Thursday, 12th December 2024

ಚುನಾವಣಾ ಕಸರತ್ತಿನ ಸುತ್ತಮುತ್ತ

ವಿದ್ಯಮಾನ

ಸುರೇಶ್ ಬಾಲಚಂದ್ರನ್

ಚುನಾವಣೆ ಎಂದಕೂಡಲೆ ಅಭ್ಯರ್ಥಿಯ ಆಯ್ಕೆ, ಆತ ನಾಮಪತ್ರ ಸಲ್ಲಿಸುವುದು ಮತ್ತು ಆತನ ಪರವಾಗಿ ಪ್ರಚಾರ ಕಾರ್ಯ ನಡೆಯುವುದು, ಮತದಾನ, ಮತಗಳ ಎಣಿಕೆ ಮತ್ತು ಕಡೆಯದಾಗಿ ಗೆದ್ದ ಅಭ್ಯರ್ಥಿಯ ಘೋಷಣೆ ಹೀಗೆ ಒಂದರ ಹಿಂದೆ ಒಂದ ರಂತೆ ಚಟುವಟಿಕೆಗಳು ನಡೆಯುತ್ತವೆ.

ಇವೆಲ್ಲವೂ ಚುನಾವಣಾ ಆಯೋಗದ ನಿಯಮಾವಳಿ, ಪ್ರಜಾಪ್ರತಿನಿಧಿ ಕಾಯ್ದೆ ೧೯೫೧ ಮತ್ತು ಚುನಾವಣಾ ನಿಯಮಗಳ ನಡವಳಿಕೆ ೧೯೬೧ರ ನಿಬಂಧನೆಗಳ ಅಡಿಯಲ್ಲಿ ನಡೆಯುತ್ತವೆ. ಇವುಗಳ ಆಗುಹೋಗುಗಳನ್ನು ಕಾನೂನುರೀತ್ಯಾ ಗಮನಿಸುವ ಚುನಾವಣಾ ಆಯೋಗವು, ಯಾವುದೇ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ ಮರುಕ್ಷಣವೇ ಆಯಾ ಪಕ್ಷ ಮತ್ತು ಅಭ್ಯರ್ಥಿ
ಗಳಿಂದ ವಿವರಣೆಯನ್ನು ಪಡೆದುಕೊಳ್ಳುತ್ತದೆ.

ಮುಖ್ಯವಾಗಿ, ಚುನಾವಣಾ ದಿನಾಂಕಗಳು ಘೋಷಣೆಯಾದ ಬಳಿಕ ನೀತಿಸಂಹಿತೆ ಜಾರಿಯಾಗುತ್ತಿದ್ದಂತೆ, ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೆಲವೊಂದು ಕಟ್ಟುಪಾಡುಗಳಿಗೆ ಒಳಪಡುತ್ತವೆ. ಅಂದರೆ ಇವುಗಳ ಭಾಗವಾಗಿರುವವರು, ಶಾಸಕರು /ಸಂಸದರು ನೀತಿಸಂಹಿತೆಯನ್ನು ಉಲ್ಲಂಘಿಸುವಂತಿರುವುದಿಲ್ಲ. ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ, ಲೋಕ ಸಭೆ, ರಾಜ್ಯಸಭೆ, ವಿಧಾನಸಭೆ
ಮತ್ತು ವಿಧಾನ ಪರಿಷತ್ತಿನ ಸದಸ್ಯರಾಗಬೇಕಾದರೆ ಅಭ್ಯರ್ಥಿಗಳಿಗೆ ಕೆಲವೊಂದು ಅರ್ಹತೆ ಕಡ್ಡಾಯವಾಗಿರುತ್ತವೆ.

ಅಪರಾಧ/ಭ್ರಷ್ಟಾಚಾರ ಪ್ರಕರಣ ಗಳಲ್ಲಿ ಭಾಗಿಯಾ ಗಿದ್ದರೆ, ಕಾನೂನು ಉಲ್ಲಂಘಿಸಿದ್ದರೆ, ಆರ್ಥಿಕ ಅಪರಾಧಗಳಲ್ಲಿ ತೊಡಗಿದ್ದರೆ ಅಂಥವರು ಚುನಾ ವಣಾ ಅಭ್ಯರ್ಥಿಯಾಗಲು ಅನರ್ಹ ಎಂದು ಪ್ರಜಾಪ್ರತಿನಿಧಿ ಕಾಯ್ದೆ ಸೂಚಿಸಿದೆ. ಚುನಾವಣೆಯಲ್ಲಿ ಸ್ಪರ್ಧಿ ಸಲು ಅಭ್ಯರ್ಥಿಯು ನಾಮಪತ್ರದೊಂದಿಗೆ ಕೆಲವು ಪ್ರಮುಖ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು.
ಸಂಬಂಧಿತ ಅಫಿಡವಿಟ್‌ನಲ್ಲಿ ತನ್ನ ಬಗೆಗಿನ ಎಲ್ಲಾ ಮಾಹಿತಿ ಯನ್ನು ಒದಗಿಸುವುದಲ್ಲದೆ, ಯಾವ್ಯಾವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ತನ್ನ ಮೇಲೆ ನಡೆಯುತ್ತಿವೆ, ತನ್ನ ಮತ್ತು ಸಂಗಾತಿಯ ಸಂಪೂರ್ಣ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ, ಹಣಕಾಸಿನ ಮತ್ತು ಆಸ್ತಿಪಾಸ್ತಿಗಳ ವಿವರ ಇತ್ಯಾದಿ ಗಳನ್ನು ಅಭ್ಯರ್ಥಿ ಸಲ್ಲಿಸಬೇಕಿರುವುದು ಕಡ್ಡಾಯ.

ಇನ್ನು, ಸಂಸತ್ತಿನ ಚುನಾವಣೆಗೆ ಸ್ಪರ್ಧಿಸಲು ೨೫,೦೦೦ ರು. ಮತ್ತು ರಾಜ್ಯ ವಿಧಾನಸಭೆ ಅಥವಾ ಪರಿಷತ್ತಿಗೆ ಸ್ಪರ್ಧಿಸಲು ೧೦,೦೦೦ ರು. ಠೇವಣಿ ಯನ್ನು ಅಭ್ಯರ್ಥಿಯು ಇರಿಸಬೇಕಾಗುತ್ತದೆ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗೆ ೧೫,೦೦೦ ರು. ಠೇವಣಿ ಪಾವತಿಸಬೇಕು, ಆದರೆ ಇದಕ್ಕೆ ಬೇರೆ ಕಾನೂನಿನ ಅನ್ವಯ ನಿಬಂಧನೆಗಳಿರುತ್ತವೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿ ಗಳು ಮೇಲೆ ಉಲ್ಲೇಖಿಸಲಾದ ಠೇವಣಿಯಲ್ಲಿ ಅರ್ಧದಷ್ಟು ಪಾವತಿಸಬೇಕಾಗುತ್ತದೆ.

‘ಸುಮ್ಮನೇ ಒಂದು ಕೈನೋಡೋಣ’ ಎಂಬ ಧೋರಣೆಯುಳ್ಳವರು, ಚುನಾವಣಾ ರಾಜಕೀಯ ಎಂದರೇನು ಎಂದು ಪ್ರಯೋಗ ಮಾಡಲು ಬರುವವರು ಕಂಡುಕೇಳರಿಯದ ಸಂಖ್ಯೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದುಂಟು. ಹೀಗೆ ಸುಖಾಸುಮ್ಮನೆ ಸ್ಪರ್ಧಿಸದಿರಲಿ ಎಂಬ ಉದ್ದೇಶದಿಂದ ಹೀಗೆ ಚುನಾವಣಾ ಠೇವಣಿಯೆಂಬ ವ್ಯವಸ್ಥೆಯನ್ನು ಜಾರಿಯಲ್ಲಿಡಲಾಗಿದೆ. ‘ನಿಜವಾ ಗಿಯೂ ನಾನು ಗೆಲ್ಲಬಲ್ಲೆ, ನನಗೂ ಮತದಾರರ ಬೆಂಬಲವಿದೆ’ ಎಂಬ ವಿಶ್ವಾಸವಿರುವ ಆಕಾಂಕ್ಷಿಗಳು ಮಾತ್ರ ಪ್ರಜಾಪ್ರಭುತ್ವಕ್ಕೆ ಅವಶ್ಯಕ ಎಂಬುದನ್ನು ಮನಗಂಡು ನಮ್ಮ ಸಂವಿಧಾನ ನಿರ್ಮಾತೃಗಳು ಇಂಥ ಠೇವಣಿ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಅಳವಡಿಸಿದ್ದಾರೆ.

ನಿಜವಾಗಿಯೂ ಇದರ ಅವಶ್ಯಕತೆಯಿದೆ; ಆದರೆ ಇದು ಎಷ್ಟರಮಟ್ಟಿಗೆ ಕಾರ್ಯಸಾಧುವಾಗಿದೆ? ಎಂಬುದು ಪ್ರಶ್ನೆ. ಏಕೆಂದರೆ, ಸಾಕಷ್ಟು ಕ್ಷೇತ್ರಗಳಲ್ಲಿ ಮುಖ್ಯ ಅಭ್ಯರ್ಥಿಗಳ ಹೆಸರನ್ನು ಹೋಲುವ ಹಲವಾರು ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸುವುದನ್ನು ಕಾಣಬಹುದು. ಇವರುಗಳು ಸ್ಪರ್ಧಿಸುವುದರ ಹಿಂದಿನ ಉದ್ದೇಶ (ದುರುದ್ದೇಶ!) ಏನು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಯಲ್ಲಿ ಚಲಾಯಿಸಲಾದ, ಸಿಂಧುತ್ವ ಹೊಂದಿದ ಒಟ್ಟು ಮತದಲ್ಲಿ ಕನಿಷ್ಠ ಆರನೇ ಒಂದು ಭಾಗದಷ್ಟನ್ನಾದರೂ ಅಭ್ಯರ್ಥಿಯು ಗಳಿಸಿದರೆ ಮಾತ್ರವೇ ಚುನಾವಣಾ ಠೇವಣಿಯನ್ನು ಅವರಿಗೆ ನೀಡಲಾಗುವುದು; ಇಲ್ಲವಾದಲ್ಲಿ ಅದನ್ನು ಚುನಾವಣಾ ಆಯೋಗವು ಮರುಪಾವತಿಸದೆ ಜಪ್ತಿ ಮಾಡಿಕೊಳ್ಳುತ್ತದೆ.

ಆದರೆ, ಚುನಾವಣಾ ನಾಮಪತ್ರವನ್ನು ಅಭ್ಯರ್ಥಿಯು ಹಿಂತೆಗೆದುಕೊಂಡರೆ ಅಥವಾ ಚುನಾವಣೆಗೂ ಮುನ್ನ ಆತನ ಸಾವು ಸಂಭವಿಸಿದರೆ ಠೇವಣಿಯನ್ನು ಹಿಂದಿರುಗಿಸಲಾಗುವುದು. ಚುನಾವಣಾ ಠೇವಣಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಪಾವತಿಸಬಹುದು ಅಥವಾ ಖಜಾನೆಯ ಚಲನ್ ಮೂಲಕ ಅಥವಾ ಹಣದ ರೂಪದಲ್ಲಿಯೂ ಚುನಾವಣಾ ಆಯೋಗಕ್ಕೆ
ಸಲ್ಲಿಸಬಹುದು. ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಸ್ಪರ್ಧಿಸಿದರೆ, ಎಲ್ಲಾ ಕ್ಷೇತ್ರದಲ್ಲಿಯೂ ಠೇವಣಿಯನ್ನು ಪಾವತಿಸ ಬೇಕಾಗುತ್ತದೆ.

‘ಠೇವಣಿ’ ಎನ್ನುವುದು ಅಭ್ಯರ್ಥಿಗಳ ಪಾಲಿಗೆ ಪ್ರತಿಷ್ಠೆಯ ಸಂಕೇತವಾಗಿರುತ್ತದೆ. ಹೀಗಾಗಿ ಚುನಾವಣೆಯಲ್ಲಿ ಠೇವಣಿ ಕಳೆದು ಕೊಳ್ಳುವುದು ಒಂದು ಅವಮಾನದ ಸಂಗತಿ ಮತ್ತು ಅದು ಜನರಿಂದ ತಿರಸ್ಕೃತವಾದದ್ದರ ದ್ಯೋತಕ ಎಂದು ಪರಿಭಾವಿಸ
ಲಾಗುತ್ತದೆ. ಹೀಗಾಗಿ, ಚುನಾವಣೆಯಲ್ಲಿ ಸೋತರೂ ಪರವಾಗಿಲ್ಲ, ಠೇವಣಿ ಕಳೆದುಕೊಳ್ಳದಿದ್ದರೆ ಸಾಕು ಎಂಬ ನಿರೀಕ್ಷೆ ಹಲವರಲ್ಲಿ ರುತ್ತದೆ.

೧೯೫೧ರ ವರ್ಷದಿಂದ ೨೦೧೯ರವರೆಗೆ ನಡೆದ ಲೋಕಸಭಾ ಚುನಾವಣೆಗಳಲ್ಲಿ ೯೧,೧೬೦ ಮಂದಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದು, ಅವರಲ್ಲಿ ೭೧,೨೪೬ ಮಂದಿ ಸೋತು ಠೇವಣಿ ಕಳೆದುಕೊಂಡಿದ್ದಾರೆ (ಆಂದರೆ ಶೇ.೭೮ರಷ್ಟು ಮಂದಿ). ಈ ಪೈಕಿ, ೧೯೯೬ ಲೋಕ ಸಭಾ ಚುನಾವಣೆಯಲ್ಲಿ ಠೇವಣಿ ಕಳೆದು ಕೊಂಡವರ ಸಂಖ್ಯೆ ಅತಿಹೆಚ್ಚು (ಶೇ.೯೧) ಹಾಗೂ ೧೯೫೭ರ ಲೋಕಸಭಾ ಚುನಾವಣೆ ಯಲ್ಲಿ ಈ ಸಂಖ್ಯೆ ಅತಿಕಡಿಮೆ (ಶೇ.೩೩) ಎಂಬುದು ಲಭ್ಯಮಾಹಿತಿ.

೨೦೧೯ರ ಚುನಾವಣೆಯಲ್ಲಿ ೩,೪೪೩ ಸ್ವತಂತ್ರ ಅಭ್ಯರ್ಥಿಗಳಲ್ಲಿ ೩,೪೩೧ ಮಂದಿ (ಶೇ.೯೯.೬೫) ಠೇವಣಿ ಕಳೆದುಕೊಂಡು ಹೊಸ ದಾಖಲೆಯೇ ಸೃಷ್ಟಿಯಾಗಿತ್ತು. ಆದ್ದರಿಂದ ಠೇವಣಿ ಉಳಿಸಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಠೇವಣಿ ವಿಷಯ ದಲ್ಲೊಂದು ಸ್ವಾರಸ್ಯಕರ ಸಂಗತಿಯನ್ನು ಉಲ್ಲೇಖಿಸಬೇಕು. ಕಳೆದ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಯಂಕಪ್ಪ ಎಂಬ ಸ್ವತಂತ್ರ ಅಭ್ಯರ್ಥಿಯು ಚುನಾವಣಾ ಠೇವಣಿಯ ಹಣ ವಾದ ೧೦,೦೦೦ ರುಪಾಯಿ ಗಳನ್ನು ಸಂಪೂರ್ಣ ಒಂದು ರುಪಾಯಿ ನಾಣ್ಯಗಳಲ್ಲಿ ಪಾವತಿಸಿದ್ದರು ಹಾಗೂ ಬರೋಬ್ಬರಿ ೨ ತಾಸುಗಳ ಸುದೀರ್ಘ ಎಣಿಕೆಯ ನಂತರ ಅಧಿಕಾರಿಗಳು ಅಭ್ಯರ್ಥಿಯ ಠೇವಣಿ ಹಣವನ್ನು ಸ್ವೀಕರಿಸಿದ್ದರು!

ದುರದೃಷ್ಟವಶಾತ್ ಈ ಅಭ್ಯರ್ಥಿಯೂ ಚುನಾವಣೆಯಲ್ಲಿ ಸೋತಿದ್ದರ ಜತೆಗೆ ತಮ್ಮ ಠೇವಣಿಯನ್ನೂ ಕಳೆದುಕೊಂಡರು. ತಾವು ಸೋಲುವವರೆಂದು ತಿಳಿದೂ ಕೆಲವರು ದಾಖಲೆಗಳನ್ನು ಸೃಷ್ಟಿಸಲೆಂದೇ ಚುನಾವಣಾ ಕಣಕ್ಕೆ ಇಳಿಯುವುದುಂಟು. ಹೊಟ್ಟೆ ಪಕ್ಷದ ರಂಗಸ್ವಾಮಿ ಎಂಬುವವರು ವಿಮಾನದ ಚಿಹ್ನೆ ಇಟ್ಟುಕೊಂಡು ಹೀಗೆ ೮೬ ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್ ಸೇರಿದಂತೆ ಸಾಕಷ್ಟು ರಾಜಕೀಯ ದಿಗ್ಗಜರ ಎದುರು ಇವರು ತೊಡೆ ತಟ್ಟಿದ್ದರು ಮತ್ತು ಠೇವಣಿಯನ್ನೂ ಕಳೆದುಕೊಂಡಿದ್ದರು ಎಂಬುದು ಗಮನಾರ್ಹ.

(ಲೇಖಕರು ಪ್ರಚಲಿತ
ವಿದ್ಯಮಾನಗಳ ವಿಶ್ಲೇಷಕರು)