Saturday, 27th July 2024

ಚುನಾವಣೆ ಬಗ್ಗೆ ಹೀಗೊಂದು ತಪ್ಪು ಪರಿಕಲ್ಪನೆ

ಚುನಾವಣೆ ಬಂತೆಂದರೆ ಮಾಧ್ಯಮದವರಿಗೆ, ಅದರಲ್ಲೂ ದೃಶ್ಯ ಮಾಧ್ಯಮದವರಿಗೆ ದೊಡ್ಡ ಹಬ್ಬವಾಗಿಬಿಡುತ್ತದೆ ಎನ್ನಬೇಕು.
ಕಾರಣ, ಚುನಾವಣೆಗೆ ಸಂಬಂಽಸಿದ ಅದೇನೇನೆಲ್ಲಾ ಸಂಗತಿ, ಸ್ವಾರಸ್ಯ, ಹಗರಣ ಇಂಥವನ್ನು ವರ್ಣರಂಜಿತವಾಗಿ ಬಿತ್ತರಿಸುತ್ತ ವೀಕ್ಷಕರನ್ನು ಹಿಡಿದಿಡಲು ಅವು ಕಸರತ್ತು ಮಾಡುವುದು ವಾಡಿಕೆ.

ಇದರ ಭಾಗವಾಗಿ ಚುನಾವಣೆಯನ್ನು ಒಂದು ಯುದ್ಧದ ರೀತಿಯಲ್ಲಿ ಅವು ಬಿಂಬಿಸುತ್ತವೆ. ಚುನಾವಣಾ ಯುದ್ಧ, ಮತಬೇಟೆ, ಮತಸಂಘರ್ಷ, ಚುನಾವಣಾ ಕದನ ಕಣ ಹೀಗೆ ತಮ್ಮದೇ ಆದ ಪರಿಭಾಷೆಯಲ್ಲಿ ಈ ಮಾಧ್ಯಮಗಳು ಚುನಾವಣಾ ಚಟುವಟಿಕೆ ಯನ್ನು ವ್ಯಾಖ್ಯಾನಿಸುವುದುಂಟು. ಇದರಿಂದಾಗಿ, ಒಂದು ಚುನಾವಣೆಯನ್ನು ನಡೆಸುವುದೇ ಬಡಿದಾಡಲು, ಕಾದಾಡಲು ಎಂಬಂಥ ಗ್ರಹಿಕೆ ರೂಪುಗೊಳ್ಳುತ್ತದೆ.

ಒಂದು ಯುದ್ಧವೆಂದಲ್ಲಿ ಪೂರ್ವಸಿದ್ಧತೆ ಬೇಕು. ಕಾದಾಡಲು, ವೈರಿಗಳನ್ನು ಕೊಲ್ಲಲು ಹಾಗೂ ಅವರನ್ನು ಪರಮ ಶರಣಾಗತಿಗೆ ಈಡುಮಾಡಲು ಸಜ್ಜಿಕೆಯೊಂದನ್ನು ರೂಪಿಸಬೇಕು. ಇಷ್ಟು ಮಾತ್ರವೇ ಅಲ್ಲ, ರುಽರ ತೋಯದಿ ಬಿದ್ದ ಹೆಣಗಳು, ನೋವಿನ ಆಕ್ರಂದನ, ಯುದ್ಧದಲ್ಲಿ ಸತ್ತ ಯೋಧರ ವಿಧವೆಯರ ಗೋಳು, ಸ್ಮಶಾನಮೌನ ಇವೆಲ್ಲವೂ ಯುದ್ಧಾ ನಂತರದ ಪರಿಸ್ಥಿತಿಗಳೇ. ಹಾಗಿದ್ದಲ್ಲಿ ನಮ್ಮ ಚುನಾವಣೆಯೊಂದು ಯುದ್ಧವೇ? ‘ವಿರೋಧ ಪಕ್ಷದವರನ್ನು ಮಕಾಡೆ ಮಲಗಿಸಲಾಯಿತು’ ಮುಂತಾದ ಯುದ್ಧದ ಪರಿಭಾಷೆ ಸರಿಯೇ? ಪ್ರಾಜ್ಞರೆನಿಸಿಕೊಂಡವರು ಈ ಕುರಿತು ಯೋಚಿಸಬೇಕು.

ಚುನಾವಣೆ ಎಂದರೆ, ಮತಾಕಾಂಕ್ಷಿಗಳು ತಮ್ಮ ತಮ್ಮ ಸೇವೆಯ ಮೂಲಕ, ದೇಶಾಭಿಮಾನದ ಮೂಲಕ ಮತದಾರರನ್ನು ಆಕರ್ಷಿಸಿ, ತಮ್ಮ ವ್ಯಕ್ತಿತ್ವದ ಬಲದಿಂದ ಆಯ್ಕೆಯಾಗಿ, ಮತಕ್ಷೇತ್ರದ ಜನರು ತಮಗೆ ನೀಡಿದ ಮತ ಗಳಿಗೆ ನ್ಯಾಯ ಒದಗಿಸುವಂತಾ ಗುವ ವ್ಯಾಪಕಾರ್ಥದ ಪರಿಕಲ್ಪನೆ. ಆದರೆ ಈ ಪರಿಕಲ್ಪನೆಯೇ ಈಗೀಗ ಮರವೆ ಯಾದಂತಿದೆ.

ಅಷ್ಟಕ್ಕೂ, ‘ಮತಬೇಟೆ’ ಅಂದರೇನು? ಅಭ್ಯರ್ಥಿಗಳು ಮತದಾರರನ್ನು ಅಡ್ಡಗಟ್ಟಿ, ತಮ್ಮ ಬಾಹುಬಲ, ಧನಬಲ, ಆಮಿಷಗಳಿಂದ ಖೆಡ್ಡಾ ತೋಡಿ ಬೇಟೆಯಾಡಿ ಮತವನ್ನು ಪಡೆಯುವುದೇ? ‘ಮತದಾನ’ ಎಂಬ ಪದವೇ ಒಂದು ಪವಿತ್ರ ದಾನದ ಕಲ್ಪನೆ ಯುಳ್ಳದ್ದು. ಇಲ್ಲಿ ದಾನ ಮಾಡುವವರನ್ನು ಬೇಟೆಯಾಡುವ ಅವಶ್ಯಕತೆ ಇದೆಯೇ? ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಗಳಿರುತ್ತಾರೆ ಯೇ ವಿನಾ, ಅವರೆಲ್ಲಾ ವೈರಿ ಗಳಲ್ಲ, ಅಲ್ಲವೇ?! ಹಾಗೆ ಮತದಾರರ ದಿಕ್ಕು ತಪ್ಪಿಸಿ, ಶತಾಯಗತಾಯ ಗೆದ್ದು ಬಂದು ಅಟ್ಟಹಾಸ ಮೆರೆಯಬೇಕಿದೆಯೇ? ಯುದ್ಧದಲ್ಲಿ ಸೋತವನನ್ನು ಪೌರಾಣಿಕರು ‘ಸಿಕ್ಕಿಬಿದ್ದೆಯ ಖಳರಾಯ, ನಿನಗೆ ದಕ್ಕದು ರಾಜ್ಯವು ಅರಿ ನೀಚಜಾಯ’ ಎಂಬ ರೀತಿಯಲ್ಲಿ ರೊಚ್ಚಿಗೆಬ್ಬಿಸುವುದಿದೆ.

ಇದೇ ರೀತಿಯಲ್ಲಿ ಚುನಾವಣಾ ಫಲಿತಾಂಶದಲ್ಲಿ ಸೋಲುಂಡವನನ್ನು ರೊಚ್ಚಿಗೆಬ್ಬಿಸುವುದು, ಹಲಬುವುದು ಇಂದು ಸರ್ವೇ ಸಾಮಾನ್ಯ ನಿಯಮವಾಗಿಬಿಟ್ಟಿದೆ! ಮೊದಲಿಗೆ, ಚುನಾವಣಾ ಕಣವೊಂದು ‘ಪ್ರತಿಷ್ಠೆಯ ಕಣ’ ಎಂಬ ಪರಿಕಲ್ಪನೆಯನ್ನು ದೂರವಾಗಿಸದಿದ್ದರೆ, ಇಲ್ಲಿ ಒಂದು ಸೌಹಾರ್ದಯುತ ಆಯ್ಕೆ ನಡೆಯುತ್ತಿದೆ ಎಂಬ ಭಾವವೇ ಬಾರದು. ‘ಇದು ಯುದ್ಧವಲ್ಲ, ಇಲ್ಲಿ ತನ್ನ ಎದುರು ನಿಂತವ ವಿರೋಧಿಯಲ್ಲ.

ತಾನು ಮಾಡಬೇಕಿರುವುದು ಸಾಮಾಜಿಕ ಸೇವೆಯೇ ವಿನಾ, ಅದೊಂದು ಅಧಿಕಾರದ ಮದವಲ್ಲ’ ಎಂಬಂಥ ವಿಚಾರವೊಂದಿದೆ. ಇದನ್ನು ತಿಳಿದುಕೊಳ್ಳಬೇಕಿರುವುದು ಮೊದಲಿಗೆ ಆಗಬೇಕಿರುವ ಕೆಲಸ. ಕಾಂಗ್ರೆಸಿಗರು ಹಾಗೂ ಸಾಂಪ್ರದಾಯಿಕ ಪ್ರತಿಪಕ್ಷವಾದ ಬಿಜೆಪಿಗರು, ‘ಇನ್ನೊಂದು ಪಕ್ಷದವರು ನಾಶವೇ ಆಗಿಹೋಗಲಿ’ ಎಂಬ ಹಂಬಲದಿಂದ ಆಚೆ ಬರಬೇಕು. ಈ ಪಕ್ಷದಲ್ಲಿ ಟಿಕೆಟ್
ಸಿಗುವುದು ಎಂಬ ನಂಬಿಕೆಯಲ್ಲಿ ಇನ್ನೊಂದು ಪಕ್ಷವನ್ನು ವಾಚಾಮಗೋಚರವಾಗಿ ನಿಂದಿಸುತ್ತಾ, ಅದೇನೋ ವಿಕೃತ ಸಂತೋಷ ದಲ್ಲಿರುವಾಗಲೇ, ಆ ಟಿಕೆಟ್ ಕೈತಪ್ಪುವ ಸಾಧ್ಯತೆ ಕಂಡ ತಕ್ಷಣ, ಆ ಇನ್ನೊಂದು ಪಕ್ಷದ ಪರ ವಹಿಸಿಕೊಂಡು ಮೂಲಪಕ್ಷವನ್ನೇ ನಿಂದಿಸುವ ಮಾನಸಿಕತೆ ದೂರವಾಗಬೇಕು.

ಇಂಥ ಚಿತ್ತಸ್ಥಿತಿ ದೂರವಾಗದಿದ್ದರೆ, ಈ ರಾಜಕೀಯಕ್ಕೂ ಒಂದು ಮೌಲ್ಯವೇ ಇಲ್ಲವೆನ್ನುವುದು ಪಕ್ಕಾ ಆಗದೇ? ತೀರಾ ಇತ್ತೀಚಿನ ವರೆಗೆ ಕಾಂಗ್ರೆಸಿಗರನ್ನು ತಮ್ಮ ಮಾತಿನ ಬಾಣಗಳಿಂದ ಇರಿಯುತ್ತಿದ್ದು, ಸ್ವಪಕ್ಷದಲ್ಲಿ ಸ್ಥಾನಮಾನಕ್ಕೆ ಸರಿಯಾದ ಗೌರವ ಸಿಗದೆಂಬುದು ಖಾತ್ರಿಯಾದ ತಕ್ಷಣ ತೇಜಸ್ವಿನಿ ಗೌಡರು ಬಿಜೆಪಿಗರನ್ನು ಹಳಿಯತೊಡಗಿದ್ದು, ಶಿವರಾಮ ಹೆಬ್ಬಾರರು ನಿನ್ನೆಯ ವರೆಗೆ ಮತ್ತು ಈಗಲೂ ‘ಊಟ ಕೌರವರಲ್ಲಿ, ಕೂಟ ಪಾಂಡವರಲ್ಲಿ’ ಎಂಬ ಮನಸ್ಥಿತಿಯಲ್ಲಿ ವರ್ತಿಸಿದ್ದು, ದಾಟುವ
ಗೆರೆಯಂಚಿನವರೆಗೆ ಹೋಗಿ ಶುಭಸೂಚನೆ ಸಿಕ್ಕ ಮರು ಗಳಿಗೆಯೇ ಕಾಗೇರಿಯವರಿಂದ ಹೊಮ್ಮಿದ ವರ್ತನೆ, ಅಸ್ನೋಟಿಕರ್‌ ರಂಥವರ ಅತ್ತ-ಇತ್ತ-ಎತ್ತೆತ್ತಲೂ ಅಲೆದಾಡು ವಿಕೆ ಹೀಗೆ ನಾಯಕರೆನಿಸಿಕೊಂಡವರ ವಿಕ್ಷಿಪ್ತ ಹೆಜ್ಜೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಇವರೆಲ್ಲ, ತಾವು ಯಾವ ತತ್ವವನ್ನು ಪಟ್ಟಾಗಿ ಹಿಡಿದುಕೊಳ್ಳಬೇಕು ಎಂಬುದನ್ನೇ ಮರೆತ ನಾಯಕರು ಎಂದರೆ ಅತಿಶಯೋಕ್ತಿ ಯಲ್ಲ. ನನ್ನದು ವಿಷಯಾಂತರವಾಗಿಲ್ಲ. ನಾನು ಹೇಳ ಹೊರಟಿದ್ದು, ಇಂಥ ಮನಸ್ಥಿತಿಗೆ ಮೂಲ ಕಾರಣವೇ ‘ಚುನಾವಣೆ ಯೊಂದು ಯುದ್ಧ’ ಎಂಬ ತಪ್ಪು ಕಲ್ಪನೆ ಅಂತ. ಮಾಧ್ಯಮ ಗಳು ಇಂಥ ಸೂಕ್ಷ್ಮ ಸಂವೇದನೆಗಳನ್ನು ಯಾವ ಮಟ್ಟಕ್ಕೆ ಬೆಳೆಸಿ ಬಿಡುತ್ತವೆಯೆಂದರೆ, ‘ಎದುರು ನಿಂತವನನ್ನು ಮುಗಿಸಿಯೇ ಬಿಡುವುದು ಒಳಿತು’ ಎಂಬ ಮನಸ್ಥಿತಿ ಅಭ್ಯರ್ಥಿಗಳಲ್ಲಿ ಕೆನೆಗಟ್ಟಿ ಬಿಡುತ್ತದೆ.

ತರುವಾಯದಲ್ಲಿ, ‘ಶಾಶ್ವತವಾಗಿ ನನ್ನನ್ನು ಬೆಂಬಲಿಸಿದವ ಮಾತ್ರ ನನ್ನವ, ನನಗೆ ಮತ ನೀಡದವ ವೈರಿ’ ಎಂಬ ನೆಲೆಗೆ ಅದು ಬಂದು ನಿಂತುಬಿಡುತ್ತದೆ. ರಾಜಕೀಯ ಧುರೀಣರು ಒಂದು ಪರಮಸತ್ಯವನ್ನೇ ಮರೆತಿದ್ದಾರೆ ಎನಿಸುತ್ತದೆ; ಅಂದರೆ, ಗೆಲ್ಲುವವರೆಗೆ ತಾವು ಒಂದು ಪಕ್ಷದವರು, ತರುವಾಯದಲ್ಲಿ ಸರ್ವರ ಸೇವಕರು ಎಂಬ ತತ್ವವನ್ನೇ ಇವರು ಮರೆತುಬಿಡುತ್ತಾರೆ ಎನ್ನಬೇಕಾಗು
ತ್ತದೆ. ‘ಇಲ್ಲಿ ಏನು ಬೇಕಾದರೂ ಆಗಬಹುದು’ ಅಂತ ಒಂದು ಹೇಳಿಕೆ ಕೊಟ್ಟು, ಏನು ಬೇಕಾದರೂ ಮಾಡಲು ಸಿದ್ಧರಾದವರ
ಮನಸ್ಸಿನ ಸ್ಥಿತಿ ಸರ್ವೇಸಾಮಾನ್ಯವಾಗಿಬಿಟ್ಟಿದೆ.

ಲಕ್ಷ್ಮಣ ಸವದಿ, ಶಿವರಾಂ ಹೆಬ್ಬಾರ್, ಜಗದೀಶ ಶೆಟ್ಟರ್, ತೇಜಸ್ವಿನಿ ಗೌಡ, ಗಾಲಿ ಜನಾರ್ದನ ರೆಡ್ಡಿ, ಈಶ್ವರಪ್ಪ ಹೀಗೆ ಉರುಳುಸೇವೆ ಮಾಡುವ ಹಾಗೂ ಪಕ್ಷದ ತತ್ವ-ಸಿದ್ಧಾಂತಗಳನ್ನು ಗಾಳಿಗೆ ತೂರುವ ಮಂದಿ ಎಲ್ಲಿಯವರೆಗೆ ರಾಜಕೀಯದಲ್ಲಿ ನೆಲೆ ನಿಂತಿರು ತ್ತಾರೋ, ಕಲುಷಿತಗೊಂಡ ರಾಜಕೀಯ ಅಲ್ಲಿಯವರೆಗೆ ನಿರ್ಮಲವಾಗದು. ಅಲ್ಲಿಯವರೆಗೂ ರಣಕಹಳೆ, ಬೇಟೆ, ಕದನ, ಹೋರಾಟ, ಮಕಾಡೆ ಮಲಗಿಸು, ಬಂಡಾಯ, ಬಲೆ ಬೀಸುವುದು, ಇರಿಯುವುದು, ಪೆಟ್ಟು ಕೊಡುವುದು, ಹೋರಾಟದ ಸಾರಥ್ಯ ಮೊದಲಾದ ಪದಗಳೂ ಜೀವಂತವಾಗಿರುತ್ತವೆ.

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *

error: Content is protected !!