ಜನತಂತ್ರ
ಬೈಂದೂರು ಚಂದ್ರಶೇಖರ ನಾವಡ
‘ಒಲೆ ಹೊತ್ತಿ ಉರಿದಡೆ ನಿಲಬಹುದಲ್ಲದೆ, ಧರೆ ಹೊತ್ತಿ ಉರಿದಡೆ ನಿಲಲುಬಾರದು’ ಎಂದು ಹೇಳಿದ್ದಾರೆ ಬಸವಣ್ಣನವರು.
ವರ್ತಮಾನದ ಜಾಗತಿಕ ಸನ್ನಿವೇಶವನ್ನು ಅವಲೋಕಿಸಿ ದರೆ, ಒಂದಿಡೀ ಪ್ರಪಂಚವೇ ಹೊತ್ತಿ ಉರಿಯುತ್ತಿರುವಂತೆ ಕಾಣುತ್ತದೆ.
ಯುದ್ಧ, ಅಶಾಂತಿ, ಉಗ್ರವಾದ, ಮತಾಂಧತೆ, ಹಿಂಸೆ, ಆರ್ಥಿಕ ಬಿಕ್ಕಟ್ಟು ಮೊದಲಾದ ಸಂಗತಿಗಳು ವಿಶ್ವವನ್ನು ಎಡೆ ಬಿಡದೆ ಕಾಡುತ್ತಿವೆ. ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಶ್ವಸಂಸ್ಥೆ ಸಂಪೂರ್ಣವಾಗಿ ವಿಫಲವಾಗಿರುವುದು ಢಾಳಾಗಿ ಕಾಣಿಸುತ್ತಿದೆ. ಮತಾಂಧತೆ ಜಗದ್ವ್ಯಾಪಿಯಾಗುತ್ತಿದೆ. ಕೆಲವು ಸಶಕ್ತ ರಾಷ್ಟ್ರಗಳು ತಮ್ಮ ಸ್ವಾರ್ಥವನ್ನೇ ಗಮನದಲ್ಲಿಟ್ಟುಕೊಂಡು ವಿಶ್ವ ರಾಜಕಾರಣದ ದಿಕ್ಕು- ದೆಸೆಯನ್ನು ನಿರ್ಧರಿಸಲು ಹೊರಟಿವೆ. ತೃತೀಯ ಜಗತ್ತಿನ ಬಡದೇಶದ ಜನರ ಬದುಕು ದುರ್ಭರ
ವಾಗುತ್ತಿದೆ.
ಇಂದಿನ ಜಾಗತೀಕರಣದ ಯುಗದಲ್ಲಿ ಯಾವುದೇ ದೇಶವು ವಿಶ್ವ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗದೆ ಇರಲು ಸಾಧ್ಯವೇ ಇಲ್ಲ. ಜಾಗತಿಕ ರಾಜಕಾರಣದ ಮತ್ತು ವಿತ್ತೀಯ ಸ್ಥಿತ್ಯಂತರದ ಏರುಪೇರುಗಳ ಕರಿನೆರಳು ತಮ್ಮ ದೇಶದ ಜನರ ಬದುಕಿನ ಮೇಲೆ
ದುಷ್ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಿ ಹೆಜ್ಜೆ ಇಡುವ ದೂರದೃಷ್ಟಿ ಆಯಾ ರಾಷ್ಟ್ರಗಳ ನಾಯಕರಿಗೆ ಇರಬೇಕು. ಜಾಗತಿಕ ಬೆಳವಣಿಗೆ ಗಳನ್ನು ತಮಗೆ ಅನುಕೂಲಕರವಾಗುವಂತೆ ಪರಿವರ್ತಿಸಿಕೊಳ್ಳುವ ಸಾಮರ್ಥ್ಯ ಇರುವ ಮುತ್ಸದ್ದಿಯ ನೇತೃತ್ವದಲ್ಲಿ
ಮಾತ್ರ ಜನಸಾಮಾನ್ಯರು ಸುಖವಾಗಿ, ಸಂತೋಷವಾಗಿ ಬದುಕಲು ಸಾಧ್ಯ.
ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ದೇಶವನ್ನು ಮುನ್ನಡೆಸುವ ಅಧಿಕಾರ ಸೂತ್ರ ಯಾರ ಕೈಯಲ್ಲಿರಬೇಕು ಎನ್ನುವು
ದನ್ನು ನಿರ್ಧರಿಸುವ ಗುರುತರ ಜವಾಬ್ದಾರಿ ಮತದಾರರ ಮೇಲಿದೆ. ೧೪೦ ಕೋಟಿ ಜನಸಂಖ್ಯೆಯ ಭಾರತದಂಥ ದೊಡ್ಡ ದೇಶ ವನ್ನು ಮುನ್ನಡೆಸುವ ನಾಯಕ ಹೇಗಿರಬೇಕು? ಆತನಲ್ಲಿ ಯಾವೆಲ್ಲ ಗುಣಗಳಿರಬೇಕು? ಎನ್ನುವುದನ್ನು ಯೋಚಿಸ ಬೇಕಾದ ಹೊತ್ತಿದು. ಪಕ್ಷ ರಾಜಕಾರಣದ ನಕಾರಾತ್ಮಕ ಪರಿಣಾಮಗಳನ್ನು ನಾವು ಇತ್ತೀಚಿನ ವರ್ಷಗಳಲ್ಲಿ ಕಾಣುತ್ತಿದ್ದೇವೆ.
ಅಧಿಕಾರದಲ್ಲಿರುವ ಪಕ್ಷವು ಮಾಡಿದ್ದನ್ನೆಲ್ಲಾ ವಿರೋಧಿಸುವುದೇ ತಮ್ಮ ಧರ್ಮ ಎಂದು ವಿರೋಧ ಪಕ್ಷದಲ್ಲಿರುವ ಜನಪ್ರತಿನಿಧಿ
ಗಳು ತಿಳಿಯುತ್ತಾರೆ. ವಿರೋಧ ಪಕ್ಷದ ಯಾವುದೇ ಮಾತನ್ನು ಒಪ್ಪಬಾರದು ಎನ್ನುವ ಮಾನಸಿಕತೆ ಆಳುವ ಪಕ್ಷದ ಸದಸ್ಯರದ್ದಾ ಗಿರುತ್ತದೆ. ಹಾಗಾಗಿಯೇ, ಸರಿಯೋ ತಪ್ಪೋ ನಮ್ಮ ಸಂಸದೀಯ ಚುನಾವಣೆ ಅಧ್ಯಕ್ಷೀಯ ಪದ್ಧತಿಯಂತೆ ನಾಯಕರನ್ನು ಕೇಂದ್ರ ವಾಗಿರಿಸಿಕೊಂಡು ನಡೆಯತೊಡಗಿದೆ. ಜಿಎಸ್‌ಟಿ, ಆಧಾರ್ ಕಾಯ್ದೆ, ವಿದೇಶಗಳಿಂದ ಬಂದ ಅಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾನೂನು, ಜಮ್ಮು-ಕಾಶ್ಮೀರ ವಿಧೇಯಕದಂಥ ರಾಷ್ಟ್ರೀಯ ಮಹತ್ವದ ವಿಷಯಗಳಲ್ಲಿ ಸಂಸತ್ ಸದಸ್ಯರು ತಂತಮ್ಮ ಪಕ್ಷಗಳ ನಿಲುವುಗಳಿಂದ ಹೊರತಾಗಿ ಯೋಚಿಸಲಾಗಲಿಲ್ಲ.
ಆ ಕಾರಣದಿಂದಾಗಿಯೇ ಚುನಾವಣಾ ಕಣದಲ್ಲಿನ ಅಭ್ಯರ್ಥಿ ಸಮರ್ಥನೋ ಯೋಗ್ಯನೋ ಎನ್ನುವ ಪ್ರಶ್ನೆಯೇ ಗೌಣ ವಾಗುತ್ತಿದೆ. ಸ್ವಾಭಾವಿಕವಾಗಿಯೇ ಇಂದಿನ ಚುನಾವಣೆಗಳಲ್ಲಿ ಅಭ್ಯರ್ಥಿಗಿಂತ ಪಕ್ಷ ಮುಖ್ಯ ವಾಗುತ್ತಿದೆ. ಯಾವ ಅಭ್ಯರ್ಥಿಗೆ ಮತ ಹಾಕಿದರೆ
ಯಾವ ನಾಯಕನ ಕೈಯಲ್ಲಿ ಅಧಿಕಾರ ಇರುತ್ತದೆ ಎನ್ನುವ ಸ್ಪಷ್ಟತೆ ಬಯಸುತ್ತಾನೆ ಮತದಾರ. ಕಳೆದ ಕೆಲವು ವರ್ಷಗಳಲ್ಲಿ ಸಂಭವಿಸಿದ ರಾಜಕೀಯ, ಆರ್ಥಿಕ ವಿದ್ಯಮಾನಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ಹಾಗೂ ಅವುಗಳ ಮೌಲ್ಯಾಂಕನ
ಮಾಡಬೇಕಾದ ಸಮಯ ವಿದು. ಒಂದಿಡೀ ದೇಶವು ಕೋವಿಡ್‌ನಂಥ ಸಾಂಕ್ರಾಮಿಕ ರೋಗದ ಭಯದಿಂದ ಕಂಪಿಸುತ್ತಿದ್ದ ಆ ದಿನಗಳಲ್ಲಿ ನಮ್ಮ ರಾಜಕೀಯ ನಾಯಕರು ಹೇಗೆ ಪ್ರತಿಕ್ರಿಯಿಸಿದ್ದರು? ಜಮ್ಮು- ಕಾಶ್ಮೀರಕ್ಕಿದ್ದ ವಿಶೇಷಾಧಿಕಾರವನ್ನು ತೆಗೆದು ಹಾಕುವ ವಿಚಾರವಿರಬಹುದು, ಸೇನೆಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಸಂಬಂಧದ ವಿಷಯವಿರಬಹುದು ಅಥವಾ ಚೀನಾ-ಪಾಕಿಸ್ತಾನಗಳ ವಿರುದ್ಧದ ಕ್ರಮಗಳಿರ ಬಹುದು, ವಿದೇಶಗಳೊಂದಿಗಿನ ಬಾಂಧವ್ಯಕ್ಕೆ ಸಂಬಂಧಿಸಿದ ವಿಷಯವಿರಬಹುದು
ನಮ್ಮ ವಿವಿಧ ರಾಜಕೀಯ ನಾಯಕರು ಯಾವ ನಿಲುವು ತಳೆದರು? ಎಂಬುದರ ಮೌಲ್ಯಮಾಪನ ಈಗ ಆಗಬೇಕಿದೆ.
ಮಾತ್ರವಲ್ಲ, ರಾಷ್ಟ್ರ ಹಿತದ ಆರ್ಥಿಕ ಉಪಕ್ರಮಗಳು, ದೇಶವಿರೋಧಿ ಶಕ್ತಿಗಳ ವಿರುದ್ಧ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಗೆ ಸಂಬಂಧಿಸಿ ಇವರೆಲ್ಲರ ಧೋರಣೆ ಹೇಗಿತ್ತು? ಜನಸಾಮಾನ್ಯರ ಧರ್ಮ-ಸಂಸ್ಕೃತಿ-ಆಚರಣೆಗೆ ಸಂಬಂಧಿಸಿದಂತೆ ಯಾರು ಹೇಗೆ ನಡೆದುಕೊಂಡರು? ಎಂಬುದೆಲ್ಲಾ ಈ ಚುನಾ ವಣೆಯ ಚರ್ಚಾವಿಷಯಗಳಾಗಬೇಕಿವೆ. ಆಡಳಿತಾರೂಢ ಸರಕಾರವು ನೆಲ, ಜಲ, ರೈಲು ಪ್ರಯಾಣದ ಮೂಲಸೌಕರ್ಯಗಳ ಅಭಿವೃದ್ಧಿಗೆ ಈ ಎಲ್ಲಾ ವರ್ಷಗಳಲ್ಲಿ ಶ್ರಮವಹಿಸಿ ದುಡಿದಿದೆಯಾ? ಹಿಂದಿನ ಚುನಾವಣೆಯಲ್ಲಿ ಆಯ್ಕೆಯಾದವರಲ್ಲಿ ಯಾರು ಜನಹಿತ ಕ್ಕಾಗಿ ಕೆಲಸ ಮಾಡಿದರು ಮತ್ತು ಯಾರು ಸ್ವಹಿತ, ಸ್ವಜನ ಪಕ್ಷಪಾತ ಮತ್ತು ಕೌಟುಂಬಿಕ ಹಿತಕ್ಕಾಗಿಯೇ ತಮ್ಮ ಸಮಯವನ್ನು ಮೀಸಲಿಟ್ಟರು ಎಂಬೆಲ್ಲ ವಿಷಯಗಳ ಕುರಿತು ಮತದಾರರು
ಕೂಲಂಕಷವಾಗಿ ಚಿಂತನೆ ನಡೆಸಲಿ ಹಾಗೂ ವಿವೇಚನಾಯುಕ್ತ ನಿರ್ಣಯ ತೆಗೆದುಕೊಳ್ಳಲಿ.
ಅಂದಹಾಗೆ, ಲೋಕಸಭಾ ಚುನಾವಣೆಯ ಹೊತ್ತಿನ ನಮ್ಮ ಚಿಂತನೆಗಳು ರಾಷ್ಟ್ರಹಿತದ ವ್ಯಾಪಕ ತಳಹದಿಯ ಮೇಲೆ ರೂಪು ಗೊಳ್ಳಬೇಕೇ ವಿನಾ, ಸ್ಥಳೀಯ ವಿಷಯಗಳ ಮೇಲಲ್ಲ. ದೇಶ ಸುರಕ್ಷಿತವಾಗಿದ್ದರೆ ಮಾತ್ರ ನಮ್ಮೆಲ್ಲರ ಬದುಕು ಹಸನಾಗಲು ಸಾಧ್ಯ. ನೆನಪಿರಲಿ, ಹಿರಿಯರ ತ್ಯಾಗ-ಬಲಿದಾನದಿಂದ ಪಡೆದ ಸ್ವಾತಂತ್ರ್ಯವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ.
ರಾಜ್ಯ ಮತ್ತು ಕೇಂದ್ರದಲ್ಲಿನ ಸರಕಾರಗಳ ರಚನೆಯ ವ್ಯತ್ಯಾಸ ಅರಿತು ಮತದಾನ ಮಾಡೋಣ. ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆ ಗಳಿಗಿಂತ ಆಂತರಿಕ ಭದ್ರತೆ, ರಾಷ್ಟ್ರೀಯ ಏಕತೆ, ರಕ್ಷಣೆ, ಆರ್ಥಿಕ ಸ್ಥಿರತೆ, ವಿದೇಶಾಂಗ ನೀತಿ, ಔದ್ಯೋಗಿಕ
ಮತ್ತು ಮೂಲಸೌಕರ್ಯ ಅಭಿವೃದ್ಧಿ, ಬಾಹ್ಯಶಕ್ತಿ ಗಳನ್ನು ಎದುರಿಸಬಲ್ಲ ನಾಯಕತ್ವದ ಚಾಕ ಚಕ್ಯತೆ ಇತ್ಯಾದಿ ವಿಷಯಗಳ ಕುರಿತು ಚರ್ಚೆಯಾಗ ಬೇಕು. ರಾಷ್ಟ್ರೀಯ ಹಿತವನ್ನು ಕಾಪಾಡಬಲ್ಲ ನಾಯಕತ್ವವನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡುವಂತಾಗಬೇಕು.
ಅತಂತ್ರ ಸರಕಾರದಿಂದ ದೇಶವು ಅರಾಜಕತೆ, ಭ್ರಷ್ಟಾಚಾರದತ್ತ ಸಾಗುತ್ತದೆ. ಅಂತಾರಾಷ್ಟ್ರೀಯ ಸ್ತರದಲ್ಲಿ ದೇಶದ ಗೌರವ, ಸಮ್ಮಾನ ಹೆಚ್ಚುವಂಥ ಸರಕಾರದ ರಚನೆಗಾಗಿ ಪ್ರತಿಯೊಬ್ಬರೂ ಮತದಾನ ಮಾಡುವಂತಾಗ ಬೇಕು. ದೇಶಕ್ಕಾಗಿ ತ್ಯಾಗಮಾಡಿದ
ಮಹಾನುಭಾವರನ್ನು ಸ್ಮರಿಸುತ್ತಾ, ಭವ್ಯ ಭಾರತದ ನಿರ್ಮಾಣಕ್ಕಾಗಿ ಮತದಾನ ಮಾಡು ವುದು ನಮ್ಮ ಕರ್ತವ್ಯ ಎಂದು ತಿಳಿಯೋಣ.
(ಲೇಖಕರು ಮಾಜಿ ಸೈನಿಕರು)