Sunday, 15th December 2024

ಎಲಾನ್ ಮಸ್ಕ್‌ನ ಖರ್ಚಿಲ್ಲದೆ ಬ್ರ‍್ಯಾಂಡಿಂಗ್ ಮತ್ತು ಪ್ರದೀಪ್ ಈಶ್ವರ್‌ !

ಶಿಶಿರ ಕಾಲ

shishirh@gmail.com

೨೦೧೯. ೨೦೧೯. ಅದು ಟೆಸ್ಲಾ ಕಂಪನಿಯ ಹೊಸ ಕಾರಿನ ಅನಾವರಣದ ಕಾರ್ಯಕ್ರಮವಾಗಿತ್ತು. ಸಾವಿರಾರು ಮಂದಿ ನೆರೆದಿದ್ದರು. ಹೆಚ್ಚಿನವರು
ಪತ್ರಿಕೆ, ಟಿವಿ ವಾಹಿನಿಗಳ ಪತ್ರಕರ್ತರು ಮತ್ತು ಒಂದಿಷ್ಟು ಮಂದಿ ಸೋಷಿಯಲ್ ಮೀಡಿಯಾ ಪ್ರಭಾವಿ ಗಳು, ಟೆಕ್ ತಜ್ಞರು ಇತ್ಯಾದಿ. ನೂರಾರು ಕ್ಯಾಮರಾಗಳು ಈ ಕಾರ್ಯಕ್ರಮವನ್ನು ಟಿವಿ, ಯೂಟ್ಯೂಬ್ ಚಾನಲ್, ಸೋಷಿಯಲ್ ಮೀಡಿಯಾ ಅಲ್ಲೆಲ್ಲ ಲೈವ್ ಬಿತ್ತರಿಸುತ್ತಿದ್ದವು.

ಹೇಳಿ ಕೇಳಿ ಎಲಾನ್ ಮಸ್ಕ್ ಕಂಪನಿಯ ಕಾರು, ಖುದ್ದು ಅವನೇ ಬಂದು ವಿವರವನ್ನೆಲ್ಲ ಹಂಚಿಕೊಳ್ಳುವ ವೇದಿಕೆ. ಸಹಜವಾಗಿ ಟೆಸ್ಲಾ ಕಂಪನಿಯ ಷೇರುದಾರರಿಂದ ಹಿಡಿದು ಎಲ್ಲರಲ್ಲೂ ಅಪಾರ ಕುತೂಹಲ. ಕ್ಯಾಲಿಫೋರ್ನಿಯಾದ ಕಂಪನಿಗಳು ಬೃಹತ್ ವೇದಿಕೆಯಲ್ಲಿ ಪತ್ರಕರ್ತರನ್ನೆಲ್ಲ ಸೇರಿಸಿ, ಮನರಂಜನಾ ಕಾರ್ಯಕ್ರಮದಂತೆ ತಮ್ಮ ಕಂಪನಿಯ ಉತ್ಪನ್ನವನ್ನು ಬಿಡುಗಡೆ ಮಾಡುವುದು ಸಾಮಾನ್ಯ. ಎಲಾನ್ ಮಸ್ಕ್ ಬಿಡುಗಡೆ ಮಾಡುತ್ತಿದ್ದ ಕಾರು ಸಾಮಾನ್ಯದ್ದಲ್ಲ. ಇಲೆಕ್ಟ್ರಿಕ್ ಮಿನಿ-ಟ್ರಕ್. ಅದರ ಹೆಸರು ಸೈಬರ್ ಟ್ರಕ್. ಅಲ್ಲಿಯವರೆಗೆ ಇದರ ಹೆಸರನ್ನು, ಹಿರಿಮೆ ಯನ್ನು ಎಲಾನ್ ಮಸ್ಕ್‌ನ ಬಾಯಲ್ಲಿ ಕೇಳಿದ್ದು ಮಾತ್ರ.

ಯಾರೂ ಈ ಮಿನಿ-ಟ್ರಕ್ಕನ್ನು ಈ ಹಿಂದೆ ನೋಡಿರ ಲಿಲ್ಲ. ಅದಾಗಲೇ ವಿದ್ಯುತ್ ಚಾಲಿತ ಕಾರಿನಿಂದ ಜನಪ್ರಿಯ ವಾಗಿದ್ದ ಕಂಪನಿ ಈ ಮಿನಿ-ಟ್ರಕ್ ಬಿಡುಗಡೆ ಮಾಡುತ್ತದಂತೆ ಎಂಬ ಸುದ್ದಿ ಟೆಕ್ ಮತ್ತು ವಾಹನ ಪ್ರಿಯರಲ್ಲಿ ಒಂದಿಷ್ಟು ಸಹಜ ಕುತೂಹಲ ಹುಟ್ಟಿಸಿತ್ತು. ವೇದಿಕೆಯ ಮೇಲೆಯೇ ಸೈಬರ್ ಟ್ರಕ್ ತಂದು ನಿಲ್ಲಿಸಿ ಎಲ್ಲರಿಗೂ ಮೊದಲ ದರ್ಶನ ಮಾಡಿಸಲಾಯಿತು. ಎಲಾನ್ ಮಸ್ಕ್ ಕಾರನ್ನು ಅನಾವರಣ ಮಾಡಿ ಅದರ ಗುಣಗಾನದಲ್ಲಿ ತೊಡಗಿದ. ಟೆಸ್ಲಾ ಕಂಪನಿಯ ಉಳಿದ ಕಾರು ಅಷ್ಟೇನೂ ಮಾರಾಟವಾಗುತ್ತಿರದ ಸಮಯ ಅದು. ಅವರ ಕಾರು ನಿರೀಕ್ಷೆಯಷ್ಟು ಮಾರಾಟವಾಗುತ್ತಿರಲಿಲ್ಲ.

ಇದರಿಂದಾಗಿ ಷೇರುದಾರರ ಸೆಂಟಿಮೆಂಟ್ ಕೂಡ ಋಣಾತ್ಮಕವಾಗಿತ್ತು. ಎಲಾನ್ ಮಸ್ಕ್ ತನ್ನಲ್ಲಿದ್ದ ಬಹುತೇಕ ಹಣವನ್ನು ಟೆಸ್ಲಾ ಕಂಪನಿಯಲ್ಲಿ
ತೊಡಗಿಸಿದ್ದ. ಹೀಗಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮ, ಸೈಬರ್ ಟ್ರಕ್ ಬಿಡುಗಡೆ ಯಶಸ್ವಿಯಾಗಲೇ ಬೇಕಿತ್ತು. ಅಷ್ಟೇ ಅಲ್ಲ, ಮಾರನೇ ದಿನವೇ ಎಲ್ಲೆಡೆ ಇದೊಂದು ಸೆನ್ಸೇಷನ್ ಸುದ್ದಿಯಾಗಬೇಕಿತ್ತು. ಯಶಸ್ಸಿನ ಸಾಧ್ಯತೆ ಇಲ್ಲಿ ೫೦-೫೦. ಎಲಾನ್‌ನ ಕಂಪನಿಗೆ, ವೈಯಕ್ತಿಕವಾಗಿ ಅವನಿಗೆ ಈ ಕಾರ್ಯ ಕ್ರಮದ ಯಶಸ್ಸು ‘ಮಾಡು ಇಲ್ಲವೇ ಮಡಿ’ ಎನ್ನುವಂತಿತ್ತು.

ಅಮೆರಿಕನ್ನರಿಗೆ ಮಿನಿ ಟ್ರಕ್ ಎಂದರೆ ಅದು ಗಟ್ಟಿ ಮುಟ್ಟಾಗಿರಬೇಕು. ಒಂದಿಷ್ಟು ಸಾಮಾನು ಸರಂಜಾಮನ್ನು ಸಾಗಿಸುವಂತಿರಬೇಕು. ಅಷ್ಟೇ ಅಲ್ಲ, ಕುಟುಂಬ ಕೂತು ಪ್ರವಾಸಕ್ಕೆ ಹೋಗಲು, ನಿತ್ಯಬಳಕೆಗೆ ಆಗುವಂತಿರಬೇಕು. ಮುಖ್ಯವಾಗಿ ಅಮೆರಿಕನ್ ಗ್ರಾಹಕರು ಮಿನಿ-ಟ್ರಕ್‌ನಲ್ಲಿ ನೋಡುವುದು
ಅದರ ಗಟ್ಟಿತನವನ್ನು. ಮಸ್ಕ್ ಸೈಬರ್ ಟ್ರಕ್ ಬಗ್ಗೆ ಹೇಳುತ್ತ, ಅದನ್ನು ವಿನ್ಯಾಸಗೊಳಿಸಿದ ಫ್ರಾಂಜ್ ವೊನ್ಸ್‌ನನ್ನು ವೇದಿಕೆಗೆ ಕರೆದು, ಟ್ರಕ್‌ನ ಗಟ್ಟಿತನದ ಬಗ್ಗೆ ವಿವರಿಸುವಂತೆ ಹೇಳಿದ. ‘ಈ ಸೈಬರ್ ಟ್ರಕ್ ಗ್ಲಾಸುಗಳು ಬಲು ಗಟ್ಟಿ. ಇದು ಸದ್ಯ ಬುಲೆಟ್ ಪ್ರೂಫ್ ಅಲ್ಲ, ಆದರೆ ಮುಂಬರುವ ದಿನಗಳಲ್ಲಿ ನೀವು ಈ
ಕಾರಿನ ಗಾಜಿಗೆ ಗುಂಡು ಹೊಡೆದರೂ ಒಡೆಯುವುದಿಲ್ಲ’ ಎಂದೆಲ್ಲ ವಿವರ ಕೊಟ್ಟ ವಿನ್ಯಾಸಕಾರ ಅದರ ಗಟ್ಟಿತನವನ್ನು ಪ್ರದರ್ಶಿಸಲು ಮುಂದಾದ.

ಕೈಯಲ್ಲಿ ತಂದಿದ್ದ ಲೋಹದ ಬಾಲ್ ಒಂದನ್ನು ಕಾರಿನ ಗ್ಲಾಸಿಗೆ ಹೊಡೆದ. ತಕ್ಷಣ ಗ್ಲಾಸು ಒಡೆದುಹೋಯಿತು. ನೆರೆದಿದ್ದವರೆಲ್ಲ ಇದನ್ನು ಕಂಡು
ಒಂದುಕ್ಷಣ ಅವಾಕ್ಕಾದರು. ಕಾರಿನ ಇನ್ನೊಂದು ಗ್ಲಾಸಿಗೆ ಆ ಬಾಲನ್ನು ಹೊಡೆಯಲು ಎಲಾನ್ ಹೇಳಿದ. ಅದು ಕೂಡ ಒಡೆದುಹೋಯಿತು. ಎಲ್ಲರೂ ನಕ್ಕರು, ‘ಅಯ್ಯೋ’ ಎಂದರು, ಉಸಿರುಬಿಟ್ಟರು, ‘ಛಿ ಥು’ ಎಂದರು. ವೇದಿಕೆಯಲ್ಲಿಯೇ ಇದ್ದ ಎಲಾನ್ ಮಸ್ಕ್ ಜಾಸ್ತಿ ವಿಚಲಿತನಾಗಲಿಲ್ಲ. ಬದಲಿಗೆ, ‘ಇದನ್ನು ಸರಿ ಮಾಡುತ್ತೇವೆ’ ಎಂದ. ಕಾರ್ಯಕ್ರಮ ಮುಂದುವರಿಯಿತು, ಮುಗಿಯಿತು.

ಮಾರನೇ ದಿನ ಮಾತ್ರ ಈ ಕಾರಿನ ಉದ್ಘಾಟನೆಯ ಸುದ್ದಿಯೇ ಎಲ್ಲೆಡೆ. ಪ್ರತಿಯೊಂದು ಅಂತಾರಾಷ್ಟ್ರೀಯ ಪತ್ರಿಕೆ, ಟಿವಿ, ಯೂಟ್ಯೂಬ್ ಚಾನಲ್ಲುಗಳಲ್ಲಿ ಎಲ್ಲೆಲ್ಲಿಯೂ ಇದೇ ಸುದ್ದಿ-ಎಲಾನ್ ಮಸ್ಕ್ ಕಾರಿನ ಗಾಜು ಸಭೆಯಲ್ಲಿ, ಉದ್ಘಾಟನಾ ಪ್ರದರ್ಶನದಲ್ಲಿಯೇ ಒಡೆದುಹೋಯಿತು ಇತ್ಯಾದಿ. ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್, ಗಾರ್ಡಿಯನ್ ಪತ್ರಿಕೆಗಳ ಮುಖಪುಟದಲ್ಲಿ ಅರ್ಧ ಪುಟ ಒಡೆದ ಕಾರಿನ ಗಾಜಿನ ಪಕ್ಕದಲ್ಲಿ ನಿಂತ ಎಲಾನ್ ಮಸ್ಕ್
-ಟೋ ಪ್ರಕಟವಾಯಿತು. ಎಲಾನ್ ಮಸ್ಕ್ ನಪಾಸು ಆದ ಸುದ್ದಿ ಮುಂದಿನ ಕೆಲವು ದಿನ ಟಿವಿಯಲ್ಲಿ ನಿರಂತರ ಬಿತ್ತರ ವಾಯಿತು. ಈ ಒಂದೂವರೆ ನಿಮಿಷದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೆಲ್ಲ ವೈರಲ್ ಆಯಿತು. ಅವನ ಶತ್ರು ಗಳೆಲ್ಲ ಇದನ್ನೇ ಹೋದಲ್ಲಿ ಬಂದಲ್ಲಿ ಹೇಳಿದರು. ಪರಿಣಾಮ
ಕೇವಲ ಮುಂದಿನ ಎರಡೇ ದಿನದಲ್ಲಿ ಟೆಸ್ಲಾ ಎಂಬ ಕಾರಿನ ಬ್ರ್ಯಾಂಡ್, ಸೈಬರ್ ಟ್ರಕ್ ಎಂಬ ಅದರ ಉತ್ಪನ್ನ ಸುಮಾರು ಎರಡು ನೂರು ಕೋಟಿ ಮಂದಿಗೆ ತಲುಪಿತು.

ಅಷ್ಟೇ ಅಲ್ಲ, ಅಲ್ಲಿಂದ ಮುಂದೆ ನಿರಂತರ ಸೈಬರ್ ಟ್ರಕ್ ಮೇಲಿನ ಕುತೂಹಲ ಮುಂದುವರಿಯಿತು. ಅದರ ಮಾರಾಟ ಈ ವರ್ಷ ಶುರುವಾಗಿದೆ. ಆದರೆ ಅದರ ಚರ್ಚೆ ಮಾತ್ರ ನಿರಂತರ ಐದು ವರ್ಷ ನಡೆಯಿತು. ಇದರ ನಂತರ ಟೆಸ್ಲಾ ಷೇರು ಮೌಲ್ಯ ಕೂಡ ಹೆಚ್ಚಿತು ಇತ್ಯಾದಿ. ಒಟ್ಟಾರೆ ಈ ಘಟನೆಯ
ತರುವಾಯವೇ ಟೆಸ್ಲಾ ಇನ್ನಷ್ಟು ಜನಜನಿತ ಹೆಸರಾಗಿದ್ದು. ಇದರಿಂದ ಅದರ ಷೇರು ಬೆಲೆ ಏರಿದ್ದು, ಪರಿಣಾಮ ಎಲಾನ್ ಮಸ್ಕ್ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು. ಇದೊಂದೇ ಕಾರಣವಲ್ಲದಿ ದ್ದರೂ ಟೆಸ್ಲಾ ಎಂಬ ಬ್ರ್ಯಾಂಡ್‌ನ ಅರಿವು ಜಗತ್ತಿನಲ್ಲೆಲ್ಲ ತಲುಪಿದ್ದು ಈ ಒಡೆದ ಗಾಜಿನ ಸೋತ
ಪ್ರದರ್ಶನದಿಂದ. ಎಲಾನ್ ಮಸ್ಕ್ ಅಂದು ಮಾಡಿದ್ದು ಅಸಲಿಗೆ ಕಾರಿನ ಅನಾವರಣವಾಗಿರಲೇ ಇಲ್ಲ, ಬದಲಿಗೆ ಅದೊಂದು ಟೆಸ್ಲಾ ಮತ್ತು ಎಲಾನ್ ಮಸ್ಕ್ ಬ್ರ್ಯಾಂಡಿಂಗ್ ಕಾರ್ಯಕ್ರಮವಾಗಿ ಇತಿಹಾಸವಾಗಿಬಿಟ್ಟಿತು.

ಇದು ಉದ್ದೇಶಪೂರ್ವಕವಾಗಿ ಮಾಡಿದ ನಾಟಕವೋ ಅಥವಾ ಆ ದಿನ ನಿಜವಾಗಿಯೂ ಆ ಕಾರಿನ ಗ್ಲಾಸು ಒಡೆದು ಹೋದದ್ದೋ ಎಂಬುದನ್ನು ಎಲಾನ್ ಮಸ್ಕ್ ಆಗಲಿ ಅಥವಾ ಅವನ ಕಂಪನಿಯಾಗಲಿ ಇಂದಿಗೂ ಸ್ಪಷ್ಟಪಡಿಸಿಲ್ಲ. ಒಂದಂತೂ ಊಹಿಸಬಹುದು. ಇದು ತಪ್ಪಿನಿಂದಾದ ಪ್ರಮಾದವಾಗಿರ
ಲಿಕ್ಕಿಲ್ಲ. ಇಂಥ ದೊಡ್ಡ ಕಂಪನಿಯ ಉದ್ಘಾಟನಾ ವೇದಿಕೆಯಲ್ಲಿ ಇಂಥದೊಂದು ಪ್ರಯೋಗ ಮಾಡುವಾಗ ಅದನ್ನು ಸಾಕಷ್ಟು ಬಾರಿ ಮುಂಚಿತವಾಗಿ ಪರೀಕ್ಷೆ ಮಾಡಲಾಗುತ್ತದೆ ಎಂಬುದು ಕಾಮನ್ ಸೆನ್ಸ್.

ಒಂದು ವೇಳೆ ಆ ದಿನ ಕಾರಿಗೆ ಹೊಡೆದ ಲೋಹದ ಬಾಲ್ ಆ ಕಾರಿನ ಕಿಟಕಿಯ ಗಾಜನ್ನು ಒಡೆದಿಲ್ಲ ವಾಗುತ್ತಿದ್ದರೆ ಇದು ಸಾವಿರದಲ್ಲಿ ಒಂದಾದ ಕಾರಿನ ಉದ್ಘಾಟನೆ ಯಾಗುತ್ತಿತ್ತು. ಆದರೆ ಹೀಗಾಗಿದ್ದರಿಂದ, ಕಳೆದೈದು ವರ್ಷದಲ್ಲಿ ಈ ಘಟನೆ ಚರ್ಚೆ, ಪುಕಾರು, ಹೀಯಾಳಿಕೆ ಹೀಗೆ ಹಲವಾರು ಕಾರಣಗಳಿಂದಾಗಿ ನಿರಂತರ ಸುದ್ದಿಯಲ್ಲಿದೆ. ಅಷ್ಟೇ ಅಲ್ಲ, ಎಲಾನ್ ಮಸ್ಕ್‌ಗೆ ಇಂದಿಗೂ ಈ ಘಟನೆಯ ಬಗ್ಗೆ ಹೋದಲ್ಲಿ ಬಂದಲ್ಲಿ ಮುಜುಗರ ಮಾಡಲಿಕ್ಕೆಂದೇ ಪ್ರಶ್ನೆ ಕೇಳುವವರಿ ದ್ದಾರೆ. ಅವನ ಪ್ರತ್ಯುತ್ತರ ಇಂದಿಗೂ ವೈರಲ್ ಆಗುತ್ತದೆ. ಟೆಸ್ಲಾ ಕಂಪನಿ ಇಂದಿಗೂ ಯಾವುದೇ ಜಾಹೀರಾತನ್ನು
ಟಿವಿ-ಮಾಧ್ಯಮಗಳಲ್ಲಿ ಕೊಡುವುದಿಲ್ಲ.

ಮೊದಲಿನಿಂದಲೂ ಜಾಹೀರಾತಿಗೆ ವ್ಯಯಿಸಿದ್ದು ಕಡಿಮೆಯೇ. ಆದರೆ ಇಂದು ಟೆಸ್ಲಾ ಎಂಬುದು ಜಗತ್ತಿನಲ್ಲೆಲ್ಲರಿಗೂ ಗೊತ್ತಿರುವ ಬ್ರ್ಯಾಂಡ್. ಹಾಗಂತ ಅದೇನು ಇಲೆಕ್ಟ್ರಿಕ್ ಕಾರು ತಯಾರಿ ಸುವ ಏಕೈಕ ಕಂಪನಿಯಲ್ಲ. ಇದಕ್ಕಿಂತ ಜಾಸ್ತಿ ಮಾರಾಟ ಮಾಡುವ ವಿದ್ಯುತ್ ಚಾಲಿತ ಕಾರುಗಳ ಬ್ರ್ಯಾಂಡ್‌ಗಳಿವೆ. ಆದರೆ ಅವು ಯಾವುದೂ ಟೆಸ್ಲಾದಷ್ಟು ಜನಪ್ರಿಯವಲ್ಲ. ಆ ಎಲ್ಲ ಕಂಪನಿ ಗಳು ಜಾಹೀರಾತಿಗೆ ತಮ್ಮ ಆದಾಯದ ದೊಡ್ಡ ಭಾಗವನ್ನು ವ್ಯಯಿಸುತ್ತಿವೆ, ಆದರೂ ಟೆಸ್ಲಾದಷ್ಟು ಸುದ್ದಿ, ಹೆಸರನ್ನು ಆ ಯಾವ ಕಂಪನಿಗಳೂ ಮಾಡಿಲ್ಲ!! ಬ್ರ್ಯಾಂಡಿಂಗ್ ಅನ್ನು ಟೆಸ್ಲಾ ಖರ್ಚಿಲ್ಲದೆ ಮಾಡುತ್ತದೆ.

ಕಂಪನಿಗಳು ತಮ್ಮ ಉತ್ಪನ್ನದ ಜಾಹೀರಾತಿಗೆ, ಪ್ರಚಾರಕ್ಕೆ ಏನೇನೆಲ್ಲ ಮಾರ್ಗ ಹಿಡಿಯುವುದುಂಟು. ಜಾಹೀರಾತು ಅದರಲ್ಲಿ ಒಂದು ಮಾತ್ರ. ಪತ್ರಿಕೆ ಯಲ್ಲಿ ಬರುವ ಜಾಹೀರಾತಿಗೆ ಒಂದು ದಿನದ ಬದುಕು. ಮುಖಪುಟ ದಲ್ಲಿಯೇ ಜಾಹೀರಾತಾದರೆ ಟೇಬಲ್ಲಿನ ಮೇಲೆ ಒಂದಿಡೀ ದಿನ ಅದು ಕಣ್ಣಿಗೆ
ಕಾಣಿಸುತ್ತಿರುತ್ತದೆ. ಹಾಗಾಗಿಯೇ ಮೊದಲಪುಟದ ಜಾಹೀರಾತಿಗೆ ಹೆಚ್ಚಿನ ಹಣ ತೆರಬೇಕು. ಜಾಹೀರಾತು ಪತ್ರಿಕೆಯ ಜಾಗವೊಂದನ್ನು ಹಿಡಿದು ಕೂತರೆ ಒಂದು ದಿನ ಅದಕ್ಕೆ ಅಲ್ಲಿ ಪೈಪೋಟಿಯಿಲ್ಲ.

ಟಿವಿ ಜಾಹೀರಾತುಗಳು ಹಾಗಲ್ಲ. ಅಲ್ಲಿ ಕೆಲವೇ ಸೆಕೆಂಡುಗಳಲ್ಲಿ ಎಲ್ಲವನ್ನೂ ಹೇಳಬೇಕು. ಅಲ್ಲಿ ಹಲವಾರು ಜಾಹೀರಾತುಗಳ ಮಧ್ಯೆ ತಮ್ಮ ಜಾಹೀರಾತು
ವಿಭಿನ್ನವಾಗಿರಬೇಕು ಮತ್ತು ಕಾರ್ಯಕ್ರಮದ ನಂತರವೂ ಅದು ನೆನಪಿನಲ್ಲುಳಿಯಬೇಕು. ಸಾಮಾನ್ಯವಾಗಿ ಚಿಕ್ಕ ಕಥೆಯನ್ನು, ದೇಶಭಕ್ತಿಯನ್ನು, ಧಾರ್ಮಿಕ ನಂಬಿಕೆಯನ್ನು, ಗಂಡು ಹೆಣ್ಣಿನ ಸಂಬಂಧವನ್ನು ಹೀಗೆ ತೀರಾ ಮನಸ್ಸಿಗೆ ನಾಟುವ ವಿಷಯವನ್ನು ಬ್ರ್ಯಾಂಡಿಂಗ್‌ನಲ್ಲಿ ಬಳಸುವುದು. ಸೆಲೆಬ್ರಿಟಿಗಳನ್ನು ಬಳಸಿ ಕೊಂಡು ಜಾಹೀರಾತು ಮಾಡುವುದು ಇನ್ನೊಂದು ಹಂತದ್ದು. ಆ ಜಾಹೀರಾತು ಮನಸ್ಸಿಗೆ ನಾಟಿದರೆ ಆ ವ್ಯಕ್ತಿಯನ್ನು ಕಂಡಾ ಗಲೆಲ್ಲ ಆ ಉತ್ಪನ್ನ ನೆನಪಾಗುತ್ತದೆ. ಬ್ರ್ಯಾಂಡ್ ಅಂಬಾಸಿಡರ್ ಎಂದರೆ ಇದು.

ಬಿಡಿ, ಇವೆಲ್ಲ ನೇರ ಜಾಹೀರಾತಿನ ಬ್ರ್ಯಾಂಡಿಗ್‌ಗಳಾದವು. ಇದು ಬಿಟ್ಟು ‘ಗೆರಿಲ್ಲಾ ಬ್ರ್ಯಾಂಡಿಂಗ್’ ಎಂಬುದೊಂದಿದೆ. ಇದನ್ನು ಸಾಮಾನ್ಯವಾಗಿ ಕ್ರೀಡೆಗೆ ಸಂಬಂಧಿಸಿದ ಬ್ರ್ಯಾಂಡು ಗಳು ಬಳಸಿಕೊಳ್ಳುವುದು ಜಾಸ್ತಿ. ‘ರೆಡ್ ಬುಲ್’ ಎಂಬ ಕೆಫೀನ್ ಪಾನೀಯ ಮಾರುವ ಕಂಪನಿಯ ಹೆಸರನ್ನು ನೀವು ಕೇಳಿರ ಬಹುದು, ನೋಡಿರಬಹುದು. ಈ ಕಂಪನಿ ನೇರ ಜಾಹೀರಾತು ಮಾಡುವುದು ಕಡಿಮೆ. ಬದಲಿಗೆ ಎತ್ತರದಿಂದ ಹಾರುವವರು, ಪರ್ವತವನ್ನೇರು ವವರು, ಬೈಕ್‌ನಲ್ಲಿ ಮೇಲಿಂದ ಜಿಗಿದು ವರ್ಲ್ಡ್ ರೆಕಾರ್ಡ್ ಮಾಡುವವರನ್ನು ಈ ಕಂಪನಿ ಪ್ರಾಯೋಜಿಸುತ್ತದೆ. ಅವರು ಸಾಮಾನ್ಯವಾಗಿ ಈ ಬ್ರ್ಯಾಂಡ್‌ನ ಅಂಗಿ, ಹತ್ಯಾರಗಳನ್ನು ಬಳಸಿ ವಿಶ್ವದಾಖಲೆ ಮಾಡುತ್ತಾರೆ. ಈ ವಿಡಿಯೋಗಳು ವೈರಲ್ ಆಗುತ್ತವೆ. ನೈಕಿ, ಅಡಿಡಾಸ್ ಮೊದಲಾದ ಕಂಪನಿಗಳು ಈ ರೀತಿ ಬ್ರ್ಯಾಂಡಿಂಗ್ ಮಾಡುತ್ತವೆ.

ಮ್ಯಾಕ್ ಡೊನಾಲ್ಡ್ ಕಂಪನಿ ಅಮೆರಿಕದ ಹೈಸ್ಕೂಲಿನಲ್ಲಿ ಸಪ್ರೈಸ್ ವೈಂಡಿಂಗ್ ಮಷಿನ್- ಹಣ ಹಾಕಿ ಬಟನ್ ಒತ್ತಿದರೆ ಉತ್ನನ್ನವನ್ನು ಹೊರಹಾಕುವ ಮಷಿನ್ ಅನ್ನು ಸ್ಥಾಪಿಸಿತ್ತು. ಇಲ್ಲಿ ಹಣ ಹಾಕಿ ಬಟನ್ ಒತ್ತಿದಾಗ ಬರ್ಗರ್ ಬರುತ್ತಿರಲಿಲ್ಲ. ಬದಲಿಗೆ ಏನೇನೋ ಆಹಾರಗಳು ಹೊರಬರುತ್ತಿದ್ದವು.
ಕೆಲವೊಮ್ಮೆ ಒಂದೇ ಡಾಲರಿಗೆ ಅರ್ಧ ಪಿಜ್ಜಾ ಹೊರಬಂದು ಬಿಡುತ್ತಿತ್ತು. ಇದರ ವಿಡಿಯೋಗಳು ಎಷ್ಟು ಜನಪ್ರಿಯವಾದ ವೆಂದರೆ ಮ್ಯಾಕ್ ಡೊನಾಲ್ಡ್‌ನ ಮಾರಾಟ ದೇಶದಲ್ಲೆಲ್ಲ ಇದರಿಂದ ಹೆಚ್ಚಾಯಿತು.

ಕಂಪನಿ ಮತ್ತು ವೈಯಕ್ತಿಕ ಬ್ರ್ಯಾಂಡಿಂಗ್ ಇವೆರಡು ವಿಭಿನ್ನ ವೇನಲ್ಲ. ನಿತ್ಯ ಚಾಲ್ತಿಯಲ್ಲಿರುವುದೇ ಇಲ್ಲಿನ ಬ್ರ್ಯಾಂಡಿಂಗ್‌ನ ಸೂಕ್ಷ್ಮ. ವೈಯಕ್ತಿಕ ಬ್ರ್ಯಾಂಡಿಂಗ್ ಅನ್ನು ತೀರಾ ವ್ಯವಸ್ಥಿತವಾಗಿ ನಿರ್ವಹಿಸಿದವರು ವಿರಳ. ಅದರಲ್ಲಿಯೂ ಇಂದಿನ ಜಮಾನದಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವವರು ಕೆಲವೇ
ಕೆಲವರು. ನರೇಂದ್ರ ಮೋದಿ ಎಂಬ ವ್ಯಕ್ತಿಯೇ ಒಂದು ಬ್ರ್ಯಾಂಡ್. ಆ ಬ್ರ್ಯಾಂಡ್ ಬಿಜೆಪಿಗೆ ಮೂರನೇ ಬಾರಿ ಅಧಿಕಾರ ತಂದುಕೊಟ್ಟಿದ್ದು. ಡೊನಾಲ್ಡ್ ಟ್ರಂಪ್ ಕೂಡ ತಮಗಿದ್ದ ಅಧಿಕಾರವನ್ನೂ ಮೀರಿ ತಮ್ಮದೇ ವೈಯಕ್ತಿಕ ಬ್ರ್ಯಾಂಡಿಂಗ್ ಬೆಳೆಸಿಕೊಂಡವರು.

ಸೋಷಿಯಲ್ ಮೀಡಿಯಾ, ಜನಮಾನಸದಲ್ಲಿ ಯಾವ ರೀತಿಯಲ್ಲಿ ನಿರಂತರ, ನಿತ್ಯ ಜೀವಂತ ಇರಬೇಕೆಂಬುದನ್ನು ಟ್ರಂಪ್‌ರಂತೆ ಅರಿತು ನಡೆದವರು ವಿರಳ. ಟ್ರಂಪ್ ಅಧಿಕಾರದಲ್ಲಿದ್ದಷ್ಟೂ ದಿನ ಟ್ವಿಟರಿನಲ್ಲಿ, ಆ ಮೂಲಕ ಜಗತ್ತಿನಲ್ಲೆಲ್ಲ ನಿತ್ಯ ಸುದ್ದಿಯಲ್ಲಿರುತ್ತಿದ್ದರು. ಧನಾತ್ಮಕತೆಗಿಂತ ಋಣಾತ್ಮಕ, ಅಸಡ್ಡಾಳ, ಮೂರ್ಖತನ ವೆನಿಸುವ ಮಾತಿನಿಂದಲೇ ಅವರು ಚಾಲ್ತಿಯಲ್ಲಿದ್ದದ್ದು. ಅದುವೇ ಅವರಿಗೆ ಬ್ರ್ಯಾಂಡ್ ಕಟ್ಟಿಕೊಟ್ಟದ್ದು. ಕರ್ನಾಟಕ ರಾಜಕಾರಣದಲ್ಲಿಯೂ ವೈಯಕ್ತಿಕ ಬ್ರ್ಯಾಂಡಿಂಗ್ ಅನ್ನು ಸಮರ್ಥವಾಗಿ ನಿರ್ಮಿಸಿಕೊಂಡ ರಾಜಕಾರಣಿಗಳು ಕೆಲವೇ ಕೆಲವರು. ಕರ್ನಾಟಕದಲ್ಲಿ ೨೨೪
ಶಾಸಕರಿದ್ದಾರೆ. ಅವರಲ್ಲಿ ಎಷ್ಟು ಮಂದಿ ನೆನಪಿಗೆ ಬರುತ್ತಾರೆ? ಬಹುತೇಕರ ಹೆಸರು ಕೇಳಿದ್ದು ಅವರು ಗೆದ್ದಾಗ. ನಂತರದಲ್ಲಿ ಮುಂದಿನ ಐದು ವರ್ಷ ನೇಪಥ್ಯಕ್ಕೆ. ಕರ್ನಾಟಕದ ಮಟ್ಟಿಗೆ ನಿತ್ಯ ನಿರಂತರ ಸುದ್ದಿಯಲ್ಲಿರುವ ಶಾಸಕರು ಕೆಲವೇ ಕೆಲವರು.

ಅದರಲ್ಲಿಯೂ ಅತ್ಯಲ್ಪ ಕಾಲದಲ್ಲಿ ವೈಯಕ್ತಿಕ ಬ್ರ್ಯಾಂಡಿಂಗ್ ನಿರ್ಮಿಸಿಕೊಂಡವರು, ತಮ್ಮ ಹೆಸರನ್ನು ಸದಾ ಚಾಲ್ತಿ ಯಲ್ಲಿಟ್ಟುಕೊಳ್ಳುವವರು ಬೆರಳೆಣಿಕೆಯಷ್ಟು ಮಂದಿ. ಹಾಗೆ ಯೋಚಿಸುವಾಗ ನೆನಪಾಗುವವರು ಪ್ರದೀಪ್ ಈಶ್ವರ್. ನೀವು ಕರ್ನಾಟಕದಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆ ಯಾದವರ ಪಟ್ಟಿ ಮಾಡಿ ಎಂದರೆ ಎಷ್ಟು ಹೆಸರನ್ನು ಹೇಳಬಲ್ಲಿರಿ? ಪ್ರದೀಪ್ ಈಶ್ವರ್ ಅಂದಿನ ಹಾಲಿ ಮಂತ್ರಿ ಸುಧಾಕರ್‌ರನ್ನು ಸೋಲಿಸಿದರು ನಿಜ. ಹಾಗೆ ಹಾಲಿ ಇರುವವರನ್ನು ಅದೆಷ್ಟು ಮಂದಿ ಸೋಲಿಸಿಲ್ಲ? ಪ್ರದೀಪ್ ಈಶ್ವರ್ ಎಂಬ ಒಬ್ಬ ಶಾಸಕ ಇಂದು ಕರ್ನಾಟಕದಲ್ಲಿ ಎಲ್ಲರಿಗೂ ಗೊತ್ತು. ಹೇಗೆ?

ಅವರದು ವಿಭಿನ್ನ ಬ್ರ್ಯಾಂಡಿಂಗ್. ನಿತ್ಯ ಸುದ್ದಿಯಲ್ಲಿರುವ ಇವರು ಟ್ರೋಲ್ ಆಗುತ್ತಲೇ ತಮ್ಮ ಬ್ರ್ಯಾಂಡ್ ಅನ್ನು ನಿರ್ಮಿಸಿಕೊಂಡವರು. ಬಾಯಿಗೆ ಬಂದಂತೆ ಮಾತನಾಡುತ್ತಾರೆ, ತೀರಾ ಫಿಲ್ಮಿ ಎಂಬುದೇ ಕಳೆದೊಂದು ವರ್ಷದಿಂದ ಅವರ ಬಗೆಗಿನ ನಿತ್ಯ ಸುದ್ದಿ. ಅವರು ಸ್ವಲ್ಪ ಕಡಿಮೆ ಮಾತನಾಡಿದರೆ ಚೆನ್ನಾಗಿತ್ತು ಎಂಬುದೇ ಚರ್ಚೆ. ಸುಧಾಕರ್ ಗೆದ್ದರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿ ಎಡವಟ್ಟು ಮಾಡಿ ಕೊಂಡಿದ್ದಾರೆ, ರಾಜೀನಾಮೆ ಕೊಡಬೇಕು ಎಂಬುದೇ ಗಲಾಟೆ. ಎಲ್ಲರಿಗೂ ಗೊತ್ತು, ಅವರೇನು ರಾಜೀನಾಮೆ ಕೊಡುವುದಿಲ್ಲ, ಇದೆಲ್ಲ ರಾಜಕೀಯದ ಸ್ಟಂಟ್ ಎಂದು. ಮೋದಿ ಗೆದ್ದಿದ್ದಾರೆ, ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆದಿದೆ, ರಾಜಕೀಯ ಬೆಳವಣಿಗೆಗಳು ಸಾಕಷ್ಟಿವೆ, ಪ್ರಜ್ವಲ್ ರೇವಣ್ಣ ವಾಪಸು ಬಂದಿದ್ದಾರೆ.

ಹೀಗೆ ಸುದ್ದಿಗೇನೂ ಕೊರತೆಯಿಲ್ಲದ ಸಮಯ ಇದು. ಅದೆಲ್ಲದರ ನಡುವೆ ಇಡೀ ಟಿವಿ ವಾಹಿನಿ ಸಮೂಹ, ಯೂಟ್ಯೂಬರ್‌ಗಳು, ಸೋಷಿಯಲ್ ಮೀಡಿಯಾದಲ್ಲೆಲ್ಲ ಚರ್ಚೆ ಮಾತ್ರ ಪ್ರದೀಪ್ ಈಶ್ವರ್ ಬಗ್ಗೆ. ರಾಜಕಾರಣದಲ್ಲಿ ಹೆಸರು ಚಾಲ್ತಿಯಲ್ಲಿರಬೇಕು ಎಂಬ ಸೂಕ್ಷ್ಮವನ್ನು ಪ್ರದೀಪ್ ರಷ್ಟು ಚೆನ್ನಾಗಿ ಅರಿತವರು ಇನ್ನೊಬ್ಬರಿರಲಿಕ್ಕಿಲ್ಲ. ಪ್ರದೀಪ್ ಈಶ್ವರ್ ಇದೆಲ್ಲವನ್ನು ತಿಳಿದೇ ಮಾಡುತ್ತಿದ್ದಾರೋ ಅಥವಾ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಅವರ ಬ್ರ್ಯಾಂಡಿಂಗ್ ವಿಧಾನ ಮಾತ್ರ ಒಂದು ಅಂತಾರಾಷ್ಟ್ರೀಯ ಕಂಪನಿ ಇಂದಿನ ದಿನಗಳಲ್ಲಿ ಬ್ರ್ಯಾಂಡಿಂಗ್ ಮಾಡಿಕೊಳ್ಳುವಂತೆಯೇ ಇದೆ.

ಅವರ ಮಾತುಗಳಿಂದ ಅವರಿಗೇ ನಷ್ಟವಾಗಬಹುದು ಎಂಬ ವಾದ, ಸರಿ ತಪ್ಪುಗಳ ಜಿಜ್ಞಾಸೆ ಇವೇ ಇಲ್ಲಿ ಬ್ರ್ಯಾಂಡಿಂಗ್ ಸಲಕರಣೆಗಳು. ಅದು ಎಲ್ಲರಿಗೂ ದಕ್ಕುವ ಹಿಕ್ಮತ್ತಲ್ಲ. ಎಲ್ಲರಲ್ಲೂ ಈ ಜಾಣತನ, ಬುದ್ಧಿವಂತಿಕೆ ಇರುವುದಿಲ್ಲ. ಅದರಲ್ಲಿಯೂ ರಾಜಕಾರಣದಲ್ಲಿ ಈ ರೀತಿಯ ಬ್ರ್ಯಾಂಡಿಂಗ್ ಸಾಽಸುವುದು
ಕತ್ತಿಯ ಅಲಗಿನ ಮೇಲಿನ ನಡಿಗೆ. ಸ್ವಲ್ಪ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ. ಸ್ಥಿತಿ ಸರ್ವನಾಶಕ್ಕೆ ಮುಟ್ಟಿಬಿಡಬಹುದು. ಬ್ರ್ಯಾಂಡಿಂಗ್ ಅನ್ನು ಹೀಗೆಯೇ ಮಾಡಬೇಕು ಎಂಬ ಯಾವುದೇ ಕಾನೂನಿಲ್ಲ. ಸರಿ-ತಪ್ಪು ಚರ್ಚೆಯೇ ಇಲ್ಲಿನ ವಿಷಯ. ಪ್ರಶ್ನೆಗೊಳಗಾಗುವುದು, ಟ್ರೋಲ್ ಆಗುವುದೇ
ಜಾಹೀರಾತು. ಇದನ್ನು ನೀವು ಅಗ್ಗದ ಟ್ಯಾಕ್ಟಿಕ್ ಎನ್ನಬಹುದು, ಜರೆಯಬಹುದು. ಪ್ರದೀಪ್‌ಗೆ ಬುದ್ಧಿ ಇಲ್ಲ, ಅವರು ಬಾಯಿ ಮುಚ್ಕೊಂಡಿದ್ದರೆ ಚಂದ ಎನ್ನಬಹುದು.

ರಾಜೀನಾಮೆ ಈಗಲೇ ಕೊಡಬೇಕು, ನುಡಿದಂತೆ ನಡೆಯಬೇಕು ಎನ್ನಬಹುದು. ಆದರೆ ಕೊನೆಯಲ್ಲಿ ಅದೆಲ್ಲವೂ ಹೋಗಿ ಪ್ರದೀಪ್ ಈಶ್ವರ್ ಎಂಬ ಬ್ರ್ಯಾಂಡ್‌ಗೇ ಸಲ್ಲುತ್ತದೆ, ಅವರನ್ನು ಇನ್ನಷ್ಟು ಪ್ರಸ್ತುತವಾಗಿಸುತ್ತದೆ. ಇಂದು ಚಿಕ್ಕಬಳ್ಳಾಪುರದ ಶಾಸಕ ಎಂದಾಕ್ಷಣ ಮುಂದಿನ ಖಾಲಿಬಿಟ್ಟ ಸ್ಥಳದಲ್ಲಿ ಪ್ರದೀಪ್ ಈಶ್ವರ್ ಹೆಸರು ಸಹಜವಾಗಿ ನೆನಪಾಗುವುದು ಹೇಗೆ? ಈಗ ಎಲಾನ್ ಮಸ್ಕ್ ಇರಲಿ, ಪ್ರದೀಪ್ ಈಶ್ವರ್ ಇರಲಿ- ಹೀಗೆ ಖರ್ಚಿಲ್ಲದೆ ಬ್ರ್ಯಾಂಡಿಂಗ್ ಮಾಡಿಕೊಳ್ಳುವುದು, ನಿತ್ಯ ಸುದ್ದಿ ಯಲ್ಲಿರುವುದು ಜಾಣತನವೇ ದಡ್ಡತನವೇ? ನೀವೇ ಹೇಳಿ.