Tuesday, 10th September 2024

ಮೊದಲೇ ಹೇಳಿದ ಒಂದು ಗೆಲುವಿನ ಕತೆ

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್‌

ಸಾಮಾನ್ಯವಾಗಿ ಚುನಾವಣಾ ಪ್ರಚಾರದ ರ‍್ಯಾಲಿಗಳಲ್ಲೇ ಫಲಿತಾಂಶವೂ ಖಚಿತವಾಗುತ್ತದೆ. ಆದರೆ ಅವು ಫಲಿತಾಂಶವನ್ನು ಸೃಷ್ಟಿಸುವುದಿಲ್ಲ ಅಥವಾ ನಿರ್ಧರಿಸುವುದೂ ಇಲ್ಲ. ಫಲಿತಾಂಶ ಏನು ಬರುತ್ತದೆ ಎಂಬುದು ಮಾತ್ರ ಅಲ್ಲಿ ತಿಳಿಯುತ್ತದೆ. ಜನರು ಮುಂದಿನ ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕೆಂಬುದನ್ನು ಹೆಚ್ಚುಕಮ್ಮಿ ಆರು ತಿಂಗಳ ಮೊದಲೇ ನಿರ್ಧರಿಸಿರುತ್ತಾರೆ.

ಚುನಾವಣೆಯಲ್ಲಿ ಆಗುವ ಬದಲಾವಣೆ ಅಥವಾ ಉಂಟಾಗುವ ಅನಿಶ್ಚಯತೆಯು ಜನರ ಐದು ವರ್ಷಗಳ ಬದುಕಿನ ಅನುಭವದ ಫಲಿತಾಂಶ ವಾಗಿರುತ್ತದೆ. ಇದು ಕೇವಲ ಸಿದ್ಧಾಂತ ಅಥವಾ ಲೆಕ್ಕಾಚಾರದ ಬದನೇಕಾಯಿ ಅಲ್ಲ. ಚುನಾವಣೆಯಲ್ಲಿ ಜನರ ನಿರ್ಧಾರಕ್ಕೆ ನಾಯಕನ ಚರಿಷ್ಮಾ ಕೂಡ ಸೇರಿದರೆ ಸೀಟುಗಳ ಸಂಖ್ಯೆ ಕೇವಲ ಹೆಚ್ಚುವುದಿಲ್ಲ, ಬದಲಿಗೆ ಏಕಾಏಕಿ ಜಿಗಿಯುತ್ತದೆ. ‘ಪ್ರಜಾಪ್ರಭುತ್ವದಲ್ಲಿ ಗೆಲುವು ಎಂಬುದು ೯೯% ಬೆವರು, ೧% ಸ್ಪೂರ್ತಿ’ ಎಂಬ ಮಾತನ್ನು ನೀವು ಕೇಳಿರುತ್ತೀರಿ.

ಪ್ರತಿದಿನ ಪ್ರಧಾನಿ ನರೇಂದ್ರ ಮೋದಿ ದಣಿವರಿಯದೆ ಜನರ ಕಲ್ಯಾಣಕ್ಕಾಗಿ ಮಾಡಿದ ಕೆಲಸದ ಪ್ರತಿಫಲ ಈಗ ಕಾಣಿಸುತ್ತಿದೆ. ಈ ಪ್ರತಿಫಲವನ್ನು ನೀಡಿದವರು ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಮೋದಿಯೇ ಗೆಲ್ಲುತ್ತಾರೆಂದು ಭವಿಷ್ಯ ನುಡಿದಿರುವ ಇಂಗ್ಲಿಷ್ ದಿನಪತ್ರಿಕೆಗಳನ್ನು ಓದುವ ಜನರಲ್ಲ ಎಂಬುದನ್ನು ನೆನಪಿಡಬೇಕು. ಈ ಚುನಾವಣೆ ಡಬ್ಲ್ಯು ಫ್ಯಾಕ್ಟರ್ ಸುತ್ತ ಗಿರಕಿ ಹೊಡೆಯುತ್ತಿದೆ. ಡಬ್ಲ್ಯು ಅಂದರೆ ವಿಮೆನ್. ಈ ಸಲ ಯಾರನ್ನು ಗೆಲ್ಲಿಸಬೇಕು, ಯಾರನ್ನು ಸೋಲಿಸಬೇಕು ಎಂಬುದರ ಕೀಲಿಕೈ ಮಹಿಳೆಯರ ಬಳಿಯಿದೆ. ಇದನ್ನು ವಾಕ್ಯಗಳಲ್ಲಿ ಹೇಳದೆ ಘೋಷಣೆಯ ರೂಪದಲ್ಲಿ
ಹೇಳುವುದಾದರೆ, ‘ರೇಶನ್ ಔರ್ ಶಾಸನ್‘ (ಪಡಿತರ ಮತ್ತು ಆಡಳಿತ) ಈ ಚುನಾವಣೆಯ ಗತಿಯನ್ನು ನಿರ್ಧರಿಸುತ್ತಿವೆ. ಮೂರನೆಯದು ಭಾಷಣ್. ಚುನಾವಣೆಯಲ್ಲಿ ಭಾಷಣ ಕೂಡ ಮುಖ್ಯ, ಆದರೆ ಅದರ ಹಿಂದೆ ಒಳ್ಳೆಯ ಆಡಳಿತದ ಬಲವಿರಬೇಕು.

ಕೇವಲ ಭಾಷಣದಿಂದ ಪ್ರಯೋಜನವಿಲ್ಲ. ವಿರೋಧ ಪಕ್ಷಗಳ ವಿಷಯದಲ್ಲಾದರೆ, ಒಳ್ಳೆಯ ಪರ್ಯಾಯ ಆಡಳಿತದ ಕಲ್ಪನೆಯನ್ನು ಅವರು ಜನರ ಮುಂದಿಡಬೇಕು. ಪ್ರಧಾನಿ ನರೇಂದ್ರ ಮೋದಿಯವರ ಬಡತನ ವಿಮೋಚನೆ ಚಳವಳಿಯ ಮೂಲ ಮಂತ್ರವೇ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ. ಕೋವಿಡ್ ಸಮಯದಲ್ಲಿ ಆರಂಭವಾದ ಉಚಿತ ಪಡಿತರ ಯೋಜನೆಯ ಫಲ ಪಡೆದ ಮಹಿಳೆಯರು ಈಗ ಮೋದಿಗೆ ಧನ್ಯವಾದ ಹೇಳುತ್ತಿದ್ದಾರೆ.

ಮಹಿಳೆಯರಿಗೆ ಅವರ ಬ್ಯಾಂಕ್ ಖಾತೆಗೇ ಎಲ್ಪಿಜಿ ಗ್ಯಾಸ್‌ನ ಸಬ್ಸಿಡಿ ಹಣ ಬರುತ್ತಿದೆ. ಸರಕಾರ ಬಡವರಿಗೆ ನೀಡುವ ಮನೆಯ ೫೦% ಮಾಲಿಕತ್ವ ಮಹಿಳೆಯರ ಹೆಸರಿನಲ್ಲಿರುತ್ತದೆ. ಮಹಿಳೆಯರ ಬ್ಯಾಂಕ್ ಖಾತೆಗೇ ಬ್ಯಾಂಕ್‌ನಿಂದ ಸಾಲದ ಹಣ ಪಾವತಿಯಾಗುತ್ತದೆ. ಇವೆಲ್ಲವೂ ಮಹಿಳಾ ಸಬಲೀ ಕರಣದ ನಿದರ್ಶನಗಳು. ಹೀಗಾಗಿ ಈ ಚುನಾವಣೆಯಲ್ಲಿ ಯಾವುದೇ ತಜ್ಞನಿಗಿಂತ ಹೆಚ್ಚಾಗಿ ಮಹಿಳೆಯರ ಮತದಾನದ ಪ್ರಮಾಣವೇ ಗೆಲುವಿನ ಸುಳಿವನ್ನು ನೀಡುತ್ತಿದೆ. ಮೊದಲ ಎರಡು ಹಂತದಲ್ಲಿ ಮಹಿಳೆಯರು ಪುರುಷರಷ್ಟೇ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ.

ಆದರೆ ಎರಡು ರಾಜ್ಯಗಳಲ್ಲಿ ಮಾತ್ರ ವ್ಯತ್ಯಾಸವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಹಿಳೆಯರು ಪುರುಷರಿಗಿಂತ ಶೇ.೨ ರಿಂದ ಶೇ.೩ರಷ್ಟು ಹೆಚ್ಚು ಮತದಾನ ಮಾಡಿದ್ದರೆ, ಮಹಾರಾಷ್ಟ್ರದಲ್ಲಿ ಮಹಿಳೆಯರ ಮತದಾನದ ಪ್ರಮಾಣ ಶೇ.೨ರಷ್ಟು ಕಡಿಮೆಯಿದೆ. ಇನ್ನುಳಿದ ಎಲ್ಲಾ ರಾಜ್ಯಗಳಲ್ಲಿ ಗ್ರಾಫ್ ಒಂದೇ ತೆರನಾಗಿದೆ. ಸರಕಾರದ ಪರೀಕ್ಷೆ ನಡೆಯುವುದು ಅದರ ಆಡಳಿತದ ನೀತಿಗಳಲ್ಲೇ ಹೊರತು ವಕ್ತಾರರ ಬಾಯಿಯಲ್ಲಿ ಅಲ್ಲ. ಎಲ್ಲಾ ಮತದಾರರೂ ನರೇಂದ್ರ ಮೋದಿಗೇ ಮತ ಹಾಕುವುದಿಲ್ಲ. ಆದರೆ, ಈ ದೇಶದಲ್ಲಿ ಒಂದೇ ಒಂದು ಕುಟುಂಬ ತನಗೆ ಮೋದಿ ಸರಕಾರದ ಕೊಡುಗೆಗಳಾದ ರೇಶನ್, ಆರೋಗ್ಯ ವಿಮೆ, ಗ್ಯಾಸ್ ಸಬ್ಸಿಡಿ ಅಥವಾ ಮನೆ ಸಿಕ್ಕಿಲ್ಲ ಎಂದು ಹೇಳಲು ಸಾಧ್ಯವಿಲ್ಲ.

ಅದು ಮೋದಿ ವಿರೋಧಿ ರಾಜಕೀಯ ನಿಲುವು ಹೊಂದಿರುವ ಕುಟುಂಬವೇ ಇರಲಿ ಅಥವಾ ಅಲ್ಪಸಂಖ್ಯಾತರ ಕುಟುಂಬವೇ ಇರಲಿ, ಎಲ್ಲಾ ಕುಟುಂಬಗಳಿಗೂ ಮೋದಿ ಸರಕಾರದ ಯೋಜನೆಗಳ ಲಾಭ ದೊರೆತಿದೆ. ಪ್ರತಿಯೊಬ್ಬ ಭಾರತೀಯನನ್ನೂ ಸರಕಾರ ಸಮಾನವಾಗಿ ಕಂಡಿದೆ ಎಂಬುದಕ್ಕೆ ಇದೇ ನಿಜವಾದ ಉದಾಹರಣೆ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ, ಸ್ಥೂಲವಾಗಿ ಹೇಳುವುದಾದರೆ, ಗಂಡಸು ದುಡಿಯುತ್ತಾನೆ, ಹೆಂಡತಿ ಅಥವಾ ತಾಯಿ ಇಡೀ ಮನೆಗೆ ಊಟ ಹಾಕುತ್ತಾಳೆ.

ನನಗೆ ತಿಳಿದಿರುವಂತೆ ಈ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ಮಹಿಳೆಯರಿಗೆ ಯಾವುದೇ ಚಿಂತೆಯಿಲ್ಲದೆ ತಮ್ಮ ಮನೆಯ ಸದಸ್ಯರಿಗೆ ಹೊಟ್ಟೆ ತುಂಬಾ ಊಟ ಹಾಕಲು ಸಾಧ್ಯವಾಗಿದೆ. ಇಂತಹದ್ದೊಂದು ಸೌಕರ್ಯ ಒದಗಿಸಿದ ನಾಯಕನಿಗೆ ಬಡಮಹಿಳೆಯರು ಮತ ಹಾಕುವುದು ಕೃತಜ್ಞತೆ ಸಲ್ಲಿಸುವ ಮಾನವೀಯ ವಿಧಾನವಷ್ಟೆ. ಪ್ರಧಾನಿಗೆ ಮತ ಹಾಕುವುದಕ್ಕೆ ಹೆಚ್ಚಿನ ಮಹಿಳೆಯರು ನೀಡುವ ಪ್ರಮುಖ ಕಾರಣವೆಂದರೆ ‘ಭದ್ರತೆ. ತಮಗೆ ಲಭಿಸಿರುವ ಭೌತಿಕ ಭದ್ರತೆಗಿಂತ ಹೆಚ್ಚಾಗಿ ತಮ್ಮ ಕುಟುಂಬಕ್ಕೆ ಲಭಿಸಿರುವ ಆಹಾರದ ಭದ್ರತೆ ಅವರಿಗೆ ದೊಡ್ಡದಾಗಿ ಕಾಣಿಸುತ್ತಿದೆ.

ರೇಶನ್, ಶಾಸನ್ ಹಾಗೂ ಭವಿಷ್ಯ ಈ ಮೂರು ಸಂಗತಿಗಳು ಮಹಿಳೆಯರಿಗೆ ನೆಮ್ಮದಿಯನ್ನು ನೀಡಿವೆ. ಈ ಸಲ ಚುನಾವಣೆ ಪ್ರಾರಂಭವಾದಾಗ ದೇಶದಲ್ಲಿ ಅತಿಹೆಚ್ಚು ಜನರು ಓದುವ ಇಂಗ್ಲಿಷ್ ದಿನಪತ್ರಿಕೆ ೧೦ ಸಂಗತಿಗಳನ್ನು ಪಟ್ಟಿ ಮಾಡಿ ಈ ಸಂಗತಿಗಳೇ ಈ ಬಾರಿಯ ಫಲಿತಾಂಶವನ್ನು ನಿರ್ಧರಿಸುತ್ತವೆ ಎಂದು ಹೇಳಿತ್ತು. ಅದರಲ್ಲಿ ಮೊದಲ ಸಂಗತಿ ರಾಮ ಮಂದಿರವಾಗಿತ್ತು. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವನ್ನು ನಿರ್ಮಿಸಿರುವುದು ಬಹು ಸಂಖ್ಯಾತರಿಗೆ ತೃಪ್ತಿ ನೀಡಿರುವ ಹಾಗೂ ಈ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವ ಪ್ರಮುಖ ಸಂಗತಿಗಳಲ್ಲಿ ಒಂದು ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಇದು ಮೂರು ದಶಕದ ಹಿಂದೆ ನೀಡಿದ್ದ ಭರವಸೆಯ ಈಡೇರಿಕೆಯಷ್ಟೆ.

ಈ ಚುನಾವಣೆಯ ಫಲಿತಾಂಶ ನಿಜವಾಗಿಯೂ ನಿರ್ಧಾರವಾಗುವುದು ಕಳೆದ ಐದು ವರ್ಷದಲ್ಲಿ ಮೋದಿ ಈ ದೇಶದ ಬಡವರಿಗಾಗಿ ಏನು ಮಾಡಿದ್ದಾರೆ ಎಂಬುದರ ಮೇಲೆ ಹಾಗೂ ಭಾರತೀಯರ ಮನದಲ್ಲಿ ಭವಿಷ್ಯದ ಬಗ್ಗೆ ಅವರು ಮೂಡಿಸುವ ಭರವಸೆಯ ಮೇಲೆ. ಮೊದಲ ಅವಧಿಯ ಪರಿಶ್ರಮದ
ಫಸಲು ೨೦೧೯ರಲ್ಲೇ ದೊರೆತಿದೆ. ಪ್ರಜಾಪ್ರಭುತ್ವದಲ್ಲಿ ಮೂರನೇ ಅವಧಿಗೆ ಆಯ್ಕೆಯಾಗುವುದು ಬಹಳ ಕಷ್ಟ. ಅಮೆರಿಕ, ಫ್ರಾನ್ಸ್‌ನಂತಹ ದೇಶಗಳಲ್ಲಿ ಅದಕ್ಕೆ ಸಂವಿಧಾನದಲ್ಲೇ ಅವಕಾಶವಿಲ್ಲ.

ಅಲ್ಲಿ ಮೂರನೇ ಅವಧಿಗೆ ಯಾರೂ ಅಧ್ಯಕ್ಷರಾಗುವಂತಿಲ್ಲ. ಭಾರತದಲ್ಲೂ ನರೇಂದ್ರ ಮೋದಿಗೆ ಸವಾಲುಗಳಿವೆ, ಆದರೆ ಗಂಭೀರವಾಗಿ ಸವಾಲೊಡ್ಡುವ
ಸವಾಲುಗಾರನೇ ಇಲ್ಲ. ಮೋದಿಗೆ ಪರ್ಯಾಯವಾಗಬಲ್ಲ ಸಾಧ್ಯತೆಗೆ ರಾಹುಲ್ ಗಾಂಧಿ ಹತ್ತಿರ ಕೂಡ ಇಲ್ಲ. ೨೦೨೦ರ ದಶಕದ ಸಮಸ್ಯೆಗಳಿಗೆ ಅವರು ೧೯೫೦ರ ದಶಕದ ಪರಿಹಾರಗಳನ್ನು ಹೇಳುತ್ತಿದ್ದಾರೆ. ಹೀಗಾಗಿ ಅವರು ಅರ್ಧ ಶತಮಾನದಷ್ಟು ಹಿಂದಿದ್ದಾರೆ. ಇನ್ನು, ಶರದ್ ಪವಾರ್‌ರಂತಹ ಹಿರಿಯ ನಾಯಕರು ಅನಾರೋಗ್ಯದಿಂದಾಗಿ ದೂರವುಳಿದಿದ್ದಾರೆ. ಮೊದಲ ಹಂತದ ಮತದಾನ ನಡೆದಾಗ ಸರಕಾರದ ಟೀಕಾಕಾರರು ಮತದಾನದ ಪ್ರಮಾಣ ಇಳಿಕೆಯಾಗಿರುವುದನ್ನು ನೋಡಿ ಮೋದಿ ಮತ್ತೊಮ್ಮೆ ಆಯ್ಕೆಯಾಗುವುದು ಕಷ್ಟ ಎಂದು ಹೇಳತೊಡಗಿದ್ದರು. ಆದರೆ ಅವರ ಲೆಕ್ಕಾಚಾರಕ್ಕೆ ಯಾವ ಆಧಾರವೂ ಇಲ್ಲ. ಹಿಂದಿನ ಚುನಾವಣೆಗಳನ್ನೇ ನೋಡಿ. ಕಾಂಗ್ರೆಸ್‌ಗೆ ಪ್ರಬಲ ವಿರೋಧ ಪಕ್ಷಗಳೇ ಇಲ್ಲದಿದ್ದಾಗ ೧೯೬೨ರಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿತ್ತು. ಕಾಂಗ್ರೆಸ್‌ಗೆ ತುಂಬಾ ವಿರೋಧಿಗಳಿದ್ದಾಗಲೂ ಮತದಾನದ ಪ್ರಮಾಣ ಏರಿಕೆಯಾಗಿತ್ತು.

೧೯೭೧ರಲ್ಲಿ ಮತದಾನದ ಪ್ರಮಾಣ ಶೇ.೫.೮ರಷ್ಟು ಭಾರೀ ಪ್ರಮಾಣದಲ್ಲಿ ಕುಸಿದು ಶೇ.೫೫.೨೭ರಷ್ಟು ಮಾತ್ರ ಆಗಿತ್ತು. ಆದರೂ ಇಂದಿರಾ ಗಾಂಧಿ ೩೫೨ ಸೀಟುಗಳ ಸರಳ ಬಹುಮತ ಪಡೆದು ಭರ್ಜರಿ ಗೆಲುವು ಸಾಧಿಸಿದ್ದರು. ೧೯೭೭ರಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚಿದ ಚುನಾವಣೆಯಲ್ಲಿ ಮತದಾನದ
ಪ್ರಮಾಣ ಶೇ.೫.೨ರಷ್ಟು ಏರಿಕೆಯಾಗಿತ್ತು. ೧೯೮೦ರಲ್ಲಿ ಜನತಾ ಪಕ್ಷದ ಸರಕಾರ ನಿರ್ನಾಮವಾದ ಚುನಾವಣೆ ಯಲ್ಲಿ ಮತದಾನದ ಪ್ರಮಾಣ ಶೇ.೩.೬ರಷ್ಟು ಇಳಿಕೆ ಯಾಗಿತ್ತು. ಹೀಗಾಗಿ ಚುನಾವಣೆಯ ಫಲಿತಾಂಶಕ್ಕೂ ಮತದಾನದ ಪ್ರಮಾಣಕ್ಕೂ ನೇರವಾದ ಅಥವಾ ಊಹೆ ಮಾಡಬಹುದಾದ ರೀತಿಯ ತಾರ್ಕಿಕ ಸಂಬಂಧ ಇಲ್ಲ. ೧೯೯೯, ೨೦೦೪ ಮತ್ತು ೨೦೦೯ರಲ್ಲಿ ಮತದಾನದ ಪ್ರಮಾಣ ಹೆಚ್ಚುಕಮ್ಮಿ ಒಂದೇ ಆಗಿತ್ತು. ೨೦೧೪ರಲ್ಲಿ ನರೇಂದ್ರ ಮೋದಿ ಅದ್ಭುತವಾಗಿ ಪ್ರಚಾರ ಮಾಡಿದ್ದರಿಂದ ಅದು ಶೇ.೬೬.೪೪ಕ್ಕೆ ಏರಿಕೆಯಾಗಿತ್ತು.

ನಂತರ ೨೦೧೯ರಲ್ಲೂ ಅದು ಏರಿತು. ೨೦೨೪ರಲ್ಲಿ ಮತದಾನದ ಪ್ರಮಾಣ ಬಹುತೇಕ ಶೇ.೬೫ರ ಆಸುಪಾಸಿನಲ್ಲಿ ಇರಲಿದೆ. ಹಾಗಿದ್ದರೆ ಪ್ರಶ್ನೆ ಏನೆಂದರೆ, ಈ ಚುನಾವಣೆಯಲ್ಲಿ ಯಾರ ಮತಗಳು ಮನೆಯಲ್ಲಿ ಕುಳಿತಿವೆ ಮತ್ತು ಯಾರ ಮತಗಳು ಬೂತ್‌ಗೆ ಬಂದಿವೆ? ಇದಕ್ಕೆ ಉತ್ತರ ಕಂಡು ಹಿಡಿಯಲು ನನ್ನ ಸ್ನೇಹಿತ ಜಾವಿದ್ ಲೇಕ್ ಬಳಿ ಹೋಗೋಣ. ಜಾವಿದ್ ಲೇಕ್ ಮತ್ತು ಅವರ ಪತ್ನಿ ಭಾರತಿ ಭಾರ್ಗವ ಅವರು ಎಡಪಂಥೀಯ ಪತ್ರಿಕೆಯಾದ ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ಯ ಮಾಜಿ ಸಹಾಯಕ ಸಂಪಾದಕರು. ಬಹುಶಃ ಅವರು ಯಾವತ್ತೂ ಬಿಜೆಪಿಗೆ ಮತ ಹಾಕಿದವರಲ್ಲ. ಜಾವಿದ್ ಲೇಕ್ ೧೯೭೭ರ ಚುನಾವಣೆಯಿಂದಲೂ ಒಂಥರಾ ವಿಚಿತ್ರವಾದ, ಆದರೆ ತುಂಬಾ ಆಸಕ್ತಿದಾಯಕವಾದ ‘ಏಕವ್ಯಕ್ತಿ ಚುನಾವಣಾ ಸಮೀಕ್ಷೆ’ ನಡೆಸುತ್ತಾ ಬಂದಿ
ದ್ದಾರೆ. ಅದು ಮತದಾರರ ಮನಸ್ಥಿತಿಯ ಸಮೀಕ್ಷೆ.

ಪ್ರತಿ ಚುನಾವಣೆಯಲ್ಲೂ ಅವರು ಉತ್ತರ ಪ್ರದೇಶದ ಪ್ರಯಾಗರಾಜ್‌ಗೆ ಹೋಗುತ್ತಾರೆ. ಅಲ್ಲೊಂದು ದೋಣಿಯನ್ನು ಬಾಡಿಗೆಗೆ ಪಡೆದು ಗಂಗಾನದಿಯಲ್ಲಿ
ಹೋಗುತ್ತಾರೆ. ಅಲ್ಲಿ ಅಂಬಿಗರು ಹಾಗೂ ಯಾತ್ರಾರ್ಥಿಗಳನ್ನು ಮಾತನಾಡಿಸುತ್ತಾರೆ. ೧೯೭೭ರಲ್ಲಿ ಅಂಬಿಗರು ಹಾಗೂ ಯಾತ್ರಾರ್ಥಿಗಳು ಯಾವುದೇ ಮುಲಾಜಿಲ್ಲದೆ ಇಂದಿರಾ ಗಾಂಧಿ ಸೋಲುತ್ತಾರೆ ಎಂದಿದ್ದರು. ಅದನ್ನು ಜಾವಿದ್ ನಂಬಿರಲಿಲ್ಲ. ಆದರೆ ಫಲಿತಾಂಶ ಬಂದಾಗ ನಂಬಲೇಬೇಕಾಯಿತು. ಆನಂತರದ ಪ್ರತಿ ಲೋಕಸಭೆ ಚುನಾವಣೆಯಲ್ಲೂ ಅವರು ಇದೇ ರೀತಿಯ ಸಮೀಕ್ಷೆ ನಡೆಸುತ್ತಾ ಬಂದಿದ್ದಾರೆ.

೨೦೦೪ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸೋಲುತ್ತಾರೆ ಎಂದು ಅವರ ಸಮೀಕ್ಷೆ ಹೇಳಿತ್ತು. ೨೦೦೯ರಲ್ಲಿ ಮನಮೋಹನ ಸಿಂಗ್ ಪುನರಾಯ್ಕೆ ಆಗುತ್ತಾರೆಂದು ಅವರ ಸಮೀಕ್ಷೆ ಹೇಳಿತ್ತು. ೨೦೧೪ರಲ್ಲಿ ನರೇಂದ್ರ ಮೋದಿ ಗೆಲ್ಲುತ್ತಾರೆಂದೂ, ೨೦೧೯ರಲ್ಲಿ ಅವರು ಇನ್ನೂ ಹೆಚ್ಚು ಸೀಟುಗಳಿಂದ ಪುನರಾಯ್ಕೆ ಆಗುತ್ತಾರೆಂದೂ ಅವರ ಸಮೀಕ್ಷೆ ಹೇಳಿತ್ತು. ಈ ಬಾರಿ ಜಾವಿದ್ ತಮ್ಮ ಪತ್ನಿಯನ್ನೂ ಕರೆದುಕೊಂಡು ಅಂಬಿಗರು ಹಾಗೂ ಯಾತ್ರಾರ್ಥಿಗಳ ಸಮೀಕ್ಷೆ ನಡೆಸಲು ಪ್ರಯಾಗರಾಜ್‌ಗೆ ಹೋಗಿದ್ದರು. ಅಲ್ಲಿ ತಾವು ಯಾರ‍್ಯಾರನ್ನು ಮಾತನಾಡಿಸಿದ್ದೇವೆ, ಅವರೇನು ಹೇಳಿದ್ದಾರೆ ಎಂಬುದನ್ನು ಸರಳವಾದ ಲೇಖನವೊಂದರಲ್ಲಿ ಬರೆದಿದ್ದಾರೆ. ಅಗರ್ತಲಾದ ಜೀಬನ್ ದಾಸ್, ೩೫; ಗುಜರಾತ್‌ನ ಭುಜ್‌ನಿಂದ ಬಂದ ಪರೀಕ್ಷಿತ್, ೪೨; ಮಹಾರಾಷ್ಟ್ರದ ಭದ್ರಾವತಿಯಿಂದ ಬಂದ ಗೃಹಿಣಿ ಮೀರಾಭಾಯಿ ಖಾಂಡೇಕರ್, ೬೫; ಉದಯ್‌ಪುರದ ರೈತ ಕಾಲುರಾಮ್, ೬೦; ರಾಜಸ್ಥಾನದ ಚುರುವಿನಿಂದ ಬಂದ ಚಾಲಕ ರಾಜೇಶ್, ೨೮; ಗುಜರಾತ್‌ನ ಬಹರುಚ್‌ನಿಂದ ಬಂದ ಪ್ರೀತಿ ಪ್ರಜಾಪತಿ, ೩೪; ಭಿಲಾಯಿಯಿಂದ ಬಂದ ಶಾಲಾ ಶಿಕ್ಷಕಿ ವಂದನಾ ಮುಕ್ತೇಕರ್, ೫೨; ಬುಂದೇಲ್‌ಖಂಡದ ರೈಲ್ವೆ ಸೂಪರ್‌ವೈಸರ್ ಕಮಲಾಪತಿ ಅಗ್ನಿಹೋತ್ರಿ, ೫೭; ಜಾರ್ಖಂಡದ ಡುಮ್ಕಾದಿಂದ ಬಂದ ಸರಕು ಸಾಗಣೆ ರೈಲ್ವೆ ನೌಕರ ಉತ್ತಮ್ ಸಿನ್ಹಾ, ೩೫; ಜೋಧಪುರದ ಡ್ರೈವರ್ ಮುನ್ನಾ ರಾಮ್, ೪೫; ರಾಜಸ್ಥಾನದ ದೌಸಾದಿಂದ ಬಂದ ಟ್ರಾವೆಲ್ ಏಜೆಂಟ್ ಹುಕುಮ್ ಚಂದ್ ಶರ್ಮಾ, ೫೬; ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಸಣ್ಣ ಕೃಷಿಕ ಹೀರಾ ರಾಮನಾಥ್, ೬೩; ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಮೆಡಿಕಲ್ ಶಾಪ್ ಹೊಂದಿರುವ ಅಂಕಿತಾ ತಿವಾರಿ, ೩೬; ರಾಜಸ್ಥಾನದ ಕೋಟಾದಲ್ಲಿ ಆನ್‌ಲೈನ್ ಬಿಸಿನೆಸ್ ನಡೆಸುವ ಮಂಜು ತಿವಾರಿ, ೫೦; ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ
ಯಲ್ಲಿ ಬಿಸಿನೆಸ್ ಹೊಂದಿರುವ ರಂಗ ರಾವ್, ೪೩; ಕರ್ನಾಟಕದ ಹಾವೇರಿಯಿಂದ ಬಂದ ಗೃಹಿಣಿ ಕಲ್ಪನಾ, ೪೫; ಹೈದರಾಬಾದ್‌ನ ನಿರಂಜನ್, ೪೦; ನಲ್ಗೊಂಡಾದ ವಿನತಾ, ೫೧; ನಿಜಾಮಾಬಾದ್‌ನ ವಸಂತ, ೬೦; ಉತ್ತರ ಪ್ರದೇಶದಲ್ಲಿರುವ ಬ್ರಾಹ್ಮಣರು ಮಾತ್ರ ವಾಸಿಸುವ ವಿಶಿಷ್ಟವಾದ ಹಳ್ಳಿಯಿಂದ ಬಂದ ಪ್ರೇಮ್ ನಾರಾಯಣ ತಿವಾರಿ; ಇಷ್ಟು ಜನರನ್ನು ಜಾವಿದ್ ದಂಪತಿ ಮಾತನಾಡಿಸಿದ್ದಾಗಿ ಬರೆದುಕೊಂಡಿದ್ದಾರೆ.

ಇವರ ಪೈಕಿ ರಂಗ ರಾವ್ ಅವರನ್ನು ಬಿಟ್ಟು ಇನ್ನೆಲ್ಲರೂ ನರೇಂದ್ರ ಮೋದಿಗೆ ಮತ ಹಾಕಿದ್ದಾರೆ. ರಂಗ ರಾವ್ ಮಾತ್ರ ಎನ್‌ಡಿಎ ಮೈತ್ರಿಕೂಟದಲ್ಲಿರುವ ಚಂದ್ರಬಾಬು ನಾಯ್ಡುಗೆ ಮತ ಹಾಕಿದ್ದಾರೆ. ಆಂಧ್ರ ಪ್ರದೇಶದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಶೇ.೮೦ರಷ್ಟು ಸೀಟು ಬರುತ್ತದೆ ಎಂಬುದು ಅವರ ಅಂದಾಜು. ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಇನ್ನೂ ಇಬ್ಬರು ಬೇರೆ ಪಕ್ಷಕ್ಕೆ ಮತದಾನ ಮಾಡಿದ್ದಾರೆ. ಬಿಕಾನೇರ್‌ನ ಗೋಪಾಲ್ ವಿಷ್ಣೋಯ್, ೫೦, ಇವರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಉತ್ತರ ಪ್ರದೇಶದ ದೋಭಿಯೊಬ್ಬರ ಸೊಸೆ ಮಂಜು ದೇವಿ, ೩೦, ಇವರು ಎಲ್ಲಾ ಪಕ್ಷಗಳ ನಡವಳಿಕೆಯಿಂದ ಬೇಸತ್ತು ಬಿಎಸ್‌ಪಿಯ ಮಾಯಾವತಿಗೆ ಮತ ಹಾಕಿದ್ದಾರೆ. ನನಗೆ ಗೊತ್ತು, ಇದು ವೈಜ್ಞಾನಿಕ ರೀತಿಯಲ್ಲಿ ನಡೆದ ಸಮೀಕ್ಷೆ ಅಲ್ಲ.

ಇದರಲ್ಲಿ ಅಲ್ಪಸಂಖ್ಯಾತರು ಯಾರೂ ಪಾಲ್ಗೊಂಡಿಲ್ಲ. ಕೇರಳ, ತಮಿಳುನಾಡು ಅಥವಾ ಬಂಗಾಳದ ಮತದಾರರು ಯಾರೂ ಇಲ್ಲ. ಆದರೆ ಹಿಂದಿನ ಲೋಕಸಭೆ ಚುನಾವಣೆಗಳಲ್ಲೂ ಈ ಸಮೀಕ್ಷೆ ಹೀಗೇ ನಡೆದಿತ್ತು.

***
ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಪವಾಡಸದೃಶವಾದ ಒಂದು ಸಂಗತಿಯೆಂದರೆ ಇಲ್ಲಿನ ಚುನಾವಣೆಯಲ್ಲಿ ಜನರು ‘ಚೆಕ್ಸ್
ಮತ್ತು ಬ್ಯಾಲೆನ್ಸ್’ ಚೆನ್ನಾಗಿ ನಿಭಾಯಿಸುತ್ತಾರೆ. ೧೯೫೦ರ ದಶಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ವಿರೋಧ ಪಕ್ಷಗಳೇ ಇಲ್ಲದಿದ್ದ ಕಾಲದಲ್ಲೂ ಅವರು ಕಾಂಗ್ರೆಸ್‌ಗೆ ಅದ್ಭುತವಾದ ಬಹುಮತ ನೀಡಲಿಲ್ಲ. ೧೯೫೨ರ ಚುನಾವಣೆಯಲ್ಲಿ ೪೮೯ ಸದಸ್ಯ ಬಲದ ಶಾಸನಸಭೆಗೆ ಕಾಂಗ್ರೆಸ್ ಪಕ್ಷ ಶೇ.೪೪.೯೯ರಷ್ಟು ಮತ ಮಾತ್ರ ಪಡೆದು ೩೬೪ ಸೀಟುಗಳನ್ನು ಗೆದ್ದಿತ್ತು. ಅಂದರೆ ಶೇ.೫೫ರಷ್ಟು ಭಾರತೀಯರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದರು.

ಬ್ರಿಟಿಷರಿಂದ ಭಾರತೀಯರಿಗೆ ಕೇವಲ ಐದು ವರ್ಷದ ಹಿಂದಷ್ಟೇ ಸ್ವಾತಂತ್ರ್ಯ ಕೊಡಿಸಿದ್ದ ರಾಜಕೀಯ ಪಕ್ಷವದು. ಆದರೂ ಅರ್ಧಕ್ಕಿಂತ ಹೆಚ್ಚು ಭಾರತೀಯರು ಆ ಪಕ್ಷವನ್ನು ಚುನಾವಣೆಯಲ್ಲಿ ವಿರೋಧಿಸಿದ್ದರು. ಆದರೆ ಈ ದೇಶದ ಮತದಾರ ತೋರುವ ಜಾಣ್ಮೆ ಮತ್ತು ಸಮತೋಲನವನ್ನು ಯಾರು ತಾನೆ ಪ್ರಶ್ನಿಸಲು ಸಾಧ್ಯ? ದೇಶದಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟರು ೧೬ ಸೀಟುಗಳನ್ನೂ, ತಮಿಳು ನಾಡು ಟಾಯ್ಲರ‍್ಸ್ ಪಾರ್ಟಿ ನಾಲ್ಕು ಸೀಟುಗಳನ್ನೂ ಗೆದ್ದಿತ್ತು.

೧೯೫೭ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮತ ಗಳಿಕೆ ಶೇ.೪೭.೭೮ಕ್ಕೆ ಏರಿಕೆಯಾಗಿತ್ತು. ಆದರೆ ಸೀಟುಗಳ ಸಂಖ್ಯೆ ಮೂರು ಕಡಿಮೆಯಾಗಿತ್ತು. ೧೯೬೨ರಲ್ಲಿ ಆಡಳಿತಾರೂಢ ಪಕ್ಷ ೧೦ ಸ್ಥಾನಗಳನ್ನು ಕಳೆದುಕೊಂಡಿತ್ತು. ೧೯೬೭ರಲ್ಲಿ ಕಾಂಗ್ರೆಸ್ ಪಕ್ಷ ೫೨೩ ಸದಸ್ಯ ಬಲದ ಲೋಕಸಭೆಯಲ್ಲಿ ೨೮೩ಕ್ಕೆ ಕುಸಿದು ಬದಲಾವಣೆಯ ಸಾಧ್ಯತೆಗಳು ಗೋಚರಿಸಿದ್ದವು. ಕಾಂಗ್ರೆಸ್ ಪಕ್ಷದ ಉಚ್ಛ್ರಾಯದ ಕಾಲದಲ್ಲೂ ಇನ್ನಿತರ ರಾಜಕೀಯ ಪಕ್ಷಗಳು ೧೨೫ರಿಂದ ೨೫೦ರಷ್ಟು ಸೀಟುಗಳನ್ನು ಗೆಲ್ಲುತ್ತಿದ್ದವು.

ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಎಲ್ಲಾ ರೀತಿಯ ಗಂಭೀರ ಅಭಿಪ್ರಾಯಗಳಿಗೂ ಬೆಲೆ ನೀಡುವ ವಿಶಿಷ್ಟವಾದ ಹಾಗೂ ವಿಭಿನ್ನವಾದ ಮಾರ್ಗಗಳಿವೆ. ಸಂಖ್ಯೆಯ ಆಟದಲ್ಲಿ ಕೊನೆಯ ಸಂಖ್ಯೆ ಏನೆಂಬುದು ಫಲಿತಾಂಶ ಬಂದಾಗಲಷ್ಟೇ ತಿಳಿಯುತ್ತದೆ. ೧೯೪೭ರ ನವೆಂಬರ್ ೧೧ರಂದು ವಿನ್‌ಸ್ಟನ್ ಚರ್ಚಿಲ್ ‘ನಾನಾ ರೀತಿಯ ಪಾಪಗಳು ಹಾಗೂ ಸಂಕಷ್ಟಗಳಿಂದ ಕೂಡಿದ ಈ ಜಗತ್ತಿ ನಲ್ಲಿ ಬೇರೆ ಬೇರೆ ರೀತಿಯ ಸರಕಾರಗಳನ್ನು ಈಗಾಗಲೇ ಪ್ರಯತ್ನಿಸಲಾಗಿದೆ ಮತ್ತು ಮುಂದೆಯೂ ಪ್ರಯತ್ನಿಸಲಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಾಪನೆಯಾಗುವ ಸರಕಾರದಲ್ಲಿ ಎಲ್ಲವೂ ಸರಿಯಿದೆ ಎಂದು ಯಾರೂ ಹೇಳುವುದಿಲ್ಲ. ಹಾಗೆ ನೋಡಿದರೆ ಕಾಲಕಾಲಕ್ಕೆ ಪ್ರಯೋಗಿಸಲಾದ ಬೇರೆ ಬೇರೆ ರೀತಿಯ ಸರಕಾರಗಳ ಪೈಕಿ ಪ್ರಜಾಪ್ರಭುತ್ವ ಅತ್ಯಂತ ಕೆಟ್ಟ ವ್ಯವಸ್ಥೆ…’
ಎಂದು ಹೇಳಿದ್ದರು. ಅವರು ಈ ಹೇಳಿಕೆ ನೀಡಿದ ದಿನಾಂಕಕ್ಕೆ ಮಹತ್ವವಿದೆ.

ಕೇವಲ ಎರಡು ವರ್ಷಗಳ ಹಿಂದೆ ೧೯೪೫ರಲ್ಲಿ ಚರ್ಚಿಲ್ ಬ್ರಿಟನ್ನಿನ ಸಂಸತ್ ಚುನಾವಣೆಯಲ್ಲಿ ಸೋತಿದ್ದರು. ಎರಡನೇ ವಿಶ್ವ ಮಹಾಯುದ್ಧದಲ್ಲಿ ಬ್ರಿಟನ್ ದೇಶ ಚರ್ಚಿಲ್ ನೇತೃತ್ವದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ ಕೆಲವೇ ವಾರಗಳಲ್ಲಿ ಆ ಚುನಾವಣೆ ನಡೆದಿತ್ತು. ೨೦೦೪ರಲ್ಲಿ ಫಲಿತಾಂಶ ಬದಲಾಗುತ್ತದೆ ಎಂಬುದರ ಮೊದಲ ಸುಳಿವು ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ದೇಶದಲ್ಲಿ ಬದಲಾದ ವಾತಾವರಣದಿಂದಾಗಿ
ರಾಜಕೀಯ ಪಂಡಿತರಿಗೆ ಲಭಿಸಿತ್ತು. ನಂತರ -ಲಿತಾಂಶಕ್ಕೆ ಮೂರು ವಾರಗಳಿರುವಾಗ ಷೇರು ಮಾರುಕಟ್ಟೆ ಕುಸಿಯತೊಡಗಿತ್ತು. ಎನ್‌ಡಿಎ ಸರಕಾರ ಸಂಕಷ್ಟದಲ್ಲಿದೆ ಎಂಬುದರ ಮೊದಲ ಸುಳಿವು ಅದಾಗಿತ್ತು. ಮನಮೋಹನ ಸಿಂಗ್ ಸರಕಾರ ರಚಿಸುವವರೆಗೂ ಷೇರು ಮಾರುಕಟ್ಟೆ ಉದ್ವಿಗ್ನ ಸ್ಥಿತಿಯಲ್ಲೇ ಇತ್ತು.

ಮುಂಬೈನ ದುಡ್ಡಿನ ಕುಳಗಳು ಅವರ ಬಾಯಿ ಎಲ್ಲಿದೆಯೋ ಅಲ್ಲೇ ಹಣವನ್ನೂ ಹೂಡಿಕೆ ಮಾಡುತ್ತಾರೆ. ಅವರನ್ನು ನೀವು ನಂಬದಿದ್ದರೂ ಸರಿ, ಆದರೆ ಅವರೇನು ಹೇಳುತ್ತಿದ್ದಾರೆ ಎಂಬುದನ್ನು ಕೇಳಿಸಿಕೊಳ್ಳುವುದರಲ್ಲಿ ಲಾಭವಿದೆ. ಅವರ ಕೈಯಲ್ಲಿ ಸಾವಿರಾರು ಕೋಟಿ ರುಪಾಯಿ ಓಡಾಡುತ್ತದೆ. ಅವರು ಲಾಟರಿಯಲ್ಲಿ ಹಣ ಹೂಡುವುದಿಲ್ಲ. ಈ ಸಲದ ಚುನಾವಣೆಯಲ್ಲಿ ಮೇ ೨೫ರಂದು ಆರನೇ ಹಂತದ ಮತದಾನ ಮುಗಿದ ಮೇಲೆ ಷೇರು ಮಾರುಕಟ್ಟೆ ಏಕ್‌ದಂ ಜಿಗಿದೆದ್ದು ೭೬೦೦೦ ಅಂಕಗಳನ್ನು ದಾಟಿತ್ತು. ಇದು ಭಾರತೀಯ ಷೇರು ಮಾರುಕಟ್ಟೆಯ ಐತಿಹಾಸಿಕ ಗರಿಷ್ಠ. ಅದೇ ದಿನ ಸಂಜೆಯ ಹೊತ್ತಿಗೆ
ಹೂಡಿಕೆದಾರರು ಷೇರು ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದರು. ಏಕೆಂದರೆ ಹಣಕ್ಕೆ ಅಪಾಯ ಕಡಿಮೆಯಾದಾಗಲೇ ಅದು ಉಳಿಯುತ್ತದೆ.

ಇದು ವ್ಯಾಪಾರಿಗಳ ಸಿದ್ಧಾಂತ. ಷೇರು ಮಾರುಕಟ್ಟೆ ಯಾವಾಗಲೂ ಬಹಳ ಎಚ್ಚರಿಕೆಯ ಸಂದೇಶ ನೀಡುತ್ತದೆ. ಈ ಬಾರಿ ಅದರ ಸಂದೇಶ: ‘ಸರಕಾರ ಮರಳಿ ಬರುತ್ತದೆ, ಆದರೆ ಬಹುಮತ ಹೇಗಿರುತ್ತದೆ ಎಂಬುದು ಗೊತ್ತಿಲ್ಲ’. ಐಟಿಐ ಮ್ಯೂಚುವಲ್ ಫಂಡ್‌ನ ಸಿಐಒ ರಾಜೇಶ್ ಭಾಟಿಯಾ ಮೇ ೨೮ರಂದು ‘ಮನಿಕಂಟ್ರೋಲ್’ ಜೊತೆ ಮಾತನಾಡುತ್ತಾ, ‘ಇದೇ ಸರಕಾರ ಮತ್ತೆ ಬರುತ್ತದೆ, ಹಾಗಾಗಿ ಇವೇ ಆರ್ಥಿಕ ನೀತಿಗಳು ಮುಂದುವರೆಯುತ್ತವೆ ಎಂಬ ನಿರೀಕ್ಷೆಯಲ್ಲಿ ಸದ್ಯಕ್ಕಂತೂ ಮಾರುಕಟ್ಟೆ ಯಲ್ಲಿ ತುಂಬಾ ಲವಲವಿಕೆಯಿದೆ’ ಎಂದು ಹೇಳಿದ್ದಾರೆ.

ಇವೆಲ್ಲ ಒಂದೊಂದು ರೀತಿಯ ಅಭಿಪ್ರಾಯಗಳಷ್ಟೆ. ಜೂನ್ ೪ರಂದು ಮತಯಂತ್ರದಿಂದ ಯಾವ ‘ಜಿನಿ’ ಹೊರಗೆ ಬರುತ್ತದೆ ಎಂಬುದರ ಸುಳಿವನ್ನು ಇವು ನೀಡುತ್ತಿವೆ. ಇನ್ನಷ್ಟು ವಿಶ್ಲೇಷಣೆ ಹಾಗೂ ವಿವರಗಳಿಗಾಗಿ ಮುಂದಿನ ಅಂಕಣವನ್ನು ಎದುರುನೋಡಿ. ಅದೇನೇ ಇದ್ದರೂ ದೇಶದಲ್ಲಿ ಒಂದು ಚುನಾವಣೆಯ ಫಲಿತಾಂಶವಂತೂ ಈಗಾಗಲೇ ಪ್ರಕಟವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಈಗಾಗಲೇ ಗೆದ್ದಿದೆ. ಅಲ್ಲಿ ಮತದಾನದ ಪ್ರಮಾಣ ಈ ಸಲ ಶೇ.೫೮.೫ಕ್ಕೆ ಏರಿಕೆಯಾಗಿದೆ. ಇದು ಕಳೆದ ೩೫ ವರ್ಷಗಳಲ್ಲೇ ಗರಿಷ್ಠ.

(ಲೇಖಕರು: ಹಿರಿಯ ಪತ್ರಕರ್ತ)

Leave a Reply

Your email address will not be published. Required fields are marked *