Monday, 25th November 2024

ಉದ್ಯಮಿಗಳ ಬಗೆಗೆ ಇಂಥ ಪೂರ್ವಗ್ರಹವೇಕೆ ?

ಅಭಿಮತ

ಡಾ.ಗಣೇಶ ಎಸ್.ಹೆಗಡೆ

ಭಾರತದ ಉದ್ಯಮಿ ಗೌತಮ್ ಅದಾನಿ ಅವರ ಸ್ವತ್ತುಮೌಲ್ಯ ೧೨.೫ ಲಕ್ಷ ಕೋಟಿ ರುಪಾಯಿಗಳಿಗೆ ತಲುಪುವುದರೊಂದಿಗೆ
ಅವರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ೨ನೇ ಸ್ಥಾನಕ್ಕೇರಿದ್ದಾರೆ. ಅದಾನಿ ಸಮೂಹದ ಔದ್ಯಮಿಕ ಸಾಧನೆಗೆ ಭಾರತೀಯರು ಹೆಮ್ಮೆಪಡಬೇಕು.

ದುರಂತವೆಂದರೆ ಕೆಲವರು ಅದಾನಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ, ಕೊಂಕು ನುಡಿಯುತ್ತಿದ್ದಾರೆ. ೨-೩ ವರ್ಷಗಳ ಹಿಂದೆ ಏಷ್ಯಾದ ಅತಿಶ್ರೀಮಂತ ಉದ್ಯಮಿ ಎಂದು ಗುರುತಿಸಲ್ಪಟ್ಟಿದ್ದ ಚೀನಾದ ಅಲಿಬಾಬಾ ಕಂಪನಿಯ ಸ್ಥಾಪಕ ಜ್ಯಾಕ್ ಮಾ ಉದ್ಯಮದಲ್ಲಿ ಮೇಲೇರಿದ ಬಗೆಯನ್ನು ನಮ್ಮ ಮಾಧ್ಯಮಗಳು ಆದರ್ಶ ದಂತಕತೆಯಂತೆ ಬಣ್ಣಿಸಿದ್ದುಂಟು. ಆದರೆ ಕಳೆದ ವರ್ಷ ಚೀನಾದ ಸರಕಾರದ ಕೆಂಗಣ್ಣಿಗೆ ಗುರಿಯಾಗಿ, ಕಂಪನಿಯ ಮುಖ್ಯಸ್ಥನ ಹುದ್ದೆಯಿಂದ ಪದಚ್ಯುತಗೊಳಿಸಲ್ಪಟ್ಟು ಗೃಹಬಂಧನಕ್ಕೆ ಒಳಗಾದ ಜ್ಯಾಕ್ ಮಾ ಈಗ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂಬುದು ಬೇರೆಯ ವಿಷಯ.

ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ೧ನೇ ಸ್ಥಾನದಲ್ಲಿರುವ ಎಲಾನ್ ಮಸ್ಕ್‌ನ ಸಾಹಸಗಾಥೆಯನ್ನು ನಮ್ಮಲ್ಲಿ ಬಣ್ಣಿಸಲಾಗು ತ್ತಿದ್ದರೆ, ಅದೇ ರೀತಿ ಗುರುತಿಸಿ ಕೊಂಡಿರುವ ನಮ್ಮ ವರೇ ಆದ ಗೌತಮ್ ಅದಾನಿ ತಿರಸ್ಕಾರ-ಅನುಮಾ ನಕ್ಕೆ ಒಳಗಾಗಿ ದ್ದಾರೆ! ಪಟ್ಟಿಯಲ್ಲಿ ೯ನೇ ಸ್ಥಾನದಲ್ಲಿರುವ ಮತ್ತೋರ್ವ ಭಾರತೀಯ ಉದ್ಯಮಿ ಮುಕೇಶ್ ಅಂಬಾನಿಯವರಿಗೂ ಇದು ಅನ್ವಯ.

ಕೇಂದ್ರ ಸರಕಾರದ ‘ಸಹಕಾರ’ದಿಂದಾಗಿ ಅದಾನಿ, ಅಂಬಾನಿ, ಟಾಟಾ, ಮಹೀಂದ್ರಾಗಳು ಆರ್ಥಿಕ ಪ್ರಗತಿ ಸಾಧಿಸುತ್ತಿದ್ದಾರೆ
ಎಂಬುದು ಇಂಥ ಟೀಕಾಕಾರರ ಆರೋಪ. ‘ದೇಶದ ಸಂಪತ್ತು ಕೆಲವೇ ಉದ್ಯಮಿಗಳ ಜೇಬು ಸೇರಿದೆ; ಇವರು ಸಾಮಾನ್ಯ ಭಾರತೀಯರ ಹಣ ಹೀರಿ ಶ್ರೀಮಂತರಾಗಿದ್ದಾರೆ. ಸರಕಾರ ಉದ್ಯಮಿಗಳ ಪರವಾಗಿದೆ. ಅದಾನಿ, ಅಂಬಾನಿಗಳಿಗೆ ಸರಕಾರಿ ಬ್ಯಾಂಕುಗಳು ಯಥೇಚ್ಛ ಸಾಲ ಕೊಡುತ್ತಿವೆ. ಉದ್ಯಮಿಗಳ ಬ್ಯಾಂಕ್ ಸಾಲವನ್ನು ಸರಕಾರ ಮನ್ನಾ ಮಾಡುತ್ತಿದೆ.

ಸರಕಾರದ ಆಸ್ತಿಯನ್ನು ಖಾಸಗಿಯವರಿಗೆ ಮಾರಲಾಗುತ್ತಿದೆ’ ಎಂದೆಲ್ಲ ಈ ಟೀಕಾಕಾರರು ಪುಂಖಾನುಪುಂಖವಾಗಿ ಆರೋಪಿ ಸುತ್ತಿದ್ದಾರೆ. ಅಂಬಾನಿ, ಅದಾನಿ ಹಾಗೂ ಸರಕಾರದ ಬಗೆಗಿನ ಇಂಥ ಬಹುತೇಕ ಆರೋಪಗಳು ಸತ್ಯಕ್ಕೆ ದೂರವಾಗಿರು ವಂಥವು. ಅದಾನಿ ಸಮೂಹ ದೊಡ್ಡಮಟ್ಟದ ಬ್ಯಾಂಕ್ ಸಾಲ ಮಾಡಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಈ ಸಮೂಹದ ಒಟ್ಟು ಸಂಪತ್ತು ೧೨.೫ ಲಕ್ಷ ಕೋಟಿ ರುಪಾಯಿ ಗಳಾಗಿದ್ದರೆ, ಅದು ಮಾಡಿರುವ ಸಾಲದ ಮೊತ್ತ ೨.೬ ಲಕ್ಷ ಕೋಟಿ ರುಪಾಯಿಗಳು; ಅಂದರೆ, ಅದಾನಿ ಸಮೂಹದ ಒಟ್ಟು ಮೌಲ್ಯದ ಶೇ.೨೦ ರಷ್ಟು ಮಾತ್ರ ಎಂಬುದನ್ನಿಲ್ಲಿ ಮನನ ಮಾಡಿಕೊಳ್ಳ ಬೇಕು.

ಹಾಗೆ ನೋಡಿದರೆ, ಜಾಗತಿಕ ಮಟ್ಟದ ಬೃಹತ್ ಕಂಪನಿಗಳೂ ಸಾಲಮಾಡಿವೆ. ಆಪಲ್ ಕಂಪನಿಯ ಸಾಲದ ಮೊತ್ತ ೧೦೪ ಶತಕೋಟಿ ಡಾಲರ್ ಆಗಿದ್ದರೆ, ಒರಾಕಲ್‌ನದ್ದು ೯೧ ಶತಕೋಟಿ ಡಾಲರ್, ಅಮೆಜಾನ್ ನದ್ದು ೭೨ ಶತಕೋಟಿ ಡಾಲರ್. ಅದಾನಿ ಸಮೂಹ ಸೇರಿದಂತೆ ಈ ಎಲ್ಲ ಕಂಪನಿಗಳೂ ತಮ್ಮ ವ್ಯವಹಾರ ವಿಸ್ತರಣೆಗೆ ಸಾಲಮಾಡಿವೆಯೇ ಹೊರತು ಅದರ ಮಾಲೀಕರ ಐಷಾರಾಮಿ ಜೀವನಕ್ಕಾಗಿ ಅಲ್ಲ.

ಅದಾನಿ ಸಮೂಹದಲ್ಲಿ ಯಾವೊಂದು ಕಂಪನಿಯೂ ದಿವಾಳಿಯಾಗಿಲ್ಲ; ಸಕಾಲದಲ್ಲಿ ಸಾಲದ ಮರುಪಾವತಿ ಆಗುತ್ತಿದೆ. ಅವುಗಳ ಮೇಲೆ ಸಾಲಗೇಡಿತನ/ದಿವಾಳಿತನ/ಪಾಪರಿಕೆ ಸಂಬಂಧಿತ ಕಾನೂನು ಕ್ರಮ ಕೈಗೊಳ್ಳುವ ಪ್ರಮೇಯವೇ ಬಂದಿಲ್ಲ.
ಅದಾನಿ ಸಮೂಹ ಭಾರತೀಯ ಬ್ಯಾಂಕುಗಳಿಂದ ಪಡೆದಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಬ್ಯಾಂಕುಗಳಿಂದ ಸಾಲ ಪಡೆದಿದೆ ಎಂಬುದು ಗಮನಿಸಬೇಕಾದ ಮತ್ತೊಂದು ಅಂಶ.

ಇನ್ನು, ಕೇಂದ್ರ ಸರಕಾರ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯ ಸರಕಾರಗಳು ಅದಾನಿ-ಅಂಬಾನಿ ಕಂಪನಿಗಳ ವಿಸ್ತರಣೆಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿವೆ ಎಂಬಂಥ ಟೀಕಾಸಗಳು ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ ಮುಂತಾದ ವಿಪಕ್ಷಗಳ ಬತ್ತಳಿಕೆ ಯಿಂದ ನಿರಂತರ ಹೊಮ್ಮುತ್ತಿವೆ. ವಾಸ್ತವವೆಂದರೆ, ರಾಜಸ್ಥಾನದಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳನ್ನು ಪ್ರೋತ್ಸಾಹಿ ಸಲು ಅಲ್ಲಿನ ಕಾಂಗ್ರೆಸ್ ಸರಕಾರ ಕಳೆದ ಜೂನ್‌ನಲ್ಲಿ ‘ಇನ್ವೆಸ್ಟ್ ರಾಜಸ್ಥಾನ್’ ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲಿ ೧.೬೮ ಲಕ್ಷ ಕೋಟಿ ರು. ಹೂಡಿಕೆ ಮಾಡುವ ವಿಚಾರವಾಗಿ ಅದಾನಿ-ಅಂಬಾನಿ ಒಡೆತನದ ಕಂಪನಿಗಳ ಜತೆ ರಾಜಸ್ಥಾನ
ಸರಕಾರ ಒಡಂಬಡಿಕೆಗೆ ಸಹಿಹಾಕಿದೆ.

ತಮಿಳುನಾಡಿನಲ್ಲಿ ೩೬,೨೦೦ ಕೋಟಿ ರು. ಹೂಡಿಕೆಯ ವಿಚಾರವಾಗಿ ಡಿಎಂಕೆ ಸರಕಾರ ಮತ್ತು ಅದಾನಿ ಸಮೂಹದ ನಡುವೆ ೨೦೨೧ರ ನವೆಂಬರ್‌ನಲ್ಲಿ ಒಪ್ಪಂದಕ್ಕೆ ಸಹಿಬಿದ್ದಿದೆ. ವಿಳಿಂಜಂ ಬಂದರಿನ ಅಭಿವೃದ್ಧಿಯ ಕುರಿತಾಗಿ ಕೇರಳ ಸರಕಾರ ಮತ್ತು
ಅದಾನಿ ಸಮೂಹದ ನಡುವೆ ೭೫೦೦ ಕೋಟಿ ರು. ಒಪ್ಪಂದ ೨೦೧೫ರಲ್ಲೇ ನಡೆದಿದೆ. ಬಿಜು ಜನತಾದಳ ಆಡಳಿತವಿರುವ
ಒಡಿಶಾದಲ್ಲಿ ಅದಾನಿ ಸಮೂಹ ೫೭,೫೭೫ ಕೋಟಿ ರು. ಹೂಡಲಿದೆ.

ತೇಜ್‌ಪುರದಲ್ಲಿ ಆಳಸಮುದ್ರ ಬಂದರು ನಿರ್ಮಿಸಲು ೨೫,೦೦೦ ಕೋಟಿ ರು. ಹೂಡಲು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರ ಅದಾನಿ ಸಮೂಹಕ್ಕೆ ಅನುಮತಿಪತ್ರ ನೀಡಿದೆ. ವಿಪಕ್ಷಗಳ ಆರೋಪಗಳು ಹಸಿಸುಳ್ಳು ಎಂಬುದಕ್ಕೆ ಇಷ್ಟು ಪುರಾವೆ ಸಾಕಲ್ಲವೇ? ಅದಾನಿ ಸಮೂಹ ದೇಶದ ಆರ್ಥಿಕಾಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಸೌರಮೂಲ ಹಾಗೂ ನವೀಕರಿಸಬಹುದಾದ ಇತರ ಮೂಲಗಳಿಂದ ದೇಶದಲ್ಲಿ ವಿದ್ಯುಚ್ಛಕ್ತಿ ಉತ್ಪಾದಿಸಲು ಅದು ೭೦ ಶತಕೋಟಿ ಡಾಲರ್ ಹೂಡಿದ್ದು, ೨೦೩೦ರ ಒಳಗೆ ೫೦ ಗಿಗಾವ್ಯಾಟ್‌ನಷ್ಟು ವಿದ್ಯುಚ್ಛಕ್ತಿ ಉತ್ಪಾದಿಸುವ ಗುರಿ ಹೊಂದಿದೆ.

ಸೌರ ವಿದ್ಯುಚ್ಛಕ್ತಿ ಫಲಕ ನಿರ್ಮಾಣದ ಬಾಬತ್ತಿನಲ್ಲಿ ಚೀನಾದ ಅವಲಂಬನೆಯಿಂದ ಭಾರತವನ್ನು ಹೊರತರುವ ಕೆಲಸ ಮಾಡುತ್ತಿರುವ ಅದಾನಿ ಸಮೂಹ, ದೇಶಾದ್ಯಂತ ೧೦ ಬಂದರುಗಳನ್ನು, ವಿಶೇಷ ವಿತ್ತವಲಯಗಳನ್ನು ನಿರ್ವಹಿಸುತ್ತಿದೆ. ಇವು ದೇಶದ ರಫ್ತು ಕಾರ್ಯಗಳಿಗೆ ಪೂರಕವಾದ ಸೌಕರ್ಯವನ್ನು ರೂಪಿಸಿವೆ. ಸ್ವಿಜರ್ಲೆಂಡ್‌ನ ಹೋಲ್ಸಿಮ್ ಕಂಪನಿಯ ಒಡೆತನ ದಲ್ಲಿದ್ದ ಅಂಬುಜಾ ಸಿಮೆಂಟ್, ಎಸಿಸಿ ಸಿಮೆಂಟ್ ಕಂಪನಿಗಳನ್ನು ಅದಾನಿ ಸಮೂಹ ೧೦.೫ ಶತಕೋಟಿ ಡಾಲರ್ ಮೊತ್ತಕ್ಕೆ ಇತ್ತೀಚೆಗಷ್ಟೇ ಖರೀದಿಸಿದ್ದರ ಫಲವಾಗಿ ಈ ಕಂಪನಿಗಳು ತಾಯಿಮಡಿಲಿಗೆ ಮರಳಿದಂತಾಗಿದೆ.

ಇದೇ ರೀತಿ, ಚೀನಾದ ಹಂಗಿಲ್ಲದೆ ಭಾರತದಲ್ಲಿ ೪ಜಿ ತಂತ್ರಜ್ಞಾನದಲ್ಲಿ ಮೊಬೈಲ್ ಸೇವೆ ಆರಂಭಿಸಿದವರು ಮುಕೇಶ್ ಅಂಬಾನಿ. ಇವರು ಸದ್ಯದಲ್ಲೇ ಶುರುಮಾಡಲಿರುವ ೫ಜಿ ತಂತ್ರಜ್ಞಾನದ ಸೇವೆಗಳಲ್ಲೂ ಚೀನಾದ ಯಾವುದೇ ಪರಿಕರಗಳ ಹಂಗಿರುವುದಿಲ್ಲ. ಭಾರತ ಸರಕಾರದ ಪಾಲಿಗೆ ಬಹುದೊಡ್ಡ ಸಾಲದ ಹೊರೆಯಾಗಿದ್ದ ಏರ್ ಇಂಡಿಯಾ ವಾಯುಯಾನ ಸಂಸ್ಥೆಯನ್ನು ಟಾಟಾ ಸಮೂಹ ಖರೀದಿಸಿ ಭಾರವನ್ನು ತಗ್ಗಿಸಿದೆ. ಹೀಗೆ, ಟಾಟಾ, ಮಹೀಂದ್ರಾ ಆಂಡ್ ಮಹೀಂದ್ರಾ, ಮಾರುತಿ ಸುಜುಕಿ, ಹೀರೋ ಮೋಟೋಕಾರ್ಪ್, ಬಜಾಜ್, ಟಿವಿಎಸ್ ಮೊದಲಾದ ಕಂಪನಿಗಳು ಭಾರತವನ್ನು ‘ಆತ್ಮನಿರ್ಭರ’ ವಾಗಿಸಲು ಶ್ರಮಿಸುತ್ತಿವೆ.

ಅದಾನಿ-ಅಂಬಾನಿಗಳು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಕ್ರಮವಾಗಿ ೨ ಮತ್ತು ೯ನೇ ಸ್ಥಾನಕ್ಕೇರಲು ಅವರ ಕಂಪನಿಗಳ ಕಾರ್ಯನಿರ್ವಹಣೆಯಲ್ಲಿನ ದಕ್ಷತೆ ಹಾಗೂ ಅವುಗಳ ಮೇಲೆ ಹೂಡಿಕೆದಾರರಿಗಿರುವ ವಿಶ್ವಾಸ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಉದ್ಯಮಿಗಳ ಬ್ಯಾಂಕ್ ಸಾಲವನ್ನು ಮನ್ನಾ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ ರಂಥವರು ಹೇಳುತ್ತಲೇ ಬಂದಿದ್ದಾರೆ. ಆದರೆ ಕಳೆದ ೮ ವರ್ಷಗಳಲ್ಲಿ ಯಾವೊಬ್ಬ ಉದ್ಯಮಿಯ ಸಾಲವನ್ನೂ ಮನ್ನಾ ಮಾಡಿಲ್ಲ.

ಮರುಪಾವತಿಯಾಗದ ಸಾಲವನ್ನು (ಕೆಟ್ಟಸಾಲ/ಅನುತ್ಪಾದಕ ಆಸ್ತಿ) ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್‌ನಿಂದ ಹೊರತೆಗೆದು ಪ್ರತ್ಯೇಕವಾಗಿ ತೋರಿಸುವ ಪ್ರಕ್ರಿಯೆಯಾದ ‘ರೈಟ್ ಆಫ್’ ಅನ್ನು ‘ಸಾಲ ಮನ್ನಾ’ ಎಂದು ಬಿಂಬಿಸಿ ಜನರ ದಾರಿ ತಪ್ಪಿಸ ಲಾಗುತ್ತಿದೆ. ‘ರೈಟ್ ಆಫ್’ ಎಂದು ಪ್ರತ್ಯೇಕಿಸಲ್ಪಟ್ಟ ಕೆಟ್ಟಸಾಲಕ್ಕೂ ಮರುಪಾವತಿಯಿಂದ ವಿನಾಯಿತಿಯಿಲ್ಲ. ದಿವಾಳಿ ಎಂದು ಘೋಷಿಸಿಕೊಂಡು ಬ್ಯಾಂಕ್ ಸಾಲದ ಮರುಪಾವತಿಯಿಂದ ತಪ್ಪಿಸಿಕೊಂಡು ವಂಚಿಸುತ್ತಿದ್ದ ಉದ್ಯಮಿಗಳನ್ನು ನಿಯಂತ್ರಿಸಲು ‘ಐoಟ್ಝqಛ್ಞ್ಚಿqs Zb ಆZhmಠ್ಚಿqs ಇಟbಛಿ’ ಅನ್ನು ೨೦೧೬ರಲ್ಲಿ ಸರಕಾರ ಜಾರಿ ಮಾಡಿದೆ.

ದಿವಾಳಿ ಎಂದು ಘೋಷಿಸಿಕೊಂಡ ಉದ್ಯಮಗಳನ್ನು ಬೇರೆ ಕಂಪನಿಗಳಿಗೆ ಪರಭಾರೆ ಮಾಡಿ ಸಾಲವಸೂಲಿ ಮಾಡುವ ಸಂಹಿತೆ ಇದಾಗಿದೆ. ೨೦೧೬ರ ನಂತರ ಈ ಸಂಹಿತೆಯಡಿ ೮.೬ ಲಕ್ಷ ಕೋಟಿ ರುಪಾಯಿ ಯಷ್ಟು ಕೆಟ್ಟಸಾಲಗಳು ವಸೂಲಾಗಿವೆ. ಸಾಲವಂಚನೆ ಮಾಡಿ ದೇಶದಿಂದ ಪರಾರಿಯಾಗಿರುವ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯವರ
ಆಸ್ತಿಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡು ೧೯,೦೦೦ ಕೋಟಿ ರುಪಾಯಿಗಳನ್ನು ವಸೂಲುಮಾಡಿದೆ.

ದೇಶವು ಸ್ವಾವಲಂಬಿಯಾಗಬೇಕಿದ್ದರೆ ಔದ್ಯಮಿಕ ಪ್ರಗತಿ ಆಗಲೇಬೇಕು. ಉದ್ಯಮಗಳಿಗೆ, ಹೂಡಿಕೆಗಳಿಗೆ ದೇಶದಲ್ಲಿ ಪೂರಕ ವಾತಾವರಣ ಸೃಷ್ಟಿಯಾಗಿರುವ ಪರಿಣಾಮ ಇಂದು ೧೦೭ ನವೋದ್ಯಮಗಳು ತಮ್ಮ ಮೌಲ್ಯವನ್ನು ೧ ಶತಕೋಟಿ ಡಾಲರ್‌ ಗಿಂತ ಹೆಚ್ಚಿಸಿಕೊಂಡು ‘ಯುನಿಕಾರ್ನ್ ಸ್ಟಾರ್ಟ್‌ಅಪ್’ಗಳಾಗಿ ರೂಪಾಂತರಗೊಂಡಿವೆ. ರಕ್ಷಣಾ ಉಪಕರಣ, ಆಹಾರೋದ್ಯಮ, ಉಕ್ಕು, ಸಿದ್ಧ ಉಡುಪು, ಆಟೋಮೊಬೈಲ್, ಲಿಥಿಯಂ ಬ್ಯಾಟರಿ, ಇಲೆಕ್ಟ್ರಾನಿಕ್ಸ್ ಮುಂತಾದ ಕ್ಷೇತ್ರಗಳಲ್ಲಿ ಸ್ವಾವಲಂಬಿ ಯಾಗಲೆಂದು ಈ ಉದ್ಯಮಗಳಿಗೆ ಸರಕಾರ ೧.೯೭ ಲಕ್ಷ ಕೋಟಿ ರುಪಾಯಿಯಷ್ಟು ‘ಉತ್ಪಾದನಾ ಸಂಬಂಽತ ಪ್ರೋತ್ಸಾಹ ಧನ’ ನೀಡುತ್ತಿದೆ.

ಸೆಮಿಕಂಡಕ್ಟರ್, ಐಸಿ ಚಿಪ್, ಡಿಸ್ ಪ್ಲೇಗಳನ್ನು ಭಾರತದಲ್ಲಿ ತಯಾರಿಸುವ ಕಂಪನಿಗಳಿಗೆ ೭೬,೦೦೦ ರು. ಪ್ರೋತ್ಸಾಹಧನ ಮೀಸಲಿಟ್ಟಿದೆ. ಐಟಿ ಕ್ಷೇತ್ರ ಸೇರಿದಂತೆ ಖಾಸಗಿ ಉದ್ಯಮಗಳು ೧.೨೫ ಕೋಟಿ ನೇರಹುದ್ದೆಗಳನ್ನು ಮತ್ತು ಅದರ ಎರಡರಷ್ಟು
ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ. ಭಾರತದಲ್ಲಿ ಪ್ರತಿವರ್ಷ ೮೫ ಲಕ್ಷ ಪದವೀಧರರು ಹೊರಹೊಮ್ಮುತ್ತಿದ್ದು ಈ ಪೈಕಿ ಗಣನೀಯ ಮಂದಿಗೆ ಖಾಸಗಿ ಉದ್ಯಮಗಳೇ ಜೀವನಾಧಾರ. ಹೀಗಾಗಿ, ದೇಶದ ಸಂಪತ್ತಿನ ಸೃಷ್ಟಿಕರ್ತರಾದ ಉದ್ಯಮಿಗಳಿಗೆ ನಾವು ಕೃತಜ್ಞರಾಗಿರಬೇಕು.