Sunday, 15th December 2024

ಶಾಲೆಯಲ್ಲಿ ನೈತಿಕ ಶಿಕ್ಷಣ: ಏನು ? ಯಾಕೆ ? ಹೇಗೆ ?

ಆಶಯ

ದಿಲೀಪ್ ಕುಮಾರ್‌ ಸಂಪಡ್ಕ

ನೈತಿಕ ಶಿಕ್ಷಣಕ್ಕಾಗಿ ಸರಕಾರಿ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು. ನೈತಿಕ ಶಿಕ್ಷಣವನ್ನು ಬೋಧಿಸಲು ಹಾಲಿ ಇರುವ ಶಿಕ್ಷಕರನ್ನು ನೇಮಕಾತಿ ಮಾಡಿದಲ್ಲಿ ಈಗಾಗಲೇ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಇನ್ನಷ್ಟು ಒತ್ತಡ ಉಂಟಾಗಿ ನೈತಿಕ ಶಿಕ್ಷಣ ನೀಡಲು ಇರುವ ಉದ್ದೇಶವೇ ನಾಶವಾಗಿ ಬಿಡುತ್ತದೆ.

ಮಕ್ಕಳು ತಮ್ಮ ಬದುಕಿನಲ್ಲಿ ಸದಾಚಾರ- ಸುವಿಚಾರಗಳನ್ನು ಅಳವಡಿಸಿಕೊಳ್ಳಲು ಶಿಕ್ಷಣ ಒಂದು ಪ್ರಮುಖ ಸಾಧನವಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ನೈತಿಕ ಶಿಕ್ಷಣವನ್ನು ನೀಡುವ ಗುರತರವಾದ ಹೊಣೆಯನ್ನು ಶಿಕ್ಷಣ ಮತ್ತು ಶಾಲೆಯು ಹೊಂದಿದೆ. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ನೈತಿಕ ಶಿಕ್ಷಣವನ್ನು ನೀಡಿ ಅವರನ್ನು ಈ ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿಸುವ ಕೆಲಸವನ್ನು ನಮ್ಮ ಶಿಕ್ಷಣ ವ್ಯವಸ್ಥೆ ಮಾಡಬೇಕಿದೆ.

ಆದರೆ ಈ ಆಧುನಿಕ ಗುಂಗಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳು ಅಂಕಗಳ ಹಿಂದೆ ಒಡಾಡು ತ್ತಿರುವುದರಿಂದ ಶಿಕ್ಷಣದ ಅಂತಿಮ ಗುರಿ ಅಂಕ ಮತ್ತು ರ‍್ಯಾಂಕ್ ಗಳಿಸುವುದು ಮಾತ್ರ ಎಂಬಂತಾಗಿದೆ. ಇಂದಿನ ಮಕ್ಕಳು ಪೋಷಕರ ಮಾತು ಕೇಳುತ್ತಿಲ್ಲ, ಮಕ್ಕಳನ್ನು ಸ್ವಲ್ಪ ಗದರಿಸುವ ಹಾಗಿಲ್ಲ ಅತ್ಮಹತ್ಯೆ ಅಥವಾ ಮನೆ ಬಿಟ್ಟು ಹೋಗುತ್ತೇವೆ ಎನ್ನುವ ಬೆದರಿಕೆ ಯನ್ನು ಹಾಕಿ ಬಿಡುತ್ತಾರೆ. ಇದರಿಂದ ಪೋಷಕರು ಮಕ್ಕಳ ಈ ವರ್ತನೆಗೆ ಹೆದರಿ ಮಕ್ಕಳ ತಂಟೆಗೆ ಹೋಗುತ್ತಿಲ್ಲ.

ಮಕ್ಕಳ ತಪ್ಪುಗಳನ್ನು ತಿದ್ದುವ ಗೋಜಿಗೂ ಹೋಗುತ್ತಿಲ್ಲ. ಒಟ್ಟಾರೆಯಾಗಿ ಇಂದಿನ ಮಕ್ಕಳು ಅತಿಯಾದ ಸ್ವಾತ್ರಂತ್ರ್ಯವನ್ನು ಹೊಂದಿದ್ದಾರೆ. ಇನ್ನೊಂದಡೇ ಖಿನ್ನತೆಯಿಂದ ಹಾಗೂ ಗೊಂದಲದಲ್ಲಿ ಕಲಿಕಾ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ.

ಶಿಕ್ಷಣ ಎನ್ನುವುದು ನಾವು ಸಾಮಾಜಿಕವಾಗಿ ಹೇಗಿರಬೇಕು? ಹಿರಿಯರೊಂದಿಗೆ ನಮ್ಮ ನಡವಳಿಕೆ ಹೇಗಿಬೇಕು? ನಮ್ಮ ಹಿರಿಯರಿಗೆ ನಾವು ಹೇಗೆ ಗೌರವ ಸಲ್ಲಿಸಬೇಕು? ನಮ್ಮ ಭವಿಷ್ಯವನ್ನು ನಾವು ಹೇಗೆ ರೂಪಿಸಿಕೊಳ್ಳಬೇಕು? ಶಿಕ್ಷಣದಿಂದ ನಾವು ಏನನ್ನು ಪಡೆದು ಕೊಳ್ಳಬೇಕು? ಶಿಕ್ಷಕಿತರಾಗಿ ಸಮಾಜದಲ್ಲಿ ನಮ್ಮ ಜವಾಬ್ದಾರಿಯೇನು? ಎಂಬ ಪ್ರಶ್ನೆಗಳಿಗೆ ಉತ್ತರ ನೀಡುವುದಾಗಿದೆ. ಆದರೆ
ಇಂದು ಇವು ನಮ್ಮ ಶಿಕ್ಷಣದಿಂದ ಸಿಗುತ್ತಿದೆಯೇ? ಮಕ್ಕಳಲ್ಲಿ ನೈತಿಕತೆಯ ಕೊರತೆ ಎದ್ದು ಕಾಣುತ್ತಿದೆ.

ಸದ್ಯಕ್ಕೆ ನಮ್ಮಲ್ಲಿ ನೈತಿಕ ಶಿಕ್ಷಣದ ಕೂಗು ಗಟ್ಟಿಯಾಗಿ ಕೇಳಿ ಬರುತ್ತಿದೆ. ಶಿಕ್ಷಣದಲ್ಲಿ ನೈತಿಕ ಶಿಕ್ಷಣವನ್ನು ಬೋಧಿಸಬೇಕು ಎನ್ನುವ ನಿಲುವುವಿಗೆ ಎಲ್ಲಾ ಕಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಇಂದಿನ ಪರಿಸ್ಥಿತಿಗೆ ಖಂಡಿತವಾಗಿಯೂ ನೈತಿಕ ಶಿಕ್ಷಣವನ್ನು ನಮ್ಮ ಶಿಕ್ಷಣ ಪದ್ಧತಿಯಲ್ಲಿ ಸೇರಿಸಲೇಬೇಕು. ಆದರೆ ನೈತಿಕ ಶಿಕ್ಷಣವನ್ನು ನಾಮಕೇವಸ್ತಾ ಎಂಬಂತೆ ಜಾರಿ ಮಾಡಿ ಪುಸ್ತಕದಲ್ಲಿ ತುರುಕಿ ದರೆ ಅದರಿಂದ ಎಳ್ಳಷ್ಟು ಪ್ರಯೋಜನವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ನೈತಿಕ ಶಿಕ್ಷಣದ ಹೆಸರಿನಲ್ಲಿ ಶಿಕ್ಷಕರಿಗೆ ತರಬೇತಿಗಳನ್ನು ನೀಡಿ ಕೈ ತೊಳೆದುಕೊಳ್ಳುವ ಯೋಜನೆಯು ಆಗಬಾರದು. ನೈತಿಕ ಶಿಕ್ಷಣವು ಒಂದು ಸಮಾಜವನ್ನು ಸದೃಢವಾಗಿ ಮಾಡುವ ಪ್ರಮುಖ ಕೊಂಡಿಯಾಗಿದೆ. ಇದನ್ನು ಅತೀ ಜಾಗರೂಕತೆಯಿಂದ
ಅಳೆದು ತೂಗಿ ಜಾರಿ ತರಬೇಕು. ನೈತಿಕತೆ ಜೀವನದ ಜೀವನಾಡಿ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಸ್ವಚ್ಚಾರಿತ್ರದ ಬೆಳವಣಿಗೆಯೇ ನೈತಿಕ ಶಿಕ್ಷಣದ ಉದ್ದೇಶ ಎಂಬುದು ಹರ್ಬಟ್ ರವರ ವ್ಯಾಖ್ಯಾನ. ಮಾನವರಲ್ಲಿರುವ ಒಳಿತು-ಕೆಡುಕು, ಸಮಂಜಸ-ಅಸಮಂಜಸ ಎಂಬ ತಾರತಮ್ಯ ಜ್ಞಾನವೇ ನೈತಿಕ ಮೌಲ್ಯಗಳೆನಿಸಿಕೊಂಡಿವೆ.

ಸಮಾಜದಿಂದ ವಿಧಿಸಲ್ಪಟ್ಟ, ವ್ಯಕ್ತಿಯ ವಿಶಿಷ್ಟ ಗುಣಸ್ವಭಾವಗಳ ಆಂತರಿಕ ಸ್ವರೂಪಿಯಾಗಿರುವಂಥಾದ್ದು ನೈತಿಕತೆ
ಎನ್ನಿಸಿಕೊಳ್ಳುತ್ತದೆ. ಅಹಿಂಸೆ, ಸಹನೆ-ಸಹಿಷ್ಣುತೆ, ದಯೆ-ಅನುಕಂಪ, ನ್ಯಾಯ-ನೀತಿ- ಪ್ರಾಮಾಣಿಕತೆ, ಶ್ರದ್ಧೆ-ನಿಷ್ಠೆ, ಸ್ವಯಂ ನಿಗ್ರಹ, ಪರೋಪಕಾರ, ಸಹಕಾರ ಸಹಬಾಳ್ವೆ ಇವೆಲ್ಲವೂ ನೈತಿಕ ಮೌಲ್ಯಗಳಾಗಿವೆ. ನೈತಿಕ ಪದಕ್ಕೆ ಬದುಕಿನಲ್ಲಿ ಬೌದ್ಧಿಕ, ಸೌಂದರ‍್ಯಾತ್ಮಕ, ಸಾಮಾಜಿಕ ಮುಪ್ಪುರಿಗೊಂಡ ಆಯಾಮ ಎಂಬರ್ಥವಿದೆ.

ನೈತಿಕಯು ಕೌಟುಂಬಿಕ, ಸಾಮಾಜಿಕ ಆರ್ಥಿಕ ಜಗತ್ತಿನ, ಬಾಹ್ಯ ಪ್ರಾಪಂಚಿಕ ಜೀವನದಲ್ಲಿ ಪಾರಸ್ಪರಿಕ ಸ್ಪಂದನ ಪ್ರತಿ ಸ್ಪಂದನಗಳ ನಿರ್ಧಾರಕ ಅಂಶಗಳಾಗುತ್ತದೆ. ನೈತಿಕ ಮೌಲ್ಯಗಳು ವ್ಯಕ್ತಿಯನ್ನು ಉತ್ತಮವಾಗಿಸುವ ಒಂದು ಅಸ್ತ್ರವಾಗಿದೆ. ಅವುಗಳನ್ನು ಬಾಲ್ಯದಿಂದಲೇ ಕಲಿಸಬೇಕು. ಇದು ಅವರಿಗೆ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ನೈತಿಕ ಶಿಕ್ಷಣವು ಮಗುವಿಗೆ ಸರಿಯಾದ ನಿರ್ದೇಶಗಳನ್ನು ನೀಡುತ್ತದೆ.

ನೈತಿಕ ಶಿಕ್ಷಣವು ಮಕ್ಕಳು ಮತ್ತು ಯುವಜನರಿಗೆ ಸರಿ ಮತ್ತು ತಪ್ಪುಗಳ ಅರಿವನ್ನು ಮೂಡಿಸುತ್ತದೆ. ಇದು ಸಂದರ್ಭಕ್ಕೆ ಅನುಗುಣ ವಾಗಿ ನಮ್ಮ ವರ್ತನೆ ಮತ್ತು ನಡವಳಿಕೆಗಳು ಹೇಗಿರಬೇಕು ಎನ್ನುವುದರ ಬಗ್ಗೆ ಮಾರ್ಗದರ್ಶನ ನೀಡುತ್ತದೆ. ಆಧುನಿಕತೆಯಲ್ಲಿ ಯುವಕರು ದೂದರ್ಶನ, ಮುದ್ರಣ ಮಾಧ್ಯಮ, ಇಂಟರ್ನೆಟ್, ಜೀವನ  ಶೈಲಿಯಲ್ಲಿನ ಬದಲಾವಣೆ, ಆರ್ಥಿಕತೆಗೆ ಹೆಚ್ಚು
ಆದ್ಯತೆ ನೀಡುತ್ತಿರುವುದರಿಂದ ನೀತಿಕ ಮೌಲ್ಯಗಳನ್ನು ಅಸ್ಥಿರಗೊಳಿಸುತ್ತಿದ್ದಾರೆ ಮತ್ತು ಗೊಂದಲಕ್ಕೊಳಗಾಗಿದ್ದಾರೆ. ಮಾನವರು ಜನ್ಮಜಾತ ನೀತಿವಂತನಲ್ಲ. ಸಕಲ ಪ್ರಾಣಿಗಳ ಹಾಗೆಯೇ ಅವನೂ ಜನ್ಮತಃ ಕೆಲವು ಮೂಲ ಪ್ರವೃತ್ತಿಗಳನ್ನು ತಳೆದು ಬಂದಿರುತ್ತಾನೆ. ಆದರೆ ಶಿಕ್ಷಣವು ಅವನಲ್ಲಿ ಪಶುಸದೃಶ ಪ್ರವೃತ್ತಿಗಳನ್ನು ಬೆಳೆಸುತ್ತದೆ.

ಆದರೆ ಶಿಕ್ಷಣವು ಅವನಲ್ಲಿ ಪಶುಸದೃಶ ಪ್ರವೃತಿಗಳನ್ನು ತೊಡೆದು ಹಾಕಿ ಆತನಿಗೆ ಉದಾತ್ತ ಮೌಲ್ಯಗಳನ್ನು ಅರುಹುತ್ತದೆ. ಇಂದರಿಂದ ವಿಶೇಷ ಗುಣಗಳು  ವಿಕಸನಗೊಂಡು ಶೀಲಸಂವರ್ಧನೆ ಸಾಧಿತವಾಗುತ್ತದೆ. ಎಂಬುದು ತತ್ತ್ವಜ್ಞಾನಿ ಆರಿಸ್ಟಾಟಲ್‌ ರವರ ಅಭಿಪ್ರಾಯವಾಗಿರುತ್ತದೆ. ಮಾನವರು ಜನ್ಮತಃ ನೀತಿವಂತರೆನಿಸಿಕೊಳ್ಳಲಾರರು. ಈ ಹಿನ್ನಲೆಯಲ್ಲಿ ಮಾನವರಿಗೆ ತಿದ್ದಿ-ತೀಡಿ ಮೌಲ್ಯಗಳ ಮಹತ್ವವನ್ನು ತಿಳಿಯಪಡಿಸಬೇಕಿದೆ.

ಪ್ರಾಣಿದಯೆ, ಕಿರಿಯರಲ್ಲಿ ವಾತ್ಸಲ್ಯ, ಸಮಾನರಲ್ಲಿ ಸ್ನೇಹ-ಪ್ರೀತಿ, ಗುರುಹಿರಿಯರಲ್ಲಿ ಭಕ್ತಿ ಬಾವಗಳನ್ನು ಹೊಂದಲು ಮಾನವೀಯತೆ, ಸಹನೆ, ವಿನಯವಂತಿಕೆ ಮಾದಲಾದ ಸದ್ಗುಣಗಳನ್ನು ಬೆಳಸಿಕೊಳ್ಳಲು ಸಾಮಾಜಿಕ ಮೌಲ್ಯಗಳೆಂಬ ಸನ್ಮಾರ್ಗದಲ್ಲಿ ನಡೆಯಬೇಕಾಗಿದೆ. ಸಾಮಾಜಿಕ ನೈತಿಕತೆಯಿಂದ ಬದುಕುವ ವ್ಯಕ್ತಿ ಉನ್ನತೋನ್ನತ ಸ್ಥಾನಮಾನಗಳಿಗೆ ಪಾತ್ರರಾಗುತ್ತಾರೆ.

ಸಮಾಜದಲ್ಲಿ ಗೌರವಾರ್ಹರಾಗುತ್ತಾರೆ. ಸಾಮಾಜಿಕ ಜೀವನದಲ್ಲಿ ವ್ತಕ್ತಿಯು ತನ್ನ ಹೊಣೆಗಾರಿಕೆಗಳನ್ನು ಶ್ರದ್ಧೆ-ನಿಷ್ಠೆಯಲ್ಲಿ
ಕುಂದಿಲ್ಲದೆ ಹಾಗೆ ನಿಭಾಯಿಸಲು, ನರೆಹೊರೆಯವರಿಗೆ ಕೈಲಾದ ನೆರವು ನೀಡಲು, ಶೀಲ-ಸನ್ನಡತೆ ಕಾಪಾಡಿಕೊಳ್ಳಲು ನೈತಿಕ
ಮೌಲ್ಯಗಳು ಪ್ರೇರೇಪಣೆ ನೀಡುವುದರಿಂದ ಮಕ್ಕಳಿಗೆ ಚಿಕ್ಕಂದಿನಲ್ಲೇ ನೈತಿಕ ಮೌಲ್ಯಗಳನ್ನು ಅಡಕಗೊಳಿಸಿ ಅವರ ಭವಿಷ್ಯ ಜೀವನವನ್ನು ಬೆಳಗಬೇಕು. ಮಾನವನು ಪ್ರಾಣಿ ಪಕ್ಷಿಗಳಿಗಿಂತ ವಿಭಿನ್ನವಾಗಿರುವುದರಿಂದ ತನಗಿರುವ ಬುದ್ಧಿಶಕ್ತಿ ವಿಚಾರಶಕ್ತಿ ಎಂಬ ಶಕ್ತಿಯನ್ನು ಬಳಸಿ, ದೈಹಿಕವಾಗಿ, ಮಾನಸಿಕವಾಗಿ ಸ್ವಸ್ಥಜೀವನ ನಡೆಸಲು ನೈತಿಕ ಮಾಲ್ಯಗಳು ಅತೀ ಅಗತ್ಯವಾಗಿದೆ. ಈ
ಹಿನ್ನಲೆಯಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಶಾಲೆಯಲ್ಲಿ ನೈತಿಕ ಶಿಕ್ಷಣವನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ಶಾಲೆಗಳಲ್ಲಿ ನವಭಾರತದ ಭವಿಷ್ಯದ ಶಿಲ್ಪಿಗಳು ರೂಪುಗೊಳ್ಳುವುದರಿಂದ ಅವರು ಸಮಾಜಕ್ಕೆ ತನ್ಮೂಲಕ ಉತ್ತಮ ಪ್ರಜೆಗಳಾಗಿ ಕೊಡುಗೆ ನೀಡಲು ನೈತಿಕ ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ಮಕ್ಕಳಲ್ಲಿ ನೈತಿಕ ಬೆಳವಣಿಗೆಯನ್ನು ಬೆಳೆಸುವ ಕೆಲವು ಪರಿಣಾಮಕಾರಿ ವಿಧಾನಗಳೆಂದರೆ ಕಥೆ ಹೇಳುವುದು, ಧ್ಯಾನ ಮಾಡುವುದು, ಗುಂಪಿನಲ್ಲಿ ಹೊಂದಿಕೊಳ್ಳಲು ಅದಷ್ಟು ಗುಂಪು
ಚಟುವಟಿಕೆಗಳನ್ನು ನೀಡುವುದು, ಯೋಗದ ಮೂಲಕ ಮಕ್ಕಳ ಮನಸ್ಸು ಮತ್ತು ಆರೋಗ್ಯವನ್ನು ಗಟ್ಟಿ ಮಾಡುವುದು. ಮಕ್ಕಳ ತಪ್ಪುಗಳನ್ನು ಅಲ್ಲಲ್ಲಿ ತಿದ್ದುವುದು. ಮಕ್ಕಳು ಅಪಮಾರ್ಗ ತುಳಿದಾಗ ತಿಳಿಹೇಳಿ ಅವರನ್ನು ಪುನಃ ಹಳಿಗೆ ತರುವುದು.

ನೈತಿಕ ಮೌಲ್ಯಗಳನ್ನು ಬೆಳಸುವಂತಹ ಕಥೆ-ಕಾದಂಬರಿ-ಪ್ರಬಂಧ-ಕವನ-ನಾಟಕ-ಪುಸ್ತಕಗಳ ಸಾಹಿತ್ಯವನ್ನು ಓದಲು ಕೊಡುವುದು. ಭಾಷಾ ಪಾಠಪುಸಕ್ತಗಳಲ್ಲಿ ನೈತಿಕ ಶಿಕ್ಷಣಕ್ಕೆ ಒತ್ತು ನೀಡುವ ಪಠ್ಯಗಳನ್ನು ಸೇರ್ಪಡೆ ಮಾಡುವುದು. ನೈತಿಕ
ಶಿಕ್ಷಣಕ್ಕೆಂದೇ ಪ್ರತ್ಯೇಕ ಸಣ್ಣ ಪುಸ್ತಕಗಳನ್ನು ಒದಗಿಸಿ ಅವುಗಳನ್ನು ಶೃಕ್ಷಣಿಕ ವರ್ಷದ ಅಂತ್ಯದಲ್ಲಿ ಮೌಲ್ಯಮಾಪನ ಮಾಡುವ ವ್ಯವಸ್ಥೆ ಜಾರಿ ತರಬೇಕು.

ಇದರಿಂದ ನೈತಿಕ ಶಿಕ್ಷಣವೆಂಬ ವಿಷಯವು ನಿರ್ಲ್ಯಕ್ಷಕ್ಕೆ ಒಳಗಾಗುವುದನ್ನು ತಪ್ಪಿಸಹುದು. ಶಾಲೆಯಲ್ಲಿ ಧರ್ಮಧಾರಿತ ನೈತಿಕತೆಯ ಪಾಠಗಳು ನುಸುಳದಂತೆ ಎಚ್ಚರವಹಿಸಬೇಕು. ನೈತಿಕ ಶಿಕ್ಷಣವನ್ನು ಶಾಲೆಯಲ್ಲಿ ಆರಂಭಿಸುವ ಮೊದಲು ಮುಖ್ಯವಾಗಿ ಸರಕಾರಿ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು. ನೈತಿಕ ಶಿಕ್ಷಣವನ್ನು ಬೋಧಿಸಲು ಹಾಲಿ ಇರುವ ಶಿಕ್ಷಕರನ್ನು ನೇಮಕಾತಿ ಮಾಡಿದಲ್ಲಿ ಈಗಾಗಲೇ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಇನ್ನಷ್ಟು ಒತ್ತಡ ಉಂಟಾಗಿ ನೈತಿಕ ಶಿಕ್ಷಣ ನೀಡಲು ಇರುವ ಉದ್ದೇಶವೇ ನಾಶವಾಗಿ ಬಿಡುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಸಣ್ಣ ಸಣ್ಣ ಪುಸ್ತಕಗಳನ್ನು ನೀಡಿ ನೈತಿಕ ಶಿಕ್ಷಣವನ್ನು ಸ್ವಯಂ ಚಟುವಟಿಕೆಗಳ ಮೂಲಕ ಕಲಿಯಲು ಮಕ್ಕಳಿಗೆ ಅನುವು ಮಾಡಿ ಕೊಡಬೇಕು.

ಅವರ ಸ್ವಕಲಿಕೆಯ ಮೇಲೆ ನಿರಂತರ ಮೌಲ್ಯಮಾಪನವನ್ನು ನಡೆಸಬೇಕು. ಇದು ಸಾಧ್ಯವಿಲ್ಲದಿದ್ದಲ್ಲಿ ಎನ್.ಜಿ.ಓಗಳ ಮೂಲಕ ನೈತಿಕ ಶಿಕ್ಷಣ ತರಗತಿಗಳನ್ನು ವಾರಕ್ಕೆ ಎರಡು ತರಗತಿಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು. ಕಲಿಕೆಯನ್ನು ಮೌಲ್ಯಮಾಪನಕ್ಕೆ
ಒಳಪಡಿಸಿದಾಗ ಮಕ್ಕಳು ಆ ವಿಷಯಗಳನ್ನು ಸರಿಯಾಗಿ ಶಿಸ್ತುಬದ್ಧವಾಗಿ ಅಧ್ಯಯನ ಮಾಡುತ್ತಾರೆ.

ಮಕ್ಕಳ ಭವಿಷ್ಯ ರೂಪಿಸಲು ನೈತಿಕ ಮೌಲ್ಯಗಳು ಮುಖ್ಯ. ಚಿಕ್ಕ ವಯಸ್ಸಿನಲ್ಲಿ ಉತ್ತಮ ನೈತಿಕ ಮೌಲ್ಯಗಳನ್ನು ಕಲಿತ ವಿದ್ಯಾರ್ಥಿ ಗಳು ಉತ್ತಮ ನಾಗರಿಕರಾಗಲು ಸಹಾಯ ಮಾಡುತ್ತದೆ. ಆದ್ದರಿಂದ ನಮ್ಮ ಮಕ್ಕಳಿಗೆ ಉತ್ತಮ ನೈತಿಕ ಮೌಲ್ಯಗಳನ್ನು ಕಲಿಸುವ ಜವಾಬ್ಧಾರಿ ಪೋಷಕರು ಮತ್ತು ಶಿಕ್ಷಣ ವ್ಯವಸ್ಥೆಯ ಮೇಲಿದೆ. ನೈತಿಕ ಶಿಕ್ಷಣವು ಪ್ರಾಮಾಣಿಕ, ದೇಶಭಕ್ತಿಯುಳ್ಳ ವ್ಯಕ್ತಿಗಳನ್ನು, ನಿಷ್ಠಾವಂತ ನಾಗರಿಕರನ್ನು ಸೃಷ್ಟಿಬಲ್ಲದು. ಇಂಥ ಪ್ರಭುದ್ಧ ವ್ಯಕ್ತಿಗಳು ಸದೃಢ ದೇಶವನ್ನು ಕಟ್ಟಬಲ್ಲರು ಮತ್ತು ಅವರ ಬದುಕನ್ನು ಸುಭ್ರದವಾಗಿಸಬಲ್ಲರು. ಈ ಹಿನ್ನಲೆಯಲ್ಲಿ ಶಾಲೆಗಳಲ್ಲಿ ನೈತಿಕ ಶಿಕ್ಷಣವನ್ನು ಇತಿ ಮಿತಿಯಲ್ಲಿ ಪ್ರತ್ಯೇಕವಾಗಿ ಬೋಧಿಸುವುದು ಅತೀ ಅಗತ್ಯ ಕೆಲಸವಾಗಿದೆ.

 
Read E-Paper click here