ವಾಣಿಜ್ಯ ವಿಭಾಗ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಜಾಗತಿಕವಾಗಿ ಬಹುತೇಕ ಪ್ರಮುಖ ದೇಶಗಳು ಆರ್ಥಿಕ ಸಂಕಷ್ಟದಲ್ಲಿರುವಾಗ, ಭಾರತದ ಆರ್ಥಿಕ ಬೆಳವಣಿಗೆಯ ದರವು (ಜಿಡಿಪಿ) ೨೦೨೩-೨೪ರ ವರ್ಷದ ಮೂರನೆಯ ತ್ರೈಮಾಸಿಕದಲ್ಲಿ ಶೇ.೮.೪ರ ಬೆಳವಣಿಗೆಯನ್ನು ಸಾಧಿಸಿದೆಯೆಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ವರದಿ ಮಾಡಿದೆ. ಇದು
ಆರ್ಥಿಕ ತಜ್ಞರು, ಹಣಕಾಸು ಸಂಸ್ಥೆಗಳು, ಕ್ರೆಡಿಟ್ ರೇಟಿಂಗ್ ಸಂಸ್ಥೆಗಳ ಲೆಕ್ಕಾಚಾರವನ್ನೂ ಮೀರಿದ ಮಹತ್ವದ ಸಾಧನೆಯಲ್ಲದೆ, ದೇಶದ ಆರ್ಥಿಕ ಬೆಳವಣಿಗೆಯು ತ್ವರಿತ ಗತಿಯಲ್ಲಿ ಮುಂದುವರಿಯುತ್ತಿದೆ ಎಂಬುದರ ಸೂಚನೆಯೂ ಆಗಿದೆ.
ಹವಾಮಾನ ವೈಪರೀತ್ಯದಿಂದಾಗಿ ಕಳೆದ ಹಣಕಾಸು ವರ್ಷದಲ್ಲಿ ಶೇ.೫.೨ರಷ್ಟು ಮಟ್ಟವನ್ನು ದಾಖಲಿಸಿದ್ದ ಕೃಷಿ ವಲಯದ ಬೆಳವಣಿಗೆಯು ಶೇ.೦.೮ರಷ್ಟು ಇಳಿಕೆಯಾದರೂ, ಉತ್ಪಾದನಾ ವಲಯದಲ್ಲಿನ ಎರಡಂಕಿಯ ಬೆಳವಣಿಗೆ ಮತ್ತು ಗಣಿಗಾರಿಕೆ, ನಿರ್ಮಾಣ ವಲಯಗಳಲ್ಲಿನ ಉತ್ತಮ
ಪ್ರದರ್ಶನದಿಂದಾಗಿ ಜಿಡಿಪಿ ವೃದ್ಧಿಯಾಗಿದೆ. ಇದೇ ಸಂದರ್ಭದಲ್ಲಿ, ಎಸ್‌ಎಸ್‌ಒ ಜನವರಿಯಲ್ಲಿ ಅಂದಾಜಿಸಿದ ಶೇ.೭.೩ರ ಮಟ್ಟವನ್ನು ಪರಿಷ್ಕರಿಸಿ, ೨೦೨೩-೨೪ರ ಹಣಕಾಸು ವರ್ಷದಲ್ಲಿ ಶೇ.೭.೬ರಷ್ಟು ಜಿಡಿಪಿ ದಾಖಲಾಗಲಿದೆಯೆಂದು ವರದಿ ಮಾಡಿದೆ.
ಭಾರತದ ಆರ್ಥಿಕ ಅಭಿವೃದ್ಧಿಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಕ್ತ ಕಂಠದಿಂದ ಪ್ರಶಂಸಿಸುತ್ತಲೇ ಇದೆ. ವಿಶ್ವದ ದೊಡ್ಡ ಗಾತ್ರದ ಅರ್ಥವ್ಯವಸ್ಥೆಗಳ ಪೈಕಿ ಭಾರತ ಮುಂಚೂಣಿಯಲ್ಲಿದೆ. ಈ ಬೆಳವಣಿಗೆಯು ಭಾರತೀಯ ಆರ್ಥಿಕತೆಯ ಶಕ್ತಿ-ಸಾಮರ್ಥ್ಯವನ್ನು ಬಿಂಬಿಸಿದೆ ಹಾಗೂ ೧೪೦ ಕೋಟಿ ಭಾರತೀಯರು ಉತ್ತಮ ಜೀವನ ನಡೆಸಲು ಮತ್ತು ವಿಕಸಿತ ಭಾರತವನ್ನು ರೂಪಿಸಲು ಆರ್ಥಿಕ ಬೆಳವಣಿಗೆಯ ವೇಗವು ನೆರವಾಗಲಿದೆ; ದೇಶದ ಪ್ರಗತಿಗೆ ಪೂರಕವಾಗಿ ನಮ್ಮ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಪ್ರಧಾನಿ ಮೋದಿಯವರು ವ್ಯಾಖ್ಯಾನಿಸಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ೨೫ ವರ್ಷ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಹೇಗೆ ಮುನ್ನಡೆಸಬೇಕು ಎಂಬುದರ ಬಗ್ಗೆ ಯೋಜಿಸಬೇಕಿದೆ ಮತ್ತು ಭಾರತವನ್ನು
ಜಾಗತಿಕ ನಾಯಕನಾಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಪ್ರಸ್ತುತಪಡಿಸಿದ ‘ವಿಷನ್ ಇಂಡಿಯಾ’ ದಾಖಲೆಯ ಪಕ್ಷಿನೋಟಗಳು ಯೋಜನಾಬದ್ಧವಾಗಿ ನಡೆಯಬೇಕಿದೆ.
೨೦೨೩-೨೪ನೇ ಆರ್ಥಿಕ ವರ್ಷದ -ಬ್ರವರಿಯವರೆಗೆ ಒಟ್ಟು ೧೮.೪ ಲಕ್ಷ ಕೋಟಿ ರುಪಾಯಿಯಷ್ಟು ಜಿಎಸ್‌ಟಿ ವರಮಾನ ಸಂಗ್ರಹವಾಗಿದ್ದು, ಕಳೆದ ೧೧ ತಿಂಗಳ ಸರಾಸರಿ ಸಂಗ್ರಹವು ೧.೬೭ ಲಕ್ಷ ಕೋಟಿ ರು.ನಷ್ಟಿದೆ. ಕಳೆದ ಹಣಕಾಸು ವರ್ಷದಲ್ಲಿ ಸರಾಸರಿಯು ಮಾಸಿಕ ೧.೫ ಲಕ್ಷ ಕೋಟಿ ರು.ನಷ್ಟಿತ್ತು. ೨೦೨೩-೨೪ರ -ಬ್ರವರಿಯಲ್ಲಿ ೧.೬೮ ಲಕ್ಷ ಕೋಟಿ ರು. ಸಂಗ್ರಹವಾಗಿದೆ. ಸತತ ೧೨ ಬಾರಿ ಮಾಸಿಕ ಜಿಎಸ್‌ಟಿ ವರಮಾನ ೧.೫ ಲಕ್ಷ ಕೋಟಿ ರು. ದಾಟಿದೆ.
ದೇಶದಲ್ಲಿ ಕಳೆದ ೫ ತಿಂಗಳ ಅವಽಯಲ್ಲಿ ಉತ್ಪಾದನಾ ಚಟುವಟಿಕೆ ತೀವ್ರ ಏರಿಕೆ ಕಂಡಿದ್ದು, ಇದಕ್ಕೆ ಪೂರಕವಾಗಿ ಮಾರಾಟವೂ ವಿಸ್ತರಣೆಯಾಗಿದೆ.
ಹೊಸ ರಫ್ತು ಆರ್ಡರ್‌ಗಳ ವಿಸ್ತರಣೆಯೂ ಹೆಚ್ಚಿದೆ. ಅಂದರೆ, ಭಾರತದಲ್ಲಿ ತಯಾರಾಗುವ ಉತ್ಪನ್ನಗಳಿಗೆ ಆಸ್ಟ್ರೇಲಿಯಾ, ಬಾಂಗ್ಲಾದೇಶ,
ಬ್ರೆಜಿಲ್, ಕೆನಡಾ, ಇಂಡೋನೇಷ್ಯಾ, ಅಮೆರಿಕ, ಯುಎಇ ಮೊದಲಾದ ದೇಶಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ದೇಶೀಯ ವಹಿವಾಟು ಮತ್ತು ಆಮದು ವಹಿವಾಟು ಕೂಡ ಹೆಚ್ಚಿದೆ. ಜಿಡಿಪಿ ಬೆಳವಣಿಗೆ ಮತ್ತು ಜಿಎಸ್‌ಟಿ ಆದಾಯದ ಅಂಕಿ-ಅಂಶಗಳು, ಭಾರತೀಯ ಆರ್ಥಿಕತೆಯ ದೃಢತೆ ಹಾಗೂ ದೇಶೀಯ ಬಳಕೆಯ ಪುರಾವೆಗಳಾಗಿವೆ. ೨೦೨೭ರ ವೇಳೆಗೆ ಭಾರತದ ಜಿಡಿಪಿಯು ಈಗಿನ ೪.೧ ಟ್ರಿಲಿಯನ್ ಡಾಲರ್‌ನಿಂದ ೭.೩೦ ಟ್ರಿಲಿಯನ್ ಡಾಲರ್‌ಗೆ
ವಽಸಿ, ದೇಶವು ಜಗತ್ತಿನ ೩ನೇ ಅತಿದೊಡ್ಡ ಆರ್ಥಿಕತೆ ಎನಿಸಿಕೊಳ್ಳಲಿದೆ. ಇಲ್ಲಿ ಪ್ರಸ್ತುತವೆನಿಸುವ ಮತ್ತೊಂದು ವಿಚಾರವೆಂದರೆ, ವಿಶ್ವದ ‘ಟಾಪ್ ಟೆನ್’ ಆರ್ಥಿಕತೆಗಳಲ್ಲಿ ೩ನೇ ಸ್ಥಾನದಲ್ಲಿದ್ದ ಜಪಾನ್, ಆರ್ಥಿಕ ಹಿಂಜರಿತಕ್ಕೆ ಪ್ರವೇಶಿಸಿ ನಾಲ್ಕನೇ ಸ್ಥಾನಕ್ಕೆ (೪.೨ ಟ್ರಿಲಿಯನ್ ಡಾಲರ್) ಜಾರಿದೆ.
ಇದೀಗ ಮೂರನೆಯ ಸ್ಥಾನದಲ್ಲಿ ಜರ್ಮನಿ (೪.೪ ಟ್ರಿಲಿಯನ್ ಡಾಲರ್) ಇದ್ದು, ೪.೧ ಟ್ರಿಲಿಯನ್ ಡಾಲರ್ ಆರ್ಥಿಕತೆಯೊಂದಿಗೆ ಭಾರತ ೫ನೇ ಸ್ಥಾನದಲ್ಲಿದೆ. ೨೦೨೭ಕ್ಕೆ ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕಲಿರುವ ಭಾರತವು, ೨೦೪೭ರ ವೇಳೆಗೆ ೩೦ ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯನ್ನು ತಲುಪುವ ಸಾಧ್ಯತೆಯಿದೆ. ಇದು ಕೈಗೂಡಬೇಕೆಂದರೆ, ತಲಾ ಆದಾಯವು ಈಗಿನ ೨೪೫೦ ಡಾಲರ್‌ನಿಂದ ಕನಿಷ್ಠ ೧೩,೪೮೬ ಡಾಲರ್‌ಗೆ ಮುಟ್ಟಬೇಕು. ಹೀಗಾಗಿ ಭಾರತದ ಜಿಡಿಪಿಯು ಶೇ.೧೨ರಷ್ಟು ಬೆಳೆಯಬೇಕಾಗುತ್ತದೆ. ಒಟ್ಟು ಸ್ಥಿರ ಬಂಡವಾಳ ಹೂಡಿಕೆಯು ಈಗಿನ ಜಿಡಿಪಿಯನ್ನು ಶೇ.೨೮ರಿಂದ ಶೇ.೩೨ಕ್ಕೆ ಹೆಚ್ಚಿಸಬೇಕಾಗುತ್ತದೆ.
ಹಣದುಬ್ಬರವು ಬಂಡೆಯಂತೆ ಅಲುಗಾಡದೆ ನಿಂತಂತಿದೆ. ಇದು ದೇಶದ ಎರಡಂಕಿ ಪ್ರಗತಿಗೆ ಅಡ್ಡಗಾಲಿಡುತ್ತಿದೆ. ಈ ನಿಟ್ಟಿನಲ್ಲಿ ಬೆಲೆ ಇಳಿಕೆಯ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಗಾ ಇಟ್ಟಿದೆ. ಹಣದುಬ್ಬರ ಇಳಿಕೆಯಾದರಷ್ಟೇ ಸುಸ್ಥಿರ ಬೆಳವಣಿಗೆ ಸಾಧ್ಯ. ಆಹಾರ ಬೆಲೆ ಇಳಿಕೆಯಿಂದಾಗಿ ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಮೂರು ತಿಂಗಳ ಕನಿಷ್ಠವಾದ ಶೇ.೫.೧ಕ್ಕೆ ಇಳಿದಿದೆಯೆಂದು ಎಸ್‌ಎಸ್‌ಒ ತಿಳಿಸಿದೆ. ಫೆಬ್ರವರಿಯ ಚಿಲ್ಲರೆ ಹಣದುಬ್ಬರವು ಶೇ.೫.೦೯ ಆಗಿದ್ದು, ಚಿಲ್ಲರೆ ಮತ್ತು ಸಗಟು ಹಣದುಬ್ಬರದ ದರಗಳು ಇಳಿಕೆ ಕಾಣುತ್ತ ನಿಯಂತ್ರಣದಲ್ಲಿವೆ.
ಇದು ಸ್ವಲ್ಪ ಸಮಾಧಾನಕರ ವಿಷಯ. ಸಗಟು ಹಣದುಬ್ಬರವೂ ಶೇ.೦.೭೩ರಿಂದ ಶೇ.೦.೨೭ಕ್ಕೆ ಇಳಿದಿದೆ. ಏತನ್ಮಧ್ಯೆ, ಕಳೆದ ೧೦ ವರ್ಷಗಳಲ್ಲಿ ದೇಶದ ಸರಾಸರಿ ಹಣದುಬ್ಬರವು ಶೇ.೫ರಿಂದ ಶೇ.೫.೫ರಷ್ಟಿದೆ. ಹೀಗಾಗಿ ಆರ್‌ಬಿಐ ಕಳೆದ ವರ್ಷದ -ಬ್ರವರಿಯಿಂದಲೂ ರೆಪೋ ದರದಲ್ಲಿ ಶೇ.೬.೫ರ ಯಥಾಸ್ಥಿತಿ ಯನ್ನು ಕಾಯ್ದುಕೊಂಡಿದೆ. ಅಲ್ಲದೆ, ದೇಶದ ಆರ್ಥಿಕ ಸ್ಥಿತಿ ಸದೃಢವಾಗಿರುವುದರಿಂದ, ಮುಂದಿನ ಹಣಕಾಸು ನೀತಿ ಸಮಿತಿಯ ಸಭೆಯ (ಎಂಪಿಸಿ) ವೇಳೆಗೆ ರೆಪೋ ಇಳಿಕೆಯಾಗುವ ನಿರೀಕ್ಷೆಯಿದ್ದರೂ, ಚಿಲ್ಲರೆ ಹಣದುಬ್ಬರವು ಶೇ.೫ಕ್ಕಿಂತ ಹೆಚ್ಚಿರುವುದರಿಂದ ಇದನ್ನು ಶೇ.೪ರ ಮಿತಿಯಲ್ಲಿ
ಕಾಯ್ದುಕೊಂಡು ಶ್ರಮಿಸಬೇಕಾಗಿರುವ ಪ್ರಸ್ತಾವನೆಯನ್ನು ಆರ್‌ಬಿಐ ಮಾಡುತ್ತಲೇ ಇದೆ.
ಮುಖ್ಯವಾಗಿ ಈಗಿನ ಪ್ರಮುಖ ಸವಾಲುಗಳೆಂದರೆ, ಹಳಿ ತಪ್ಪಿರುವ ಗ್ರಾಮೀಣ ಬೇಡಿಕೆಯನ್ನು ಪುನಶ್ಚೇತನಗೊಳಿ ಸುವುದು. ೨೦೨೩ರಲ್ಲಿ ಮುಂಗಾರು ಮತ್ತು ಹಿಂಗಾರು ಎರಡೂ ಕೈಕೊಟ್ಟಿರುವುದರಿಂದ, ಕೃಷಿಪ್ರಧಾನವಾದ ನಮ್ಮ ಅರ್ಥವ್ಯವಸ್ಥೆಗೆ ಮರ್ಮಾಘಾತವಾಗಿದೆ. ಹೀಗಾಗಿ ಕೃಷಿ ಕ್ಷೇತ್ರ ಮತ್ತು ಗ್ರಾಮೀಣ ಆದಾಯ ಇಳಿಮುಖವಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಸಕಾಲದಲ್ಲಿ ಬೆಳೆವಿಮೆ, ಬರ ಪರಿಹಾರದ ಬಿಡುಗಡೆಗೆ ಆದ್ಯತೆ ನೀಡಬೇಕಾಗಿದೆ; ಅಂದಾಗ ಮಾತ್ರ ಗ್ರಾಮೀಣ ಅರ್ಥವ್ಯವಸ್ಥೆಯು ಕೊಂಚ ಮಟ್ಟಿಗೆ ಬಿಡುಗಡೆಯ ನಿಟ್ಟುಸಿರುಬಿಟ್ಟೀತು.
ಶಿಕ್ಷಣವು ಒಂದು ಸರ್ವಶ್ರೇಷ್ಠ ಬಾಬತ್ತು ಎಂದು ಪರಿಗಣಿಸಿ, ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರ ಪ್ರಕಾರ ಜಿಡಿಪಿಯ ಶೇ.೬ರಷ್ಟು ಹಣವನ್ನು ವೆಚ್ಚ ಮಾಡುವುದು ಅವಶ್ಯಕ. ಇದೀಗ ಅದು ಶೇ.೨.೯ರಷ್ಟು ಮಾತ್ರ ಇದೆ. ೨೦೨೩ರಲ್ಲಿ ಆರೋಗ್ಯ ವಲಯಕ್ಕೆ ಶೇ.೨.೧ರಷ್ಟು ವೆಚ್ಚ ಮಾಡ ಲಾಗಿದ್ದು,
ಇದು ಶೇ.೫ಕ್ಕೆ ಏರಬೇಕಿದೆ. ಎಫ್ ಎಂಸಿಜಿ ಕಂಪನಿಗಳ ಪ್ರಮಾಣ ಶೇ.೯.೬ರಷ್ಟು ಇಳಿಕೆಯಾಗಿದೆಯೆಂದು ತಿಳಿದುಬಂದಿದ್ದು, ಇದಕ್ಕೆ ಉತ್ತೇಜನ ದೊರೆಯಬೇಕಾಗಿದೆ. ಕೇಂದ್ರ ಸರಕಾರವು ಮೂಲಸೌಕರ್ಯಗಳ ಮೇಲಿನ ಹೂಡಿಕೆಯನ್ನು ಹೆಚ್ಚಿಸಿದ್ದರೂ, ಖಾಸಗಿ ಬಂಡವಾಳ ಇನ್ನೂ ಹೆಚ್ಚಾಗಬೇಕಿದೆ.
ಡಿಜಿಟಲೀಕರಣವು ಇನ್ನಷ್ಟು ವೇಗವನ್ನು ಪಡೆದುಕೊಳ್ಳ ಬೇಕು. ಜತೆಗೆ, ಮಷಿನ್ ಲರ್ನಿಂಗ್, ಕೃತಕ ಬುದ್ಧಿಮತ್ತೆ, ಐಒಟಿಗಳಂಥ ನೂತನ ಜನಪ್ರಿಯ ತಂತ್ರಜ್ಞಾನಗಳ ಬಗ್ಗೆ ಯಾವುದೇ ಆರೋಪ ಬಂದರೂ, ಇವೆಲ್ಲವೂ ಹೊಸ ಮಾದರಿಯ ಉದ್ಯೋಗ ಸೃಷ್ಟಿಯ ತಾಕತ್ತು ಹೊಂದಿವೆಯೆಂದು
ನಿರ್ಣಯಿಸಬೇಕಾಗಿದೆ. ವಿಕಸಿತ ಭಾರತದ ಪರಿಕಲ್ಪನೆಯಲ್ಲಿ ಯುವಕರಿಗೆ ಗುಣಮಟ್ಟದ ಶಿಕ್ಷಣ ಹಾಗೂ ಕೌಶಲಾಧರಿತ ತರಬೇತಿ ನೀಡಬೇಕಿದೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮಹಿಳೆಯರನ್ನು ಸಬಲೀಕರಿಸ ಬೇಕಿದೆ. ಬಡತನ ನಿರ್ಮೂಲನೆಗೆ ಮತ್ತು ಕೃಷಿ ವಲಯಕ್ಕೆ ಆದ್ಯತೆ ನೀಡಬೇಕಿದೆ. ಇವು ಸವಾಲುಗಳೂ ಆಗಿವೆ. ಆರ್ಥಿಕ ಬೆಳವಣಿಗೆಯ ಪ್ರಮಾಣವು ಆರೋಗ್ಯಕರ ಮಟ್ಟದಲ್ಲಿದೆ.
ಕಳವಳದ ವಿಚಾರ ವೆಂದರೆ, ಮಾರುಕಟ್ಟೆಯಲ್ಲಿನ ಖರೀದಿಯ ಪ್ರಮಾಣವು ಹೆಚ್ಚು ಬಲವನ್ನು ಪಡೆದುಕೊಂಡಿಲ್ಲ. ಹಣದುಬ್ಬರದ ನಿಯಂತ್ರಣ, ಕೃಷಿ
ಕ್ಷೇತ್ರದ ಚಟುವಟಿಕೆಗಳಿಗೆ ಇಂಬು ನೀಡುವಿಕೆ ಆದ್ಯತೆಯ ವಿಷಯಗಳಾಗಬೇಕಿದೆ. ಈ ನಿಟ್ಟಿನಲ್ಲಿ, ಈ ಬಾರಿಯ ಬಜೆಟ್ ನಲ್ಲಿ ಪ್ರಾಶಸ್ತ್ಯ ನೀಡಿರುವುದು ಶ್ಲಾಘನೀಯ.
(ಲೇಖಕರು ವಿಜಯಾ ಬ್ಯಾಂಕ್‌ನ ನಿವೃತ್ತ ಮುಖ್ಯ
ಪ್ರಬಂಧಕರು)