ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
vbhat@me.com
ಅನೇಕರು ಇತ್ಯಾದಿ, ಮುಂತಾದ… ಪದಗಳನ್ನು ಸುಮ್ಮನೆ ಬರೆಯುತ್ತಾರೆ. ವೇದಿಕೆಯಲ್ಲಿ ಆರು ಜನ ಇದ್ದಲ್ಲಿ, ನಾಲ್ವರ ಹೆಸರನ್ನು ಬರೆದು, ‘ಮುಂತಾದವರು’ ಎಂದು ಸೇರಿಸಿಬಿಡುತ್ತಾರೆ. ಇನ್ನುಳಿದ ಇಬ್ಬರ ಹೆಸರು ಬರೆಯುವುದು ಕಷ್ಟವೇನಲ್ಲ. ಆದರೆ ಅದನ್ನು ತಿಳಿಯುವ ಪ್ರಯತ್ನ ಮಾಡುವುದಿಲ್ಲ. ಸ್ಪಷ್ಟತೆ ಇಲ್ಲದ, ಆಲಸಿ ವರದಿಗಾರ ಮಾತ್ರ ಹಾಗೆ ಬರೆಯಬಲ್ಲ.
ಪತ್ರಿಕೆಗಳ ವರದಿಯಲ್ಲಿ ಮುಂತಾದ, ಇತ್ಯಾದಿ ಎಂದು ಬರೆದರೆ ಪಾವೆಂ ಆಚಾರ್ಯರು, ‘ಮುಂತಾದ ಅಂದ್ರೆ ಏನು, ಇತ್ಯಾದಿ ಎಂದು ಯಾಕೆ ಬಳಸಿದ್ದೀರಿ?’ ಎಂದು ಕೇಳುತ್ತಿದ್ದರು. ಈ ವಿಷಯದಲ್ಲಿ ವೈಎನ್ಕೆ ಸಹ ಕಟ್ಟುನಿಟ್ಟು.
‘ರಾಮ, ಕೃಷ್ಣ ಮತ್ತು ಗೋವಿಂದ ಬಂದಿದ್ದರು’ ಎಂದು ಬರೆದರೆ, ‘ರಾಮ, ಕೃಷ್ಣ, ಗೋವಿಂದ ಸರಿ.. ಆದರೆ ಈ ಮತ್ತು ಅಂದ್ರೆ ಯಾರು?’ ಎಂದು ಕೇಳುತ್ತಿದ್ದರು. ‘ಪತ್ರಿಕೆಯಲ್ಲಿ ಏನೇ ಬರೆದರೂ ನಮಗೆ ಸ್ಪಷ್ಟತೆ ಇರಬೇಕು, ಯಾವ ಪದವನ್ನೂ ಸುಮ್ಮನೆ ಬಳಸಬಾರದು. ಬಳಸಿದ ಪ್ರತಿ ಪದವೂ ಮಾತಾಡಬೇಕು’ ಎಂದು ಅವರು ಹೇಳುತ್ತಿದ್ದರು.
ಒಮ್ಮೆ ಕಾಪಿಯಲ್ಲಿ ವರದಿಗಾರರೊಬ್ಬರು, ‘ಸಭೆಯಲ್ಲಿ ಹೆಗಡೆ, ಪಟೇಲ್, ಗೌಡ, ಬೊಮ್ಮಾಯಿ ಮತ್ತಿತರರು ಭಾಗವಹಿಸಿದ್ದರು’ ಎಂದು ಬರೆದಿದ್ದರು. ಅದನ್ನು ನೋಡಿದ ವೈಎನ್ಕೆ, ‘ಎಲ್ಲ ಸರಿ, ಆದರೆ ನಿಮ್ಮ ಕಾಪಿಯಲ್ಲಿ ಮತ್ತಿತರರು ಎಂದು ಬರೆದಿದ್ದೀರಲ್ಲ, ಅವರು ಯಾರು?’ ಎಂದು ಕೇಳಿದ್ದರು. ದೇವರ ಪೂಜೆಗೆ ಊದಿ
ನಕಡ್ಡಿ, ಕರ್ಪೂರ , ಹೂವು, ದರ್ಬೆ ಬೇಕು ಎಂದು ಹೇಳುವುದಕ್ಕೂ, ದೇವರ ಪೂಜೆಗೆ ಊದಿನಕಡ್ಡಿ, ಕರ್ಪೂರ , ಹೂವು, ದರ್ಬೆ ಇತ್ಯಾದಿ ಸಾಮಾನುಗಳು ಬೇಕು ಎನ್ನುವುದಕ್ಕೂ ಬಹಳ ಅಂತರವಿದೆ ಎಂಬುದು ಅವರ ತರ್ಕವಾಗಿತ್ತು.
ಇಲ್ಲಿ ಇತ್ಯಾದಿ ಅಂದ್ರೆ ಏನು ಬೇಕಾದರೂ ಆಗಬಹುದು. ಸ್ಪಷ್ಟತೆ ಇಲ್ಲದ ವರದಿಗಾರ ಮಾತ್ರ ಹೀಗೆ ಬರೆಯಬಲ್ಲ ಎಂಬುದು ಅವರ ವಾದವಾಗಿತ್ತು. ಸ್ಪಷ್ಟತೆ ಇಲ್ಲದ, ಆಲಸಿ ವರದಿಗಾರ ಮಾತ್ರ ಹಾಗೆ ಬರೆಯಬಲ್ಲ ಎಂದು ಅವರು ಹೇಳುತ್ತಿದ್ದರು. ಅವರು ತಮ್ಮ ಬರಹಗಳಲ್ಲಿ ಇತ್ಯಾದಿ, ಮುಂತಾದ, ಮತ್ತು ಪದಗಳನ್ನು ಅನಿವಾರ್ಯವಾದಾಗ ಮಾತ್ರ ಬಳಸುತ್ತಿದ್ದರು. ಅವರು ಆ ಪದಗಳನ್ನು ಬಳಸಿದರೆ, ಅದಕ್ಕೆ ವಿಶೇಷ ಅರ್ಥ ಇರುತ್ತಿತ್ತು. ಅನೇಕರು ಈ ಪದಗಳನ್ನು (ಇತ್ಯಾದಿ, ಮುಂತಾದ, ಮತ್ತಿತರರು, ಎಂಬಿತ್ಯಾದಿ) ಸುಮ್ಮನೆ ಬರೆಯುತ್ತಾರೆ. ವೇದಿಕೆಯಲ್ಲಿ ಆರು ಜನ ಭಾಗವಹಿಸಿದ ಕಾರ್ಯಕ್ರಮದಲ್ಲಿ, ನಾಲ್ವರ ಹೆಸರುಗಳನ್ನು ಬರೆದು, ನಂತರ ‘ಮುಂತಾದವರು’ ಎಂದು ಸೇರಿಸಿ ಬಿಡುತ್ತಾರೆ.
ಇನ್ನುಳಿದ ಇಬ್ಬರ ಹೆಸರುಗಳನ್ನು ಬರೆಯುವುದು ಕಷ್ಟವೇನಲ್ಲ. ಆದರೆ ಅದನ್ನು ತಿಳಿಯುವ ಪ್ರಯತ್ನ ಮಾಡುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಕಥೆಯ ಪ್ರಮುಖ ಪಾತ್ರಧಾರಿಯ ಹೊರತಾಗಿ ಉಳಿದವರ ಹೆಸರು ಪ್ರಸ್ತುತವಾಗದಿರಬಹುದು. ಅಂಥ ಸಂದರ್ಭದಲ್ಲಿ ಬೇಕಾದರೆ ಮುಂತಾದ, ಇತ್ಯಾದಿ ಬಳಸಲಿ ತಪ್ಪಿಲ್ಲ. ‘ಮನೆ ಯಲ್ಲಿ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ, ಅತ್ತಿಗೆ, ಅಕ್ಕ, ತಮ್ಮ, ಅತ್ತೆ, ದೊಡ್ಡಮ್ಮ ಇತ್ಯಾದಿಯವರಿದ್ದಾಗ ಕೊಲೆಯಾಯಿತು’ ಎಂದು ಹೇಳಿದಾಗ, ಮನೆ ಯಲ್ಲಿ ಇವರಲ್ಲದೇ ಮತ್ತೆ ಯಾರಿದ್ದರು ಎಂಬ ಸಂದೇಹವನ್ನು ‘ಇತ್ಯಾದಿ’ ಪದ ಮೂಡುವಂತೆ ಮಾಡುತ್ತದೆ.
ಇತ್ಯಾದಿ ಪದಕ್ಕೆ ಅದರದ್ದೇ ಆದ ನಿಖರ ಅರ್ಥವಿದೆ. ಸುಖಾಸುಮ್ಮನೆ ಅದನ್ನು ಬಳಸಬಾರದು. ಇಂಗ್ಲಿಷಿನಲ್ಲಿ ಇದಕ್ಕೆ etcetera ಎಂದು ಕರೆಯುತ್ತಾರೆ. ಜಗತ್ತಿನ ಎಲ್ಲ ಭಾಷೆಗಳಲ್ಲೂ ಈ ಪದ ಅಸ್ತಿತ್ವವನ್ನು ಗಿಟ್ಟಿಸಿಕೊಂಡಿದೆ. ತೆಲುಗಿನಲ್ಲೂ ಇತರ, ಇತ್ಯಾದಿ, ಮೊದಲಗುನವಿ, ಮೊದಲೈನವಿ ಎಂಬ ಪದಗಳಿವೆ. ತಮಿಳಿನಲ್ಲಿ ಇನ್ನಪಿರ, ಮುತಾಲಿಯಾನ ಎಂಬ ಪದಗಳಿವೆ. ಮಲಯಾಳಂನಲ್ಲಿ ಥುಡಂಗಿಯವ ಎನ್ನುತ್ತಾರೆ. ಉರ್ದು ಭಾಷೆಯಲ್ಲಿ ವಘೇರಃ, ವಗೈರೆ ಎಂದು ಹೇಳುತ್ತಾರೆ. ಚೈನಿ ಭಾಷೆಯಲ್ಲಿ ‘ದೆಂಗದೇಂಗ್’ ಎಂದು ಹೇಳುತ್ತಾರಂತೆ.
ಕನ್ನಡದ ಖ್ಯಾತ ಹಾಸ್ಯ ಸಾಹಿತಿ ನಾ.ಕಸ್ತೂರಿ ಎಂದೇ ಪರಿಚಿತರಾದ ನಾರಾಯಣ ಕಸ್ತೂರಿ ರಂಗನಾಥ ಶರ್ಮ ಅವರ ಶಿಷ್ಯರಾದ ಪ್ರೊ.ಪ್ರಭುಶಂಕರ ಹೇಳಿದ ಒಂದು ಪ್ರಸಂಗ ನೆನಪಾಗುತ್ತದೆ. ಒಮ್ಮೆ ನಾ.ಕಸ್ತೂರಿಯವರು, ಪ್ರಭುಶಂಕರರನ್ನು ಉದ್ದೇಶಿಸಿ, ‘ಇವತ್ತು ನನ್ನ ಹೆಸರು ಪತ್ರಿಕೆಯಲ್ಲಿ ಬಂದಿದೆ. ನೋಡಿದೆಯಾ?’ ಎಂದು ಕೇಳಿದರಂತೆ. ಅವರು ಕೇಳುವುದಕ್ಕೂ ಮುನ್ನವೇ ಪ್ರಭುಶಂಕರರು ಆ ದಿನದ ಪತ್ರಿಕೆಯನ್ನು ಆರಂಭ ದಿಂದ ಕೊನೆ ತನಕವೂ ಓದಿದ್ದರಂತೆ. ‘ಗುರುಗಳೇ, ಇಂದಿನ ಪತ್ರಿಕೆಯನ್ನು ಒಂದು ತುದಿಯಿಂದ ಮತ್ತೊಂದು ತುದಿಯವರೆಗೂ ಓದಿದ್ದೇನೆ. ನಿಮ್ಮ ಹೆಸರನ್ನು ನೋಡಲಿಲ್ಲ’ ಎಂದು ಹೇಳಿದರಂತೆ.
ಆಗ ಕಸ್ತೂರಿಯವರು, ‘ಬಂದಿದೆ ಕಣೋ, ಬಂದಿದೆ. ನೀನು ಸರಿಯಾಗಿ ನೋಡಿಲ್ಲ’ ಎಂದರಂತೆ. ಆಗ ಪ್ರಭುಶಂಕರರು ತುಸು ಅಸಹನೆಯಿಂದ, ಇಲ್ಲ ಗುರುಗಳೇ, ನಾನು ಒಂದಕ್ಷರವೂ ಬಿಡದೆ ಓದಿದ್ದೇನೆ. ಎಲ್ಲೂ ನಿಮ್ಮ ಹೆಸರು ಕಾಣಿಸಲಿಲ್ಲ’ ಎಂದು ಹೇಳಿದರಂತೆ. ಅದಕ್ಕೆ ಕಸ್ತೂರಿಯವರು, ‘ಅಯ್ಯಾ, ನಿನ್ನೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಸ್ತಿಯವರ ಭಾಷಣದ ವರದಿ ಪ್ರಕಟವಾಗಿದೆಯೋ, ಇಲ್ಲವೋ?’ ಎಂದು ಕೇಳಿದರಂತೆ. ‘ಹೌದು ಹೌದು..ಪ್ರಕಟವಾಗಿದೆ.. ಅದನ್ನು ನಾನು ನೋಡಿದ್ದೇನೆ’ ಎಂದು ಪ್ರಭುಶಂಕರರು ಹೇಳಿದರಂತೆ.
‘ಅಲ್ಲಿ ವಿ.ಸೀತಾರಾಮಯ್ಯ, ರಾಜರತ್ನಂ ಇತ್ಯಾದಿ ಸಾಹಿತಿಗಳು ಭಾಗವಹಿಸಿದ್ದರು ಎಂದು ಬರೆದಿರಬೇಕಲ್ಲ?’ ಎಂದು ಕಸ್ತೂರಿ ಕೇಳಿದರಂತೆ. ಅದಕ್ಕೆ ಪ್ರಭು ಶಂಕರರು, ‘ಗುರುಗಳೇ, ಹೌದು.. ಹೌದು.. ವಿ.ಸೀತಾರಾಮಯ್ಯ, ರಾಜರತ್ನಂ ಇತ್ಯಾದಿ ಸಾಹಿತಿಗಳು ಭಾಗವಹಿಸಿದ್ದರು ಎಂದು ಬರೆದಿದ್ದಾರೆ’ ಎಂದು
ಉದ್ಗರಿಸಿದರಂತೆ. ಅದಕ್ಕೆ ಕಸ್ತೂರಿಯವರು ಪ್ರತಿಕ್ರಿಯಿಸಿದರಂತೆ – ‘ಆ ಇತ್ಯಾದಿಗಳಲ್ಲಿ ನಾನೇ ಮೊದಲಿಗ. ಏಕೆಂದರೆ ರಾಜರತ್ನಂ ಪಕ್ಕದಲ್ಲಿ ಕೂತಿದ್ದವನು ನಾನೇ!’
ವಾಜಪೇಯಿ: ಎರಡು ಪ್ರಸಂಗಗಳು
ಪ್ರಾಯಶಃ ಅಟಲ್ ಬಿಹಾರಿ ವಾಜಪೇಯಿ ಭೇಟಿ ನೀಡದ ಭಾರತದ ನಗರಗಳಿರಲಿಲ್ಲ. ಅವರು ದೇಶದ ಬಹುತೇಕ ನಗರ, ಪಟ್ಟಣಗಳಿಗೆ ಐದಕ್ಕಿಂತ ಹೆಚ್ಚು ಸಲ ಭೇಟಿ ನೀಡಿದ್ದಿರಬಹುದು. ಎಲ್ಲ ಜಿಲ್ಲಾ ಕೇಂದ್ರಗಳನ್ನು ಅವರು ಬಿಟ್ಟವರಲ್ಲ. ಯಾವುದೇ ಊರಿಗೆ ಹೋದರೂ, ಅಲ್ಲಿ ಅದಕ್ಕೂ ಹಿಂದೆ ಭೇಟಿ ನೀಡಿದಾಗ ನಡೆದ ಒಂದಾದರೂ ಪ್ರಸಂಗವನ್ನು ಅವರು ಹೇಳುತ್ತಿದ್ದರು.
ಆ ದಿನಗಳಲ್ಲಿ ವಾಜಪೇಯಿ ಅವರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರು ರೈಲಿನಲ್ಲಿ ಇಳಿಯುತ್ತಿದ್ದಂತೆ, ಪಕ್ಷದ ಕಾರ್ಯಕರ್ತರು ಅವರನ್ನು ಸ್ವಾಗತಿಸಿ, ಸ್ಕೂಟರಿನಲ್ಲಿ ಕುಳ್ಳಿರಿಸಿಕೊಂಡು ಪಕ್ಷದ ಕಾರ್ಯಕರ್ತರ ಮನೆಗೋ, ಅತಿಥಿಗೃಹಕ್ಕೋ ಕರೆದುಕೊಂಡು ಹೋಗುತ್ತಿದ್ದರು. ಹೋಟೆಲಿನಲ್ಲಿಯೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳುತ್ತಿರಲಿಲ್ಲ. ಎಂಬತ್ತರ ದಶಕದವರೆಗೂ ಇದು ಮುಂದುವರಿದುಕೊಂಡು ಬಂದಿತ್ತು. ಬೆಂಗಳೂರಿಗೆ ಬಂದಾಗ ಅವರನ್ನು ರೈಲು ನಿಲ್ದಾಣದಿಂದ, ಹಳೆ ವಿಮಾನ ನಿಲ್ದಾಣದಿಂದ ಸ್ಕೂಟರಿನಲ್ಲಿ ಕರೆದುಕೊಂಡು ಬಂದಿದ್ದನ್ನು ಈಗಲೂ ಪಕ್ಷದ ಹಳೆಯ ಕಾರ್ಯಕರ್ತರು ನೆನಪಿಸಿಕೊಳ್ಳುತ್ತಾರೆ.
ಒಮ್ಮೆ ವಾಜಪೇಯಿ ಅವರು ಇಂದೋರ್‌ಗೆ ಹೋಗಿದ್ದರು.
ಅಲ್ಲಿ ಅವರ ಬೃಹತ್ ಸಾರ್ವಜನಿಕ ಭಾಷಣವನ್ನು ಏರ್ಪಡಿಸಿದ್ದರು. ಅವರು ರೈಲಿನಲ್ಲಿ ಇಳಿಯುತ್ತಿದ್ದಂತೆ, ಕಾರ್ಯಕರ್ತರು ಸ್ವಾಗತಿಸಿದರು. ವಾಜಪೇಯಿಯವರು ಸ್ಕೂಟರನ್ನು ಏರಿ ಕುಳಿತುಕೊಂಡರು. ರೈಲು ನಿಲ್ದಾಣದಿಂದ ಸಾರ್ವಜನಿಕ ಸಭೆಯ ಸ್ಥಳ ಹತ್ತು ನಿಮಿಷದಷ್ಟು ದೂರದಲ್ಲಿತ್ತು. ಮಾರ್ಗ ಮಧ್ಯದಲ್ಲಿಯೇ ಕಾರ್ಯ ಕರ್ತರ ಮನೆಯಲ್ಲಿ ಫ್ರೆಶ್ ಆಗಲು ವ್ಯವಸ್ಥೆ ಮಾಡಲಾಗಿತ್ತು. ಸ್ಕೂಟರ್ ಏರಿ ಅರ್ಧ ಗಂಟೆಯಾದರೂ ಕಾರ್ಯಕರ್ತರ ಮನೆ ಬರಲಿಲ್ಲ. ಸ್ಕೂಟರ್ ಸವಾರ ವಾಜಪೇ ಯಿಯವರನ್ನು ಆ ನಗರದ ಓಣಿಓಣಿಗಳಲ್ಲಿ, ಸಂದಿಗೊಂದಲಗಳಲ್ಲಿ ನುಗ್ಗಿಸಿಕೊಂಡು ಕರೆದುಕೊಂಡು ಹೋಗುತ್ತಿದ್ದ. ವಾಜಪೇಯಿ ಹಾದಿಬೀದಿಯಲ್ಲಿ ಹೋಗುವವರಿ ಗೆಲ್ಲ ಕೈಬೀಸಿಕೊಂಡು ಹೋಗುತ್ತಿದ್ದರು.
ಆಗ ವಾಜಪೇಯಿಯವರು ಮೆಲ್ಲಗೆ ಸ್ಕೂಟರ್ ಸವಾರನಿಗೆ, ‘ನಮ್ಮ ಕಾರ್ಯಕರ್ತರ ಮನೆ ಇನ್ನೂ ಎಷ್ಟು ದೂರ ಇದೆ? ನನಗೆ ಗೊತ್ತು, ಸಾರ್ವಜನಿಕ ಸಭೆಗೆ ಇನ್ನೂ ಜನ ಸೇರಿಲ್ಲ ಅಂತ. ಅದಕ್ಕಾಗಿ ನೀನು ನನಗೆ ನಗರದರ್ಶನ ಮಾಡಿಸುತ್ತಿದ್ದೀಯ ಅಂತ. ಪರವಾಗಿಲ್ಲ, ನಾನು ಕಾರ್ಯಕರ್ತನ ಮನೆಗೆ ಹೋಗೊಲ್ಲ, ವೇದಿಕೆಗೆ ಹೋಗೋಣ’ ಎಂದು ಹೇಳಿದರು. ಸ್ಕೂಟರ್ ಸವಾರ ಪಕ್ಕದ ಬೀದಿಯ ಇದ್ದ ಕಾರ್ಯಕರ್ತನ ಮನೆಗೆ ಕರೆದುಕೊಂಡು ಹೋದ. ಅದಕ್ಕೂ ಮುನ್ನ ಆತ ವಾಜಪೇಯಿ ಯವರನ್ನು ಅದೇ ಬೀದಿಯಲ್ಲಿ ಮೂರು ಸಲ ಸುತ್ತು ಹಾಕಿಸಿದ್ದ. ಈ ರೀತಿ ವಾಜಪೇಯಿಯವರು ದೇಶಾದ್ಯಂತ ಸಂಚರಿಸಿ, ಪಕ್ಷ ಸಂಘಟಿಸಿದವರು.
ಇನ್ನೊಂದು ಪ್ರಸಂಗ.
1968 ರ ಬೇಸಿಗೆಯ ಒಂದು ದಿನ. ವಿಠಲಭಾಯಿ ಪಟೇಲ್ ಹೌಸ್‌ನಲ್ಲಿ ನಡೆಯಲಿರುವ ಜನಸಂಘದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲು ಪತ್ರಕರ್ತ ಎಚ್.ಕೆ. ದುವಾ ತಮ್ಮ ಸ್ಕೂಟರಿನಲ್ಲಿ ಹೊರಟಿದ್ದರು. ಮಾರ್ಗಮಧ್ಯದಲ್ಲಿ ನಂ೧, ಫಿರೋಜ್ ಶಾ ರಸ್ತೆಯಲ್ಲಿರುವ ತಮ್ಮ ನಿವಾಸದ ಮುಂದೆ ವಾಜಪೇಯಿ ನಿಂತಿರುವುದನ್ನು ನೋಡಿದರು. ವಾಜಪೇಯಿಯವರೇ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಬೇಕಿತ್ತು. ಜನಸಂಘದ ನಾಯಕನನ್ನು ನೋಡುತ್ತಲೇ ದುವಾ ತಮ್ಮ ಸ್ಕೂಟರ್ ನಿಲ್ಲಿಸಿದರು.
‘ನೀವು ನನ್ನ ಪತ್ರಿಕಾಗೋಷ್ಠಿಗೆ ಬರುತ್ತಿದ್ದೀರಾ?’ ಎಂದು ವಾಜಪೇಯಿ ಕೇಳಿದ್ದಕ್ಕೆ, ‘ಹೌದು’ ಎಂದು ದುವಾ ಹೇಳಿದರು. ಹಾಗಾದರೆ ಒಟ್ಟಿಗೇ ಹೋಗೋಣ ಎಂದು ವಾಜಪೇಯಿ ಸ್ಕೂಟರನ್ನೇರಿದರು. ವಿಠಲಭಾಯಿ ಪಟೇಲ್ ಹೌಸ್ ಬರುತ್ತಿದ್ದಂತೆ, ಜನಸಂಘದ ನಾಯಕರು ಅಲ್ಲಿ ವಾಜಪೇಯಿಯವರಿಗೆ ಕಾಯುತ್ತಿದ್ದರು. ದುವಾ ಸ್ಕೂಟರಿನಲ್ಲಿ ತಮ್ಮ ನಾಯಕ ಆಗಮಿಸುತ್ತಿರುವುದನ್ನು ನೋಡಿದ ಅವರಬ್ಬರು, ‘ವಾಜಪೇಯಿಯವರೇ, ನಾಳಿನ ಪತ್ರಿಕೆಯಲ್ಲಿ Vajpayee rides H.K.Dua’s scooter ಎಂಬ ಹೆಡ್ ಲೈನ್ ಬರಬಹುದು’ ಎಂದು ತಾಮಾಷೆ ಮಾಡಿದರು.
ಅದಕ್ಕೆ ವಾಜಪೇಯಿ ತಕ್ಷಣ ಹೇಳಿದರು – ‘ಇಲ್ಲ.. ಇಲ್ಲ.. ಹಾಗಾಗಲು ಸಾಧ್ಯವಿಲ್ಲ. ಅದರ ಬದಲು Dua takes Vajpayee for a ride ಹೆಡ್ ಲೈನ್ ಬರ ಬಹುದು.’ ಅಲ್ಲಿದ್ದವರೆಲ್ಲ ಜೋರಾಗಿ ನಕ್ಕರು. (ಅಂದ ಹಾಗೆ taken for a ride ಅಂದ್ರೆ ಯಾಮಾರಿಸು, ಬೇಸ್ತು ಬೀಳಿಸು, ಮಂಗ ಮಾಡು ಎಂದರ್ಥ)
ಸ್ಟಾರ್ಟಪ್ ಎಂಬ ಹೊಸ ಯೋಚನೆ
ಹತ್ತು ವರ್ಷಗಳ ಹಿಂದೆ, ಇಂಥದ್ದೊಂದು ಬಿಜಿನೆಸ್ ಮಾಡಬಹುದು ಎಂದು ಯಾರೂ ಅಂದುಕೊಂಡಿರಲಿಲ್ಲ. ಸ್ಟಾರ್ಟಪ್ ಎಂಬ ಒಂದು ಹೊಸ ಜಗತ್ತು ನಮ್ಮ ಮುಂದೆ ಬಿಚ್ಚಿಕೊಂಡ ಬಳಿಕ, ನಮ್ಮ ಮುಂದೆ ಹೊಸ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಿವೆ. ನಿಮಗೆ ನ್ಯೂಕ್ಲಿಯಾನ್ ಹೆಲ್ತ್ ಎಂಬ ಸ್ಟಾರ್ಟಪ್ ಬಗ್ಗೆ ಹೇಳ
ಬೇಕು. ಅದರ ಯಾನ ಆರಂಭವಾಗಿದ್ದು ಗುಜರಾತಿನ ವಡೋದರಾದ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ. ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಮತ್ತು ಅವರ ಸಂಬಂಽಕರಿಗೆ ಹೆಲ್ತ್ ಇನ್ಸೂರೆನ್ಸ್ ಕ್ಲೈಮ್ ಮಾಡುವುದು ಹೇಗೆ ಎಂಬ ಸಮಸ್ಯೆಗಳು ಎದುರಾದಾಗ ಸಹಾಯ ಮಾಡಲು ಇದು ಹುಟ್ಟಿಕೊಂಡಿತು.
ಆರೋಗ್ಯವಿಮೆ ಮಾಡಿಸಿದ್ದರೂ ಬಹಳ ಜನರಿಗೆ ಅಗತ್ಯ ಬಿದ್ದಾಗ ಅದನ್ನು ಕ್ಲೈಮ್ ಮಾಡುವುದು ಹೇಗೆ ಎಂಬುದು ಗೊತ್ತಿರುವುದಿಲ್ಲ. ಪ್ರೀಮಿಯಂ ಕಟ್ಟಿರುತ್ತಾರೆ. ಆದರೆ ವಿಮೆ ಬೇಕಾದಾಗ ಅದನ್ನು ಪಡೆಯುವುದು ಹೇಗೆ ಅನ್ನೋದು ಗೊತ್ತಿರುವುದಿಲ್ಲ. ಅದಕ್ಕೆ ಕಾರಣಗಳು ಹಲವು. ಕೆಲವು ಆಸ್ಪತ್ರೆಗಳಲ್ಲಿರುವ ಸಿಬ್ಬಂದಿಗೂ ವಿಮೆ ಅಂದ್ರೆ ಏನು ಅನ್ನೋದು ಗೊತ್ತಿರುವುದಿಲ್ಲ, ಅವರ ಜ್ಞಾನ ಅಷ್ಟಕ್ಕೆ ಸೀಮಿತವಾಗಿರುತ್ತದೆ. ಇನ್ನು ವಿಮೆ ಮಾಡಿಸಿದವರಿಗೂ ಗೊತ್ತಿರುವುದಿಲ್ಲ.
ಈ ಸಮಸ್ಯೆಯನ್ನು ಅರಿತ ಈ ಸ್ಟಾರ್ಟಪ್, ರೋಗಿ-ಆಸ್ಪತ್ರೆ- ವಿಮಾ ಕಂಪನಿ ಈ ಮೂವರ ನಡುವೆ ಸೇತುವೆಯಾಗಿ ಕೆಲಸ ಮಾಡಲು ಪ್ರಾರಂಭವಾಯಿತು. ಈಗ ಈ ಸ್ಟಾರ್ಟಪ್‌ನ ವಹಿವಾಟು ಎಷ್ಟು ಹೆಚ್ಚಾಗಿದೆಯೆಂದರೆ, ವಡೋದರದಲ್ಲಿ ಮಾತ್ರವಲ್ಲ ಅಹಮದಾಬಾದಿನಲ್ಲೂ ಅವರ ಕಚೇರಿ ತಲೆಯೆತ್ತಿದೆ. ಈ ಸ್ಟಾರ್ಟಪ್ ಹೇಗೆ ಹಣ ಗಳಿಸಬಹುದು? ನ್ಯೂಕ್ಲಿಯಾನ್ ಹೆಲ್ತ್ ರೆವಿನ್ಯೂ ಮಾಡೆಲ್ ವಿಶೇಷವಾಗಿದೆ. ಅವರು ಆಸ್ಪತ್ರೆಯಿಂದ ತಮ್ಮ ಸೇವಾಶುಲ್ಕ ಪಡೆಯುತ್ತಾರೆ.
ರೋಗಿಯಿಂದಾಗಲಿ, ಅವರ ಕುಟುಂಬಸ್ಥರಿಂದಾಗಲಿ ಪಡೆಯುವುದಿಲ್ಲ. ತಮ್ಮಲ್ಲಿ ವಿಮಾ ಕ್ಲೈಮ್ ಮಾಡುವುದಕ್ಕೆ ಸೇವೆ ಲಭ್ಯವಿದೆ ಮತ್ತು ತಾವು ಅದಕ್ಕಾಗಿ ಈ ಸ್ಟಾರ್ಟಪ್ ಜತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದು ಆಸ್ಪತ್ರೆಗಳು ಜಾಹೀರಾತು ಕೊಡುತ್ತದೆ. ಇದುವರೆಗೆ ಈ ಸ್ಟಾರ್ಟಪ್ ಸಂಸ್ಥೆ ೧೫೦೦ ಕ್ಕೂ ಹೆಚ್ಚು
ರೋಗಿಗಳಿಗೆ ೧೫ ಕೋಟಿ ರುಪಾಯಿಗೂ ಅಽಕ ವಿಮಾ ಕ್ಲೈಮ್ ಕೊಡಿಸಿದೆ. ಆದರೆ ರೋಗಿಗಳಿಂದ ಅವರ ಸಂಬಂಧಿಕರಿಂದ ಯಾವುದೇ ಹಣವನ್ನು ಪಡೆದು ಕೊಂಡಿಲ್ಲ.
ಈ ವಹಿವಾಟನ್ನು ಗಮನಿಸಿದ ಅಮೆರಿಕದ ಹೂಡಿಕೆದಾರರು ಈ ಸ್ಟಾರ್ಟಪ್‌ನತ್ತ ಆಕರ್ಷಿತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಹಿವಾಟು ಹೆಚ್ಚಿರುವುದರಿಂದ ಮುಂಬೈ ನಗರದಲ್ಲೂ ಒಂದು ಕಚೇರಿಯನ್ನು ತೆರೆಯಲಾಗಿದೆ. ಸಣ್ಣಪುಟ್ಟ ನಗರಪಟ್ಟಣಗಳಲ್ಲೂ ವಿಸ್ತರಣೆ ಮಾಡುವುದಕ್ಕೆ ನಾಲ್ಕು ಕೋಟಿ ರುಪಾಯಿಗಳ
ಬಂಡವಾಳ ಲಭಿಸಿದೆ. ಅಭಯ ಜೈನ್ (ಬಿಟೆಕ್ ಪದವೀಧರ) ಡಾ.ಕಶ್ಯಪ್ ಸೇಟ್ ಮತ್ತು ಡಾ.ದೇವದೀಪ್ ಬೋರಿಸಾಗರ್ ಈ ಸ್ಟಾರ್ಟಪ್‌ನ ಪ್ರವರ್ತಕರು.
ರೋಗಿಗಳಿಗೆ ಮೆಡಿಕ್ಲೈಮ್ ಪಡೆಯುವುದಕ್ಕೆ ಈ ಮುಂಚೆ ಬಹಳ ಕಾಲಾವಽ ತಗಲುತ್ತಿತ್ತು. ಇದೀಗ ಈ ಸ್ಟಾರ್ಟಪ್ ಕಾರಣ ದಿಂದ ಎಲ್ಲವೂ ಸಲೀಸಾಗಿ ಆಗು ವಂತಾಗಿದೆ. ಕ್ಲೈಮ್ ದಾಖಲಿಸುವುದು ಮತ್ತು ಪಡೆಯುವುದನ್ನು ಸರಳೀಕರಣಗೊಳಿಸುವುದು ಇವರ ಉದ್ದೇಶ. ರೋಗಿ ಮತ್ತವರ ಕಡೆಯವರು ಸಂದಿಗ್ಧ
ಸನ್ನಿವೇಶದಲ್ಲಿರುತ್ತಾರೆ, ಆವಾಗ ಏನು ಮಾಡಬೇಕೆಂಬುದು ತೋಚುವುದಿಲ್ಲ, ಅಂಥ ಸಂಕಟ ಕಾಲದಲ್ಲಿ ಅವರಿಗೆ ಈ ಸ್ಟಾರ್ಟಪ್ ನೆರವಿಗೆ ಬರುತ್ತದೆ. ಜನರು ಈ ಸೇವೆಗೆ ಶುಲ್ಕ ತೆರುವುದಕ್ಕೂ ಸಿದ್ಧರಿರುತ್ತಾರೆ, ಆದರೆ ಇವರು ಸ್ವೀಕರಿಸುವುದಿಲ್ಲ.
ಮೆಡಿಕ್ಲೈಮ್ ಜತೆಗೆ ಸಣ್ಣ ತಾತ್ಕಾಲಿಕ ಸಾಲವನ್ನು ಕೂಡ ನ್ಯೂಕ್ಲಿಯಾನ್ ಹೆಲ್ತ ಕೊಡಿಸುತ್ತದೆ. ವಡೋದರಾ-ಅಹಮದಾಬಾದಿನ ಮೂವತ್ತು ಆಸ್ಪತ್ರೆಗಳಲ್ಲಿ ಈ ಸಂಸ್ಥೆಯ ಸೇವಾಜಾಲ ಲಭ್ಯವಿದ್ದು ಅದನ್ನು ಈ ವರ್ಷ ನೂರು ಆಸ್ಪತ್ರೆಗಳಿಗೆ ಏರಿಸುವ ಉದ್ದೇಶವನ್ನು ಹೊಂದಿದೆ. ಒಬ್ಬ ಉದ್ಯೋಗಿ ನಾಲ್ಕೈದು ಆಸ್ಪತ್ರೆಗಳನ್ನು ಕವರ್ ಮಾಡುತ್ತಾನೆ ಮತ್ತು ಅಲ್ಲಿ ದಾಖಲಾದ ರೋಗಿಗಳಿಗೆ ಬೇಕಾದ ಸವಲತ್ತು ಒದಗಿಸುವ ಕೆಲಸ ಮಾಡುತ್ತಾನೆ. ಇದುವರೆಗೆ ಈ ಕಂಪನಿಯಲ್ಲಿ ಇಪ್ಪತ್ತು ಉದ್ಯೋಗಿಗಳು ಮಾತ್ರ ಇದ್ದಾರೆ.
ಸ್ಟಾರ್ಟಪ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯಸೇವೆಗಳ ಕುರಿತಾಗಿ ಸೇವಾಸುವಿಧೆಗಳನ್ನು ಒದಗಿಸಲು ನ್ಯೂಕ್ಲಿಯಾನ್ ಗೆ ಭಾರತ ಸರಕಾರ ಮಾನ್ಯತೆಯನ್ನು ಕೊಟ್ಟಿದೆ. ನಿಮಗೆ ಹಣ ಮತ್ತು ಜನಪ್ರಿಯತೆ ಬೇಕೆಂದಿದ್ದರೆ, ಜನಸಮುದಾಯಕ್ಕೆ ಒಳಿತಾಗುವ, ಸಹಾಯಕವಾಗುವ ಯಾವುದಾದರೂ
ಕೆಲಸವನ್ನು ಮಾಡಬಹುದು ಎಂಬುದಕ್ಕೆ ನ್ಯೂಕ್ಲಿಯಾನ್ ಹೆಲ್ತ್ ಸ್ಟಾರ್ಟಪ್ ಒಂದು ಉತ್ತಮ ನಿದರ್ಶನ.
ಯಾರು? ಯಾರು?
‘ಪ್ರಜಾವಾಣಿ’ ಮತ್ತು ’ಕನ್ನಡಪ್ರಭ’ ಸಂಪಾದಕರಾಗಿದ್ದ ವೈಎನ್ಕೆ ಅವರು ಪಿ.ಲಂಕೇಶ ಆಗಾಗ ಒಂದು ತಮಾಷೆ ಮಾಡುತ್ತಿದ್ದರು.
ಕನ್ನಡದ ಉತ್ತಮ ನಾಟಕಕಾರ ಯಾರು?
– ಲಂಕೇಶ
ಕನ್ನಡದ ಉತ್ತಮ ಕವಿ ಯಾರು?
– ಲಂಕೇಶ
ಕನ್ನಡದ ಉತ್ತಮ ವಿಮರ್ಶಕ ಯಾರು?
– ಲಂಕೇಶ
ಕನ್ನಡದ ಉತ್ತಮ ಕಾದಂಬರಿಕಾರ ಯಾರು?
– ಲಂಕೇಶ
ಕನ್ನಡದ ಉತ್ತಮ ಪೀತ ಪತ್ರಕರ್ತ ಯಾರು?
– ಲಂಕೇಶ
ಸರಿ, ಇದನ್ನು ಹೇಳಿದವರು ಯಾರು?
– ಲಂಕೇಶ
ಈ ಪ್ರಸಂಗ ನನಗೆ ಯಾಕೆ ನೆನಪಾಯಿತೆಂದರೆ, ಇತ್ತೀಚೆಗೆ ನಾನೊಂದು ಟ್ವೀಟ್ ನೋಡುತ್ತಿz. ಪ್ರದೀಪ ಮಿಶ್ರ ಹೀಗೆ ಟ್ವೀಟ್ ಮಾಡಿದ್ದರು – Minutes of meeting- George chaired the meeting and appreciated the idea presented by George and supported by George. George proposed that this new venture will led by George and George, George and George will be key stake holders
in it. At last George thanked all George.