Sunday, 24th November 2024

ರಾಜಕೀಯ ಸಂಘರ್ಷಕ್ಕೆ ಕಾರಣವಾದ ಎಗ್‌ ಎಸೆತ, ಎಗ್ಗಿಲ್ಲದ ಮಾತು !

ಇದೇ ಅಂತರಂಗ ಸುದ್ದಿ

vbhat@me.com

ಅಮೆರಿಕ ಮತ್ತು ಬ್ರಿಟನ್ ನ ಕೆಲವು ನಗರಗಳಲ್ಲಿ ಅಕ್ಟೊಬರ್ 30ರಂದು ಜನ ಪರಸ್ಪರ ಮೊಟ್ಟೆಗಳನ್ನು ಎಸೆದು ಸಂತಸ ಪಡುವುದುಂಟು. ನಮ್ಮಲ್ಲಿ ಹೋಳಿಯಾಟ ಆಡಿದಂತೆ ಅಲ್ಲಿ ಮೊಟ್ಟೆ ಎಸೆತ. ಇದನ್ನು ಅವರು Mischief Night ಎಂದು ಕರೆಯುತ್ತಾರೆ. ಜನ್ಮದಿನ ಆಚರಿಸಿಕೊಳ್ಳುವವರಿಗೆ ಮೊಟ್ಟೆಯಲ್ಲಿ ಹೊಡೆಯುವ ಸಂಪ್ರದಾಯ ಅನೇಕ ದೇಶಗಳಲ್ಲಿದೆ.

ಮೊನ್ನೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಡಿಕೇರಿಗೆ ಹೋದಾಗ, ಅವರ ಮೇಲೆ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಕೋಳಿ ಮೊಟ್ಟೆ ಎಸೆದ ಪ್ರಕರಣ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಈ ತಿಂಗಳ 26 ರಂದು ಭಾರಿ ಸಂಖ್ಯೆಯಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಬಿಜೆಪಿಯವರೂ ತಾವೂ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ.

‘ಬಿಜೆಪಿ ನಾಯಕರ ಮೇಲೆಯೂ ಮೊಟ್ಟೆ ಎಸೆಯಲು ನಮಗೆ ಬರೊಲ್ಲವಾ?’ ಎಂದು ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ. ಪುಣ್ಯವಶಾತ್, ಎಲ್ಲ ಪಕ್ಷಗಳ ನಾಯಕರೂ ಈ ಕೃತ್ಯವನ್ನು ಖಂಡಿಸಿದ್ದಾರೆ. ಇಲ್ಲದಿದ್ದರೆ ನಾಯಕರು ಹೋದಲ್ಲಿ ಬಂದಲ್ಲಿ, ಹೂ-ಹಾರ, ಸೇಬುಹಣ್ಣಿನ ಹಾರ, ಶಾಲು-ಪೇಟಾ ಬದಲು ‘ಮೊಟ್ಟೆ ಎಸೆದು ಸ್ವಾಗತಿಸಿದರು’ ಎಂದು ಬರೆಯಬೇಕಾ ಗುವು ದೇನೋ. ಹೀಗಾದರೆ ಮುಂಬರುವ ದಿನಗಳಲ್ಲಿ, ಮೊಟ್ಟೆ ರೇಟು ಗಗನಕ್ಕೇರುವುದರಲ್ಲಿ ಸಂದೇಹವಿಲ್ಲ. ‘ಸುಪಾರಿ ಕಿಲ್ಲರ್ಸ್’ ಅಥವಾ ‘ಬಾಡಿಗೆ ಹಂತಕರು’ ಇದ್ದ ಹಾಗೆ, ರಾಜಕೀಯ ನಾಯಕರಿಗೆ ಎಸೆಯಲೆಂದು ‘ಮೊಟ್ಟೆವೀರ’ರು ಸಹ ಹುಟ್ಟಿಕೊಳ್ಳ ಬಹುದು.

ಬಿಜೆಪಿ ನಾಯಕರ ಮೇಲೂ ಯಾರಾದರೂ ಮೊಟ್ಟೆ ಎಸೆಯಲೂಬಹುದು. ಅಷ್ಟಕ್ಕೂ ಮೊಟ್ಟೆ ಎಸೆಯುವುದು ಕಷ್ಟವಲ್ಲ. ಅದರಿಂದ ಗಾಯವೂ ಆಗುವುದಿಲ್ಲ. ಆದರೆ ಮೊಟ್ಟೆ ಏಟು ತಿನ್ನುವುದು ಅವಮಾನಕರ ಎಂಬ ಭಾವನೆಯಿದೆ. ಕಟಿಗಿಂತ
ಮೊಟ್ಟೆ ಏಟು ವಾಸಿ. ಕಟು ದೇಹಕ್ಕೆ ಗಾಯವಾದರೆ, ಮೊಟ್ಟೆ ಏಟು ಮನಸ್ಸಿಗೆ.

ಇಂಗ್ಲಿಷಿನಲ್ಲಿ ಮೊಟ್ಟೆ ಎಸೆಯುವುದಕ್ಕೆ Egging ಅಥವಾ Egg Pelting ಅಂತಾರೆ. ಸಿದ್ದರಾಮಯ್ಯ ನವರಿಗೆ ಮೊಟ್ಟೆ ಎಸೆದಿದ್ದೇ ಮೊದಲನೆಯದಲ್ಲ. ನನಗೆ ನೆನಪಿರುವಂತೆ, 1970ರಲ್ಲಿ ಬ್ರಿಟನ್ ಪ್ರಧಾನಿ ಹೆರಾಲ್ಡ್ ವಿಲ್ಸನ್ ಅವರು ಚುನಾವಣೆ ಪ್ರಚಾರದಲ್ಲಿದ್ದಾಗ, ಅವರ ವಿರೋಧಿ ಪಾಳೆಯದ ಕಾರ್ಯಕರ್ತನೊಬ್ಬ ಹತ್ತಿರದಿಂದ ಮೊಟ್ಟೆಯನ್ನು ಎಸೆದಿದ್ದ. ಅದು ವಿಲ್ಸನ್ ಹಣೆಗೆ ಬಡಿದು, ಕೋಟು ರಾಡಿಯಾಗಿತ್ತು. “Eggs must be cheap enough to throw at me ಎಂದು ವಿಲ್ಸನ್
ಪ್ರತಿಕ್ರಿಯಿಸಿದ್ದರು. ‘ವಿಲ್ಸನ್ ಗೆ ಮೊಟ್ಟೆ ಎಸೆಯಬಾರದಿತ್ತು.

ಕಾರಣ ಅದನ್ನು ವಿಲ್ಸನ್ ತನ್ನ ಸ್ವಾಗತಕ್ಕೆ ಎಸೆದಿದ್ದು ಎಂದು ಭಾವಿಸಬಹುದು. ಈ ಪ್ರಕರಣದಿಂದ ವಿಲ್ಸನ್ ಮೊಟ್ಟೆಯ ಮೇಲೆ ಪ್ರತೀಕಾರ ತೆಗೆದುಕೊಳ್ಳಬಹುದು, ಮೊಟ್ಟೆ ಮೇಲೆ ತೆರಿಗೆ ವಿಧಿಸಬಹುದು’ ಎಂದು ಅವರ ವಿರೋಧಿಗಳು ಪ್ರತಿಕ್ರಿಯಿಸಿದ್ದು
ಸುದ್ದಿಯಾಗಿತ್ತು. 2010ರಲ್ಲಿ ಇಂಥದೇ ಇನ್ನೊಂದು ಪ್ರಸಂಗ. ಬ್ರಿಟನ್ ಪ್ರಧಾನಿಯಾಗಿದ್ದ ಡೆವಿಡ್ ಕಮೆರೋನ್ ಚುನಾವಣಾ
ಪ್ರಚಾರದಲ್ಲಿದ್ದಾಗ, ವಿದ್ಯಾರ್ಥಿಯೊಬ್ಬ ಅವರ ಮುಖಕ್ಕೆ ಮೊಟ್ಟೆಯನ್ನೆಸೆದಿದ್ದ.

ಆ ವಿದ್ಯಾರ್ಥಿಯನ್ನು ತಕ್ಷಣ ಬಂಧಿಸಿ, ಒಂದು ಗಂಟೆಯ ನಂತರ ಬಿಡುಗಡೆ ಮಾಡಲಾಯಿತು. ಆ ವಿದ್ಯಾರ್ಥಿಯಲ್ಲಿದ್ದುದು ಕ್ಷಣಿಕ ಕೋಪವಾಗಿತ್ತು. ಆತನ ದೇಹದಲ್ಲಿ ಬೇರಾವ ಅಸವೂ ಇರಲಿಲ್ಲ. ಹೀಗಾಗಿ ಬಿಡುಗಡೆ ಮಾಡಲಾಯಿತು. ಆಸ್ಟ್ರೇಲಿಯಾ ಪ್ರಧಾನಿಯಾಗಿದ್ದ ಜೂಲಿಯಾ ಗಿರ್ಡ್, ಯುಕ್ರೇನ್ ಅಧ್ಯಕ್ಷರಾಗಿದ್ದ ವಿಕ್ಟೊರ್ ಯನುಕೋವಿಚ್, ಜೆಕ್ ರಾಜಕಾರಣಿ ಮಿಲೋಸ್ ಝೆಮನ್, ಪೊಲಿಶ್ ನಾಯಕ ಬ್ರೊನಿಸಲಾ ಕೊಮೊರೌಸ್ಕಿ, ಕ್ಯಾಲಿಫೋರ್ನಿಯಾದ ಗವರ್ನರ್  ಮತ್ತು ನಟ ಅರ್ನಾಲ್ಡ್  ಶೆರ್ಜಾನಗರ್, ಬ್ರಿಟಿಷ್ ರಾಜಕಾರಣಿ ಜಾನ್ ಪ್ರೆಸ್ಕಾಟ್, ಎಡ್ ಮಿಲಿಬ್ಯಾಂಡ್, ನಿಗೆಲ್ -ರಾಜ್, ಜರ್ಮನ್ ಹೆಲ್ಮುಟ್ ಕೋಹ್ಲ್, ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿ, ನ್ಯೂಜಿಲ್ಯಾಂಡ್ ನಾಯಕ ರಿಚರ್ಡ್ ಪ್ರೆಬಲ, ಹಾಂಗ್-ಕಾಂಗ್ ನಾಯಕ ಜಾನ್ ತ್ಸಂಗ್.. ಹೀಗೆ ಅನೇಕ ನಾಯಕರು ಮೊಟ್ಟೆ ಎಸೆತಕ್ಕೆ ಒಳಗಾದವರೇ.

ಅಮೆರಿಕ ಮತ್ತು ಬ್ರಿಟನ್ ನ ಕೆಲವು ನಗರಗಳಲ್ಲಿ ಅಕ್ಟೊಬರ್ 30ರಂದು ಜನ ಪರಸ್ಪರ ಮೊಟ್ಟೆಗಳನ್ನು ಎಸೆದು ಸಂತಸ ಪಡುವುದುಂಟು. ನಮ್ಮಲ್ಲಿ ಹೋಳಿಯಾಟ ಆಡಿದಂತೆ ಅಲ್ಲಿ ಮೊಟ್ಟೆ ಎಸೆತ. ಇದನ್ನು ಅವರು Mischief Night ಎಂದು
ಕರೆಯುತ್ತಾರೆ. ಜನ್ಮದಿನ ಆಚರಿಸಿಕೊಳ್ಳುವವರಿಗೆ ಮೊಟ್ಟೆಯಲ್ಲಿ ಹೊಡೆಯುವ ಸಂಪ್ರದಾಯ ಅನೇಕ ದೇಶಗಳಲ್ಲಿದೆ.

ಅದೊಂದು ಮೋಜಿನ, ತಮಾಷೆಯ ಚಟುವಟಿಕೆ. ಕೇಕ್ ಕತ್ತ ರಿಸಿದ ನಂತರ, ಮೊಟ್ಟೆಯಲ್ಲಿ ಹೊಡೆಯುವುದು, ಹೊಡೆಸಿ ಕೊಳ್ಳುವುದು ಅಲ್ಲಿ ಸಾಮಾನ್ಯ. ಆದರೆ ನಮ್ಮ ದೇಶದಲ್ಲಿ ಮೊಟ್ಟೆ ಎಸೆತಕ್ಕೆ ಈ ಭಾಗ್ಯವಿಲ್ಲ. ಮೊಟ್ಟೆ ಎಸೆದರೆ ಅದನ್ನು ಅವಮಾನ, ಕೆಟ್ಟ ನಡೆ ಎಂದೇ ನಾವು ಭಾವಿಸುತ್ತೇವೆ. ಕಳೆದ ನಾಲ್ಕು ದಿನಗಳಿಂದ ಮೊಟ್ಟೆ ಎಸೆದ ಪ್ರಸಂಗ ಕನ್ನಡ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಿದೆ. ಅದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಎಗ್ ಬಗ್ಗೆ ಎಲ್ಲ ಪಕ್ಷಗಳ ನಾಯಕರು ಎಗ್ಗಿಲ್ಲದೇ ಮಾತಾಡುತ್ತಿದ್ದಾರೆ.

ಮಾರ್ಕ್ವೆಜ್ ಪ್ರತಿಕ್ರಿಯೆ

ಕೆಲವು ದಿನಗಳ ಹಿಂದೆ, ಕಟ್ಟುಕತೆಯನ್ನೇ ತನಿಖಾ ವರದಿ ಎಂದು ನಂಬಿಸಿ, ಪುಲಿಟ್ಜರ್ ಪ್ರಶಸ್ತಿ ಪಡೆದು ಸಿಕ್ಕಿ ಬಿದ್ದು ಮಾನ ಹರಾಜು ಹಾಕಿಸಿಕೊಂಡ ಪತ್ರಕರ್ತೆ ಜನೆಟ್ ಕೂಕ್ ಬಗ್ಗೆ ಬರೆದಿದ್ದೆ. ಜಿಮ್ಮಿ ಎಂಬ ಎಂಟು ವರ್ಷದ ಬಾಲಕ ಮಾದಕ ವ್ಯಸನಿ ಯಾದ ಘೋರಕತೆಯನ್ನು ಬರೆದಿದ್ದಳು. ಈ ಸುದ್ದಿಯನ್ನು ‘ಪೋಸ್ಟ್’ ಪ್ರಧಾನವಾಗಿ ಪ್ರಕಟಿಸಿತು. ಈ ವರದಿ ಇಡೀ ಅಮೆರಿಕ ವನ್ನು ಬೆಚ್ಚಿಬೀಳಿಸಿತು. ಅಮೆರಿಕದಲ್ಲಿ ಮಾದಕ ಪದಾರ್ಥಗಳ ಸೇವನೆ ನಿಯಂತ್ರಣವಿಲ್ಲದಂತಾಗಿದೆ, ಬಾಲಕರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಸನಿಗಳಾಗುತ್ತಿದ್ದಾರೆ, ಪಾಲಕರು ಈ ಪಿಡುಗನ್ನು ನೋಡಿ ಅಸಹಾಯಕರಾಗಿದ್ದಾರೆ ಎಂಬುದು ಆ ವರದಿಯ ಸಾರಾಂಶವಾಗಿತ್ತು. ಜೆನೆಟ್ ಕೂಕ್ ಬರೆದ ವರದಿ ಕಟ್ಟುಕತೆ ಎಂದೂ, ಆಕೆ ಇಡೀ ವರದಿಯನ್ನು ‘ಕುಕ್ ಅಪ್’ ಮಾಡಿದ್ದಾಳೆಂದೂ, ಜಿಮ್ಮಿ ಎಂಬ ಎಂಟು ವರ್ಷದ ಬಾಲಕ ಇಲ್ಲವೆಂದೂ, ಎಲ್ಲ ಪಾತ್ರಗಳೂ ಆಕೆಯದೇ ಸೃಷ್ಟಿಯೆಂದೂ ಬಹಿರಂಗವಾಯಿತು. ಇದರಿಂದ ‘ಪೋಸ್ಟ್’ ತೀವ್ರ ಮುಖಭಂಗಕ್ಕೊಳಗಾಯಿತು. ಆಕೆಯನ್ನು ಹೆಜ್ಜೆ ಹೆಜ್ಜೆಗೆ ಪ್ರೋತ್ಸಾಹಿಸುತ್ತಿದ್ದ ಬ್ರಾಡ್ಲಿ ಮುಜುಗರಕ್ಕೊಳಗಾದರು.

ನಕಲಿ ವರದಿ ಬರೆದ ಅಳ್ಳಾಟೋಪಿ ಪತ್ರಕರ್ತೆಗೆ ಪ್ರಶಸ್ತಿ ಘೋಷಿಸಿ ದೊಡ್ಡ ಪ್ರಮಾದ ಮಾಡಿದೆವು ಎಂದು ಪುಲಿಟ್ಜರ್ ಪ್ರಶಸ್ತಿ ಸಮಿತಿ ತಲೆತಗ್ಗಿಸಿತು. ಎಂಬತ್ತರ ದಶಕದಲ್ಲಿ ಕೂಕ್ ಕತೆ ಬಹುಚರ್ಚಿತ ವಿಷಯವಾಗಿತ್ತು. ಈ ಘಟನೆಗೆ ಖ್ಯಾತ ಕಾದಂಬರಿ ಕಾರ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನೀಡಿದ ಪ್ರತಿಕ್ರಿಯೆ ಸಾಕಷ್ಟು ಸುದ್ದಿ ಮಾಡಿತ್ತು. ಮಾರ್ಕ್ವೆಜ್ ಹೇಳಿದ್ದರು – ಕೂಕ್ ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾಗಿರುವುದು ನ್ಯಾಯಸಮ್ಮತವಲ್ಲ. ಆದರೆ ಅದೂ ನ್ಯಾಯಸಮ್ಮತವಲ್ಲ, ಅದೇನೆಂದರೆ, ಅವಳಿಗೆ ಸಾಹಿತ್ಯಕ್ಕಾಗಿ ನೀಡುವ ನೊಬೆಲ್ ಪ್ರಶಸ್ತಿಯನ್ನೂ ಕೊಡಲಿಲ್ಲವೆನ್ನು ವುದು. ಕಟ್ಟುಕತೆ ಬರೆದರೆ ಪುಲಿಟ್ಜರ್ ಪ್ರಶಸ್ತಿ ಕೊಡುವುದಿಲ್ಲ.

ಆದರೆ ಕೂಕ್‌ಗೆ ಕೊಟ್ಟಿzರೆ. ಕಟ್ಟುಕತೆ ಬರೆದರೆ ನೊಬೆಲ್ ಪ್ರಶಸ್ತಿ ಕೊಡುತ್ತಾರೆ. ಆದರೆ ಅವಳಿಗೆ ಅದನ್ನು ಕೊಡಲಿಲ್ಲ.

ಇನ್ ಬೆಡ್ ವಿಥ್

ದಿಲ್ಲಿಯಿಂದ ಪ್ರಕಟವಾಗುವ ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆ, ಪ್ರತಿವಾರ ‘ಬೃಂಚ್’ ಎಂಬ ‘ಪ್ರಜಾಮತ’ ಆಕಾರದ
ಪತ್ರಿಕೆಯನ್ನು ನೀಡುತ್ತದೆ. ‘ಬೃಂಚ್’ನ ಕೊನೆಯಲ್ಲಿ ಸಿನಿಮಾ ನಟ-ನಟಿ ಅಥವಾ ಸಿಲೆಬ್ರಿಟಿ ಸಂದರ್ಶನವಿರುತ್ತದೆ. ಅದರ
ಹೆಸರು ‘ಇನ್ ಬೆಡ್ ವಿಥ್’. ನಾನು ಇದನ್ನು ತಪ್ಪದೇ ಓದುತ್ತೇನೆ. ಇದರ ಜತೆ ಸಿಲೆಬ್ರಿಟಿಗಳು ತಮ್ಮ ಹಾಸಿಗೆಯ
ಮೇಲೆ ಕುಳಿತು ಅಥವಾ ಮಲಗಿದ ಚಿತ್ರವನ್ನೇ ಬಳಸುತ್ತಾರೆ.

ಇಲ್ಲಿನ ಪ್ರಶ್ನೋತ್ತರಗಳು light-hearted ಆಗಿರುತ್ತವೆ. ಉದಾಹರಣೆಗೆ, ರಾತ್ರಿ ಎಚ್ಚರವಾದಾಗ ಹಸಿವಾದರೆ ಏನಾದರೂ ತಿನ್ನಬೇಕು ಅಂದ್ರೆ ಏನು ಮಾಡ್ತೀರಾ?, ಬೆಳಗ್ಗೆ ಎದ್ದಾಗ ನೀವು ಹಾಸಿಗೆ ಮೇಲೆಯೇ ಬ್ರೇಕ್ ಫಾಸ್ಟ್ ಮಾಡ್ತೀರಾ? ಬೆಡ್ ಟೀ-ಕಾಫಿ ಬಗ್ಗೆ ಏನು ಹೇಳ್ತೀರಾ?, ನಿಮ್ಮ ಹಾಸಿಗೆ ಸಂಗಾತಿ (bed buddy) ಯಾರು?, ಮಲಗುವಾಗ ಯಾವ ಡ್ರೆಸ್ ಧರಿಸಿರು ತ್ತೀರಿ?, ಮಲಗುವಾಗ ಡಿಸೈನರ್ ದಿರಿಸು ಧರಿಸಬೇಕು ಅಂದ್ರೆ ಯಾವ ಬ್ರಾಂಡ್ ದಿರಿಸನ್ನು ಧರಿಸುತ್ತೀರಿ?, ನಿಮ್ಮ ಹಾಸಿಗೆಯ ಪಕ್ಕದಲ್ಲಿ ಯಾವ ರೀತಿಯ ಪುಸ್ತಕಗಳನ್ನು ಇಟ್ಟುಕೊಳ್ಳಬಯಸುತ್ತೀರಿ? ರಾತ್ರಿ ಲೈಟ್ ಹಾಕಿಕೊಂಡು ನಿದ್ದೆ ಮಾಡ್ತೀರಾ?, ಹಾಸಿಗೆ ಮೇಲೆ ಮಲಗಿದ್ದಾಗ ನಿಮಗೆ ಇಷ್ಟದ ವ್ಯಕ್ತಿ ಜತೆ ಮಾತಾಡ್ತಾ ಮಾತಾಡ್ತಾ ನಿದ್ದೆ ಮಾಡಿದ್ದುಂಟಾ?, ನಿಮಗೆ ಒಬ್ಬರೇ ಮಲಗುವುದು ಇಷ್ಟವಾ ಅಥವಾ ಬೋರಾ?, ನೀವು ಯಾವ ಬ್ರಾಂಡಿನ ದಿಂಬನ್ನು ಬಳಸುತ್ತೀರಿ?, ನಿಮ್ಮ ದೃಷ್ಟಿಯಲ್ಲಿ ಹಾಸಿಗೆ ಅಂದ್ರೆ ಏನು?, ಬೆಡ್ ಶೀಟ್ ಬಣ್ಣಬಣ್ಣದ್ದಿರಬೇಕಾ ಅಥವಾ ಬಿಳಿಯದ್ದಿರಬೇಕಾ?, ಹಾಸಿಗೆ ಮೇಲೆ ನಿಮಗೆ ಜ್ಞಾನೋದಯ ಆಗಿದೆಯಾ?, ಜಗತ್ತಿನಲ್ಲಿ ಅತ್ಯಂತ ಇಷ್ಟದ ತಾಣ ಅಂದ್ರೆ ಹಾಸಿಗೆ ಅನ್ನೋದನ್ನು ನೀವು ಒಪ್ಪುತ್ತೀರಾ?, ಜೀವನದಲ್ಲಿ ಹಾಸಿಗೆಯೇ ಇಲ್ಲದಿದ್ದರೆ ಏನಾಗುತ್ತಿತ್ತು?, ಹಾಸಿಗೆಯನ್ನು ಕಂಡು ಹಿಡಿದವ ಎದುರಿಗೆ ಸಿಕ್ಕರೆ ಆತನಿಗೆ ಏನು ಹೇಳಲು ಬಯಸುತ್ತೀರಿ?, ರಾತ್ರಿ ನಿದ್ದೆ ಬರೊಲ್ಲ ಅಂದವರು ಬೆಳಗ್ಗೆ ತಡವಾಗಿ ಏಳುವುದೇಕೆ?, ಸ್ನಾನ ಮಾಡಿ ಮಲಗುವಿವರ ಬಗ್ಗೆ ಸಿಲೆಬ್ರಿಟಿಗಳು ನೀಡುವ ಚುರುಕಾದ, ಚುಟುಕಾದ ಉತ್ತರಗಳನ್ನು ಪ್ರಕಟಿಸಲಾಗುತ್ತದೆ.

ಈ ಮಾದರಿಯ ಸಂದರ್ಶನವನ್ನೇನಾದರೂ ಕನ್ನಡ ಪತ್ರಿಕೆಗಳು ಮಾಡಿದರೆ ಹೇಗಿರುತ್ತವೆ? ಮೊದಲನೆಯದಾಗಿ, ಯಾವ ಪತ್ರಿಕೆಯೂ ಆ ಮಾದರಿಯ ಸಂದರ್ಶನವನ್ನು ಪ್ರಕಟಿಸುವುದಿಲ್ಲ ಮತ್ತು ಪ್ರಕಟಿಸಿದರೂ ಆ ಸಂದರ್ಶನಕ್ಕೆ ಯಾರೂ
ಮುಂದೆ ಬರುವುದಿಲ್ಲ. ಈ ಅಂಕಣಕ್ಕೆ ಏನೂಂತ ಹೆಸರಿಡೋದು? ಪಲ್ಲಂಗ ಪ್ರಸಂಗ, ಹಾಸಿಗೆ ಮೇಲೆ ಸಂದರ್ಶನ.. ಹೀಗೆ ಏನೇ ಬರೆದರೂ ಕನ್ನಡದ ಸಂದರ್ಭದಲ್ಲಿ ಅದು ಸರಿ ಹೊಂದುವುದಿಲ್ಲ. ಇಷ್ಟೂ ಸಾಲದೆಂಬಂತೆ, ಇಂಥ ಸಂದರ್ಶನ ಓದುವುದಕ್ಕಾಗಿ ನಿಮ್ಮ ಪತ್ರಿಕೆಯನ್ನು ಹಣ ಕೊಟ್ಟು ಓದಬೇಕಾ ಎಂದು ಓದುಗರು ಉಗಿಯದೇ ಹೋಗುವುದಿಲ್ಲ.

ಐರಿಷ್ ಜೋಕುಗಳೇಕೆ ಸರಳ?
ಪ್ರತಿ ದೇಶದಲ್ಲೂ ಒಂದು ಪ್ರಾಂತದವರನ್ನು ಕಂಡರೆ, ಮತ್ತೊಂದು ಪ್ರಾಂತದವರು ಜೋಕು, ಗೇಲಿ ಮಾಡುವುದು ಹೊಸತೇನಲ್ಲ. ಕನ್ನಡಿಗರು ತಮಿಳರ ಬಗ್ಗೆ ಜೋಕು ಮಾಡುವುದು, ಬಿಹಾರಿಗಳ ಬಗ್ಗೆ ಬೆಂಗಾಲಿಗಳು ಗೇಲಿ ಮಾಡುವುದು,
ರಾಜಾಸ್ತಾನಿಗಳ ಬಗ್ಗೆ ಪಂಜಾಬಿಗಳು ತಮಾಷೆ ಮಾಡುವುದು ಹೊಸತೇನಲ್ಲ.

‘ಇಬ್ಬರು ತೆಲುಗರು ಭೇಟಿಯಾದರೆ, ಮೂರು ಅಭಿಪ್ರಾಯಗಳು ವ್ಯಕ್ತವಾಗುತ್ತವೆ’ ಎಂದು ತಮಿಳರು ಹೇಳಿ ನಗುತ್ತಾರೆ. ‘ಬಿಹಾರಿಗಳು ಹಾಸ್ಯ ಪ್ರಿಯರು, ಆದರೆ ಅವರ ಬಗ್ಗೆ ಜೋಕ್ ಹೇಳಬಾರದಷ್ಟೇ’ ಎಂದು ಉತ್ತರ ಪ್ರದೇಶಿಗಳು ಹೇಳಿ
ನಗುತ್ತಾರೆ. ಒಟ್ಟಾರೆ ಎಲ್ಲರೂ ಬೇರೆಯವರನ್ನು ನೋಡಿ ಹಾಸ್ಯಚಟಾಕಿ ಹಾರಿಸುವುದು ಸಹಜ.

ಇದು ನಮ್ಮ ದೇಶಕ್ಕೆ ಮಾತ್ರ ಸೀಮಿತ ಎಂದು ಭಾವಿಸಬೇಕಿಲ್ಲ. ನಾನು ವೇಲ್ಸನಲ್ಲಿ ಓದುವಾಗ, ವೆಲ್ಶ ಮಂದಿ ಇಂಗ್ಲಿಷರನ್ನು,
ಇಂಗ್ಲಿಷರು ಸ್ಕಾಟಿಷ್ ಮಂದಿಯನ್ನು, ಸ್ಕಾಟಿಷ್ ಮಂದಿ ವೆಲ್ಶರನ್ನು ಟೀಕಿಸುವುದು, ಹಾಸ್ಯ ಚಟಾಕಿ ಹಾರಿಸುವುದು ಸಾಮಾನ್ಯವಾಗಿತ್ತು. ಒಮ್ಮೆ ಒಬ್ಬ ಸ್ಕಾಟಿಷ್ ಮತ್ತು ಐರಿಷ್ ಸ್ನೇಹಿತರು ನಡೆದಾಡುತ್ತ ಹೋಗುತ್ತಿದ್ದರು.

ಅವರಿಬ್ಬರ ಮಧ್ಯೆ ನಡೆದ ಸಂಭಾಷಣೆ:
ಸ್ಕಾಟಿಷ್ – ಐರಿಷ್ ಜೋಕುಗಳೇಕೆ ಅಷ್ಟು ಸರಳ?
ಸ್ಕಾಟಿಷ್ – ಅದು ಇಂಗ್ಲಿಷರಿಗೆ ಅರ್ಥವಾಗಬೇಕಲ್ಲ?!

ರಾಜಕಾರಣಿ – ವಕ್ರತುಂಡೋಕ್ತಿ

ವೈಎನ್ಕೆ ಅವರು ತಮ್ಮ ‘ವಂಡರ್-ಕಣ್ಣು’ ಅಂಕಣದ ಕೊನೆಯಲ್ಲಿ, ‘ಕೊನೆಸಿಡಿ’ ಎಂಬ ಹಾಸ್ಯದ ಪ್ರಸಂಗವನ್ನು
ಬರೆಯುತ್ತಿದ್ದರು. ರಾಜಕಾರಣಿಗಳ ಬಗ್ಗೆ ಅವರು ಬರೆದ ಒಂದಷ್ಟು ವಕ್ರತುಂಡೋಕ್ತಿ ಮಾದರಿಯ ಸಾಲುಗಳು ಇತ್ತೀಚೆಗೆ
ಸಿಕ್ಕವು. ಆ ಪೈಕಿ ಕೆಲವು : ಆತನ ಜನಪ್ರಿಯತೆ ಎಷ್ಟು ಕೆಳಕ್ಕೆ ಇಳಿದಿದೆ ಅಂದ್ರೆ ಅವನು ಒಬ್ಬನೇ ಚುನಾವಣೆಗೆ ನಿಂತರೂ ಠೇವಣಿ ಕಳೆದುಕೊಳ್ಳುತ್ತಾನೆ.

ಯಾವ ಪಕ್ಷವೂ ಅದರ ನಾಯಕರಷ್ಟು ಕಚಡಾ ಆಗಿರುವುದಿಲ್ಲ. ನಾನು ಯಾರ ಪರವಾಗಿಯೂ ವೋಟ್ ಕೊಡೊಲ್ಲ,
ವಿರೋಧವಾಗಿ ಕೊಡ್ತೀನಿ. ನಿಮ್ಮ ಗುಣಗಳ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳಬಾರದು. ನೀವು ಚುನಾವಣೆಗೆ ನಿಂತರೆ ನಿಮ್ಮ ಎದುರಾಳಿ ಗುಣಗಾನ ಮಾಡಿ ಎಲ್ಲವನ್ನೂ ಹೇಳುತ್ತಾನೆ. ನಾವು ಚಿಕ್ಕವರಾಗಿದ್ದಾಗ ಹೇಳುತ್ತಿದ್ದರು – ‘ಯಾರು
ಬೇಕಾದರೂ ಮುಖ್ಯಮಂತ್ರಿ ಆಗಬಹುದು’ ಅಂತ. ಈಗ ನೋಡಿದರೆ ಅದು ನಿಜವೆಂದು ಅನ್ನಿಸುತ್ತಿದೆ.

ಈ ಇಬ್ಬರು ಅಭ್ಯರ್ಥಿಗಳನ್ನು ನೋಡಿದರೆ, ಸದ್ಯ ಒಬ್ಬರು ತಾನೇ ಚುನಾಯಿತರಾಗೋದು ಅನ್ನೋದೇ ಸಮಾಧಾನ.
ತಪ್ಪು ಮಾಡುವುದು ಮಾನವ ಸಹಜ. ಆದರೆ ಅದನ್ನು ಮತ್ತೊಬ್ಬರ ಮೇಲೆ ಹೊರಿಸುವುದು ರಾಜಕಾರಣ. ನನ್ನ ವಿರೋಧಿ ಮೇಲೆ ನನಗೆ ದ್ವೇಷವಿಲ್ಲ. ಅಂಥ ಸಂದರ್ಭದಲ್ಲಿ ದರಿದ್ರ ಹೆಗ್ಗಣ ಏನು ಮಾಡುತ್ತಿತ್ತೋ ಅದನ್ನೇ ಮಾಡಿದ್ದಾನೆ.