ಹಿತೋಪದೇಶ
ಮಹಾದೇವ ಬಸರಕೋಡ
ರಾಜನ ಆಸ್ಥಾನ ಸಚಿವನಾಗಿ ನೇಮಿಸಲ್ಪಟ್ಟ ಮುಲ್ಲಾ ನಸ್ರುದ್ದೀನ್, ಅಽಕಾರ ವಹಿಸಿ ಕೊಂಡ ಮೊದಲ ದಿನವೇ ಅರಮನೆಯ ಉದ್ಯಾನದ ವೀಕ್ಷಣೆಗೆ ತೆರಳಿದ. ಎಲ್ಲವನ್ನೂ ಜಾಗರೂಕತೆ ಯಿಂದ ಪರಿಶೀಲಿಸುತ್ತ, ಅಲ್ಲಿನ ಲೋಪದೋಷ, ಕುಂದು- ಕೊರತೆಗಳನ್ನು ಗುರುತಿಸುತ್ತ ಅವಕ್ಕೆ ಪರಿಹಾರೋಪಾಯ ಗಳನ್ನು ಅಲ್ಲಿನ ಸೇವಕರಿಗೆ ಸೂಚಿಸಿದ. ನಂತರ, ರಾಜನು ಅತ್ಯಂತ ಪ್ರೀತಿಯಿಂದ ಸಾಕಿದ್ದ ಗಿಡುಗವೊಂದರ ಬಳಿ ಬಂದ.
ಹಿಂದೆಂದೂ ಗಿಡುಗವನ್ನು ನೋಡಿರದ ನಸ್ರುದ್ದೀನ್ ಗೆ ಅದು ಬಹುದಿನಗಳಿಂದ ಆರೈಕೆಯಿಲ್ಲದ ಪಾರಿವಾಳದಂತೆ ಕಂಡಿತು. ಅದರ ಬಗ್ಗೆ ಮರುಕವಾಗಿ, ತಕ್ಷಣವೇ ಅಲ್ಲಿದ್ದ ಸೇವಕರನ್ನು ಕರೆದು, ‘ಇದರ ಕಾಲಿನ ಉಗುರುಗಳು ತುಂಬಾ ಉದ್ದವಾಗಿವೆ, ಅವನ್ನು ಚೆಂದಗಾಣುವಂತೆ ಕತ್ತರಿಸಿ. ರೆಕ್ಕೆಗಳು ತುಂಬಾ ಅಗಲವಾಗಿದ್ದು, ಅವನ್ನು ಅರ್ಧ ಕ್ಕಿಂತ ಹೆಚ್ಚು ತುಂಡರಿಸಿ. ಕೊಕ್ಕು ತುಂಬಾ ಉದ್ದವಾಗಿದೆ ಮತ್ತು ಚೂಪಾಗಿದೆ, ಅದನ್ನು ಮೊಂಡು ಮಾಡಿ’ ಎಂದು ಆದೇಶಿಸಿದ. ನಂತರ ಆ ಗಿಡುಗನನ್ನು ಕುರಿತು ನಸ್ರುದ್ದೀನ್, ‘ಎಲೈ ಪಾರಿವಾಳವೇ, ನೀನೀಗ ಬಹುಸುಂದರವಾಗಿ ಕಾಣುತ್ತಿರುವೆ; ಇದುವರೆಗೂ ನಿನ್ನನ್ನು ಸರಿಯಾಗಿ ಗಮನಿಸದಿರು
ವುದಕ್ಕೆ, ಆರೈಕೆ ಮಾಡದಿರುವುದಕ್ಕೆ ಕ್ಷಮಿಸು’ ಎಂದ!
ಬದಲಾದ ಕಾಲಘಟ್ಟದಲ್ಲಿ ನಮ್ಮಲ್ಲಿ ಬಹುತೇಕರು ಇಂಥ ವಿವೇಚನಾರಹಿತ ಹೆಜ್ಜೆಯಿಡುತ್ತಿದ್ದೇವೆ. ನಮ್ಮದೇ ಮೂಗಿನ ನೇರಕ್ಕಿರುವ ಅಪಾಯಕಾರಿ ನಡೆಯನ್ನು ಒಪ್ಪಿಕೊಳ್ಳುವ ನಿಟ್ಟಿನಲ್ಲಿ ಪಯಣವನ್ನು ಮುಂದುವರಿಸಿದ್ದೇವೆ. ಇದರಿಂದಾಗಿ, ದಿನನಿತ್ಯವೂ ಭ್ರಷ್ಟಾಚಾರ, ಜಾತಿ-ಮತ-ಪಂಥಗಳ ವೈಭವೀಕರಣ, ಲೈಂಗಿಕ ವಿಕೃತಿಗಳು, ಮೂಲಭೂತವಾದಿ ಗಳ ಅಬ್ಬರಗಳು, ಅಸಹಿಷ್ಣುತೆ ಕಂಡುಬರುತ್ತಿವೆ. ಬಾಲಾಪರಾಧಿಗಳ, ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದ್ದು ಅಸ್ವಸ್ಥ
ಸಮಾಜ ನಿರ್ಮಾಣವಾಗುತ್ತಿದೆ. ಗುರು-ಶಿಷ್ಯರ ನಡುವಿನ ಅಂತರವೂ ಅಗಲವಾಗುತ್ತಿದೆ.
ಇಂಥ ಪರಿಸ್ಥಿತಿಗಳಿಗೆ ಕಾರಣಗಳನ್ನು ಹುಡುಕುವುದು ಕಷ್ಟವೇನಲ್ಲ, ಅವು ನಮ್ಮ ಕಣ್ಣಿಗೆ ರಾಚುವಂತಿವೆ. ಹೆಚ್ಚುತ್ತಿರುವ ಸ್ವಾರ್ಥ ಪ್ರವೃತ್ತಿ, ‘ನಾನು, ನನ್ನ ಹೆಂಡತಿ-ಮಕ್ಕಳು’ ಎಂಬ ವಿಭಕ್ತ ಕುಟುಂಬದ ಆಕರ್ಷಣೆ, ಹಣದ ಮಾನದಂಡದಲ್ಲಿಯೇ ಮಕ್ಕಳಿಗೆ ಎಲ್ಲವನ್ನೂ ಒದಗಿಸುತ್ತಿದ್ದೇವೆ ಎಂಬ ಭ್ರಮೆ, ಹಣಗಳಿಕೆಯ ಯಂತ್ರಗಳಾಗಿ ಮಾರ್ಪಡುತ್ತಿರುವಿಕೆ, ಗಡಿಯಾರದ ಮುಳ್ಳುಗಳ ಜತೆ ಸ್ಪರ್ಧಿಸುವ ಧಾವಂತ ಇಂಥ ನೂರೆಂಟು ಸಿಕ್ಕುಗಳಲ್ಲಿ ಸಿಲುಕಿರುವ ಪಾಲಕರಿಗೆ ತಮ್ಮ ಮಕ್ಕಳಿಗೆ ನೀತಿಶಿಕ್ಷಣವನ್ನು ಬೋಧಿಸುವಲ್ಲಿ ಪುರುಸೊತ್ತೇ ಸಿಗದಂತಾಗಿದೆ!
ಪೋಷಕರು ತಮ್ಮ ಮಕ್ಕಳ ಆಸೆ-ಆಕಾಂಕ್ಷೆಗಳನ್ನು ಗಮನಿಸದೆಯೇ ತಮ್ಮ ಹೆಬ್ಬಯಕೆಗಳ ನೆರವೇರಿಕೆಯ ಸಾಧನವಾಗಿ ಅವರನ್ನು ಬಳಸಿಕೊಳ್ಳುತ್ತಿರುವುದು ಇಂದಿನ ಬಹುದೊಡ್ಡ ದುರಂತ. ಹೀಗಾಗಿ, ‘ಮನೆಯೇ ಮೊದಲ ಪಾಠಶಾಲೆ’ ಎಂಬುದು ಮರೆತುಹೋಗಿ ಅದೆಷ್ಟೋ ಕಾಲವಾಗಿದೆ. ಹಿಂದೊಮ್ಮೆ ಮನೆಮಂದಿಗೆಲ್ಲ ನೈತಿಕತೆಯನ್ನು ಹೇಳಿಕೊಡುತ್ತಿದ್ದ ಅಜ್ಜಿಯ ಕಥೆಗಳು, ಶಿಶುಪ್ರಾಸಗಳು, ಸರಳ ನಾಣ್ಣುಡಿ ಮತ್ತು ಒಗಟುಗಳು, ಮಹಾಪುರುಷರ ಸಾಧನೆಯನ್ನು ಅದ್ಭುತ ಕಲ್ಪನಾಪ್ರೌಢಿಮೆಯಲ್ಲಿ ಟಂಕಿಸಿದ ಸಾಹಿತ್ಯ, ರಾಮಾಯಣ, ಮಹಾಭಾರತ, ಭಗವದ್ಗೀತೆ, ಬೈಬಲ್, ಕುರಾನ್, ಈಸೋಪನ ನೀತಿಕಥೆ ಹಾಗೂ ಪಂಚ ತಂತ್ರದಂಥ ರಂಜನೀಯ ಕಥನಗಳು ಕಾಲಕ್ರಮೇಣ ನೇಪಥ್ಯಕ್ಕೆ ಸರಿದಿವೆ. ಸತ್ಯದ ನೀತಿಯನ್ನು ಮನದಾಳಕ್ಕಿಳಿಸುತ್ತಿದ್ದ ‘ಪುಣ್ಯಕೋಟಿ’ ಗೋವಿನ ಹಾಡಿನ ಜಾಗದಲ್ಲಿ, ‘ರೇನ್ ರೇನ್ ಗೋ ಅವೇ’ ಎಂದು ಬರಗಾಲವನ್ನು ಆಹ್ವಾನಿಸುವ ನಮ್ಮದಲ್ಲದ ಸಂಸ್ಕೃತಿಯನ್ನು ಅಪ್ಪಿಕೊಂಡಿದ್ದೇವೆ.
‘ಪಾಲಕರು ತಮ್ಮ ಮಕ್ಕಳನ್ನು ಭತ್ತ ಬೆಳೆಯುವ ಗದ್ದೆಗಳಾಗಿ ಬೆಳೆಸಬೇಕೇ ವಿನಾ, ಭತ್ತವನ್ನು ತುಂಬುವ ಚೀಲಗಳಾಗಿ ಪರಿವರ್ತಿಸಬಾರದು’ ಎಂಬ ಕುವೆಂಪು ಅವರ ಮಾತನ್ನು ಅರ್ಥೈಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ ಅನೇಕ ಪೋಷಕರು.ಅತಂತ್ರದ ಸ್ಥಿತಿಯಿಂದ ಮಕ್ಕಳನ್ನು ಹೊರತರಬೇಕಾದ ನಿಟ್ಟಿನಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ಬಹುದೊಡ್ಡದು. ‘ತಂದೆಗೂ ಗುರುವಿಗೂ ಒಂದು ಅಂತರವುಂಟು, ತಂದೆ ತೋರುವನು ಸದ್ಗುರುವ, ಗುರುರಾಯ ಕಳೆವ ಬಂಧನವ’ ಎನ್ನುತ್ತಾನೆ ಸರ್ವಜ್ಞ. ನೀತಿಶಿಕ್ಷಣ ನೀಡುವಲ್ಲಿ ಶಿಕ್ಷಕರು ವಹಿಸುವ ಮಹತ್ತರ ಪಾತ್ರವನ್ನು ಇದು ಧ್ವನಿಸುತ್ತದೆ. ಹಾಗಾಗಿ ಸ್ಥೂಲವಾಗಿ ಸಮಾಜದಲ್ಲಿ ಮತ್ತು ನಿರ್ದಿಷ್ಟವಾಗಿ ಮಕ್ಕಳಲ್ಲಿ ನೈತಿಕತೆ ಯನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಹಿಂದೆಂದಿಗಿಂತಲೂ ಹೆಚ್ಚು ಜವಾಬ್ದಾರಿಯನ್ನು ಹೊರಬೇಕಿದೆ.
ಸತ್ಯ ಹೇಳುವಿಕೆ, ತಾಳ್ಮೆ, ವಿಧೇಯತೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಬದ್ಧತೆ, ಗೌರವ, ಸಹಕಾರ, ನಿಷ್ಠೆ, ಜವಾಬ್ದಾರಿಯ ನಿರ್ವಹಣೆ, ತನ್ನಂತೆ ಪರರನ್ನು ಬಗೆಯು ವಿಕೆ, ಅಹಿಂಸೆ, ಸದಾಚಾರ ಹೀಗೆ ಹತ್ತು ಹಲವು ಮೌಲ್ಯ ಗಳನ್ನು ಶಿಕ್ಷಕರು ತಮ್ಮ ದೈನಂದಿನ ಬದುಕಲ್ಲಿ ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳನ್ನು ಪ್ರಭಾವಿಸಬೇಕಿದೆ. ಒಡನಾಡಿಗಳ ಒತ್ತಡದಿಂದಾಗಿ ಅತಾರ್ಕಿಕವಾಗಿ ವರ್ತಿಸುವ, ಹದಿಹರೆಯಕ್ಕೆ ಕಾಲಿಡುವ ವಿದ್ಯಾರ್ಥಿಗಳು ತಮ್ಮದೇ ಆದ ನೀತಿ-ನಿಲುವುಗಳನ್ನು ರೂಪಿಸಿಕೊಳ್ಳುವ ಅಪಾಯಕಾರಿ ಸನ್ನಿವೇಶವನ್ನು ತಡೆಯುವತ್ತ ಶಿಕ್ಷಕರು ಗಮನಹರಿಸ ಬೇಕಿದೆ. ವಿದ್ಯಾರ್ಥಿಗಳ ಮನಸ್ಸನ್ನು ವಿಕೃತಗೊಳಿಸು ವಲ್ಲಿ ಇಂದಿನ ತಂತ್ರಜ್ಞಾನದ ಕೊಡುಗೆಯೂ ಇದೆ.
ಗೀಳುಹಿಡಿಸುವ ಸಾಮಾಜಿಕ ಮಾಧ್ಯಮಗಳಿಂದಾಗಿ ಹಾಗೂ ಅಂತರ್ಜಾಲದ ದುರುಪಯೋಗದಿಂದಾಗಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ, ಮಕ್ಕಳು ಅನಪೇಕ್ಷಿತ ವರ್ತನೆಗಳ ದಾಸರಾಗಿ ಸಮಾಜಕ್ಕೆ ಕಂಟಕಪ್ರಾಯರಾಗುತ್ತಿದ್ದಾರೆ. ಇವಕ್ಕೆ ಲಗಾಮು ಹಾಕಬೇಕಾದ್ದು ಶಿಕ್ಷಕರ ಆದ್ಯಕರ್ತವ್ಯ. ‘ಮನೆಯೇ ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರು’ ಎಂಬುದನ್ನು ಶಿಕ್ಷಕರು ಪಾಲಕರಿಗೆ ಮತ್ತೊಮ್ಮೆ ನೆನಪಿಸಬೇಕಾಗಿದೆ. ಯಾವಾಗ ನೋಡಿದರೂ ವೃತ್ತಿಜೀವನ – ವ್ಯವಹಾರದ ಪ್ರಪಂಚದಲ್ಲೇ ಮುಳುಗಿರುವ ಬದಲು ಪೋಷಕರು ಮಕ್ಕಳಿಗಾಗಿಯೇ ಕೆಲ ಸಮಯವನ್ನು ಮೀಸಲಿಡಬೇಕು.
ಇದರಿಂದ ತಂದೆ-ತಾಯಿಯರ ಜತೆಗಿನ ಅವರ ಮಧುರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು. ಇದು ಮಗುವಿನ ಕಲಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ವನ್ನುಂಟುಮಾಡುತ್ತದೆ. ಹೀಗೆ ಮನೆ ಮತ್ತು ಶಾಲಾ ಪರಿಸರಗಳಲ್ಲಿ ನೈತಿಕತೆಯನ್ನು ಬೋಽಸುವ ಮೂಲಕ ಪಾಲಕರು ಮತ್ತು ಶಿಕ್ಷಕರು ಮಕ್ಕಳ ಚಾರಿತ್ರ್ಯವನ್ನು
ಸಕಾರಾತ್ಮಕತೆ ಮತ್ತು ಪರಿಶುದ್ಧತೆಯೆಡೆಗೆ ಒಯ್ಯಬಹುದು. ಶಾಲಾಪಠ್ಯದ ಜತೆಜತೆಗೆ ಮಕ್ಕಳಲ್ಲಿ ಕಲೆ-ಸಾಹಿತ್ಯ-ಸಂಗೀತ ಮುಂತಾದ ಸೃಜನಶೀಲ ಮಗ್ಗುಲುಗಳ ಕಡೆಗೂ ಆಸಕ್ತಿ ಚಿಗುರುವಂತೆ ಮಾಡಬೇಕಾದ್ದು, ಒಂದು ಕಾಲಕ್ಕೆ ನಮ್ಮಂತೆಯೇ ಬದುಕಿದ ಬುದ್ಧ, ಬಸವ, ರಾಮಕೃಷ್ಣ, ವಿವೇಕಾನಂದ, ಗಾಂಽಜಿ ಮುಂತಾದವರ ಆದರ್ಶಗಳನ್ನು ಮಕ್ಕಳಲ್ಲಿ ಎರಕ ಹೊಯ್ಯಬೇಕಾದ್ದು ಈ ಕ್ಷಣದ ಅನಿವಾರ್ಯತೆ. ಮಕ್ಕಳು ತಮ್ಮ ಬಾಲ್ಯವನ್ನು ಅನುಭವಿಸುವುದಕ್ಕೆ ಅವಕಾಶ ಕಲ್ಪಿಸುವುದರ ಜತೆಜತೆಗೆ, ಹೀಗೆ ನೀತಿಶಿಕ್ಷಣದೆಡೆಗೂ ಅವರನ್ನು ಸೆಳೆಯುತ್ತಿದ್ದರೆ, ಇಂದಿನ ಅಸ್ವಸ್ಥ ಸಮಾಜದ ಚಿತ್ತಸ್ಥಿತಿಯನ್ನು ಚೊಕ್ಕಗೊಳಿಸುವಲ್ಲಿ
ಅದು ಪರಿಹಾರೋಪಾಯವಾಗಬಲ್ಲದು.
(ಲೇಖಕರು ಪ್ರೌಢಶಾಲಾ ಶಿಕ್ಷಕರು)