನೇಕ ಸಂದರ್ಭಗಳಲ್ಲಿ ಹೇಳಿದ್ದುಂಟು. ಇಂದಿರಾ ಅವರು ತಮಗೆ ರಾಜಕೀಯದ ಅಂತರಂಗ, ಒಳಸುಳಿವು ಮತ್ತು ರಾಜತಾಂತ್ರಿಕತೆಯ ಒಳನೋಟಗಳನ್ನಷ್ಟೇ ಅಲ್ಲ, ಸಂಸತ್ತಿನಲ್ಲಿ ಯಾವ ರೀತಿ ವರ್ತಿಸಬೇಕು, ಯಾವ ಪೋಷಾಕು ಧರಿಸಬೇಕು ಎಂಬುದನ್ನು ಹೇಳಿಕೊಡುತ್ತಿದ್ದರು. ಇಂದಿರಾ ಬಗ್ಗೆ ಅವರ ಅಭಿಮಾನ ಯಾವತ್ತೂ ಕ್ಷೀಣಿಸಲಿಲ್ಲ.

ಐವತ್ತು ವರ್ಷಗಳ ಬಳಿಕ, ಅದರಲ್ಲೂ ಕಾಂಗ್ರೆಸ್ ಪಕ್ಷ ದುರ್ಬಲವಾಗುತ್ತಿರುವಾಗ, ಅವರು ಆತ್ಮನಿರೀಕ್ಷೆ ಮಾಡಿಕೊಂಡಿದ್ದಿದೆ. ಅವರು ಇಂದಿರಾರ ಕಟ್ಟಾ ಅಭಿಮಾನಿಯಾಗಿದ್ದರು. ಆದರೆ ಅಽಕಾರದ ಕೇಂದ್ರೀಕರಣ, ರಾಜ್ಯ ನಾಯಕರನ್ನು ಮೂಲೆಗುಂಪು ಮಾಡಿದ್ದು, ಪಕ್ಷದ ಸಾಂಸ್ಥಿಕ ಚುನಾವಣೆಯನ್ನು ನಿಲ್ಲಿಸಿದ್ದು, ತಮಗೆ ಬೇಕಾದವರನ್ನು ಆಯಕಟ್ಟಿನ ಜಾಗಕ್ಕೆ ಆರಿಸುವ ಸಂಸ್ಕೃತಿಯ ಬಗ್ಗೆ ಅವರಿಗೆ ಅಸಮಾಧಾನವಿತ್ತು.

ಯಾರೂ, ಯಾಕೆ ಯೋಚಿಸಿಲ್ಲ?
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ವರ್ಷಕ್ಕೆ ಎರಡು ಬಾರಿ ‘ಸಿನಾರಿಯೋ ಪ್ಲಾನಿಂಗ್’ ಎಂಬ ಹೆಸರಿನಲ್ಲಿ ನಮ್ಮ ಭವಿಷ್ಯದ ದಿನಗಳು ಹೇಗಿರುತ್ತವೆ, ಹೇಗಿರಬೇಕು ಎಂಬ ವಿಷಯದ ಕುರಿತು ಒಂದು ವಾರ ಕಾಲ ಸಂವಾದ ಕಾರ್ಯಕ್ರಮ ನಡೆಯುತ್ತದೆ. ವಿಶ್ವದ ಖ್ಯಾತ ಮುನ್ನೋಟಕಾರರು, ಭವಿಷ್ಯದ ಕುರಿತು ಆಳವಾಗಿ
ಯೋಚಿಸುವವರು ಅಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತಾರೆ. ಕಳೆದ ‘ಸಿನಾರಿಯೋ ಪ್ಲಾನಿಂಗ್’ ಕಾರ್ಯಕ್ರಮದಲ್ಲಿ ಮುನ್ನೋಟ ಕಾರರೊಬ್ಬರು ತಮ್ಮ ವಿಚಾರಗಳನ್ನು ‘ಪಾಸ್ ಪೋರ್ಟ್’ ಬಗ್ಗೆ ಹರಿಯಬಿಟ್ಟರು.

‘ಬದಲಾವಣೆ ಎನ್ನುವುದು ಯಾವ ದೇಶವನ್ನೂ ಬಿಟ್ಟಿಲ್ಲ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಮ್ಮ ಮುಂದೆ ಹೊಸ ಜಗತ್ತು ತೆರೆದುಕೊಂಡಿದೆ. ನಾವು ಎರಡು ದಶಕಗಳ ಹಿಂದೆ, ಯಾವ ಯಾವ ವಸ್ತುಗಳನ್ನು ಬಳಸುತ್ತಿದ್ದೆವೋ, ಅವೆಲ್ಲ ಈಗ ಕಣ್ಮರೆಯಾಗಿವೆ. ಆದರೆ ನಾವು ಕಳೆದ ಕಾಲು ಶತಮಾನದಿಂದ ಯಾವ ಪಾಸ್ ಪೋರ್ಟನ್ನು ಬಳಸುತ್ತಿzವೋ, ಇಂದಿಗೂ ಅದನ್ನೇ ಬಳಸುತ್ತಿದ್ದೇವೆ, ಯಾಕೆ? ಇನ್ನು ಎಷ್ಟು ವರ್ಷ ಇದೇ ಓಬೀರಾಯನ ಕಾಲದ ಪಾಸ್ ಪೋರ್ಟನ್ನು ಬಳಸಬೇಕು? ಈ ಕುರಿತು ಯಾರೂ ಏಕೆ ಚಿಂತಿಸುತ್ತಿಲ್ಲ?’ ಎಂಬ ಪ್ರಶ್ನೆಯನ್ನು ಅವರು ಎತ್ತಿದರು. ‘ಹೌದಲ್ಲವಾ, ಪಾಸ್‌ಪೋರ್ಟ್ ಮಾತ್ರ ಕಾಲನ ಹೊಡೆತಗಳನ್ನು ಸಮರ್ಥವಾಗಿ ಎದುರಿಸಿ, ತನ್ನ ಸ್ವರೂಪವನ್ನು ಹಾಗೇ ಉಳಿಸಿಕೊಂಡಿದೆ’ ಎಂದು ಅನಿಸಿತು.

ಅದಕ್ಕೆ ಆ ಮುನ್ನೋಟಕಾರರು ಹೇಳಿದರು – ‘ಜಗತ್ತಿನ ಎಲ್ಲ ಪ್ರಮುಖ ಕಂಪನಿಗಳು ಕಾಗದರಹಿತ ಜಗತ್ತಿನ ಬಗ್ಗೆ ಮಾತಾಡುತ್ತವೆ. ಆದರೆ ಪಾಸ್ ಪೋರ್ಟ್ ಮಾತ್ರ ಇನ್ನೂ ಕಿರುಪುಸ್ತಕ ರೂಪದಲ್ಲಿಯೇ ಇದೆ. ಹಣವನ್ನು ಮೊಬೈಲ್ ಮೂಲಕ ವರ್ಗಾಯಿಸುವಷ್ಟರ ಮಟ್ಟಿಗೆ ತಂತ್ರeನ ಬೆಳೆದಿರುವಾಗ, ನಾವೇಕೆ ನಮ್ಮ
ಪಾಸ್ ಪೋರ್ಟನ್ನು ಮೊಬೈಲಿನಲ್ಲಿ ಇಟ್ಟುಕೊಳ್ಳಬಾರದು? ಅಂಥ ತಂತ್ರeನವನ್ನು ಯಾಕೆ ಅಭಿವೃದ್ಧಿಪಡಿಸಬಾರದು? ಅಥವಾ ನಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಲು ಅನುಕೂಲವಾಗುವಂಥ, ವಿಸಿಟಿಂಗ್ ಕಾರ್ಡ್ ಗಾತ್ರದಲ್ಲಿ ಯಾಕೆ ವಿನ್ಯಾಸಗೊಳಿಸಬಾರದು? ಇದು ಇಷ್ಟು ಸರಳವಾಗಿದ್ದರೂ ಜಗತ್ತಿನಲ್ಲಿ ಯಾರೂ ಇದನ್ನು
ಅಭಿವೃದ್ಧಿಪಡಿಸಲು ಮುಂದಾಗದಿರುವುದು ಆಶ್ಚರ್ಯವೇ ಸರಿ.’

‘ಆಗಾಗ ವಿದೇಶ ಪ್ರಯಾಣ ಮಾಡುವವರ ಪಾಸ್ ಪೋರ್ಟ್ ಹಾಳೆಗಳು ಸೀಲುಗಳಿಂದ ತುಂಬಿ ಹೋಗಿ ಪ್ರತಿ ಎಂಟು ತಿಂಗಳು ಅಥವಾ ಒಂದು ವರ್ಷಕ್ಕೆ ನವೀಕರಿಸಬೇಕಾಗುತ್ತದೆ. ಇದರ ಬದಲು ಪರ್ಸಿನಲ್ಲಿಟ್ಟುಕೊಳ್ಳಲು ಸಹಾಯಕವಾಗುವ, ವಿಸಿಟಿಂಗ್ ಕಾರ್ಡ್ ಗಾತ್ರದ ಪಾಸ್ ಪೋರ್ಟ್ ಅನ್ನು ಜಾರಿಗೆ ತಂದರೆ, ಬಳಕೆದಾರರಿಗೆ ಅನುಕೂಲ. ಇದರಿಂದ ನಕಲಿ ಪಾಸ್ ಪೋರ್ಟ್ ಬಳಕೆಯನ್ನೂ ತಪ್ಪಿಸಬಹುದು. ಇದರಿಂದ ಪಾಸ್ ಪೋರ್ಟ್ ಬಳಕೆದಾರರ ಮಾಹಿತಿಯನ್ನು ಸೆಂಟ್ರಲ್ ಸರ್ವರ್ ಮೂಲಕ ತಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಪಾಸ್ ಪೋರ್ಟಿನ ಕಾಗದ ಖಾಲಿಯಾಯಿತು ಎಂಬ ಸಮಸ್ಯೆ ಎದುರಾಗುವುದೇ ಇಲ್ಲ. ಮನಸ್ಸು ಮಾಡಿದರೆ ಒಂದು ವರ್ಷದಲ್ಲಿ ಇದನ್ನು ಜಗತ್ತಿನಾದ್ಯಂತ ಜಾರಿಗೆ ತರುವುದು ಕಷ್ಟವಲ್ಲ’ ಎಂದು ಅವರು ಹೇಳಿದರು.

ಆಗ ಎಲ್ಲರ ಮನಸ್ಸಿನಲ್ಲೂ ಮೂಡಿದ ಉದ್ಗಾರ – ಹೌದಲ್ಲವಾ? ಇಷ್ಟು ಸಣ್ಣ ವಿಷಯದ ಬಗ್ಗೆ ಯಾರೂ, ಯಾಕೆ ಯೋಚಿಸಿಲ್ಲ?

ಯೋಗಿಜೀ ನೀಡಿದ ಟಿಪ್ಸ್
ಕಳೆದ ವಾರ ಬೆಂಗಳೂರಿನ ಪಂಚತಾರಾ ಹೋಟೆಲೊಂದರಲ್ಲಿ ಯೋಗಿ ದುರ್ಲಭಜೀ ಅವರ ಜತೆ ಕಳೆಯುವ ಅವಕಾಶ ಸಿಕ್ಕಿತ್ತು. ಸುಮಾರು ಒಂದೂವರೆ ಗಂಟೆ ಕಾಲ ಹರಟೆ ಹೊಡೆದು, ತಲಾ ಒಂದು ಕಪ್ ಕಾಫಿ ಹೀರಿzಯಿತು. ಪಂಚತಾರಾ ಹೋಟೆಲು ಗಳಲ್ಲಿ ಜನ ಕುಳಿತು ಹರಟೆ ಹೊಡೆಯಲು, ವ್ಯವಹಾರ ಮಾತುಕತೆ
ನಡೆಸಲು ಹೋಗುತ್ತಾರೆ. ನಿಜವಾಗಿಯೂ ಹೊಟ್ಟೆ ಹಸಿದವರು ಅಲ್ಲಿಗೆ ಹೋಗುವುದಿಲ್ಲ. ಕಾಫಿ ಕುಡಿಯಬೇಕೆನಿಸಿದವರು ಸಾಮಾನ್ಯ ಹೋಟೆಲುಗಳಿಗೆ ಹೋಗುತ್ತಾರೆ.

ಕಾರಣ, ಪಂಚತಾರಾ ಹೋಟೆಲಿನ ಕಾಫಿ ಚೆನ್ನಾಗಿರುವುದಿಲ್ಲ. ಕಿಚನ್‌ನಿಂದ ಟೇಬಲ್ ಬಹಳ ದೂರದಲ್ಲಿರುವುದರಿಂದ ಕಾಫಿಯನ್ನು ತರುವ ಹೊತ್ತಿಗೆ ಆರಿರುತ್ತದೆ. ಯಾವ ಹೋಟೆಲಿನಲ್ಲೂ ಕಾಫಿಯನ್ನು ಪೂರ್ತಿಯಾಗಿ ಮಾಡುವುದಿಲ್ಲ. ನಮ್ಮ ಮುಂದೆ ಕಾಫಿ ಡಿಕಾಕ್ಷನ್, ಹಾಲು ಮತ್ತು ಸಕ್ಕರೆಯನ್ನು ಪ್ರತ್ಯೇಕವಾಗಿ ತಂದು ಇಡುತ್ತಾರೆ. ಇವು ಯಾವ ಪ್ರಮಾಣದಲ್ಲಿ ಬೇಕೋ, ನಾವೇ ಬೆರೆಸಿಕೊಂಡು ಕುಡಿಯಬೇಕು. ಅಷ್ಟೊತ್ತಿಗೆ ಕಾಫಿ ಶರಬತ್ತಿನಂತೆ ತಣ್ಣಗಾಗಿರುತ್ತದೆ. ನೊರೆಯಾಡುವ ಕಾಫಿಯನ್ನು ಯಾವ ಪಂಚತಾರಾ ಹೋಟೆಲಿನಲ್ಲೂ ಕೊಡುವುದಿಲ್ಲ. ಇದು ನನಗೆ ಇಂದಿಗೂ ಅಚ್ಚರಿಯೇ. ಆದರೆ ಅಲ್ಲಿಗೆ ಹೋಗಿದ್ದಕ್ಕೆ ಬಹುತೇಕರು ಕಾಟಾಚಾರಕ್ಕೆ ಕೆಟ್ಟ ಕಾಫಿಯನ್ನು ಕುಡಿದು ಭಾರಿ ಹಣ ತೆತ್ತು ಬರುತ್ತಾರೆ. ಅಲ್ಲಿ ಕುಡಿಯುವ ಒಂದು ಕಾಫಿಗೆ ತೆರುವ ಬೆಲೆಯಲ್ಲಿ, ‘ದರ್ಶಿನಿ’ಗಳಲ್ಲಿ ಇಡೀ ತಿಂಗಳು ಕುಡಿಯಬಹುದು.

ಬರೀ ಕಾಫಿ ಕುಡಿದು ‘ಭಾರಿ’ ಬಿಲ್ ಕೊಟ್ಟು ಬರುವವರು ಸಾಮಾನ್ಯವಾಗಿ ಟಿಪ್ಸ್ ಇಡುವುದಿಲ್ಲ. ಪಂಚತಾರಾ ಹೋಟೆಲಿಗೆ ಒಬ್ಬರೇ ಹೋಗುವವರು ಕಾಫಿ ಕುಡಿಯುವುದಿಲ್ಲ. ಕಾರಣ ಕಾಫಿ ಕುಡಿಯುವುದು ಅವರ ಉದ್ದೇಶ ಆಗಿರುವುದಿಲ್ಲ. ತಮ್ಮ ಜತೆ ಮತ್ತೊಬ್ಬರಿದ್ದಾಗ, ಕಾಟಾಚಾರಕ್ಕೆ ಕಾಫಿ ಕುಡಿಯುವುದು ಅನಿವಾರ್ಯ ವಾಗುತ್ತದೆ. ಆಗ ಆ ಎರಡು ಕಾಫಿಯಿಂದ ಕನಿಷ್ಠ ಸಾವಿರ ರುಪಾಯಿಯಾದರೂ ಬಿಲ್ ಆಗುತ್ತದೆ. ಬಿಲ್ ಎತ್ತುವುದು ಶಿವಧನಸ್ಸನ್ನು ಎತ್ತುವುದಕ್ಕಿಂತ ಭಾರ. ಹೀಗಾಗಿ ಟಿಪ್ಸ್ ಇಡುವುದಿಲ್ಲ.

ಆದರೆ ಅಂದು ಯೋಗಿ ದುರ್ಲಭಜೀ ಎರಡು ಕಾಫಿಗೆ ಸಾವಿರದ ಎರಡು ನೂರು ರುಪಾಯಿ ತೆತ್ತಿದ್ದಲದೇ, ಐನೂರು ರುಪಾಯಿ ಟಿಪ್ಸ್ ಇಟ್ಟರು. ನನಗೆ ಅವರ ಈ ನಡೆ ಸೋಜಿಗವೆನಿಸಿತು. ‘ಯೋಗಿಜೀ, ಯಾಕೆ ಇಷ್ಟೊಂದು ಟಿಪ್ಸ್?’ ಎಂದು ಸಹಜವಾಗಿ ಕೇಳಿದೆ. ‘ನನಗೆ ಸಂತೋಷವಾಯಿತು, ಅದಕ್ಕಾಗಿ’ ಎಂದರು. ನಾನು
ಮಾತಾಡಲಿಲ್ಲ. ‘ಒಬ್ಬ ವ್ಯಕ್ತಿ ವೇಟರನ ಜತೆ ಹೇಗೆ ವರ್ತಿಸುತ್ತಾನೆ ಎನ್ನುವುದನ್ನು ನೋಡಿ ಆತ ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ವೇಟರ್ ಜತೆ ಒರಟಾಗಿ ವರ್ತಿಸುವವನು, ಬೇರೆಯವರ ಜತೆಯೂ ಹಾಗೇ ವರ್ತಿಸುತ್ತಾನೆ. ನೀವು ಜೀವನದಲ್ಲಿ ವೇಟರ್ ಅಥವಾ ಸರ್ವರ್ ಆಗಿ ಕೆಲಸ ಮಾಡಲಾರಿರಿ. ಎಲ್ಲರ ದೃಷ್ಟಿಯಲ್ಲಿ ಅದು ಅಷ್ಟೇನೂ ಉತ್ತಮ ನೌಕರಿ ಅಲ್ಲ. ಆದರೂ ನಮ್ಮ ನಡುವೆ ಲಕ್ಷಾಂತರ ವೇಟರುಗಳಿದ್ದಾರೆ.

ಅವರಿಗೆ ತಮ್ಮ ಉದ್ಯೋಗದ ಬಗ್ಗೆ ಗೌರವ ಇದೆಯೋ, ಇಲ್ಲವೋ ಗೊತ್ತಿಲ್ಲ. ತಾವು ಮಾಡುವ ಕೆಲಸ ನಿಕೃಷ್ಟ ಅಲ್ಲ ಎಂಬ ಭಾವನೆಯನ್ನು ಅವರಲ್ಲಿ  ಮೂಡಿಸು ವುದು ಸಹ ನಮ್ಮ ಕರ್ತವ್ಯ. ಅದಕ್ಕಾಗಿ ಅವರ ನಿರೀಕ್ಷೆಗಿಂತ ಹೆಚ್ಚು ಟಿಪ್ಸ್ ಕೊಡಬೇಕು. ಟಿಪ್ಸ್ ಕೊಡುವಾಗ ಎಲ್ಲರೂ ಚೌಕಾಶಿ ಮಾಡುತ್ತಾರೆ. ಹತ್ತು ಸಾವಿರ ಬಿಲ್ ತೆತ್ತು, ನೂರು ರುಪಾಯಿ ಟಿಪ್ಸ್ ಇಡುವಾಗ ಹತ್ತು ಸಲ ಯೋಚಿಸುತ್ತಾರೆ. ಹತ್ತು ಸಾವಿರ ರುಪಾಯಿ ಬಿಲ್ ಆಗುವಷ್ಟು ತಿಂದರೆ ಹೊಟ್ಟೆ ದೊಡ್ಡದಾಗಿಯೂ, ನೂರು
ರುಪಾಯಿ ಟಿಪ್ಸ್ ಇಡುವಾಗ ಹೃದಯ ಚಿಕ್ಕದಾಗಿಯೂ ಕಾಣುತ್ತದೆ. ಟಿಪ್ಸ್ ಇಡುವಾಗ ಎಂದೂ ಕೃಪಣರಾಗಬಾರದು.

ನೀವು ಟಿಪ್ಸ್‌ನಲ್ಲಿ ಉಳಿಸಿದ ಹಣದಿಂದ ಮನೆಯನ್ನಾಗಲಿ, ಕಾರನ್ನಾಗಲಿ, ಮೊಬೈಲನ್ನಾಗಲಿ ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ ನಾನು ನನಗೂ ಅಚ್ಚರಿಯಾಗುವ ಹಾಗೆ ಟಿಪ್ಸ್ ಇಡುತ್ತೇನೆ. ನಾನು ಕಂಜೂಸ್ ಅಲ್ಲ ಎಂದು ನನಗೇ ಮನವರಿಕೆ ಮಾಡಿಕೊಡುತ್ತೇನೆ’ ಎಂದರು ಯೋಗಿಜೀ. ಕೊನೆಯಲ್ಲಿ ಹೇಳಿದ ಎರಡು ಸಾಲುಗಳು ಬಲವಾಗಿ ನಾಟಿತು. ಹೌದು, ನಾನು ನನಗೂ ಅಚ್ಚರಿಯಾಗುವ ಹಾಗೆ ಟಿಪ್ಸ್ ಇಡುತ್ತೇನೆ… ನಾನು ಕಂಜೂಸ್ ಅಲ್ಲ ಎಂದು ನನಗೇ ಮನವರಿಕೆ
ಮಾಡಿಕೊಡುತ್ತೇನೆ…. ಈ ಮಾತುಗಳು ಪದೇ ಪದೆ ಡಿಕ್ಕಿ ಹೊಡೆದು ವಾಪಸ್ ಬಂದು ಬಡಿದಂತಾಯಿತು.

ಕೆಲವರು ಪರ ಊರುಗಳಿಗೆ, ವಿದೇಶಗಳಿಗೆ ಹೋದಾಗ, ಅಲ್ಲಿನ ಹೋಟೆಲ್ ವೇಟರುಗಳಿಗೆ ಟಿಪ್ಸ್ ಇಡುವುದಿಲ್ಲ. ಹೇಗಿದ್ದರೂ ನಾವ್ಯಾರು ಎಂಬುದು ಅವರಿಗೆ ಗೊತ್ತಿಲ್ಲವಲ್ಲ, ಕೊಟ್ಟರೆಷ್ಟು- ಬಿಟ್ಟರೆಷ್ಟು ಎಂದು ಹಾಗೆ ಎದ್ದು ಬರುತ್ತಾರೆ. ಅನೇಕರ ಮನಸ್ಸಿನಲ್ಲಿ ಟಿಪ್ಸ್ ಅಂದ್ರೆ ಹಣ ಎಂಬ ಭಾವನೆಯಿದೆ. ಟಿಪ್ಸ್ ಅಂದ್ರೆ ವರ್ತನೆ,
ಒಳ್ಳೆಯ ವರ್ತನೆ. ಈ ವಿಷಯದಲ್ಲಿ ಯಾರೂ ನಮ್ಮತ್ತ ಕೆಟ್ಟದಾಗಿ ಬೊಟ್ಟು ಮಾಡಬಾರದು. ನೀವು ಇಡುವ ಒಂದು ಸಾವಿರ ರುಪಾಯಿ ಟಿಪ್ಸ್, ಇತರರ ಕಣ್ಣಲ್ಲಿ ನೀವು ಹಠಾತ್ ಶ್ರೀಮಂತನಾಗಿ ಕಾಣುತ್ತೀರಿ. ಆ ಹಣ ಆತನಿಗೆ ಉಪಯೋಗವಾದರೆ, ನಿಮಗೆ ಅದಕ್ಕಿಂತ ಸಮಾಧಾನ ಯಾವುದಿದೆ?