Thursday, 12th December 2024

ಶಾಸ್ತ್ರೀಜಿ; ಅತ್ಯಂತ ಕಠಿಣ ಅವಧಿಯಲ್ಲಿ ದೇಶ ಮುನ್ನಡೆಸಿದ ಧೀಮಂತ

ತನ್ನಿಮಿತ್ತ

ಭಾನುಪ್ರಕಾಶ ಎಲ್.

ಇಂದು ಲಾಲ್ ಬಹದ್ದೂರ್ ಶಾಸ್ತ್ರೀಜಿ ಜನ್ಮದಿನ.

ಜನವರಿ 1964, ನೆಹರು ಭುವನೇಶ್ವರದಲ್ಲಿ ಪಾರ್ಶ್ವವಾಯುವಿಗೆ ತುತ್ತಾದರು. ಅದೇ ವರ್ಷ ಮೇ 27ರಂದು ದೆಹಲಿಯ ತಮ್ಮ ನಿವಾಸದ ಬಚ್ಚಲು ಮನೆಯಲ್ಲಿ ಬಿದ್ದು, ಕೆಲವೇ ಗಂಟೆಗಳಲ್ಲಿ ನಿಧನರಾದರು. ಸುಮಾರು 17 ವರ್ಷ ಭಾರತವನ್ನು ಆಳಿದ ಮೊದಲ ಪ್ರಧಾನ ಮಂತ್ರಿಯ ಯುಗಾಂತ್ಯವಾಗಿತ್ತು. ನೆಹರು ಚಿತಾಭಸ್ಮ ಆರುವ ಮುನ್ನ ಕಾಂಗ್ರೆಸ್ ನಲ್ಲಿ ಪ್ರಧಾನಿ ಪಟ್ಟಕ್ಕೆ ರಾಜಕೀಯದ ಮೇಳಾಟಗಳು ಶುರುವಾಗಿದ್ದವು. ದೇಶದ ಉನ್ನತ ಪದವಿಯ ಮೇಲೆ ಕಣ್ಣಿಟ್ಟಿದ ಮೊರಾರ್ಜಿ ದೇಸಾಯಿ, ಕೃಷ್ಣ ಮೆನನ್, ಗುಲ್ಜಾರಿ ಲಾಲ್ ನಂದಾ,  ನೆಹರು ಕುಟುಂಬಕ್ಕೆ ಸಾಮೀಪ್ಯವಿದ್ದರೆ ಕಡೆಯ ಪಕ್ಷ ಹಂಗಾಮಿ ಪ್ರಧಾನಿ ಪಟ್ಟ ವಾದರೂ ಸಿಕ್ಕಿತೆಂಬ ಆಸೆ ಹೊಂದಿದ್ದ ಟಿ.ಟಿ.ಕೃಷ್ಣಮಾಚಾರಿ ((TTK), ಎಲ್ಲರೂ ಅವರವರ ರಾಜಕೀಯ ದಾಳಗಳನ್ನು ಉರುಳಿಸಲು ಸಜ್ಜಾಗಿ ದ್ದರು.

ಆಂತರಿಕ ಭದ್ರತೆಯ ದೃಷ್ಟಿಯಿಂದ ಗೃಹ ಸಚಿವರಾಗಿದ್ದ ಗುಲ್ಜಾರಿ ಲಾಲ್ ನಂದಾ ಹಂಗಾಮಿ ಪ್ರಧಾನಿಯಾಗಿ ಅಧಿಕಾರವಹಿಸಿ ಕೊಂಡರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮುಂದಿನ ಪ್ರಧಾನಿಯ ಆಯ್ಕೆಯ ಜವಾಬ್ದಾರಿ ಬಿದ್ದಿದ್ದು ಕಾಂಗ್ರೆಸ್‌ನ ಸಿಂಡಿಕೇಟ್ ಮೇಲೆ..! ನೆಹರು 1963ರಲ್ಲಿ ಪಕ್ಷದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ರೂಪಿಸಿದ್ದರು. ಅದರ ನಾಯಕರಾಗಿದ್ದವರು ಕಾಂಗ್ರೆಸ್‌ನ ಅಂದಿನ ಅಧ್ಯಕ್ಷರಾದ ಕುಮಾರಸ್ವಾಮಿ ಕಾಮರಾಜ್ (ಕೆ. ಕಾಮರಾಜ್),  ಬಂಗಾಳದಿಂದ ಅತುಲ್ಯ ಘೋಷ್, ಅಂದಿನ ಬಾಂಬೆ ಪ್ರಾಂತ್ಯದಿಂದ ದಿ ಅನ್ ಕ್ರಾನ್ಡ್‌ ಕಿಂಗ್ ಆಫ್ ಬಾಂಬೆ ಎಂದೇ ಖ್ಯಾತರಾಗಿದ್ದ ಎಸ್.ಕೆ.ಪಾಟೀಲ್, ನೆರೆಯ ಆಂಧ್ರಪ್ರದೇಶ ದಿಂದ ಎನ್.ಸಂಜೀವರೆಡ್ಡಿ, ಕರ್ನಾಟಕದಿಂದ ಎಸ್. ನಿಜಲಿಂಗಪ್ಪ.

ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಮೇಲೆ ಅಷ್ಟೇನು ಹಿಡಿತವಿಲ್ಲದ ಕಾಮರಾಜ್ ಪ್ರಧಾನಿಯಾಗುವ ಆಸೆ ಇರಲಿಲ್ಲ. ಆದರೆ ಆ
ಕುರ್ಚಿಯಲ್ಲಿ ಕೂರುವ ವ್ಯಕ್ತಿಯನ್ನ ತಮ್ಮ ಕಪಿಮುಷ್ಠಿಯಲ್ಲಿ ನಿಯಂತ್ರಿಸುವ ಇರಾದೆ ಇದ್ದಿದ್ದು ಸುಳ್ಳಲ್ಲ. ಕಾಮರಾಜ್‌ಗೆ
ಮೊರಾರ್ಜಿಯನ್ನು ಪ್ರಧಾನಿ ಮಾಡಲು ಇಷ್ಟವಿರಲಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಮೊರಾರ್ಜಿ, ಕಾಮರಾಜ್ ಒಬ್ಬ
ಅಪ್ರಾಮಾಣಿಕ ಎಂದು ಹೇಳಿ ನಾನೇ ನೆಹರುರವರ ಉತ್ತರಾಧಿಕಾರಿ ಎಂದು ಸ್ವಯಂ ಘೋಷಿಸಿಬಿಟ್ಟರು. ಈ ಸುದ್ದಿ ದಿನಪತ್ರಿಕೆ ಗಳಲ್ಲಿ ಮುಖ್ಯ ಸುದ್ದಿಯಾಗಿತ್ತು. ಈ ಎಲ್ಲಾ ದೊಂಬರಾಟವನ್ನು ನೋಡುತ್ತಿದ್ದ ಸಿಂಡಿಕೇಟ್ ತಿರುಪತಿಯಲ್ಲಿ ಸಭೆ ಸೇರಿತ್ತು. ಎಲ್ಲರ ಒಮ್ಮತದಿಂದ ಆಯ್ಕೆಯಾದ ವ್ಯಕ್ತಿಯೇ ಸರಳತೆಯ ಪ್ರತಿರೂಪ, ಮೃದು ಸ್ವಭಾವದ ಪ್ರಾಮಾಣಿಕ, ಕಳಂಕ ರಹಿತ ವ್ಯಕ್ತಿತ್ವದ ಕಟ್ಟಾ ಕಾಂಗ್ರೆಸ್ಸಿಗ ವಾಮನ ಮೂರ್ತಿಯಂತಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ.

ಭಾರತವನ್ನು ಅತ್ಯಂತ ಕಠಿಣ ಅವಧಿಯಲ್ಲಿ ಮುನ್ನಡೆಸಿದ ಕೀರ್ತಿ ಸಲ್ಲುವುದು ಶಾಸ್ತ್ರೀಜಿಗೆ. ತಮಗೆ ಪ್ರಧಾನಿ ಹುದ್ದೆ ಬೇಕೆಂದು ಲಾಭಿ ಮಾಡದೇ, ಈ ದೇಶದ ಆಡಳಿತವನ್ನು ಅತ್ಯಂತ ನಿರ್ಣಾಯಕ ಕಾಲಘಟ್ಟದಲ್ಲಿ ವಹಿಸಿಕೊಂಡರು. ಶಾಸ್ತ್ರೀಜಿಯನ್ನು ಆಯ್ಕೆ ಮಾಡಿ ತಮ್ಮ ವೈಯಕ್ತಿಕ ಕೆಲಸಗಳನ್ನು ಸುಸೂತ್ರವಾಗಿ ಮಾಡಿಕೊಳ್ಳುವ ಇಚ್ಛೆ ಇದ್ದ ವ್ಯಕ್ತಿಗಳ ಕೈಗೊಂಬೆಯಾಗದೇ, 18 ತಿಂಗಳು ದೇಶವನ್ನು ಆಳಿ ಗೌರವ ಗಳಿಸಿದ ಆರ್ಹ ನಾಯಕ.

ಶಾಸ್ತ್ರೀಜಿ ಹುಟ್ಟಿದ್ದು ಉತ್ತರಪ್ರದೇಶದ ವಾರಣಾಸಿ ಬಳಿಯ ಮೊಘಲ್ ಸರಾಯ್‌ನಲ್ಲಿ. ಅಕ್ಟೋಬರ್ 2ರಂದು. ಇಂದು ಶಾಸ್ತ್ರೀಜಿ ಯವರ ಜನ್ಮದಿನ. ಶಾಸ್ತ್ರೀಜಿಯವರ ಮೂಲ ಹೆಸರು ಲಾಲ್ ಬಹದ್ದೂರ್ ಶ್ರೀವಾಸ್ತವ. ಶ್ರೀವಾಸ್ತವ ಜಾತಿಯ ಸೂಚ್ಯಕವಾಗಿದೆ ಎಂದು ಕೈ ಬಿಟ್ಟರು. 1926ರಲ್ಲಿ ಕಾಶಿ ವಿದ್ಯಾಪೀಠ ವಿಶ್ವವಿದ್ಯಾಲಯದಲ್ಲಿ ವಿದ್ವತ್ತು ಪೂರ್ಣಗೊಳಿಸಿದ ಯಶಸ್ಸಿನ ಸಂಕೇತವಾಗಿ ಶಾಸ್ತ್ರಿ ಎಂಬ ಬಿರುದನ್ನು ಪಡೆದರು. ನಂತರ ತಮ್ಮ ಹೆಸರಿನ ಮುಂದಕ್ಕೆ ಅದನ್ನು ಸೇರಿಸಿಕೊಂಡರು. ಶಾಸ್ತ್ರೀಯವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜೈಲು ವಾಸಿಯಾದಾಗ, ಅವರ ಮಗಳಿಗೆ ಆರೋಗ್ಯದಲ್ಲಿ ಏರುಪೇರಾಯಿತು. ಜೈಲ್ ಅಧಿಕಾರಿಗಳು ಶಾಸ್ತ್ರೀಯ ವರನ್ನು 14 ದಿನಗಳ ಪೆರೋಲ್ ಮೇಲೆ ಬಿಡುಗಡೆಗೊಳಿಸುತ್ತಾರೆ.

ಮನೆಗೆ ಬರುವುದರೊಳಗೆ ಮಗಳು ನಿಧನವಾಗಿರುತ್ತಾಳೆ. ಅಂತ್ಯ ಸಂಸ್ಕಾರವನ್ನು ಪೂರ್ಣಗೊಳಿಸಿ, ಪೆರೋಲ್ ಅವಧಿ ಮುಗಿಯುವ ಮುನ್ನ ಜೈಲು ಸೇರಿದ ಪುಣ್ಯಕೋಟಿ ರಾಜಕಾರಣಿ. ಶಾಸ್ತ್ರೀಜಿ ಪ್ರಧಾನಿಯಾಗಿದ್ದಾಗ ಅವರ ಬಳಿ ಸ್ವಂತಕಾರಿರಲಿಲ್ಲ. ಸರಕಾರ ಅವರಿಗೆ ಷೆವಲರ್ ಇಂಪಾಲ ಕಾರನ್ನು ನೀಡಿತ್ತು. ಅದನ್ನು ಅವರೆಂದೂ ಸ್ವಂತಕ್ಕೆ ಉಪಯೋಗಿಸಲಿಲ್ಲ. ಇಂದು ಅನೇಕ ರಾಜಕಾರಣಿಗಳು ತಮ್ಮ ಅಧಿಕಾರದ ಅವಧಿ ಮುಗಿದ ನಂತರವು ಸರಕಾರಿ ಸವಲತ್ತುಗಳನ್ನು ಹಿಂತಿರುಗಿಸಲು ಮನಸ್ಸು ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ, ಯಾವುದೇ ಸರಕಾರಿ ಹುದ್ದೆಯಲಿಲ್ಲದೆ ಕೇವಲ ನೆಹರು ಕುಟುಂಬದ ಕುಡಿಯೆಂಬ ಕಾರಣಕ್ಕೆ ದಶಕಗಳ ಕಾಲ ಸರಕಾರಿ ಬಂಗಲೆಯಲ್ಲಿ ನೆಲೆ ನಿಂತಿದ್ದನ್ನ ನಾವು ನೋಡಿದ್ದೇವೆ. ಶಾಸ್ತ್ರೀಜಿ
ಯವರ ಪ್ರಾಮಾಣಿಕತೆಗೆ DLE 6 ನಂಬರಿನ ಕಾರೇ ಸಾಕ್ಷಿ.

ಇವತ್ತೂ ಸಹ ದೆಹಲಿಯ ಶಾಸ್ತ್ರಿ ಮೆಮೋರಿಯಲ್ ನಲ್ಲಿ ನೋಡಲು ಸಿಗುತ್ತದೆ. ಪ್ರಧಾನಿಯಾಗಿದ್ದಾಗ ತಮ್ಮ ಸ್ವಂತ ಕೆಲಸಕ್ಕೆ 12000 ರುಪಾಯಿಯ ಫಿಯೆಟ್ ಕಾರನ್ನು ಖರೀದಿಸಲು 5000 ರುಪಾಯಿ ಸಾಲವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ

ಪಡೆದಿದ್ದರು. ಸಾಲಕ್ಕೆ ಅರ್ಜಿ ಹಾಕಿದ ಕೆಲವೇ ಗಂಟೆಗಳಲ್ಲಿ ಸಾಲ ಮಂಜೂರಾಯಿತು. ತಕ್ಷಣ ತಮಗೆ ಸಿಕ್ಕ ಮಂಜೂರಾತಿಯಂತೆ ಎಲ್ಲಾ ಸಾಮಾನ್ಯ ಆರ್ಜಿದಾರರಿಗೂ ಸಾಲ ಮಂಜೂರಾಗುವುದೇ ಎಂದು ಪರೀಕ್ಷಿಸಲು ತಮ್ಮ ಕಾರ್ಯದರ್ಶಿಗೆ ಸೂಚಿಸಿದ್ದರು. ಇದು ನಿಜವಾದ ಸಮಾನತೆಯನ್ನು ಬಯಸುವ ದೂರದೃಷ್ಟಿ ನಾಯತ್ವಕ್ಕೆ ಹಿಡಿದ ಕೈಗನ್ನಡಿ.

ಶಾಸ್ತ್ರೀಜಿ ಒಮ್ಮೆ ಗುಜರಾತ್‌ನ ಆನಂದ್‌ನಲ್ಲಿ, ಭಾರತದಲ್ಲಿ ಶ್ವೇತ ಕ್ರಾಂತಿಯ ಹರಿಕಾರ ವರ್ಗೀಸ್ ಕುರಿಯನ್‌ರನ್ನು ಭೇಟಿ
ಮಾಡಿದ್ದರು. ಆ ದಿನ ರಾತ್ರಿ ಒಂದು ಹಳ್ಳಿಯಲ್ಲಿ ಆಜ್ಞಾತವಾಗಿ ತಂಗಲು ಸಹಾಯ ಮಾಡುವಂತೆ ವಿನಂತಿಸಿದರು. ಕುರಿಯನ್
ತಕ್ಷಣಕ್ಕೆ ಭಯಭೀತರಾದರು. ಭದ್ರತೆ ಇಲ್ಲದೆ ಹಾಗೂ ಯಾವ ಸವಲತ್ತುಗಳ ಸಹಾಯವಿಲ್ಲದೆ ಪ್ರಧಾನಿ ಇಡೀ ರಾತ್ರಿ ಇರಲು ಹೇಗೆ
ಸಾಧ್ಯ? ಕಡೆಗೆ ಶಾಸ್ತ್ರೀಜಿಯವರ ಒತ್ತಾಯಕ್ಕೆ ಮಣಿದು ಹತ್ತಿರದ ಹಳ್ಳಿಯ ಬಳಿ ಬಿಟ್ಟರು. ಕಾಲ್ನಡಿಗೆಯಲ್ಲಿ ಹಳ್ಳಿಯನ್ನು ತಲುಪಿದ
ಶಾಸ್ತ್ರೀಜಿ, ತಾವು ದಾರಿ ತಪ್ಪಿದ ಯಾತ್ರಿಕನೆಂದು ಪರಿಚಯಿಸಿಕೊಂಡರು. ಇಡೀ ರಾತ್ರಿ ಸಹಕಾರಿ ತತ್ತ್ವ ಮತ್ತು ಆಂದೋಲನ
ಹಳ್ಳಿಗಾರರಿಗೆ ಹೇಗೆ ಸಹಾಯಕವಾಗಿದೆ ಎಂದು ಮಾಹಿತಿ ಕಲೆ ಹಾಕಿದರು. ಮರುದಿನ ಆನಂದ್ ಮಾದರಿಗೆ ಮನಸೋತು,
ಕುರಿಯನ್‌ರಿಗೆ ಆನಂದ್‌ನಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲು ಸಂಪೂರ್ಣ ಸಹಕಾರವನ್ನು ನೀಡಿದ್ದರು. ಅದೇ ಇಂದು ನಮ್ಮೆದೂರಿಗೆ ಹೆಮ್ಮರವಾಗಿ ಬೆಳೆದು ನಿಂತಿರುವ ಆಮೂಲ್ ಇಂಡಿಯಾ..!

ನೆಹರು ಆಡಳಿತದ ಕಡೇ ದಿನಗಳಲ್ಲಿ ಭಾರತ ಆರ್ಥಿಕವಾಗಿ ಬಹಳ ಹಿನ್ನಡೆ ಕಂಡಿತ್ತು. 1962ರಲ್ಲಿ ನೆಹರು ಮತ್ತು ಅಂದಿನ ಗೃಹ ಸಚಿವ ಕೃಷ್ಣಮೆನನ್ ಮಾಡಿದ ಎಡವಟ್ಟುಗಳಿಂದ, ಭಾರತ – ಚೀನಾದ ವಿರುದ್ಧ ಯುದ್ಧದಲ್ಲಿ ಸೋತಿತ್ತು. ನಮ್ಮ ದೇಶದ ಸೇನಾಪಡೆ ಅಸಮರ್ಥವೆಂದು ತಿಳಿದ ಪಾಕಿಸ್ತಾನ 1965ರ ಏಪ್ರಿಲ್‌ನಲ್ಲಿ ಗುಜರಾತ್‌ನ ಕಛ್ ಮರುಭೂಮಿಯಲ್ಲಿ ಗಡಿ ತಗಾದೆ ತೆಗೆಯಿತು. ಕಛ್ ಪ್ರದೇಶದ ಕೆಲಭಾಗವನ್ನು ಅತಿಕ್ರಮಣವಾಗಿ ಪ್ರವೇಶಿಸಿ, ಆಕ್ರಮಿಸಿತು. ಈ ವಿವಾದ ಬ್ರಿಟಿಷ್ ಸರಕಾರದ ಮಧ್ಯಸ್ಥಿಕೆಯಿಂದ ಶಾಂತವಾಯಿತು.

ಅಷ್ಟಕ್ಕೆ ಸಮ್ಮನಾಗದ ಯುದ್ಧಪೀಪಾಸು ದೇಶ, ಕಾಶ್ಮೀರದ ಗಡಿಪ್ರದೇಶದಲ್ಲಿ ಒಳನುಸುಳುವಿಕೆಯನ್ನು ಶುರು ಮಾಡಿತು.
ಉಗ್ರರಿಗೆ ತರಬೇತಿಯನ್ನು ನೀಡಿ ಸಣ್ಣ ಗುಂಪುಗಳಲ್ಲಿ ಕಾಶ್ಮೀರಕ್ಕೆ ಒಳಸುಳಲುವಂತೆ ಯೋಜನೆ ರೂಪಿಸಿತು. ಸೆಪ್ಟೆೆಂಬರ್ 1ರಂದು
ಕದನ ವಿರಾಮ ಉಲ್ಲಂಘಿಸಿ, ಅಂತಾರಾಷ್ಟ್ರೀಯ ಗಡಿ ರೇಖೆಯನ್ನು ದಾಟಿ ಅಖ್ನೂರ್ – ಜಮ್ಮು ವಲಯದಲ್ಲಿ ಭಾರಿ ದಾಳಿ ನಡೆಸಿತು. ತಕ್ಷಣ ಶಾಸ್ತ್ರೀಜಿ ತಡಮಾಡದೇ ಭಾರತೀಯ ಸೈನ್ಯಕ್ಕೆ ಪಂಜಾಬ್‌ನ ಕಡೆಯಿಂದ ಮಿಂಚಿನ ವೇಗದಲ್ಲಿ ಲಾಹೋರ್ ‌ನನ್ನು ವಶಪಡಿಸಿಕೊಳ್ಳಲು ಆದೇಶಿಸಿದರು. ಈ ಆದೇಶವನ್ನು ನಿರ್ಧರಿಸಲು ಅವರು ತೆಗೆದುಕೊಂಡ ಸಮಯ ಕೇವಲ 7 ನಿಮಿಷಗಳು…! ಪಾಕಿಸ್ತಾನ ನಮ್ಮ ವಾಯು ನೆಲೆಯ ಮೇಲೆ ದಾಳಿ ನಡೆಸಿ 13 ಭಾರತೀಯ ವಿಮಾನಗಳನ್ನು ನಾಶಪಡಿಸಿತ್ತು.

ಸೆಪ್ಟೆಂಬರ್‌ 8ರಂದು ಪಾಕಿಸ್ತಾನಕ್ಕೆ ಅಚ್ಚರಿ ಕಾದಿತ್ತು. ಬೆಳಿಗ್ಗೆ 9 ಗಂಟೆಗೆ ಭಾರತೀಯ ಸೈನ್ಯ ಇಚೋಗಿಲ್ ಕಾಲುವೆಯಲ್ಲಿನ ಪಾಕಿಸ್ತಾನದ ರಕ್ಷಣಾ ನೆಲೆಯನ್ನು ಆಕ್ರಮಿಸಿಬಿಟ್ಟಿತು. 10.30ರ ಹೊತ್ತಿಗೆ ಲಾಹೋರ್ ನಗರದ ಹೊರವಲಯದಲ್ಲಿದ್ದ ಬಾಟಾ ಶೂ ಕಾರ್ಖಾನೆಯ ಬಳಿ ತಲುಪಿ ನಿಂತಿತ್ತು. ಯಾವಾಗ ಲಾಹೋರ್‌ಗೆ ಲಗ್ಗೆಯಿಟ್ಟೆವೋ, ಪಾಪಿ ಪಾಕಿಸ್ತಾನದ ಬಲ ಕುಸಿದು ಹೋಗಿತ್ತು. ಯುದ್ಧ ಮುಂದುವರಿಸಿದ್ದರೆ ಸೋಲು ಖಚಿತವೆಂದು ಖಾತರಿಯಾಯಿತು. ಭಾರತವನ್ನು ಯುದ್ಧದಿಂದ ಹಿಂದೆ ಸರಿಸುವಂತೆ ಅಮೆರಿಕದ ಮುಂದೆ ಕೈ ಕಟ್ಟಿ ನಿಂತಿತ್ತು. 22 ದಿನಗಳ ಘೋರ ಯುದ್ಧ. ಭಾರತ ಕದನ ವಿರಾಮ ಘೋಷಿಸಿತ್ತು.ಸೋವಿಯತ್ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಭಾರತದ ಪ್ರಧಾನಿ ಮತ್ತು ಪಾಕಿಸ್ತಾನದ ಪ್ರಧಾನಿ ರಷ್ಯಾ ಸಂಧಾನ ಸಭೆಗೆ ಬರುವಂತೆ ಆಹ್ವಾನಿಸಿದರು.

ಶಾಸ್ತ್ರೀಜಿ ಮೊದಲು ತಾಷ್ಕೆೆಂಟ್‌ಗೆ ಹೋಗಲು ನಿರಾಕರಿಸಿದ್ದರು. ಎರಡನೇ ಬಾರಿಯ ಒತ್ತಾಯಕ್ಕೆ ಮಣಿಯಬೇಕಾಯಿತ್ತು. ಏಕೆಂದರೆ ರಷ್ಯಾ ಮೊದಲಿನಿಂದಲೂ ಕಾಶ್ಮೀರದ ವಿಷಯದಲ್ಲಿ ನಮ್ಮ ಬೆಂಬಲಕ್ಕೆ ನಿಂತಿತ್ತು. ಜನವರಿ 3, 1996ರಂದು ಶಾಸ್ತ್ರೀಜಿ ಭಾರತದಿಂದ ತಾಷ್ಕೆೆಂಟ್‌ಗೆ ಹೊರಟರು. ಅವರ ಜತೆಗೆ ಭಾರತೀಯ ಅಧಿಕಾರಿಗಳು, ಪತ್ರಕರ್ತರಾಗಿದ್ದ ಕುಲದೀಪ್ ನಾಯರ್, ಪ್ರಧಾನಿ ವೈದ್ಯರಾಗಿದ್ದ ಡಾ.ಛುಗ್, ಆಪ್ತ ಸಹಾಯುಕ ರಾಮನಾಥ ವಿಮಾನದಲ್ಲಿ ತೆಹರಾನ್ ಮೂಲಕ ತಾಷ್ಕೆೆಂಟ್ ತಲುಪಿದ್ದರು. ರಷ್ಯಾದ ಪ್ರಧಾನಿ ಒಂದು ವಾರ ಸತತವಾಗಿ ಸಂಧಾನಕ್ಕೆೆ ಪ್ರಯತ್ನಪಟ್ಟರು. ಪಾಕಿಸ್ತಾನದ ಯಾವ ಷರತ್ತುಗಳಿಗೂ ಶಾಸ್ತ್ರೀಜಿ ಒಪ್ಪಲಿಲ್ಲ. ಹಾಜಿಪೀರ್ ಮತ್ತು ತಿಢ್ವಾ ಪ್ರದೇಶಗಳನ್ನು ತಮಗೆ ಹಿಂತಿರುಗಿ ನೀಡುವಂತೆ ಪಾಕ್ ಪ್ರಧಾನಿ ಜನರಲ್ ಆಯೂಬ್ ಖಾನ್ ಒತ್ತಡ ಹಾಕುತ್ತಿದ್ದರು.

ಜನವರಿ 11 ರಂದು ಅವರ ಯಾವ ಷರತ್ತುಗಳಿಗೂ ಒಪ್ಪದ ಶಾಸ್ತ್ರೀಜಿ ಭಾರತಕ್ಕೆ ಹಿಂತಿರುಗಲು ನಿರ್ಧರಿಸಿದ್ದರು. ಭಾರತೀಯ ಅಧಿಕಾರಿಗಳು ವಾಪಸ್ಸು ಬರುವ ತಯಾರಿಯಲ್ಲಿದ್ದರು. ಕೆಲವು ಅಧಿಕಾರಿಗಳು ಮಾರುಕಟ್ಟೆಯಲ್ಲಿ ತಮ್ಮ ಕುಟುಂಬ ಸದಸ್ಯರಿಗೆ ಉಡುಗೊರೆಗಳ ಖರೀದಿಯಲ್ಲಿದ್ದರು. ಆದರೆ, ಇದ್ದಕ್ಕಿದಂತೆ ಮಧ್ಯಾಹ್ನ 4 ಗಂಟೆಗೆ ಶಾಸ್ತ್ರೀಜಿ ಮನಸ್ಸು ಬದಲಿಸಿ ಕೊಸಿಗಿನ್ ಸಮ್ಮಖದಲ್ಲಿ ತಾಷ್ಕೆೆಂಟ್ ಒಪ್ಪಂದಕ್ಕೆ ಸಹಿ ಹಾಕಿದರು. ಅವತ್ತಿನ ಸಂಜೆ ಸೋವಿಯತ್ ಸರಕಾರ ಹೋಟೆಲ್ ತಾಷ್ಕೆೆಂಟ್‌ನಲ್ಲಿ ಅದ್ದೂರಿ ಔತಣಕೂಟ ನೀಡಿತ್ತು. ವಿಸ್ಕಿ ಮತ್ತು ವೋಡ್ಕಾ ನೀರಿನಂತೆ ಹರಿಯಿತು.

ರಾತ್ರಿ ಹತ್ತು ಗಂಟೆಗೆ ಶಾಸ್ತ್ರೀಜಿ ತಮ್ಮ ಡಾಚಾ ಸೇರಿದರು. ಅವರಿದ್ದ ವಿಲ್ಲಾ ಭಾರತೀಯ ಅಧಿಕಾರಿಗಳು ಮತ್ತು ಕುಲದೀಪ್
ನಾಯರ್ ತಂಗಿದ್ದ ಸ್ಥಳಕ್ಕಿಂತ ಸ್ವಲ್ಪ ದೂರದಲ್ಲಿತ್ತು. ರಾತ್ರಿಯ ಊಟ ಮುಗಿಸಿದ ಪ್ರಧಾನಿ ತಮ್ಮ ಕುಟುಂಬ ಸದಸ್ಯರ ಜೊತೆಗೆ
ಮಾತನಾಡಿದ್ದರು. ಶಾಸ್ತ್ರೀಜಿ ಸಹಾಯಕ ರಾಮನಾಥ ಹಾಲು ಮತ್ತು ನೀರನ್ನು ನೀಡಿದ. ಮೊದಲು ಹಾಲನ್ನು ಕುಡಿದು ಕೆಲವು ಕಡತಗಳನ್ನು ಪರಿಶೀಲಿಸಿದರು. ಮಲಗುವ ಮುನ್ನ ನೀರನ್ನು ಕುಡಿದರು. ನಂತರದ ಕೆಲವೇ ಗಂಟೆಗಳಲ್ಲಿ ಶಾಸ್ತ್ರೀಜಿ ನಿಧನ ರಾದರು…! ತಕ್ಷಣ ವೈದ್ಯರಾದ ಛುಗ್ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಂಡು ಬದುಕಿಸಲು ಪ್ರಯತ್ನ ಪಟ್ಟರು. ಅದಾಗಲೇ ಶಾಸ್ತ್ರೀ ಯವರು ಚಿರನಿದ್ರೆಗೆ ಜಾರಿದ್ದರು.

ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಸರಕಾರ ಮತ್ತು ಅಲ್ಲಿದ ವೈದ್ಯರ ತಂಡ ಶಾಸ್ತ್ರೀಗಳ ಸಾವು ಹೃದಯಘಾತವೆಂದು ಷರಾ
ಬರೆದು ಬಿಟ್ಟರು. ಶಾಸ್ತ್ರೀಜಿಯವರ ಪಾರ್ಥಿವ ಶರೀರ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಶಾಸ್ತ್ರೀಜಿಯವರ ತಾಯಿ ತಮ್ಮ ಮಗನ ಮೃತದೇಹವನ್ನು ನೋಡುತ್ತಿದ್ದಂತೆ ಚೀರಿದ ಮಾತು, ನನ್ನ ಮಗನಿಗೆ ವಿಷ ಪ್ರಾಷಣವಾಗಿದೆ..! ಈ ವಿಷಯ ಬಹಳ ಚರ್ಚಿತವಾಗಿ ಸಂಸತ್ತಿನಲ್ಲಿ ಪ್ರತಿಧ್ವನಿಸಿತು.