ಪ್ರಚಲಿತ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
sachidanandashettyc@gmail.com
ದೇಶೀಯ ಉತ್ಪನ್ನ (ಜಿಡಿಪಿ) ವಿಶ್ವದಾದ್ಯಂತ ಬಾಧಿಸಿದ ಕೋವಿಡ್ ಸಾಂಕ್ರಮಿಕ ರೋಗವು ಜಾಗತಿಕ ಮತ್ತು ಭಾರತೀಯ ಹಣಕಾಸು ಮಾರುಕಟ್ಟೆಗಳಲ್ಲಿ
ಗಣನೀಯ ತೊಂದರೆ ಮತ್ತು ಏರಿಳಿತಗಳನ್ನು ಉಂಟುಮಾಡಿದೆ. ಅರ್ಥವ್ಯವಸ್ಥೆಯು ಲಾಕ್ಡೌನ್ ಆಘಾತಗಳಿಂದ ಇನ್ನೂ ಪೂರ್ತಿಯಾಗಿ ಹೊರ ಬಂದಿಲ್ಲ ವಾದರೂ, ದೇಶದ ಆರ್ಥಿಕತೆಯನ್ನು ಅಳೆಯುವ ಸೂಚ್ಯಂಕವಾದ ಜಿಡಿಪಿ ಏಪ್ರಿಲ್ -ಜೂನ್ ತ್ರೈಮಾಸಿಕದಲ್ಲಿ ಶೇ. 20.1ರಷ್ಟು ಬೆಳವಣಿಗೆ ದಾಖಲಿಸಿದೆ. ನಿರೀಕ್ಷೆಯಂತೆ ಜಿಡಿಪಿ ಚೇತರಿಸುತ್ತಿರುವುದು ಸ್ಪಷ್ಟವಾಗಿದೆ.
ಕೃಷಿ ಕ್ಷೇತ್ರ ಕಳೆದ ಸಲದಂತೆ ಪ್ರಗತಿ ದಾಖಲಿಸಿದೆ. ಮುಂಬರುವ ತ್ರೈಮಾಸಿಕದಲ್ಲಿ ಮತ್ತಷ್ಟು ಬೆಳವಣಿಗೆ ನಿರೀಕ್ಷಿಸಬಹುದು. ಕೋವಿಡ್ ಬಿಕ್ಕಟ್ಟಿನ ನಡುವೆಯೂ ಉತ್ಪಾದನೆ ಮತ್ತು ಕೃಷಿ ವಲಯದ ಪ್ರಗತಿ ಗಮನಾರ್ಹ. ರಿಟೇಲ್, ಆಟೋಮೊಬೈಲ್, ಕೃಷಿ ಉತ್ಪಾದನೆ, ನಿರ್ಮಾಣ, ರಫ್ತು ವಲಯ ಚೇತರಿಸುತ್ತಿದೆ. ಬಳಕೆ, ಹೂಡಿಕೆ, ಸರಕಾರಿ ವೆಚ್ಚ ಮತ್ತು ರಫ್ತು ಈ ನಾಲ್ಕು ಜಿಡಿಪಿ ಬೆಳವಣಿಗೆಯ ಆಧಾರ ಸ್ಥಂಬಗಳು. ದೇಶವು ಎರಡು ಅಲೆಗಳಲ್ಲಿ ಕಲಿತ ಏಳುಬೀಳುಗಳ ಪಾಠಗಳಿಂದ ಆರ್ಥಿಕ ಮುಗ್ಗಟ್ಟುಗಳನ್ನು ಸತತವಾಗಿ ಎದುರಿಸುತ್ತಿರುವುದು ಗೋಚರವಾಗುತ್ತಿದೆ. ಎರಡನೆಯ ಅಲೆಯ ಹೊರತಾಗಿಯೂ ಇಂಥದ್ದೊಂದು ಪ್ರಗತಿ ಮೆಚ್ಚ ತಕ್ಕದ್ದು. ಆದರೆ ಈ ಮೊದಲ ತ್ರೈಮಾಸಿಕದ ಲೆಕ್ಕಚಾರಗಳನ್ನು ನೋಡಿದಾಗ ಆರ್ಥಿಕ ಪ್ರಗತಿ ದಿಢೀರ್ ವೇಗ ಪಡೆದುಕೊಂಡಿದೆ ಎಂದರ್ಥವಲ್ಲ.
ಸದ್ಯ ನಮಗೆ ಕಾಣಿಸುತ್ತಿರುವ ಏರು ಪ್ರಗತಿಯ ಮೂಲಕ ಆಧಾರವಾಗಿಟ್ಟಿರುವ ಬೇಸ್ ಪ್ರಮಾಣವನ್ನು ಹೊಂದಿಕೊಂಡಿದೆ. ಕಳೆದ ವರ್ಷ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ. (-) 24.4 ದಾಖಲೆ ಮಟ್ಟಕ್ಕೆ ಕುಸಿದಿತ್ತು. ಆ ಸಮಯದಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ ಇತ್ತು. ಅದಕ್ಕೆ ಹೋಲಿಸಿದಾಗ ಈ ವರ್ಷದ ಪ್ರಥಮ ತ್ರೈಮಾಸಿಕದ ಜಿಡಿಪಿಯು ಎರಡನೇ ಅಲೆಯ ಮಧ್ಯವೂ ಜಿಗಿತ ಕಂಡಿದೆ. ಕಳೆದ ವರ್ಷ ಪಾತಾಳಕ್ಕೆ ತಲುಪಿದ್ದ ಆರ್ಥಿಕ ಬೆಳವಣಿಗೆಯನ್ನು ಸರಿದೂಗಿಸುವ ಕೆಲಸವೇ ಆಗಿದೆ. ನಿಜವಾದ ಬೆಳವಣಿಗೆಯಂತೆ ಕಾಣುತ್ತಿಲ್ಲ. 2021ರ ಜಾಗತಿಕ ಜಿಡಿಪಿ ಶೇ. 6.30ರಷ್ಟು ಬೆಳೆಯುವ ನಿರೀಕ್ಷೆ ಇದ್ದು, ಭಾರತದ ಆರ್ಥಿಕತೆಯು ಶೇ.8.3 ರಷ್ಟು ಬೆಳೆಯುವ ನಿರೀಕ್ಷೆ ಇದೆ ಎಂದು ವಿಶ್ವ ಬ್ಯಾಂಕ್ ವರದಿ ಮಾಡಿದೆ.
ಆರ್ಬಿಐ 2021-2022ರ ಮುನ್ಸೂಚನೆಯ ಅಂದಾಜು ಜಿಡಿಪಿ ಶೇ. 9.5ರ ಬೆಳವಣಿಗೆಯ ಪ್ರಮಾಣವನ್ನು ಕಾಯ್ದುಕೊಂಡಿದೆ. ಆರ್ಥಿಕತೆಗೆ ಅನುಕೂಲ ವಾದ ವಾತಾವರಣವನ್ನು ನಿರ್ಮಿಸಲು ಆರ್ಬಿಐ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಸಾಂಕ್ರಮಿಕದ ಎರಡನೆಯ ಅಲೆಯ ಹೊಡೆತದಿಂದ ಪಾರಾಗಿ ದೇಶೀಯ ಆರ್ಥಿಕ ಚಟುವಟಿಕೆಯು ಚೇತರಿಸಿಕೊಳ್ಳಲಾರಂಭಿಸಿದೆ ಎಂಬುದನ್ನು ಹೇಳಿದೆ. ಇದೇ ಸಂದರ್ಭದಲ್ಲಿ ಅರ್ಥ ವ್ಯವಸ್ಥೆಯ ಚೇತರಿಕೆಗೆ ಲಸಿಕೆ ಹಾಕುವುದೇ ಅತ್ಯುತ್ತಮ ಮಾರ್ಗ ಎನ್ನುವುದನ್ನು ಅಲ್ಲಗಳೆಯಲಾಗದು. ದೇಶದಲ್ಲಿ 73 ಕೋಟಿ ಜನರಿಗೆ ಲಸಿಕೆ ಹಾಕಿಸಲಾಗಿದೆಯಾದುದರಿಂದ ಮೂರನೆಯ ಅಲೆಯು ತೀವ್ರವಾಗಿ ಕಾಡಿಸಲಾರದು ಎಂಬುದು ಆಶಯ.
ಅಂತಾರಾಷ್ಟ್ರೀಯ ಹಣಕಾಸು ನಿಽಯ ಮುಖ್ಯ ಸಲಹೆಗಾರರಾದ ಗೀತಾ ಗೋಪಿನಾಥ್ ಭಾರತದ ಜಿಡಿಪಿ ಬೆಳವಣಿಗೆ ಕೇವಲ ಗಣಿತದ ಲೆಕ್ಕಚಾರ ಎಂದು ವ್ಯಾಖ್ಯಾನಿಸಿರುವುದನ್ನು ಅಲ್ಲಗಳೆಯಲಾಗದು. ಆದರೂ ಜಿಡಿಪಿ ಬೆಳವಣಿಗೆ ಆರ್ಥಿಕ ಬೆಳವಣಿಗೆಯ ದ್ಯೋತಕ ಎನ್ನುವುದರಲ್ಲಿ ಸಂದೇಹವಿಲ್ಲ. ಸೋಂಕಿನ ಹೊಡೆತಕ್ಕೆ ತತ್ತರಿಸಿದ್ದ ದೇಶದ ಅರ್ಥವ್ಯವಸ್ಥೆಯಲ್ಲಿ ಗಮನಾರ್ಹವಾದ ಚೇತರಿಕೆ ಕಾಣುತ್ತಿದೆ. ಹಾಲಿ ವಿತ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪಾದನೆಯಲ್ಲಿ ದಾಖಲೆ ಪ್ರಮಾಣದ ವೃದ್ಧಿಯಾಗಿದೆ. ಅದಲ್ಲದೆ ಅಮೆರಿಕನ್ ಡಾಲರ್ ಎದುರು ಭಾರತೀಯ ರುಪಾಯಿ ಮೌಲ್ಯ ಚೇತರಿಸುತ್ತಿದೆ. ಕರೋನಾ
ಎರಡನೆಯ ಅಲೆಯ ಸಂದಿಗ್ಧ ಪರಿಸ್ಥತಿಯಲ್ಲಿಯೂ ಜನರ ಖಾಸಗಿ ವೆಚ್ಚ ಅಽಕಗೊಂಡಿರುವುದೇ ಈ ಜಿಡಿಪಿ ಬೆಳವಣಿಗೆಗೆ ಕಾರಣವಾಗಿದೆ.
ಸರಕಾರದ ವರಮಾನವೆಂದರೆ ಜನರ ತೆರಿಗೆ ಮತ್ತು ನಿರೀಕ್ಷೆಯಂತೆ ಜಿಡಿಪಿ ಚೇತರಿಸುತ್ತಿರುವುದು ಸ್ಪಷ್ಟವಾಗಿದೆ. ಸರಕಾರ ಸಾರ್ವಜನಿಕ ಬಂಡವಾಳ ಹೂಡಿಕೆ ಯೊಂದಿಗೆ ತನ್ನ ಪಾಲನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದರೆ ಇನ್ನೂ ಹೆಚ್ಚಿನ ಬೆಳವಣಿಗೆ ಕಾಣಬಹುದಿತ್ತು. ಅದಲ್ಲದೆ ರಫ್ತು ಪ್ರಮಾಣವನ್ನು ಹೆಚ್ಚಿಸಲು ಸರಕಾರ ಕೈಗೊಂಡ ಕ್ರಮ ತೃಪ್ತಿಕರ ಎನಿಸುತ್ತಿಲ್ಲ. ಉದ್ಯೋಗ ಸೃಷ್ಟಿ ಅಧಿಕಗೊಂಡಿಲ್ಲ. ಬದಲಾಗಿ ಉದ್ಯೋಗ ನಷ್ಟ ಈ ವರ್ಷವೂ ಮುಂದುವರಿದಿದೆ. ಸಣ್ಣ ಮತ್ತು ಮಧ್ಯಮ ಮತ್ತು ಅತಿ ಸಣ್ಣ ಉದ್ದಿಮೆಗಳ ಬೆಳವಣಿಗೆ ತೃಪ್ತಿಕರಕರವಾಗಿಲ್ಲ. ಕೇಂದ್ರೀಯ ಸಾಂಖ್ಯಿಕ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಖಾಸಗಿ ಪಾತ್ರ ಮಹ್ವತಪೂರ್ಣ ಎಂಬುವುದನ್ನು ಸೂಚಿಸುತ್ತದೆ.
ಮುಂದಿನ ದಿನಗಳಲ್ಲಿ ಸರಕಾರ ತಮ್ಮ ಬಂಡವಾಳ ಹೂಡಿಕೆಯನ್ನು ಇನ್ನೂ ಹೆಚ್ಚಿಸಬೇಕು. ಮುಂದಿನ ತ್ರೈಮಾಸಿಕ ಬೆಳವಣಿಗೆಗಾಗಿ ಎಲ್ಲರೂ ಕಾಯುತ್ತಿದ್ದಾರೆ.
ಅಗಸ್ಟ್ನಲ್ಲಿ 1.12 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹವಾಗಿದೆ. ಕರೋನಾ ಅಲೆಯ ವಿಪರೀತ ಸಂಕಷ್ಟದಿಂದ ಜೂನ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹಣೆ ಒಂದು ಲಕ್ಷಕ್ಕಿಂತ ಕಡಿಮೆಯಾದುದು ಬಿಟ್ಟರೆ ಸತತ ಒಂಬತ್ತು ತಿಂಗಳೂ ಒಂದು ಲಕ್ಷ ಕೋಟಿ ಹೆಚ್ಚಿನ ತೆರಿಗೆ ದಾಖಲಾಗಿದೆ. ಇಲ್ಲಿ ಇನ್ನೊಂದು ಗಹನವಾದ ವಿಚಾರ ವೆಂದರೆ ಎಲ್ಲಾ ಸರಕು ಮತ್ತು ಸೇವೆಗಳ ಬೆಲೆ ಏರಿಕೆಯಾಗಿದೆ. ಇದಕ್ಕೆ ತಕ್ಕಂತೆ ತೆರಿಗೆ ಸಂಗ್ರಹ ಕೂಡ ಹೆಚ್ಚಾಗಿದೆ. ಸರಕಾರಗಳ ಆರ್ಥಿಕ ಚೇತರಿಕೆ, ವಂಚನೆ ಪ್ರಕರಣಗಳ ಕಡಿವಾಣ, ನಕಲಿ ಬೆಲೆಗಳ ನಿಯಂತ್ರಣದಿಂದ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ ಎಂದು ಹೇಳಿಕೆ ನೀಡಿದೆ.
ದುಸ್ತರ ಬದುಕು: ಎಲ್ಲಾ ವರ್ಗದ ಜನರ ಆದಾಯವು ಕೋವಿಡ್ ಪೂರ್ವ ಸ್ಥಿತಿಗೆ ಬರಲಿಲ್ಲ. ‘ಅಭಿವೃದ್ಧಿ ಎಂದರೆ ಕಾಲ ಸರಿದಂತೆ ಪ್ರಜೆ ಮತ್ತು ಸರಕಾರಗಳ ಅಭಿವೃದ್ಧಿಯು ಸಮಾನಂತರವಾಗಿ ಚಲಿಸಬೇಕು’. ಸರಕಾರಗಳು ಜನರ ಸಂಪಾದನೆ ಹೆಚ್ಚಿಸಿದರೆ, ಉದ್ಯೋಗ ಸೃಷ್ಟಿಯಾದರೆ ಜನರ ಖರ್ಚು ಹೆಚ್ಚಾಗುತ್ತದೆ ತನ್ಮೂಲಕ ಸರಕಾರದ ಪ್ರತ್ಯಕ್ಷ ಮತ್ತು ಪರೋಕ್ಷ ಆದಾಯ ಹೆಚ್ಚಾಗುತ್ತದೆ. ಇದು ಆರ್ಥಿಕ ವ್ಯವಸ್ಥೆಯಲ್ಲಿ ಆಗಬೇಕಾದ ಪ್ರಕ್ರಿಯೆ. ‘ಸರಕಾರದ ಬೊಕ್ಕಸ ಎಷ್ಟೇ ಬರಿದಾದರೂ ಜನರು ಸಂಕಷ್ಟದಲ್ಲಿರುವಾಗ ಜನರ ಮೇಲೆ ವಿಪರೀತ ತೆರಿಗೆ ಹೊರಿಸುವುದು ತರವಲ್ಲ’. ಸರಕಾರ ಜನರ ಆದಾಯ ಮೂಲ ಬತ್ತಿ ಹೋಗದಂತೆ
ನೋಡಿಕೊಳ್ಳಬೇಕು.
‘ಜನ ಇನ್ನಿಲ್ಲದ ಸಂಕಷ್ಟ ಪರಿಸ್ಥಿಯನ್ನು ಎದುರಿಸುತ್ತಿರುವಾಗ ತರಿಗೆಯನ್ನು ಏರಿಸುವುದು ಮಾನವಿಯತೆಯಲ್ಲ’. 2020-2021ರಲ್ಲಿ ವಿದ್ಯುತ್ ದರ ಪ್ರತಿ ಯುನಿಟ್ಗೆ 70 ಪೈಸೆ ಏರಿಸಲಾಯಿತು. 2020 ಸೆಪ್ಟೆಂಬರ್ನಿಂದ ಅಡುಗೆ ಅನಿಲ (ಎಲ್ಪಿಜಿ) 14.2ಕೆಜಿ ಸಿಲಿಂಡರಿಗೆ ರುಪಾಯಿ 290 ಏರಿಕೆಯಾಗಿದೆ. ಇದೀಗ ಸಿಲಿಂಡರ್ ಬೆಲೆ 887 ರುಪಾಯಿ ತಲುಪಿದೆ. ಇಂದು ಅಡುಗೆಗಾಗಿ ಹೆಚ್ಚಿನ ಮನೆಗಳಲ್ಲಿ ಎಲ್ಪಿಜಿಯನ್ನೇ ಅವಲಂಬಿಸಿದ್ದಾರೆ. ಭಾರತದಲ್ಲಿ 28.8 ಕೋಟಿ ಎಲ್ಪಿಜಿ ಗ್ರಾಹಕರಿದ್ದಾರೆ. ಬೆಲೆ ಏರಿಕೆಗೆ ಕಾರಣಗಳಾದ ಎಲ್ಪಿಜಿ, ಪಟ್ರೋಲ್, ಡಿಸೇಲ್ ಪ್ರತಿ ಮನೆಯ ಬಜೆಟ್ ಮೇಲೆ ಪರಿಣಾಮ ಬೀರುತ್ತದೆ. ಕಳೆದ ಒಂದು ವರ್ಷದಿಂದ ಹಣ ದುಬ್ಬರದ ಪರಿಣಾಮ ಎಲಾ ಸರಕಾರಗಳು ಮತ್ತು ಸೇವೆಗಳ ದುಬಾರಿಯಾಗಿದೆ. ಬೆಲೆ ಏರಿಕೆಯೆಂಬುದು ಬಳಕೆದಾರರ ಜೇಬಿಗೆ ಬೀಳುವ ಶಾಶ್ವತ ಕತ್ತರಿ. ಇದರಿಂದ ಬದುಕು ದುಸ್ತರವಾಗದೇ ಇರಲಾರದು.
ಇದನ್ನು ಬಡ, ಕೆಳ, ಮಧ್ಯಮ ವರ್ಗದವರು ತಾಳಿಕೊಳ್ಳುವುದು ಸಾಧ್ಯವೇ? ಕಳೆದ ಎರಡು ವರ್ಷದಿಂದ ಇಲ್ಲಿಯವರೆಗೆ ಭಾರತದ ಮಧ್ಯಮ ವರ್ಗದ ಜನಸಂಖ್ಯೆ ಯಲ್ಲಿ ಭಾರಿ ಇಳಿಕೆಗಳು ಕಾಣುತ್ತಾ ಬಡತನಕ್ಕೆ ದೂಡಲ್ಪಟ್ಟಿದ್ದಾರೆ. ಒಂದು ಮುಖ್ಯ ಕಾರಣ ಕರೋನಾ ಎಂಬುದು ನಿರ್ವಿವಾದ. ಆರ್ಥಿಕ ನೀತಿಗಳಲ್ಲೂ ಸುಧಾರಣೆ ಅಗತ್ಯ. ಅಭಿವೃದ್ಧಿ ಯೋಜನೆಗಳಿಗಾಗಿ ಸಂಪನ್ಮೂಲ ಕ್ರೋಢಿಕರಿಸುವ ಸಲುವಾಗಿ ಬೆಲೆ ಏರಿಕೆ ಅನಿವಾರ್ಯವೆಂಬ ಕೆಲವು ರಾಜಕೀಯ ನಾಯಕರ ವ್ಯಾಖ್ಯಾನ ಸರಿ ಕಾಣುತ್ತಿಲ್ಲ. ಗೃಹ ಬಳಕೆಯ ಖಾದ್ಯ ತೈಲಗಳ ಕಸ್ಟಮ್ಸ್ ಸುಂಕ ಇಳಿಸಿರುವಂತೆ ದಿನ ಬಳಕೆಯ ವಸ್ತುಗಳ ದರ ಕಡಿಮೆ ಮಾಡಲು ಕ್ರಮ ಕೈಗೊಳ್ಳವುದು ಸರಕಾರಗಳ ಇಂದಿನ ಪ್ರಥಮ ಆದ್ಯತೆಯಾಗಬೇಕು.