ವಿಚಾರ ಮಂಟಪ
ಶ್ರೀನಿವಾಸಮೂರ್ತಿ ಎನ್.ಸುಂಡ್ರಹಳ್ಳಿ
‘ಓದು ಒಕ್ಕಾಲು, ಬುದ್ಧಿ ಮುಕ್ಕಾಲು’ ಎಂಬಂತಿರಬೇಕು ನಮ್ಮ ಶಿಕ್ಷಣಕ್ರಮ. ಮಕ್ಕಳು ಬೆಳೆದಂತೆಲ್ಲಾ ಅವರಿಗೆ ನೀಡುವ ಶಿಕ್ಷಣವು, ಅವರನ್ನು
ಅತ್ಯುತ್ತಮ ಪ್ರಜೆಯನ್ನಾಗಿ ರೂಪಿಸುವಂತಿರಬೇಕು. ಕಲಿಕೆಯು ಜೀವನಾನುಭವದೊಂದಿಗೆ ಇರಬೇಕೇ ಹೊರತು, ‘ನಾವು ಶಾಲೆಗೆ ಮಕ್ಕಳನ್ನು
ಕಳಿಸುವುದು ಓದಲಷ್ಟೇ’ ಎಂಬಂತಿರಬಾರದು. ಓದುವುದೇ ಬೇರೆ, ಕಲಿಯುವುದೇ ಬೇರೆ.
ನಾವು ಓದುವಾಗ, ಗ್ರಾಮೀಣ ಭಾಗಗಳಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ತೀರಾ ಕಡಿಮೆಯಿತ್ತು. ಅಪರೂಪಕ್ಕೆ ಇದ್ದರೂ, ನಮ್ಮನ್ನು ಅಲ್ಲಿಗೆ ಸೇರಿಸಿ ಓದಿಸುವ ಸಾಮರ್ಥ್ಯ ಹೆತ್ತವರಿಗೆ ಇರಲಿಲ್ಲ. ಹೀಗಾಗಿ ನಾವು ಕಲಿತದ್ದು ಸರಕಾರಿ ಶಾಲೆಗಳಲ್ಲಿ. ಮೇಷ್ಟ್ರು ಬರುವ ಮುಂಚೆಯೇ, ಪಕ್ಕದ ಮನೆಯಲ್ಲಿ ಕೊಟ್ಟಿರುತ್ತಿದ್ದ ಶಾಲೆಯ ಬೀಗದ ಕೈ ಪಡೆದುಕೊಂಡು ಬೀಗ ತೆಗೆದು, ಕೊಠಡಿಯ ಕಸ ಗುಡಿಸಿ, ಒರೆಸಿ, ಮುಂದಿನ ಅಂಗಳವನ್ನು ಸ್ವಚ್ಛಮಾಡಬೇಕಿತ್ತು.
ಅಲ್ಲಿ ಮಕ್ಕಳದು ಸೇರಿದಂತೆ ನಾಯಿ-ಕೋಳಿಗಳ ಹಿಕ್ಕೆಗಳೂ ಇರುತ್ತಿದ್ದವು. ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಿದ್ದಾಗ, ಶಾಲಾ ಆವರಣವನ್ನೆಲ್ಲಾ ಸಗಣಿ ಹಾಕಿ ಸಾರಿಸುವ ಕೆಲಸವನ್ನೂ ನಾವೇ ಮಾಡುತ್ತಿದ್ದೆವು (ಅಲ್ಲಿ ಲಿಂಗ, ಜಾತಿ, ವರ್ಗ, ಆಸ್ತಿ-ಅಂತಸ್ತುಗಳ ಭೇದವಿರುತ್ತಿರಲಿಲ್ಲ). ಆಗ ಶೌಚಾಲಯಗಳು ಇದ್ದಿರಲಿಲ್ಲ; ಒಂದೊಮ್ಮೆ ಇದ್ದಿದ್ದರೆ ಅವನ್ನೂ ನಾವೇ ಸ್ವಚ್ಛ ಮಾಡಬೇಕಿರುತ್ತಿತ್ತು. ಆಗ ನಮ್ಮ ಪೋಷಕರು ಮೇಷ್ಟ್ರ ವಿರುದ್ಧ ಧರಣಿ ಕೂರಲು ಬರುತ್ತಿದ್ದರಾ? ಗೊತ್ತಿಲ್ಲ.
ಜಪಾನಿನ ಶಾಲೆಗಳಲ್ಲಿ ‘ಗಕ್ಕೋ ಸೋಜಿ’ ಎನ್ನಲಾಗುವ ಒಂದು ವ್ಯವಸ್ಥೆ ಅಥವಾ ಸಂಪ್ರದಾಯವಿದೆ. ಇದರ ಪ್ರಕಾರ, ಶಾಲೆಯ ಆವರಣ, ಶೌಚಾಲಯ, ಕೊಠಡಿ ಇವೆಲ್ಲವನ್ನೂ ವಿದ್ಯಾರ್ಥಿಗಳೇ ಸ್ವಚ್ಛ ಮಾಡಬೇಕು. ಇದಕ್ಕಾಗಿ ಎಲ್ಲ ಬಗೆಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಅಲ್ಲಿ ಇದಕ್ಕೆಂದೇ
ಹೆಚ್ಚುವರಿ ಕೆಲಸಗಾರರನ್ನು ನೇಮಿಸಿಕೊಳ್ಳುವುದಿಲ್ಲ. ವಿದ್ಯಾರ್ಥಿಗಳೇ ಪಾಳಿಯ ಮೇಲೆ ಈ ಜವಾಬ್ದಾರಿಯನ್ನು ನಿರ್ವಹಿಸಬೇಕು. ಸಮಯಪಾಲನೆ ಅಲ್ಲಿ ಕಡ್ಡಾಯ; ಶಾಲೆಗೆ ಬರುವಲ್ಲಿ ವಿದ್ಯಾರ್ಥಿಯು ೫ ನಿಮಿಷ ತಡಮಾಡಿದರೂ, ಒಂದು ವಾರ ಪ್ರತಿದಿನ ಶಾಲಾ ಆವರಣವನ್ನು ಸ್ವಚ್ಛಮಾಡುವ ಶಿಕ್ಷೆಯನ್ನು ವಿಧಿಸಲಾಗುತ್ತದೆ.
ಸಮಯಪ್ರಜ್ಞೆ ರೂಢಿಸುವ ದೃಷ್ಟಿಯಿಂದ ಇದು ಅನಿವಾರ್ಯ. ಯಾವೊಬ್ಬ ಪೋಷಕರೂ ಇದರ ವಿರುದ್ಧ ಮಾತನಾಡುವುದಿಲ್ಲ. ಈ ವ್ಯವಸ್ಥೆಯನ್ನು
ಅಳವಡಿಸಿಕೊಂಡಿರುವುದರ ಹಿಂದೆ, ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯನ್ನೂ ಕಾರ್ಯಕಾರಿ/ ಉತ್ಪಾದನಾಶೀಲನನ್ನಾಗಿಸುವ ಮತ್ತು ಎಂಥ ಸಂದರ್ಭದಲ್ಲೂ ಯಾವುದೇ ಜವಾಬ್ದಾರಿಯನ್ನು ಹೊರಲು ಸಜ್ಜುಗೊಳಿಸುವ ಮೂಲಗುರಿಯಿದೆ. ಭಾರತದ ಗುರುಕುಲ ಶಿಕ್ಷಣ ಕ್ರಮವಿದ್ದುದೂ ಹೀಗೆಯೇ- ಕಲಿಕೆಯೊಂದಿಗೆ ಜೀವನಾನುಭವವೂ ದಕ್ಕುತ್ತಿತ್ತು; ವಿದ್ಯಾರ್ಥಿಯ ನೈತಿಕ ಮತ್ತು ಸಾಮಾಜಿಕ ವರ್ತನೆಗಳ ಮೇಲೆ ಗುರುಗಳು ನಿಗಾ
ವಹಿಸುತ್ತಿದ್ದರು.
‘ಓದು ಒಕ್ಕಾಲು, ಬುದ್ಧಿ ಮುಕ್ಕಾಲು’ ಎಂಬಂತಿರಬೇಕು ನಮ್ಮ ಶಿಕ್ಷಣಕ್ರಮ. ಮಕ್ಕಳು ಬೆಳೆದಂತೆಲ್ಲಾ ಅವರಿಗೆ ನೀಡುವ ಶಿಕ್ಷಣವು, ಅವರನ್ನು ಅತ್ಯುತ್ತಮ ಪ್ರಜೆಯನ್ನಾಗಿ ರೂಪಿಸುವಂತಿರಬೇಕು. ಕಲಿಕೆಯು ಜೀವನಾನುಭವದೊಂದಿಗೆ ಇರಬೇಕೇ ಹೊರತು, ‘ನಾವು ಶಾಲೆಗೆ ಮಕ್ಕಳನ್ನು ಕಳಿಸುವುದು ಓದ ಲಷ್ಟೇ’ ಎಂಬಂತಿರಬಾರದು. ಓದುವುದೇ ಬೇರೆ, ಕಲಿಯುವುದೇ ಬೇರೆ. ಮಕ್ಕಳನ್ನು ಶಾಲೆಗೆ ಕಲಿಯಲು ಕಳಿಸಬೇಕೇ ಹೊರತು ಕೇವಲ ಓದುವುದಕ್ಕಲ್ಲ. ಆದರೆ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ, ಪಠ್ಯಕ್ಕೆ ಹೊರತಾದ ಯಾವೊಂದು ಕೆಲಸವನ್ನೂ ಮಕ್ಕಳಿಂದ ನಿರೀಕ್ಷಿಸಲಾಗುವುದಿಲ್ಲ.
‘ಕೊಠಡಿ ಗಲೀಜಾಗಿದೆ, ಅಲ್ಲೇ ಇರುವ ಪೊರಕೆಯಿಂದ ಸ್ವಚ್ಛಗೊಳಿಸಿ’ ಎಂದರೆ ಪರಿಣಾಮ ಬೇರೆಯೇ ಇರುತ್ತದೆ. ತಾವು ಬಳಸುವ ಶೌಚಾಲಯ ಎಷ್ಟೇ ಕೊಳಕಾಗಿದ್ದರೂ ಹಾಗೆಯೇ ಬಳಸಿ ಬರುತ್ತಾರೆಯೇ ಹೊರತು, ಅದಕ್ಕೊಂದಿಷ್ಟು ನೀರು ಚೆಲ್ಲಿ ತೊಳೆಯುವ ಗೋಜಿಗೆ ಹೋಗುವುದಿಲ್ಲ. ಕೆಲವೊಮ್ಮೆ ಬಾಧೆ ತೀರಿಸಿಕೊಂಡ ನಂತರ ನೀರು ಹಾಕದೆಯೇ ಬರುವುದೂ ಉಂಟು. ಒಂದು ವೇಳೆ ವಿದ್ಯಾರ್ಥಿಗಳಿಂದ ಅವನ್ನು ಚೊಕ್ಕಗೊಳಿಸಿದರೆ, ‘ನಮ್ಮ ಮಕ್ಕಳಿಂದ ಇಂಥ ಕೆಲಸಗಳನ್ನೆಲ್ಲಾ ಮಾಡಿಸಬೇಡಿ’ ಎಂದು ಪೋಷಕರೂ ಮಾತಿನಲ್ಲೇ ತಪರಾಕಿ ನೀಡುತ್ತಾರೆ. ಕೊಠಡಿಗಳಲ್ಲಿ ಕಾಗದದ ತುಣುಕು, ಪೆನ್ಸಿಲ್ ಚೂಪು ಮಾಡಿದ ನಂತರ ಹೊಮ್ಮುವ ಕಸ ಇತ್ಯಾದಿಯನ್ನು ಕೂತಲ್ಲಿಯೇ ಎಸೆಯುತ್ತಾರೆ; ಕಸದ ಬುಟ್ಟಿಯಿದ್ದರೂ ಎದ್ದುಹೋಗಿ ಹಾಕುವಷ್ಟು ಸೌಜನ್ಯವಿರುವುದಿಲ್ಲ. ಈ ಸೌಜನ್ಯ ಮತ್ತು ಸಂಸ್ಕಾರದ ಪ್ರಜ್ಞೆಯನ್ನು ಬಾಲ್ಯದಿಂದಲೇ ಬೆಳೆಸುವಲ್ಲಿ ಶಿಕ್ಷಕರೂ, ಪೋಷಕರೂ ಅಸಹಾಯಕರಾಗುತ್ತಿ ದ್ದಾರೆ.
ನಮ್ಮ ಶಿಕ್ಷಣ ವ್ಯವಸ್ಥೆಗೆ ಸೋಲಾಗುತ್ತಿರುವುದೇ ಇಲ್ಲಿ. ನಾಗರಿಕತೆಯ ಬಗ್ಗೆ ಉದ್ದುದ್ದ ಮಾತಾಡುವ ನಾವು, ಅದೇ ನಾಗರಿಕತೆಯನ್ನು ಸ್ವತಃ ಅನುಸರಿಸು ವಲ್ಲಿ ಮತ್ತು ಇತರರು ಅನುಸರಿಸುವಂತೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತೇವೆ. ‘ಆರಂಭದಿಂದ ಕೊನೆಯವರೆಗೆ ಓದಿನ ಹೊರತಾಗಿ ಬೇರಾವುದೇ ಕೆಲಸವನ್ನು ಮಕ್ಕಳಿಂದ ಮಾಡಿಸಬಾರದು, ಅವರು ಒಳ್ಳೆಯ ಅಂಕಗಳನ್ನು ಪಡೆದು ತೇರ್ಗಡೆಯಾದರೆ ಸಾಕು’ ಎಂಬ ಅಘೋಷಿತ ಮಡಿವಂತಿಕೆಯನ್ನು ರೂಢಿಸಿಕೊಂಡಿರುತ್ತೇವೆ. ಅಂದರೆ, ಮಕ್ಕಳು ತಾವಿರುವ ಜಾಗವನ್ನು ಸ್ವಚ್ಛವಾಗಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಅನುವು ಮಾಡಿಕೊಡದಂಥ ಶಿಕ್ಷಣ ಪದ್ಧತಿಯನ್ನು ನಾವು ಅಳವಡಿಸಿಕೊಂಡಿದ್ದೇವೆ.
ಜಪಾನಿನ ಶಿಕ್ಷಣ ವ್ಯವಸ್ಥೆಯಲ್ಲಿ ೪ನೇ ಹಂತದವರೆಗೆ, ಅಂದರೆ ೧೦ನೇ ವಯಸ್ಸಿನವರೆಗೆ ಯಾವುದೇ ಪರೀಕ್ಷೆಗಳಿರುವುದಿಲ್ಲ, ಸಣ್ಣಪುಟ್ಟ ಒಂದೆರಡು ಟೆಸ್ಟ್‌ಗಳಿರುತ್ತವೆಯಷ್ಟೇ. ಈ ಹಂತದಲ್ಲಿ, ಮಕ್ಕಳ ಜ್ಞಾನ ಮತ್ತು ಕಲಿಕಾ ಮಟ್ಟವನ್ನು ನಿರ್ಧರಿಸುವುದರೊಂದಿಗೆ, ಅವರಲ್ಲಿ ಮಾನವೀಯ ಗುಣಗಳು, ಉತ್ತಮ ನಡತೆ ಹಾಗೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಅಲ್ಲಿನ ಶಿಕ್ಷಣದ ಗುರಿಯಾಗಿರುತ್ತದೆ. ಗುರು-ಹಿರಿಯರೊಂದಿಗೆ ಹೇಗೆ ವರ್ತಿಸಬೇಕು, ಮಾತಿನ ರೀತಿ ಹೇಗಿರಬೇಕು, ತರಗತಿಗೆ ಬರುವ ಶಿಕ್ಷಕರನ್ನು ಹೇಗೆ ಸ್ವಾಗತಿಸಬೇಕು ಮತ್ತು ತರಗತಿ ಮುಗಿದಾಗ ಹೇಗೆ ಬೀಳ್ಕೊಡಬೇಕು ಎಂಬ ರೀತಿ- ರಿವಾಜುಗಳ ಜತೆಜತೆಗೆ, ಪ್ರಾಣಿ-ಪಕ್ಷಿಗಳೊಂದಿಗಿನ ಪ್ರೀತಿ, ನಿಸರ್ಗ ರಕ್ಷಣೆ, ಅಶಕ್ತರೆಡೆಗಿನ ಸಹಾನುಭೂತಿ ಮುಂತಾದ ಮಾನವೀಯ ಗುಣಗಳನ್ನೂ ಶಾಲಾ ಬದುಕಿನ ಆರಂಭದಲ್ಲೇ ಮಕ್ಕಳಿಗೆ ಕಲಿಸಲಾಗುತ್ತದೆ.
೧೦ನೇ ವಯಸ್ಸಿನವರೆಗೆ ಮುಂದುವರಿಯುವ ಈ ಕಲಿಕೆಯು ಪಠ್ಯಕ್ರಮದ ಒಂದು ಭಾಗವೂ ಆಗಿದೆ. ಜಪಾನಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹೇರ್ ಡೈ, ಅತಿಯಾದ ಮೇಕಪ್, ಉಗುರುಬಣ್ಣದ ಲೇಪನ ಇವನ್ನೆಲ್ಲ ಮಾಡಿಕೊಳ್ಳುವಂತಿಲ್ಲ. ಬಣ್ಣ ಬಣ್ಣದ ಹೇರ್‌ಬ್ಯಾಂಡ್ ಧರಿಸುವಂತಿಲ್ಲ. ಶಾಲಾ ಸಮವಸವನ್ನು ತಮಗಿಷ್ಟ ಬಂದಂತೆ ಬದಲಾಯಿಸಿ ಹೊಲಿಸಿಕೊಳ್ಳುವಂತಿಲ್ಲ, ಸಮವಸದ ಮೇಲೆ ಯಾವುದೇ ಬಣ್ಣಬಣ್ಣದ ಬಟ್ಟೆಯನ್ನು ಧರಿಸು ವಂತಿಲ್ಲ.
ಆಹಾರವನ್ನು ಬೇಕಾಬಿಟ್ಟಿ ಚೆಲ್ಲಿ ವ್ಯರ್ಥಮಾಡುವಂತಿಲ್ಲ. ವೃತ್ತಿಪರ ಬಾಣಸಿಗರು ತಯಾರಿಸಿದ ಆಹಾರವನ್ನು ತರಗತಿಗಳಲ್ಲೇ ವಿತರಿಸಲಾಗುತ್ತದೆ. ಶಾಲಾ ಕೊಠಡಿಯಲ್ಲೇ ನೆಲಹಾಸು ಹಾಸಿ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರೊಟ್ಟಿಗೆ ಅಲ್ಲಿಯೇ ತಿನ್ನಬೇಕು. ವಿದ್ಯಾರ್ಥಿ ದೆಸೆಯಲ್ಲೇ ಅವರಲ್ಲಿ ಸಾಂಪ್ರದಾ ಯಿಕ ವಿಷಯಗಳಲ್ಲದೆ, ರಾಷ್ಟ್ರದ ಪುರಾತನ ಕಲೆ, ಸಂಪ್ರದಾಯ, ಸಾಹಿತ್ಯದ ಮೇಲೆ ವ್ಯವಸ್ಥಿತವಾಗಿ ಅಭಿಮಾನ ಮೂಡಿಸಲಾಗುತ್ತದೆ. ಜಪಾನಿನ ಕ್ಯಾಲಿಗ್ರಫಿ, ಕಾವ್ಯ, ಚಿತ್ರಕಲೆ, ಕರಕುಶಲ ಕಲೆಯನ್ನೂ ಕಲಿಸಲಾಗುತ್ತದೆ. ಅಲ್ಲಿನ ಶಿಕ್ಷಣ ಮಾಧ್ಯಮವೂ ಜಪಾನಿ ಭಾಷೆಯೇ, ಇಂಗ್ಲಿಷ್ ಮೇಲಿನ
ವ್ಯಾಮೋಹ ಅಲ್ಲಿ ಶೂನ್ಯ.
ನಮ್ಮಲ್ಲಿ ಮಕ್ಕಳು ಶಾಲೆಯ ನೆಲಹಾಸನ್ನು ಅಥವಾ ಶೌಚಾಲಯವನ್ನು ಸ್ವಚ್ಛಗೊಳಿಸಿದರೆ ಪ್ರಶ್ನಿಸುವ ನಾವು, ಅದೇ ಮಕ್ಕಳು ಶಾಲಾ ಕೊಠಡಿಗಳಲ್ಲಿ, ಆವರಣಗಳಲ್ಲಿ ಚೆಲ್ಲುವ ಪೇಪರ್, ಇನ್ನಿತರ ಕಸ ಕಡ್ಡಿಗಳ ಬಗ್ಗೆ ಪ್ರಶ್ನಿಸುವ ಔದಾರ್ಯವನ್ನು ತೋರುವುದಿಲ್ಲ. ನಮ್ಮ ಮಕ್ಕಳು ಶಾಲೆಗೆ ಹಾಕಿಕೊಂಡು ಹೋಗುವ ಉಡುಪುಗಳು, ಹೇರ್‌ಸ್ಟೈಲ್ ಬಗ್ಗೆ, ಅವರು ಬಳಸುವ ಭಾಷೆಯ ಬಗ್ಗೆ ನಾವು ಪ್ರಶ್ನಿಸುವುದಿಲ್ಲ. ಭಾರತದ ಯಾವುದೇ ಶಾಲೆಯಲ್ಲಿ ಶೌಚಾಲಯ ಸ್ವಚ್ಛ ಮಾಡಿಸಿದರೆಂದರೆ ಅಥವಾ ನಮ್ಮ ಸಂಸ್ಕೃತಿಗೆ ಸಂಬಂಧಿಸಿದ ಯಾವುದಾದರೂ ವಿಚಾರವನ್ನು ಬೋಧಿಸಿದರೆ ಸಾಕು ಅಲ್ಲಿಗೆ ಮುಗಿಯಿತು; ಎಲ್ಲಾ ಮಾಧ್ಯಮಗಳಿಗೆ ಭರ್ಜರಿ ಭೋಜನ.
ತುಕ್ಕು ಹಿಡಿದ ತಮ್ಮ ಬುದ್ಧಿಗೆ ಬುದ್ಧಿಜೀವಿಗಳು ಸಾಣೆ ಹಿಡಿಯುತ್ತಾರೆ. ತನ್ನ ಶಾಲೆ-ಕಾಲೇಜು, ನಾಡು-ನುಡಿ, ರಾಷ್ಟ್ರ, ಸಂಸ್ಕೃತಿ, ತಾನು ಕಲಿಯುವ ಮತ್ತು ವಾಸಿಸುವ ಸ್ಥಳದಲ್ಲಿನ ಸ್ವಚ್ಛತೆ ಮತ್ತು ಸಂಸ್ಕಾರದ ಬಗ್ಗೆ ವಿದ್ಯಾರ್ಥಿಯಲ್ಲಿ ಅಭಿಮಾನ ಮೂಡಿಸದ ಶಿಕ್ಷಣದಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಕೋಲಾರ ಜಿಲ್ಲೆಯ ಶಾಲೆಯೊಂದರಲ್ಲಿ ಇತ್ತೀಚೆಗೆ ಮಕ್ಕಳನ್ನು ಮಲಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ ಶಿಕ್ಷಕರ ಬಗ್ಗೆ ಆಕ್ರೋಶವಿದೆ, ಅಸಹನೆಯಿದೆ. ಅವರುಗಳ ಅಮಾನವೀಯ ಮನಸ್ಥಿತಿಗೆ ಧಿಕ್ಕಾರವಿರಲಿ; ಆ ಅಪಾಯಕಾರಿ ಮತ್ತು ಅಮಾನವೀಯ ಕೆಲಸ ಮಾಡಿಸಿದವರಿಗೆ ಸೂಕ್ತ ಶಿಕ್ಷೆಯಾಗಲಿ.
(ಲೇಖಕರು ಹವ್ಯಾಸಿ ಬರಹಗಾರರು)