ಶಶಾಂಕಣ
ಶಶಿಧರ ಹಾಲಾಡಿ
ಕಳೆದ ಶನಿವಾರ ನಮ್ಮನ್ನು ಅಗಲಿದ ಹಿರಿಯ ಕವಿಯನ್ನು ನಮ್ಮ ದೃಶ್ಯ ಮಾಧ್ಯಮಗಳು ಅವಗಣನೆ ಮಾಡಿದ ರೀತಿಯನ್ನು ನೀವೆಲ್ಲ ಗಮನಿಸಿರಬಹುದು. ಭಾವಗೀತೆ, ನವ್ಯ ಕವನ, ಮಕ್ಕಳಗೀತೆ, ಪ್ರಮುಖ ಅನುವಾದ, ವಿಮರ್ಶೆ ಹೀಗೆ ಸಾಹಿತ್ಯದ ಹಲವು
ಪ್ರಾಕಾರಗಳಲ್ಲಿ ಸಾಕಷ್ಟು ಕೊಡುಗೆ ನೀಡಿದ್ದ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ (ಎನ್‌ಎಸ್‌ಎಲ್) ಅವರ ಅಗಲುವಿಕೆಯು, ದೃಶ್ಯ ಮಾಧ್ಯಮಗಳಿಗೆ ಒಂದು ಪುಟಾಣಿ ಸುದ್ದಿಯಷ್ಟೂ ಅರ್ಹತೆಯೋಗ್ಯ ವೆನಿಸಲಿಲ್ಲವೆ! ಏಕೆ?
ಇಂತಹ ಸಾಂಸ್ಕೃತಿಕ ಬರಡುತನದ, ಸ್ಪಂದನಾರಹಿತ ವಾತಾವರಣದಲ್ಲಿ ನಾವಿಂದು ಬದುಕುತ್ತಿದ್ದೇವೆಯೆ? ಹಣ ತರುವ, ಜನಕ್ಕೆ ಅಗ್ಗದ ರಂಜನೆ ನೀಡುವ ಸುದ್ದಿ ಮಾತ್ರ ಸುದ್ದಿಯೆ? ಎನ್‌ಎಸ್‌ಎಲ್ ಎಂದರೆ ಏನೂ ಅಲ್ಲ ಎಂದು ತೋರಿಸಿಬಿಟ್ಟಿತಲ್ಲ ನಮ್ಮ ದೃಶ್ಯ ಮಾಧ್ಯಮ! ಅದೇ ದಿನ ವಾಟ್ಸಾಪ್‌ನಲ್ಲಿ ಹರಿದಾಡಿದ ಒಂದು ವಿಚಾರ ಸಹ ಮನನೋಯಿಸಿತು.
ಕಮಲಾಕರ ಎಂಬುವವರು ಹಂಚಿಕೊಂಡ ಆ ಅನಿಸಿಕೆ, ಸಾಹಿತ್ಯ ಪ್ರೇಮಿಗಳಿಗೆ ತುಸು ಹೃದಯವಿದ್ರಾವಕ. ಬೆಳಿಗ್ಗೆ 11.30 ಬನಶಂಕರಿಯ ಚಿತಾಗಾರಕ್ಕೆ ಅವರು ಹೋದಾಗ, ಅಲ್ಲಿದ್ದದ್ದು ಕೇವಲ 4-6 ಜನ ಮಾತ್ರ. ಅಗಲಿದ ಆ ಹಿರಿಯ ಕವಿಗೆ ಗೌರವ ಸಲ್ಲಿಸಲು ಇನ್ನಷ್ಟು ಮಂದಿ ಸೇರಬಹುದೆಂಬ ಅವರ ನಿರೀಕ್ಷೆ ಹುಸಿಯಾಗಿತ್ತು. ಶಿವಮೊಗ್ಗ ಮೂಲದವರಾದ ಎನ್‌ಎಸ್‌ಎಲ್
ಅವರಿಗೆ ಮುಖ್ಯಮಂತ್ರಿಗಳ ಪರವಾಗಿ ಸರಕಾರದ ಅಂಗಸಂಸ್ಥೆಗಳು ನಮನ ಸಲ್ಲಿಸಿ, ಗೌರವ ಸೂಚಿಸಿ, ಅವು ದೃಶ್ಯ ಮಾಧ್ಯಮ ಗಳಲ್ಲಿ ಬರಬೇಕಿತ್ತೆಂದು ಅವರ ಇಂಗಿತ. ನಿಜ, ತಪ್ಪಿಲ್ಲ. ಕಳೆದ ಆರು ದಶಕಗಳಿಂದ ನಿರಂತರವಾಗಿ ಸಾಹಿತ್ಯ ಕೃಷಿ ಮಾಡುತ್ತಲೇ ಇದ್ದ, 2020ರಷ್ಟು ಈಚೆಗೆ ತಮ್ಮ ಮೌಲಿಕ ಅನುಭವಗಳನ್ನು ದಾಖಲಿಸಿ ಆತ್ಮಚರಿತ್ರೆ ಬರೆದ, ವಿದೇಶಗಳಲ್ಲೂ ಸಾಹಿತ್ಯದ ಕುರಿತು ಹಲವು ಭಾಷಣಗಳನ್ನು ಮಾಡಿದ್ದ ಎನ್‌ಎಸ್‌ಎಲ್, ನಿಜವಾಗಿಯೂ ಅಂತಹದೊಂದು ಗೌರವಕ್ಕೆ ಅರ್ಹರು.
ಅಗಲಿದ ಆ ಹಿರಿಯ ಕವಿಗೆ, ಕಳೆದ ಶನಿವಾರದಂದು ಸೂಕ್ತ ಗೌರವ ನೀಡದೇ, ಸರಕಾರದ ಅಂಗಸಂಸ್ಥೆಗಳು ಮತ್ತು ಮುಖ್ಯವಾಗಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಒಂದು ದೊಡ್ಡ ಅಪಚಾರವನ್ನೇ ಮಾಡಿದೆ. ನೂರಾರು ಭಾವಗೀತೆಗಳನ್ನು ಬರೆದ, ಒಂಬತ್ತು ನವ್ಯ ಕವನ ಸಂಕಲವನ್ನು ಹೊರತಂದಿರುವ, ಷೇಕ್ಸ್‌ಪಿಯರ್, ಯೇಟ್ಸ್ ಮತ್ತು ಟಿ.ಎಸ್.ಎಲಿಯಟ್‌ರ ಕಾವ್ಯವನ್ನು
ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ ಎನ್‌ಎಸ್‌ಎಲ್ ಅವರ ಸಾಹಿತ್ಯ ಕೃಷಿ ಬಹು ಆಯಾಮದ್ದು. ಅವರ ಕಾವ್ಯಾನುವಾದವು ‘ಕನ್ನಡಕ್ಕೆ ಒಂದು ವರದಾನ’ ಎಂದು ವಿಮರ್ಶಕ ಜಿ.ಎಸ್.ಅಮೂರ ಹೇಳಿದ್ದಾರೆ.
ಯೇಟ್ಸ್, ಎಲಿಯಟ್ ಅವರ ಕಾವ್ಯದ ಅನುವಾದವು ಬೆಲೆ ಕಟ್ಟಲಾಗದ ಕೊಡುಗೆ ಎಂದು ಹಲವು ವಿಮರ್ಶಕರು ಹೇಳಿದ್ದಾರೆ. ಆದರೂ ಅವರಿಗೆ ದೊರಕಿದ ಪ್ರಶಸ್ತಿಗಳನ್ನು ಕಂಡಾಗ, ಒಂದು ಕೊರತೆಯ, ಕಸಿವಿಸಿಯ ಭಾವನೆ ಮೂಡುತ್ತದೆ. ರಾಜ್ಯ ಸಾಹಿತ್ಯ ಅಕಾಡೆಮಿಯು ಅವರನ್ನು ಹಲವು ಬಾರಿ ಪುರಸ್ಕರಿಸಿದೆ. ಇವರ ಮಕ್ಕಳ ಕವನಗಳನ್ನು ಗುರುತಿಸಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಿದೆ.
ಆದರೆ, ಕಾವ್ಯದ ಅನುವಾದ ಕ್ಷೇತ್ರಕ್ಕೆ ಅವರ ನೀಡಿದ ಕೊಡುಗೆಯನ್ನು ಮತ್ತು ಭಾವಗೀತೆಗಳ ಕ್ಷೇತ್ರದಲ್ಲಿ ಅವರು ನಡೆಸಿದ ವಿಪುಲ ಮೌಲಿಕ ಕೃಷಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಗುರುತಿಸಬೇಕಿತ್ತು. ಈ ವಿಚಾರ ವನ್ನು ಚರ್ಚಿಸಿದಾಗ, ಕನ್ನಡದ ಹಲವು
ವಿದ್ವಾಂಸರು, ಸಾಹಿತಿಗಳು ಸಹ ಇದೇ ಅಭಿಪ್ರಾಯವನ್ನು ನನ್ನಲ್ಲಿ ವ್ಯಕ್ತಪಡಿಸಿದರು. ಹಾಗಿದ್ದಲ್ಲಿ, ಕನ್ನಡ ಸಾಹಿತ್ಯ ಲೋಕಕ್ಕೆ ಎನ್‌ಎಸ್‌ಎಲ್ ಅವರ ಕೊಡುಗೆಯನ್ನು ನಮ್ಮ ಸಾರಸ್ವತ ಲೋಕ ಸೂಕ್ತವಾಗಿ ಗುರುತಿಸದೇ ಉಳಿದದ್ದಾದರೂ ಏಕೆ? ಇದೇ ರೀತಿ ಯೋಚಿಸುತ್ತಾ ಹೋದಾಗ, ೨೦೨೦ರಲ್ಲೇ ನಡೆದ ಒಂದು ವಿದ್ಯಮಾನ ಗಮನಕ್ಕೆ ಬರುತ್ತಿದೆ.
‘ನಿಲುವು ನ್ನಡಿಯ ಮುಂದೆ’ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಸುದೀರ್ಘ ಆತ್ಮಕಥೆ. ಅದು ಕಳೆದ ವರ್ಷ ಪ್ರಕಟಗೊಂಡಿದೆ. 356 ಪುಟಗಳ ಈ ಹೊತ್ತಗೆಯಲ್ಲಿ ಹಲವು ಛಾಯಾಚಿತ್ರಗಳೂ ಅಡಕಗೊಂಡಿದ್ದು, ಬೆಂಗಳೂರಿನ ಅಂಕಿತ ಪುಸ್ತಕ ಇದನ್ನು ಪ್ರಕಟಿಸಿದೆ. ಆತ್ಮೀಯವಾಗಿ ಓದಿಸಿಕೊಳ್ಳುವ ಈ ಕೃತಿಯಲ್ಲಿ, ಕನ್ನಡ ಸಾಹಿತ್ಯ ಲೋಕದ ಹಲವು ಒಳನೋಟಗಳು, ವಿದ್ಯಮಾನಗಳು ಸೇರಿವೆ. ಜಿಎಸ್ ಎಸ್, ಅನಂತಮೂರ್ತಿ, ಶಾಮರಾಯ, ರಾಮಚಂದ್ರ ಶರ್ಮ, ಎಚ್‌ಎಸ್‌ವಿ, ಗೊರೂರು, ಕೆಎಸ್‌ನ, ಅಶ್ವಥ್ ಶಿವಮೊಗ್ಗ ಸುಬ್ಬಣ್ಣ ಮೊದಲಾದವ ರೊಂದಿಗೆ ಎನ್‌ಎಸ್ ಎಲ್ ನಡೆಸಿದ ಒಡನಾಟದ ವಿವರಗಳಿವೆ.
ಬಡತನ ದಿಂದಾಗಿ ಓದು ನಿಲ್ಲಿಸಬೇಕಾದ ಪ್ರಮೇಯ ಬಂದಾಗ ತಾಯಿ ನೀಡಿದ ಒತ್ತಾಸೆ, ಓದಲು ಸಹಾಯ ಮಾಡಿದವರ
ನೆನಕೆಯ ಜತೆಯಲ್ಲೇ, ಮೈಸೂರಿನಲ್ಲಿ ಅವರು ವಾರಾನ್ನ ಮಾಡಿದ ಕಷ್ಟದ ದಿನಗಳ ವಿವರವೂ ಇವೆ. 1980ರ ದಶಕದಲ್ಲಿ ನಡೆದ ಭಾವಗೀತೆಗಳ ‘ಕ್ಯಾಸೆಟ್ ಕ್ರಾಂತಿ’ಯ ಕುರಿತು ಹೃದ್ಯವೆನಿಸುವ, ವಿವರವಾದ, ತುಸು ಹೆಚ್ಚೇ ಎನಿಸುವ ಅನುಭವಗಳ ಸರಮಾಲೆಯೇ ಇದೆ. ನವ್ಯದ ಪ್ರಭಾವದಿಂದಾಗಿ ಜನರಿಂದ ದೂರಾಗಿದ್ದ ಗೀತೆಗಳನ್ನು ಜನರ ಬಳಿಗೆ ಕೊಂಡೊಯ್ಯಲು ಎನ್‌ಎಸ್‌ಎಲ್ ಅವರು ತೊಡಗಿಸಿ ಕೊಂಡ ರೀತಿ, ಪಟ್ಟ ಶ್ರಮದ ವಿವರಗಳು ಇಲ್ಲಿ ದಾಖಲಾಗಿವೆ.
ಹಲವು ದೃಷ್ಟಿಗಳಲ್ಲಿ ಈ ಆತ್ಮಚರಿತ್ರೆಯುವ ಕನ್ನಡದ ಒಂದು ಪ್ರಮುಖ ಗ್ರಂಥ. ಆದರೆ, ಅದೇನು ಕಾರಣವೋ ಕಾಣೆ, 2020ರ ಪ್ರಮುಖ ಪುಸ್ತಕಗಳಲ್ಲಿ ಇದೂ ಒಂದು ಎಂಬ ಪ್ರಚಾರವು ಈ ಗ್ರಂಥಕ್ಕೆ ಸಿಗಲೇ ಇಲ್ಲ. ಲಾಕ್ ಡೌನ್ ವರ್ಷ ಎಂದೇ ದಾಖಲಾಗಿರುವ 2020ರಲ್ಲಿ ಪ್ರಕಟಗೊಂಡ ನಾನಾ ಪ್ರಾಕಾರಗಳ ಗ್ರಂಥಗಳು ಸಾಕಷ್ಟು ಪ್ರಚಾರ ಪಡೆದು, ಹೆಚ್ಚು ಜನರ ಬಳಿಗೆ ತಲುಪಿದವು. ಆದರೆ, ‘ನಿಲುವುಗನ್ನಡಿಯ ಮುಂದೆ’ ಆತ್ಮಚರಿತ್ರೆಯು ಸೂಕ್ತ ಪ್ರಚಾರ ಪಡೆಯದೇ, ಹೆಚ್ಚಿನ ಸಾಹಿತ್ಯಾಭಿಮಾನಿಗಳ
ಕೈಸೇರಲಿಲ್ಲವೆಂದೇ ಹೇಳಬಹುದು.
ಏಕಿರಬಹುದು? ಎನ್‌ಎಸ್‌ಎಲ್ ಅವರ ‘ನಿಲುವು ಗನ್ನಡಿಯ ಮುಂದೆ’ಯಲ್ಲಿ ಅವರು ತೋಡಿಕೊಂಡ ಮನದಾಳದ ಮಾತು ಗಳನ್ನು ಓದುತ್ತಾ ಹೋದರೆ, ಈ ಪ್ರಶ್ನೆಗೆ ಒಂದು ಹಂತದ ಉತ್ತರ ದೊರೆಯುತ್ತದೆ. ಅವರೇ ಅಲ್ಲಲ್ಲಿ ಬರೆದುಕೊಂಡಂತೆ, ತಮ್ಮ ಮನಸ್ಸಿಗೆ ಸರಿ ಎನಿಸಿದ ವಿಚಾರವನ್ನು ಅವರು ತುಸು ನೇರವಾಗಿ, ನಿಷ್ಠುರವಾಗಿ ವ್ಯಕ್ತಪಡಿಸುವ ಗುಣ ಎನ್‌ಎಸ್‌ಎಲ್ ಅವರದ್ದು. ತಮ್ಮ ಸನ್ಮಿತ್ರರೊಂದಿಗೆ, ಹಿರಿಯ ರೊಂದಿಗೂ ಸಹ, ನೇರವಾಗಿ ನಡೆದುಕೊಂಡ ಕೆಲವು ಉದಾಹರಣೆಗಳು ಇಲ್ಲಿ ದಾಖಲಾಗಿವೆ.
ಈ ರೀತಿ ರಾಜಿ ಮಾಡಿಕೊಳ್ಳದ ಗುಣವು, ಸಾಹಿತ್ಯಕ ವಲಯದಲ್ಲಿ ಅವರನ್ನು ಅಪ್ರಿಯ ರನ್ನಾಗಿಸಿರಲೇಬೇಕು. ‘ಶಿಶುನಾಶ ಶರೀ- ಸಾಹೇಬರ ಗೀತೆ’ಗಳನ್ನು ಹೆಚ್ಚು ಜನರಿಗೆ ಪರಿಚಯಿಸಿದ ಕೀರ್ತಿ ಎನ್‌ಎಸ್‌ಎಲ್ ಅವರದ್ದು. ಶರೀಫ್ ಸಾಹೇಬರ ಹಾಡುಗಳನ್ನು ಹಾಡುಗಳ ಮೂಲಕ ನಾಡಿನ ಮನೆಮನೆಗೂ ತಲುಪಿಸುವಲ್ಲಿ ಇವರ ಕೊಡುಗೆ ದೊಡ್ಡದು. ಈ ಗೀತೆಗಳನ್ನು ಹೊರತರುವಲ್ಲಿ ಅವರು ಸಣ್ಣಮಟ್ಟದ ಸಾಹಸ ನಡೆಸಿದ್ದು, ಆ ಸಮಯದಲ್ಲಿ ಹಿರಿಯರಾದ ರಂ.ಶ್ರೀ.ಮುಗಳಿಯವರ ಮಾತುಗಳನ್ನು ಒಪ್ಪದೇ, ಮುಂದುವರಿದ ಸ್ವಾರಸ್ಯಕರ ಘಟನೆ ಅವರ ಆತ್ಮಚರಿತ್ರೆಯಲ್ಲಿ ದಾಖಲಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯವು ಬಿ.ಎ. ಕನ್ನಡ ಮೇಜರ್ ವಿದ್ಯಾರ್ಥಿ ಗಳ ಪಠ್ಯ ಪುಸ್ತಕವಾಗಿ ಕೀರ್ತನ ಪ್ರಕಾರದ ಪುಸ್ತಕ ವೊಂದನ್ನು ಸಿದ್ಧಪಡಿಸಿಕೊಡುವಂತೆ ಎನ್‌ಎಸ್ ಲಕ್ಷ್ಮೀ ನಾರಾಯಣ ಭಟ್ಟರನ್ನು ಕೇಳಿಕೊಂಡಿತು. ಶಿಶುನಾಳ ಶರೀಫ ಸಾಹೇಬರ
ಪದಗಳು ಸಹ ಕೀರ್ತನ ಪ್ರಕಾರಕ್ಕೆ ಸೇರುತ್ತವೆ ಎಂದು ನಿರ್ಧರಿಸಿದ ಎನ್‌ಎಸ್‌ಎಲ್, ಶರೀಫ ಹಲವು ಪದ್ಯಗಳನ್ನು ‘ನವಿಲೆ ಬಸಪ್ಪ’ ಎಂಬ ಮೊಸರು ಮಾರುವ ವೃದ್ಧನಿಂದ ಮತ್ತು ಇತರ ಮೂಲಗಳಿಂದ ಸಂಗ್ರಹಿಸಿದರು.
ಪುರಂದರದಾಸರು, ಕನಕದಾಸರು ಮತ್ತು ಇತರ ಕೀರ್ತನಕಾರರ ಕೀರ್ತನೆಗಳ ಜತೆ, ಶಿಶುನಾಳ ಶರೀಫರ ಆರು ತತ್ತ್ವ ಪದಗಳನ್ನು ಸೇರಿಸಿ, ಹಸ್ತಪ್ರತಿ ಸಿದ್ಧಗೊಳಿಸಿ, ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದರು. ಆ ಹಸ್ತಪ್ರತಿ ಯನ್ನು, ವಿಷಯತಜ್ಞರಾದ ರಂ.ಶ್ರೀ.ಮುಗಳಿಯವರಿಗೆ ವಿಶ್ವವಿದ್ಯಾಲಯ ಕಳಿಸಿದಾಗ, ಶಿಶುನಾಳ ಶರೀಫರ ಪದ್ಯ ಗಳನ್ನು ತೆಗೆದುಹಾಕುವಂತೆ ಮುಗಳಿಯವರು
ಸೂಚಿಸಿದರು. ‘ಶರೀಫರು ಮುಸ್ಲಿಂ ಪದ್ಯಕಾರರು, ಹರಿದಾಸರಲ್ಲ’ ಎಂದು ಮುಗಳಿಯವರು ಷರಾ ಬರೆದರು.
ಆದರೆ, ಎನ್‌ಎಸ್‌ಎಲ್ ಇದನ್ನು ಒಪ್ಪಲಿಲ್ಲ, ಆ ಕುರಿತು ರಾಜಿ ಮಾಡಿಕೊಳ್ಳಲು ಸಹ ಸಿದ್ಧರಿರಲಿಲ್ಲ. ‘ಶರೀಫರ ಪದ್ಯಗಳೆಲ್ಲ ಕೀರ್ತನ ಪ್ರಕಾರಕ್ಕೇ ಸೇರುವಂತಹವು. ಶರೀಫರು ಮುಸ್ಲಿಮರಾದರೆ ತಾನೆ ಏನು? ನಮಗೆ ಮುಖ್ಯವಾದದ್ದು ಅವರು ಬರೆದಿರುವ ನೂರಾರು ಕವಿತೆಗಳು, ಕೀರ್ತನೆಗಳು’ (ಪುಟ 113) ಎಂದು ನಿರ್ಧರಿಸಿದ ಎನ್‌ಎಸ್‌ಎಲ್, ಆ ಆರು ಪದ್ಯಗಳನ್ನು ತೆಗೆದುಹಾಕಲು ಸುತರಾಂ ಒಪ್ಪಲಿಲ್ಲ. ಇವರ ಹಠಮಾರಿ ನಿಲುವನ್ನು ಕಂಡು, ವಿಶ್ವವಿದ್ಯಾಲಯದ ಕುಲಪತಿಗಳು ಇವರನ್ನು ಕರೆಸಿದರು.
ರಂ.ಶ್ರೀ.ಮುಗಳಿಯವರಂಥ ಹಿರಿಯ ವಿದ್ವಾಂಸರ ಷರಾಕ್ಕೆ ಬೆಲೆಕೊಡಬೇಕಲ್ಲವೆ ಎಂದು ಕುಲಪತಿಗಳು ಕೇಳಿದಾಗ, ಶರೀಫರ ಪದ್ಯಗಳು ಸಹ ಕೀರ್ತನೆಗಳು, ಆದ್ದರಿಂದ ಅವುಗಳನ್ನು ಉಳಿಸಿಕೊಳ್ಳಲೇಬೇಕೆಂದು ಎನ್‌ಎಸ್‌ಎಲ್ ಕಾರಣ ಸಹಿತ ವಾದಮಾಡಿ, ಕುಲಪತಿಗಳಿಗೆ ಮನವರಿಕೆ ಮಾಡಿಕೊಟ್ಟರು. ಆ ನಂತರ, ಪುರಂದರ, ಕನಕರ ಕೀರ್ತನೆ ಗಳ ಜತೆಯಲ್ಲೇ ಶಿಶುನಾಳ ಶರೀಫ ಸಾಹೇಬರ ಆರು ಕೀರ್ತನೆಗಳನ್ನೂ ಒಳಗೊಂಡ ‘ಕಲ್ಲುಸಕ್ಕರೆ ಕೊಳ್ಳಿರೋ’ ಕೀರ್ತನೆಗಳ ಸಂಕಲನವು ಪ್ರಕಟಗೊಂಡಿತು.
ಎನ್‌ಎಸ್‌ಎಲ್ ಅವರ ಆತ್ಮಚರಿತೆಯಲ್ಲಿ ಇಂತಹ ಕಠಿಣ ನಿಲುವಿನ ಹಲವು ಘಟನೆ ಗಳು ಉದ್ದಕ್ಕೂ ಅಲ್ಲಲ್ಲಿ ಮೂಡಿಬಂದಿದ್ದು, ಅವುಗಳಿಂದಾಗಿ, ಅವರು ಕೆಲವು ಪ್ರಖ್ಯಾತರ ಮುನಿಸಿಗೂ ಕಾರಣವಾಗಿದ್ದರು. ನವ್ಯ ಸಾಹಿತ್ಯದ ಪ್ರಕಾರವು ಜನರಿಂದ ದೂರ ವಾಗಿರುವ ವಿಚಾರವಾಗಿ, ಎನ್‌ಎಸ್‌ಎಲ್ ತಮ್ಮ ಆತ್ಮಚರಿತ್ರೆಯಲ್ಲಿ ಹಲವೆಡೆ ಬರೆದುಕೊಂಡಿದ್ದಾರೆ. ನವ್ಯದ ಕವನಗಳನ್ನು
ಬರೆದರೂ, ನಂತರ ತಾವೇಕೆ ಭಾವಗೀತೆಗಳತ್ತ ಒಲವು ತೋರಿದೆ ಎಂಬುದನ್ನೂ ಬರೆದುಕೊಂಡಿದ್ದಾರೆ.
ಅಂದಿನ ಖ್ಯಾತ ನವ್ಯಕವಿ ರಾಮಚಂದ್ರ ಶರ್ಮ ಮತ್ತು ಎನ್‌ಎಸ್‌ಎಲ್ ನಡುವೆ ಈ ವಿಚಾರವಾಗಿ ಸಾಕಷ್ಟು ವಾದಗಳಾಗಿದ್ದವು. ಎನ್ ಎಸ್‌ಎಲ್ ಅವರು ಭಾವಗೀತೆಗಳ ಪುನರುಜ್ಜೀವನಕ್ಕೆ ಕೈಹಾಕಿದಾಗ, ರಾಮಚಂದ್ರಶರ್ಮರು ಆಕ್ಷೇಪಿಸಿದ್ದರು. (ಪುಟ 154) ಆದರೆ, ಪ್ರಶಸ್ತಿಗಳ ವಿಚಾರ ಬಂದರೆ, ನವ್ಯಶೈಲಿ ಯಲ್ಲಿ ಕವನಗಳನ್ನು ರಚಿಸಿದ ರಾಮಚಂದ್ರ ಶರ್ಮ ಅವರ ‘ಸಪ್ತಪದಿ’ ಕೃತಿಗೆ 1998ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ದೊರಕಿತು.
ಎನ್‌ಎಸ್‌ಎಲ್ ಮಾತ್ರ ಕೊನೆಯ ತನಕವೂ ಆ ಪ್ರಮುಖ ಪ್ರಶಸ್ತಿಯಿಂದ ವಂಚಿತರಾದರು. ನವ್ಯಮಾರ್ಗದಿಂದ ಹೊರಳಿ, ಮನಃ ಪೂರ್ವಕವಾಗಿ ನೂರಾರು ಭಾವಗೀತೆಗಳನ್ನು ಬರೆದು, ಜನರಿಗೆ ತಲುಪಿಸುವ ಮೂಲಕ, ಲಕ್ಷ್ಮೀನಾರಾಯಣ ಭಟ್ಟರು ಜನಮಾನಸದ ಕವಿಯಾಗಿ ರೂಪುಗೊಂಡಿದ್ದಾರೆ, ಅವರ ಕವನಗಳು ಜನರ ನಾಲಿಗೆಯಲ್ಲಿ ಇಂದೂ ನಲಿದಾಡುತ್ತಿವೆ. ಒಂಬತ್ತು ನವ್ಯಕವನ ಸಂಕಲನ, 10 ಭಾವಗೀತೆಗಳ ಸಂಕಲನ, 5 ಮಕ್ಕಳ ಕವನ ಸಂಗ್ರಹಗಳನ್ನು ಹೊರತಂದಿರುವ ಎನ್‌ಎಸ್‌ಎಲ್ ಅವರದ್ದು ವಿಪುಲ ವಾದ ಸಾಹಿತ್ಯಕೃತಿ.
ರಮಣ ಮಹರ್ಷಿಗಳ ಕುರಿತ ಗ್ರಂಥವೂ ಸೇರಿದಂತೆ, ಇತರ ಪ್ರಾಕಾರಗಳಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. 20ನೆಯ
ಶತಮಾನದ ಮೇರುಕವಿ ಟಿ.ಎಸ್.ಎಲಿಯಟ್‌ನ ಕಾವ್ಯವನ್ನು ಕನ್ನಡಕ್ಕೆ ತರುವಂಥ ಮಹಾ ಸಾಹಸವನ್ನು ಎನ್‌ಎಸ್‌ಎಲ್
ಮಾಡಿದ್ದಾರೆ. ಜತೆಗೆ ಷೇಕ್ಸ್‌ಪಿಯರ್ ಮತ್ತು ಯೇಟ್ಸ್‌ನ ಕಾವ್ಯವನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ್ದಾರೆ.
ಕಾಳಿದಾಸನ ‘ಮೃಚ್ಛಕಟಿಕ’ವನ್ನು ಹೃದ್ಯವಾಗಿ ಕನ್ನಡಿಗರಿಗೆ ನೀಡಿದ್ದಾರೆ. ಶಿಶುನಾಳ ಶರೀ- ಸಾಹೇಬರ ಗೀತೆಗಳನ್ನು ಸಂಪಾದಿಸಿ ಕನ್ನಡಿಗರಿಗೆ ತಲುಪಿಸಿದ್ದಾರೆ. ನೂರಾರು ಶಿಶುಪ್ರಾಸ ಗೀತೆಗಳನ್ನು, ಮಕ್ಕಳ ಕವನಗಳನ್ನು ಮತ್ತು ಭಾವಗೀತೆಗಳನ್ನು ರಚಿಸಿ, ಕ್ಯಾಸೆಟ್‌ಗಳ ಮೂಲಕ ಕನ್ನಡನಾಡಿನ ಹಳ್ಳಿ ಹಳ್ಳಿಗಳಿಗೆ ತಲುಪಿಸಿದ್ದಾರೆ. ಅವರ ಅಮೆರಿಕ ಪ್ರವಾಸಗಳ ಸಮಯದಲ್ಲಿ, ಅಲ್ಲೆಲ್ಲಾ ಸಾಹಿತ್ಯದ ಕುರಿತಾದ ಉಪನ್ಯಾಸ ನೀಡಿದ್ದರ ಜತೆಯಲ್ಲೇ, ನೂರಾರು ಭಾವಗೀತೆಗಳ ಕ್ಯಾಸೆಟ್‌ಗಳನ್ನು ಅಮೆರಿಕದ ಕನ್ನಡಿಗರಿಗೆ
ತಲುಪಿಸಿದ್ದಾರೆ. ಅಂದು ಅಂತರ್ಜಾಲ ಇರಲಿಲ್ಲ, ಮೊಬೈಲ್ ಇರಲಿಲ್ಲ, ವಾಟ್ಸಾಪ್ ಇರಲಿಲ್ಲ.
ಆ ದಿನಗಳಲ್ಲಿ, ಅಮೆರಿಕದಂಥ ದೂರದ ನಾಡಿನಲ್ಲಿ ಕನ್ನಡದ ಗೀತೆಗಳ ಕಂಪನ್ನು ಹರಡಿದ ಕೀರ್ತಿ, ಸತ್ಕಾರ್ಯ ಎನ್‌ಎಸ್‌ಎಲ್
ಅವರದ್ದು. ಕನ್ನಡದ ಮೊದಮೊದಲ ಭಾವಗೀತೆ ಕ್ಯಾಸೆಟ್ ಗಳಲ್ಲಿ ಒಂದಾದ ‘ಭಾವಸಂಗಮ’ ಕ್ಯಾಸೆಟ್‌ಗಾಗಿ ತಮ್ಮ ಕೆಲವು ಭಾವ ಗೀತೆಗಳ ಜತೆಯಲ್ಲೇ, ಕುವೆಂಪು, ಕೆಎಸ್‌ನ ಮೊದಲಾದ ಕವಿಗಳ ಹಲವು ಗೀತೆಗಳನ್ನು ಕ್ಯಾಸೆಟ್‌ನಲ್ಲಿ ಅಳವಡಿಸಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಗೀತೆಗಳಿಗೆ ಸ್ವರಪ್ರಸ್ತಾರ ಹಾಕಿಸಿ, ಅಶ್ವಥ್, ಶಿವಮೊಗ್ಗ ಸುಬ್ಬಣ್ಣ, ರತ್ನಮಾಲಾ ಪ್ರಕಾಶ್, ಮಾಲತಿ, ಸುಲೋಚನಾ ಮೊದಲಾದ ಗಾಯಕರ ಮೂಲಕ ಹಾಡಿಸಿ, ರೆಕಾರ್ಡ್ ಮಾಡಿಸುವಲ್ಲಿ ಅವರಿಗೆ ಅದೆಷ್ಟು ಆಸ್ಥೆಯೆಂದರೆ, ಅನಿವಾರ್ಯ ಎನಿಸಿದಾಗ, ತಮ್ಮ ಅವರ ಮನೆಯನ್ನೇ ಸ್ಟುಡಿಯೋ ವಾಗಿ ಪರಿವರ್ತಿಸಿ, ರೆಕಾರ್ಡಿಂಗ್ ಮಾಡಿಸಿದ್ದರು!
ಎನ್‌ಎಸ್‌ಎಲ್ ಅವರ ಕ್ಯಾಸೆಟ್ ಪ್ರೇಮ ಯಾವ ಮಟ್ಟ ತಲುಪಿತೆಂದರೆ, ಅವರನ್ನು ‘ಕ್ಯಾಸೆಟ್ ಕವಿ’ ಎಂದು, ತುಸು ಅಭಿಮಾನದಿಂದ, ತುಸು ವ್ಯಂಗ್ಯವಾಗಿಯೂ ಕರೆಯುವ ಅಭ್ಯಾಸ ಬೆಳೆದಿತ್ತು. ‘ಹೊರಳುದಾರಿಯಲ್ಲಿ ಕಾವ್ಯ’ ಎಂಬ ವಿಮರ್ಶಾ ಗ್ರಂಥ ರಚಿಸಿ, ನೂರಾರು ನವ್ಯ ಕವನ ಮತ್ತು ಭಾವಗೀತೆಗಳನ್ನು ಬರೆದು, ಷೇಕ್ಸ್‌ಪಿಯರ್, ಯೇಟ್ಸ್, ಎಲಿಯಟ್ ಮೊದಲಾದವರ ಪ್ರಮುಖ ಇಂಗ್ಲಿಷ್ ಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿದ ಎನ್‌ಎಸ್‌ಲಕ್ಷ್ಮೀನಾರಾಯಣ ಭಟ್ಟ ಅವರು, ಕ್ಯಾಸೆಟ್ ಮಾಡಿಸಲು ಹೆಚ್ಚಿನ ಆಸಕ್ತಿ ತೋರಿದ್ದೇ ಅವರ ತಪ್ಪಾಯಿತೆ? ಅಥವಾ ನವ್ಯಕಾವ್ಯದ ಕೊರತೆಗಳನ್ನು ಬಹಿರಂಗಗೊಳಿಸಿ, ಭಾವಗೀತೆಗಳನ್ನು ಜನಪ್ರಿಯಗೊಳಿಸಲು ಯತ್ನಿಸಿದ್ದು ತಪ್ಪು ಎಂದು ಸಾಹಿತ್ಯಲೋಕ ನಿರ್ಧರಿಸಿತೆ?
ಅಥವಾ ಅವರ ನೇರ ಮಾತೇ, ಅಪ್ರಿಯ ಸತ್ಯ ಎನಿಸಿತೆ? ಎನ್ ಎಸ್‌ಎಲ್ ನಮ್ಮನ್ನು ಅಗಲಿದ ದಿನ ದೃಶ್ಯ ಮಾಧ್ಯಮಗಳು ಮತ್ತು ಸರಕಾರದ ಕೆಲವು ಅಂಗಸಂಸ್ಥೆಗಳು ಅವರನ್ನು ಅವಗಣನೆ ಮಾಡಿದ ರೀತಿಯನ್ನು ಕಂಡು ಇಂತಹದೊಂದು ಭಾವನೆ ಮೂಡಿತು. ಅದೇನೇ ಇದ್ದರೂ, ಎನ್‌ಎಸ್ ಲಕ್ಷ್ಮೀನಾರಾಯಣ ಭಟ್ಟರು ಇಂದು ಜನಮಾನಸದ ಕವಿ, ಮಕ್ಕಳ ಪ್ರೀತಿಯ ‘ಭಟ್ಟು ಮಾಮ’. ಮುಂದಿನ ದಿನಗಳಲ್ಲಾದರೂ ಅವರನ್ನು, ಅವರ ಕೊಡುಗೆಯನ್ನು ನಾವು ಸೂಕ್ತವಾಗಿ ನೆನಪಿಸಿಕೊಳ್ಳೋಣ, ಆ ಮೂಲಕ ಅವರಿಗೆ ಸಲ್ಲಬೇಕಾದ ಗೌರವ ತೋರೋಣ.