Saturday, 14th December 2024

ಶಿಕ್ಷೆ ಇಲ್ಲದೆ ಶಿಕ್ಷಣ ನೀಡುವುದು ಹೇಗೆ ?

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ಸ್ಪೇನ್‌ನಲ್ಲಿ ಸ್ವೀಡೆನ್ ಮತ್ತಿತರ ನಾರ್ದಿಕ್ ಯುರೋಪಿಯನ್ ದೇಶಗಳಲ್ಲಿರುವಂತೆ ಶಿಕ್ಷಕರಿಗೆ ಉತ್ತಮ ಭತ್ಯೆ ಕೂಡ ಇಲ್ಲ. ಅವರಿಗೆ ಬೇರೆಯ ವೃತ್ತಿಗಳಲ್ಲಿ ಸಿಗುವಷ್ಟು ಅಥವಾ ಅದಕ್ಕಿಂತ ಒಂದಷ್ಟು ಕಡಿಮೆ ವೇತನವಿದೆ. ಇವರ ಆಯ್ಕೆಗೆ ಕೂಡ ವಿಶೇಷ ಮಾನದಂಡಗಳಿಲ್ಲ. ಹೀಗಾಗಿ ಇಲ್ಲಿನ ಶಿಕ್ಷಣ ವ್ಯವಸ್ಥೆ ಭಾರತಕ್ಕಿಂತ ಚೆನ್ನಾಗಿದೆ ಎನ್ನಲಾಗದು.

ಕೆಲವು ದಿನಗಳ ಹಿಂದೆ ಪ್ರಖ್ಯಾತ ಸಾಹಿತಿಯೊಬ್ಬರ ಜತೆಯಲ್ಲಿ ಒಂದೈದು ನಿಮಿಷ ಮಾತನಾಡುವ ಅವಕಾಶ ಸಿಕ್ಕಿತ್ತು. ಮಾತು ಶಿಕ್ಷಣದ ಕಡೆಗೆ ಹರಿಯಿತು. ‘ಈಗಿನ ಪೋಷಕರಿಗೆ ಮಕ್ಕಳನ್ನು ಸಾಕಲು ಬರುವುದಿಲ್ಲ’ ಎಂದರವರು. ಜತೆಗೆ, ‘ಮಕ್ಕಳನ್ನು ಅವರ ಪಾಡಿಗೆ ಬಿಟ್ಟರೆ ಸಾಕು. ಅದು ಮಾಡು, ಇದು ಮಾಡು ಎಂದು ಅವರನ್ನು ಹಾಳುಮಾಡುವುದೇ ಪೋಷಕರು’ ಎಂದರವರು.

ಅವರ ಮಾತನ್ನು ಪೂರ್ಣ ಒಪ್ಪಲಾಗದು. ಏಕೆಂದರೆ ಈ ರೀತಿ ಮಕ್ಕಳನ್ನು ಅವರಿಚ್ಛೆಗೆ ಬಿಟ್ಟರೆ ಏನಾಗುತ್ತದೆ ಎನ್ನುವುದನ್ನು ಎರಡು ದಶಕದ ಹಿಂದೆಯೇ ಕಣ್ಣಾರೆ ಕಂಡ ಅನುಭವ ಜತೆಗಿದೆ. ಹೀಗಾಗಿ ೨೦೨೪ರ ಜೂನ್ ತಿಂಗಳಲ್ಲಿ ಸೆಪ್ಟೆಂಬರ್ ನೆನಪಾಯ್ತು. ಸೆಪ್ಟೆಂಬರ್ ೫ ಬಂತೆಂದರೆ ಸಾಕು, ಶಾಲೆ, ಬಾಲ್ಯ
ಮತ್ತು ಆಗಿನ ಕಲಿಕೆಯಲ್ಲಿ ಸಹಾಯ ಮಾಡುತ್ತಿದ್ದ ಶಿಕ್ಷಕ ವರ್ಗ ಎಲ್ಲವೂ ಮನಸ್ಸಿನಲ್ಲಿ ಮೂಡುತ್ತವೆ. ಗುರುಗಳು ಎಂದರೆ ಅಂದಿನ ದಿನಗಳಲ್ಲಿ ಅದೊಂಥರ ಭಯ! ದಾನಪ್ಪ ಮೇಷ್ಟ್ರು ಬಳಿ ಇರುತ್ತಿದ್ದ ಸಣ್ಣನೆಯ ಬಿದಿರಿನ ಕಡ್ಡಿಯ ಏಟು ತಿಂದವರು ದಾನಪ್ಪ ಮೇಷ್ಟ್ರಿಗೆ ಹೆದರದೆ ಇರಲು ಹೇಗೆ ತಾನೇ ಸಾಧ್ಯ? ಅವತ್ತಿನ ದಿನಗಳಲ್ಲಿ ಮೇಷ್ಟ್ರು ಮುಲಾಜಿಲ್ಲದೆ ಕಪಾಳಕ್ಕೆ ಹೊಡೆಯುತ್ತಿದ್ದರು.

ಕೈ ಮೇಲೆ ಮತ್ತು ಅಂಡಿನ ಮೇಲೆ ಬಾರಿಸುವುದು ಉಸಿರಾಡಿದಷ್ಟೇ ಸಹಜವಾಗಿತ್ತು. ಶಿಕ್ಷಕ ವೃತ್ತಿಗೆ ಒಂದಷ್ಟು ಗೌರವವಿದ್ದ ದಿನಗಳವು. ಪೋಷಕರು ಕೂಡ, ‘ನಮ್ಮ ಮಕ್ಕಳಿಗೆ ಹೊಡೆಯಲು ನೀನ್ಯಾರು?’ ಎಂದು ಯಾವತ್ತೂ ಶಿಕ್ಷಕರ ಕೊರಳಿನ ಪಟ್ಟಿ ಹಿಡಿದದ್ದು ನಾನಂತೂ ನೋಡಲಿಲ್ಲ. ಅಷ್ಟರ ಮಟ್ಟಿಗೆ ಪೋಷಕರು ಕೂಡ, ‘ಗುರುಗಳು ಹೇಳುವುದು ನಮ್ಮ ಮಗುವಿನ ಒಳಿತಿಗೆ’ ಎನ್ನುವ ಭಾವನೆಯನ್ನು ಇಟ್ಟುಕೊಂಡಿದ್ದರು. ಇವತ್ತಿಗೆ ಎಲ್ಲವೂ ಉಲ್ಟಾ!! ಶಿಕ್ಷಕರು ಮಕ್ಕಳನ್ನು ಹೊಡೆಯುವುದು ದೂರದ ಮಾತು, ಅವರನ್ನು ಮುಟ್ಟುವಂತೆ ಕೂಡ ಇಲ್ಲ.

ನಾವು ವಿದ್ಯಾರ್ಥಿಗಳಾಗಿದ್ದಾಗ ಶಿಕ್ಷಕರ ಕಂಡರೆ ಇದ್ದ ಭಯ ಈಗಿನ ವಿದ್ಯಾರ್ಥಿಗಳಲ್ಲಿ ಇಲ್ಲ. ಬದಲಿಗೆ, ಹೇಗೋ ಹುಡುಗರು ಶಾಲೆಗೆ ಬಂದರೆ ಸಾಕು,
ತರಗತಿಯಲ್ಲಿ ಕುಳಿತರೆ ಸಾಕು ಎನ್ನುವ ಮಟ್ಟಕ್ಕೆ ಶಿಕ್ಷಣ ವ್ಯವಸ್ಥೆ ಬಂದು ನಿಂತಿದೆ. ಸ್ಪೇನ್‌ಗೆ ಬಂದ ಮೊದಲ ದಿನಗಳಲ್ಲಿ ಇಲ್ಲಿನ ಮಕ್ಕಳು ತಮ್ಮ ಗುರುಗಳನ್ನ ‘ಒಯ್ಯೇ ಪ್ರೊಫೆ’ ಎಂದು ಕರೆಯುವುದು ಕಂಡೆ. ‘ಅರೆರೆ, ಇದೇನಿದು ಪ್ರೊ-?’ ಎಂದು ಅಚ್ಚರಿಯಿಂದ ಸಹೋದ್ಯೋಗಿ ಮಿತ್ರರನ್ನ ಕೇಳಿದ್ದೆ. ಇಲ್ಲಿನ ಕಿಂಡರ್‌ಗಾರ್ಟನ್‌ನಲ್ಲಿ ಕಲಿಸುವ ಶಿಕ್ಷಕನನ್ನ ಕೂಡ ‘ಪ್ರೊಫೆಸರ್’ ಎನ್ನುವುದು ವಾಡಿಕೆ.

ಅದನ್ನು ತುಂಡುಮಾಡಿ ವಿದ್ಯಾರ್ಥಿಗಳು ‘ಪ್ರೊಫೆ’ ಮಾಡಿದ್ದಾರೆ. ಇಲ್ಲಿನ ಟೀಚರ್‌ಗಳು ಕೂಡ ಈ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದಾರೆ. ಹೆಸರು
ಹಿಡಿದು ಕರೆಯುವುದು, ಇಲ್ಲವೇ ಪ್ರೊಫೆ ಎನ್ನುವುದು ತೀರಾ ಕಾಮನ್. ಪಕ್ಕದ ಇಂಗ್ಲೆಂಡ್‌ನಲ್ಲಿ, ದೂರದ ಅಮೆರಿಕದಲ್ಲಿ ಶಾಲೆಯ ಶಿಕ್ಷಕ ವೃತ್ತಿ ಎಂದರೆ ಅದೊಂದು ಟಾರ್ಚರ್ ಎನ್ನುವ ಮಟ್ಟಕ್ಕೆ ಹೋಗಿದೆ. ಎಲ್ಲೆಡೆ ಎಂದಲ್ಲ, ಬಹಳ ಪ್ರದೇಶದಲ್ಲಿ ಈ ಮಾತು ಸತ್ಯ. ಇದಕ್ಕೆ ಕಾರಣ ಮಕ್ಕಳ ನಡವಳಿಕೆ. ಅವರದ್ದು ಗೊಂಡ ಗಾರಿಕೆ. ಶಿಕ್ಷಕರು ನಿತ್ಯವೂ ಅಪ್‌ಡೇಟ್ ಆಗಿ ಹೋಗಿ ದ್ದರು ಕೂಡ ಸ್ವಲ್ಪ ಹೆಚ್ಚು ಕಡಿಮೆಯಾದರೆ ಸಾಕು ಅವರನ್ನು ಟ್ರೋಲ್ ಮಾಡುವುದು ಸಾಮಾನ್ಯವಾಗಿದೆ.

ಸ್ಪೇನ್‌ನಲ್ಲಿ ಈ ಮಟ್ಟಿಗೆ ಇಲ್ಲದಿದ್ದರೂ ಇತ್ತೀಚೆಗೆ ಶಿಕ್ಷಕ ವೃತ್ತಿ ಎಂದರೆ ‘ಉಸ್ಸಪ್ಪಾ’ ಎನ್ನುವಂತಾಗಿದೆ. ಸ್ಪೇನ್‌ನಲ್ಲಿ ಸ್ವೀಡೆನ್ ಮತ್ತಿತರ ನಾರ್ದಿಕ್
ಯುರೋಪಿಯನ್ ದೇಶಗಳಲ್ಲಿ ನೀಡುವಂತೆ ಶಿಕ್ಷಕ ರಿಗೆ ಹೆಚ್ಚಿನ ಅಥವಾ ಉತ್ತಮ ಭತ್ಯೆ ಕೂಡ ಇಲ್ಲ. ಇಲ್ಲಿನ ಶಾಲೆಯ ಶಿಕ್ಷಕರಿಗೆ ಬೇರೆಯ ವೃತ್ತಿ ಗಳಲ್ಲಿ
ಸಿಗುವಷ್ಟು ಅಥವಾ ಅದಕ್ಕಿಂತ ಒಂದಷ್ಟು ಕಡಿಮೆ ವೇತನವಿದೆ. ಇವರ ಆಯ್ಕೆಗೆ ಕೂಡ ವಿಶೇಷ ಮಾನ ದಂಡಗಳು ಇಲ್ಲ. ಹೀಗಾಗಿ ಇಲ್ಲಿನ ಶಿಕ್ಷಣ ವ್ಯವಸ್ಥೆ
ನಮ್ಮ ಭಾರತಕ್ಕಿಂತ ಬಹಳ ಚೆನ್ನಾಗಿದೆ ಎಂದು ಹೇಳಲುಬಾರದು. ಇಲ್ಲಿನ ಜನರ, ಶಿಕ್ಷಕರ ಅಥವಾ ಶಿಕ್ಷಣ ವ್ಯವಸ್ಥೆಯ ಮಹಾನ್ ನ್ಯೂನತೆಯೆಂದರೆ
ಮಕ್ಕಳನ್ನ ‘ತೇ ಗುಸ್ತಾ ಸ್ತುದಿಯಾರ್?’ ಎಂದು ಕೇಳು ವುದು. ಅಂದರೆ ಮಕ್ಕಳನ್ನ ಕುರಿತು ‘ನಿಮಗೆ ಓದಲು ಇಷ್ಟವೇ?’ ಎಂದು ಪ್ರಶ್ನಿಸುವುದು. ಯಾವ ಮಕ್ಕಳು ‘ಹೌದು, ನಮಗೆ ಓದಲು ಇಷ್ಟ’ ಎಂದು ಹೇಳುತ್ತವೆ? ಮಕ್ಕಳನ್ನ ಬಲವಂತ ಮಾಡಬಾರದು, ಅವರ ಇಚ್ಛೆಯಂತೆ ಬಿಡಬೇಕು ಎನ್ನುವ ಸಿದ್ಧಾಂತಕ್ಕೆ ಸ್ಪೇನ್ ಬೆಲೆ ತೆರುತ್ತಿದೆ. ಪಕ್ಕದ ಜರ್ಮನಿ ಮತ್ತು ಫ್ರಾನ್ಸ್ ಗಳಲ್ಲಿ ಇರುವಷ್ಟು ಪದವೀಧರರು ಸ್ಪೇನ್‌ನಲ್ಲಿ ತಯಾರಾಗುತ್ತಿಲ್ಲ.

ತಯಾರಾದವರು ಕೂಡ ಆರ್ಟ್ಸ್, ಸೋಷಿಯಲ್, ಪೊಲಿಟಿಕಲ್ ಸೈನ್ಸ್, ಎನ್ವಿರಾನ್ಮೆಂಟಲ್ ಹೀಗೆ ಪಟ್ಟಿ ಸಾಗುತ್ತದೆ. ಎಂಜಿನಿಯರಿಂಗ್ ಮತ್ತು ಮೆಡಿಸಿನ್ ಓದುವವರ ಸಂಖ್ಯೆ ಹಾಗೂ ಪಿಎಚ್‌ಡಿ ಮಾಡಿ ಸಂಶೋಧನೆಗೆ ಹೋಗುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಹೀಗೆ ಸ್ಪ್ಯಾನಿಷರು ವಿಶ್ವವಿದ್ಯಾಲಯ ದಲ್ಲಿ ತುಂಬಲಾ ಗದ ಜಾಗವನ್ನ ಭಾರತೀಯರು, ಸೌತ್ ಅಮೆರಿಕ ನ್ನರು, ಚೀನಿಯರು ತುಂಬುತ್ತಿದ್ದಾರೆ.

ಕೆಲವೊಮ್ಮೆ ದೇಶವನ್ನು ಕುಸಿಯುವಂತೆ ಮಾಡಲು ಹೊರಗಿನ ಬೇರೆ ಯಾರ ಸಹಾಯವೂ ಬೇಡವಾಗುತ್ತದೆ. ನಮ್ಮ ಆಂತರಿಕ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಲ್ಲಿ ಸ್ವಲ್ಪ ನಿಧಾನ ಮಾಡಿದರೂ ಅಷ್ಟು ಸಾಕು. ಇದರ ನಡುವೆ ವಿದ್ಯಾವಂತ ಸ್ಪ್ಯಾನಿಷರು ಉತ್ತಮ ಬದುಕನ್ನ ಅರಸಿ
ಜರ್ಮನಿ, ಫ್ರಾನ್ಸ್, ಅಮೆರಿಕ ಮತ್ತಿತರ ದೇಶಗಳಿಗೆ ಗುಳೆ ಹೋಗುವುದು ಕೂಡ ಕಳೆದ ಒಂದು ದಶಕದಿಂದ ಸಾಮಾನ್ಯವಾಗಿದೆ. ೨೦೧೦ರ ನಂತರದ
ಆರ್ಥಿಕ ಕುಸಿತ ಇಂಥ ಒಂದು ವಲಸೆಗೆ ನಾಂದಿ ಹಾಡಿತು ಎನ್ನಬಹುದು.

ಕೆಲಸದಲ್ಲಿ ಕೂಡ ಸಿಗುವ ಮುಕ್ಕಾಲು ಪಾಲು ಜನ ಸಹೋದ್ಯೋಗಿಗಳು ಪದವೀಧರರಲ್ಲ. ನಮ್ಮಲ್ಲಿ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಲು ಕೂಡ ಡಿಗ್ರಿ
ಬೇಕು ಎನ್ನುತ್ತಾರೆ. ಆದರೆ ಇಲ್ಲಿ ತೀರಾ ಉನ್ನತ ವೃತ್ತಿಪರತೆಯನ್ನು ಬೇಡುವ ಹುದ್ದೆಯನ್ನು ಬಿಟ್ಟು, ಡೇಟಾ ಎಂಟ್ರಿ, ಅಡ್ಮಿನಿಸ್ಟ್ರೇಷನ್, ಸೇಲ್ಸ್ ಇತ್ಯಾದಿ
ಕೆಲಸಗಳಿಗೆ ಡಿಗ್ರಿ ಕಡ್ಡಾಯವಲ್ಲ. ಇದೆಲ್ಲಕ್ಕಿಂತ ಹೆಚ್ಚಿನ ಆಶ್ಚರ್ಯ ತಂದ ವಿಷಯ ನನ್ನ ಮಟ್ಟಿಗೆ ಅಂದಿನ ದಿನಕ್ಕೆ ಉನ್ನತ ವಿದ್ಯಾಭ್ಯಾಸ ಮಾಡಿದ ಹೆಣ್ಣು
ಮಕ್ಕಳು ಕಾರ್ಪೆಂಟರ್, ವೆಲ್ಡರ್, ಪೇಂಟರ್ ವೃತ್ತಿಯವರನ್ನ ಬಾಳಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವುದು! ಇಂಥ ವಿಷಯವನ್ನ ನಾವು ಭಾರತ
ದಲ್ಲಿ ಊಹೆ ಮಾಡಿಕೊಳ್ಳಲು ಅಸಾಧ್ಯ. ಅಲ್ಲೊಂದು ಇಲ್ಲೊಂದು ಅಪವಾದವಿರಬಹುದು, ಆದರೆ ಇಲ್ಲಿನ ಸಮಾಜ ಒಪ್ಪಿಕೊಂಡಂತೆ ನಮ್ಮ ಸಮಾಜ
ಯಾವುದೇ ಪೂರ್ವಗ್ರಹವಿಲ್ಲದೆ ಹೀಗೆ ಒಪ್ಪಿಕೊಳ್ಳು ವುದೇ? ಎನ್ನುವುದು ಇಂದಿಗೂ ನನಗೆ ಸಂಶಯ.

ಇದು ಶಿಕ್ಷಣ ವ್ಯವಸ್ಥೆಯಲ್ಲಿ ಹಾಗೂ ಶಿಕ್ಷಣ ಕುರಿತು ಸಾಮಾಜಿಕ ವ್ಯವಸ್ಥೆಯಲ್ಲಿ ಭಾರತೀಯ ರಿಗೂ ಮತ್ತು ಸ್ಪ್ಯಾನಿಷ್ ಜನರಿಗೂ ಇರುವ ಮೂಲ ಭೂತ ವ್ಯತ್ಯಾಸ. ಉಳಿದಂತೆ ಇಂಥ ಅನೇಕ ವಿಷಯಗಳು ಅಂದಿನ ದಿನದಲ್ಲಿ ನನ್ನನ್ನ ಅಚ್ಚರಿಯ ಕೂಪಕ್ಕೆ ತಳ್ಳಿದ್ದವು. ಅದು ೨೦೦೨ರ ಸೆಪ್ಟೆಂಬರ್ ತಿಂಗಳ
ಒಂದು ದಿನ. ನಾನು ಬಾರ್ಸಿಲೋನಾ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದೆ. ಸುಮಾರು ಐದಾರು ವರ್ಷದ ಹೆಣ್ಣು ಮಗುವೊಂದು ಜೀಕುತ್ತಾ, ಕುಣಿಯುತ್ತಾ
ಆಸನದ ಮೇಲೇರಿ ನಂತರ ಕೈಗೆ ಸಿಕ್ಕ ಸ್ಟೀಲ್ ಸಲಾಕೆಯನ್ನ ಹಿಡಿದು ಅದರ ಸಹಾಯದಿಂದ ಮೆಟ್ರೋ ರೈಲಿನ ಮೇಲ್ಚಾವಣಿಯನ್ನ ಮುಟ್ಟಿ ಬಿಟ್ಟಿತು!

ಆ ಪುಟಾಣಿಯ ಹೆತ್ತವರು ಮಗಳಾಡುತ್ತಿದ್ದ ಕ್ರೀಡೆಯನ್ನ ಆಸ್ವಾದಿಸುತ್ತಿದ್ದರು. ಅರೆರೆ ಇದೇನಿದು, ಈ ಯುವಜೋಡಿಗೆ ಸ್ವಲ್ಪವೂ ಬುದ್ಧಿಯಿಲ್ಲ, ಮಗು
ಬಿದ್ದರೇನು ಗತಿ ಎನ್ನುವ ಧಾವಂತ ನನ್ನದು. ಅದನ್ನ ಪಕ್ಕದಲ್ಲಿ ಕುಳಿತಿದ್ದ ಗೆಳೆಯ-ಸಹೋದ್ಯೋಗಿ ಫ್ಯಾನ್ಸಿಯ ಕಿವಿಯಲ್ಲಿ ಉಸುರಿದ್ದೆ. ಅವನು ಮೆಲ್ಲಗೆ,
‘ಇದೆಲ್ಲಾ ಇಲ್ಲಿ ಸಾಮಾನ್ಯ’ ಎನ್ನುವ ಲುಕ್ ಒಂದನ್ನ ಕೊಟ್ಟ. ನಾವು ಸ್ಪ್ಯಾನಿಷರು ಇರುವುದೇ ಹೀಗೆ ಎಂದ. ಮಗು ಹುಟ್ಟಿದ ೨ ತಿಂಗಳ ನಂತರ ಅದನ್ನ
ಬೇರೆಡೆ ಮಲಗಿಸಲು ಶುರುಮಾಡುತ್ತಾರೆ. ಮಗು ಐದು ವರ್ಷದ ವೇಳೆಗೆ ಬಹುತೇಕ ಇಂಡಿಪೆಂಡೆಂಟ್ ಆಗಿರುತ್ತದೆ. ತನ್ನ ಬೇಕು-ಬೇಡಗಳ ಬಗ್ಗೆ ಅಷ್ಟೊಂದು ಸ್ಪಷ್ಟತೆ ಇರುವುದನ್ನು ಕಂಡಾಗ, ಈ ಮಕ್ಕಳ ಬಾಲ್ಯವನ್ನ ಬೇಗ ಕಸಿದುಕೊಂಡರೇನೋ? ಅನ್ನಿಸುತ್ತದೆ. ಆದರೆ ಈ ಸಮಾಜ ಇರುವುದು ಹೀಗೆ.

ಮೆಟ್ರೋ ಮೇಲ್ಚಾವಣಿಯನ್ನ ಸಲೀಸಾಗಿ ಏರಿದ ಆ ಮುದ್ದು ಮಗುವಿನ ಕೆನ್ನೆಯನ್ನು ಹಿಂಡಿ ಒಂದು ಮುತ್ತು ಕೊಡಬೇಕು ಎನ್ನುವ ಮನಸ್ಸಿನ ಭಾವನೆಗೆ
ಕೂಡ ಇಲ್ಲಿ ಬೆಲೆಯಿಲ್ಲ. ಭಾರತದಲ್ಲಿ ಇಂದಿಗೂ ಮುದ್ದಾದ ಮಕ್ಕಳು ರಸ್ತೆಯಲ್ಲಿ ಕಂಡರೆ ಧೈರ್ಯ ವಾಗಿ ಅವುಗಳ ಗಲ್ಲ ಸವರಿ, ‘ಏನು ಪುಟ್ಟಾ ನಿನ್ನ
ಹೆಸರು?’ ಎನ್ನಬಹುದು. ಆದರೆ ಇದು ಸ್ಪೇನ್‌ನಲ್ಲಿ ಸಾಧ್ಯವಿಲ್ಲ. ನಮಗೆ ತೀರಾ ಪರಿಚಿತರಲ್ಲದ ಹೊರತು ಹೀಗೆ ಬೇರೆ ಯಾವುದೇ ಮಗುವನ್ನ ಮುಟ್ಟುವುದನ್ನ ಇಲ್ಲಿನ ಸಮಾಜ ಒಪ್ಪುವುದಿಲ್ಲ. ಹೀಗಾಗಿ ಮುದ್ದಾದ ಆ ಮಗುವನ್ನ ಮುಟ್ಟುವ ತವಕವನ್ನ ಕೂಡ ಅದುಮಿಟ್ಟುಕೊಳ್ಳಬೇಕಾಯಿತು. ನನ್ನೆಲ್ಲ ಪ್ರಶ್ನೆಗೆ ಉತ್ತರಿಸಿದ್ದ ಫ್ಯಾನ್ಸಿ, ‘ನಾನು ನಿನಗೊಂದು ಪ್ರಶ್ನೆ ಕೇಳಲೇ?’ ಎಂದಾಗ ‘ಇಲ್ಲ’ ಎನ್ನಲಾದೀತೇ? ‘ಕೇಳಪ್ಪ’ ಎಂದಿದ್ದೆ.

ಅವನು, ‘ನಿಮ್ಮಲ್ಲಿ ಹೀಗೆ ಮಕ್ಕಳನ್ನ ಸ್ವತಂತ್ರವಾಗಿ ಬಿಡುವುದಿಲ್ಲವೇ?’ ಎಂದ. ಅವನಿಗೇನು ಉತ್ತರ ಹೇಳುವುದು? ಸಾಮಾನ್ಯವಾಗಿ, ‘ಏಯ್ ಇಳಿ ಬೇಗ, ಬಿದ್ದು ತಲೆಗೆ ತಂದೀಯ’ ಎಂದೋ ಅಥವಾ ‘ಹುಷಾರು ಬಿದ್ದೀಯ’ ಎಂದೋ ಹೇಳುವುದು ನಮ್ಮಲ್ಲಿ ಕಾಮನ್ ಎಂದಿದ್ದೆ. ಸ್ಪ್ಯಾನಿಷ್ ಸಮಾಜದಂತೆ ನಮಗೆ ನಮ್ಮ ಮಕ್ಕಳು ಬೇಗ ಇಂಡಿಪೆಂಡೆಂಟ್ ಆಗಲಿ ಎನ್ನುವ ಧಾವಂತ ಇಲ್ಲ ಎನ್ನುವುದನ್ನ ಕೂಡ ಹೇಳಿದೆ.

ಫ್ಯಾನ್ಸಿ ಅಲ್ಲದೆ ಅವನ ಕುಟುಂಬದ ಇತರ ಸದಸ್ಯರ ಪರಿಚಯ ಕೂಡ ನನಗಿತ್ತು. ಫ್ಯಾನ್ಸಿ ತನ್ನ ಪ್ರೀತಿಯ ಹುಡುಗಿಯ ಜತೆಗೆ ಲಿವ್-ಇನ್
ರಿಲೇಷನ್‌ಷಿಪ್‌ನಲ್ಲಿದ್ದ. ಹಾಗೊಮ್ಮೆ ಹೀಗೊಮ್ಮೆ ಹೆತ್ತವರ ನೋಡಲು ಹೋಗುತ್ತಿದ್ದ. ಇದು ಈ ಸಮಾಜದಲ್ಲಿ ಅತ್ಯಂತ ಸಹಜ ಮತ್ತು ಸಾಮಾನ್ಯ.
ವಯಸ್ಸಿಗೆ ಬಂದ ಮಗ ಅಥವಾ ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಂಗಾತಿಯಿಲ್ಲ ಎನ್ನುವುದನ್ನ ಈ ಸಮಾಜದಲ್ಲಿ ಕೊರತೆ ಎನ್ನುವಂತೆ ನೋಡಲಾಗುತ್ತದೆ. ಹೀಗೆ ಒಮ್ಮೆ ಫ್ಯಾನ್ಸಿಯ ತಾತ ಮಾತಿಗೆ ಸಿಕ್ಕಿ ದ್ದರು. ಅವರೊಂದಿಗೆ ಮಾತನಾಡುವುದು ಎಂದರೆ ನನಗೆ ಅತ್ಯಂತ ಖುಷಿಯ ವಿಷಯ. ಫ್ಯಾನ್ಸಿ ಮಾತ್ರ, ‘ಅದೇನು ನನ್ನ ತಾತನ ಹತ್ತಿರ ಅಷ್ಟೊಂದು ಮಾತನಾಡುತ್ತೀಯ? ಆತನ ಮಾತುಗಳು ಬರೀ ಬೋರಿಂಗ್’ ಎನ್ನುತ್ತಿದ್ದ.

‘ಹೌದಪ್ಪ, ನಿನಗೆ ಬೋರಿಂಗ್. ನನಗೆ ಅವರೊಂದು ಇತಿಹಾಸದ ತುಣುಕು’ ಎನ್ನುತ್ತಿದ್ದೆ. ಅವನಿಗೆ ಅದು ಅರ್ಥವಾಗು ತ್ತಿರಲಿಲ್ಲ. ‘ಕೊಮೊ ತು ಕಿಯರೆಸ್’ (ನಿನ್ನಿಷ್ಟ ಎನ್ನುವ ಅರ್ಥ) ಎಂದು ನಮ್ಮಿಬ್ಬರನ್ನ ಬಿಟ್ಟು ಹೊರಟು ಬಿಡುತ್ತಿದ್ದ. ಫ್ಯಾನ್ಸಿಯ ತಾತ ೧೯೩೦/೪೦ರ ಸ್ಪ್ಯಾನಿಷ್ ಬದುಕು, ಶಿಕ್ಷಣದ ಬಗ್ಗೆ ಬಹಳ ಹೇಳುತ್ತಿದ್ದರು. ಅಲ್ಲಿನ ಶಾಲೆಯಲ್ಲೂ, ತಪ್ಪು ಮಾಡಿದ ಮಕ್ಕಳಿಗೆ ಬಸ್ಕಿ ಹೊಡೆಸುವುದು, ಕಪ್ಪೆ ಕೂಡಿಸುವುದು, ಮಂಡಿಯ ಮೇಲೆ, ಗೆಣ್ಣ ಮೇಲೆ ಹೊಡೆಯುವುದು, ತರಗತಿ ಯಿಂದ ಹೊರಗಡೆ ನಿಲ್ಲಿಸುವುದು, ಬೇರೆ ಮಕ್ಕಳ ಕೈಯಲ್ಲಿ ಮೂಗು ಹಿಡಿಸಿ ಕೆನ್ನೆಗೆ ಹೊಡೆಸುವುದು ಎಲ್ಲವೂ ಇತ್ತಂತೆ!! ‘ಕಾಲ ಬದಲಾಯಿತೋ ಅಥವಾ ನಾವು ಬದಲಾದೆವೋ ಗೊತ್ತಿಲ್ಲ ರಂಗ, ಇವತ್ತು ಮಕ್ಕಳನ್ನ ಮುಟ್ಟುವಂತೆಯೂ ಇಲ್ಲ, ಹೊಡೆಯುವುದು ದೊಡ್ಡ ಮಾತು.

ಶಿಕ್ಷೆ ಇಲ್ಲದೆ ಶಿಕ್ಷಣ ನೀಡುವುದಾದರೂ ಹೇಗೆ?’ ಎಂದು ನಿಟ್ಟುಸಿರು ಬಿಟ್ಟ ಆತನ ಮುಖ ಮಸ್ತಕದಲ್ಲಿ ಇನ್ನೂ ಹಸಿರಾಗಿದೆ. ಭಾರತದಲ್ಲಿ ಕೂಡ ವ್ಯವಸ್ಥೆಯಲ್ಲಿ ಬಹಳ ವ್ಯತ್ಯಾಸ ವೇನೂ ಉಳಿದುಕೊಂಡಿಲ್ಲ. ಬೇಡವಾದದ್ದು ಜಾಗತಿಕವಾಗಿ ಅದೆಷ್ಟು ವೇಗವಾಗಿ ಹಬ್ಬಿಬಿಡುತ್ತದೆ ಎನ್ನುವುದನ್ನ ಕಂಡಾಗೆಲ್ಲ ಫ್ಯಾನ್ಸಿಯ ತಾತನ ನಿಟ್ಟುಸಿರು ನನ್ನದು ಕೂಡ!