Friday, 20th September 2024

ತುರ್ತುಸ್ಥಿತಿ, ಗರ್ವಹರಣ, ನಿರೀಕ್ಷೆಗಳು ಮತ್ತು ನಿರಶನ

ವಿದ್ಯಮಾನ

ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ

೧೯೭೭ ನ ಚುನಾವಣೆ, ಸ್ವಾತಂತ್ರ್ಯದ ನಂತರದ ಸತತ ೩೦ ವರ್ಷಗಳ ಕಾಂಗ್ರೆಸ್ ಆಡಳಿತಕ್ಕೆ ಭಾರತದ ಮತದಾರ ಮೊದಲ ಸಲ ಬ್ರೇಕ್ ಹಾಕಿದ ಐತಿಹಾಸಿಕ ಚುನಾವಣೆ. ನೇಗಿಲು ಹೊತ್ತ ರೈತನ ಚಿಹ್ನೆಯ ನೆನಪು ಏಷ್ಟು ಜನರಿಗಿದೆಯೋ ಗೊತ್ತಿಲ್ಲ. ನನಗಂತೂ ನೆನಪಿದೆ, ಆ ಕಾಲದಲ್ಲಿ ಕಾಂಗ್ರೆಸ್‌ನ ಚಿಹ್ನೆಯ ನಂತರ ಹೆಚ್ಚಾಗಿ ಭಾರತದ ಜನಮನದಲ್ಲಿದ್ದ ಚಿಹ್ನೆ ಎಂದರೆ ಅದು ‘ನೇಗಿಲು ಹೊತ್ತ ರೈತ’ ಮಾತ್ರ.

ಮತದಾರ ಮೊರಾರ್ಜಿ ದೇಸಾಯಿಯವರ ನೇತೃತ್ವದ ಜನತಾ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತಂದು ಭಾರತೀಯ ರಾಜಕಾರಣದಲ್ಲಿ ಏಕಚಕ್ರಾಧಿ ಪತಿಯಂತೆ ಸೋಲಿಲ್ಲದೇ ಮೆರೆಯುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ಮೊದಲ ಬಾರಿ ಅಧಿಕಾರದಿಂದ ಕೆಳಗಿಳಿಸಿದ ಚುನಾವಣೆಯಾಗಿತ್ತು ಅದು. ಭಾರತದಲ್ಲಿ ವಿರೋಧಪಕ್ಷಗಳು ಇವೆ ಮತ್ತು ಅವು ಒಟ್ಟಾದರೆ ಏನು ಚಮತ್ಕಾರ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟ ಅದ್ಭುತವಾದ ಚುನಾವಣೆ ಯಾಗಿತ್ತು ಅದು.

ತುರ್ತುಪರಿಸ್ಥಿತಿಯ ಕರಾಳ ಪರಿಣಾಮಗಳನ್ನು ಅನುಭವಿಸಿದ್ದ ಜನ, ಆಡಳಿತಾರೂಢ ಕಾಂಗ್ರೆಸ್‌ಗೆ ಮೊದಲ ಬಾರಿ ಮರ್ಮಾಘಾತ ನೀಡಿ ನೆಹರು -ಗಾಂಧಿ ಕುಟುಂಬ ರಾಜಕಾರಣದ ಗರ್ವಹರಣ ಮಾಡಿದ್ದ ಕಾರಣಕ್ಕೆ ಮತ್ತು ಪ್ರಥಮಬಾರಿಗೆ ಕಾಂಗ್ರೆಸ್ಸೇತರ ಸರಕಾರದ ಸ್ಥಾಪನೆಯಾದ್ದರಿಂದ ೧೯೭೭ ರದ್ದು ಭಾರತದ ರಾಜಕಾರಣದಲ್ಲಿ ಸದಾ ನೆನಪಿನಲ್ಲಿ ಉಳಿಯುವ ಚುನಾವಣೆಯಾಗಿದೆ. ಆದರೆ, ಅನೇಕ ಪಕ್ಷಗಳು ಕೂಡಿ ರಚಿಸಿದ್ದ ಜನತಾ ಪರಿವಾರದ
ಸಮ್ಮಿಶ್ರ ಕೂಟವನ್ನು ೧೯೭೭ ರಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯಿಂದ ಜನ ಆಧರಿಸಿದ್ದರು ಆದರೆ ಅದು ವಿಫಲವಾದಾಗ ‘ಊದುವುದನ್ನು ಕೊಟ್ಟು ಬಾರಿಸುವು ದನ್ನು ತಂದ ಹಾಗಾಯಿತಲ್ಲ’ ಎಂದು ಭಾರೀ ನಿರಸನವೂ ಆಯಿತು.

ಹಾಗೆ ನೋಡಿದರೆ, ೧೯೭೩ ರಿಂದಲೇ ಭಾರತದಾದ್ಯಂತ ಕಾಂಗ್ರೆಸ್ ವಿರುದ್ಧ ಅದರಲ್ಲೂ ಇಂದಿರಾ ಗಾಂಧಿಯವರ ವಿರುದ್ಧ ದೊಡ್ಡ ಪ್ರಮಾಣದ ರಾಜಕೀಯ ಧೃವೀಕರಣ ಶುರುವಾಗಿಬಿಟ್ಟಿತ್ತು. ಸಮಾಜವಾದಿ ಚಿಂತನೆಯ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಬೆಂಬಲದಿಂದ ಬಿಹಾರದಲ್ಲಿ
ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಶುರುವಾದ ಈ ಕಸರತ್ತು ಎಲ್ಲ ಇಂದಿರಾ ವಿರೋಧಿ ಶಕ್ತಿಗಳು ಕೈಜೋಡಿಸುವಂತೆ ಮಾಡಿತ್ತು. ಜಯಪ್ರಕಾಶ್ ನಾರಾಯಣ್ ಅವರಂತೂ ಇದು ಎರಡನೇ ಸ್ವಾತಂತ್ರ್ಯ ಹೋರಾಟ ಎಂಬಂತೆ ಬಿಂಬಿಸಲು ಯಶಸ್ವಿಯಾಗಿ ದೇಶಾದ್ಯಂತ ಪ್ರಚಂಡ ಜನ ಬೆಂಬಲ ಗಳಿಸಿ ಬಿಟ್ಟಿದ್ದರು. ಈ ಎ ಬೆಳವಣಿಗೆಗಳಿಂದ ಪ್ರಧಾನಿ ಇಂದಿರಾಗಾಂಽ ತಬ್ಬಿಬ್ಬಾಗಿ ಹೋಗಿದ್ದರು.

ಜೊತೆಗೆ, ೧೯೭೧ರ ಲೋಕಸಭೆ ಚುನಾವಣೆಯಲ್ಲಿ ರಾಯಬರೇಲಿಯಿಂದ ಇಂದಿರಾ ವಿರುದ್ಧ ಸೋತಿದ್ದ ರಾಜ್ ನಾರಾಯಣ್ ಎನ್ನುವವರು ಇಂದಿರಾ ಗಾಂಧಿ ವಿರುದ್ಧ ಚುನಾವಣೆಯಲ್ಲಿನ ಅಕ್ರಮ ಮತ್ತು ಪ್ರಜಾಪ್ರತಿನಿಧಿ ಕಾಯಿದೆಯ ಉಲ್ಲಂಘನೆಯ ಆರೋಪ ಹೊರಿಸಿ ನೇರವಾಗಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಮುಂದೆ ಶ್ರೀಮತಿ ಗಾಂಧಿಯವರು ಚುನಾವಣಾ ಅವ್ಯವಹಾರಗಳಲ್ಲಿ ತಪ್ಪಿತಸ್ಥರೆಂದು ನಿರ್ಧರಿಸಿ ೧೨ ಜೂನ್ ೧೯೭೫ ರಂದು ೬ ವರ್ಷಗಳ ಕಾಲ ಸಾರ್ವಜನಿಕ ಹುzಯನ್ನು ಅಲಂಕರಿಸಲು ಇಂದಿರಾ ಅವರನ್ನು ಅನರ್ಹಗೊಳಿಸಿದ ಐತಿಹಾಸಿಕ ತೀರ್ಪನ್ನು ಘನ ನ್ಯಾಯಾಲಯ ನೀಡೇಬಿಟ್ಟಿತು.

ಅನ್ಯಮಾರ್ಗಗಳಿಲ್ಲದೇ ತಾವು ರಾಜೀನಾಮೆ ನೀಡುವುದೆಂದು ಆ ಸಂದರ್ಭದಲ್ಲಿ ಯೋಚಿಸುತ್ತಿದ್ದ ಇಂದಿರಾ ಗಾಂಧಿಯವರಿಗೆ ಅಧಿಕಾರದಲ್ಲಿ
ಮುಂದುವರೆಯಲು ತುರ್ತುಪರಿಸ್ಥಿತಿಯ ಘೋಷಣೆಯ ಆಯ್ಕೆಯನ್ನು ಅಂದಿನ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿದ್ದ ಸಿದ್ಧಾರ್ಥ್ ಶಂಕರ್ ರೇ ಅವರು ಸೂಚಿಸಿದರು. ಈ ಪ್ರತಿಕೂಲ ಸಂದರ್ಭದಲ್ಲಿ ಚುನಾವಣೆಯಾದರೆ ೩೦ ವರ್ಷಗಳಿಂದ ಅಧಿಕಾರಕ್ಕಾಗಿ ಕಾದು ಕುಳಿತಿರುವ ವಿರೋಧ ಪಕ್ಷಗಳು ಮೇಲುಗೈ ಸಾಧಿಸುವುದು ಖಚಿತ ಎಂದು ಭಾವಿಸಿದ ಇಂದಿರಾ ಗಾಂಧಿಯವರು ಆಂತರಿಕ ಭದ್ರತೆಯ ನೆಪವೊಡ್ಡಿ ತಮ್ಮ ವಿರುದ್ಧ ತೀರ್ಪು ಬಂದ ೧೩
ದಿನದ ಒಳಗೆ ಅಂದರೆ, ಜೂನ್ ೨೫, ೧೯೭೫ ರ ರಾತ್ರಿ ದೇಶದಲ್ಲಿ ಸಂವಿಧಾನದ ಪರಿಚ್ಛೇದ ೩೫೨ (೧)ರ ಅಡಿಯಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಿ ಬಿಟ್ಟರು ಮತ್ತು ಎರಡು ಸಲ ಅದನ್ನು ವಿಸ್ತರಿಸಿದರು ಕೂಡಾ.

ಹಾಗಾಗಿ ೧೯೭೫ರಲ್ಲಿ ನಡೆಯಬೇಕಾಗಿದ್ದ ಚುನಾವಣೆಯನ್ನು ಎರಡು ವರ್ಷಗಳಿಗೆ ಮುಂದೂಡಿದಂತಾಯಿತು. ಈ ನಿರ್ಧಾರದಿಂದ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ವಿರೋಧಿ ಎನ್ನುವ ಶಾಶ್ವತವಾದ ಕಳಂಕ ಹೊರುವಂತಾಯಿತು. ದೇಶದಲ್ಲಿ ತುರ್ತುಪರಿಸ್ಥಿತಿ ಇದ್ದ ೨೧ ತಿಂಗಳ ಅವಧಿಯಲ್ಲಿ ಕೇವಲ ಇಂದಿರಾಗಾಂಧಿಯವರ ನಿರ್ದೇಶನದಿಂದ ದೇಶ ನಡೆಯುತ್ತಿತ್ತು. ನಾಗರಿಕರ ಎಲ್ಲ ಮೂಲಭೂತ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯಗಳನ್ನು ಮೊಟಕು ಗೊಳಿಸಲಾಗಿತ್ತು. ಯಾವುದೇ ಆರೋಪವಿಲ್ಲದೆ ಜನರನ್ನು ಬಂಽಸಲಾಗುತ್ತಿತ್ತು, ಮಾಧ್ಯಮವನ್ನು ಸೆನ್ಸಾರ್ ಮಾಡಲಾಯಿತು. ಆರ್‌ಎಸ್‌ಎಸ್ ಅನ್ನು ಈ ಸಮಯದಲ್ಲಿ ನಿಷೇಧಿಸಲಾಗಿತ್ತು.

ಹೆಚ್ಚಿನ ವಿರೋಧ ಪಕ್ಷದ ನಾಯಕರನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಜೆ ಪಿ ನಾರಾಯಣ್, ಮೊರಾರ್ಜಿ ದೇಸಾಯಿ, ಚರಣ್‌ಸಿಂಗ್, ವಾಜಪೇಯಿ, ಎಲ್.ಕೆ.ಅಡ್ವಾಣಿ, ರಾಜ್‌ನಾರಾಯಣ್, ಜೀವತ್ರಾಂ ಕೃಪಲಾನಿ, ಅಷ್ಟೇ ಏಕೆ ನಮ್ಮವರೇ ಆದ ರಾಮಕೃಷ್ಣ ಹೆಗಡೆಯವರು ಮತ್ತು ಇನ್ನೂ ಅನೇಕ ನಾಯಕರು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ೧೯ ತಿಂಗಳುಗಳ ಕಾಲ ಸೆರೆಮನೆ ವಾಸವನ್ನು ಅನುಭವಿಸಬೇಕಾಯಿತು. ಆಶ್ಚರ್ಯವೆಂದರೆ, ಇಂದಿರಾ
ಅವರ ತುರ್ತುಪರಿಸ್ಥಿತಿ ಹೇರಿಕೆಯ ನಿರ್ಧಾರವನ್ನು ದೇಶಕ್ಕೆ ದೇಶವೇ ವಿರೋಧಿಸಿರಲಿಲ್ಲ.

ಅವರ ಈ ನಿರ್ಧಾರ ಸಮಾಜದ ಹಲವಾರು ವರ್ಗಗಳಿಂದ ಬೆಂಬಲವನ್ನೂ ಪಡೆದುಕೊಂಡಿತ್ತು. ಸಮಾಜಸುಧಾರಕರಾದ ವಿನೋಬಾ ಭಾವೆ, ಕೈಗಾರಿಕೋ ದ್ಯಮಿ ಜೆ.ಆರ್.ಡಿ.ಟಾಟಾ, ಬರಹಗಾರ ಖುಷವಂತ್ ಸಿಂಗ್ ಮತ್ತು ಇಂದಿರಾ ಗಾಂಧಿಯವರ ಆತ್ಮೀಯರಾಗಿದ್ದ ಒಡಿಶಾದ ಮುಖ್ಯಮಂತ್ರಿ ಯಾಗಿದ್ದ ನಂದಿನಿ ಸತ್ಪತಿ ಮುಂತಾದವರು ಈ ಉಪಕ್ರಮಕ್ಕೆ ಪ್ರಾರಂಭದಲ್ಲಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ನಂತರ, ತುರ್ತುಪರಿಸ್ಥಿತಿ ಹೇರಿಕೆಯ ಹಿಂದಿನ ಉದ್ದೇಶದ ಮತ್ತು ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿದೆ ಎನ್ನುವುದರ ಅರಿವಾಗಿ ಜೆ. ಆರ್.ಡಿ.ಟಾಟಾ ಮತ್ತು ಸತ್ಪತಿ ತುರ್ತು ಪರಿಸ್ಥಿತಿಯ ಹೇರಿಕೆಯ ಮತ್ತು ಅದರ ದುರ್ಬಳಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಸುದೀರ್ಘ ಜೈಲುವಾಸದಿಂದ ವಿರೋಧ ಪಕ್ಷದ ಪ್ರಮುಖರೆಲ್ಲ ಮಾನಸಿಕವಾಗಿ ಕುಗ್ಗಿಹೋಗಿರುತ್ತಾರೆ ಮತ್ತು ಅವರಿಗೆ ಮೊದಲಿನಂತೆ ತನ್ನ ವಿರುದ್ಧ ಸಂಘಟಟಿತ ಹೋರಾಟ ಮಾಡಲು ಈಗ ಸಾಧ್ಯವಾಗಲಿಕ್ಕಿಲ್ಲ ಎಂದು ಇಂದಿರಾ ಗಾಂಧಿ ಭಾವಿಸಿದರು. ಈ ಸಂದರ್ಭದಲ್ಲಿ ಚುನಾವಣೆ ನಡೆದರೆ ತಮಗೆ ಲೋಕಸಭೆಯಲ್ಲಿ ೩೦೦ಕ್ಕೂ ಹೆಚ್ಚು ಸ್ಥಾನ ದೊರಕುವುದು ಖಚಿತ ಎಂಬ ಗುಪ್ತಚರ ಮಾಹಿತಿಯೂ ಅವರಿಗೆ ದೊರಕಿತ್ತು. ಹಾಗಾಗಿ ೧೯೭೭ರಲ್ಲಿ
ಇಂದಿರಾ ಗಾಂಧಿಯವರು ಚುನಾವಣೆಯನ್ನು ಘೋಷಿಸುವ ನಿರ್ಧಾರಕ್ಕೆ ಬಂದರು.

ಈ ಬಾರಿಯ ಚುನಾವಣೆಯನ್ನು ಗೆಲ್ಲುವುದು ಮೊದಲಿನ ಚುನಾವಣೆಗಳಂತೆ ಸುಲಭ ಸಾಧ್ಯವಲ್ಲ ಎಂದು ಅವರ ಒಳಮನಸ್ಸು ಹೇಳುತ್ತಿದ್ದರೂ ಈ ಮಟ್ಟದ ಸೋಲನ್ನು ಕಾಣುತ್ತೇನೆ ಎಂದು ಕನಸಿನಲ್ಲಿಯೂ ಇಂದಿರಾ ಕಲ್ಪಿಸಿರಲಿಕ್ಕಿಲ್ಲ ಎಂದು ಕಾಣತ್ತದೆ. ಜನತಾ ಪಕ್ಷದ ನೇತೃತ್ವದಲ್ಲಿ ಇಂದಿರಾ ವಿರೋಧಿಗಳೆಲ್ಲ ಒಟ್ಟುಗೂಡಿ ಅಭೂತಪೂರ್ವ ಗೆಲುವನ್ನು ಕಂಡರು. ಇತ್ತ ಕಾಂಗ್ರೆಸ್ ನೇತೃತ್ವದ ಕೂಟ ನಿರೀಕ್ಷೆಯಂತೆ ಸೋತು ನೆಲಕಚ್ಚಿತು. ೩೫೨ ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ೧೫೨ ಸ್ಥಾನಗಳಿಗೆ ಕುಸಿಯಿತು. ೮೬ ಸ್ಥಾನಗಳನ್ನು ಹೊಂದಿದ್ದ ಜನತಾ ಪರಿವಾರ ೨೯೫
ಸ್ಥಾನಗಳನ್ನು ಗೆದ್ದು ಅದರ ನಾಯಕ ಮೊರಾರ್ಜಿ ದೇಸಾಯಿ ಅವರು ಪ್ರಧಾನಮಂತ್ರಿ ಆದರು.

ಚುನಾವಣಾ ಪ್ರಚಾರದಲ್ಲಿ ಭರವಸೆ ನೀಡಿದಂತೆ ಭ್ರಷ್ಟಾಚಾರದ ಆರೋಪದ ಮೇಲೆ ಜನತಾ ಸರಕಾರ ಇಂದಿರಾ ಗಾಂಧಿಯವರ ಬಂಧನಕ್ಕೆ ಆದೇಶಿಸಿತು.
ನಾಟಕೀಯವಾಗಿ ಬಂಧಿಸಿದ ತಾಸಿನೊಳಗೆ ಅವರ ಬಿಡುಗಡೆಯೂ ಆಯಿತು. ಆದರೆ, ಆಡಳಿತಾರೂಢ ಜನತಾ ಪಕ್ಷ ಅನುಸರಿಸಿದ ಈ ಇಂದಿರಾ
ಬಂಧನದ ರಾಜಕೀಯ ಪ್ರಮಾದ ಮುಂದಿನ ಚುನಾವಣೆಯಲ್ಲಿ ಅವರಿಗೇ ತಿರುಗುಬಾಣವಾಯಿತು. ಎರಡು ವರ್ಷಗಳ ಹಿಂದಷ್ಟೇ ಇಂದಿರಾ ಗಾಂಧಿ ಯವರ ನಿರಂಕುಶ ವರ್ತನೆಯಿಂದ ಬೇಸತ್ತಿದ್ದ ದೇಶದ ಜನತೆ ಅವರ ಮೇಲೆ ಅನುಕಂಪ ತೋರುವಂತಾಗಲು ಕಾರಣವಾಯಿತು. ಹಾಗಾಗಿ, ಆಡಳಿತ ಪಕ್ಷದಲ್ಲಿ ತಾಂಡವವಾಡುತ್ತಿದ್ದ ಅಂತಃಕಲಹವನ್ನು ಮತ್ತು ದೇಶದಲ್ಲಿ ತಮ್ಮ ಪರವಾಗಿದ್ದ ಅನುಕಂಪವನ್ನು ಬಳಸಿಕೊಳ್ಳುವಲ್ಲಿ ಇಂದಿರಾ ಸಫಲ ರಾದರು. ಜೈಲಿನಿಂದ ಹೊರಬಂದವರೇ ತಮ್ಮ ಆಕರ್ಷಕ ಧ್ವನಿಯಲ್ಲಿ ದೇಶದೆಡೆ ಭಾಷಣ ನೀಡಲು ಪ್ರಾರಂಭಿಸಿದರು. ತಮ್ಮ ಭಾಷಣಗಳಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಬೇಕಾದ ಅನಿವಾರ್ಯತೆ ಮತ್ತು ಆ ಸಂದರ್ಭದಲ್ಲಿ ಆಗಿರಬಹುದಾದ ತಪ್ಪುಗಳಿಗಾಗಿ ಜನರಲ್ಲಿ ಪರೋಕ್ಷವಾಗಿ ಕ್ಷಮೆಯಾಚಿಸಿದರು.

ನಂತರ, ಒಳಜಗಳದಿಂದ ಮೊರಾರ್ಜಿ ದೇಸಾಯಿಯವರು ೧೯೭೯ರ ಜೂನ್‌ನಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತಾಯಿತು ಮತ್ತು ಕಾಂಗ್ರೆಸ್ಸಿನ ಬಾಹ್ಯ ಬೆಂಬಲದಿಂದ ಚರಣ್‌ಸಿಂಗ್ ಅವರು ಪ್ರಧಾನಮಂತ್ರಿಯಾಗಿ ಹೊಸ ಸರಕಾರವನ್ನು ರಚಿಸಿದರು. ಆದರೆ, ಸರಕಾರ ರಚಿಸಿ ಇನ್ನೂ ಆರು ತಿಂಗಳು
ತುಂಬುವುದರೊಳಗೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ಹಿಂತೆಗೆದುಕೊಂಡು ಸರಕಾರ ಬೀಳುವಂತಾಯಿತು. ನಂತರ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ ಪ್ರಚಂಡ ಬಹುಮತದಿಂದ ಅಧಿಕಾರ ಗದ್ದುಗೆ ಏರಿ ಕಾಂಗ್ರೆಸ್ ಮತ್ತು ಇಂದಿರಾ ಗಾಂಧಿಯವರು ಭಾರತಕ್ಕೆ ಅನಿವಾರ್ಯ ಎನ್ನುವುದನ್ನು
ಸಾಬೀತುಪಡಿಸಿತು ಮತ್ತು ಕಾಂಗ್ರೆಸ್ ವಿರೋಧಿ ಪಕ್ಷಗಳ ಪ್ರಯಾಣ ಎಲ್ಲಿಂದ ಶುರುವಾಗಿತ್ತೋ ಅಲ್ಲಿಗೇ ಬಂದು ನಿಂತಿತು.

ಮುಂದೆ, ರಾಜೀವಗಾಂಧಿಯವರ ಮೇಲೆ ಬೋಫೋರ್ಸ್ ಹಗರಣದ ಆರೋಪ ಬಂದಾಗ ಅದನ್ನೇ ಅಸ್ತ್ರವಾಗಿಸಿಕೊಂಡು ವಿ.ಪಿ.ಸಿಂಗ್ ನೇತೃತ್ವದಲ್ಲಿ ರಚಿಸಿದ ಜನತಾ ಪರಿವಾರದ ಸಮ್ಮಿಶ್ರ ಸರಕಾರದ ಕಥೆಯೂ ೧೯೭೭ ರ ಮೊರಾರ್ಜಿ ದೇಸಾಯಿಯವರ ಸರಕಾರಕ್ಕೆ ಭಿನ್ನವಾಗಿರಲಿಲ್ಲ. ವಿ ಪಿ ಸಿಂಗ್ ಮತ್ತು ಚಂದ್ರಶೇಖರ್ ಸೇರಿ ಆಡಳಿತವನ್ನು ಎರಡು ವರ್ಷ ಪೂರ್ಣಮಾಡಲಾಗದೆ ಆ ಸರಕಾರ ಅಲ್ಪಾಯುಷ್ಯವನ್ನು ಮಾತ್ರ ಬಾಳಿತು. ಮತ್ತೊಂದು ಪ್ರಯತ್ನ ದಲ್ಲಿ ನಮ್ಮ ದೇವೇಗೌಡರು ಮತ್ತು ಐ.ಕೆ.ಗುಜ್ರಾಲ್ ಅವರ ಸರಕಾರವೂ ಎರಡು ವರ್ಷ ಕೂಡಾ ದಾಟಲಿಲ್ಲ.

ಅಪವಾದ ಎನ್ನುವಂತೆ ವಾಜಪೇಯಿಯವರಿಗೆ ಮಾತ್ರ ತಮ್ಮ ಸಮ್ಮಿಶ್ರ ಸರಕಾವನ್ನು ಪೂರ್ಣಾವಧಿ ನಿಭಾಯಿಸಲು ಸಾಧ್ಯವಾಗಿತ್ತು (ಬಹಳ ಕಷ್ಟದಿಂದ). ಅಂತೂ, ಸಮ್ಮಿಶ್ರ ಸರಕಾರಗಳ ಹಣೆಬರಹವೇ ಇಷ್ಟು ಎಂಬಂತಾಗಿ ಹೋಯಿತು. ಹೆಚ್ಚು ಸಂವೇದನಾಶೀಲವಾಗಿರುವುದರಿಂದ ಸಮ್ಮಿಶ್ರ ರಾಜಕೀಯವು ಭಾರತೀಯ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುತ್ತದೆ, ಏಕೆಂದರೆ ಅದು ಪ್ರಾದೇಶಿಕ ಭಾವನೆಗಳಿಗೆ ಸ್ಪಂದಿಸುತ್ತದೆ, ಒಂದೇ ಪಕ್ಷದ ಪ್ರಾಬಲ್ಯವನ್ನು ಮತ್ತು ಅದರ ನಿರಂಕುಶ ಆಡಳಿತದ ಸಾಧ್ಯತೆಗಳನ್ನು ಮತ್ತು ಒಂದು ಕುಟುಂಬದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಹಾಗೂ ಸಮ್ಮಿಶ್ರ
ಸರಕಾರಗಳಲ್ಲಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸಮಷ್ಠೀ ಭಾವ ಇರುತ್ತದೆ ಎನ್ನುವ ನಿರೀಕ್ಷೆಯಿಂದ ಒಂದೆರಡು ಸಲ ಭಾರತದ ಮತದಾರ ಸಮ್ಮಿಶ್ರ ರಾಜಕೀಯವನ್ನು ಪ್ರೋತ್ಸಾಹ ಮಾಡಿದ್ದಿದೆ.

ಆದರೆ, ಮೊರಾರ್ಜಿ ದೇಸಾಯಿ ಅವರ ನೇತೃತ್ವದ ಪ್ರಥಮ ಸಮ್ಮಿಶ್ರ ಸರಕಾರದಿಂದ ಹಿಡಿದು ಮುಂದೆ ಬಂದ ಸಮ್ಮಿಶ್ರ ಸರಕಾರಗಳ ಮೇಲಿದ್ದ ಜನರ
ನಿರೀಕ್ಷೆ ಹುಸಿಯಾಯಿತು. ಸಮ್ಮಿಶ್ರ ವ್ಯವಸ್ಥೆಯ ಸದಸ್ಯರ ನಡುವಿನ ಭಿನ್ನಾಭಿಪ್ರಾಯ, ಅಧಿಕಾರ ಮೇಲ್ಮೆಗಾಗಿನ ಒಳಜಗಳ ಸರಕಾರದ ಪತನಕ್ಕೇ ಕಾರಣವಾಗಿ ದೇಶ ಅಸ್ಥಿರತೆಯತ್ತ ಸಾಗುವುದರಲ್ಲಿರುತ್ತಿತ್ತು.

ಸಮ್ಮಿಶ್ರ ಸರಕಾರಗಳ ನಾಯಕನಾದವನಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳಲಾಗುತ್ತಿರಲಿಲ್ಲ, ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಪಾಲುದಾರ ಪಕ್ಷಗಳೊಂದಿಗೆ ಸಮಾಲೋಚನೆ ಮಾಡಲೇಬೇಕಾಗುತ್ತಿತ್ತು, ಸಮ್ಮಿಶ್ರ ಪಾಲುದಾರ ಪಕ್ಷಗಳ ಸಮನ್ವಯ ಸಮಿತಿಯು ‘ಸೂಪರ್-ಕ್ಯಾಬಿನೆಟ್’ ನಂತೆ ಕಾರ್ಯನಿರ್ವಹಿಸುತ್ತಿತ್ತು, ಸಮ್ಮಿಶ್ರ ಸರಕಾರದ ಸಣ್ಣ ಪುಟ್ಟ ಪಕ್ಷಗಳೂ ‘ಕಿಂಗ್ ಮೇಕರ್’ ಪಾತ್ರ ವಹಿಸುತ್ತಿದ್ದವು ಮತ್ತು ಅವರು ಸಂಸತ್ತಿನಲ್ಲಿನ ತನಗಿರುವ ಸ್ಥಾನಕ್ಕಿಂತ ಹೆಚ್ಚಿನ ಪಾಲನ್ನು ಬಯಸುತ್ತಾ ಅದು ಸಿಗದಿದ್ದಾಗ ಸರಕಾರವನ್ನು ‘ಬ್ಲಾಕ್ ಮೇಲ್’ ಮಾಡುವುದು, ನಾಯಕರು ರಾಷ್ಟ್ರೀಯ ಸ್ಥರದ ನಿರ್ಧಾರಗಳನ್ನು ಕೈಗೊಳ್ಳಬೇಕಾದಾಗ ಅಡೆತಡೆ ಉಂಟುಮಾಡಿ ಪ್ರಾದೇಶಿಕ ಸಂಗತಿಗಳಿಗೆ ಮಾತ್ರ ಪ್ರಾಮುಖ್ಯ ಸಿಗುವಂತಾಗುವುದು ಮುಂತಾದ ಎಲ್ಲ ಸಂಗತಿಗಳನ್ನೆ ಪರಾಮರ್ಷಿಸಿ, ‘ಹಳೇ ಗಂಡನ ಪಾದವೇ ಗತಿ’ ಎನ್ನುವ ಮಾತಿನಂತೆ ಮತದಾರ ಸಮ್ಮಿಶ್ರ ಚಿಂತನೆಯಿಂದ ದೂರ ಸರಿದು ಮತ್ತೆ ಪ್ರಬಲವಾಗಿರುವ ಒಂದ ಒಂದು ರಾಷ್ಟ್ರೀಯ ಪಕ್ಷಕ್ಕೆ  ಮಣೆಹಾಕಿರುವುದನ್ನು ನಾವು ನೋಡಿದ್ದೇವೆ.

ಸಮ್ಮಿಶ್ರ ಸರಕಾರಗಳ ಆಡಳಿತದಿಂದ ದೇಶಕ್ಕಾದ ಒಳಿತು ಕೆಡುಕುಗಳ ಪೂರ್ವಾನುಭವದಿಂದ ಪ್ರಬುದ್ಧನಾದಂತೆ ಕಂಡ ಭಾರತದ ಮತದಾರ, ಕಳೆದ ಎರಡು ದಶಕದಲ್ಲಿ ಸತತ ಎರಡು ಅವಧಿಗೆ ಕಾಂಗ್ರೆಸ್ ನೇತೃತ್ವದ ಯುಪಿಎಗೂ ಮತ್ತು ಮುಂದಿನ ಎರಡು ಅವಧಿಗೆ ಬಿಜೆಪಿ ನೇತೃತ್ವದ ಎನ್‌ಡಿಎಗೂ ನಿಚ್ಚಳ ಬಹುಮತ ನೀಡುವ ಮೂಲಕ ರಾಷ್ಟ್ರರಾಜಕೀಯದಲ್ಲಿ ಸ್ಥಿರತೆ ಮತ್ತು ವಿಶ್ವಾಸಾರ್ಹತೆಗೆ ಪ್ರಾಶಸ್ತ್ಯ ನೀಡಿದಂತೆ ಕಾಣುತ್ತದೆ.

ಈ ಬಾರಿಯೂ ಮತದಾರನ ಮುಂದೆ ಎರಡು ಆಯ್ಕೆಗಳು ಇತ್ತು. ೨೮ ಪಕ್ಷಗಳಿಂದ ಕೂಡಿದ ಮತ್ತು ಯಾವ ಪಕ್ಷಕ್ಕೂ ಸ್ವಂತ ೫೦ ಸ್ಥಾನಗಳನ್ನೂ ಗೆಲ್ಲುವ ಭರವಸೆ ಇಲ್ಲದ ಮತ್ತು ಎಲ್ಲರೂ ಒಪ್ಪುವ ಒಂದು ಪ್ರಬಲ ರಾಷ್ಟ್ರೀಯ ಪಕ್ಷದ ನೇತೃತ್ವರಹಿತ ಐಎನ್‌ಡಿಐಎ ಮೈತ್ರಿಕೂಟ ಒಂದು ಕಡೆಯಾದರೆ, ಹೆಚ್ಚೂ ಕಡಿಮೆ ಅಷ್ಟೇ ಸಂಖ್ಯೆಯ ಪಕ್ಷಗಳಿಂದ ಕೂಡಿದ ಆದರೆ ಸ್ವಂತವಾಗಿ ಸರಳ ಬಹುಮತವನ್ನು ಪಡೆಯುತ್ತೇವೆ ಎನ್ನುವ ಬಿಜೆಪಿ ಪಕ್ಷದ ನೇತೃತ್ವ ಇರುವ
ಎನ್‌ಡಿಎ ಮೈತ್ರಿಕೂಟ ಇನ್ನೊಂದು ಕಡೆ. ಮತದಾರನ ಮನದಲ್ಲಿ ಈ ಬಾರಿ ಏನಿತ್ತು ಎಂದು ತಿಳಿಯಲು ಕೆಲವು ದಿನ ಕಾಯಲೇಬೇಕಾಗಿದೆ.

(ಲೇಖಕರು: ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)