Sunday, 15th December 2024

ಚುನಾವಣಾ ಬಜೆಟ್ ಎಂಬ ಕನ್ನಡಿಯ ಗಂಟು

ಅಶ್ವತ್ಥಕಟ್ಟೆ

ranjith.hoskere@gmail.com

ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಿಸಿದ ಒಂದು ತಿಂಗಳ ಒಳಗಾಗಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗುತ್ತದೆ. ಫೆ.೧೭ರಂದು ಘೋಷಿಸುವ ಯಾವುದೇ ಯೋಜನೆಗಳು, ಮುಂದಿನ ಸರಕಾರಗಳು ಬಂದೇ ಕಾರ್ಯರೂಪಕ್ಕೆ ತರಬೇಕಿರುತ್ತದೆ.

ಕರ್ನಾಟಕದಲ್ಲಿ ಚುನಾವಣೆ ಘೋಷಣೆಯಾಗದಿದ್ದರೂ, ಘೋಷಣೆಯಾದ ಬಳಿಕವಿರುವ ಎಲ್ಲ ರೀತಿಯ ಗೋಜಲು ಶುರುವಾಗಿದೆ. ಒಂದೆಡೆ ಮೂರು ಪಕ್ಷಗಳ ಆರೋಪ-ಪ್ರತ್ಯಾರೋಪ, ಅಧಿಕಾರಕ್ಕೆ ಬಂದರೆ ನೀಡುವ ಯೋಜನೆಗಳ ಘೋಷಣೆ ಹಾಗೂ ಟಿಕೆಟ್ ಹಂಚಿಕೆಯ ಕಸರತ್ತು ಆರಂಭವಾಗಿದೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದು, ಚುನಾವಣೆಗೆ ಹೋದರೆ ಒಂದು ‘ಪ್ಲಸ್ ಪಾಯಿಂಟ್’ ಇದ್ದೇ ಇರುತ್ತದೆ. ಇದೀಗ ಈ ಅಂಶವನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣಾ ಸಿದ್ಧತೆ ಆರಂಭಿಸಿದೆ.

ಚುನಾವಣೆ ಘೋಷಣೆಯಾದ ಬಳಿಕ ಜಾರಿಯಾಗುವ ನೀತಿ ಸಂಹಿತೆಯಿಂದ ಯಾವುದೇ ರೀತಿಯ ಘೋಷಣೆ, ಭರವಸೆಯನ್ನು ನೀಡಲು ಸಾಧ್ಯ ವಾಗುವುದಿಲ್ಲ. ಆದ್ದರಿಂದಲೇ, ಚುನಾವಣಾ ಸಮಯದಲ್ಲಿ ಎಲ್ಲ ಪಕ್ಷಗಳು ತಮ್ಮದೇ ಯಾಗಿರುವ ‘ಪ್ರಣಾಳಿಕೆ’ಯನ್ನು ಬಿಡುಗಡೆಗೊಳಿಸುತ್ತವೆ. ಅದರಲ್ಲಿಯೂ ಆಡಳಿತದಲ್ಲಿರುವ ಪಕ್ಷ ಪ್ರಣಾಳಿಕೆಯ ಜತೆಜತೆಗೆ ‘ಬಜೆಟ್’ ಅನ್ನು ಮುಂದಿಟ್ಟುಕೊಂಡು ಜನರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತದೆ. ಅದರಲ್ಲಿಯೂ ನೂತನ ಆರ್ಥಿಕ ವರ್ಷದ ಸಮಯದಲ್ಲಿ ಚುನಾವಣೆಗಳು ಎದುರಾದರೆ, ಆಡಳಿತರೂಢ ಪಕ್ಷಗಳಿಗೆ ‘ವರದಾನ’ವೇ ಆಗಿರುತ್ತದೆ.

ಏಕೆಂದರೆ ಏಪ್ರಿಲ್‌ನಲ್ಲಿ ನೂತನ ಆರ್ಥಿಕ ವರ್ಷ ಆರಂಭವಾಗುವ ಮೊದಲು, ಬಜೆಟ್ ಅನ್ನು ಮಂಡಿಸಲೇಬೇಕು. ಸರಕಾರಗಳು ಮುಂದಿನ ಒಂದು ವರ್ಷದ ಮಟ್ಟಿಗೆ ಏನೆಲ್ಲ ಯೋಜನೆಗಳನ್ನು ಜಾರಿಗೊಳಿಸಲಿದೆ? ತಮ್ಮ ಸರಕಾರ ‘ಏರಿಯಾ ಆಫ್ ಇನ್ಟರೆಸ್ಟ್’ ಯಾವುದು? ಜನರಿಗೆ ನೀಡುವ ಹೊಸ ಯೋಜನೆಗಳೇನು? ಎನ್ನುವ ಬಗ್ಗೆ ಚುನಾವಣೆಗೆ ಹೋಗುವ ಮೊದಲು ಅಧಿಕೃತವಾಗಿ ಬಜೆಟ್ ಸ್ವರೂಪದಲ್ಲಿ ಮಂಡಿಸುವ ಅವಕಾಶ ಪಕ್ಷಗಳಿಗೆ ಸಿಗುತ್ತದೆ.

ಒಂದು ವೇಳೆ ಆರ್ಥಿಕ ವರ್ಷದ ಮಧ್ಯ ಅಥವಾ ಕೊನೆಯಲ್ಲಿ ಚುನಾವಣೆ ನಡೆದರೆ ಈ ಪ್ಲಸ್‌ಪಾಯಿಂಟ್ ಅಧಿಕಾರದಲ್ಲಿರುವ ಪಕ್ಷಗಳಿಗೆ ಸಿಗುವುದಿಲ್ಲ. ಉದಾಹರಣೆ ತ್ರಿಪುರ, ನಾಗಾಲ್ಯಾಂಡ್ ಹಾಗೂ ಮೇಘಾಲಯ ರಾಜ್ಯಗಳಲ್ಲಿ ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಆದರೆ ಅಲ್ಲಿನ ಸರಕಾರ ಗಳಿಗೆ ಬಜೆಟ್ ಮಂಡಿಸುವ ಅವಕಾಶ ಸಿಗಲಿಲ್ಲ. ಆದರೆ ಈ ವಿಷಯದಲ್ಲಿ ಕರ್ನಾಟಕದ ಚುನಾವಣಾ ದಿನಾಂಕಗಳು ಸದಾ ಪಕ್ಷಗಳಿಗೆ ಸಹಾಯವಾಗು ವಂತೆಯೇ ಘೋಷಣೆಯಾಗುತ್ತದೆ. ಕರ್ನಾಟಕದಲ್ಲಿ ಏಪ್ರಿಲ್ ಕೊನೆ ಅಥವಾ ಮೇ ಮೊದಲ ವಾರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಇದಕ್ಕೂ ಮೊದಲು ಬಿಜೆಪಿ ಸರಕಾರ ಫೆಬ್ರವರಿಯಲ್ಲಿಯೇ ತನ್ನ ಬಜೆಟ್ ಮಂಡಿಸುವ ಮೂಲಕ ಜನರನ್ನು ತನ್ನತ್ತ ಸೆಳೆಯುವಂತೆ ಪ್ರಯತ್ನಿಸುತ್ತದೆ.

ಈ ಪ್ರಯತ್ನ ಸದಾ ಯಶಸ್ವಿಯಾಗುತ್ತದೆ ಎನ್ನುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ, ಕಳೆದ ಎರಡು-ಮೂರು ಚುನಾವಣೆಗಳನ್ನು ಗಮನಿಸಿದಾಗ, ಕೊನೆಯ ಬಜೆಟ್‌ನಲ್ಲಿ ಸರಕಾರಗಳು ಭರಪೂರ ಯೋಜನೆಗಳನ್ನು ಜನರಿಗೆ ನೀಡಿದರೂ ಮರಳಿ ಅಽಕಾರಕ್ಕೆ ಬರಲು ಆ ಪಕ್ಷಗಳಿಗೆ ಸಾಧ್ಯವಾಗಿಲಿಲ್ಲ.
ಹಾಗೇ ನೋಡಿದರೆ, ಚುನಾವಣಾ ಬಜೆಟ್‌ನಲ್ಲಿ ಸರಕಾರಗಳು ಘೋಷಣೆ ಮಾಡುವ ಬಹುತೇಕ ಯೋಜನೆಗಳನ್ನು ಕಾರ್ಯಗತಗೊಳಿಸುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಸ್ವತಃ ಘೋಷಿಸಿದವರಿಗೆ ಗೊತ್ತಿರುತ್ತದೆ. ಆದರೆ ಕರ್ನಾಟಕದಂತ ರಾಜ್ಯದಲ್ಲಿ ಕಳೆದ ಎರಡು ದಶಕಗಳಿಂದ ‘ಆಡಳಿತ ವಿರೋಧಿ ಅಲೆ’ ಮೀರಿ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರುವುದು ಸುಲಭದ ಮಾತಲ್ಲ ಎನ್ನುವುದು ಎಲ್ಲ ಪಕ್ಷಗಳಿಗೂ ಗೊತ್ತಿರುತ್ತದೆ.

ಆದ್ದರಿಂದ ಹೋಗುವ ಮೊದಲು ಒಂದು ಜನಪ್ರಿಯ ಬಜೆಟ್ ಎನ್ನುವ ಲೆಕ್ಕಾಚಾರದಲ್ಲಿ ಭರಪೂರ ಘೋಷಣೆಗಳನ್ನು ಮಾಡುತ್ತವೆ. ಅಧಿಕಾರದಿಂದ ಇಳಿ
ಯುವ ಮೊದಲು ಭರ್ಜರಿ ಯೋಜನೆಗಳನ್ನು ಘೋಷಿಸಿ, ಆ ಮೂಲಕ ಜನರಮತಗಳನ್ನು ಪಕ್ಷದತ್ತ ಸೆಳೆಯುವ ಲೆಕ್ಕಾಚಾರದಲ್ಲಿ ರಾಜಕೀಯ ಮುಖಂಡರಿರುತ್ತಾರೆ. ಒಂದು ವೇಳೆ ಅಧಿಕಾರಕ್ಕೆ ಬಂದರೆ, ಮರು ಬಜೆಟ್ ಮಂಡಿಸುವುದರಿಂದ ಆ ಸಮಯದಲ್ಲಿ ‘ಹೊರೆಯಾಗುವಂತಹ’ ಯೋಜನೆ ಗಳನ್ನು ಕೈಬಿಡಲಾಗುತ್ತದೆ. ಇಲ್ಲವೇ ಮುಂದಿನ ಐದು ವರ್ಷದಲ್ಲಿ ಇದನ್ನು ಮಂಡಿಸುತ್ತೇವೆ ಎನ್ನುವ ಮೂಲಕ ಅನುದಾನವನ್ನು ನೀಡದೇ ಮುಂದಕ್ಕೆ ಹಾಕುವ ಪ್ರಯತ್ನಗಳು ನಡೆಯುತ್ತವೆ.

ಉದಾಹರಣೆಗೆ 2018ರ ವಿಧಾನಸಭಾ ಚುನಾವಣೆಗೂ ಮೊದಲು ಆಡಳಿತರೂಢ ಕಾಂಗ್ರೆಸ್ ಹಲವು ಜನಪರ ಯೋಜನೆಗಳನ್ನು ಘೋಷಿಸಿತ್ತು. ಅದಾದ ಬಳಿಕ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಅವಽಯಲ್ಲಿ, ಮಂಡಿಸಿದ ಬಜೆಟ್‌ನಲ್ಲಿ ಬಹುತೇಕ ಯೋಜನೆಗಳನ್ನು ‘ಮುಂದಕ್ಕೆ’ ಹಾಕಿತ್ತು. ಇದೀಗ ಕರ್ನಾಟಕದಲ್ಲಿ ಮತ್ತೊಂದು ಚುನಾವಣೆ ಹೊಸ್ತಿಲಲ್ಲಿಯೇ, ಬಜೆಟ್ ಮಂಡಿಸಲು ಬಸವರಾಜ ಬೊಮ್ಮಾಯಿ ಅವರು ತಯಾರಿ ನಡೆಸಿದ್ದಾರೆ. ಬಜೆಟ್ ಮಂಡಿಸುವ ಮೊದಲೇ, ‘ಈ ಬಾರಿ ಜನಪರ ಬಜೆಟ್’ ಎನ್ನುವ ಮೂಲಕ ಯೋಜನೆಗಳ ಮಹಾಪುರವೇ ಇರಲಿದೆ ಎನ್ನುವ ಸುಳಿವನ್ನು ನೀಡಿದ್ದಾರೆ. ಆಡಳಿತದಲ್ಲಿರುವ ಯಾವುದೇ ಪಕ್ಷವಾದರೂ ಇದನ್ನು ಮಾಡುವುದು ನಿಶ್ಚಿತ. ಆದರೆ ನಿಜವಾದ ಪ್ರಶ್ನೆ ಬರುವುದು, ಈ ಘೋಷಣೆಗಳನ್ನು
ಜಾರಿಗೊಳಿಸುವ ಹಂತದಲ್ಲಿ.

ಏಕೆಂದರೆ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಿಸಿದ ಒಂದು ತಿಂಗಳ ಒಳಗಾಗಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗುತ್ತದೆ. ಇದರೊಂದಿಗೆ ಏಪ್ರಿಲ್ 1ರವರೆಗೆ ಯಾವುದೇ ಹೊಸ ಯೋಜನೆಗಳನ್ನು ಆರಂಭಿಸುವುದಕ್ಕೆ ಅವಕಾಶವಿರುವುದಿಲ್ಲ. ಆದ್ದರಿಂದ ಫೆ.17ರಂದು
ಘೋಷಿಸುವ ಯಾವುದೇ ಯೋಜನೆಗಳು, ಮುಂದಿನ ಸರಕಾರಗಳು ಬಂದೇ ಕಾರ್ಯರೂಪಕ್ಕೆ ತರಬೇಕಿರುತ್ತದೆ. ಒಂದು ವೇಳೆ ಬಿಜೆಪಿಯೇ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಈ ಘೋಷಣೆಗಳಲ್ಲಿ ಕೆಲವೊಂದನ್ನು ಜಾರಿಗೊಳಿಸಬಹುದು.

ಬಿಜೆಪಿ ಬಾರದೇ ಕಾಂಗ್ರೆಸ್ ಅಥವಾ ಜೆಡಿಎಸ್ ಅಧಿಕಾರಕ್ಕೆ ಬಂದರೆ, ಹೊಸ ಬಜೆಟ್ ಅನ್ನು ಮಂಡಿಸುವುದರಲ್ಲಿ ಅನುಮಾನವೇ ಇಲ್ಲ. ಆ ಸಮಯ ದಲ್ಲಿ ಹಿಂದಿನ ಸರಕಾರ ಘೋಷಿಸಿರುವ ಬಜೆಟ್ ಕೇವಲ ಘೋಷಣೆಯಾಗಿಯೇ ಉಳಿಯಲಿದೆ. ಆದ್ದರಿಂದ ಯಾವುದೇ ಸರಕಾರಗಳು ಚುನಾವಣೆ ಹೋಗುವ ಮೊದಲಿಗೆ ಬಜೆಟ್ ಅನ್ನು ‘ಕನ್ನಡಿಯೊಳಗಿನ ಗಂಟು’ ಎಂದರೆ ತಪ್ಪಾಗುವುದಿಲ್ಲ. ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಯ ಸಮಯದಲ್ಲಿ ಘೋಷಿಸುವ ಪ್ರಣಾಳಿಕೆಯ ಮುಂದುವರಿದ ಭಾಗವಾಗಿ ಆಡಳಿತರೂಢ ಪಕ್ಷ ಬಜೆಟ್ ಅನ್ನು ಘೋಷಿಸುತ್ತದೆ.

ಇದಾದ ಬಳಿಕ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುವುದು ಮತ್ತೊಂದು ಹಂತ. ಈ ರೀತಿ ಕೇವಲ ಘೋಷಣೆಯ ಬಜೆಟ್ ಅನ್ನು ಬಿಜೆಪಿ ಮಾತ್ರವಲ್ಲ, ಎಲ್ಲ ಪಕ್ಷಗಳೂ ಮಾಡಿಕೊಂಡು ಬಂದಿವೆ. ಅಧಿಕಾರಕ್ಕೆ ಬಂದ ಬಳಿಕ ಪರಿಷ್ಕೃತ ಬಜೆಟ್ ಎನ್ನುವ ನೆಪದಲ್ಲಿ ಕೆಲವೊಂದು ಯೋಜನೆಗಳನ್ನು ಕೈಬಿಟ್ಟು,
ಪ್ರಣಾಳಿಕೆಯಲ್ಲಿನ ಅಂಶಗಳನ್ನು ಸೇರಿಸಿಕೊಂಡು ಬಜೆಟ್ ಸಿದ್ಧಪಡಿಸುತ್ತದೆ. ಇನ್ನು ಕೆಲವೊಮ್ಮೆ ಘೋಷಿಸಿರುವ ಯೋಜನೆಗಳನ್ನು ಜಾರಿ ಗೊಳಿಸಲೇಬೇಕು ಎನ್ನುವ ಅನಿವಾರ್ಯತೆಯಿದ್ದರೆ, ಅನುದಾನದ ಮಿತಿಯನ್ನು ಮಾಡಿ ಯೋಜನೆ ಆರಂಭಿಸಲಾಗುತ್ತದೆ.

ಉದಾಹರಣೆಗೆ ರಾಜ್ಯಾದ್ಯಂತ ಉಚಿತ ವಿದ್ಯುತ್ ನೀಡಲು ೫೦ಸಾವಿರ ಕೋಟಿ ಅವಶ್ಯವಿದ್ದರೆ, ಅದನ್ನು 20 ಸಾವಿರ ಕೋಟಿಗೆ ಸೀಮಿತಗೊಳಿಸಿ, ಆ
ಮೊತ್ತದಲ್ಲಿ ಎಷ್ಟು ಜನರಿಗೆ ಯೋಜನೆ ಸಿಗುವುದೋ ಅಷ್ಟು ಜನರಿಗೆ ಮಾತ್ರ ಆರಂಭಿಸಿ, ಮುಂದಿನ ದಿನದಲ್ಲಿ ವಿಸ್ತರಿಸಲಾಗುವುದು ಎನ್ನುವ ಮಾತನ್ನು ಹೇಳುತ್ತಾರೆ. ಈ ರೀತಿ ಅತಿಹೆಚ್ಚು ನಡೆಯುವುದು ನೀರಾವರಿ ಯೋಜನೆಗಳಲ್ಲಿ. ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಲು ಒಂದು ಲಕ್ಷ ಕೋಟಿ ಅಗತ್ಯವಿದ್ದರೂ, ಪ್ರತಿವರ್ಷ 10 ಸಾವಿರ ಕೋಟಿಯನ್ನು ಮಾತ್ರ ನೀಡುತ್ತಾ ಹೋಗುತ್ತದೆ. ಇದರಿಂದ ಯೋಜನೆಗೆ ಅನುದಾನವನ್ನು ನೀಡಿದಂತೆಯೂ ಆಗುತ್ತದೆ.

ಅನುದಾನವೂ ಹೆಚ್ಚು ಖರ್ಚಾಗುವುದಿಲ್ಲ. ಇದರಿಂದ ಯೋಜನೆ ಪೂರ್ಣಗೊಳ್ಳುವುದೂ ಇಲ್ಲ, ಭರವಸೆಯೂ ಈಡೇರಿಸಿದಂತಾಗುತ್ತದೆ. ಈಗ ಮುಂದಿನ ತಿಂಗಳು ನಡೆಯಲಿರುವ ಬಿಜೆಪಿಯ ಕೊನೆಯ ಬಜೆಟ್‌ನಲ್ಲಿ ನಿರೀಕ್ಷಿತವಾಗಿ ಹಲವಾರು ಉಚಿತ ಯೋಜನೆಗಳನ್ನು ಘೋಷಿಸಲಿದೆ. ಏಕೆಂದರೆ ಈಗಾಗಲೇ ಕಾಂಗ್ರೆಸ್ ಉಚಿತ ವಿದ್ಯುತ್, ಮಹಿಳೆಯರಿಗೆ ಸಹಾಯಧನ ಎನ್ನುವ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಹೇಳಿರುವು ದರಿಂದ, ಈ ಯೋಜನೆಗಳಿಗೆ ಠಕ್ಕರ್ ಕೊಡುವುದಕ್ಕಾಗಿಯೇ ಕೆಲವು ಯೋಜನೆಗಳನ್ನು ಘೋಷಿಸುತ್ತಾರೆ. ಅದರಲ್ಲಿಯೂ ಬಿಜೆಪಿಯ ಆಡಳಿತ ವಿರೋಧಿ ಅಲೆಯನ್ನು ತಣಿಸಲು, ಕೊಂಚ ಹೆಚ್ಚೇ ಎನ್ನುವಂತಹ ಘೋಷಣೆಗಳು ಬಂದರೂ ಅಚ್ಚರಿಯಿಲ್ಲ.

ಹೀಗೆ ಚುನಾವಣಾ ಸಮಯದಲ್ಲಿ ಆಡಳಿತರೂಢ ಪಕ್ಷಕ್ಕೆ ಹೆಚ್ಚುವರಿಯಾಗಿ ಸಿಗುವ ‘ಕೊನೆಯ ಬಜೆಟ್’ ಅನ್ನು ಸಮಪರ್ಕವಾಗಿ ಎಲ್ಲ ಪಕ್ಷಗಳೂ ಬಳಸಿಕೊಂಡಿವೆ. ಇದೀಗ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವೂ ‘ಕೊಡುಗೆ’ಗಳ ಮೂಲಕ ಜನರನ್ನು ಸೆಳೆಯುವ ಪ್ರಯತ್ನ
ವನ್ನು ಮಾಡಿಯೇ ತೀರುತ್ತದೆ. ಆದರೆ ಹೊಸ ಸರಕಾರ ರಚನೆಯಾದ ಬಳಿಕ, ಹೊಸ ಬಜೆಟ್ ಮಂಡಿಸಬೇಕಾದ ಸಮಯದಲ್ಲಿ, ಆಡಳಿತರೂಢ ಬಿಜೆಪಿಯೇ ಅಧಿಕಾರಕ್ಕೆ ಬಂದರೂ, ಹಿಂದಿನ ಬಜೆಟ್‌ನ ಎಲ್ಲ ಭರವಸೆಗಳನ್ನು ಜಾರಿಗೊಳಿಸುವುದಿಲ್ಲ ಎನ್ನುವುದು ಜನರಿಗೂ ಸ್ಪಷ್ಟವಾಗಿರುತ್ತದೆ. ಆದ್ದರಿಂದ ಮುಂದಿನ ತಿಂಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿರುವ ಬಜೆಟ್‌ನ ಘೋಷಣೆಗಳು ‘ಕನ್ನಡಿಯೊಳಗಿನ
ಗಂಟಾಗಿಯೇ’ ಉಳಿಯುವುದು ನಿಶ್ಚಿತ.

 
Read E-Paper click here