Thursday, 12th December 2024

ಈಸ್ ಆಫ್‌ ಡೂಯಿಂಗ್‌ ಬಿಜಿನೆಸ್‌ ಸುಧಾರಿಸಲಿ

ಅಭಿಮತ

ಚಂದ್ರಶೇಖರ ನಾವಡ

ವಿಶ್ವ ಬ್ಯಾಂಕ್ ಪ್ರಕಟಿಸುವ ಈಸ್ ಆಫ್‌ ಡೂಯಿಂಗ್ ಬಿಜಿನೆಸ್ ಹಾದಿಯಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಕೇಂದ್ರ ಸರಕಾರ ಅನೇಕ ಉದ್ಯೋಗ ಸ್ನೇಹಿ ಸುಧಾರಾಣಾತ್ಮಕ ಕ್ರಮ ಕೈಗೊಳ್ಳುತ್ತಾ ಬಂದಿದೆ. ಆ ಹಿನ್ನೆಲೆಯಲ್ಲಿ ಸಮಗ್ರ ಆರ್ಥಿಕ ಚಟುವಟಿಕೆಯ ಆಧಾರಸ್ತಂಭ ಎನಿಸಿದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈಸ್ ಆಫ್‌ ಡೂಯಿಂಗ್ ಯಾವ ಮಟ್ಟದಲ್ಲಿ ಇದೆ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಪ್ರಸ್ತುತವೆನಿಸುತ್ತದೆ.

ಬ್ಯಾಂಕುಗಳಲ್ಲಿ ಶ್ರೀಸಾಮಾನ್ಯ ಗ್ರಾಹಕಸ್ನೇಹಿ ವಾತಾವರಣವಿದ್ದರೆ ಮಾತ್ರ ಸರಕಾರದ ಆರ್ಥಿಕ ಪ್ರಗತಿ ಮತ್ತು ಆರ್ಥಿಕ ಸೇರ್ಪಡೆ  (financial inclusion) ಅಜೆಂಡಾ ಸಾಫಲ್ಯವನ್ನು ಕಾಣಲಿದೆ. ಬ್ಯಾಂಕ್ ರಾಷ್ಟ್ರೀಕರಣ, ಜನಧನ್ ಖಾತೆಗಳ ಮೂಲಕ ಶ್ರೀಸಾಮಾನ್ಯರಿಗೆ ಬ್ಯಾಂಕ್‌ಗಳ ಬಾಗಿಲನ್ನು ತೆರೆದ ಸರಕಾರ ಗ್ರಾಮೀಣ ಕ್ಷೇತ್ರದ ಕಡಿಮೆ ಶಿಕ್ಷಿತ ಜನಸಾಮಾನ್ಯರಿಗೆ ಸುಲಲಿತವಾಗಿ ಬ್ಯಾಂಕಿಂಗ್ ಸೇವೆ ಸಿಗುವಂತೆ ಮಾಡಬೇಕಾಗಿದೆ. ಆಯಾ ಪ್ರಾದೇಶಿಕ ಭಾಷೆಯಲ್ಲಿ ವ್ಯವಹಾರ ಮಾಡುವ ಅನುಕೂಲಕರ ವಾತಾ ವರಣವಿಲ್ಲದೇ ಗ್ರಾಮೀಣ ಮಹಿಳೆ ಮತ್ತು ಸಾಮಾಜಿಕ ನ್ಯಾಯವಂಚಿತ ಕಡಿಮೆ ಶಿಕ್ಷಿತ ವರ್ಗ ಬ್ಯಾಂಕಿಂಗ್ ಸೇವೆ ಪಡೆಯಲು ಮುಂದೆ ಬರಲಾರರು.

ಸರಕಾರದ ಪ್ರತಿಷ್ಠಿತ ಯೋಜನೆಗಳಾದ ಪ್ರಧಾನ ಮಂತ್ರಿ ಮುದ್ರಾ ಸಾಲ, ಉದ್ಯೋಗ ಸೃಜನ ಕಾರ್ಯಕ್ರಮ (PMEGP) ಮೊದ ಲಾದ ಸಾಲ ಯೋಜನೆಗಳು, ಸಾಮಾಜಿಕ ಸುರಕ್ಷತಾ ಯೋಜನೆ ಗಳಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ (PMJBY), ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ (PMSBY), ಅಟಲ್ ಪೆನ್ಷನ್ ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸ ಬೇಕಾದ ಬ್ಯಾಂಕ್‌ಗಳು ಪ್ರಾದೇಶಿಕ ಭಾಷೆಯಲ್ಲಿ ವ್ಯವಹರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಬ್ಯಾಂಕಿಂಗ್ ನೇಮಕಾತಿ ವ್ಯವಸ್ಥೆ ಯಲ್ಲಿ ಪ್ರಾದೇಶಿಕ ಭಾಷಾ ಜ್ಞಾನಕ್ಕೆ ಒತ್ತು ಸಿಗುವಂತೆ ಸೂಕ್ತ ಬದಲಾವಣೆ ತುರ್ತಾಗಿ ಜಾರಿಯಾಗಬೇಕಿದೆ.

ಪ್ರಾದೇಶಿಕ ಭಾಷಾ ಜ್ಞಾನವಿಲ್ಲದ ಅಧಿಕಾರಿಗಳು ಸಾಲ ವಿತರಣೆ ಮತ್ತು ವಸೂಲಿ ಪ್ರಕ್ರಿಯೆಯಲ್ಲಿ ಕೂಡಾ ನಿರೀಕ್ಷಿತ ಸಫಲತೆ ಕಾಣಲು ಸಾಧ್ಯವಿಲ್ಲ. ಹೊರ ರಾಜ್ಯಗಳ ನೌಕರರು ಆಗಾಗ್ಗೆ ದೀರ್ಘ ರಜೆಗೆ ತೆರಳುವುದರಿಂದ ಸಾಲ ವಿತರಣೆ ಮತ್ತು ಅನ್ಯ ಸಾಮಾನ್ಯ ವ್ಯವಹಾರ ಬಾಧಿತವಾಗುತ್ತದೆ. ಮೊಬೈಲ, ಇಂಟರ್ನೆಟ್ ಬ್ಯಾಂಕಿಂಗ್‌ನಂಥ ಆಧುನಿಕ ತಂತ್ರಜ್ಞಾನಗಳನ್ನು ಬಳಸಲ ರಿಯದ, ಅಷ್ಟೇಕೆ ಎಟಿಎಂನಿಂದ ಹಣ ತೆಗೆಯಲು ಹರಸಾಹಸ ಪಡುವ ಕೃಷಿಕ, ಕೂಲಿಕಾರರ ದೊಡ್ಡ ವರ್ಗ ನಮ್ಮ ಗ್ರಾಮೀಣ ಕ್ಷೇತ್ರದಲ್ಲಿದೆ. ಪ್ರಾದೇಶಿಕ ಭಾಷಾ ಜ್ಞಾನವಿರುವ ಸಿಬ್ಬಂದಿಯಿಂದ ಸಿಗುವ ಸಹಾನುಬೂತಿ, ಸಹಾಯ ಹಸ್ತ, ಸಾಂತ್ವನ ಹೊರ ರಾಜ್ಯದಿಂದ ಬಂದು ನೌಕರವರ್ಗದಿಂದ ಅಪೇಕ್ಷಿಸಲು ಸಾಧ್ಯವಿಲ್ಲ ಎಂಬ ಗ್ರಾಹಕರ ಅಳಲಿಗೆ ಸರಕಾರ ಸ್ಪಂದಿಸಬೇಕಾಗಿದೆ.

ಕೌಂಟರ್‌ಗಳಲ್ಲಿ ಗ್ರಾಹಕರೊಂದಿಗೆ ನೇರ ಸಂಪರ್ಕಕ್ಕೆ ಬರುವ ಹುzಗಳಿಗೆ ಕಡ್ಡಾಯವಾಗಿ ಆಯಾ ರಾಜ್ಯದ ನಿವಾಸಿಗಳಿಗೆ ಆದ್ಯತೆ ನೀಡುವುದರಿಂದ ಈ ಸಮಸ್ಯೆಯನ್ನು ಕೊಂಚ ಮಟ್ಟಿಗೆ ಪರಿಹರಿಸಬಹುದು. ಬ್ಯಾಂಕಿಂಗ್ ಉದ್ಯೋಗ ನೇಮಕಾತಿಯಲ್ಲಿ ಪ್ರಾದೇಶಿಕ ಭಾಷಾ ಜ್ಞಾನಕ್ಕೆ ಪ್ರಾಧಾನ್ಯತೆ ಸಿಗದೇಈ ನಿಟ್ಟಿನಲ್ಲಿ ಹೆಚ್ಚಿನ ಸುಧಾರಣೆ ಸಾಧ್ಯವಿಲ್ಲ.

ಆಡಳಿತಾತ್ಮಕ ಹುದ್ದೆಗಳನ್ನು ಹೊರತುಪಡಿಸಿ ಶಾಖಾ ಮಟ್ಟದ ಸಿಬ್ಬಂದಿ ಮತ್ತು ಅಧಿಕಾರಿಗಳು ಪ್ರಾದೇಶಿಕ ಭಾಷೆಯಲ್ಲಿ ಸುಲಭ ವಾಗಿ ವ್ಯವಹರಿಸುವಂಥ ವ್ಯವಸ್ಥೆ ಜಾರಿಯಾಗದೇ ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೆ ಬ್ಯಾಂಕಿಂಗ್ ಸೇವೆ ಒದಗಿಸುವ ಸರಕಾರದ ಧ್ಯೇಯೋದ್ದೇಶ ಸಫಲವಾಗದು. ಆರ್ಥಿಕವಾಗಿ ಹೊರೆಯಲ್ಲದ ಈ ಆಡಳಿತಾತ್ಮಕ ಸುಧಾರಣೆಯಿಂದ ಖಂಡಿತವಾಗಿ ಯೂ ಬ್ಯಾಂಕಿಂಗ್ ವ್ಯವಸ್ಥೆ ಸುಧಾರಿಸಲಿದೆ ಮತ್ತು ಈಸ್ ಆಫ್‌ ಡೂಯಿಂಗ್ ಬಿಜಿನೆಸ್ ಶ್ರೇಣಿಯಲ್ಲಿ ಭಾರತದ ಸ್ಥಾನ ಮತ್ತಷ್ತು ಮೇಲಕ್ಕೇರಲು ಸಹಾಯಕ ವಾಗಬಲ್ಲದು. ರಾಜ್ಯದ ಸಂಸದರು ಈ ವಿಷಯದ ಕುರಿತು ಪ್ರಧಾನಮಂತ್ರಿ ಮತ್ತು ವಿತ್ತ ಸಚಿವರಿಗೆ ಮನವರಿಕೆ ಮಾಡಿಕೊಡಲಿ.