Tuesday, 10th December 2024

ಸಮಕಾಲೀನ ಯುಗಧರ್ಮದ ಸುತ್ತಮುತ್ತ…

ಸಕಾಲಿಕ

ಪ್ರೊ.ಆರ್‌.ಜಿ.ಹೆಗಡೆ

೨೧ನೇ ಶತಮಾನದ ಈ ಕಾಲಘಟ್ಟದ ಮುಖ್ಯ ಪ್ರೇರಣೆ ಮಾರುಕಟ್ಟೆ ಕೇಂದ್ರಿತ ಜಾಗತೀಕರಣ. ಇದರ ಕೇಂದ್ರಬಿಂದು ಅಮೆರಿಕ. ಏಕೆಂದರೆ ಅದು ಜಾಗತಿಕ ವ್ಯಾಪಾರದ ಕೇಂದ್ರ. ಸಹಜವಾಗಿ ಅಮೆರಿಕ ಮತ್ತು ಭಾರತದ ಜನರ ನಡುವಿನ ಸಂಪರ್ಕ ಕೂಡ ಎಂದಿಗಿಂತಲೂ ಇಂದು ಹೆಚ್ಚಾಗಿದೆ. ಹಾಗಾಗಿ ನಮ್ಮ ಮೇಲೆ ಇಂದು ಅತಿಹೆಚ್ಚು ಪ್ರಭಾವ ಬೀರಿರುವುದು ಅಮೆರಿಕ ಮತ್ತು ಜಾಗತೀಕರಣ.

ಯುಗಧರ್ಮ’ ಎಂದರೆ, ಒಂದು ಕಾಲದ ರಾಜಕೀಯ, ಧಾರ್ಮಿಕ, ಆರ್ಥಿಕ ಇತ್ಯಾದಿ ಶಕ್ತಿಗಳು ಒಟ್ಟಾಗಿ ಸೇರಿ ಜನಜೀವನವನ್ನು ಪ್ರಭಾವಿಸಿದ ಹಿನ್ನೆಲೆ ಯಲ್ಲಿ ಸೃಷ್ಟಿಯಾಗುವ ಒಂದು ಸಾಮಾಜಿಕ ಮನಸ್ಥಿತಿ ಅಥವಾ ಮನೋಗುಣ. ಈ ಮನೋಗುಣವು ಹಿಂದಿನ ಯುಗಕ್ಕೆ ವಿರೋಧವಾಗಿ ಬರಬಹುದು, ಒತ್ತಾಸೆಯಾಗಿ ನಿಲ್ಲಬಹುದು ಅಥವಾ ಭಿನ್ನವಾಗಿ, ವಿಶಿಷ್ಟವಾಗಿಯೂ ಇರಬಹುದು. ಅದೆಲ್ಲ ಆಯಾ ಕಾಲವನ್ನು ಪ್ರಭಾವಿಸಿದ ಶಕ್ತಿಗಳನ್ನು ಅವಲಂಬಿ ಸಿರುವಂಥದ್ದು.

ಉದಾಹರಣೆಗೆ, ಭಾರತದಲ್ಲಿ ಭಕ್ತಿ ಚಳವಳಿ ಹುಟ್ಟಿಕೊಂಡಿದ್ದು ಇಸ್ಲಾಂ ಸಾಮ್ರಾಜ್ಯಕ್ಕೆ ವಿರುದ್ಧವಾದ ಪ್ರತಿಕ್ರಿಯೆಯಾಗಿ. ಆ ಯುಗದಲ್ಲಿ ಧರ್ಮ ಸುಧಾ ರಕರು, ಹೊಸ ಧರ್ಮಸ್ಥಾಪಕರು ಮುಂದೆ ಬಂದರು. ಧರ್ಮದ ಮೂಲಕ ರಾಷ್ಟ್ರೀಯತೆಯನ್ನು ಕಟ್ಟಲು ಯತ್ನಿಸಿದ ಚಳವಳಿ ಅದು. ಮಹಾತ್ಮ ಗಾಂಧಿಯವರಿಂದಾಗಿ ಆ ಯುಗದಲ್ಲಿ ದೇಶದಲ್ಲಿ ಒಂದು ರೀತಿಯ ಮನೋಭೂಮಿಕೆ ಸೃಷ್ಟಿಯಾಯಿತು, ಅವರು ಹೋದ ನಂತರ ಇನ್ನೊಂದು ಮನಸ್ಥಿತಿ ಬಂತು. ಇಂಥ ಒಂದೊಂದು ಕಾಲದ ಮಾನಸಿಕತೆಯನ್ನು ‘ಯುಗಧರ್ಮ’ ಎನ್ನಬಹುದು. ನಮ್ಮ ಈ ಯುಗಕ್ಕೂ (೨೧ನೇ ಶತಮಾನದ ಆದಿಭಾಗ) ಒಂದು
ಯುಗಧರ್ಮವಿದೆ. ಅದನ್ನು ಗುರುತಿಸುವಲ್ಲಿನ ಯತ್ನವೇ ಈ ಬರವಣಿಗೆ.

೨೧ನೇ ಶತಮಾನದ ಈ ಕಾಲಘಟ್ಟದ ಮುಖ್ಯ ಪ್ರೇರಣೆ ಜಾಗತೀಕರಣ, ಅದರಲ್ಲೂ ಮಾರುಕಟ್ಟೆ ಕೇಂದ್ರಿತ ಜಾಗತೀಕರಣ. ಇದರ ಕೇಂದ್ರ ಅಮೆರಿಕ. ಏಕೆಂದರೆ ಅದುಜಾಗತಿಕ ವ್ಯಾಪಾರದ ಕೇಂದ್ರ. ಸಹಜವಾಗಿ ಅಮೆರಿಕ ಮತ್ತು ಭಾರತದ ಜನರ ನಡುವಿನ ಸಂಪರ್ಕ ಕೂಡ ಎಂದಿಗಿಂತಲೂ ಇಂದು ಹೆಚ್ಚಾಗಿದೆ. ಹಾಗಾಗಿ ನಮ್ಮ ಮೇಲೆ ಇಂದು ಅತಿಹೆಚ್ಚು ಪ್ರಭಾವ ಬೀರಿರುವುದು ಅಮೆರಿಕ ಮತ್ತು ಜಾಗತೀಕರಣ. ಸ್ವಾರಸ್ಯವೆಂದರೆ, ಈ ಜಾಗತೀಕರಣ ಆರಂಭವಾಗುವ ಮೊದಲು ಸುಮಾರು ೫೦ ವರ್ಷ ಕಾಲ ಭಾರತದ ಮೇಲೆ ದಟ್ಟವಾದ ಸಮಾಜವಾದಿ (ಸೋವಿಯತ್ ಒಕ್ಕೂಟ) ಪ್ರಭಾವವಿತ್ತು.

ನಮ್ಮ ಕೈಗಾರಿಕೀಕರಣ, ಶಿಕ್ಷಣ ಎಲ್ಲವೂ ‘ಸಮಾಜವಾದಿ’ ಮಾದರಿಯಲ್ಲಿದ್ದವು. ಅಂದರೆ ಎಲ್ಲವನ್ನೂ ಸರಕಾರಗಳೇ ನಡೆಸುತ್ತಿದ್ದವು. ಹಾಗಾಗಿ ೮೦ರ ದಶಕದ ಕೊನೆಯಲ್ಲಿ ಸೋವಿಯತ್ ಒಕ್ಕೂಟ, ಹಾಗೆಯೇ ಭಾರತ ಕೂಡ ಆರ್ಥಿಕ ದುಸ್ಥಿತಿಯಲ್ಲಿದ್ದವು (ಅದೇ ದಾರಿಯಲ್ಲಿ ಮುಂದುವರಿದ ಸೋವಿಯತ್ ಒಕ್ಕೂಟ ಕುಸಿದುಹೋಯಿತು, ಬಿಡಿ). ಆಗ ನಾವು ಅನಿವಾರ್ಯವಾಗಿ ಆಯ್ದುಕೊಂಡಿದ್ದು ಜಾಗತೀಕರಣ. ಅದು ದೇಶದ ಒಂದು ವರ್ಗಕ್ಕೆ ಭಾರಿ ಪ್ರಮಾಣ ದಲ್ಲಿ ಅವಕಾಶಗಳನ್ನು ಒದಗಿಸಿತು, ಅಂದರೆ ದೇಶದ ಇನ್ನೊಂದು ವರ್ಗದ ‘ಕಂಫರ್ಟ್ ಝೋನ್’ ಅನ್ನು ಅದು ಅಲುಗಾಡಿಸಿಬಿಟ್ಟಿತು.

ಭಾರತದ ರಾಜಕೀಯದಲ್ಲಿ ‘ಉಳ್ಳವರು’ ಮತ್ತು ‘ಇರದವರ’ ನಡುವಿನ ‘ವರ್ಗಸಂಘರ್ಷ’ ತೀವ್ರವಾಗಿದ್ದು ಆಗಲೇ; ಅದು ಇನ್ನೂ ನಡೆದೇ ಇದೆ ಎನ್ನಿ. ನಮ್ಮ ರಾಜಕೀಯವು ತೀವ್ರವಾಗಿ, ಸ್ಪಷ್ಟವಾಗಿ ‘ಎಡ-ಬಲ’ಗಳ ನಡುವೆ ಒಡೆದುಕೊಂಡಿರುವ ಕಾರಣವಿದು. ಸಮಾಜವಾದವು ಅಷ್ಟು ಬೇಗ, ಸುಲಭವಾಗಿ ನಮ್ಮನ್ನು ಬಿಡುತ್ತಿಲ್ಲ. ಹಾಗಾಗಿ ದೇಶದ ಒಂದು ವರ್ಗವು ಹಿಮ್ಮುಖವಾಗಿ ಚಲಿಸಿ ಸಮಾಜವಾದಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದರೆ, ಇನ್ನೊಂದು ವರ್ಗವು ಮುಂದೆ ಹೋಗಿ ಜಾಗತಿಕ ಗುಣಮಟ್ಟದ ಅಭಿವೃದ್ಧಿಯನ್ನು, ‘ಸುಖ’ಗಳನ್ನು ಪಡೆಯಲು ಬಯಸುತ್ತಿದೆ. ಜಾಗತೀಕರಣ ಈ ವರ್ಗದ
ಕನಸಿನ ಸಾಮ್ರಾಜ್ಯ. ಪರಿಣಾಮವಾಗಿ ನಮ್ಮ ರಾಜಕೀಯವು ಜಾಗತೀಕರಣದ ಪರ ಮತ್ತು ವಿರೋಧಿ ಗುಂಪುಗಳ ನಡುವೆ ಒಡೆದುಕೊಂಡಿದೆ.

ಜಾಗತೀಕರಣವನ್ನು ಬೆಂಬಲಿಸುವ ರಾಜಕೀಯದಲ್ಲಿ ಬಿಜೆಪಿ (ಬಲಪಂಥೀಯ) ಮತ್ತು ಮಿತ್ರಪಕ್ಷಗಳು ತೊಡಗಿಕೊಂಡಿದ್ದರೆ, ಮೊದಮೊದಲು ಸಂದಿಗ್ಧ ದಲ್ಲಿದ್ದ ಕಾಂಗ್ರೆಸ್ ಈಗ (ಅನಿವಾರ್ಯವಾಗಿ?) ತೀವ್ರ ಎಡಪಕ್ಷವಾಗಿ, ಅಂದರೆ ಒಟ್ಟಾರೆಯಾಗಿ (ತಾನೇ ಆರಂಭಿಸಿದ) ಜಾಗತೀಕರಣದ ಆಶಯಗಳಿಗೆ ವಿರೋಧಿಯಂತೆ ವರ್ತಿಸುತ್ತಿದೆ. ಪ್ರಾದೇಶಿಕ ಪಕ್ಷಗಳು ತಂತಮ್ಮ ರಾಜ್ಯದ, ಪ್ರದೇಶದ ಅನಿವಾರ್ಯತೆ ನೋಡಿಕೊಂಡು ಆಚೆ-ಈಚೆ ಸರಿದಿವೆ, ಸರಿಯುತ್ತಿವೆ.

ಹೆಚ್ಚು ಹೆಚ್ಚು ಜನ ಸಬಲರಾಗುತ್ತ, ‘ಅಭಿವೃದ್ಧಿ’ ಮತ್ತು ‘ಸುಖ’ವನ್ನು ಬಯಸುತ್ತ ಹೋದಂತೆ ಬಿಜೆಪಿ ಬೆಳೆಯುತ್ತಿದೆ. ತನ್ನನ್ನು ಬೆಂಬಲಿಸುವ ಮಧ್ಯಮ ವರ್ಗದ ವಿರೋಧ ಕಟ್ಟಿಕೊಳ್ಳದಿದ್ದರೆ, ವಿಶ್ವಾಸ ಇಟ್ಟುಕೊಂಡರೆ, ಅದು ಸುದೀರ್ಘ ಕಾಲ ದೇಶದ ರಾಜಕೀಯದಲ್ಲಿರಲಿದೆ. ಏಕೆಂದರೆ, ಅದು ದೇಶದ ಒಂದು ಬೃಹತ್ ವರ್ಗದ ಮನಸ್ಥಿತಿಯನ್ನು ಪ್ರತಿನಿಧಿಸುತ್ತಿದೆ. ಕಾಂಗ್ರೆಸ್ ಒಂದೊಮ್ಮೆ ಇದೇ ವೇಗದಲ್ಲಿ ‘ಎಡ’ಮಾರ್ಗದಲ್ಲೇ ಸಾಗಿದರೆ ಪ್ರಮುಖ ಪಕ್ಷವಾಗಿ
ಉಳಿದುಕೊಳ್ಳುತ್ತದೆ; ಆದರೆ ಹೆಚ್ಚು ಕಡಿಮೆ ಅದೇ ‘ಸಮಾಜವಾದಿ’ ಮನಸ್ಥಿತಿ ಹೊಂದಿರುವ ಪ್ರಾದೇಶಿಕ ಪಕ್ಷಗಳು (ತಮಿಳುನಾಡು ಬಿಟ್ಟು) ನಾಶ ವಾಗಲಿವೆ.

ಎಡ-ಬಲಗಳ ನಡುವಿನ ಈ ಯುದ್ಧವೇ ವರ್ತಮಾನದಲ್ಲಿ ದೇಶದ ದಿನಚರಿಯಾಗಿಬಿಟ್ಟಿದೆ; ಶಿಕ್ಷಣ, ಸಾಹಿತ್ಯ, ಪತ್ರಿಕೋದ್ಯಮ, ಕೃಷಿ, ಪರಿಸರ ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಅನುದಿನ ನಡೆಯುತ್ತಿರುವ ಸಂಘರ್ಷದ ಕಾರಣ ಇದು. ‘ಸಾಮಾಜಿಕ ನ್ಯಾಯ’ ಮತ್ತು ‘ಸಂವಿಧಾನದ ರಕ್ಷಣೆ’ ಎಂಬ ಶಬ್ದಗಳು ವಿರುದ್ಧಾರ್ಥಕ ಶಬ್ದಗಳಾಗಿ ಮಾರ್ಪಟ್ಟಿರುವ ಕಾರಣ ಇದು; ‘ಅಭಿವೃದ್ಧಿ’ ಮತ್ತು ‘ಬೆಳವಣಿಗೆ’ ಎಂಬ ಶಬ್ದಗಳಿಗೂ ಈ ಗ್ರಹಿಕೆ ಅನ್ವಯಿಸುತ್ತದೆ. ಆದರೆ ಇಲ್ಲಿಯೂ ಕೆಲವು ಸಮಸ್ಯೆಗಳಿವೆ. ಕೆಲವೊಮ್ಮೆ ಪಕ್ಷಗಳಿಗೆ ದೈನಂದಿನ ಆಚರಣೆಯಲ್ಲಿ ‘ಎಡ’ ಮತ್ತು ‘ಬಲ’ಗಳಿಗಿಂತ ಪಕ್ಷ ರಾಜಕೀಯವೇ ಮಿಗಿಲಾಗಿ, ತತ್ವಗಳು ತೋರಿಕೆಯ ಮಾತುಗಳಾಗಿಬಿಟ್ಟಿವೆ. ಅವು ಜನರನ್ನು ಮೋಸಗೊಳಿಸುವ, ಅಧಿಕಾರವನ್ನು ಪಡೆಯುವ ಮತ್ತು ಉಳಿಸಿಕೊಳ್ಳುವ ‘ಜನಪ್ರಿಯ ರಾಜಕೀಯ’ದ ತಂತ್ರಗಳೂ ಆಗಿಬಿಟ್ಟಿವೆ. ತತ್ವ-ಸಿದ್ಧಾಂತಗಳು ಜನರ ಕಣ್ಣಿಗೆ ಮಣ್ಣೆರಚುವ ಸುಳ್ಳುಗಳಾಗಿ ಬದಲಾಗಿರುವುದು ಸಮಕಾಲೀನ ಸಮಾಜದ ದೊಡ್ಡ ದುರಂತ.

‘ಎಡ’ ಮತ್ತು ‘ಬಲ’ ಈ ಎರಡೂ ಬಣಗಳು ನಮ್ಮ ಸಮಾಜವನ್ನು ತೀವ್ರವಾಗಿ ಒಡೆದುಬಿಟ್ಟಿವೆ. ತಮ್ಮ ಬಣ ಸೋತರೆ ಭವಿಷ್ಯವೇ ಅಂಧಕಾರಕ್ಕೆ ಜಾರುತ್ತದೆ ಎಂದು ಅವು ಜನಸಾಮಾನ್ಯರನ್ನು ನಂಬಿಸಿ ಭಯ ಸೃಷ್ಟಿಸಿಬಿಟ್ಟಿವೆ. ಪ್ರತಿಯೊಬ್ಬ ವ್ಯಕ್ತಿಯನ್ನೂ ರಾಜಕೀಯದಲ್ಲಿ ತೊಡಗಿಸಿ ‘ಹೋರಾಟಕ್ಕೆ’
ಅಣಿಯಾಗಿಸಿಬಿಟ್ಟಿವೆ. ಹೀಗಾಗಿ ‘ರಾಜಕೀಯ’ವೇ ಜನಜೀವನದ ಕೇಂದ್ರಬಿಂದುವಾಗಿಬಿಟ್ಟಿದೆ. ಮಾಧ್ಯಮಗಳು ವರದಿ ಮಾಡುವುದು ರಾಜಕೀಯವನ್ನು ಮಾತ್ರ.

ಗಮನಿಸಬೇಕು, ಹಲವು ಶತಮಾನಗಳ ಕಾಲ ನಮ್ಮ ಸಮಾಜವು ರಾಜಕೀಯ-ಕೇಂದ್ರಿತವಾಗಿರಲಿಲ್ಲ, ಧರ್ಮಕೇಂದ್ರಿತವಾಗಿತ್ತು, ಸಂಪ್ರದಾಯ ಕೇಂದ್ರಿತವಾಗಿತ್ತು. ನಮ್ಮ ಯುಗದ ಎರಡನೆಯ ಮಹತ್ವದ ಪ್ರೇರಣೆ ‘ಹಿಂದುತ್ವ’ದ ಮರುಹುಟ್ಟು ಹಾಗೂ ವ್ಯಾಪಕ ಬೆಳವಣಿಗೆ. ಇದು ನೆಹರು-ಪ್ರಣೀತ ‘ಜಾತ್ಯತೀತತೆ’ಗೆ ಪ್ರತಿಕ್ರಿಯೆಯಾಗಿ ಹುಟ್ಟಿದ್ದು ಎಂಬುದು ಸ್ಪಷ್ಟ. ಈ ವರ್ಗವು ‘ಜಾತ್ಯತೀತತೆ’ಯನ್ನು, ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕೀಯವಾಗಿ ನೋಡುತ್ತದೆ. ಆರ್ಥಿಕವಾಗಿ ಪಾಶ್ಚಾತ್ಯೀಕರಣಗೊಂಡ ಹಿಂದೂ ಮಧ್ಯಮವರ್ಗವೇ ಈ ವಾದದ ಪ್ರಮುಖ ವಕ್ತಾರ ಮತ್ತು ‘ಹಿಂದುತ್ವ’ವೇ ಬಿಜೆಪಿಯ
ಭಾರಿ ಬೆಳವಣಿಗೆಯ ಹಿಂದಿರುವ ಕಾರಣ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲೂ ಇದ್ದ ‘ಹಿಂದುತ್ವ’ಕ್ಕೆ ಕೆಲವು ಜನಪ್ರಿಯ ಅಂಶಗಳನ್ನು ಲಗತ್ತಿಸಿ ಮಾರ್ಪಡಿಸಿ, ಅದರ ಹೊಸ ಅವತಾರವನ್ನು ದೇಶದ ಮುಂದಿಟ್ಟು ಭಾರಿ ಪ್ರಮಾಣದಲ್ಲಿ ಬೆಳೆಸಿದವರು ಬಿಜೆಪಿಯ ನಾಯಕ ಎಲ್. ಕೆ. ಆಡ್ವಾಣಿ. ಅವರು ಕೈಗೊಂಡ ರಥಯಾತ್ರೆಯು ದೇಶದ ಇತಿಹಾಸಕ್ಕೆ ಭಾರಿ ತಿರುವು ನೀಡಿದ ಒಂದು ಘಟನೆ.

ಈ ಹಿಂದುತ್ವದ ಪ್ರಮುಖ ವಾದಗಳೆಂದರೆ- ದೇಶದಲ್ಲಿರುವವರೆಲ್ಲರೂ ಹಿಂದೂಗಳು, ಶ್ರೀರಾಮ ಹಿಂದೂ ಸಾಂಸ್ಕೃ ತಿಕತೆಯ ಸಂಕೇತ,  ಅಲ್ಪಸಂಖ್ಯಾತ ರಿಗೆ ವಿಶೇಷವಾಗಿ ಮುಸ್ಲಿಂ ಸಮುದಾಯಕ್ಕೆ ಇಲ್ಲಿಯವರೆಗೆ ನೀಡಲಾದ ಎಲ್ಲ ವಿಶೇಷ ಸವಲತ್ತುಗಳು ರದ್ದಾಗಬೇಕು, ೩೭೦ನೇ ವಿಧಿ ಮತ್ತು ತ್ರಿವಳಿ ತಲಾಕ್ ರದ್ದಾಗಬೇಕು (ಆಗಿವೆ), ಸಿಎಎ ಜಾರಿಗೆ ಬರಬೇಕು (ಬಂದಿದೆ), ಏಕರೂಪ ನಾಗರಿಕ ಸಂಹಿತೆ, ವಕ್ ಬೋರ್ಡ್ ಬದಲಾವಣೆ ಜಾರಿಗೆ ಬರಬೇಕು.

ಆಡ್ವಾಣಿ ನಂತರ, ಹಿಂದುತ್ವವನ್ನು ಆಧರಿಸಿದ ಸಾಂಸ್ಕೃತಿಕ ರಾಜಕೀಯವನ್ನು, ದಕ್ಷ ಆಡಳಿತ, ಅಭಿವೃದ್ಧಿಯ ರಾಜಕೀಯ ಮತ್ತು ‘ಆಕ್ರಮಣಕಾರಿ ರಾಷ್ಟ್ರೀಯತೆ’ಯೊಂದಿಗೆ ಸೇರಿಸಿ, ದೇಶದ ಬಹುಸಂಖ್ಯಾತರಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ಸಂವಹಿಸಿರುವ ಪ್ರಧಾನಿ ಮೋದಿಯವರು ಈಗಾಗಲೇ ಮೂರು ಲೋಕಸಭಾ ಚುನಾವಣೆಗಳನ್ನು ಗೆದ್ದಿದ್ದಾರೆ. ಸ್ವಾರಸ್ಯವೆಂದರೆ, ಇಲ್ಲಿ ಬಿಜೆಪಿಯನ್ನು ಬೆಂಬಲಿಸಿದ ವರ್ಗವೇ ಜಾಗತೀಕರಣವನ್ನು ಬೆಂಬಲಿಸುವ ವರ್ಗವೂ ಹೌದು. ಇಲ್ಲಿ ಕಾಂಗ್ರೆಸ್ ಮತ್ತು ಅದರ ಒಕ್ಕೂಟವನ್ನು ಬೆಂಬಲಿಸಿದ ವರ್ಗಗಳೇ ಹೆಚ್ಚುಕಡಿಮೆ ಅಲ್ಲಿ ಸಮಾಜವಾದವನ್ನು ಬೆಂಬಲಿಸುತ್ತಿರು
ವುದು. ಯುಗಧರ್ಮದ ಮೇಲಿನ ಮೂರನೆಯ ಬಲವಾದ ಪ್ರಭಾವ ತಂತ್ರಜ್ಞಾನದ್ದು, ಗೂಗಲ್-ಮೊಬೈಲ್ -ಅಂತರ್ಜಾಲಕ್ಕೆ ಸಂಬಂಧಿಸಿದ್ದು.

ತ್ರಿವಿಕ್ರಮನ ಬೇತಾಳದಂತೆ ಎಲ್ಲರ ಹೆಗಲಿಗೇರಿರುವ ೩ ಸಮಕಾಲೀನ ಪ್ರಭಾವ ಗಳಿವು. ಈಗಿನ ಜಗತ್ತಿನ ಅಂತಿಮಸತ್ಯ ‘ಗೂಗಲ್’. ನಾವು ಜಗತ್ತನ್ನು ನೋಡುವ ದೃಷ್ಟಿಕೋನ ವನ್ನು ಸೃಷ್ಟಿಸುತ್ತಿದೆ ಗೂಗಲ್. ಹಾಗೆಯೇ, ಮೊಬೈಲ್ ಮತ್ತು ಅಂತರ್ಜಾಲ, ಸಾವಿರಾರು ವರ್ಷಗಳಿಂದ ಬಂದ ನಮ್ಮ ಜೀವ ನವಿ ಧಾನವನ್ನೇ ತಲೆಕೆಳಗು ಮಾಡಿವೆ, ನಮ್ಮ ಮೌಲ್ಯಗಳ ವ್ಯವಸ್ಥೆಗಳನ್ನು ಕಿತ್ತುಹಾಕಿವೆ. ಬಹುಶಃ ನಮ್ಮ ಸಂಸ್ಕೃತಿಗಳನ್ನು, ವೈವಿಧ್ಯಗಳನ್ನು, ಸಭ್ಯತೆಗಳನ್ನೂ ಇವು ನಾಶಮಾಡಿವೆ. ಇಂದು ನಮ್ಮ ಜ್ಞಾನ ಮತ್ತು ಮನರಂಜನೆ ಎರಡರ ಮೂಲಗಳೂ ಇವೇ.

ಓದುವುದಕ್ಕಿಂತ, ಕೇಳುವುದಕ್ಕಿಂತ ‘ನೋಡುವುದು’ ಹೆಚ್ಚಿನದು ಎಂಬ ಭಾವನೆಯನ್ನು ನಮ್ಮ ತಲೆಯೊಳಗೆ ತುಂಬಿರುವ ಇವು ನಮ್ಮ ಕಲೆ ಮತ್ತು
ಸಾಹಿತ್ಯಕ್ಕೆ ಒದಗಿರುವ ದೊಡ್ಡ ಸವಾಲುಗಳು. ಹಾಗಾಗಿ ನಾವಿಂದು ಹಾಡನ್ನು ಕೇಳುವುದಿಲ್ಲ, ನೋಡುತ್ತೇವೆ. ದೃಶ್ಯಕ್ಕೇ ಮಹತ್ವ, ಅದೂ ಅಬ್ಬರದ ದೃಶ್ಯಮಹತ್ವ. ಈ ಕಾರಣದಿಂದಾಗಿಯೇ ಇಂದು ‘ಓದುವ ಸಾಹಿತ್ಯ’ ಮಂಕಾಗಿರುವುದು, ಸಾಹಿತಿಯು ಸಾಮಾಜಿಕ ಜೀವನದ ಕೇಂದ್ರಬಿಂದು ಎನ್ನುವ ಸ್ಥಾನದಿಂದ ಹೊರಬಂದಿರುವುದು. ರಾಜಕೀಯವೇ ಕೇಂದ್ರವಸ್ತುವಾಗಿ ಉಳಿದೆಲ್ಲವೂ ಅಮುಖ್ಯ ಎನಿಸಿರುವುದು ನಮ್ಮ ಕಾಲದ ವಿಶಿಷ್ಟ ಬೆಳವಣಿಗೆ. ಮತ್ತೆ, ರಾಜಕೀಯದತ್ತ ಮಧ್ಯಮ ವರ್ಗದ ‘ಅಲರ್ಜಿ’ ಬೆಳೆಯುತ್ತಿರುವುದೂ ಇದರ ಜತೆಯೇ ನಡೆಯುತ್ತಿರುವ ವಿಚಿತ್ರ ಬೆಳವಣಿಗೆ!

(ಲೇಖಕರು ಮಾಜಿ ಪ್ರಾಂಶುಪಾಲರು ಮತ್ತು ಶಿಕ್ಷಣ
ಸಮಾಲೋಚಕರು)