ವಸ್ತುಸ್ಥಿತಿ
ಗಣೇಶ್ ಭಟ್, ವಾರಣಾಸಿ
ಕೈಗಾರಿಕೋದ್ಯಮದ ಅಭಿವೃದ್ಧಿಗೂ ಭಾರತ ಸರಕಾರವಿಂದು ಮಹತ್ವ ನೀಡುತ್ತಿದೆ. ಜನರು ಕೃಷಿಕ್ಷೇತ್ರದ ಮೇಲಿನ ಅತಿ ಅವಲಂಬನೆಯಿಂದ ಹೊರಬಂದರೆ ಮಾತ್ರವೇ ದೇಶವು ಆರ್ಥಿಕಾಭಿವೃದ್ಧಿಯನ್ನು ದಾಖಲಿಸಲು ಸಾಧ್ಯ. ಆರ್ಥಿಕವಾಗಿ ಮುಂದುವರಿದ ದೇಶಗಳೆಲ್ಲವೂ ಕೈಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳೇ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದಷ್ಟೇ ವಿರೋಧ ಪಕ್ಷವೂ ಮುಖ್ಯವಾಗುತ್ತದೆ. ಸರಕಾರವು ದಾರಿ ತಪ್ಪಿದಾಗ ವಿಪಕ್ಷಗಳು ಅದನ್ನು ಎತ್ತಿತೋರಿಸಿ ತಿದ್ದುವ ಕೆಲಸ ಮಾಡಬೇಕು. ಆದರೆ ವಿರೋಧ ಪಕ್ಷವೆಂಬ ಒಂದೇ ಕಾರಣಕ್ಕೆ ಸರಕಾರದ ಎಲ್ಲಾ ನಡೆಗಳನ್ನು ವಿರೋಧಿಸುವುದು ಸರಿಯಲ್ಲ; ಸರಕಾರದಿಂದ ಒಳ್ಳೆಯ ಕೆಲಸಗಳಾದಾಗ ಮೆಚ್ಚುಗೆ ಸೂಚಿಸ ಬೇಕಾದ್ದು ಅಪೇಕ್ಷಣೀಯ.
1971ರಲ್ಲಿ ಬಾಂಗ್ಲಾದೇಶದ ವಿಮೋಚನೆಗೆ ಕಾರಣರಾಗಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಆಗ ವಿಪಕ್ಷ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಶ್ಲಾಘಿಸಿದ್ದರು. 2013ರಲ್ಲಿ, ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಷರೀ- ಅವರು ಭಾರತದ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರನ್ನು ಆತ್ಮವಿಶ್ವಾಸವಿಲ್ಲದ ವ್ಯಕ್ತಿ ಎಂದು ಬಿಂಬಿಸುವ ಉದ್ದೇಶದಿಂದ ‘ದೆಹತಿ ಔರತ್’ (ಹಳ್ಳಿಗಾಡಿನ ಹೆಣ್ಣುಮಗಳು) ಎಂದು ಹೀಯಾಳಿಸಿದರು.
ಆಗ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಷರೀಫರ ಹೇಳಿಕೆಯನ್ನು ಖಂಡಿಸಿ, ‘ಭಾರತದ ಪ್ರಧಾನಿಯನ್ನು ಅಪಮಾನಿಸಿದರೆ ಅದು ಭಾರತಕ್ಕೆ ಮಾಡಿದ ಅಪಮಾನಕ್ಕೆ ಸಮಾನ’ ಎಂದಿದ್ದರು. ದೇಶಕ್ಕೆ ಸಂಕಷ್ಟ ಅಥವಾ ಅವಮಾನ ಒದಗಿ ದಾಗ ಆಡಳಿತ ಮತ್ತು ವಿರೋಧ ಪಕ್ಷಗಳು ಹೇಗೆ ಒಂದಾಗ ಬೇಕು ಎಂಬುದಕ್ಕೆ ಈ ಘಟನೆಗಳು ಉದಾಹರಣೆಗಳಾಗಿವೆ.
ಆದರೆ ಈಚೀಚೆಗೆ ವಿಪಕ್ಷಗಳ ವರ್ತನೆ ನೋಡಿದರೆ, ವಿರೋಧಿಸಬೇಕು’ ಎಂಬ ಒಂದೇ ಕಾರಣಕ್ಕೆ ಅವು ಸರಕಾರವನ್ನು ವಿರೋಽಸುತ್ತಿರುವಂತೆ ತೋರುತ್ತದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಂಸ್ಥೆಯು ಇತ್ತೀಚೆಗೆ, 3.5 ಲಕ್ಷಕೋಟಿ ಡಾಲರ್‌ನಷ್ಟು ಮೌಲ್ಯದ ದೇಶೀಯ ಉತ್ಪಾದನೆ (ಜಿಡಿಪಿ) ಸಾಧಿಸಿರುವ ಭಾರತವು ತನ್ಮೂಲಕ ಇಂಗ್ಲೆಂಡ್ ಅನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದೆ’ ಎಂದಿರುವುದು ಬಹುತೇಕರಿಗೆ ಗೊತ್ತಿದೆ.
ಸುಮಾರು 200 ವರ್ಷ ಇಂಗ್ಲೆಂಡ್‌ನ ವಸಾಹತು ದೇಶವಾಗಿದ್ದ ಭಾರತವಿಂದು ಆ ದೇಶವನ್ನೇ ಹಿಂದಿಕ್ಕಿ ಹೀಗೆ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿರುವುದು ಮತ್ತು ಕಳೆದ 8 ವರ್ಷಗಳಲ್ಲಿ ರಷ್ಯಾ, ಕೆನಡಾ, ಇಟಲಿ, ಬ್ರೆಜಿಲ್, ಫ್ರಾನ್ಸ್ ಹಾಗೂ ಇಂಗ್ಲೆಂಡ್ ಗಳನ್ನು ಹಿಂದಿಕ್ಕಿರುವುದು ಸಣ್ಣ ಸಾಧನೆಯೇನಲ್ಲ (2013-14ರಲ್ಲಿ 1.86 ಲಕ್ಷ ಕೋಟಿ ಡಾಲರ್‌ನಷ್ಟು ಜಿಡಿಪಿ ಹೊಂದಿದ್ದ ಭಾರತವು ಬೃಹದಾರ್ಥಿಕ ರಾಷ್ಟ್ರಗಳ ಜಾಗತಿಕ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿತ್ತು).
ಜತೆಗೆ, ೨೦೨೯ರ ವರ್ಷಕ್ಕೂ ಮೊದಲೇ ಭಾರತವು ೩ನೆಯ ಅತಿದೊಡ್ಡ ಆರ್ಥಿಕತೆಯುಳ್ಳ ದೇಶವಾಗಲಿದೆ ಎಂದೂ ಐಎಂಎ- ಅಭಿಪ್ರಾಯಪಟ್ಟಿದೆ. ಆದರೆ, ಕೆಲ ರಾಜಕೀಯ ಪಕ್ಷಗಳಿಗೆ ಹಾಗೂ ಪೂರ್ವಗ್ರಹಪೀಡಿತ ಆರ್ಥಿಕ ತಜ್ಞರಿಗೆ ಈ ಬೆಳವಣಿಗೆ
ಅಷ್ಟು ಸಹ್ಯವಾಗಿಲ್ಲ. ಹೀಗಾಗಿ, ಭಾರತದ ಈ ಸಾಧನೆ ಏನೇನೂ ಅಲ್ಲ ಎಂದು ಬಿಂಬಿಸಲು ಅವರು ಶುರುಹಚ್ಚಿಕೊಂಡಿದ್ದಾರೆ. ಇದಕ್ಕಾಗಿ ಅವರು ಇಂಗ್ಲೆಂಡ್, ಅಮೆರಿಕದಂಥ ದೇಶಗಳ ಜನರ ತಲಾದಾಯದೊಂದಿಗೆ ಭಾರತೀಯರ ತಲಾದಾಯವನ್ನು ಹೋಲಿಸಿ, ಭಾರತದ ಸಾಧನೆಯನ್ನು ಗೌಣವಾಗಿಸಲು ಯತ್ನಿಸುತ್ತಿದ್ದಾರೆ.
ಇಂಗ್ಲೆಂಡಿಗರ ತಲಾದಾಯವು ೫೦,೦೦೦ ಡಾಲರ್ ಗಳಾದರೆ, ಭಾರತೀಯರ ತಲಾದಾಯವು ಕೇವಲ ೨,೫೦೦
ಡಾಲರ್ ಎಂಬುದು ಇವರ ತಕರಾರು. ಆದರೆ, ಭಾರತೀಯರ ಖರೀದಿ ಸಾಮರ್ಥ್ಯದ ಮಾನದಂಡವನ್ನು (ಪರ್ಚೇಸಿಂಗ್ ಪವರ್ ಪ್ಯಾರಿಟಿ- ಪಿಪಿಪಿ) ಗಮನಿಸಿದರೆ ಭಾರತೀಯ ಆರ್ಥಿಕತೆಯ ಮಟ್ಟ ಅರ್ಥವಾಗುತ್ತದೆ. ನಮ್ಮಲ್ಲಿ ಒಂದು ಕೆ.ಜಿ. ಗೋಽಹುಟ್ಟು ಸುಮಾರು ೪೦-೫೦ ರುಪಾಯಿಗೆ ಸಿಕ್ಕಿದರೆ, ಇಂಗ್ಲೆಂಡ್‌ನಲ್ಲಿ ೨ ಪೌಂಡ್ ತೆರಬೇಕಾಗುತ್ತದೆ. ಇದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿದಾಗ ೧೮೫ ರುಪಾಯಿ ಆಗುತ್ತದೆ.
ಭಾರತೀಯ ಕರೆನ್ಸಿಯ ಖರೀದಿ ಸಾಮರ್ಥ್ಯವು ಇಂಗ್ಲೆಂಡಿನ ಪೌಂಡ್‌ಗಿಂತ ಸುಮಾರು ಮೂರೂವರೆ ಪಟ್ಟು ಅಽಕ ಎಂಬುದು ಇದರಿಂದ ಸಾಬೀತಾಗುತ್ತದೆ. ಖರೀದಿ ಸಾಮರ್ಥ್ಯದ ಆಧಾರದಲ್ಲಿ ನೋಡುವುದಾದರೆ, ಭಾರತದ ಜಿಡಿಪಿ ಸುಮಾರು
೧೧.೭೫ ಲಕ್ಷ ಕೋಟಿ ಡಾಲರ್‌ಗಳಾಗುತ್ತವೆ. ತಲಾದಾಯದ ಆಧಾರದಲ್ಲಿ ಭಾರತದ ಆರ್ಥಿಕತೆಯನ್ನು ಹೀಯಾಳಿಸುವ
ವಿಶ್ಲೇಷಕರು, ಖರೀದಿ ಸಾಮರ್ಥ್ಯ ಆಧರಿಸಿ ಆರ್ಥಿಕತೆಯನ್ನು ಪರಿಗಣಿಸದಿರುವುದಕ್ಕೆ ಯಾವುದೋ ರಾಜಕೀಯ ಗುಪ್ತ ಕಾರ್ಯಸೂಚಿಯೇ ಕಾರಣ ಎನ್ನದೆ ವಿಧಿಯಿಲ್ಲ.
ದೇಶದೆಲ್ಲೆಡೆ ಕರೋನಾ ಸಾಂಕ್ರಾಮಿಕ ಏರುಗತಿಯಲ್ಲಿದ್ದಾಗ, ಭಾರತದ ಕೆಲ ರಾಜಕಾರಣಿಗಳು ಮತ್ತು ಪತ್ರಕರ್ತರು ತಲೆಗೊಂದರಂತೆ ಹೇಳಿಕೆ ನೀಡುತ್ತಿದ್ದರು, ಕೋಟ್ಯಂತರ ದೇಶವಾಸಿಗಳು ಸಾಯಲಿದ್ದಾರೆ ಎಂಬ ‘ಗಿಳಿಶಾಸ್ತ್ರ’ವನ್ನೂ ನುಡಿಯುತ್ತಿದ್ದರು. ಬರ್ಕಾ ದತ್‌ರಂಥ ಪತ್ರಕರ್ತರು ಭಾರತದ ಸ್ಮಶಾನಗಳೆದುರು ಕಾದು ಅಲ್ಲಿಗೆ ಬರುತ್ತಿದ್ದ ಶವಗಳನ್ನು ಎಣಿಸಿ, ಉರಿಯುತ್ತಿದ್ದ ಚಿತೆಗಳ ಫೋಟೋವನ್ನು ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್‌ನಂಥ ಪತ್ರಿಕೆಗಳ ಮುಖಪುಟದಲ್ಲಿ ವರ್ಣರಂಜಿತವಾಗಿ ಬಿಂಬಿಸುತ್ತಿದ್ದರು. ಭಾರತದಲ್ಲಿ ಲಸಿಕೆಯ ಕೊರತೆಯಿದೆ ಎಂದೂ ಹುಯಿಲೆಬ್ಬಿಸಿದ್ದರು.
ಆದರೆ, ದೇಶೀಯವಾಗಿ ಉತ್ಪಾದಿಸಿದ ಲಸಿಕೆಗಳನ್ನು ನಿಗದಿತ ಕಾಲಮಿತಿಯೊಳಗೆ ವ್ಯವಸ್ಥಿತವಾಗಿ ದೇಶದೆಲ್ಲೆಡೆ
ಪೂರೈಸಿದ್ದರ ಬಗ್ಗೆ ಈ ಕಾಯಂ ಟೀಕಾಕಾರರಿಂದ ಒಂದೊಳ್ಳೆ ಮಾತೂ ಹೊಮ್ಮಲಿಲ್ಲ! ಜಗತ್ತಿನ ೧೦೧ ದೇಶಗಳಿಗೆ ೩೦
ಕೋಟಿಗಿಂತಲೂ ಹೆಚ್ಚು ಲಸಿಕಾ ಡೋಸ್‌ಗಳನ್ನು ಪೂರೈಸಿದ ಭಾರತವೀಗ ತನ್ನ ಪ್ರಜೆಗಳಿಗೆ ಮುನ್ನೆಚ್ಚರಿಕೆಯಾಗಿ
ಲಸಿಕೆಯ ಮೂರನೇ ಡೋಸ್ ನೀಡುತ್ತಿರುವುದೂ ಈ ಟೀಕಾಕಾರರಿಗೆ ಕಾಣುತ್ತಿಲ್ಲ!
ದೇಶವನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ರೂಪಿಸಲಾದ ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮ ನಿರ್ಭರ ಭಾರತ್’ ಯೋಜನೆಗಳನ್ನೂ ಅವಕಾಶ ಸಿಕ್ಕಾಗಲೆಲ್ಲ ಹೀಗಳೆಯಲಾಗುತ್ತಿದೆ. ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲಾಗಿರುವ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಗಂಟೆಗೆ ೧೮೦ ಕಿ.ಮೀ. ವೇಗದಲ್ಲಿ ಸಾಗುತ್ತದೆ; ಇದರ ಸೇವೆಯನ್ನು ೨೦೧೯ರಲ್ಲಿ ದೆಹಲಿ-ವಾರಾಣಾಸಿ ನಡುವೆ ಆರಂಭಿಸಲಾಯಿತು.
ಇದರ ಪರೀಕ್ಷಾರ್ಥ ಓಡಾಟದ ವೇಳೆ ಎದುರಾದ ತಾಂತ್ರಿಕ ಸಮಸ್ಯೆಯನ್ನೇ ಉದಾಹರಿಸಿ, ‘ಮೋದಿ ಸರಕಾರದ ಮೇಕ್ ಇನ್ ಇಂಡಿಯಾ ಯೋಜನೆಯು ವಿಫಲ ಪ್ರಯತ್ನ’ ಎಂದು ರಾಹುಲ್ ಗಾಂಧಿಯವರು ಟ್ವೀಟ್ ಮಾಡಿದ್ದರು. ಆದರೆ ಕಳೆದ ೩ ವರ್ಷಗಳಲ್ಲಿ ಇಂಥ ತಾಂತ್ರಿಕ ತೊಂದರೆಯಿಲ್ಲದೆ ಈ ರೈಲಿನ ಸಂಚಾರ ಅಬಾಧಿತವಾಗಿದೆ. ವೈಷ್ಣೋ ದೇವಿ ದೇಗುಲಕ್ಕೆ ತೆರಳುವ ಭಕ್ತಜನರ ಅನುಕೂಲಕ್ಕಾಗಿ ದೆಹಲಿ ಮತ್ತು ವೈಷ್ಣೋ ದೇವಿ ಕಾತ್ರಾಗಳ ನಡುವೆಯೂ ‘ವಂದೇ ಭಾರತ್’ ಓಡಾಡು
ತ್ತಿದ್ದು, ಅತ್ಯಂತ ನಿಖರವಾಗಿ ಸಮಯ ಪರಿಪಾಲನೆ ಮಾಡುತ್ತಿರುವ ಹೆಗ್ಗಳಿಕೆಗೂ ಇವು ಪಾತ್ರವಾಗಿವೆ.
ಮುಂದಿನ ೩ ವರ್ಷಗಳಲ್ಲಿ ದೇಶಾದ್ಯಂತ ೪೦೦ ‘ವಂದೇ ಭಾರತ್ ಎಕ್ಸ್‌ಪ್ರೆಸ್’ಗಳು ಓಡಾಡಲಿವೆ. ಕೈಗಾರಿಕೋದ್ಯಮದ ಅಭಿವೃದ್ಧಿಗೂ ಭಾರತ ಸರಕಾರವಿಂದು ಮಹತ್ವ ನೀಡುತ್ತಿದೆ. ಜನರು ಕೃಷಿಕ್ಷೇತ್ರದ ಮೇಲಿನ ಅತಿ ಅವಲಂಬನೆಯಿಂದ ಹೊರಬಂದರೆ ಮಾತ್ರವೇ ದೇಶವು ಆರ್ಥಿಕಾಭಿವೃದ್ಧಿಯನ್ನು ದಾಖಲಿಸಲು ಸಾಧ್ಯ. ಆರ್ಥಿಕವಾಗಿ ಮುಂದುವರಿದ ದೇಶಗಳೆಲ್ಲವೂ ಕೈಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳೇ. ಆದರೆ ಉದ್ಯಮಗಳಿಗೆ ನೀಡುತ್ತಿರುವ ಪ್ರೋತ್ಸಾಹ ಕಂಡು ‘ಇದು ಸೂಟು ಬೂಟಿನ ಸರಕಾರ’ ಎಂದು ಮೂದಲಿಸಿದರೆ ಏನನ್ನುವುದು? ಉದ್ಯಮಕ್ಷೇತ್ರದಲ್ಲಿ ಯಶಸ್ಸು ಸಾಧಿಸಿ
ಜಾಗತಿಕವಾಗಿ ೩ನೆಯ ಅತಿಶ್ರೀಮಂತ ಉದ್ಯಮಿ ಎಂದು ಗುರುತಿಸಿಕೊಂಡಿರುವ ಭಾರತದ ಗೌತಮ್ ಅದಾನಿಯವರನ್ನು ದೇಶದ ಕೆಲ ವ್ಯಕ್ತಿಗಳು ಮತ್ತು ಮಾಧ್ಯಮ- ಪ್ರಭೃತಿಗಳು ಖಳನಾಯಕನಂತೆ ಬಿಂಬಿಸುತ್ತಿದ್ದಾರೆ.
ಆದರೆ ಅಮೆರಿಕ ತನ್ನ ಉದ್ಯಮಿಗಳಾದ ಎಲಾನ್ ಮಸ್ಕ್, ಜೆಫ್ ಬೆಜೋಸ್, ವಾರೆನ್ ಬಫೆಟ್ ಮೊದಲಾದವರನ್ನು ‘ಸ್ಟಾರ್
’ಗಳಂತೆ ಗೌರವಿಸಿದರೆ, ಜರ್ಮನಿಯು ತನ್ನ ಮರ್ಸಿಡಿಸ್ ಕಂಪನಿಯ ಬಗ್ಗೆ ಹೆಮ್ಮೆ ಪಡುತ್ತದೆ. ಏಕೆಂದರೆ, ಉದ್ಯಮಗಳು ದೇಶದ ಆರ್ಥಿಕತೆಯ ಜೀವಾಳ ಎಂಬುದು ಆ ದೇಶಗಳಿಗೆ ಗೊತ್ತು. ಕಠಿಣ ಸವಾಲುಗಳ ನಡುವೆಯೂ ಬೆಂಗಳೂರು-
ಮೈಸೂರು ನಡುವಿನ ದಶಪಥ ಹೆದ್ದಾರಿಯ ಕಾಮಗಾರಿಯನ್ನು ಪೂರ್ಣಗೊಳಿಸಲು ಅಪಾರ ಶ್ರಮಿಸುತ್ತಿರುವ ಪ್ರತಾಪ್ ಸಿಂಹರಂಥ ಕ್ರಿಯಾಶೀಲ ಸಂಸದರನ್ನೇ ಟೀಕಿಸುವವರು ನಮ್ಮ ನಡುವೆಯಿದ್ದಾರೆ.
ಗುಜರಾತ್, ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನ ರಾಜ್ಯಗಳಿಗೆ ಇಂದು ನೀರುಣಿಸುತ್ತಿರುವ ನರ್ಮದಾ ಸರ್ದಾರ್ ಸರೋವರ್ ಅಣೆಕಟ್ಟೆ ನಿರ್ಮಾಣದ ವಿರುದ್ಧ ಹೋರಾಡಿ, ಯೋಜನೆಯು ದಶಕದಷ್ಟು ಕಾಲ ಸ್ಥಗಿತಗೊಳ್ಳಲು ಕಾರಣರಾದ ಮೇಧಾ ಪಾಟ್ಕರ್ ಅವರನ್ನು ದೇಶದ ಒಂದು ವರ್ಗವು ಮಹಾನ್ ಹೋರಾಟಗಾರ್ತಿಯಂತೆ ಬಿಂಬಿಸುತ್ತಿದೆ. ಅಹ್ಮದಾಬಾದ್-ಮುಂಬೈ ನಡುವಿನ ಬುಲೆಟ್ ಟ್ರೇನ್ ಯೋಜನೆ, ಮುಂಬೈ ಮೆಟ್ರೋ ಯೋಜನೆಗಳನ್ನು ರಾಜಕೀಯ ಕಾರಣಗಳಿಗಾಗಿ ವಿರೋಽಸಲಾಗುತ್ತಿದೆ.
ಇದು ದೇಶದ ದುರಂತ. ದೇಶದಲ್ಲಿ ನಡೆದಿರುವ ಡಿಜಿಟಲ್ ಕ್ರಾಂತಿ, ದಾಖಲೆಯ ಪ್ರಮಾಣದಲ್ಲಾಗುತ್ತಿರುವ ಜಿಎಸ್‌ಟಿ
ಮತ್ತು ಆದಾಯ ತೆರಿಗೆ ಸಂಗ್ರಹ, ಅತಿಹೆಚ್ಚು ಪ್ರಮಾಣದಲ್ಲಾಗುತ್ತಿರುವ ವಿದೇಶಿ ನೇರಹೂಡಿಕೆ, ೧೦೭ ಸಂಖ್ಯೆ ತಲುಪಿದ ಶತಕೋಟಿ ಡಾಲರ್ ಮೌಲ್ಯದ ನವೋದ್ಯಮಗಳು, ಹೊಸದಾಗಿ ನಿರ್ಮಾಣವಾಗುತ್ತಿರುವ ಎಕ್ಸ್‌ಪ್ರೆಸ್ ಹೆದ್ದಾರಿಗಳು, ನಗರಗಳಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಮೆಟ್ರೋ ರೈಲುಗಳು, ದ್ವಿಗುಣಗೊಂಡ ವಿಮಾನ ನಿಲ್ದಾಣಗಳ ಸಂಖ್ಯೆ- ಈ ಎಲ್ಲ ಬೆಳವಣಿಗೆಗಳು ಭಾರತದ ಅಭಿವೃದ್ಧಿಯ ಸೂಚಕಗಳಾಗಿವೆ.
ಅಮೆರಿಕ, ಯುರೋಪ್‌ಗಳ ಹಣದುಬ್ಬರವು ಶೇ.ದುಬ್ಬರವನ್ನು ಶೇ. ೬.೯ಕ್ಕೆ ನಿಯಂತ್ರಿಸಿರುವುದು ದೇಶವು ಸರಿಯಾದ ಹಾದಿಯಲ್ಲೇ ಸಾಗುತ್ತಿರುವುದರ ಸೂಚಕ. ಆದರೆ ಇವನ್ನೆಲ್ಲ ಅರ್ಥಮಾಡಿಕೊಳ್ಳಲು ಬೇಕಿರುವುದು ‘ಪಕ್ಷ-ರಾಜಕೀಯ’ ವನ್ನೂ ಮೀರಿ ದೇಶವನ್ನು ಪ್ರೀತಿಸುವ ಮನಸ್ಥಿತಿ. ಅದು ನಮ್ಮ ಕೆಲವೊಂದು ಪ್ರಭೃತಿಗಳಿಗಿದೆಯೇ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ !