Wednesday, 11th December 2024

ಮಾದರಿ ಆಡಳಿತದ ಮಹನೀಯರಿವರು

ಗುಣಗಾನ

ಆದರ್ಶ್ ಶೆಟ್ಟಿ, ಉಪ್ಪಿನಂಗಡಿ

ಅಟಲ್ ಬಿಹಾರಿ ವಾಜಪೇಯಿಯವರ ಆಡಳಿತದಲ್ಲಿ ಭಾರತ ಪ್ರಕಾಶಿಸುತ್ತಿದ್ದುದನ್ನು ನಾವೆಲ್ಲರೂ ಕಂಡಿದ್ದೆವು. ಈ ದೇಶದ ಅಭಿವೃದ್ಧಿಯ ಬಗ್ಗೆ ದೂರ ದೃಷ್ಟಿಯ ಚಿಂತನೆ ಹೊಂದಿದ್ದ ಅವರು, ‘ಗ್ರಾಮ ಸಡಕ್’ ಎಂಬ ಪರಿಕಲ್ಪನೆಯಡಿ ದೇಶದ ಪ್ರತಿಗ್ರಾಮಕ್ಕೂ ರಸ್ತೆ ಒದಗಿಸಿ ಗ್ರಾಮಾಭಿವೃದ್ಧಿ ಮಾಡುವ ಕನಸು ಕಂಡರು.

ಅವರು ರಾಷ್ಟ್ರೀಯ ಹೆದ್ದಾರಿಗಳ ನವನಿರ್ಮಾಣದ ರೂವಾರಿಯೂ ಹೌದು. ರಾಜಕಾರಣದಲ್ಲಿ ಇದ್ದುಕೊಂಡೂ ಸ್ವಜನ ಪಕ್ಷಪಾತ, ಜಾತಿ ಓಲೈಕೆ ಇತ್ಯಾದಿ ಕೆಸರಿನಲ್ಲಿ ಸಿಲುಕದೆ ಮೌಲ್ಯವನ್ನು ಎತ್ತಿಹಿಡಿಯುವುದು, ದೇಶಕ್ಕೆ ಹಾಗೂ ಜಗತ್ತಿಗೆ ಮಾದರಿಯಾಗುವ ದೂರದೃಷ್ಟಿಯ ಯೋಜನೆಗಳನ್ನು ಅನುಷ್ಠಾನ ಗೊಳಿಸುವುದು, ಅವು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡುವುದು ಸುಲಭದ ಕೆಲಸವಲ್ಲ. ಇದು ಓರ್ವ ಪ್ರಬುದ್ಧ ರಾಜಕಾರಣಿ ಯಿಂದ ಮಾತ್ರವೇ ಸಾಧ್ಯವಾಗುವಂಥದ್ದು. ಈ ವೈಶಿಷ್ಟ್ಯವು ವಾಜಪೇಯಿಯವರಲ್ಲಿ ಹರಳುಗಟ್ಟಿದ್ದರಿಂದಲೇ ತಮ್ಮ ರಾಜಕೀಯ ವಿರೋಧಿಗಳಿಂದಲೂ ಅವರು ಪ್ರಶಂಸಿಸಲ್ಪಡುತ್ತಿದ್ದರು.

ಬಿಜೆಪಿಯು ಆರೆಸ್ಸೆಸ್‌ನ ತಳಹದಿಯ ಮೇಲೆ ಕಾರ್ಯ ನಿರ್ವಹಿಸುವ ಒಂದು ರಾಜಕೀಯ ಸಂಘಟನೆ. ಆರೆಸ್ಸೆಸ್ ಪ್ರಚಾರಕರಾಗಿ ಕಾರ್ಯನಿರ್ವಹಿಸಿ ಬಳಿಕ ರಾಜಕಾರಣಕ್ಕಿಳಿದು ಆಡಳಿತ ನಡೆಸಿ ಯಶಸ್ವಿಯಾದ ಕೆಲವೇ ರಾಜಕಾರಣಿಗಳ ಪೈಕಿ ಎದ್ದುಕಾಣುವವರು ವಾಜಪೇಯಿ, ಲಾಲ್ ಕೃಷ್ಣ ಆಡ್ವಾಣಿ ಹಾಗೂ ನರೇಂದ್ರ ಮೋದಿಯವರು. ತಮ್ಮ ಬದುಕಿನಲ್ಲಿ ಕೆಸರು-ಕೊಚ್ಚೆ ಮೆತ್ತಿಕೊಳ್ಳದೆ ಕೇವಲ ಸಂಘಟನೆ, ನಿಯೋಜಿತ ಕಾರ್ಯಭಾರ ಹಾಗೂ ರಾಷ್ಟ್ರೀಯ ಚಿಂತನೆಯ ಹಾದಿಯಲ್ಲೇ ಹೆಜ್ಜೆಹಾಕಿದ ಮುತ್ಸದ್ದಿಗಳಿವರು. ಕಳೆದ ಎರಡು ಅವಧಿಯಿಂದ ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ನರೇಂದ್ರ ಮೋದಿ ಸರಕಾರ ಕೂಡ ರಾಷ್ಟ್ರದ ನವನಿರ್ಮಾಣದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ.

ಅಂತಾರಾಷ್ಟ್ರೀಯ ಸಂಬಂಧ, ಸಾಂಸ್ಕೃತಿಕ ತಳಹದಿಯ ಪುನರುತ್ಥಾನ, ರಾಮಮಂದಿರ ನಿರ್ಮಾಣ, ಆರ್ಥಿಕ ಸುಧಾರಣೆ, ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಭ್ರಷ್ಟಾಚಾರ-ಮುಕ್ತ ಆಡಳಿತ, ಕೇಂದ್ರ ಸರಕಾರದ ಸವಲತ್ತುಗಳನ್ನು ಜನಸಾಮಾನ್ಯರಿಗೆ ನೇರವಾಗಿ ತಲುಪಿಸುವಿಕೆ ಹೀಗೆ ಹಲವು ಬಾಬತ್ತುಗಳಲ್ಲಿ ಮೋದಿ ಸರಕಾರವು ಪಾರಮ್ಯವನ್ನು ಮೆರೆದಿದೆ. ಮಾತ್ರವಲ್ಲದೆ, ಕಿಸಾನ್ ಸಮ್ಮಾನ್ ನಿಧಿ, ಬ್ಯಾಂಕಿಂಗ್/ವ್ಯವಹಾರ ಕ್ಷೇತ್ರದಲ್ಲಿ
ಕ್ರಾಂತಿಕಾರಕ ಬದಲಾವಣೆಗಳು, ಕೃಷಿಕ್ಷೇತ್ರ ಮತ್ತು ರೈತರ ಕಲ್ಯಾಣಕ್ಕಾಗಿ ಯೋಜನೆಗಳು, ಅಂತಾರಾಷ್ಟ್ರೀಯ ಯೋಗದಿನ ಘೋಷಣೆಯಾಗುವಲ್ಲಿ ವಹಿಸಿದ ಪಾತ್ರ, ಸ್ವಚ್ಛ ಭಾರತ, ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಪರಿಕಲ್ಪನೆಗಳ ಅಡಿಯಲ್ಲಿ ಕೈಗೊಂಡ ಉಪಕ್ರಮಗಳು ಹೀಗೆ ಹಲವಾರು
ಹೊಸತನಗಳೊಂದಿಗೆ ತಮ್ಮ ಆಡಳಿತಕ್ಕೆ ಪ್ರಭೆ ತುಂಬಿದವರು ನರೇಂದ್ರ ಮೋದಿಯವರು.

ದೇಶದಲ್ಲಿನ ವಿವಿಧ ಕ್ಷೇತ್ರಗಳ ತಳಮಟ್ಟದ ಸಾಧಕರನ್ನು ನೇರವಾಗಿ ಕೇಂದ್ರ ಸರಕಾರವೇ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದನ್ನು ಮೋದಿಯವರ ಆಡಳಿತದಲ್ಲಿ ಮಾತ್ರ ಕಾಣಲು ಸಾಧ್ಯ. ಪ್ರಶಸ್ತಿಗಾಗಿ ಲಾಬಿ ನಡೆಸಬೇಕಾದ, ರಾಜಕಾರಣಿಗಳ ಬಳಿ ವಶೀಲಿಬಾಜಿಗೆ ಮುಂದಾಗಬೇಕಾದ ಕಾಲ ಘಟ್ಟದಲ್ಲಿ, ಕಿತ್ತಳೆಹಣ್ಣು ಮಾರಿ ಶಾಲೆ ಕಟ್ಟಿ ನಡೆಸಿದ ಹರೇಕಳ ಹಾಜಬ್ಬ, ಸುರಂಗ ಕೊರೆದು ಕೃಷಿಗಾಗಿ ನೀರು ಕಂಡ ಪುತ್ತೂರು ತಾಲೂಕಿನ ಮಹಾಲಿಂಗ ನಾಯ್ಕ್, ಜಾನಪದ ಹಾಡುಗಾರ್ತಿ ಜೋಗತಿ ಮಂಜಮ್ಮ, ಬಡತನವಿದ್ದರೂ ಸಾವಿರಾರು ಗಿಡ-ಮರಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿ ಪರಿಸರವನ್ನು ಕಾಪಿಟ್ಟ ಸಾಲುಮರದ ತಿಮ್ಮಕ್ಕ ಮುಂತಾದ ಸಾಧಕರಿಗೆ ಯಥೋಚಿತ ನಾಗರಿಕ ಪುರಸ್ಕಾರಗಳನ್ನು ನೀಡಿದ್ದು ಮೋದಿ ಸರಕಾರ.

ಇಂಥ ಪರಿಪಾಠದಿಂದಾಗಿ ದೇಶದಲ್ಲಿ ಪರಿವರ್ತನೆಯ ಗಾಳಿ ಬೀಸಿದೆಯೆಂದೇ ವ್ಯಾಖ್ಯಾನಿಸಬಹುದು. ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದೇಶದ
ಮೂಲೆಮೂಲೆಯ ನಾನಾ ಕ್ಷೇತ್ರಗಳ ತೆರೆಮರೆಯ ಸಾಧಕ ರನ್ನು ಪ್ರಧಾನಿ ಮೋದಿಯವರು ಉಲ್ಲೇಖಿಸಿ ಶ್ಲಾಘಿಸುತ್ತಿರುವುದರಿಂದಾಗಿ ಇಂಥ ಸಾಧಕರಿಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗುತ್ತಿದೆ. ಮೋದಿಯವರು ತಮ್ಮ ಸಂಪುಟದಲ್ಲಿ ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ, ಸ್ವಹಿತಾಸಕ್ತಿಗೆ ಅವಕಾಶಗಳನ್ನು ನಿರಾಕರಿಸಿ ‘ಪಾರದರ್ಶಕ ಆಡಳಿತ’ದ ಮಂತ್ರವನ್ನು ಜಪಿಸುತ್ತ ಬಂದಿರುವುದರಿಂದ ಆಡಳಿತವು ಸುಸೂತ್ರವಾಗಿ ನೆರವೇರುವಂತಾಗಿದೆ ಮತ್ತು ಅವರ ಈ ಮಾದರಿ ರಾಜಕಾರಣವು ಜಗತ್ತಿನ ಗಮನ ಸೆಳೆದಿದೆ.

ಒಂದು ಕಾಲಕ್ಕೆ ಗಡಿ ಪ್ರದೇಶಗಳಲ್ಲಿ ಉಗ್ರರ ಗುಂಡಿನ ಮೊರೆತ ಪ್ರತಿಧ್ವನಿಸುತ್ತಿತ್ತು, ನಮ್ಮ ಸೈನಿಕರ ಸಾಲು ಸಾಲು ಹತ್ಯೆಗಳು ನಡೆಯುತ್ತಿದ್ದವು. ಭಾರತೀಯ ಸೇನೆಯನ್ನೇ ಅವಮಾನಿಸಿ ಮಾತನಾಡುವ ರಾಜಕಾರಣಿಗಳು ನಮ್ಮಲ್ಲಿದ್ದರು. ಆದರೆ ಪ್ರತಿ ದೀಪಾವಳಿಯನ್ನು ಭಾರತೀಯ ಯೋಧ
ರೊಂದಿಗೆ ಆಚರಿಸುವ ಪ್ರಧಾನಿಯವರ ನಡೆಯು ಸೈನ್ಯದ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ. ಶಸಸಜ್ಜಿತ ಸೇನಾಬಲವನ್ನು ಹೊಂದಿರುವ ಭಾರತವು ಶತ್ರುರಾಷ್ಟ್ರಗಳ ಕಿತಾಪತಿ-ಕಿರುಕುಳಗಳಿಗೆ ತಕ್ಕ ಉತ್ತರವನ್ನು ನೀಡುವಷ್ಟರ ಮಟ್ಟಿಗೆ ಸರ್ವ ಸನ್ನದ್ಧವಾಗಿದೆ. ರೈತರು ಹಾಗೂ ಸೈನಿಕರನ್ನು ಈ ದೇಶದ
ಬೆನ್ನೆಲುಬು ಎಂದೇ ಪರಿಗಣಿಸಿರುವ ಮೋದಿ ಸರಕಾರವು, ಈ ಎರಡೂ ವರ್ಗಗಳ ಸ್ವಾಭಿಮಾನ ಮತ್ತು ಸಂರಕ್ಷಣೆಗೆ ಚ್ಯುತಿ ಬಾರದ ರೀತಿಯಲ್ಲಿ ನೋಡಿಕೊಳ್ಳುತ್ತಿದೆ.

ಸಂಪುಟದ ಎಲ್ಲಾ ಸಹೋದ್ಯೋಗಿಗಳನ್ನು ಕ್ರಿಯಾಶೀಲರನ್ನಾಗಿಸಿ, ತಮಗೆ ನೀಡಲಾಗಿರುವ ಖಾತೆಗಳನ್ನು ಅವರು ಸಮರ್ಥವಾಗಿ ನಿಭಾಯಿಸುವಂತೆ ನೋಡಿಕೊಂಡಿರುವ ಹಾಗೂ ಅವರ ಕಾರ್ಯನಿರ್ವಹಣೆಯಲ್ಲಿ ಯಾವುದೇ ಮಾರ್ಗಚ್ಯುತಿ, ಲೋಪಗಳಾಗದಂತೆ ತಮ್ಮದೇ ತಂಡದ ನೆರವಿನಿಂದ ಕಣ್ಗಾವಲು ಇಟ್ಟಿರುವ ಮೋದಿಯವರ ನಡೆಯು, ಸುಭದ್ರ ಸರಕಾರಕ್ಕೆ ಮುನ್ನುಡಿ ಬರೆದಿದೆ.ಗ್ರಾಮಾಭಿವೃದ್ಧಿಗೆ ಹೊಸ ಆಯಾಮವನ್ನು ನೀಡಿರುವ
ಮೋದಿಯವರು, ಸಂಸದರ ಆದರ್ಶ ಗ್ರಾಮ ಪರಿಕಲ್ಪನೆಯ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ಪರಿಣಾಮವಾಗಿ ಹಳ್ಳಿಗಾಡಿನ ಜನರ ಬದುಕಿಗೆ ಬೆಳಕು ಚೆಲ್ಲಿದಂತಾಗಿದೆ. ಬಡಜನರ ಕಲ್ಯಾಣಕ್ಕಾಗಿ ‘ಆಯುಷ್ಮಾನ್ ಭಾರತ್’, ಶಿಕ್ಷಣ ಕ್ಷೇತ್ರದಲ್ಲಿನ ‘ವಿದ್ಯಾಲಕ್ಷ್ಮಿ’ ಯೋಜನೆಗಳು ಮಾತ್ರವಲ್ಲದೆ, ಯುವಕರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಂತಾಗಲು ಬ್ಯಾಂಕಿಂಗ್ ವಲಯದಲ್ಲಿ ಅವರಿಗೆ ‘ಮುದ್ರಾ’ ಯೋಜನೆಯ ಸೌಲಭ್ಯ ಒದಗಿಸಿರುವುದು,
ಜನಧನ್-ಆಧಾರ್-ಮೊಬೈಲ್ ಸಂಯೋಜನೆಯ ಮೂಲಕ ನೇರ ನಗದು ವರ್ಗಾವಣೆಯನ್ನು ವ್ಯವಸ್ಥಿತಗೊಳಿಸಿರುವುದು ಕೂಡ ಮೋದಿ ಸರಕಾರದ
ಸಾಧನೆಯೇ.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೆರೆಮರೆಯಲ್ಲಿ ಅಹರ್ನಿಶಿ ದುಡಿದ ಸಾಧಕರಿಗೆ ಮಹತ್ವದ ಸ್ಥಾನಮಾನಗಳನ್ನು ನೀಡಿ ಗೌರವಿಸಿದ್ದು ಮೋದಿ ಸರಕಾರದ ಮತ್ತೊಂದು ಮಹತ್ವದ ಹೆಜ್ಜೆ; ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ರಾಮನಾಥ ಕೋವಿಂದ್, ಪ್ರಸ್ತುತ ರಾಷ್ಟ್ರಪತಿಯಾಗಿರುವ ದ್ರೌಪದಿ ಮುರ್ಮು
ಇದಕ್ಕೆ ಒಂದೆರಡು ಉದಾಹರಣೆಗಳು. ಸಮುದಾಯದ ಆರ್ಥಿಕ ನೆರವಿನ ಏಕೋಪಾಧ್ಯಾಯ ಶಾಲೆಗಳ ವಿನೂತನ ಪರಿಕಲ್ಪನೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿನ ಪ್ರಾಥಮಿಕ ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡಿದ ಪ್ರತಾಪ್ ಚಂದ್ರ ಸಾರಂಗಿ ಅವರಿಗೆ ತಮ್ಮ ಸಂಪುಟದಲ್ಲಿ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಹಾಗೂ ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಖಾತೆಯ ರಾಜ್ಯಸಚಿವರಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದ್ದು ಕೂಡ ಮೋದಿಯವರ ಹೆಗ್ಗಳಿಕೆಯೇ.

ಹೀಗೆ ಆಡಳಿತ ವ್ಯವಸ್ಥೆಯಲ್ಲಿ ‘ಅಸಾಧ್ಯ’ ಎಂದು ಗ್ರಹಿಸಲ್ಪಟ್ಟಿದ್ದನ್ನೆಲ್ಲ ಸಾಧ್ಯವಾಗಿಸಿದ ಕೀರ್ತಿ ಅವರದ್ದು. ಇಷ್ಟಾಗಿಯೂ ಟೀಕೆ ಎಂಬುದು ವಾಜಪೇಯಿ ಯವರನ್ನೂ ಬಿಟ್ಟಿಲ್ಲ, ಮೋದಿಯವರನ್ನೂ ಬಿಟ್ಟಿಲ್ಲ. ಏಕೆಂದರೆ ಇದು ರಾಜಕಾರಣ!

(ಲೇಖಕರು ಹವ್ಯಾಸಿ ಬರಹಗಾರರು)