Sunday, 15th December 2024

ಅಧಿಕಾರದ ಗರಿಮೆ, ಮೇಲರಿಮೆ ಇತ್ಯಾದಿ ಭ್ರಮೆ

ನಾಡಿಮಿಡಿತ
ವಸಂತ ನಾಡಿಗೇರ

ಅದೊಂದು ಸಣ್ಣ ಆಫೀಸು. ಅಲ್ಲೊಂದು ಟೇಬಲ್. ಅದರ ಮೇಲೊಂದು ಕಂಪ್ಯೂಟರ್. ಪಕ್ಕದಲ್ಲಿ ಫೋನ್. ಕುರ್ಚಿಯಲ್ಲಿ ಕುಳಿತಿರುವ ವ್ಯಕ್ತಿ, ಕಂಪ್ಯೂಟರ್ ಪರದೆಯ ಮೇಲೆ ಕಣ್ಣಾಡಿಸಿ ಏನನ್ನೊ ಹುಡುಕುತ್ತಾರೆ.

ಮರುಕ್ಷಣವೇ ಒಬ್ಬರಿಗೆ ಕರೆ ಮಾಡುತ್ತಾರೆ. ‘ಹಲೋ’.. ಎಂದು ಅತ್ತಕಡೆಯಿಂದ ಧ್ವನಿ ಬರುತ್ತಿದ್ದಂತೆ ಇವರು, ‘ಹಲೋ, ಅಲಿಸ್ಸಾ ..?’ ಎಂದು ಕೇಳುತ್ತಾರೆ. ‘ಹೌದು’.ಅತ್ತಕಡೆಯಿಂದ ಹೆಣ್ಣು ದನಿ ಉಲಿಯಿತು. ‘ಒಕೆ. ನಾನು ಬರಾಕ್ ಒಬಾಮಾ, ಈ ದೇಶದ
ಅಧ್ಯಕ್ಷನಾಗಿದ್ದವನು’ ಎಂದು ಅವರು ಒಂಚೂರೂ ಹಮ್ಮು ಬಿಮ್ಮಿಲ್ಲದೆ ತಮ್ಮ ಪರಿಚಯ ಮಾಡಿಕೊಳ್ಳುತ್ತಿದ್ದಂತೆ, ‘ಓಹ್, ಹಾಗಾದರೆ ನಾನು ಭಾರಿ ಲಕ್ಕಿ’ ಎಂದು ಆಕೆ ಉದ್ಗರಿಸುತ್ತಾರೆ.

ದೇಶದ ಅಧ್ಯಕ್ಷರಾಗಿದ್ದವರು ಸ್ವತಃ ಫೋನ್ ಮಾಡುತ್ತಾರೆಂದರೆ ಯಾರಿಗಾದರೂ ಅಚ್ಚರಿ, ಸಂತಸ ಆಗದಿರುತ್ತದೆಯೇ? ಆದರೆ ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಒಬಾಮಾ ಮುಂದುವರಿಸುತ್ತಾರೆ. ‘ಅಲಿಸ್ಸಾ, ನಾನೀಗ ಫೋನ್ ಬ್ಯಾಂಕಿಂಗ್ ಮಾಡುತ್ತಿದ್ದೇನೆ. ನಿಮಗೆ ಆಗಲೇ ಗೊತ್ತಿರುವಂತೆ ಮಂಗಳವಾರ ಚುನಾವಣೆ ನಡೆಯುತ್ತದೆ. ನೀವು ಡೆಮೊಕ್ರಾಟ್ ಪಕ್ಷದ ಅಭ್ಯರ್ಥಿಗಳಾದ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅವರಿಗೆ ಮತಹಾಕಬೇಕು.

ನಿಮಗೆ ಬೇಕಾದರೆ ನಿಮ್ಮ ಮತಗಟ್ಟೆ ಯಾವುದು ಎಂಬುದು ಸೇರಿದಂತೆ ಯಾವುದೇ ಬಗೆಯ ಮಾಹಿತಿ ಮತ್ತಿತರ ನೆರವು ನೀಡಲು ಸಿದ್ಧ. ನಿಮಗೆ ತಿಳಿದಿರುವಂತೆ ಈ ಬಾರಿ ತುರುಸಿನ ಸ್ಪರ್ಧೆ ಇದೆ. ಆದ್ದರಿಂದ ದಯವಿಟ್ಟು ಬೈಡನ್‌ಗೆ ಮತಚಲಾಯಿಸಿ. ಹಾಂ. ನಿಮ್ಮ ಬಂಧು ಮಿತ್ರರಿಗೂ ನನ್ನ ಪರವಾಗಿ ತಿಳಿಸಿ. ನಾನು, ಬರಾಕ್ ಒಬಾಮಾ ಮನವಿ ಮಾಡಿದ್ದೇನೆ ಎಂದು ಮುದ್ದಾಂ ತಿಳಿಸಿ’.

‘ಹಾಂ ಸರ್, ಬರುತ್ತೇನೆ. ಖಂಡಿತವಾಗಿಯೂ ಅವರಿಗೇ ನನ್ನ ಮತ’ ಎನ್ನುತ್ತಾರೆ ಅಲಿಸ್ಸಾ. ಇಲ್ಲಿಗೂ ಸಂಭಾಷಣೆ ಮುಗಿಯದು.
‘ಹಿಂದುಗಡೆಯಿಂದ ಮಗುವಿನ ಸದ್ದು ಕೇಳುತ್ತದಲ್ಲ. ಏನದು’ ಎನ್ನುತ್ತಾರೆ ಒಬಾಮಾ. ‘ಓ ಅವನು ನನ್ನ 8 ತಿಂಗಳ ಮಗ ಜಾನ್ಸನ್’
ಎನ್ನುತ್ತಾರೆ ಅಲಿಸ್ಸಾ. ‘ಓಹ್ ಹಾಗಾದರೆ ನಿಮ್ಮ ಮನೆಗೆ ಹೊಸ ಅತಿಥಿ ಬಂದಿದ್ದಾನೆ ಅಂದ ಹಾಗಾಯಿತು. ಅವನು ತುಂಬ
ತಂಟೆ ಮಾಡುತ್ತಾನಾ ಹೇಗೆ. ಎಲ್ಲಿ ಅವನಿಗೆ ಫೋನ್ ಕೊಡಿ ಎಂದು ಆತನನ್ನೂ ಮಗುವಿನ ಭಾಷೆಯಲ್ಲಿ ಮಾತನಾಡಿಸುತ್ತಾರೆ.

ಹಾಗಾದರೆ ನಿಮಗೆ ಈ ಮಗನನ್ನು ನೋಡಿಕೊಳ್ಳುವುದರಲ್ಲೇ ಸಮಯ ಹೋಗುತ್ತದೆ. ಇನ್ನಷ್ಟು ಸಮಯ ಮಾತನಾಡಬೇಕೆಂದಿದ್ದೆ. ಆದರೆ ಮಗ ಅವಕಾಶ ನೀಡುವುದಿಲ್ಲವಾಗಿ ಮಾತು ಮುಗಿಸುತ್ತೇನೆ. ಬೈ’ ಎಂದು ಫೋನ್ ಇಡುತ್ತಾರೆ.
***

ಹೀಗಿದ್ದ ವಿಡಿಯೊ ತುಣುಕನ್ನು ನೋಡಿದಾಗ ನನಗೆ ‘ಹೀಗೂ ಉಂಟೆ ’? ಎಂದೆನಿಸಿದ್ದು ಸುಳ್ಳಲ್ಲ. ನಮ್ಮ ದೇಶದಲ್ಲಿ ಎಲ್ಲಾದರೂ ಇದು ಸಾಧ್ಯವೆ ಎನಿಸಿತು. ಒಬಾಮಾ ಅವರು ಒಂದಲ್ಲ, ಎರಡು ಬಾರಿಗೆ ಅಮೆರಿಕದ ಅಧ್ಯಕ್ಷರಾಗಿದ್ದವರು. ಅಧಿಕಾರ ಅನುಭವಿಸಿದ ಬಳಿಕ ಈಗ ಹಾಯಾಗಿರಬಹುದಿತ್ತು. ಆದರೆ ಹಾಗೆ ಮಾಡಿಲ್ಲ. ಅವರು ಬೈಡನ್ ಪರ ಪ್ರಚಾರ ಮಾಡಿದರು. ಅದೂ ನಮ್ಮಲ್ಲಿನ ಬೂತ್‌ಮಟ್ಟದ ಕಾರ‌್ಯಕರ್ತರ ಥರ.

ಇದರಲ್ಲೇನು ವಿಶೇಷ. ನಮ್ಮಲ್ಲೂ ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳು ಕ್ಯಾಂಪೇನ್ ಮಾಡುತ್ತಾರೆ ಎಂದು ಹೇಳಬಹುದು. ಹೌದು ಮಾಡುತ್ತಾರೆ. ಆದರೆ ಈ ರೀತಿಯಾಗಿ ಬಹುಶಃ ಅಲ್ಲ. ಅವರೆಲ್ಲ ಸ್ಟಾರ್ ಕ್ಯಾಂಪೇನರ್‌ಗಳು.
ತಾರಾ ಪ್ರಚಾರಕರು. ರ್ಯಾಲಿಗಳಲ್ಲಿ, ರೋಡ್ ಶೋಗಳಲ್ಲಿ ಭಾಗವಹಿಸಿ, ಕೈಬೀಸಿ ಹೋಗುವಂಥವರು. ಕಾರ್ಯಕರ್ತರ ರೀತಿ ಪ್ರಚಾರ ಮಾಡುವವರಲ್ಲ. ಹೆಚ್ಚೆಂದರೆ ಇವರ ಧ್ವನಿಮುದ್ರಿತ ಸಂದೇಶಗಳು ಬರುತ್ತವೆ.

ಕೆಲ ವರ್ಷಗಳ ಹಿಂದೆ ಚುನಾವಣೆ ಸಮಯದಲ್ಲಿ ಜನರ ಮೊಬೈಲ್‌ಗೆ ಒಂದು ಧ್ವನಿಮುದ್ರಿತ ಸಂದೇಶ ಬರುತ್ತಿತ್ತು. ‘ನಮಸ್ಕಾರ್, ಮೈ ಅಟಲ್ ಬಿಹಾರಿ ವಾಜಪೇಯಿ ಬೋಲ್ ರಹಾ ಹೂಂ..’ ಎಂಬ ಧ್ವನಿ ಕೇಳುತ್ತಲೇ ಏನೋ ಒಂದು ಥರಾ ರೋಮಾಂಚನ ವಾಗುತ್ತಿತ್ತು. ಹಿರಿಯ ಅಧಿಕಾರಿಯಿಂದ ಫೋನ್ ಬಂದಾಗ ಕಾನ್‌ಸ್‌‌ಟೆಬಲ್ ಅಲ್ಲಿಂದಲೇ ಸಲಾಮ ಹೊಡೆಯುತ್ತಾರಲ್ಲ. ಆ ರೀತಿ ಅದು. ಅಗೆಲ್ಲ ಇದು ಹೊಸದಾಗಿದ್ದರಿಂದ ಹೀಗೆ ಆಗುತ್ತಿದ್ದುದು ಸಹಜ.

ಆದರೆ ಈಗ ಈ ರೀತಿಯ ರೆಕಾರ್ಡೆಡ್ ಸಂದೇಶಗಳು ಮಾಮೂಲಾಗಿವೆ ಬಿಡಿ. ಹೀಗಿರುವಾಗ ಸ್ವತಃ ಬರಾಕ್ ಒಬಾಮ್ ಫೋನ್
ಮಾಡಿದಾಗ ಹೇಗಾಗಬೇಡ. ಮತ ಕೇಳುವ ಜತೆಗೆ ಕಷ್ಟ ಸುಖವನ್ನೂ ವಿಚಾರಿಸಿದಾಗ ಅದರಲ್ಲೇನೋ ಆಪ್ತತೆ, ಮುಖಾಮುಖಿ ಸಂಭಾಷಣೆಯ ಥರ ಭಾಸವಾಗುತ್ತದೆ. ಹೀಗಾಗಿ ಒಬಾಮಾ ಅವರು ಬೂತ್ ಮಟ್ಟದ ಕಾರ್ಯಕರ್ತರ ಥರ ಕಾಣಿಸುತ್ತಾರೆ. ಅದೂ ಮತಕ್ಕಾಗಿ ಮಾತ್ರವೇ ಮಾತನಾಡುತ್ತಿಲ್ಲ. ಜನರೊಡನೆ ಆಪ್ತ ಸಂವಾದ ನಡೆಸುತ್ತಾರೆ. ಕಷ್ಟ ಸುಖ ಕೇಳುತ್ತಾರೆ. ಇಂಥ
ಅಪ್ರೋಚ್ ಜನರ ಗಮನ ಸೆಳೆಯುತ್ತದೆ. ಇವರು ನಮ್ಮವರು ಎಂಬ ಭಾವನೆ ಬರುತ್ತದೆ.

ಇದೇ ಒಬಾಮಾ ಜನಸಾಮಾನ್ಯರಂತೆ ಮೆಗಾಸ್ಟೋರ್‌ಗೆ ಹೋಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿರುವ ವಿಡಿಯೊ ಕೂಡ ಈ ಹಿಂದೆ ಬಂದಿತ್ತು. ಇದು ಒಬ್ಬ ಒಬಾಮಾ ಅವರ ಕಥೆಯಲ್ಲ. ಎಲ್ಲರೂ ಅಷ್ಟೆ. ಮಾಜಿ ಆದಮೇಲೆ ಸಾಮಾನ್ಯ ಜನರಂತೆ ಬದುಕು ಆರಂಭಿಸುತ್ತಾರೆ. ಸಮಾಜ ಸೇವೆಯಲ್ಲಿ ತೊಡಗುತ್ತಾರೆ. ಯಾವುದಾದರೂ ಎನ್‌ಜಿಒಗಳಿಗೆ ಕೆಲಸ ಮಾಡುತ್ತಾರೆ.
ಇಲ್ಲವೆ ಭಾಷಣಗಳು, ಉಪನ್ಯಾಸಗಳಿಗೆ ಹೋಗುತ್ತಾರೆ. ಒಟ್ಟಿನಲ್ಲಿ ಅವರ ಪಾಡಿಗೆ ಅವರಿರುತ್ತಾರೆ. ಇಂಗ್ಲೆಡ್‌ನ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೋರಿಸ್ ಜಾನ್ಸನ್ ಸೈಕಲ್ ಮೇಲೆ ಮನೆಗೆ ತೆರಳುತ್ತಿರುವ ಚಿತ್ರ ಪ್ರಕಟವಾಗಿತ್ತು. ಮತ್ತೊಬ್ಬರು ಪ್ರಧಾನಿ ಯಾಗಿದ್ದಾಗಲೇ ಪತ್ರಕರ್ತರಿಗೆ ಚಹಾ ನೀಡುತ್ತಿರುವ ಚಿತ್ರ ಪ್ರಕಟವಾಗಿತ್ತು.

ಭಾರತೀಯ ಮೂಲದ ಲಿಯೊ ವರದ್‌ಕರ್, ಐರ್ಲೆಂಡ್ ಪ್ರಧಾನಿಯಾಗಿದ್ದರು. ಅವರ ಪಕ್ಷ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಅಧಿಕಾರದಿಂದ ಕೆಳಗಿಳಿದರು. ಅದೇ ಸಮಯದಲ್ಲಿ, ಅಂದರೆ ಕಳೆದ ಮಾರ್ಚ್‌ನಲ್ಲಿ ಕೋವಿಡ್ ಸಂಕಟ  ಉಲ್ಬಣಿಸತೊಡಗಿತ್ತು. ಮೂಲತಃ ವೈದ್ಯರಾಗಿದ್ದ ವರದ್‌ಕರ್ ತಡವಿಲ್ಲದೆ ವೈದ್ಯ ವೃತ್ತಿಗೆ ಮರಳಿದರು. ಕೋವಿಡ್ ರೋಗಿಗಳ ಆರೈಕೆಗೆ ನಿಂತರು. ತಮ್ಮ ರಾಜಕೀಯ ಚಟುವಟಿಕೆಯ ಜತೆಗೆ ಒಂದು ಪಾಳಿಯಲ್ಲಿ ಡಾಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
2018ರ ವರ್ಲ್ಡ್ ‌‌ಕಪ್ ಫುಟ್ಬಾಲ್‌ನಲ್ಲಿ ಕ್ರೊವೇಷಿಯಾ ತಂಡ ಸೆಮಿಫೈನಲ್ ಪ್ರವೇಶಿಸಿತು. ರಷ್ಯ ವಿರುದ್ಧದ ಪಂದ್ಯದಲ್ಲಿ ತಮ್ಮ ದೇಶದ ತಂಡವನ್ನು ಹುರಿದುಂಬಿಸಲು ಆ ದೇಶದ ಅಧ್ಯಕ್ಷೆ ಕೊಲಿಂದಾ ಗ್ರಾಬರ್ ಸ್ವತಃ ಮ್ಯಾಚ್ ನೋಡಲು ಬಂದಿದ್ದರು.
ಅದೂ ಸಾಮಾನ್ಯ ವಿಮಾನ ಪ್ರಯಾಣಿಕರಂತೆ ಎಕಾನಮಿ ಕ್ಲಾಸ್‌ನಲ್ಲಿ ಆಗಮಿಸಿದ್ದರು. ತಂಡದ ಲಾಕರ್ ರೂಮಿಗೆ ತೆರಳಿ ಆಟಗಾರರ ಜತೆ ಕುಣಿದು ಕುಪ್ಪಳಿಸಿದರು.

ಪಂದ್ಯದ ಸಮಯದಲ್ಲಿ ಸ್ಟ್ಯಾಂಡ್‌ನಲ್ಲಿ ನಿಂತು ಪ್ರೋತ್ಸಾಹಿಸಿದರು. ಇನ್ನು, ಸ್ವೀಡನ್ ದೇಶದಲ್ಲಿ ಪ್ರಧಾನಿ ಹಾಗೂ ಸಂಸತ್ ಸದಸ್ಯರು ರೈಲು, ಬಸ್‌ಗಳಲ್ಲೇ ಸಂಚರಿಸುತ್ತಾರೆ. ಅವರಿಗೆ ಆ ಬಗ್ಗೆ ಕೀಳು, ಮೇಲು ಈ ಥರದ ಯಾವುದೇ ಅರಿಮೆಗಳಿಲ್ಲ.
ಮತ್ತಾವುದೋ ದೇಶದಲ್ಲಿ ಸಂಸದರಿಗೆ ಸಂಬಳ, ಭತ್ಯೆ ಯಾವುದೂ ಇಲ್ಲವಂತೆ. ಅವರು ಸಮಾಜ ಸೇವೆಗೆ ಬಂದವರು. ಹೀಗಾಗಿ ಹಣ ಮತ್ತಿತರ ಸೌಲಭ್ಯಗಳ್ನು ಕೊಡುವ ಅಗತ್ಯ ಇಲ್ಲ ಎಂಬುದು ಅಲ್ಲಿನ ನಿಯಮವಂತೆ.

ಆದರೆ ನಮ್ಮಲ್ಲಿ ಇವನ್ನೆಲ್ಲ ಊಹಿಸಿಕೊಳ್ಳುವುದು ಸಾಧ್ಯವೇ? ಖಂಡಿತ ಇಲ್ಲ. ಹಠಕ್ಕೆ ಬಿದ್ದು ಹುಡುಕಿದರೆ ಅಲ್ಲೊಂದು ಇಲ್ಲೊಂದು ಉದಾಹರಣೆಗಳು ಸಿಗಬಹುದೇನೊ. ಆದರೆ ಅವರ ಸಂಖ್ಯೆ ವಿರಳಾತಿ ವಿರಳ. ಜನಪ್ರತಿನಿಧಿಗಳಿಗೆ ಇರುವ ಸಂಬಳ ಸಾರಿಗೆ ಇತ್ಯಾದಿಗಳನ್ನು ನೋಡಿದರೆ ಆ ಕೆಲಸವೇ ಒಳ್ಳೆಯದು ಎಂದು ಯಾರಿಗಾದರೂ ಅನಿಸದೇ ಇರದು. ಅವರಿಗೆ ಬಸ್ಸು, ರೈಲು ಪ್ರಯಾಣ ಫ್ರೀ. ಅದೆಷ್ಟೋ ಬಾರಿಯ ವಿಮಾನ ಪಯಣ ಫ್ರೀ. ಕರೆಂಟ್ ಫ್ರೀ. ನೀರು ಫ್ರೀ.

ಫೋನ್ ಫ್ರೀ. ಚಿಕಿತ್ಸೆ ಫ್ರೀ. ಫ್ರೀ.. ಫ್ರೀ.. ಫ್ರೀ.. ಆಯಿತು. ನಮ್ಮ ಕಾನೂನುಗಳಲ್ಲಿ ಇವೆಲ್ಲ ಸೌಲಭ್ಯ, ಸೌಕರ್ಯಗಳನ್ನು  ನೀಡಲಾಗಿದೆ. ತೆಗೆದುಕೊಳ್ಳಲಿ. ಆದರೆ ಅಧಿಕಾರ ಹೋದ ಮೇಲೂ ಇವರಲ್ಲಿನ ಅಧಿಕಾರದ ಅಮಲು ಮತ್ತು ಘಮಲು ತಲೆಯಿಂದ
ಇಳಿಯುವುದೇ ಇಲ್ಲ.

‘ನಾವು ಮಾಡುವ ಕೆಲಸಗಳು, ನಿರ್ವಹಿಸುವ ಜವಾಬ್ದಾರಿ, ಅಧಿಕಾರ ಇವೆಲ್ಲ ಸಿನಿಮಾದಲ್ಲಿನ ಪಾರ್ಟಿದ್ದಂತೆ. ಪಾರ್ಟು ಮುಗಿ ದಂತೆ ಆ ವೇಷ ಭೂಷಣಗಳನ್ನು ಅಲ್ಲಿಯೇ ಕಳಚಿಟ್ಟು ಬರಬೇಕು’ ಅಂತ ಯೋಗ ಗುರುಗಳೊಬ್ಬರು ಹೇಳುತ್ತಿದ್ದ ಮಾತು
ನನಗೆ ನೆನಪಾಗುತ್ತದೆ. ಏಕೆಂದರೆ ಪೊಲೀಸರು 24 ಗಂಟೆಯೂ ತಾವು ಪೊಲೀಸರು ಎಂದೇ ಭಾವಿಸಿ ಅದೇ ಅಧಿಕಾರದ ದರ್ಪ ದಲ್ಲಿರುತ್ತಾರೆ. ಇವರು ಮಾತ್ರ ಅಲ್ಲ. ಎಲ್ಲರೂ ಅಷ್ಟೆ. ಕೆಲಸ ಮುಗಿಸಿ ಮನೆಗೆ ಬಂದ ಮೇಲೆ, ಅಷ್ಟೇ ಏಕೆ, ಸೇವಾ ನಿವೃತ್ತಿಯ ಬಳಿಕವೂ ಅಧಿಕಾರದ ವಾಸನೆ, ವಾಂಛೆ ಇವರ ತಲೆಯಿಂದ, ಮನಸ್ಸಿನಿಂದ ಮಾಯವಾಗುವುದಿಲ್ಲ. ಎಷ್ಟರ ಮಟ್ಟಿಗೆ ಎಂದರೆ
ಅಧಿಕಾರ ಹೋದರೂ ತಮ್ಮ ಬಂಗಲೆಯನ್ನು ಖಾಲಿ ಮಾಡುವುದಿಲ್ಲ. ಇತರ ಸೌಲಭ್ಯಗಳನ್ನು ಹಿಂದಿರುಗಿಸುವುದಿಲ್ಲ. ನೋಟಿಸ್ ಕೊಟ್ಟರೂ ಅಲ್ಲಿಂದ ಕಾಲ್ತೆಗೆಯರು.

ಇನ್ನು ಬಹುತೇಕ ರಾಜಕಾರಣಿಗಳು ಜನಸೇವಕರಂತೆ ವರ್ತಿಸುವುದೇ ಇಲ್ಲ. ಜನರು ಪ್ರಜೆಗಳು, ನಾವು ಪ್ರಭುಗಳು ಎಂದೇ ಭಾವಿಸು ತ್ತಾರೆ. ಹೀಗಾಗಿ ಅಧಿಕಾರ, ಅಂತಸ್ತು, ಪ್ರತಿಷ್ಠೆ, ಮದ ಎಲ್ಲವೂ ಮೈಗೂಡಿರುತ್ತವೆ. ಇವರು ಹೆಸರಿಗೆ ಜನಸೇವಕರು. ಆದರೆ ಇವರಿಗೆ ಕೈಗೊಬ್ಬರು, ಕಾಲಿಗೊಬ್ಬರಂತೆ ಸೇವಕರು ಬೇಕು. ತಮ್ಮ ಆದೇಶ ಪಾಲಿಸಲು ಅಧಿಕಾರಿಗಳ ಗಣ ಇರಬೇಕು. ಜಯಕಾರ ಹಾಕಲು, ಜೀ ಹುಜೂರ್ ಎನ್ನಲು ಪಟಾಲಂ ಇರಬೇಕು.

ಒಟ್ಟಿನಲ್ಲಿ ಇವರಿಗೆ ಹಣದಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಅಧಿಕಾರ ಬೇಕು. ಅಧಿಕಾರ ಹೋದರೆ ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಾರೆ. ಅವರ ಸೆಕ್ಯುರಿಟಿ ಬಗ್ಗೆ ಹೇಳುವುದೇ ಬೇಡ. ಎ ಇಂದ ಝೆಡ್ ವರೆಗೆ, ಅಲ್ಲಿಂದ ಝೆಡ್+ ವರೆಗೂ ಹೋಗುತ್ತದೆ. ಸುತ್ತಮುತ್ತ ಬಂದೂಕು ಠಳಾಯಿಸುವ ಕಮಾಂಡೊಗಳಿರಬೇಕು. ಅಧಿಕಾರದಿಂದ ನಿರ್ಗಮಿಸಿದ ಮೇಲೆ
ಬಂಗಲೆಯನ್ನೋ, ಭದ್ರತೆಯನ್ನೊ ವಾಪಸು ಪಡೆದರೆ ಬಹುತೇಕರು ಆಕಾಶ ಕಳಚಿ ಬಿದ್ದವರಂತೆ ಆಡುತ್ತಾರೆ.

ತಮ್ಮ ಪ್ರತಿಷ್ಠೆಗೆ ಕುಂದು ಎಂದು ಭಾವಿಸುತ್ತಾರೆ. ಗಾಂಧಿ ಕುಟುಂಬದ ಭದ್ರತೆಯನ್ನು ವಾಪಸ್ ತೆಗೆದುಕೊಂಡಾಗ, ಮನೆ ಖಾಲಿ ಮಾಡುವಂತೆ ಪ್ರಿಯಾಂಕಾ ಗಾಂಧಿ ಅವರಿಗೆ ಸೂಚನೆ ನೀಡಿದಾಗ, ದೊಡ್ಡ ಕೋಲಾಹಲವೇ ಉಂಟಾಯಿತು. ಲಖನೌನಲ್ಲಿನ ಬಂಗಲೆ ಬಿಟ್ಟುಕೊಡುವಂತೆ ಹೇಳಿದಾಗ ಮಾಯಾವತಿ ಅವರು ಮುಖ ಊದಿಸಿಕೊಂಡಿದ್ದರು.

ನಮ್ಮ ರಾಜ್ಯದಲ್ಲೂ ಮಂತ್ರಿ ಮಹೋದಯರು ತಮಗೆ ಇದೇ ಬಂಗಲೆ ಬೇಕೆಂದು ಪಟ್ಟು ಹಿಡಿಯುವುದು; ಕೋಟ್ಯಂತರ ರುಪಾಯಿ ಖರ್ಚು ಮಾಡಿ ಬದಲಾವಣೆ ಮಾಡುವುದು, ಅಧಿಕಾರ ಹೋದ ಮೇಲೂ ಮನೆ ಖಾಲಿ ಮಾಡದಿರುವುದು- ಇವೆಲ್ಲ ವನ್ನೂ ನೋಡಿದ್ದೇವೆ. ರಾಷ್ಟ್ರಪತಿ, ಪ್ರಧಾನಿ ಮೊದಲಾದವರು ಅಧಿಕಾರದಲ್ಲಿದ್ದಾಗ ಬೇರೆ ಬೇರೆ ಕಾರ್ಯಕ್ರಮಗಳಿಗೆ ಹೋಗಿರು ತ್ತಾರೆ. ವಿದೇಶ ಪ್ರವಾಸ ಮಾಡಿರುತ್ತಾರೆ.

ಆಗೆಲ್ಲ, ಅಲ್ಲೆಲ್ಲ ಅವರಿಗೆ ನೆನಪಿನ ಕಾಣಿಕೆಗಳನ್ನು ನೀಡಿರುತ್ತಾರೆ. ಅವನ್ನೆಲ್ಲ ತಂದು ರಾಷ್ಟ್ರಪತಿ ಭವನ, ಪ್ರಧಾನಿ ಕಾರ್ಯಾ ಲಯದಲ್ಲಿ ಇಟ್ಟಿರುತ್ತಾರೆ. ಅಧಿಕಾರದಿಂದ ನಿರ್ಗಮಿಸುವಾಗ ಅವುಗಳ ಪಟ್ಟಿ ಮಾಡಿ ಸರಕಾರದ ತಾಬಾ ಕೊಟ್ಟು ಹೋಗುವುದು ವಾಡಿಕೆ. ಆದರೆ ಮಾಜಿ ರಾಷ್ಟ್ರಪತಿಯೊಬ್ಬರು ಮಾತ್ರ ತಮಗೆ ಬೇಕು ಬೇಕಾದ, ಇಷ್ಟವಾದ ಉಡುಗೊರೆ – ವಸ್ತುಗಳನ್ನೆಲ್ಲ ಮನೆಗೆ ಒಯ್ದು ಬಿಡೋದಾ? ಕೊನೆಗೆ ಸರಕಾರವೇ ಮುಜುಗರ ಬಿಟ್ಟು ಕೇಳಿ ವಾಪಸು ಪಡೆಯಬೇಕಾಯಿತು. ಒಬಾಮಾ ಅವರ ಒಂದು ವಿಡಿಯೊ ತುಣುಕು ಇಷ್ಟೆಲ್ಲ ಜಿಜ್ಞಾಸೆಗೆ ಕಾರಣವಾಯಿತು.

ನಮ್ಮ ದೇಶದಲ್ಲೂ ರಾಜಕಾರಣಿಗಳು ಈ ಅಧಿಕಾರದ ಅಮಲಿನಿಂದ ಹೊರಬಂದು, ಮುಖವಾಡ ಕಳಚಿ ಸಾಮಾನ್ಯರಂತೆ ಜೀವನ ನಡೆಸುವುದು ಸಾಧ್ಯವೆ ಎಂಬ ಪ್ರಶ್ನೆಗೆ ಹೌದು ಎಂಬ ಉತ್ತರ ಸಿಗುವುದು ಬಹುಶಃ ಕಷ್ಟ. ಆದರೂ ಅಂಥ ದಿನಗಳು ಬರಲಿ ಎಂದು ಆಶಿಸುವುದರಲ್ಲಿ ತಪ್ಪೇನಿಲ್ಲ. ಏನೇನೋ, ಎಷ್ಟೆಷ್ಟೋ ಬದಲಾವಣೆಗಳಾಗುತ್ತವೆ. ಇದೂ ಯಾಕಾಗಬಾರದು?

ನಾಡಿಶಾಸ್ತ್ರ
ಬರಾಕ್ ಥರ ಆಗ್ರಿ ಅಂದರ
ಯಾರೂ ಬರಾಕ್ ಒಲ್ಲರು
ಅಧಿಕಾರ ಹೋದರೂ ಅದರ
ಅಮಲಿನಿಂದ ಹೊರಬರಲೊಲ್ಲರು