ಪ್ರತಿಸ್ಪಂದನ
ಚಿ.ಉಮಾಶಂಕರ್
‘ವಿದ್ಯುತ್ ಚಾಲಿತ ಬಸ್‌ಗಳ ಹೆಸರಿನಲ್ಲಿ ಸಾರಿಗೆ ನಿಗಮಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ’ ಎಂಬ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ -ಡರೇಷನ್‌ನ ಆರೋಪದಲ್ಲಿ ಯಾವುದೇ ರೀತಿಯ ರಾಗ-ದ್ವೇಷಗಳು ನನಗೆ ಕಾಣಲಿಲ್ಲ. ಏಕೆಂದರೆ, ಕೇಂದ್ರ ಸರಕಾರ ‘ಫೇಮ್-೨’ ಯೋಜನೆ ಯಡಿ ಪ್ರತಿ ಬಸ್‌ಗೆ ನೀಡುತ್ತಿರುವ ೫೦ ಲಕ್ಷ ರು. ಸಬ್ಸಿಡಿಯನ್ನು ತಾನೇ ಪಡೆದುಕೊಳ್ಳುವುದರ ಜತೆಗೆ, ತನ್ನ ಮೂಲ ಬಂಡವಾಳವನ್ನೂ ಸೇರಿಸಿ ವಿದ್ಯುತ್ ಚಾಲಿತ ಬಸ್ ಖರೀದಿಸುವುದರ ಬದಲು ಖಾಸಗಿಯವರ ಪಾಲಾಗಲು ಸಹಕಾರ ನೀಡುತ್ತಿರುವುದನ್ನು ನೋಡಿದರೆ, ಬಿಎಸ್‌ಎನ್‌ಎಲ್ ತನ್ನ ಕಂಬಗಳನ್ನು ರಿಲಯೆನ್ಸ್‌ನ ಅಂಬಾನಿಗೆ ನೀಡಿ ತಾನು ಕಣ್ಣು ಮುಚ್ಚಿದ ನಿದರ್ಶನ ನೆನಪಿಗೆ ಬರುತ್ತದೆ.
ಕೆಎಸ್‌ಆರ್‌ಟಿಸಿಯು ಸರಕಾರದ ಅನುದಾನಿತ ಸಂಸ್ಥೆಯಾಗಿದ್ದರೂ, ಈಗಾಗಲೇ ಖಾಸಗಿ ಬಸ್ ಏಜೆಂಟ್‌ಗಳ ಸಮ್ಮೋಹನಕ್ಕೆ ಒಳಗಾದಂತೆ ಕಾಣುತ್ತಿದೆ.
ತಮಗೆ ದಯಾಮರಣವನ್ನು ದಯಪಾಲಿಸಿ ಎಂದು ಸರಕಾರವನ್ನು ಕೋರಿದ್ದ ಖಾಸಗಿ ಬಸ್ ಮಾಲೀಕರಿಗೆ ಅನುಕೂಲ ಮಾಡಿಕೊಡುವ ದೂರದೃಷ್ಟಿ ಯಿಂದ, ಈಗಾಗಲೇ ಅಸ್ತಿತ್ವದಲ್ಲಿರುವ ಹತ್ತು ಹಲವು ಪ್ರಖ್ಯಾತ ಖಾಸಗಿ ಬಸ್ ಏಜೆಂಟ್ ಗಳಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳ ಆಸನ ಕಾಯ್ದಿರಿಸಲು ಅನುಮತಿ ನೀಡಲಾಗಿದೆ.
ಇದು, ನಾವು ಪ್ರೀತಿಯಿಂದ ಸಾಕಿದ ಪ್ರಾಣಿಗಳನ್ನು ರಕ್ಷಣೆ ಮಾಡುವುದಕ್ಕೆ ಕಟುಕನ ಕೈಗೆ ನೀಡಿದಂತೆ ಆಗಲಿಲ್ಲವೇ? ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವಾಗಲೀ ಅಥವಾ ಬೆಂಗಳೂರು ಸಾರಿಗೆ ನಿಗಮವಾಗಲೀ, ಆಯಾ ಕಾಲಘಟ್ಟದ ಸರಕಾರದ ನಿಯಮಗಳನ್ನು ಗಾಳಿಗೆ ತೂರದೆ, ಖಾಸಗಿ ಸಾರಿಗೆ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳಬೇಕು; ಸಾರ್ವಜನಿಕ ಸಾರಿಗೆ ಎಂದರೆ ಅದು ಜನರ ಅನುಕೂಲ ಕ್ಕಾಗಿ ಇರಬೇಕೇ ಹೊರತು, ಅವರನ್ನು ಪಕ್ಕಕ್ಕೆ ಸರಿಸಿ ಖಾಸಗಿ ಬಸ್‌ಗಳ ಕಬಂಧ ಬಾಹುಗಳ ಒಳಗೆ ಸಿಲುಕಲು ಹಾತೊರೆಯಬಾರದು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ ಮಾಡಿರುವ ಆಪಾದನೆ ನ್ಯಾಯಯುತವಾಗಿದೆ. ರಾಜ್ಯ ರಸ್ತೆ ಸಾರಿಗೆ ನಿಗಮವು ಕೇಂದ್ರದ
ಸಬ್ಸಿಡಿಗಾಗಿ ಕಾಯದಂತಾಗಲಿ ಅಥವಾ ತಾನೇ ಬಂಡವಾಳ ಹೂಡಿ ಕೇಂದ್ರದ ಸಬ್ಸಿಡಿ ಪಡೆದುಕೊಳ್ಳುವತ್ತ ಯೋಜನೆ ರೂಪಿಸಲಿ ಮತ್ತು ಸಾರಿಗೆ ನಿಗಮದ ಬಸ್ಸುಗಳ ಟಿಕೆಟ್ ಅನ್ನು ಖಾಸಗಿ ಬಸ್ ಮಾಲೀಕರು ಅಥವಾ ಏಜೆಂಟರು ಬುಕ್ ಮಾಡುವುದನ್ನು ರದ್ದುಪಡಿಸಲಿ. ತನ್ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದಿಸೆಯಲ್ಲಿ ಯೋಚಿಸುತ್ತಾ, ಲಾಭದಾಯಕ ಉದ್ದಿಮೆಯಾಗುವತ್ತ ಮುನ್ನಡೆಯಲಿ. ಇಲ್ಲದಿದ್ದರೆ ಎಚ್‌ಎಂಟಿ, ಎನ್‌ಜಿ ಇಎಫ್, ಫಿ ಬೋರ್ಡ್, ಐಟಿಐ ಮತ್ತು ಬಿಎಸ್‌ಎನ್‌ಎಲ್‌ಗೆ ಒದಗಿದ ಗತಿಯೇ ಸಾರಿಗೆ ನಿಗಮಕ್ಕೂ ಒದಗುವುದನ್ನು ಎದುರುನೋಡುವ ಕಾಲ ದೂರ ಉಳಿಯುವುದಿಲ್ಲ.
(ಲೇಖಕರು ಹವ್ಯಾಸಿ ಬರಹಗಾರರು)