ವಿತ್ತಲೋಕ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಜಾಗತಿಕ ಬಿಕ್ಕಟ್ಟುಗಳ ಹೊರತಾಗಿಯೂ ಭಾರತದ ಆರ್ಥಿಕತೆಯು ಅತಿವೇಗವಾಗಿ ಬೆಳೆಯುತ್ತಿದೆ. ದೇಶೀಯ ಬೇಡಿಕೆಯ ಹೆಚ್ಚಳ ಮತ್ತು ಸರಕಾರದ ನೀತಿಗಳು ಇದಕ್ಕೆ ಬೆನ್ನೆಲುಬಾಗಿವೆ. ೨೦೨೪-೨೫ನೇ ಹಣಕಾಸು ವರ್ಷದಲ್ಲಿ ಜಿಡಿಪಿಯು ಶೇ.೬.೮ ರಷ್ಟು ಪ್ರಗತಿ ಕಾಣಲಿದೆಯೆಂದು ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಶೇ.೭ರಷ್ಟು ಬೆಳವಣಿಗೆ ಕಾಣಲಿದೆಯೆಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಅಂದಾಜಿಸಿವೆ.
೨೦೨೪-೨೫ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿಯು ಶೇ.೬.೮ರಷ್ಟು ಪ್ರಗತಿ ಕಾಣಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಅಂದಾಜಿಸಿದೆ; ಇದು ಜನವರಿಯಲ್ಲಿ ಪ್ರಕಟಿಸಿದ ಮುನ್ನೋಟದಲ್ಲಿ ಜಿಡಿಪಿಯು ಶೇ.೬.೫ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿತ್ತು. ಇತ್ತೀಚೆಗೆ ಬಿಡುಗಡೆ ಮಾಡಿದ ವಿಶ್ವ ಆರ್ಥಿಕ ಮುನ್ನೋಟದ ವರದಿಯಲ್ಲಿ ಐಎಂಎಫ್ ಇದನ್ನು ಪರಿಷ್ಕರಿಸಿದೆ. ಮಾತ್ರವಲ್ಲದೆ, ೨೦೨೫-೨೬ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿ
ಪಿಯು ದೃಢವಾಗಲಿದೆ ಮತ್ತು ದುಡಿಯುವ ಜನಸಂಖ್ಯೆಯ ಹೆಚ್ಚಳವು ಆರ್ಥಿಕತೆಯ ಬೆಳವಣಿಗೆಗೆ ನೆರವಾಗಲಿದೆ ಎಂದು ಹೇಳಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಭಾರತವು ಬಲಿಷ್ಠ ಸಾಧಕ ರಾಷ್ಟ್ರವಾಗಿರುವುದರಿಂದ ಆರ್ಥಿಕತೆಯ ಬೆಳವಣಿಗೆಯನ್ನು ಪರಿಷ್ಕರಿಸಲಾಗಿದೆ ಎಂದು ಐಎಂಎಫ್ ನ ಮುಖ್ಯ
ಅರ್ಥಶಾಸಜ್ಞ ಪಿಯರೆ ಒಲಿವರ್ ತಿಳಿಸಿದ್ದಾರೆ. ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಕೂಡ ೨೦೨೪- ೨೫ನೇ ಆರ್ಥಿಕ ವರ್ಷಕ್ಕೆ ಸಂಬಂಽಸಿದಂತೆ ಭಾರತದ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ಪರಿಷ್ಕರಿಸಿದ್ದು, ಶೇ.೭ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದೆ.
ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಹೂಡಿಕೆಯು ಸದೃಢವಾಗಲಿದೆ, ಸರಕುಗಳ ಖರೀದಿಯೂ ಸುಧಾರಿಸಲಿದೆ. ಇದು ಆರ್ಥಿಕತೆಯ ವೇಗಕ್ಕೆ ಸಹಕಾರಿ ಯಾಗಲಿದೆ ಎಂಬುದಾಗಿ ಕಳೆದ ವಾರ ಬಿಡುಗಡೆ ಮಾಡಿದ ಪರಿಷ್ಕೃತ ಮುನ್ನೋಟದ ವರದಿಯಲ್ಲಿ ಎಡಿಬಿ ತಿಳಿಸಿದೆ. ಏಷ್ಯಾ ಮತ್ತು ಪೆಸಿಫಿಕ್ ವಲಯದಲ್ಲಿ ಆರ್ಥಿಕತೆಯ ಬೆಳವಣಿಗೆಯ ದೃಷ್ಟಿಯಲ್ಲಿ ಭಾರತವು ದೊಡ್ಡ ಎಂಜಿನ್ ಆಗಿದೆಯೆಂದು ಹೇಳಿರುವ ಎಡಿಬಿ, ೨೦೨೩-೨೪ ಹಾಗೂ ೨೦೨೪-೨೫ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ತುಸು ಮಂದಗತಿಯಲ್ಲಿದ್ದರೂ, ೨೦೨೫-೨೬ನೇ ಆರ್ಥಿಕ ವರ್ಷದಲ್ಲಿ ಶೇ.೭.೨ರಷ್ಟು ಬೆಳವಣಿಗೆ ಕಾಣಲಿದೆಯೆಂದು ತನ್ನ ವರದಿಯಲ್ಲಿ ತಿಳಿಸಿದೆ.
ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆಯು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಈ ನಿಟ್ಟಿನಲ್ಲಿ, ಆರ್ಥಿಕ ಪ್ರಗತಿ ಮತ್ತು ಸ್ಥಿರತೆಗೆ ಹೆಚ್ಚಿನ ಒತ್ತನ್ನು ನೀಡುವ ದೃಷ್ಟಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಬದಲಿಸಿಲ್ಲ. ಹಣದುಬ್ಬರ ನಿಯಂತ್ರಣ ಮತ್ತು ಆರ್ಥಿಕ ಬೆಳವಣಿಗೆಗಳೆರಡನ್ನೂ ಗಮನದಲ್ಲಿರಿಸಿಕೊಂಡು ಆರ್‌ಬಿಐ ಮುಂದುವರಿಯುತ್ತಿರುವುದು ಆರ್ಥಿಕಾಭಿವೃದ್ಧಿಗೆ ಉತ್ತೇಜನಕಾರಿಯಾಗಿದೆ. ತಯಾರಿಕಾ ಮತ್ತು ಸೇವಾ ವಲಯದಲ್ಲಿನ ಸದೃಢವಾದ ಬೆಳವಣಿಗೆಯು ೨೦೨೩-೨೪ನೇ ಹಣ ಕಾಸು ವರ್ಷದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಹೂಡಿಕೆಯೂ ಚೇತರಿಕೆ ಕಾಣಲಿದೆ, ಬಳಕೆಗೆ ಉತ್ತೇಜನ ಸಿಗಲಿದೆ. ಜಾಗತಿಕ ಬಿಕ್ಕಟ್ಟಿನಿಂದಾಗಿ ಹಣದುಬ್ಬರದ ಇಳಿಕೆ ಅಥವಾ ಏರಿಕೆಯ ಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.
ಬಹುರಾಷ್ಟ್ರೀಯ ಕಂಪನಿಗಳು ಪೂರೈಕೆಯ ಸರಪಳಿಯ ವೈವಿಧ್ಯಕ್ಕೆ ಒತ್ತುನೀಡುತ್ತವೆ. ಇದರಿಂದ ದೇಶದಲ್ಲಿನ ತಯಾರಿಕಾ ವಲಯದ ಪ್ರಕ್ರಿಯೆ ವಿಸ್ತರಣೆ ಯಾಗಲಿದೆ. ಇದು ದೇಶದ ರಫ್ತು ಹೆಚ್ಚಳದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ವರದಿ ತಿಳಿಸಿದೆ. ಭಾರತವು ಪ್ರಸಕ್ತ ವರ್ಷದಲ್ಲಿಯೂ ವೇಗವನ್ನು ಕಾಯ್ದುಕೊಂಡಿದ್ದು, ಇಡೀ ವಿಶ್ವದಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿಯುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ.
ಹವಾಮಾನ ವೈಪರೀತ್ಯ ಹೆಚ್ಚುತ್ತಿದ್ದು ಇದು ಆರ್ಥಿಕತೆಯ ಮೇಲೆ ಆವರಿಸಿಕೊಳ್ಳುವ ಕಪ್ಪುಮೋಡದಂತಿದೆ ಎಂದು ವಿಶ್ವಬ್ಯಾಂಕ್ ವರದಿ ಮಾಡಿದೆ. ಆರ್ಥಿಕತೆ ಹೆಚ್ಚು ಚೇತರಿಸಿಕೊಳ್ಳಬೇಕು ಎಂದರೆ ದೇಶಗಳು ಖಾಸಗಿ ಹೂಡಿಕೆಗೆ ಉತ್ತೇಜನ ಮತ್ತು ಉದ್ಯೋಗಾವಕಾಶಗಳ ವರ್ಧನೆಗೆ ಆದ್ಯತೆ ನೀಡುವ ರೀತಿಯಲ್ಲಿ ನೀತಿಗಳನ್ನು ಅಳವಡಿಸಿಕೊಳ್ಳಬೇಕು. ದಕ್ಷಿಣ ಏಷ್ಯಾದ ಆರ್ಥಿಕತೆಯ ಹೆಚ್ಚಿನ ಪಾಲನ್ನು ಹೊಂದಿರುವ ಭಾರತದಲ್ಲಿ ಉದ್ಯಮ ಮತ್ತು ಸೇವಾ ವಲಯಗಳು ಸದೃಢವಾಗಿ ಉಳಿಯುವ ನಿರೀಕ್ಷೆಯನ್ನು ವಿಶ್ವಬ್ಯಾಂಕ್ ವ್ಯಕ್ತಪಡಿಸಿದೆ. ಭಾರತದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಆರ್ಥಿಕ ಚಟುವಟಿಕೆಗಳು ಚಕಿತಗೊಳಿಸು ವಂತಿವೆ.
ಬೆಳವಣಿಗೆಯ ದರ ಹೆಚ್ಚಿದೆ. ಹೂಡಿಕೆಯಲ್ಲಿ ಹೆಚ್ಚಳವಾಗಿದೆ, ಸರಕು ಮತ್ತು ಸೇವೆಗಳಲ್ಲಿ ಸರಕಾರ ಮಾಡುವ ವೆಚ್ಚ ಏರಿದೆ. ಭಾರತದ ಕಾರ್ಯಕ್ಷಮತೆ
ಪ್ರಶಂಸಾರ್ಹ ರೀತಿಯಲ್ಲಿ ವೃದ್ಧಿಯಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ತಯಾರಿಕಾ ವಲಯ ಮತ್ತು ನಿರ್ಮಾಣ ವಲಯದಲ್ಲಿ ಕ್ರಮವಾಗಿ ಶೇ.೮.೫ ಮತ್ತು
ಶೇ.೧೦.೭ರಷ್ಟು ಬೆಳವಣಿಗೆ ದಾಖಲಾಗುವ ನಿರೀಕ್ಷೆಯಿದೆ. ಫೆಬ್ರವರಿ ತಿಂಗಳಲ್ಲಿ ತಯಾರಿಕಾ ವಲಯದ ಬೆಳವಣಿಗೆಯ ಪ್ರಮಾಣವು ಐದು ತಿಂಗಳುಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಇದು, ಕಾರ್ಖಾನೆಗಳಲ್ಲಿ ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ಮಾರಾಟವು ಹೆಚ್ಚಾದುದರ ಪರಿಣಾಮವಾಗಿದೆ.
ತಯಾರಿಕಾ ವಲಯದಲ್ಲಿನ ಬೆಳವಣಿಗೆಯ ಕಾರಣದಿಂದಾಗಿ ಒಟ್ಟಾರೆ ಕೈಗಾರಿಕಾ ವಲಯವು ಈ ವರ್ಷದಲ್ಲಿ ಶೇ.೯ರಷ್ಟು ಬೆಳವಣಿಗೆ ಕಂಡಿದೆ. ಆದರೆ, ಕೃಷಿ
ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳಲ್ಲಿ ಬೆಳವಣಿಗೆ ತೀರಾ ಕಡಿಮೆಯಾಗಿದೆ; ಹವಾಮಾನ ವೈಪರೀತ್ಯವಿಲ್ಲದಿದ್ದರೆ ಇದು ಚೇತರಿಸಿಕೊಳ್ಳುತ್ತಿತ್ತು. ಬೆಳವಣಿಗೆಯ ಪ್ರಮಾಣ ಚೆನ್ನಾಗಿದೆ ಮತ್ತು ಆರೋಗ್ಯಕರ ಮಟ್ಟದಲ್ಲಿದೆ ಎಂದು ಅಂಕಿ-ಅಂಶಗಳು ಹೇಳುತ್ತಿವೆಯಾದರೂ ತುಸು ಕಳವಳಕ್ಕೆ ಕಾರಣವಾದ ಸಂಗತಿಗಳೂ ಇವೆ. ಆಹಾರ ವಸ್ತುಗಳ ಹಣದುಬ್ಬರವು ಈಗಲೂ ತುಸು ಹೆಚ್ಚಾಗಿದೆಯಲ್ಲದೆ ಗ್ರಾಮೀಣ ಪ್ರದೇಶದ ಖರೀದಿ ಕೆಳಮಟ್ಟದಲ್ಲಿ ಉಳಿದುಕೊಂಡಿದೆ. ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವುದು ಹಾಗೂ ಕೃಷಿ ಕ್ಷೇತ್ರದ ಚಟುವಟಿಕೆಗಳಿಗೆ ಇನ್ನಷ್ಟು ಇಂಬು ಕೊಡುವುದು ಸರಕಾರದ ಆದ್ಯತೆಯಾಗಬೇಕಾಗಿದೆ.
ಪೆಬ್ರವರಿಯಲ್ಲಿ ಮಂಡನೆಯಾದ ಮಧ್ಯಂತರ ಬಜೆಟ್ ನಲ್ಲಿ ವಿತ್ತ ಮಂತ್ರಿಯವರು ಕಳೆದೊಂದು ದಶಕದಲ್ಲಿ ತೆರಿಗೆ ಸಂಗ್ರಹ ದುಪ್ಪಟ್ಟಾಗಿದೆಯೆಂದು ಘೋಷಿಸಿದರು. ಆದರೆ ಆ ತೆರಿಗೆ ಹಣದಿಂದ ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಹಲವು ಸಮಸ್ಯೆಗಳು ನೀಗಬೇಕೆನ್ನುವ ಅಪೇಕ್ಷೆಯಲ್ಲಿ ಪ್ರಜೆಗಳಿರುವುದನ್ನೂ ಸರಕಾರ ಒಪ್ಪಿಕೊಳ್ಳಬೇಕು ಹಾಗೂ ಅವರನ್ನು ಸಂಕಷ್ಟದಿಂದ ಮೇಲಕ್ಕೆತ್ತಬೇಕು.
ಇದೇ ಸಂದರ್ಭದಲ್ಲಿ ಸರಕಾರವು, ತನ್ನ ದೃಷ್ಟಿಯಲ್ಲಿರುವುದು ಬಡವರು, ರೈತರು, ಮಹಿಳೆಯರು, ಯುವಕರು ಎಂಬ ನಾಲ್ಕೇ ಜಾತಿಗಳು ಎನ್ನುವ ಉದಾತ್ತ ಚಿಂತನೆಯನ್ನು ಬಜೆಟ್ ಮೂಲಕ ಬಿತ್ತಿರುವುದು ಸಮಂಜಸವೇ ಆಗಿದೆ. ಅಭಿವೃದ್ಧಿ ಯೋಜನೆ, ಧಾರ್ಮಿಕ ಸ್ಪಂದನೆ, ಜನಕಲ್ಯಾಣದ ಆಲೋಚನೆಗಳನ್ನು
ಜತೆಗೂಡಿಸಿಕೊಂಡು ಸಾಗಲು ಪ್ರಯತ್ನಿಸುತ್ತಿರುವ ಆಡಳಿತ ಪಕ್ಷದ ೨೦೪೭ರ ವಿಕಸಿತ ಭಾರತದಂಥ ದೂರದೃಷ್ಟಿಗಳು ದೇಶವನ್ನು ಹೊಸ ಎತ್ತರದತ್ತ ಕೊಂಡೊಯ್ಯುವಂತಾಗಲಿ.
(ಲೇಖಕರು ವಿಜಯಾ ಬ್ಯಾಂಕ್‌ನ ನಿವೃತ್ತ ಮುಖ್ಯ
ಪ್ರಬಂಧಕರು)