Thursday, 12th December 2024

ಬನ್ನಿ, ಹೊಸ ವರ್ಷದಲ್ಲಿ ಸುಂದರವಾಗಿ ಬದುಕೋಣ !

ಸಂಗತ

ಡಾ.ವಿಜಯ್ ದರಡಾ

ಬದುಕಿನ ನಿಜವಾದ ಅರ್ಥವೇನು ಅಂದರೆ ಏನಾದರೊಂದು ಉದ್ದೇಶವನ್ನಿಟ್ಟುಕೊಂಡು, ಹೊಸ ಯೋಚನೆಗಳೊಂದಿಗೆ ಬದುಕುವುದು. ಹಾಗೆ ಬದುಕುವಾಗ ಪ್ರತಿದಿನ, ‘ಇವತ್ತು ನನ್ನಲ್ಲೇನಾದರೂ ಹೊಸತು ಹುಟ್ಟಿತಾ?’ ಎಂದು ಪ್ರತಿದಿನ ನಿಮ್ಮನ್ನು ನೀವೇ ಕೇಳಿಕೊಳ್ಳಿ. ಇಲ್ಲಿ ನಾವೇನು ಮಾಡು ತ್ತೇವೋ ಅದಕ್ಕೆ ಸಿಗುವ ಬಹುಮಾನ ಏನು? ಅದೇ ಆತ್ಮಸಂತೋಷ.

ಈ ಸಲ ನಾನು ದ್ವಂದ್ವಕ್ಕೆ ಬಿದ್ದಿದ್ದೆ. ಕಳೆದ ವಾರ ನಾಗ್ಪುರದಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯ ಬಗ್ಗೆ ಅಂಕಣ ಬರೆಯಬೇಕೋ ಅಥವಾ ನಮ್ಮ ನಿಮ್ಮೆಲ್ಲರ ಬದುಕಿನ ಬಗ್ಗೆ ಬರೆಯಬೇಕೋ ಎಂಬ ಗೊಂದಲದಲ್ಲಿದ್ದೆ. ನಮ್ಮ ಖಾಸಗಿ ಬದುಕಿನಲ್ಲಿ ಏನಾಗುತ್ತಿದೆ? ಸಂಪಾದನೆ ಮಾಡುವ ಭರದಲ್ಲಿ ಬದುಕಿನ ಎಷ್ಟೋ ಸಂತೋಷಗಳನ್ನು ಹಾಗೂ ಒಳ್ಳೆಯ ಸಂಗತಿಗಳನ್ನು ನಾವು ತ್ಯಾಗ ಮಾಡುತ್ತಿದ್ದೇವೆ! ಯಾರ ಸಮೀಪಕ್ಕೆ ನಾವು ಹೋಗಬೇಕೆಂದು ಬಯಸು ತ್ತಿದ್ದೇವೋ ಅವರು ನಮ್ಮಿಂದ ಜಾರಿಕೊಂಡು ದೂರ ಹೋಗುತ್ತಿದ್ದಾರೆ.

ಯಾರು ಈಗಾಗಲೇ ನಮಗೆ ಹತ್ತಿರದಲ್ಲಿದ್ದಾರೋ ಅವರು ನಮ್ಮ ಸುತ್ತಮುತ್ತ ಇದ್ದುಕೊಂಡೇ ದೂರ ಹೋಗುತ್ತಿದ್ದಾರೆ! ಇದು ಹೊಸ ವರ್ಷವಾದ್ದರಿಂದ ಏಕೆ ಬದುಕಿನ ಇಂಥ ಸಂಗತಿಗಳ ಬಗ್ಗೆಯೇ ಒಂದಷ್ಟು ಮಾತನಾಡಬಾರದು ಎಂದು ಯೋಚಿಸಿದೆ. ಬನ್ನಿ, ಚೆನ್ನಾಗಿ ಬದುಕುವ ಬಗ್ಗೆ ಹಾಗೂ ನಾವೀಗ ಇರುವ ಕಾಲದ ಬಗ್ಗೆ ಚಿಂತನ-ಮಂಥನ ಮಾಡೋಣ. ಹೊಸ ವರ್ಷದ ಹೊಸ್ತಿಲಲ್ಲಿ ನಾನು ನನ್ನ ಬಗ್ಗೆಯೇ ಯೋಚಿಸುತ್ತಿದ್ದೆ. ಆ-ಕೋರ್ಸ್, ನೀವು ಕೂಡ ನಿಮ್ಮ ನಿಮ್ಮ ಬಗ್ಗೆಯೇ ಯೋಚಿಸುತ್ತಿರುತ್ತೀರಿ. ನಿಮ್ಮಲ್ಲಿ ಕೆಲವರು ರಾಜಕೀಯದಲ್ಲಿರಬಹುದು, ಇನ್ನು ಕೆಲವರು ಸಾಮಾಜಿಕ ಜೀವನದಲ್ಲಿ ಇರಬಹುದು, ಮತ್ತೆ ಕೆಲವರು ವಿಜ್ಞಾನ ಅಥವಾ ಕಲೆ ಅಥವಾ ಶಿಕ್ಷಣ ಕ್ಷೇತ್ರದಲ್ಲಿರಬಹುದು.

ಇನ್ನೊಂದಷ್ಟು ಮಂದಿ ಉದ್ಯಮಿಗಳಾಗಿರಬಹುದು. ಮತ್ತೊಂದಷ್ಟು ಜನರು ಇನ್ನೂ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರಬಹುದು. ನೀವು ಎಲ್ಲಾ ದರೂ ಇರಿ, ಏನಾದರೂ ಮಾಡುತ್ತಿರಿ, ನಿಮಗೆ ನನ್ನದೊಂದು ಗಂಭೀರವಾದ ಪ್ರಶ್ನೆಯಿದೆ. ‘ಆರೋಗ್ಯದ ಬಗ್ಗೆ ಗಮನ ನೀಡಲು ನಿಮಗೆ ಸಾಧ್ಯವಾಗುತ್ತಿ ದೆಯೇ? ನಮ್ಮಲ್ಲಿ ಹೆಚ್ಚಿನವರದು ಬಹಳ ಬ್ಯುಸಿ ಬದುಕು. ಇಲ್ಲಿ ಕೆಲವರಿಗೆ ಮಾತ್ರ ತಮ್ಮ ಆರೋಗ್ಯದ ಬಗ್ಗೆ ಗಮನ ನೀಡಲು ಸಾಧ್ಯವಾಗುತ್ತಿದೆ.

ಬಹಳಷ್ಟು ಮಂದಿಗೆ ಆರೋಗ್ಯದ ಬಗ್ಗೆ ಯೋಚಿಸುವುದಕ್ಕೂ ಪುರುಸೊತ್ತಿಲ್ಲ. ಅವರು ಕೆಲಸದಲ್ಲಿ ಅಷ್ಟೊಂದು ಮುಳುಗಿರುತ್ತಾರೆ. ನಾನು ಕೂಡ ಆರೋಗ್ಯದ ಬಗ್ಗೆ ಸರಿಯಾಗಿ ಗಮನ ನೀಡಬೇಕು ಎಂದುಕೊಳ್ಳುತ್ತೇನೆ. ಆದರೆ ನಿಜ ಏನೆಂದರೆ ನನಗೆ ಆರೋಗ್ಯದ ಬಗ್ಗೆ ಗಮನ ನೀಡಲು ಆಗುತ್ತಿಲ್ಲ. ನನಗೆ ತುಂಬಾ ಕನಸುಗಳಿವೆ. ಬಹಳ ಆಸೆಗಳಿವೆ. ಆದರೆ ಅವುಗಳನ್ನೆಲ್ಲ ಈಡೇರಿಸಿಕೊಳ್ಳಲು ನನ್ನಿಂದ ಆಗುತ್ತಿಲ್ಲ. ಪ್ರತಿನಿತ್ಯ ನನ್ನ ಮನಸ್ಸಿಗೆ ಸಾವಿರಾರು ಯೋಚನೆಗಳು ಪ್ರವಾಹದಂತೆ ಬಂದು ನುಗ್ಗುತ್ತವೆ. ಅದು ಮಾಡಬೇಕು, ಇದು ಮಾಡಬೇಕು, ಅದನ್ನು ಬರೆಯಬೇಕು, ಇದನ್ನು ಓದಬೇಕು, ಅಲ್ಲಿಗೆ ಹೋಗಬೇಕು, ಅದನ್ನು ನೋಡಬೇಕು… ಹೀಗೆ ಏನೇನೋ ಯೋಚನೆಗಳು.

ಕವಿತೆ ಮತ್ತು ಗಜಲ್‌ಗಳನ್ನು ಬರೆಯಬೇಕು ಎಂದು ಆಸೆಯಾಗುತ್ತದೆ. ಆದರೆ ಬರೆಯಲು ಆಗುವುದಿಲ್ಲ. ನನಗೆ ಬಣ್ಣಗಳೆಂದರೆ ತುಂಬಾ ಇಷ್ಟ. ಅವುಗಳ ಜತೆ ಹೇಗೆ ಆಟವಾಡಬೇಕು ಎಂಬುದೂ ನನಗೆ ಗೊತ್ತು. ಕುಂಚವನ್ನು ಇನ್ನಿಲ್ಲದಂತೆ ಪ್ರೀತಿಸುತ್ತೇನೆ. ಆದರೆ ನನ್ನಿಂದ ಚಿತ್ರ ಬರೆಯಲು ಆಗುವುದಿಲ್ಲ! ಸ್ನೇಹಿತರ ಜತೆಗೆ ಆಪ್ತವಾಗಿ ಒಂದಷ್ಟು ಸಮಯ ಕಳೆಯಬೇಕು ಎಂದು ಆಸೆಯಾಗುತ್ತದೆ. ಆದರೆ ಅದೂ ನನ್ನಿಂದ ಸಾಧ್ಯವಾಗುವುದಿಲ್ಲ! ಇವೆಲ್ಲ ಹಾಗಿರಲಿ. ನನಗೆ ತೀರಾ ಆಪ್ತರಾದವರ ಜತೆಗೆ ಒಂದಷ್ಟು ಸಮಯ ಕಳೆಯಬೇಕು ಎಂದು ಯಾವಾಗಲೂ ಅಂದುಕೊಳ್ಳುತ್ತೇನೆ. ಹಾಗೆ ಅವರ ಜತೆಗೆ ಇದ್ದಾಗ ನಾನು ಅಲ್ಲಿ ಇಲ್ಲದವರ ಬಗ್ಗೆ ಯೋಚಿಸುತ್ತಿರುತ್ತೇನೆ.

ಹಾಗಾಗಿ ಆಪ್ತರ ಕಂಪನಿಯಲ್ಲಿ ಸಿಗುವ ಸಂತೋಷವನ್ನೇ ಮಿಸ್ ಮಾಡಿಕೊಳ್ಳುತ್ತೇನೆ. ಏಕೆಂದರೆ ನನ್ನ ಮನಸ್ಸು ಅಲ್ಲಿ ಇಲ್ಲದವರ ಬಗ್ಗೆ ಆತಂಕ ಗೊಂಡಿರುತ್ತದೆ. ಇತ್ತೀಚೆಗೆ ಒಂದು ದೇಶಕ್ಕೆ ಹೋಗಿದ್ದೆ. ಬಿಸಿನೆಸ್‌ಗೆ ಸಂಬಂಧಿಸಿದಂತೆ ಒಂದಷ್ಟು ಕೆಲಸಗಳಿದ್ದವು. ಆದರೆ ನನ್ನ ಮನಸ್ಸು ಮಾತ್ರ ಇನ್ನೆಲ್ಲೋ ಇತ್ತು! ನಾನು ಗೊಂದಲದಲ್ಲಿ ಬಿದ್ದಿದ್ದೆ. ಬದುಕೇಕೆ ಇಷ್ಟೊಂದು ಸಂಕೀರ್ಣವಾಗಿಬಿಟ್ಟಿದೆ ಎಂಬುದು ನನಗೆ ತಿಳಿಯುತ್ತಿಲ್ಲ. ನಾನಿದನ್ನು ಸರಳಗೊಳಿಸಿಕೊಳ್ಳಬೇಕು. ಅದು ಹೇಗೆ ಎಂದು ಯೋಚಿಸುತ್ತಿದ್ದೇನೆ. ಸಮಯ ಪ್ರತಿಕ್ಷಣವೂ ನಮ್ಮ ಕೈಯಿಂದ ತಪ್ಪಿಸಿಕೊಂಡು ಹೋಗುತ್ತಿದೆ. ಬದುಕನ್ನು ಇಷ್ಟೊಂದು ಸಂಕೀರ್ಣ ಮಾಡಿಕೊಂಡು ಗೊಂದಲದಲ್ಲೇ ಕಾಲ ಕಳೆಯುತ್ತಿದ್ದರೆ ಏನು ಪ್ರಯೋಜನ? ಮುಷ್ಟಿಯಲ್ಲಿರುವ ಮರಳಿನಂತೆ ಕಾಲ ಜಾರಿ ಕೊಂಡು ಹೋಗುತ್ತಿದೆ.

ಹೀಗಾಗಿ ನಾವೇಕೆ ನಿಜಕ್ಕೂ ನಮಗೆ ಸಂತೋಷ ನೀಡುವಂಥದ್ದನ್ನು ಏನಾದರೂ ಮಾಡಬಾರದು? ಯಾವುದನ್ನು ಮಾಡಿದರೆ ಸಾರ್ಥಕ ಅನ್ನಿಸುತ್ತದೆ ಯೋ ಅಂಥದ್ದನ್ನೇಕೆ ಮಾಡಬಾರದು? ನಮಗೆಲ್ಲರಿಗೂ ನಮ್ಮಿಷ್ಟದಂತೆ ಬದುಕಬೇಕೆಂಬ ಆಸೆಯಿದೆ. ಹೇಗೆ ನಿಮಗೆ ಈ ಆಸೆಯಿದೆಯೋ ಹಾಗೆಯೇ ನನಗೂ ಇದೇ ಆಸೆಯಿದೆ. ನನಗೆ ಹೇಗೆ ಬದುಕಿದರೆ ಖುಷಿಯೋ ಹಾಗೆ ಬದುಕಬೇಕು ಎಂದು ಬಯಸುತ್ತೇನೆ. ಇಲ್ಲಿ ಯಾರೂ ನನ್ನ ಮೇಲೆ ಯಾವುದೇ ಒತ್ತಡ ಹೇರಬಾರದು.

ಯಾರೂ ನನಗೆ ಉಪದೇಶ ಮಾಡಲು ಬರಬಾರದು. ನಾನೇನು ಮಾಡಬೇಕು, ನಾನು ಹೇಗೆ ಬದುಕಬೇಕು ಎಂಬುದನ್ನು ಯಾರೂ ಹೇಳಬಾರದು. ಇಂಥದ್ದೊಂದು ಯೋಚನೆಯಲ್ಲಿ ಯಾವ ತಪ್ಪೂ ಇಲ್ಲ. ಆದರೆ ನಮ್ಮಿಷ್ಟದಂತೆ ಬದುಕುವುದು ಎಂಬುದು ಆಲಸ್ಯವಾಗಬಾರದಷ್ಟೆ! ಬದುಕಿನ ನಿಜವಾದ ಅರ್ಥವೇನು ಅಂದರೆ ಏನಾದರೊಂದು ಉದ್ದೇಶವನ್ನಿಟ್ಟುಕೊಂಡು, ಹೊಸ ಯೋಚನೆಗಳೊಂದಿಗೆ ಬದುಕುವುದು. ಹಾಗೆ ಬದುಕುವಾಗ ಪ್ರತಿದಿನ, ‘ಇವತ್ತು ನಾನೇನಾದರೂ ಹೊಸತನ್ನು ಮಾಡಿದೆನಾ?’ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು. ಇಲ್ಲಿ ನಾವೇನು ಮಾಡುತ್ತೇವೋ ಅದಕ್ಕೆ ಸಿಗುವ ಬಹುಮಾನ ಏನು? ಆತ್ಮಸಂತೋಷ. ಬದುಕಿನ ಬಗ್ಗೆ ಇಂಥದ್ದೊಂದು ದೃಷ್ಟಿಕೋನ ಹೊಂದಿರುವವರು ನಿಜವಾಗಿಯೂ ಎಲ್ಲರಿಗಿಂತ ಬೇರೆಯವರಾಗಿ
ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಸಮಯವನ್ನು ಹೇಗೆ ಹೊಂದಿಸಿಕೊಳ್ಳಬೇಕು ಮತ್ತು ಕಾಲದ ಜತೆಗೆ ಹೇಗೆ ಸರಿಯಾಗಿ ವರ್ತಿಸಬೇಕು ಎಂಬುದು ಇವರಿಗೆ ಗೊತ್ತಿರುತ್ತದೆ.

ಇವರಿಗೆ ಸಮಯದ ಮಹತ್ವ ಗೊತ್ತಿರುತ್ತದೆ. ಕಾಲ ಎಷ್ಟು ಅಮೂಲ್ಯವೆಂಬುದು ತಿಳಿದಿರುತ್ತದೆ. ಇಂಥವರಲ್ಲಿ ಸಂಯಮವಿರುತ್ತದೆ. ಇವರು ಶಿಸ್ತುಬದ್ಧ ಜೀವನ ನಡೆಸುತ್ತಾರೆ. ಇಂಥವರು ದೇಶದ ಆಸ್ತಿಯಾಗಬಲ್ಲರು. ಮಹಾತ್ಮ ಗಾಂಧೀಜಿ ಕೂಡ ಸಾಮಾನ್ಯ ಮನುಷ್ಯನಂತೆ ಐಷಾರಾಮಿ ಜೀವನ ನಡೆಸು ವುದಕ್ಕೇ ಯೋಚಿಸಿದ್ದರೆ ನಾವಿಂದು ಸ್ವಾತಂತ್ರ್ಯ ಪಡೆಯುತ್ತಿದ್ದೆವೇ? ಮೊದಲಿಗೆ ಅವರು ಬ್ಯಾರಿಸ್ಟರ್ ಆಗಿದ್ದರು. ಅವರು ಬಯಸಿದ್ದರೆ ಅದ್ಭುತವಾದ ಶ್ರೀಮಂತ ಬದುಕನ್ನು ನಡೆಸಬಹುದಿತ್ತು! ಆದರೆ ಅವರ ಅಂತರಾತ್ಮ ಬೇರೆಯದನ್ನೇ ಹೇಳಿತು. ಅವರೊಳಗೆ ಹುಟ್ಟಿದ ಧ್ವನಿಯೊಂದು, ‘ಗುಲಾಮಿತನದ ಸಂಕೋಲೆಯಿಂದ ಜಗತ್ತನ್ನು ಪಾರುಮಾಡಲು ನೀನು ಹುಟ್ಟಿದ್ದೀಯೆ’ ಎಂದು ಹೇಳಿತು.

ಅದನ್ನವರು ಒಪ್ಪಿಕೊಂಡು ಸಾರ್ವಜನಿಕ ಉದ್ದೇಶಕ್ಕಾಗಿ ಬದುಕತೊಡಗಿದರು. ಬಳಿಕ ಅವರು ಎಷ್ಟೊಂದು ಕ್ಷೇತ್ರಗಳಲ್ಲಿ ಕೆಲಸ ಮಾಡಿದರು! ಹಾಗೆಯೇ,
ರವೀಂದ್ರನಾಥ್ ಟ್ಯಾಗೋರ್ ಅವರಲ್ಲಿ ಹೊಸ ಹೊಸ ಐಡಿಯಾಗಳು ಮೊಳಕೆಯೊಡೆಯದೆ ಇದ್ದಿದ್ದರೆ ಅವರಿಂದು ನಮ್ಮೆಲ್ಲರ ಹೃದಯದಲ್ಲಿ ಬದುಕು ತ್ತಿರುವ ರವೀಂದ್ರನಾಥ್ ಟ್ಯಾಗೋರ್ ಆಗುತ್ತಿರಲಿಲ್ಲ. ನಮ್ಮ ಸುತ್ತಮುತ್ತ ಇರುವ ಕ್ರೀಡಾಪಟುಗಳನ್ನೇ ನೋಡಿ. ಎಂಥಾ ಶಿಸ್ತುಬದ್ಧ ಬದುಕನ್ನು
ಅವರು ನಡೆಸುತ್ತಿದ್ದಾರೆ! ದೈಹಿಕವಾಗಿ ಮತ್ತು ಮಾನಸಿಕವಾಗಿ ತಮ್ಮನ್ನು ಫಿಟ್ ಆಗಿ, ಸಮತೋಲನದಲ್ಲಿ ಇರಿಸಿಕೊಳ್ಳಲು ಅವರು ಎಷ್ಟೊಂದು ಕಷ್ಟಪಡುತ್ತಾರೆ. ಕ್ರೀಡೆ ಮಾತ್ರವಲ್ಲ, ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ, ಅಲ್ಲಿ ದೊಡ್ಡ ಸಾಧನೆ ಮಾಡಿದವರು ಹೀಗೆಯೇ ಬದುಕುತ್ತಿರುತ್ತಾರೆ.

ಅವರಲ್ಲಿ ಕೇವಲ ವಿಚಾರ ಶ್ರೀಮಂತಿಕೆ ಮಾತ್ರ ಇಲ್ಲ. ಅವರು ಕೇವಲ ಗುರಿಯನ್ನು ಮಾತ್ರ ಹೊಂದಿಲ್ಲ ಅಥವಾ ಅವರಲ್ಲಿ ಅದನ್ನು ಸಾಧಿಸುವ ಜಾಣ್ಮೆ ಮಾತ್ರ ಇಲ್ಲ. ಅದರ ಜತೆಗೆ ಆ ಎಲ್ಲವನ್ನೂ ಸಾಧಿಸುವ ಶಿಸ್ತು, ಛಲ, ತುಡಿತ ಅವರಲ್ಲಿದೆ. ಅದರಿಂದಾಗಿಯೇ ಅವರ ಬದುಕು ಸುಂದರವಾಗಿದೆ. ಆದರೆ ಜನಸಾಮಾನ್ಯರ ಸಮಸ್ಯೆಯೇನು ಗೊತ್ತಾ? ಅವರು ಬದುಕಿನಲ್ಲಿ ಕಡಿಮೆ ಬ್ಯುಸಿಯಾಗಿರುತ್ತಾರೆ ಮತ್ತು ಹೆಚ್ಚು  ಅಸ್ತವ್ಯಸ್ತವಾಗಿ ಬದುಕುತ್ತಿರುತ್ತಾರೆ. ಇದಕ್ಕೆ ಕಾರಣ, ನನ್ನ ಪ್ರಕಾರ, ಅವರಿಗೆ ಸಮಯವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುವುದು ಹೇಗೆಂಬುದು ಗೊತ್ತಿಲ್ಲ. ಸಮಯವನ್ನು ಗೌರವಿಸದೆ ಇದ್ದರೆ
ಇದೇ ಪರಿಸ್ಥಿತಿ ಮುಂದುವರಿಯುತ್ತದೆ. ನಿಮ್ಮಲ್ಲಿ ಸಮಯವೇ ಇಲ್ಲ ಅಥವಾ ತುಂಬಾ ಒತ್ತಡದಲ್ಲಿ ಬದುಕುತ್ತಿದ್ದೀರಿ ಅಂತಾದರೆ ಹೊಸ ಹೊಸ ಐಡಿಯಾ ಗಳು ಹೇಗೆ ಹುಟ್ಟಲು ಸಾಧ್ಯ? ಮನಸ್ಸನ್ನು ಪ್ರಶಾಂತವಾಗಿ ಇರಿಸಿಕೊಂಡಾಗ ಮಾತ್ರ ಅಲ್ಲಿ ಏನಾದರೂ ಹೊಸತು ಹುಟ್ಟುತ್ತದೆ. ಯಾರು ಜಗತ್ತಿನ ಎಲ್ಲಾ ಜಂಜಡಗಳ ನಡುವೆಯೂ ಶಾಂತವಾಗಿ ಇರಬಲ್ಲನೋ ಅವನಲ್ಲೇ ಹೊಸ ಯೋಚನೆಗಳು ಮೊಳಕೆಯೊಡೆಯುತ್ತವೆ.

ಹೀಗಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಆಗ ನಾವೇನು ಮಾಡುತ್ತಿದ್ದೇವೋ ಅದನ್ನೇ ಇನ್ನಷ್ಟು ಚೆನ್ನಾಗಿ ಮಾಡುತ್ತೇವೆ. ಬದುಕಿನಲ್ಲಿ ಏನಾದರೂ ಹೊಸತನ್ನು ಮಾಡಬೇಕೆಂಬ ತುಡಿತ ಅಂಥ ಪ್ರಶಾಂತ ವಾತಾವರಣದಲ್ಲೇ ಹುಟ್ಟುತ್ತದೆ. ಬೆಳಗ್ಗೆ ಏಳುವುದು, ಕೆಲಸಕ್ಕೆ ಹೋಗಲು ದಡಬಡ ಮಾಡುತ್ತಾ ಸಿದ್ಧವಾಗುವುದು, ಇಡೀ ದಿನ ಕೆಲಸ ಮಾಡುವುದು, ನಂತರ ರಾತ್ರಿ ಮಲಗುವುದಕ್ಕೆ ಮನೆಗೆ ಬರುವುದು- ಇದು ಖಂಡಿತ ಆದರ್ಶ ಜೀವನ ಅಲ್ಲ. ಇವೆಲ್ಲವುಗಳನ್ನೂ ಮಾಡಿದ ನಂತರವೂ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಲು ಸಾಧ್ಯವಿದೆ.
ನಮ್ಮಲ್ಲಿರುವ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವ ರೀತಿಯಲ್ಲಿ ಬದುಕಿಗೊಂದು ಟೈಮ್ ಟೇಬಲ್ ಹಾಕಿಕೊಂಡರೆ ಆಗ ಮೊದಲಿಗಿಂತ ಹೆಚ್ಚು ಕೆಲಸ ಮಾಡುತ್ತಲೇ ನಮ್ಮ ಖಾಸಗಿ ಹವ್ಯಾಸಗಳಿಗಾಗಿ ಇನ್ನೊಂದಷ್ಟು ಸಮಯವನ್ನು ಉಳಿಸಿಕೊಳ್ಳಲು ಸಾಧ್ಯವಿದೆ.

ಹೀಗೆ ನಮ್ಮ ಖಾಸಗಿ ಹವ್ಯಾಸಕ್ಕೆ ಒಂದಷ್ಟು ಸಮಯ ಪ್ರತಿದಿನ ಸಿಗುವಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ವಾಕಿಂಗ್, ಯೋಗ ಹಾಗೂ ವ್ಯಾಯಾಮ ಮಾಡಬೇಕಲ್ಲವೇ? ದೇಹ ಆರೋಗ್ಯವಾಗಿದ್ದರೆ ತಾನೇ ಮನಸ್ಸು ಆರೋಗ್ಯವಾಗಿರುತ್ತದೆ! ಆಗ ತಾನೇ ನಿಮ್ಮ ಕನಸುಗಳನ್ನು ಈಡೇರಿಸಿ ಕೊಳ್ಳಲು ಹಾಗೂ ಬದುಕಿಗೆ ಹೊಸ ಬಣ್ಣಗಳ ಚಿತ್ತಾರ ಬರೆಯಲು ಸಾಧ್ಯವಾಗುವುದು! ನಾನಿಲ್ಲಿ ಇನ್ನೊಂದು ಸಂಗತಿಯನ್ನು ಹೇಳಬೇಕು. ನಮ್ಮ ಸುತ್ತಮುತ್ತ ಇರುವವರು ಸಂತೋಷದಿಂದ ಇದ್ದಾಗ ಮಾತ್ರ ನಾವು ಕೂಡ ಬದುಕಿನಲ್ಲಿ ಸಂತೋಷವಾಗಿರಲು ಸಾಧ್ಯ. ಅವರು ಸದಾ ಬೇಸರದಲ್ಲಿದ್ದರೆ ನೀವು ಸಂತೋಷವಾಗಿರಲು ಸಾಧ್ಯವಿಲ್ಲ.

ನಮ್ಮ ಬದುಕಿನಲ್ಲಿ ಅತ್ಯಂತ ಸಮೀಪದಲ್ಲಿರುವವರು ಸಂತೋಷವಾಗಿದ್ದರೆ ಅದರಿಂದ ನಮ್ಮ ಸಂತೋಷ ದ್ವಿಗುಣವಾಗುತ್ತದೆ. ಹೀಗಾಗಿ ಈ ವರ್ಷ ಒಂದು ಸಂಕಲ್ಪ ಮಾಡಿ. ಕೇವಲ ನಿಮ್ಮನ್ನು ನೀವು ಸಂತೋಷವಾಗಿರಿಸಿಕೊಳ್ಳುವುದು ಮಾತ್ರವಲ್ಲ, ಅದರ ಜತೆಗೆ ನಿಮ್ಮ ಸುತ್ತಮುತ್ತಲ ವಾತಾವರಣ ವನ್ನೂ ಸಂತೋಷದಿಂದ ತುಂಬಲು ಪ್ರಯತ್ನಿಸಿ. ನನ್ನ ಜತೆಗೆ ನನ್ನವರನ್ನೂ ಸಂತೋಷವಾಗಿಡುತ್ತೇನೆ, ಅವರ ಬದುಕಿಗೂ ಖುಷಿಯ ಬಣ್ಣಗಳನ್ನು ತುಂಬುತ್ತೇನೆಂದು ಮನಸ್ಸಿನಲ್ಲೇ ಒಂದು ನಿರ್ಧಾರಕ್ಕೆ ಬನ್ನಿ. ಅದರಂತೆ ಬದುಕುತ್ತಾ ಹೋಗಿ. ಆಗ ನೋಡಿ, ಹೇಗೆ ನಿಮ್ಮ ಜೀವನ ಈ ಹೊಸ ವರ್ಷದಲ್ಲಿ ಹೊಸ ರೀತಿಯಲ್ಲಿ ಬದಲಾಗುತ್ತದೆ ಎಂದು! ಬನ್ನಿ ಹೊಸ ವರ್ಷದಲ್ಲಿ ಬದುಕೋಣ ಪ್ರೀತಿಯ ಪಾತ್ರೆಯಿಂದ ಕುಡಿಯೋಣ ಯಾರು ನನ್ನವರೋ ಯಾರು ನಿನ್ನವರೋ ಅವರ ಜತೆಗೆ ಸುಂದರ ಕ್ಷಣ ಕಳೆಯೋಣ!

(ಲೇಖಕರು ಹಿರಿಯ ಪತ್ರಕರ್ತರು)